top of page

ಸಾಹಿತ್ಯದ ಅಭಿವ್ಯಕ್ತಿ ಮತ್ತು ರೂಪ ಸ್ವರೂಪ

ಡಾ. ಪೆರ್ಲರ ವಾರಾಂಕಣ

ವಸಂತೋಕ್ತಿ – 14.


ಸಾಹಿತ್ಯದ ಅಭಿವ್ಯಕ್ತಿ ಮತ್ತು ರೂಪಸ್ವರೂಪ

ಕಾಲ ಮುಂದೆ ಮುಂದೆ ಸರಿಯುತ್ತ ಜನಜೀವನ ವಿಕಾಸಗೊಂಡಂತೆಲ್ಲ ಸಾಹಿತ್ಯದ ಅಭಿವ್ಯಕ್ತಿ ಮತ್ತು ಅದರ ರೂಪ ಸ್ವರೂಪಗಳಲ್ಲಿ ಆಗುತ್ತಿರುವ ಬದಲಾವಣೆ ಹಾಗೂ ವ್ಯತ್ಯಾಸ ಒಂದು ಚೋದ್ಯದ ವಿಷಯ. ಜೀವಜಾಲದ ವಿಕಾಸ ಮತ್ತು ಪ್ರಕೃತಿಯೊಂದಿಗೆ ಅದರ ಒಡನಾಟ ಹಾಗೂ ಸಂಘರ್ಷ ಒಂದು ನದಿಯ ಹರಿವಿನ ಹಾಗೆ; ಕ್ಷಣಕ್ಷಣಕ್ಕೂ ಅದು ತನ್ನ ಪಾತ್ರ ಮತ್ತು ಗತಿಯನ್ನು ಕಂಡುಕೊಳ್ಳುತ್ತ ಹೋಗುವ ಹಾಗೆ ಸಾಹಿತ್ಯದ ಅಭಿವ್ಯಕ್ತಿ ಮತ್ತು ರೂಪ (form) ಸ್ವರೂಪಗಳು (size) ವ್ಯತ್ಯಾಸವಾಗುತ್ತ ಹೋಗುತ್ತದೆ. ಹಾಗಾಗಿ ಸಾಹಿತ್ಯ ಎಂದರೆ ಹೀಗೆಯೇ ಇರಬೇಕು, ಇರುತ್ತದೆ ಎಂಬ ನಮ್ಮ ಪೂರ್ವನಿರ್ಧರಿತ ಗ್ರಹಿಕೆಗಳು ಸಾಧುವಾದದ್ದಲ್ಲ ಎಂದು ಹೇಳಬೇಕಾಗುತ್ತದೆ.

ಪಂಪ, ರನ್ನ, ಜನ್ನ, ಪೊನ್ನರ ಕಾಲದಲ್ಲಿ ಬದುಕು ಒಂದು ನಿರ್ದಿಷ್ಟ ಆಯಾಮದಲ್ಲಿ ಮತ್ತು ನಿಧಾನಗತಿಯ ನಡಿಗೆಯಲ್ಲಿ ಸಾಗುತ್ತಿತ್ತು. ಮೈಚೆಲ್ಲಿ ಬಿದ್ದ ನಿಸರ್ಗ ಮತ್ತು ರಾಜ ಮಹಾರಾಜರ ಆಳ್ವಿಕೆಯ ಹಾಗೂ ಶತ್ರುಗಳ ವಿರುದ್ಧ ದಂಡೆತ್ತಿ ಹೋಗಿ ಹೂಡುವ ಯುದ್ಧಗಳ ಕಾಲ ಅದು. ಕಾವ್ಯ ಅಂತಹ ಬದುಕನ್ನು ನಿರಾಳವಾಗಿ ಮತ್ತು ನಿಡಿದಾಗಿ ಚಿತ್ರಿಸಿತು. ಅಷ್ಟಾದಶ ವರ್ಣನೆಗಳಿಂದ ಕೂಡಿ ಕಾವ್ಯಕೃತಿಗಳು ಬೃಹತ್ ಗಾತ್ರದಲ್ಲಿ ಇರುತ್ತಿದ್ದವು. ಅದು ಹಾಡುವ ಮತ್ತು ಕೇಳುವ ಯುಗವಾಗಿತ್ತು. ಜನರ ಬದುಕು ನಿಧಾನವಾಗಿತ್ತು. ಅಷ್ಟು ಸಮಯ ಅವರ ಕೈಯಲ್ಲಿತ್ತು.

