top of page

ಸ್ನೇಹಜೀವಿ ಬಿ.ವಿ.ಭಂಡಾರಿ ಮಾಸ್ತರ ಅವರು


ಬಿ.ವಿ.ಭಂಡಾರಿಯಂತವರು ಸಹಜ ಸರಳ ಗುಣಗಳ ಸಾಕಾರ.ನಿರಾಕಾರಕ್ಕೆ ಆಕಾರ ನೀಡುವ ಕಲಾವಿದ.ಶಿಕ್ಷಕ ವೃತ್ತಿಗೆ ತನ್ನ ಬದುಕನ್ನೆ ಅರ್ಪಿಸಿಕೊಂಡ ನಿಷ್ಠಾವಂತ. ಸದುವಿನಯವೆ ಸದಾಶಿವನೊಲುಮೆ ಎಂದು ನಂಬಿದ ಮಾನವೀಯತೆಯ ಮೂರ್ತಿ. ಈ ವರ್ಷದ ಸುಮನಾ ಟ್ರ್ಟಿನ 'ಸುಮನಶ್ರೀ' ಪ್ರಶಸ್ತಿಗೆ ಅವರ ಹೆಸರನ್ನು ಪ್ರಕಟಿಸುವುದೊಂದು ಬಾಕಿ ಉಳಿದಿತ್ತು. ನನ್ನ ಅಮೇರಿಕಾ ಪಯಣದ ಕಾರಣ ವಿಳಂಬವಾಯಿತು. ಆದರೆ ಅವರನ್ನು ಗೌರವಿಸುವ ಅವಕಾಶದಿಂದ ವಂಚಿತನಾದ ನೋವು ನನ್ನದು.

' ಮಾತು ಮೌನದ ಪ್ರತಿಮೆ ಮೌನ ಮಾತಿನ ದೈವ' ಎಂಬ ಬದ್ರೆಯವರ ವಾಣಿಯಂತೆ ಬದುಕಿದ ನಮ್ಮೆಲ್ಲರ ಪ್ರೀತಿ ಮತ್ತು‌ಅಭಿಮಾನದ ಬಿ.ವಿ.ಭಂಡಾರಿಯವರು ತಮ್ಮ ದೇಹದಾನದ ಮೂಲಕ ಆದರ್ಶವನ್ನು‌ಮೆರೆದಿದ್ದಾರೆ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ. ಡಾ.ಶ್ರೀಪಾದ ಶೆಟ್ಟಿ ಸಂಪಾದಕ





ಬಹುಮುಖ ಪ್ರತಿಭೆಯ ಸ್ನೇಹಜೀವಿ ಬಾಬಪ್ಪಚ್ಚಿ ( ದಿ.ಬಿ ವಿ ಭಂಡಾರಿ ಮಾಸ್ತರರು ) ಅವರಿಗೆ ಭಾವ ನಮನ

'ಶರಣರ ಸಾವನ್ನು ಮರಣದಲ್ಲಿ ಕಾಣು'

ಸಪ್ಟೆಂಬರ್ ೧೦ 'ಚುಟುಕು ಸಾಮ್ರಾಟ್, ''ಅಕ್ಷರ ಸೂರ್ಯ' ದಿನಕರ ದೇಸಾಯಿಯವರ ಜನುಮದಿನ. 'ನನ್ನ ದೇಹದ ಬೂದಿ ಗಾಳಿಯಲಿ ತೂರಿ ಬಿಡಿ ಹೋಗಿ ಬೀಳಲಿ ಭತ್ತ ಬೆಳೆಯುವಲ್ಲಿ' ಎಂಬ ಸಾವಿನಲ್ಲಿಯೂ ಸಾರ್ಥಕ್ಯವನ್ನು ಕಾಣುವ ಅಪರೂಪದ ಕವಿವಾಣಿಯನ್ನು ನೀಡಿದ ದಿನಕರ ದೇಸಾಯಿಯವರ ಈ ಸಾಲುಗಳು ದಿವಂಗತ ಬಿ ವಿ ಭಂಡಾರಿಯವರ ಸಾವಿನ ಸಂದರ್ಭದಲ್ಲಿ ತುಂಬಾ ಸೂಕ್ತ ಎಂದೆನಿಸುತ್ತದೆ.

