top of page

ಸರ್ಪ ನಡೆ

*ಡಾ. ಪೆರ್ಲರ ವಾರಾಂಕಣ* ವಸಂತೋಕ್ತಿ 9



- ಡಾ. ವಸಂತಕುಮಾರ ಪೆರ್ಲ

ನಮ್ಮ ಜನಪದರಲ್ಲಿ ಎಂತೆಂತಹ ಅಮೂಲ್ಯ ಅನುಭವಗಳಿವೆ ಎಂಬುದನ್ನು ಅರಿತಾಗ ಆಶ್ಚರ್ಯವಾಗದೆ ಇರದು. ತಮ್ಮ ಬದುಕಿನ ಹಾದಿಯಲ್ಲಿ ಕಂಡುಕೊಂಡ ಅವು ಎಲ್ಲೂ ದಾಖಲಾಗಿಲ್ಲ. ಆದರೆ ಅವು ‘ನಡೆ’ಗಳಾಗಿ (ಬದುಕಿನ ರೀತಿ-ನೀತಿ-ಕ್ರಮ) ಮುಂದಿನ ತಲೆಮಾರಿಗೆ ದಾಟುತ್ತವೆ. ಅವು ಸಣ್ಣಪುಟ್ಟ ಸಂಗತಿಗಳೆಂದು ನಮಗೆ ಅನಿಸಬಹುದು. ಹಾಗೆಂದು ಅವರು ನಡೆದು ಬಂದ ದಾರಿಯಲ್ಲಿ ಕಂಡ ಆ ಸತ್ಯಗಳು ಬೆಲೆಯುಳ್ಳವಾಗಿವೆ.

ಅವುಗಳಲ್ಲಿ ಪ್ರಾಣಿಗಳು, ಸರೀಸೃಪಗಳು, ಜಲಚರಗಳು ಮತ್ತು ಪಕ್ಷಿಗಳು ಸಂಚರಿಸುವ ಕೆಲವು ಶಾಶ್ವತ ಹಾದಿಗಳ ಕುರಿತ ತಿಳಿವಳಿಕೆಯು ಜನಪದರ ಸೂಕ್ಷ್ಮ ನಿರೀಕ್ಷಣಾ ಸಾಮರ್ಥ್ಯಕ್ಕೆ ಹಿಡಿದ ಕನ್ನಡಿಯಾಗಿದೆ.

‘ಸರ್ಪನಡೆ’ (ಸರೀಸೃಪಗಳು ಅತ್ತಿತ್ತ ಸಾಗುವ ಹಾದಿ) ಬಗ್ಗೆ ಕೆಲವರಿಗಾದರೂ ತಿಳಿದಿರಬಹುದು. ಸರೀಸೃಪಗಳು ಸಂಚರಿಸುವ ಕೆಲವು ಶಾಶ್ವತ ಮತ್ತು ನಿರ್ದಿಷ್ಟ ಹಾದಿಗಳಿವೆ. ಪ್ರತಿಬಾರಿಯೂ ಅವು ಅದೇ ಹಾದಿಯಾಗಿ ಸಂಚರಿಸುತ್ತವೆ. ಆ ಹಾದಿಗೆ ಅಡ್ಡವಾಗಿ ಕಟ್ಟಡಗಳನ್ನು ಕಟ್ಟಿದರೆ ಅಥವಾ ಕಾಂಪೌಂಡ್ ಗೋಡೆ ಕಟ್ಟಿದರೆ ಅವುಗಳ ಹಾದಿ ಕಟ್ಟಿದಂತಾಗಿ ಎತ್ತ ಸಾಗಬೇಕೆಂದು ಗೊತ್ತಾಗದೆ ಅವು ಪದೇಪದೇ ಕಾಣಿಸಿಕೊಳ್ಳುತ್ತವೆ. ಜಮೀನನ್ನು ಮನೆ ನಿವೇಶನವಾಗಿ ಪರಿವರ್ತಿಸುವಾಗ ಕೆಲವು ಅನುಭವಸ್ಥ ಹಿರಿಯರು ಅಲ್ಲಿನ ಸರ್ಪನಡೆಯ ಬಗ್ಗೆ ವಿಚಾರಿಸುವರು. ಸರ್ಪನಡೆಯಾಗಿದ್ದರೆ ಆ ಜಾಗ ತಪ್ಪಿಸಿ ಮನೆ ಕಟ್ಟಿ ಅನ್ನುವುದುಂಟು. ಇದೇನು ಗಾಂಪರ ಮಾತು ಎಂದು ಆಧುನಿಕ ನಾಗರಿಕರು ಅಲ್ಲಿ ಮನೆ ಕಟ್ಟಿದರೆ ಆ ಮನೆಯ ಸುತ್ತಮುತ್ತ ಸದಾ ಸರ್ಪಗಳು ಕಾಣಿಸಿಕೊಂಡು ಆತಂಕ ತಲೆದೋರುವುದುಂಟು. ಅನಂತರ ಜೋತಿಷಿಗಳನ್ನು ಭೇಟಿಯಾಗಿ ಸಮಸ್ಯೆ ಹೇಳಿಕೊಂಡಾಗ ನಿಮ್ಮ ಮನೆ ಸರ್ಪನಡೆಯಲ್ಲಿದೆ, ಆದ್ದರಿಂದ ಹೀಗಾಗುತ್ತಿದೆ ಅಂದುಬಿಡುತ್ತಾರೆ!