ಮಧ್ಯಕಾಲಕ್ಕೆ ಬರೋಣ. ಅನ್ಯಾಕ್ರಮಣ, ಯುದ್ಧ ಮತ್ತು ಅಶಾಂತಿಯ ದೆಸೆಯಿಂದಾಗಿ ರಾಜಕೀಯ, ಧಾರ್ಮಿಕ, ಸಾಮಾಜಿಕ ಬದುಕಿನಲ್ಲಿ ದೊಡ್ಡ ವಿಪ್ಲವ ಉಂಟಾದ ಕಾಲ. ಎಲ್ಲೆಲ್ಲೂ ಅಶಾಂತಿ, ಅರಾಜಕತೆ, ಅಭದ್ರತೆ, ಅನಿಶ್ಚಯತೆ ಮತ್ತು ಯುದ್ಧಗಳಿಂದಾಗಿ ನಾಶ ನಷ್ಟ ಸಂಭವಿಸಿದ ಕಾಲ. ಭಕ್ತಿಯುಗಕ್ಕೆ ಇಂತಹ ಹಿನ್ನೆಲೆ ಇದೆ. ವಚನ, ದಾಸಪಂಥ, ಸರ್ವಜ್ಣ ಮುಂತಾದವರ ಅಭಿವ್ಯಕ್ತಿಯ ಹಿನ್ನೆಲೆಯಲ್ಲಿ ಇದ್ದದ್ದು ಇಂತಹ ಕ್ಷೋಭೆಯ ಬದುಕು. ಕ್ಷಣಭಂಗುರತೆಯ ಚಿತ್ರಣ. ಚಿತ್ತಶಾಂತಿಗಾಗಿ, ಸುಂದರ ಬದುಕಿಗಾಗಿ ಹಪಹಪಿಸಿದ ಕಾಲ ಅದು. ಮಧ್ಯಯುಗದ ವಚನ ಮತ್ತು ಭಕ್ತಿ ಸಾಹಿತ್ಯವನ್ನು ಈ ಹಿನ್ನೆಲೆಯಿಂದ ನಾವು ಗಮನಿಸಿದರೆ ಸಾಮಾಜಿಕ ಬದುಕು ಸಾಹಿತ್ಯಾಭಿವ್ಯಕ್ತಿಯ ಹಿಂದೆ ಚುಕ್ಕಾಣಿಯ ಹಾಗೆ ಪ್ರವೃತ್ತವಾಗಿರುವುದನ್ನು ಗಮನಿಸಬಹುದು.

ನವೋದಯ ಕಾಲದಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಸರ್ವಾಂಗ ವ್ಯಾಪ್ತತೆ ಮತ್ತು ನವ್ಯದ ಕಾಲದಲ್ಲಿ ಯಂತ್ರನಾಗರಿಕತೆಯ ಹುಚ್ಚು ಆವೇಗದಲ್ಲಿ ಮನುಷ್ಯ ಏಕಾಂಗಿಯೂ ಅನಾಥನೂ ಆಗಿಬಿಡುವ ವಿಕ್ಷಿಪ್ತತೆ ಸಾಹಿತ್ಯಾಭಿವ್ಯಕ್ತಿಯ ಹಿನ್ನೆಲೆಯಲ್ಲಿ ದುಡಿದದ್ದನ್ನು ಕಾಣುತ್ತೇವೆ. ಅದೇ ರೀತಿ ದಲಿತ ಬಂಡಾಯ ಕಾಲದಲ್ಲಿ ಸಾಮಾಜಿಕ ಮತ್ತು ಆರ್ಥಿಕ ಅಸಮತೆಗಳ ವಿರುದ್ಧ ಮೂಡಿ ಬಂದ ಹೋರಾಟಗಳು ಸಾಹಿತ್ಯಾಭಿವ್ಯಕ್ತಿಯ ಸ್ವರೂಪ ಪಡೆದುಕೊಂಡುದನ್ನು ಕಾಣುತ್ತೇವೆ.