ನಮ್ಮೆಲ್ಲರ ಪ್ರೀತಿಯ ಬಾಬಪ್ಪಚ್ಚಿ ಅಂದರೆ ನನ್ನ ದೊಡ್ಡಮ್ಮನ ಮಕ್ಕಳಿಗೆ ಸಂಬಂಧದಲ್ಲಿ ಚಿಕ್ಕಪ್ಪ ಆಡು ಭಾಷೆಯಲ್ಲಿ ಅಪ್ಪಚ್ಚಿ ಹಾಗಾಗಿ ಬಾಬುರಾವ್ ಮಾಸ್ತರರು ಅವರ ಒಡನಾಟದಲ್ಲಿ ನಮಗೂ ಕೂಡ ಅಕ್ಕರೆಯ ಬಾಬಪ್ಪಚ್ಚಿಯಾಗಿದ್ದ. ಹೀಗಾಗಿ ನಾನು ಚಿಕ್ಕವಳಾಗಿದ್ದಾಗಿನಿಂದ ನನ್ನ ದೊಡ್ಡಮ್ಮ, ಅಕ್ಕಂದಿರ ಜೊತೆಯಲ್ಲಿ ಅವರ ಮನೆಗೆಲ್ಲಾ ಹೋಗಿ ಓಡಾಡಿಕೊಂಡು ಉಳಿದು ಬಂದ ನೆನಪು. ಮನೆ ತುಂಬಾ ಪತ್ರಿಕೆಗಳು, ಪುಸ್ತಕ ಖಜಾನೆ ತುಂಬಿಕೊಂಡಿದ್ದ ನೆನಪು. ಆನಂತರದಲ್ಲಿ ನಾನು ಕೆರೆಕೋಣ ಊರಿನ ಸೊಸೆಯಾಗಿ ಅವರ ಮನೆ ದಾರಿಯಿಂದಲೇ ನಮ್ಮ ಮನೆಗೆ ಹೋಗಬೇಕಾದ ಸಂದರ್ಭದಲ್ಲಿ ಒಮ್ಮೆ ಬಾಬಪಚ್ಚಿಯನ್ನು ಮಾತನಾಡಿಸಿ ಹೋಗುವ ರೂಢಿ; ಏನೋ ಮನಸ್ಸಿಗೆ ಸಮಾಧಾನ. ತನ್ನ ನಿವೃತ್ತ ಜೀವನವನ್ನು ಅತ್ಯಂತ ಶಿಸ್ತು ಬದ್ಧವಾಗಿ ಕಳೆಯುತ್ತಿದ್ದ ಬಾಬಪ್ಪಜ್ಜಿ ಇಳಿ ವಯಸ್ಸಿನಲ್ಲಿಯೂ ಹತ್ತಿರದ ಗ್ರಂಥಾಲಯಕ್ಕೆ ಹೋಗಿ ಎಲ್ಲ ಪತ್ರಿಕೆಗಳನ್ನು ಓದುತ್ತಿದ್ದವ. ಹೀಗಾಗಿ ಕರಾವಳಿ ಮುಂಜಾವು, ಸಂಪ್ರಭಾ, ನಾಗರಿಕ ಯಾವುದೇ ಪತ್ರಿಕೆಯಲ್ಲಿ ನನ್ನ ಲೇಖನ ಪ್ರಕಟವಾಗಿದ್ದರೂ ಅವರ ಮನೆ ಮಂದಿಯೆಲ್ಲಾ ಓದುತ್ತಿದ್ದರು.ಅವರ ಸೊಸೆ ಜ್ಯೋತಿ ಕೆರೆಕೋಣ ಗ್ರಂಥಾಲಯದ ಗ್ರಂಥಪಾಲಕಿ. ತುಂಬಾ ಪ್ರೀತಿಯಿಂದ ಅಭಿಮಾನದಿಂದ ಮನೆಗೆ ಹೋದಾಗೆಲ್ಲ ಬೆನ್ನು ತಟ್ಟಿ ಪ್ರೋತ್ಸಾಹಿಸುವ ಪರಿ ನನಗೆ ತುಂಬಾ ಆತ್ಮವಿಶ್ವಾಸ ನೀಡಿತ್ತು.