top of page

ಸಾವು ಎಂದರೆ...‌‌.‌‌‌..

ಸಾವು ಅಂದರೆ ಏನು ಎಂದು ಯಾರೂ ಕೇಳಲಿಕ್ಕಿಲ್ಲ . ಈಗಂತೂ ಅದು ಚಿರಪರಿಚಿತ ‌. ಆದರೂ ನಿಜವಾಗಿ ಅದು ಬಹಳ ಮಟ್ಟಿಗೆ ಅಪರಿಚಿತವೆ. ಏಕೆಂದರೆ ಸಾವು ಯಾರನ್ನೂ ಪರಿಚಯ ಮಾಡಿಕೊಳ್ಳುವದಿಲ್ಲ. ಯಾರ ಸಂಗಡ ಸಲಿಗೆ ಬೆಳೆಸಿಕೊಳ್ಳುವದಿಲ್ಲ. ಅದೊಂದು ಥರಾ ವಿಕ್ಷಿಪ್ತ ಜೀವಿ.

ಸಾವು ನಿಸ್ವಾರ್ಥಿ. ಯಾರಿಂದ ಏನನ್ನೂ ಬಯಸುವದಿಲ್ಲ. ಅದು ಬಯಸುವದು ಜೀವವೊಂದನ್ನೆ. ಕೋಟ್ಯಧೀಶನ ಮನೆ ಹೊಕ್ಕರೂ ಅದು ಆಚೀಚೆ ನೋಡುವದಿಲ್ಲ. ಅಲ್ಲಿದ್ದ ಯಾವ ವಸ್ತುವನ್ನೂ ಮುಟ್ಟುವುದಿಲ್ಲ. ಒಂದು ಪೈಸೆಯನ್ನೂ ಎಗರಿಸುವದಿಲ್ಲ. ತನ್ನಷ್ಟಕ್ಕೆ ತಾನು ಕೆಲಸ ಮುಗಿಸಿಕೊಂಡು ಹೊರಟುಬಿಡುತ್ತದೆ. ಅದು ಒಯ್ಯುವದು ಒಂದು ಜೀವವನ್ನು‌ ಮಾತ್ರ. ಸಾವು ಒಳಗೆ ಬಂದದ್ದೂ ಗೊತ್ತಾಗುವದಿಲ್ಲ. ಅದು ತಾನು ಬಂದಿದ್ದೇನೆಂದು ಬೆಲ್ ಬಾರಿಸುವದಿಲ್ಲ. ಬಾಗಿಲು ಬಡಿಯುವದಿಲ್ಲ. ಸದ್ದಿಲ್ಲದೇ ಬಂದು ತನಗೆ ಬೇಕಾದ ಜೀವವನ್ನು ತೆಗೆದುಕೊಂಡು ಹೋಗಿಬಿಡುತ್ತದೆ. ಹಾಗೆ ಹೋದಮೇಲೆಯೇ ಅದು ಬಂದದ್ದು ಗೊತ್ತಾಗುವದು.

ಸಾವಿಗೆ ಸಂಬಂಧಿಗಳಿಲ್ಲ. ಸಂಬಂಧಗಳನ್ನೂ ಅದು ಬಯಸುವದಿಲ್ಲ. ಅದು ನಿರ್ಲಿಪ್ತ. ಅದಕ್ಕೆ ಸುಖದು:ಖ, ನೋವು ನಲಿವು, ಕರುಣೆ ದಯೆ, ಯಾವ ಭಾವನೆಗಳೂ ಇಲ್ಲ. ಬೇರೆಯವರ ಭಾವನೆಗಳದೂ ಅದಕ್ಕೆ ಸಂಬಂಧ ಇಲ್ಲ.

ಸಾವು ಯಾರಿಂದಲೂ ಏನನ್ನೂ ಬಯಸುವದಿಲ್ಲ. ಅದಕ್ಕೆ ಬೇಕೆಂಬ ಆಸೆಯೂ ಇಲ್ಲ. ಬೇರೆಯವರ ತೊಂದರೆ ತಾಪತ್ರಯಗಳ ಕುರಿತೂ ಅದು ಯೋಚಿಸುವದಿಲ್ಲ. ಏಕೆಂದರೆ ಅದು ಅದರ ಕೆಲಸವಲ್ಲ. ವೇದಪುರಾಣಗಳಲ್ಲಿ ಹೇಳಿದಂತೆ ಯಮ ಮತ್ತು ಚಿತ್ರಗುಪ್ತ ಹೇಳಿದ್ದಷ್ಟೇ ಅದು ಮಾಡುತ್ತಿರಬೇಕು. ಅದರ ಕರ್ತವ್ಯಪ್ರಜ್ಞೆ ಮಾತ್ರ ಮೆಚ್ಚತಕ್ಕದ್ದೆ. ಹೋಗು ಎಂದಲ್ಲಿಗೆ ಹೋಗುತ್ತದೆ. ಯಾರ ಜೀವ ತರಬೇಕೆಂದು ಹೇಳಿದ್ದಾರೋ ಅವರ ಜೀವವನ್ನಷ್ಟೇ‌ ತರುತ್ತದೆ. ಬೇರೆಯವರ ಜೀವಕ್ಕೆ ಅದು ಕೈಹಚ್ಚುವದಿಲ್ಲ. ಬೇಕಾದವರನ್ನು ಬಿಡುವದಿಲ್ಲ. ಅದರಂತಹ ಪ್ರಾಮಾಣಿಕ ಕರ್ತವ್ಯ ನಿಷ್ಠರು ಯಾವ ಲೋಕದಲ್ಲೂ ಇದ್ದಂತೆ ನನಗನಿಸುತ್ತಿಲ್ಲ.