ನಿರ್ದಿಷ್ಟ ಹಾದಿಗಳಲ್ಲಿ ಸಂಚರಿಸುವ ಹಾವುಗಳ ದಾರಿ ಕಟ್ಟಿದ ಕೂಡಲೇ ಅವು ಅತ್ತಿತ್ತ ನುಸುಳಿ ಬೇರೆ ದಾರಿ ಕಾಣಿಸದೆ ಮನುಷ್ಯನ ಕಣ್ಣಿಗೆ ಬೀಳುತ್ತವೆ. ಇದೇನೂ ಮೂಢನಂಬಿಕೆಯಲ್ಲ, ಅವು ಖಾಯಂ ಆಗಿ ಸಂಚರಿಸುವ ಹಾದಿಗೆ ನಾವು ತಡೆಯೊಡ್ಡುವುದರಿಂದ ಹೀಗಾಗುತ್ತದೆ.

ಇದೇ ರೀತಿ ಪ್ರಾಣಿಗಳು ಸಂಚರಿಸುವ ನಿಶ್ಚಿತ ಹಾದಿ ಇರುತ್ತದೆ. ಅವು ಸದಾ ಅದೇ ದಾರಿಯಾಗಿ ಸಂಚರಿಸುವವು. ಆನೆಗಳು ಹಸುರು ಸೊಪ್ಪು ಹುಡುಕುತ್ತ ಪ್ರತೀವರ್ಷ ಒಂದು ನಿರ್ದಿಷ್ಟ ಹಾದಿಯಲ್ಲೇ ಸಂಚರಿಸುತ್ತವೆ. ಪಕ್ಷಿಗಳು ಹಿಂಡುಹಿಂಡಾಗಿ ಒಂದು ನಿರ್ದಿಷ್ಟ ಹಾದಿಯಲ್ಲಿ ಹಾರುತ್ತವೆ. ನಿರ್ದಿಷ್ಟ ಮರಗಳಲ್ಲೇ ಅವು ವಾಸ್ತವ್ಯ ಹೂಡುತ್ತವೆ.

ಅಷ್ಟೇಕೆ, ನದಿಗಳಿಗೂ ನಿರ್ದಿಷ್ಟ ಹಾದಿಯಿದೆ. ನದೀಪಾತ್ರ ಎಂದು ಅದನ್ನು ಕರೆಯುವರು. ಸಮುದ್ರದಲ್ಲಿರುವ ಜಲಚರಗಳಿಗೂ ಸಂಚಾರಕ್ಕೆ ನಿರ್ದಿಷ್ಟ ಹಾದಿಗಳಿವೆ. ರಾಶಿರಾಶಿಯಾಗಿ ಮೀನುಗಳು ಸಂಚರಿಸುವ ಹಾದಿಯಲ್ಲಿ ಅವುಗಳು ಕಂಡುಬಂದಾಗ ಅದನ್ನು ‘ತೆಪ್ಪ’ ಎಂದು ಕರೆಯುವರು. ಮನುಷ್ಯನಿಗೆ ಕೂಡ ಸಂಚಾರಕ್ಕೆ ನಿರ್ದಿಷ್ಟವಾದ ಹಾದಿಗಳಿವೆ. ಭೂಮಿಯ ಮೇಲಾಗಲೀ ನೀರಿನಲ್ಲಾಗಲೀ ಅಡೆತಡೆಗಳಿಲ್ಲದೆ ಸುಲಭವಾಗಿ ಸಂಚರಿಸಬಹುದಾದ ಹಾದಿಯನ್ನು ‘ನಡೆ’ ಎಂದು ಹೇಳಲಾಗಿದೆ.