ಈಗಿನ ಪ್ರಪಂಚೀಕರಣದ ಸಂದರ್ಭದಲ್ಲಿ, ಅಂದರೆ ಕಳೆದ ಎರಡು ದಶಕಗಳಿಂದೀಚೆಗೆ ನಮ್ಮ ಅಸ್ಮಿತೆಯ ಕುರಿತಾದ ಕಾಳಜಿ – ಕಳಕಳಿ ಮತ್ತು ಪರಂಪರೆಯಿಂದ ಕಳೆದುಕೊಂಡುದನ್ನು ಪುನರಪಿ ಗಳಿಸಬೇಕು ಎಂಬ ಹಪಹಪಿಕೆ ಸಾಹಿತ್ಯಾಭಿವ್ಯಕ್ತಿಯ ಮುನ್ನೆಲೆಯಲ್ಲಿರುವುದನ್ನು ಗಮನಿಸಬಹುದು.

ಅಂದರೆ ವಸ್ತು, ಅಭಿವ್ಯಕ್ತಿಯ ಕ್ರಮ ಮತ್ತು ಅದರ ರೂಪಸ್ವರೂಪಗಳಲ್ಲಿ ಕಾಲಕಾಲಕ್ಕೆ ಆಗಿರುವ ಅಗಾಧ ಅಂತರ ಮತ್ತು ವ್ಯತ್ಯಾಸ ಸಾಹಿತ್ಯದ ಕುರಿತಾದ ನಮ್ಮ ಒಟ್ಟೂ ವ್ಯಾಖ್ಯೆ ಮತ್ತು ನಿಲುಮೆಯನ್ನು ಬದಲಿಸತಕ್ಕಂಥಾದ್ದು. ಸಾಹಿತ್ಯ ಎಂದರೆ ಹೀಗೆಯೇ ಇರಬೇಕು ಎಂಬ ಚೌಕಟ್ಟನ್ನು ಮತ್ತು ರೂಢಮೂಲ ಚಿಂತನೆಯನ್ನು ಪಕ್ಕಕ್ಕಿಟ್ಟು ಆಯಾ ಕಾಲದ ಬದುಕಿನ ಸಂಘರ್ಷವನ್ನು ಕುರಿತಾದ ಆಯಾ ತಲೆಮಾರಿನ ವಿಶಿಷ್ಟ ಅಭಿವ್ಯಕ್ತಿಯನ್ನು ಸಾಹಿತ್ಯ ಎಂದು ನಾವು ಒಪ್ಪಿಕೊಳ್ಳಬೇಕಾಗುತ್ತದೆ.

ಬದಲಾದ ಕಾಲಮಾನಕ್ಕನುಸರಿಸಿ ಆಯಾ ತಲೆಮಾರಿನವರ ಆಸೆ ನಿರೀಕ್ಷೆಗಳು, ಅನುಭವಗಳು ಬೇರೆಯೇ ಇರುತ್ತವೆ. ಅವು ತಕ್ಕ ಸಂದರ್ಭದಲ್ಲಿ ಸಾಹಿತ್ಯಿಕ ಅಭಿವ್ಯಕ್ತಿಯಾಗಿ ಹೊರಗೆ ಬರುತ್ತವೆ. ಸ್ಫೋಟಕ್ಕೆ ನಿರ್ದಿಷ್ಟ ರೂಪ ಮತ್ತು ತೀವ್ರತೆಗಳನ್ನು ಹೇಳಲಾಗಿಲ್ಲ. ಅದು ಸ್ಫೋಟ ಅಷ್ಟೆ; ಒಂದು ಸ್ಫೋಟಕ್ಕಿಂತ ಇನ್ನೊಂದು ಭಿನ್ನ. ಆ ಸಂದರ್ಭದ ಮೂಲವಸ್ತುಗಳ ಸಂಘರ್ಷ ಮತ್ತು ಶಾಖದ ತೀವ್ರತೆಯ ಮೇಲೆ ಸ್ಫೋಟದ ಶಕ್ತಿ ಮತ್ತು ಧ್ವನಿ ನಿರ್ಧಾರವಾಗುತ್ತದೆ. ಹಾಗೆಯೇ ಆಯಾ ಕಾಲದ ಒತ್ತಡಗಳಿಂದ ಸಹಜವಾಗಿ ಅಭಿವ್ಯಕ್ತಿ ಪಡೆಯುವುದೇ ಸಾಹಿತ್ಯ.