ನನ್ನ ಎಲ್ಲಾ ಪುಸ್ತಕಗಳನ್ನು ಅವನಿಗೆ ಕೊಟ್ಟು ಆಶೀರ್ವಾದ ಪಡೆಯುತ್ತಿದ್ದೆ; ಏಕೆಂದರೆ ಅವನೊಬ್ಬ ಅತ್ಯುತ್ತಮ ಓದುಗ ಮಾತ್ರವಲ್ಲ ಕೇಳುಗ ಕೂಡ.ನನ್ನದೊಂದು ಪುಸ್ತಕಕ್ಕೆ ಆಶಯ ನುಡಿ ಬರೆದು ಕೊಟ್ಟು ಇತ್ತೀಚಿನ ಸಂದರ್ಭದಲ್ಲಿ ನನಗೆ ಬಂದ ಒಂದು ಪ್ರಶಸ್ತಿಯನ್ನು ಓದಿ ತಿಳಿದು ಪತ್ರ ಮುಖೇನ ಪ್ರತಿಕ್ರಿಯಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದ! ಬಹುಶಹ ಈ ಬಗೆಯ ಪತ್ರ ಸಂಸ್ಕೃತಿ ಇತ್ತೀಚಿನ ದಿನಗಳಲ್ಲಿ ಮರೆಯಾಗಿ ಹೋದರೂ ದಿವಂಗತ ಆರ್ ವಿ ಭಂಡಾರಿ, ದಿವಂಗತ ವಿಡಂಬಾರಿ ಇವರ ಒಡನಾಟದಲ್ಲಿ ಬಿ ವಿ ಭಂಡಾರಿಯವರು ಇದನ್ನು ತಮ್ಮ ಕೊನೆಯ ದಿನಗಳವರೆಗೂ ಉಳಿಸಿಕೊಂಡಿದ್ದರು. ಒಮ್ಮೆ ಮನೆಗೆ ಬರ್ತೆ ಅಂತ ಯಾವಾಗಲೂ ಹೇಳುತ್ತಿದ್ದರೂ ಆರೋಗ್ಯದ ಏರುಪೇರು, ಒಬ್ಬನೇ ಓಡಾಡಲಾಗದ ವಯಸ್ಸಿನ ಸಮಸ್ಯೆಯಿಂದಾಗಿ ಬಂದಿರಲಿಲ್ಲ ಆದರೆ ಈಗ್ಗೆ ನಾಲ್ಕು ವರ್ಷಗಳ ಕೆಳಗೆ ನಾವು ಮನೆಯಲ್ಲಿ ಆಯೋಜಿಸಿದ್ದ ದಶಮಾನೋತ್ಸವ ಕಾರ್ಯಕ್ರಮಕ್ಕೆ ಮಗ ಮಹೇಶನೊಂದಿಗೆ ಬಂದು ಜಯಂತ್ ಕಾಯ್ಕಿಣಿ ಅವರ ಅಪರೂಪದ ಮಾತು, ನನ್ನ ಮಗನ ಗಾಯನ ಕೇಳಿ ತುಂಬಾ ಹರ್ಷ ವ್ಯಕ್ತಪಡಿಸಿದ್ದ ; ಇಡೀ ಕಾರ್ಯಕ್ರಮವನ್ನು ಮುಂದಿನ ಸಾಲಿನಲ್ಲಿ ಕುಳಿತು ಆಸ್ವಾದಿಸಿದ್ದ.