ನನ್ನ ಮನೆಯ ಸಮೀಪ ನನ್ನ ಗೆಳೆಯರೊಬ್ಬರ ಮನೆಯಿದೆ. ಅವರು ಮನೆ ಕಟ್ಟುವಾಗ ಆಸುಪಾಸಿನ ಹಿರಿಯರು ಆ ಸೈಟು ಸರ್ಪನಡೆಯಲ್ಲಿದೆ ಎಂದು ಎಚ್ಚರಿಸಿದ್ದರಂತೆ. ನನ್ನ ಗೆಳೆಯರು ಅದೊಂದು ಮೂಢನಂಬಿಕೆ ಎಂದು ಹಿರಿಯರ ಮಾತನ್ನು ನಿರ್ಲಕ್ಷಿಸಿದರು. ಗೃಹಪ್ರವೇಶವಾಗಿ ಒಂದು ವರ್ಷ ಆಗಿರಲಿಲ್ಲ. ಅವರ ಕಾಂಪೌಂಡ್ ಒಳಗೆ ಮೂರ್ನಾಲ್ಕು ಸಲ ಹಾವುಗಳು ಕಾಣಿಸಿಕೊಂಡವು. ಒಂದು ದಿನ ಮನೆಗೆ ಅತಿಥಿಗಳು ಬಂದಿದ್ದರು. ಮುಸ್ಸಂಜೆಯಾಗಿತ್ತು. ಅತಿಥಿಗಳ ಮಗು ಇನ್ನೇನು ಅಂಗಳಕ್ಕೆ ಇಳಿಯಬೇಕು. ಮೆಟ್ಟಿಲ ಬಳಿ ಹೆಬ್ಬಾವು. ಮಗು ಕಿರುಚಿಕೊಂಡು ಒಳಗೋಡಿತು. ಎಲ್ಲರೂ ಹೊರಗೆ ಬಂದು ಬೆಳಕು ಹಾಯಿಸಿ ನೋಡಿದರೆ ಕಾರಿನ ಅಡಿಯಲ್ಲಿ ಹೆಬ್ಬಾವು ಸುರುಟಿ ಮಲಗಿತ್ತು. ಕೂಡಲೇ ನನಗೆ ಫೋನ್ ಮಾಡಿದರು. ಟಾರ್ಚ್ ಮತ್ತು ದೊಣ್ಣೆ ಹಿಡಿದು ಓಡಿದೆ. ಸ್ವಲ್ಪ ದೂರದಿಂದ ದೊಣ್ಣೆಯಲ್ಲಿ ಕುಟ್ಟಿದೆ. ಅದು ಬುಸುಗುಡುತ್ತ ಮೈಮೇಲೆ ಬರಹತ್ತಿತು! ಸುಮಾರು ಹದಿನೈದು ಅಡಿ ಉದ್ದವಿತ್ತು. ನಾನು ಕಾಂಪೌಂಡ್ ಗೋಡೆಗೆ ಹತ್ತಿದೆ. ಅದು ಕಾಂಪೌಂಡ್ ಒಳಗೆಯೇ ಒಂದು ಸುತ್ತು ಹೊಡೆದು ಹೊರಗೆ ಹೋಗಲು ದಾರಿ ಸಿಕ್ಕದೆ ಒಂದು ಮೂಲೆಯಲ್ಲಿ ಸುರುಟಿಕೊಂಡಿತು.