ಇವತ್ತಿನ ಸಾಹಿತ್ಯವನ್ನು ನೋಡಿ ನಾವು ಮೂಗು ಮುರಿಯಬೇಕಾಗಿಲ್ಲ. ಅದು ಚುಟಕ, ಹನಿ ಮಿನಿ ಅಥವಾ ಹಾಯ್ಕುಗಳಿರಬಹುದು; ಕಥೆಯಂತಹ ಲಘುಹರಟೆಯ ಕಾಲಯಾಪ ಮತ್ತು ಪ್ರವಾಸಕಥನದಂತೆ ತೋರುವ ಕಾದಂಬರಿ ಇರಬಹುದು – ಇದೆಲ್ಲ ಬದಲಾದ ಈ ಹೊಸಯುಗದ ಅನುಭವಗಳ ಅಭಿವ್ಯಕ್ತಿ. ನಮ್ಮ ತಲೆಮಾರಿನವರ ಕಾರ್ಯಕ್ಷೇತ್ರ ಅಬ್ಬಬ್ಬ ಎಂದರೆ ನೂರಿನ್ನೂರು ಕಿಲೋಮೀಟರ್ ದೂರ ಇದ್ದಿರಬಹುದು; ಈಗಿನವರಿಗೆ ಖಂಡಾಂತರಗಳು ಕಾರ್ಯಕ್ಷೇತ್ರ ಆಗಿದೆ. ದೂರದ ಅಮೆರಿಕ, ಆಷ್ಟ್ರೇಲಿಯಾ, ಜರ್ಮನಿಯಲ್ಲಿ ನಮ್ಮ ಯುವ ತಲೆಮಾರು ಉದ್ಯೋಗಕ್ಕಾಗಿ ಹಾರಿ ಹೋಗುತ್ತಾರೆ. ಅನುಭವಗಳು ಭಿನ್ನವಾಗಿರಲೇಬೇಕು.

ಪ್ರಪಂಚೀಕರಣದ ಬಳಿಕ ನಮ್ಮ ಬದುಕು ವ್ಯಾಪಕ ಬದಲಾವಣೆಗೆ ಒಳಗಾಗಿದೆ. ಈ ಕಾಲಕ್ಕೆ ಎದೆಯೊಡ್ಡುವ ನಮ್ಮ ಯುವ ತಲೆಮಾರಿನ ಅನುಭವಗಳು ವಿಶಿಷ್ಟ ಸಾಹಿತ್ಯವಾಗಿ ದಾಖಲಾಗುತ್ತವೆ.


‌‌ ಡಾ.ವಸಂತಕುಮಾರ ಪೆರ್ಲ


ನಮ್ಮ ಪ್ರೀತಿಯ ಕವಿ ವಾಗ್ಮಿ‌ ಸಂಶೋಧಕ ಡಾ.ವಸಂತಕುಮಾರ ಪೆರ್ಲ ಅವರ " ಸಾಹಿತ್ಯದ ಅಭಿವ್ಯಕ್ತಿ ಮತ್ತು ರೂಪ ಸ್ವರೂಪ" ಅಂಕಣ ನಿಮ್ಮ ಓದಿಗಾಗಿ

ಡಾ.ಶ್ರೀಪಾದ ಶೆಟ್ಟಿ ಸಂಪಾದಕ ಆಲೋಚನೆ.ಕಾಂ




81 views1 comment
bottom of page