ಸಾವನ್ನು ಯಾರೂ ಸಾಮಾನ್ಯವಾಗಿ ತಾವಾಗಿ ಸ್ವಾಗತಿಸುವದಿಲ್ಲ. ಯಾರಿಗೂ ಬೇಡವಾದ ಸಂಗತಿ ಅದು. ಅದಕ್ಕಾಗಿ ಸಾವೇನೂ ಬೇಸರಿಸುವದಿಲ್ಲ. ಅಂತಹ ಎಲ್ಲ ಭಾವನೆಗಳಿಂದ ಮುಕ್ತವಾದದ್ದು ಸಾವು. ವಾಸ್ತವವಾಗಿ ಈ ಕೊರೊನಾ, ಕ್ಯಾನ್ಸರ್, ಅದು ಇದು ಎಲ್ಲ ರೋಗಗಳೂ ನೆಪ ಮಾತ್ರ. ಆಯುಷ್ಯ ತೀರಿದವನನ್ನು ಸಾವು ಒಯ್ಯುತ್ತದೆ ಅಷ್ಟೇ. ಸಾವಿಗೆ ಒಂದು ಕಾರಣ ಬೇಕಲ್ಲ. ಆಯುಷ್ಯ ತೀರಿದವನನ್ನು ಬದುಕಿಸಲು ಆ ಯಮನಿಗೂ ಆಗುವದಿಲ್ಲವಂತೆ. ಅದು ಆ ಬ್ರಹ್ಮ ವಿಷ್ಣು ಮಹೇಶ್ವರರಿಗೆ ಸಾಧ್ಯವಿರಬಹುದು. ಗೊತ್ತಿಲ್ಲ. ಅವರನ್ನೇ ಕೇಳಬೇಕು.

ಸಾವು ಬಂದು ಹೋದ ನಂತರ ಮನುಷ್ಯರು ಒಂದಷ್ಟು ದಿನ ಅಳುತ್ತಾರೆ. ನಾಲ್ಕು ದಿವಸಗಳ ನಂತರ ಮರೆಯುತ್ತಾರೆ. ಮತ್ತೆ ಅವರ ಜೀವನ ಯಥಾವತ್ತಾಗಿ ಸಾಗುತ್ತಿರುತ್ತದೆ. ಸತ್ತವರು ಯಾರೂ ಮತ್ತೆ ಬಂದಿಲ್ಲ. ಆದ್ದರಿಂದ ಅವರು ಸ್ವರ್ಗಕ್ಕೆ ಹೋಗಿದ್ದರೋ ನರಕಕ್ಕೆ ಹೋಗಿದ್ದರೋ , ಬೇರೆ ಯಾವ ಲೋಕದಲ್ಲಿದ್ದರೋ ಒಂದೂ ಗೊತ್ತಾಗುವದಿಲ್ಲ. ಅದು ಸೀಕ್ರೆಟ್ ಆಗಿಯೇ ಇರುತ್ತದೆ. ಮತ್ತೆ ಸಾವು ಮನೆಗೆ ಬಂದಾಗಲೇ ಮನುಷ್ಯನಿಗೆ ಅದರ ನೆನಪಾಗುವದು. ಸ್ಮಶಾನ ವೈರಾಗ್ಯದಂತೆ ಮನುಷ್ಯ ಸಾವಿನ ಬಗ್ಗೆ ಒಂದಿಷ್ಟು ಮಾತಾಡುತ್ತಾನೆ‌. ಸುಮ್ಮನಾಗುತ್ತಾನೆ.

ಸಾವು ನಿರ್ಲಿಪ್ತವಾಗಿ ತನ್ನ ಕರ್ತವ್ಯ ಮಾಡುವದರಲ್ಲಿ ಮಗ್ನವಾಗಿರುತ್ತದೆ. ನಾವೂ ಚಿರಂಜೀವಿಗಳಲ್ಲ ಎನ್ನುವದು ನಮಗೆ ನೆನಪಿದ್ದರೆ ಸಾವಿನ ಬಗ್ಗೆ ತಲೆ ಕೆಡಿಸಿಕೊಳ್ಳುವದು ತಪ್ಪುತ್ತದೆ. ಆದರೆ ನಾವು ಸಾವಿನಷ್ಟು ನಿರ್ಲಿಪ್ತರಲ್ಲವಲ್ಲ. ನಮಗೆ ಆಸೆಗಳು ಜಾಸ್ತಿ. ಗುಣಪಡಿಸಲಾಗದ ರೋಗದಿಂದ ಹಾಸಿಗೆಯಲ್ಲಿ ಮಲಗಿದ್ದರೂ ಸಾಯುವ ಇಚ್ಛೆ ನಮಗಿರುವದಿಲ್ಲ. ಇನ್ನೂ ನಾಲ್ಕು ದಿನ ಬದುಕಿರೋಣ ಅಂದುಕೊಳ್ಳುತ್ತೇವೆ. ಆದರೆ ಸಾವಿಗೆ ಅದೆಲ್ಲ ಗೊತ್ತಿಲ್ಲ. ಅದು ನಿರ್ಲಿಪ್ತ. ಅದು ನಿಸ್ವಾರ್ಥಿ. ಅದು ನಿರ್ಮೋಹಿ.

- ಎಲ್. ಎಸ್. ಶಾಸ್ತ್ರಿ

74 views0 comments
bottom of page