ತಕ್ಷಣ ನನ್ನ ಪರಿಚಿತರಾದ ವೃತ್ತಿನಿರತ ಹಾವು ಹಿಡಿಯುವವರಿಗೆ ಫೋನ್ ಮಾಡಿದೆ. ಹತ್ತು ಹದಿನೈದು ನಿಮಿಷಗಳಲ್ಲಿ ಆಟೋದಲ್ಲಿ ಅವರು ಬಂದರು. ಇಬ್ಬರು ಅದರ ತಲೆ ಹಿಡಿದರು. ಇಬ್ಬರು ಬಾಲ ಹಿಡಿದುಕೊಂಡರು. ಅದು ಉರುಳಾಡುತ್ತಿದ್ದಂತೆ ನೈಲಾನ್ ದಾರದಲ್ಲಿ ಅದರ ಬಾಯಿ ಬಿಗಿದು ಕಟ್ಟಿ ಉರುಟಾಗಿ ಸುತ್ತಿ ದೊಡ್ಡ ಗೋಣಿಚೀಲದಲ್ಲಿ ತುಂಬಿ ಪಿಲಿಕುಳದ ನಿಸರ್ಗಧಾಮಕ್ಕೆ ತೆಗೆದುಕೊಂಡು ಹೋದರು.

ಅದಾಗಿ ಎರಡು ತಿಂಗಳು ಕಳೆದಿರಲಿಲ್ಲ, ಮತ್ತೊಂದು ಹೆಬ್ಬಾವು ಕಾಣಿಸಿಕೊಂಡಿತು! ಅದನ್ನೂ ಹಿಡಿದು ಬೇರೆಡೆಗೆ ಒಯ್ಯಲಾಯಿತು. ಸಣ್ಣಪುಟ್ಟ ಹಾವುಗಳಂತೂ ವರ್ಷಕ್ಕೆ ಮೂರ್ನಾಲ್ಕು ಸಲ ಅಲ್ಲಿ ಕಾಣಿಸಿಕೊಳ್ಳುತ್ತವೆ. ರಾತ್ರಿಯಿಡೀ ಅವರು ಕಾಂಪೌಂಡ್ ಲೈಟ್ ಉರಿಸಿಡುವಂತಾಗಿದೆ.

ನಾನು ಪ್ರತಿ ರಾತ್ರಿ ಊಟವಾದ ಬಳಿಕ ನನ್ನ ಮನೆ ನಾಯಿಯನ್ನು ವಾಕಿಂಗ್ ಕರೆದುಕೊಂಡು ಹೋಗುತ್ತೇನೆ. ಆ ಜಾಗದಲ್ಲಿ ಕನಿಷ್ಠ ಐದಾರು ಬಾರಿ ಹೆಬ್ಬಾವು ನನಗೆ ಕಾಣಿಸಿಕೊಂಡಿದೆ. ಇತರ ಸಣ್ಣಪುಟ್ಟ ಹಾವುಗಳು ಕಾಣಿಸಿಕೊಳ್ಳುವುದು ಮಾಮೂಲಿ. ಒಮ್ಮೆಯಂತೂ ನಾನು ಮತ್ತು ನಾಯಿ ಹೆಬ್ಬಾವಿನ ತೀರಾ ಸಮೀಪಕ್ಕೆ ಹೋಗಿದ್ದೆವು! ಹೊಳೆಯುತ್ತಿದ್ದ ಅದು ಬೀದಿದೀಪದ ಬೆಳಕಿನಲ್ಲಿ ನಮ್ಮನ್ನೇ ನೋಡುತ್ತಿತ್ತು! ನಾಯಿಯನ್ನು ನಿಯಂತ್ರಿಸುವುದು ನನಗೆ ಹರಸಾಹಸವಾಯಿತು.

