top of page

ಸಣಕಲುಗಿಡದ ಸವಕಲು ಕನಸು*

     ಇಲ್ಲೊಂದು,,ಸೋತು ಬಸವಳಿದ

     ಸಣಕಲು ಗಿಡಕ್ಕೆ ನಿತ್ಯ ಸವಕಲು ಕನಸು.

     ಟೊಂಗೆ,ಟೊಂಗೆಯೂ ಚಿಗುರು

     ಮೈತುಂಬಿ ಹಸಿರು ಪಲ್ಲವಿಸಿದಂತೆ,

     ಗೆಲ್ಲು,ಗೆಲ್ಲಿಗೂ ಹೂ ಗೊಂಚಲು

     ಕಾಯಾಗಿ ಸಂಭ್ರಮಿಸಿದಂತೆ,

     ಕಾಯಿ ಬಲಿತು ರಸಭರಿತ,ಸ್ವಾದಿಷ್ಟ

     ಕಣ್ಣ್ಸೆಳೆವ ಬಣ್ಣದ ಹಣ್ಣಾದಂತೆ,

ಹಣ್ಣು ಮಾಗಿ ನಿಧಾನ ತೊಟ್ಟು ಕಳಚಿ

ನೆಲಕ್ಕುದುರಿ, ಹಸಿದ ಹೊಟ್ಟೆಗಳ

ಹಸಿವ ಹಿಂಗಿಸಿ ಧನ್ಯತೆ ಪಡೆದಂತೆ,

ಬೀಜ ನೆಲಕ್ಕೆ ಬಿದ್ದು ಮಣ್ಣ ತೇವಕ್ಕೆ

ಕಣ್ಣಬಿಟ್ಟು ಹಸಿರು ಉಸಿರಾಡಿ

ಮರುಹುಟ್ಟ ಪಡೆದು ಸಾರ್ಥಕ್ಯದ

ಬದುಕ ತನ್ನದಾಗಿಸಿಕೊಂಡಂತೆ,

ಎಲ್ಲ ನನಸಾಗದ ಹಗಲಗನಸು.

ಮತ್ತೆ ಖುತುಮಾನ ಖಾಲಿ ತುಂಬಿ

ಖಾಲಿಯಾಗುವ ಆಟ ನಿರಂತರ,

ಮಾಗಿ ಹಣ್ಣಾಗುವ ಮೊದಲೇ ಕಿತ್ತು

ಹಪ,ಹಪಿಸಿ ತಿನ್ನುವರ ಕ್ರೌರ್ಯಕ್ಕೆ ಬಲಿ,

ಭಾರವರಿಯುವ ಮೊದಲೇ

ಹಗುರಾಗುವ,

ಆಳವರಿಯುವ ಮೊದಲೇ

ನಿರಾಳವಾಗುವ,

ಸಣಕಲು ಗಿಡದ ದುರಂತ ಅವಸ್ತೆ

ಎಲ್ಲ ನನಸಾಗದ ಸವಕಲು ಕನಸು

ಈ...ವ್ಯವಸ್ತೆ.


--ಅಬ್ಳಿ,ಹೆಗಡೆ.

21 views0 comments
bottom of page