ಮುತ್ತಿನಂತಹ ಅಕ್ಷರಗಳು,

ಶಿಸ್ತುಬದ್ಧ ಜೀವನ, ಹೆಂಡತಿ ಸರಸಳೊಂದಿಗಿನ ಸರಸ ಸಲ್ಲಾಪದ ಹಾಸ್ಯ ಭರಿತ ಮಾತುಗಳು, ಸೊಸೆ ಮಕ್ಕಳ ಜೊತೆಯಲ್ಲಿ ತುಂಬಾ ಅನ್ಯೂನ್ಯ ಸಂಬಂಧವನ್ನು ಇರಿಸಿಕೊಂಡಿದ್ದ ಬಾಬಪ್ಪಚ್ಚಿ ನುಡಿದಂತೆ ನಡೆದ ಮನುಷ್ಯ. ಅವರ ಮನೆ ಅದೊಂದು ಚಿಂತಕರ ಚಾವಡಿ. ಕೆರೆಕೋಣ, ಸುತ್ತಮುತ್ತಲಿನ ಎಲ್ಲ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತಪ್ಪದೇ ಹಾಜರಿ ಹಾಕುತ್ತಿದ್ದವ. ಮಕ್ಕಳ ಶಿಬಿರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ತಾನೂ ಅವರಲ್ಲಿ ಒಂದಾಗಿ ಬೆರೆಯುತ್ತಿದ್ದವ. ಇಂತಹ ಬಾಬಪಚ್ಚಿ ದಿನಕರರ ಜನ್ಮದಿನದಂದು ಅವರ ಆಶಯದಂತೆ ,ತನ್ನ ಇಚ್ಛೆಯಂತೆ ಸಾವಿನಲ್ಲಿಯೂ ಸಾರ್ಥಕತೆ ಮೆರೆದು ದೇಹ ದಾನ ಮಾಡಿದವ. ಸೆಪ್ಟೆಂಬರ್ ೧೦ರಂದು ಮುಂಜಾನೆ ಆಶ್ರಯ ಫೌಂಡೇಶನ್ ನ ರಾಜೀವ್ ಗಾಂವಕರ್ ಅವರು ಅವರ ಇಡೀ ಕುಟುಂಬದ ಸಮ್ಮತಿಯೊಂದಿಗೆ ದೇಹ ಸ್ವೀಕರಿಸುವುದರೊಂದಿಗೆ ನೆರೆದ ನೂರಾರು ಜನರಲ್ಲಿ ದೇಹ ದಾನದ ಅರಿವು ಮೂಡಿಸುವ ಬೆಳಕು ಹಚ್ಚಿದರು.