ಇನ್ನೊಂದು ಸಲ ಹೆಬ್ಬಾವಿನಿಂದಾಗಿ ನನಗೆ ರೈಲು ತಪ್ಪಿ ಹೋಯಿತು! ಕಾರವಾರ ರೈಲು ಹಿಡಿಯಲು ಮುಂಜಾನೆ ಆರು ಗಂಟೆಗೆ ಮನೆ ಬಿಟ್ಟಿದ್ದೆ. ನನ್ನ ಗೆಳೆಯರ ಮನೆ ಸಮೀಪಕ್ಕೆ ಹೋಗುತ್ತಿದ್ದಂತೆ ನಡುರಸ್ತೆಯಲ್ಲಿ ದೊಡ್ದದೊಂದು ಹೆಬ್ಬಾವು ರಸ್ತೆ ದಾಟುತ್ತಿತ್ತು! ನುಣುಪಾದ ಡಾಮಾರು ರಸ್ತೆ ದಾಟಲು ಅದು ಹದಿನೈದು ನಿಮಿಷ ತೆಗೆದುಕೊಂಡಿತು. ಅಷ್ಟು ಹೊತ್ತು ನಾನು ಮತ್ತು ನನ್ನ ಹಿಂದಿದ್ದ ಮೂರ್ನಾಲ್ಕು ವಾಹನಗಳವರು ಈಚೆ ಬದಿ ಕಾದು ನಿಂತೆವು. ರೈಲ್ವೇ ಸ್ಟೇಶನ್ ತಲಪಿದಾಗ ರೈಲು ಹೊರಟು ಹೋಗಿತ್ತು.

ಮಾತಾಡುತ್ತಿದ್ದಾಗ ಒಮ್ಮೆ ನನ್ನ ಗೆಳೆಯರಿಗೆ ಹಿರಿಯರು ಹೇಳುತ್ತಿದ್ದ ‘ಸರ್ಪನಡೆ’ಯ ವಿಚಾರ ತಿಳಿಸಿದೆ. ಸೈಟು ಕೊಳ್ಳುವಾಗಲೇ ಅಕ್ಕಪಕ್ಕದ ಹಿರಿಯರು ಆ ಸೈಟು ಸರ್ಪನಡೆಯಲ್ಲಿ ಇರುವುದನ್ನು ತಿಳಿಸಿದ ಬಗ್ಗೆ ಹೇಳಿಕೊಂಡರು. ತಾನು ಅವರ ಮಾತನ್ನು ನಿರ್ಲಕ್ಷಿಸಿದೆ ಎಂದೂ ಹೇಳಿದರು. ಈಗೇನು ಮಾಡುವುದು? ರಾತ್ರಿ ಹೊತ್ತು ಓಡಾಡುವಾಗ ಮೈಯೆಲ್ಲ ಕಣ್ಣಾಗಿರಬೇಕಾಗಿದೆ ಎಂದರು.

ಆನೆಗಳ ಹಾದಿಯಲ್ಲಿ ಕೃಷಿಭೂಮಿ ಇರುವವರು ಆನೆಗಳಿಂದಾಗಿ ಪ್ರತೀವರ್ಷ ತಮ್ಮ ಬೆಳೆ ನಷ್ಟ ಮಾಡಿಕೊಳ್ಳುವುದು ಪತ್ರಿಕೆಗಳಲ್ಲಿ ಓದುತ್ತಲೇ ಇದ್ದೇವೆ. ಒಂದು ಜೀವಿಯ ‘ನಡೆ’ಯನ್ನು (ಹಾದಿಯನ್ನು) ಅಡ್ಡಗಟ್ಟಿದಾಗ ಅದು ಒಡ್ಡುವ ಪ್ರತಿರೋಧವನ್ನು ನಾವು ಎದುರಿಸಬೇಕಾಗುತ್ತದೆ. ಪ್ರಕೃತಿ ಎಲ್ಲರಿಗಾಗಿ ಇದೆ, ಎಲ್ಲರೂ ಅನುಸರಿಸಿಕೊಂಡು ಹೋಗಬೇಕು ಮತ್ತು ಹಂಚಿ ಉಣ್ಣುವುದು ತೀರಾ ಅಗತ್ಯ ಎಂಬ ಮಾತು ಇಂತಹ ಸಂದರ್ಭದಲ್ಲಿ ನೆನಪಿಗೆ ಬರುತ್ತದೆ.


ಡಾ.ವಸಂತಕುಮಾರ ಪೆರ್ಲ





68 views0 comments
bottom of page