top of page

ಸ್ವರ್ಣ ಉತ್ಸವ ಒಂದು ತಮಾಷೆ


ಸಾಂಸ್ಕೃತಿಕವಾಗಿ ಮೃತಾವಸ್ಥೆ ತಲುಪಿದ ಕರ್ನಾಟಕದಲ್ಲಿ ಸ್ವರ್ಣ ಉತ್ಸವ ಒಂದು ತಮಾಷೆ!

*************************

ಹಿಂದಿನ ಬಿಜೆಪಿ ಅಧಿಕಾರದ ಅವಧಿಯಲ್ಲೇ ರಾಜ್ಯದ ವಿವಿಧ ಅಕಾಡೆಮಿ ಪ್ರಾಧಿಕಾರಗಳು ನಿರ್ಜೀವಗೊಂಡಿದ್ದವು. ಈಗ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು ನಾಲ್ಕು ತಿಂಗಳಾದರೂ ಆ ವಿಷಯವನ್ನೇ ಸರಕಾರ ಮರೆತಂತಿದೆ. ಆರು ವರ್ಷಗಳ ಹಿಂದೆ ಇದೇ ಸಿದ್ಧರಾಮಯ್ಯನವರ ಸರಕಾರವಿದ್ದಾಗ ಸಾಂಸ್ಕೃತಿಕ ನೀತಿಯ ಕುರಿತು ಬರಗೂರು ಸಮಿತಿ ನೀಡಿದ ವರದಿಯೂ ಮೂಲೆಗುಂಪಾಗಿದೆ. ಈಚೆಗೆ ಮೈಸೂರು ದಸರಾ ಉತ್ಸವಕ್ಕೆ ಪ್ರಸಿದ್ಧ ಕಲಾವಿದರನ್ನು ಗೊತ್ಗು ಮಾಡುವಾಗ ಅಧಿಕಾರಿಗಳು ಕಮಿಶನ್ ಕೇಳಿದ್ದು ವರದಿಯಾಯಿತು. ಸಾಲದ್ದಕ್ಕೆ ಈಗ ದಸರಾ ಉತ್ಸವದಲ್ಲಿ ಭಾಗವಹಿಸಿದ್ದ ಕಲಾವಿದರಿಗೆ ನೀಡಿದ ಚೆಕ್ ಬೌನ್ಸ್ ಆಗಿದೆಯೆನ್ನಲಾಗಿದೆ. ಈ ಸಾಂಸ್ಕೃತಿಕ ನಿರ್ಲಕ್ಷ್ಯ ಸಾರ್ವತ್ರಿಕವಾಗಿ ಹರಡಿಕೊಂಡಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಭ್ರಷ್ಟಾಚಾರದ ಕುಪವಾಗಿದೆ ಎಂಬ ಆರೋಪ ಕೇಳಿಬರುತ್ತಿದೆ.

ಇಂತಹ ಪರಿಸ್ತಿತಿಯಲ್ಲಿ ಸರಕಾರ ಕರ್ನಾಟಕವೆಂಬ ಹೆಸರು ಬಂದ ೫೦ ನೆಯ ವರ್ಷ ಆಚರಣೆ ಮಾಡಲು ಹೊರಟಿರುವುದು ತಮಾಷೆಯೇ ಆಗಿದೆ. ಕಲೆ ಸಾಹಿತ್ಯ ಸಂಸ್ಕೃತಿಯ ಬಗ್ಗೆ ಯಾವ ತಿಳಿವಳಿಕೆ, ಆಸಕ್ತಿ ಅಭಿರುಚಿ ಇಲ್ಲದ ರಾಜಕಾರಣಿಗಳು ಇಂತಹ ಉತ್ಸವ ಮಾಡುವುದು ಕೇವಲ ಒಂದಿಷ್ಟು ಹಣ ಖಾಲಿ ಮಾಡುವುದಕ್ಕಷ್ಟೇ ಎನ್ನುವ ಅಭಿಪ್ರಾಯ ಪೂರ್ತಿ ಸುಳ್ಳೇನಲ್ಲ. ಈ ಸ್ವರ್ಣ ಉತ್ಸವದ ಹೆಸರಲ್ಲಿ ಅದೆಷ್ಟು ಕೋಟಿ ಸ್ವಾಹಾ ಆಗಲಿದೆ ಎನ್ನುವುದಷ್ಟೇ ಈಗ ಮುಖ್ಯವಾಗಿದೆ. ಸಾಂಸ್ಕೃತಿಕ ಅಭಿರುಚಿಯೇ ಇಲ್ಲದವರು ಇಲಾಖೆಯ ಸಚಿವರಾಗುವುದೆನೂ ನಮ್ಮ ರಾಜ್ಯದಲ್ಲಿ ಹೊಸದಲ್ಲ. ಹಿಂದಿನ ಬಿಜೆಪಿ ಸರಕಾರವೇನೂ ಈ ವಿಷಯದಲ್ಲಿ ಪ್ರತ್ಯೇಕವೆನ್ನುವಂತಿರಲಿಲ್ಲ. ಪರಶುರಾಮನ ವಿಗ್ರಹದ ವಿಚಾರವೇ ಅದಕ್ಕೆ ಸಾಕ್ಷಿ. ಅಲ್ಲದೆ ಅದು ಅಧಿಕಾರದಲ್ಲಿದ್ದಾಗಲೇ ವಿವಿಧ ಅಕಾಡೆಮಿಗಳು , ಪ್ರಾಧಿಕಾರಗಳು ನಿಷ್ಕ್ರಿಯಗೊಂಡಿದ್ದವು. ಅಂದರೆ ಪಕ್ಷ ಯಾವುದಾದರೇನಂತೆ, ರಾಜಕಾರಣಿಗಳ ಸ್ವಭಾವವೇನೂ ಬದಲಾಗುವುದಿಲ್ಲವೆನ್ನುವದಂತೂ ಖಚಿತ. ಈಗಂತೂ ಸರಕಾರಕ್ಕೆ ತನ್ನ ಗ್ಯಾರಂಟಿಗಳ ಈಡೇರಿಕೆ ಬಿಟ್ಟರೆ ಬೇರೆ ಯಾವುದಕ್ಕೂ ಮಹತ್ವವೇ ಇಲ್ಲದಂತಾಗಿದೆ. ಅಂದರೆ ಸರಕಾರ ಆರ್ಥಿಕವಾಗಿಯಷ್ಟೇ ಅಲ್ಲ , ಸಾಂಸ್ಕೃತಿಕವಾಗಿಯೂ ದಿವಾಳಿಯೆದ್ದಂತಾಗಿದೆ. ಇಂಥ ಸಂಸ್ಕೃತಿಹೀನರ ಉತ್ಸವಗಳಿಗೇನು ಅರ್ಥ?


ಎಲ್.ಎಸ್.ಶಾಸ್ತ್ರಿ ಬೆಳಗಾವಿ

34 views0 comments
bottom of page