ಬಾಬಪಚ್ಚಿ ಓರ್ವ ಬಹುಮುಖ ಪ್ರತಿಭೆಯ ಶಿಕ್ಷಕ ,ಸಾಮಾಜಿಕ ಕಳಕಳಿ, ವೈಚಾರಿಕ ,ವೈಜ್ಞಾನಿಕ ಚಿಂತನೆಗಳನ್ನು ಅಳವಡಿಸಿಕೊಂಡ ಚಿಂತಕ, ಬಲು ಶಿಸ್ತಿನ ಮನುಷ್ಯ, ಹಿತಮಿತ ಮಾತುಗಾರ ,ನಯ ನಾಜಕಿನ ಸಂಗೀತಾಸಕ್ತ, ಮೃದಂಗ , ತಬಲಾ ವಾದಕ, ಮೂರ್ತಿ ಶಿಲ್ಪಿ ಅವರ ಕೈ ಚಳಕದಲ್ಲಿ ಮೂಡಿ ಬಂದ ತರ ತರದ ಗಣಪತಿ ಮೂರ್ತಿಗಳು, ದಿವಂಗತ ಅರ್ ವಿ ಭಂಡಾರಿ ಅವರ ಮೂರ್ತಿಯಂತೂ ಕಡೆದಿಟ್ಟ ಶಿಲ್ಪದಂತಿದೆ. ತಮ್ಮ ಇಳಿ ವಯಸ್ಸಿನವರೆಗೂ ಈ ಎಲ್ಲ ತಮ್ಮ ರೂಢಿಗಳನ್ನು ರೂಢಿಸಿಕೊಂಡು ಬಂದು ಎಲ್ಲರೊಳಗೆ ಒಂದಾಗಿ ಬೆರೆಯುತ್ತಿದ್ದ ಬಾಬಪ್ಪಚ್ಚಿ ಅಗಲಿಕೆ ಇಡೀ ಸಾಹಿತ್ಯ ವಲಯ, ಕಲಾವಿದರಿಗೆ ತುಂಬ ನೋವುಂಟು ಮಾಡಿದೆ. ಯಾರಲ್ಲಿಯೇ ಉತ್ತಮವಾದದನ್ನು ಕಂಡರೂ ಮುಕ್ತವಾಗಿ ಮೆಚ್ಚಿ ಬೆನ್ನು ತಟ್ಟಿ ಪ್ರೋತ್ಸಾಹಿಸುತ್ತಿದ್ದ ಅಜಾತಶತ್ರು. ಈ ಎಲ್ಲಾ ಗುಣಗಳು ಪತ್ನಿ ಚೆಚ್ಚಕ್ಕ, ಮಕ್ಕಳಾದ ಸಾಮಾಜಿಕ ಹೋರಾಟಗಾರ ಮಹೇಶ್, ಕಲಾವಿದ ಹರೀಶಣ್ಣ, ಉನ್ನತ ಅಧಿಕಾರಿಯಾಗಿರುವ ರಮೇಶಣ್ಣ, ಸೊಸೆಯಂದಿರಲ್ಲೂ ಹರಿದು ಬಂದಿದೆ. ತಮ್ಮ ಎಲ್ಲಾ ಮಕ್ಕಳಿಗೂ ವಿದ್ಯೆಯ ಜೊತೆಗೆ ವಿನಯ , ಸಾಮಾಜಿಕ ಕಳಕಳಿ , ಉತ್ತಮ ಸಂಸ್ಕಾರವನ್ನು ಧಾರೆ ಎರೆದ ಬಾಬಪ್ಪಚ್ಚಿಗೆ( ದಿ.ಬಿ ವಿ ಭಂಡಾರಿ ಮಾಸ್ತರರು) ನನ್ನ ಭಾವಪೂರ್ಣ ವಿದಾಯದ ನಮನಗಳು..ಅವನ ನೆನಪುಗಳೊಂದಿಗೆ ಹೃದಯವೂ ಭಾರವಾಗುತ್ತದೆ...

.

ಸುಧಾ ಹಡಿನಬಾಳ




ಶಿಕ್ಷಕ ವೃತ್ತಿಯ ಜೊತೆಗೆ ಸಂಗೀತ, ಕರಕುಶಲ ಕಲೆ ಬರವಣಿಗೆಯ ಹವ್ಯಾಸವನ್ನು ರೂಢಿಸಿಕೊಂಡ ಸುಧಾ ತಮ್ಮ ಮಗನಿಗೆ ಸಂಗೀತದ ಮೊದಲ ಅಕ್ಷರಾಭ್ಯಾಸ ಮಾಡಿಸಿದವರು. ತಾವೆ ತಯಾರಿಸಿದ ಕಲಾತ್ಮಕ ಮಾದರಿಗಳಿಂದ ತಮ್ಮ ಮನೆಯನ್ನು ಅಲಂಕರಿಸಿಕೊಂಡಿರುವುದಲ್ಲದೆ ಅದನ್ನು ಮಕ್ಕಳಿಗೂ ಧಾರೆ ಎರೆದಿದ್ದಾರೆ.ಬರಹಗಾರರಾಗಿ ಸಂಜೀವಿನಿ, ಚಿಣ್ಣರ ಧ್ವನಿ, ಜೀವನ ಶಿಕ್ಷಣ, ಕರಾವಳಿ ಮುಂಜಾವು, ಪ್ರೊಪಿಟ್ ಪ್ಲಸ್ ಪತ್ರಿಕೆಗಳಲ್ಲಿ ಲೇಖನಗಳನ್ನು ಬರೆದಿದ್ದಾರೆ. ನಾಗರಿಕ, ಸಂಪ್ರಭಾ ಪತ್ರಿಕೆಗಳಲ್ಲಿ ವೈಚಾರಿಕ ಅಂಕಣಬರಹಗಳನ್ನು ಬರೆಯುತ್ತಿದ್ದು ಸುಮಾರು ಮುನ್ನೂರಕ್ಕೂ ಅಧಿಕ ಲೇಖನಗಳು ಇದುವರೆಗೂ ಪ್ರಕಟವಾಗಿವೆ. ಇವರು

' ೧ ಮೊಗ್ಗು ಅರಳುವ ಮುನ್ನ' ( ಲೇಖನ ಸಂಕಲನ)

೨ ನಮ್ಮ ನಿಮ್ಮ ನಡುವೆ ನಿಂತು'( ವೈಚಾರಿಕ ಬರಹ ಸಂಗ್ರಹ)

೩ ಮನಸ್ಸೆಂಬ ಮಾಯೆಯೊಳಗಿನ ಸ್ವಗತ( ಅಂಕಣ ಬರೆಹ ಸಂಗ್ರಹ),

೪ ಅಮ್ಮ,( ಮಕ್ಕಳ ಕಾದಂಬರಿ)

೫ ಸಹನೆಯ ತೇರು(ಕಥಾ ಸಂಕಲನ)

೬ ಸುಮ್ನೆ ನಕ್ ಬಿಡಿ ( ಲಲಿತ ಪ್ರಬಂಧ ಸಂಕಲನ)

ಕೃತಿಗಳನ್ನು ಪ್ರಕಟಿಸಿದ್ದಾರೆ.

ಇವರ ಮೊದಲ ಕೃತಿಗೆ ' ಆಜೂರ್ ಪುಸ್ತಕ ಪ್ರತಿಷ್ಠಾನ' ದ ರಾಜ್ಯ ಪ್ರಶಸ್ತಿ, ಮೂರನೆ ಕೃತಿಗೆ ' ವಿಶ್ವೇಶ್ವರಯ್ಯ ರಾಷ್ಟ್ರೀಯ ಪುಸ್ತಕ ಬಹುಮಾನ', ಕೆಜೆವಿಎಸ್ ಬೆಂಗಳೂರು ಇದರಿಂದ ' ಅತ್ಯುತ್ತಮ ಶಿಕ್ಷಣ ಶಿಲ್ಪಿ' ಪ್ರಶಸ್ತಿ, ರಾಜ್ಯ ಬರಹಗಾರರ ಬಳಗದಿಂದ' ಸಾಹಿತ್ಯ ಸಿಂಧೂ' ಪ್ರಶಸ್ತಿ, ಹೊನ್ನಾವರ ರೋಟರಿ ಕ್ಲಬ್ ನಿಂದ ' ನೇಷನ್ ಬಿಲ್ಡರ್' ಪ್ರಶಸ್ತಿ ಲಭಿಸಿರುತ್ತದೆ.

ಉತ್ತಮ ಸಂಘಟಕರೂ ಆಗಿರುವ ಸುಧಾ ರವರು ಹೊನ್ನಾವರ ತಾಲ್ಲೂಕು ಕಸಾಪದ ಮಹಿಳಾ ಪ್ರತಿನಿಧಿಯಾಗಿದ್ದರು; ಉತ್ತಮ ವಾಗ್ಮಿಯೂ ಆಗಿರುವ ಇವರು ಶಿಕ್ಷಕರಿಗಾಗಿ ಏರ್ಪಡಿಸುವ ಆಶುಭಾಷಣ ಸ್ಪರ್ಧೆಯಲ್ಲಿ ಹಲವು ಬಾರಿ ತಾಲೂಕು, ಜಿಲ್ಲಾ ಮಟ್ಟದಲ್ಲಿ. ವಿಜೇತರಾಗಿದ್ದಾರೆ.ಅನೇಕ ಕಾರ್ಯಕ್ರಮಗಳಲ್ಲಿ ಉಪನ್ಯಾಸಕರಾಗಿ ,ಸಂಪನ್ಮೂಲ ವ್ಯಕ್ತಿ ಆಗಿ ಪಾಲ್ಗೊಂಡಿದ್ದಾರೆ. ಇವರು ಚುಟುಕು ರಚನೆಯಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರಥಮ ಸ್ಥಾನ, ವಾಟ್ಸಪ್ ಕಥಾ ಸ್ಪರ್ಧೆಯಲ್ಲಿ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ, ಕಸಾಪ ಏರ್ಪಡಿಸಿದ್ದ ಕಥಾ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ. ತಮ್ಮ ಮನೆಯಂಗಳದಲ್ಲಿ ಸಂಗೀತ- ಸಾಹಿತ್ಯದ ಅಪರೂಪದ ಕಾರ್ಯಕ್ರಮಗಳನ್ನು ಸಂಘಟಿಸಿದ್ದಾರೆ. ಕಳೆದೆರಡು ವರ್ಷಗಳ ಹಿಂದೆ ತಮ್ಮ ಮನೆ' ಸದಾಸುಖಿ' ಯ ದಶಮಾನೋತ್ಸವ ಸಂಭ್ರಮವನ್ನು ಜಯಂತ್ ಕಾಯ್ಕಿಣಿ ಮತ್ತು ಕೀರ್ತನ್ ಹೊಳ್ಳ ಇವರನ್ನು ವಿಶೇಷ ಆಹ್ವಾನಿತರಾಗಿ ಆಮಂತ್ರಿಸಿ ' ಗುರುವಂದನೆ- ಗಾನ- ಸಮ್ಮಾನ' ಎಂಬ ಅರ್ಥಪೂರ್ಣ ಕಾರ್ಯಕ್ರಮ ಆಯೋಜಿಸಿ ಜನಮನ ಗೆದ್ದಿದ್ದಾರೆ. ಇವೆಲ್ಲದಕ್ಕೂ ಬೆಂಗಾವಲಾಗಿ ನಿಂತು ಪ್ರೋತ್ಸಾಹಿಸುವ ಬಾಳ ಸಂಗಾತಿ ಗಣೇಶ ಮಗ ಸುಮಿತ್ ನ ಜೊತೆಗೆ ಸಂತೃಪ್ತ ಜೀವನ ನಡೆಸುವ ಸುಧಾ ಅವರು ಜನ ಸಾಮಾನ್ಯರ ಲೇಖಕಿ, ಜೀವನ್ಮುಖಿ ಬರಹಗಾರ್ತಿ ಎಂಬುದರಲ್ಲಿ ಎರಡು ಮಾತಿಲ್ಲ. ಬಿ.ವಿ. ಭಂಡಾರಿ ಅವರ ಬಗ್ಗೆ ಸುಧಾ ಅವರ ಆಪ್ತವಾದ ಬರವಣಿಗೆ ನಿಮ್ಮ ಓದಿಗಾಗಿ. ಸಂಪಾದಕ ಆಲೋಚನೆ.ಕಾಂ

236 views0 comments
bottom of page