top of page

ಶ್ರಾಧ್ಧ [ಕತೆ]

Updated: Aug 24, 2020

ನಾಗವೇಣಿಗೆ ಬೆಳಿಗ್ಗೆಯಿಂದಲೂ ತಳಮಳವೇ. ಕುಳಿತರೆ ಕುಳಿತ ಹಾಗಿಲ್ಲ; ನಿಂತರೆ ನಿಂತ ಹಾಗಿಲ್ಲಾ. ಗಂಡ ಸದಾಶಿವನ ಜೊತೆ ಈ ವರ್ಷ ಮಾವನವರ ಶ್ರಾಧ್ಧಕ್ಕೆ ತಾನು ಊರಿಗೆ ಹೋಗಲೇಬೇಕು ಎಂದು ಆಕೆ ನಿರ್ಧಾರ ಮಾಡಿದಾಗಿನಿಂದಲೂ ಅವಳಿಗೆ ಒಂದು ರೀತಿಯ ಅವ್ಯಕ್ತ ಆತಂಕ ಮನದಾಳದಲ್ಲಿ ಆಗೀಗ ಇಣುಕಿ ಹಾಕಿ ಕಾಡುತ್ತಿತ್ತು .

ಕಳೆದ ನಾಲ್ಕು ವರ್ಷದಿಂದಲೂ ಮಾವನವರ ಶ್ರಾಧ್ದಕ್ಕೆ ಊರಿಗೆ ಹೋಗಲು ಅವಳಿಗೆ ಆಗಿರಲಿಲ್ಲಾ. ಮನೆಯ ಹಿರೀ ಸೊಸೆಯಾಗಿ ಅವಳು ಹಿಂದೆಂದೂ ಇಂಥಾ ಜವಾಬ್ದಾರಿಯಿಂದ ತಪ್ಪಿಸಿಕೊಂಡವಳಲ್ಲಾ . ಆದರೆ ಈಗ ಅವಳಿಗೆ ಮಗಳು ದೀಪಾಳ ಸಮಸ್ಯೆಯ ಮುಂದೆ ಊರು, ಕೇರಿ, ಮನೆ, ಶ್ರಾಧ್ಧ ಎಲ್ಲವೂ ಅಸ್ಪಷ್ಟ, ಅಯೋಮಯ.

ಆದರೆ ಇದನ್ನೆಲ್ಲಾ ಯಾರಿಗೆ ಹೇಳುವುದು? ಹೇಳಿದ್ರೂ ಅದು ಯಾರಿಗೂ ಅರ್ಥವಾಗೋದಲ್ಲಾ ಅನ್ನೋದೂ ಅವಳಿಗೆ ಗೊತ್ತು. ಸದಾಶಿವನ ಬೆನ್ನಿಗೆ ಬಂದ, ಅವನ ನಾಲ್ಕು ತಂಗಿಯರೂ ನಾಗವೇಣಿಯ ಬೆನ್ನು ಹಿಡದರು ಅಂದ್ರೆ, ನಾಗವೇಣಿಗೆ ಸಾಕೋ ಸಾಕು ಮಾಡ್ಸಿಯೇ ಬಿಡೋ ಸ್ವಭಾವ ಅವರದ್ದು. ಹೀಗಿದ್ದಾಗ ಈ ವರ್ಷ ತಾನು ಮಾವನವರ ಶ್ರಾಧ್ಧಕ್ಕೆ ಊರಿಗೆ ಹೋದ್ರೆ ತನ್ನ ಅತ್ತಿಗೆಯರಿಂದ, ತನಗೆ ಇನ್ನು ಎಂತೆಂತ ಮಾತು ಕೇಳಬೇಕಾಗುತ್ತೋ ಎಂದೆನಿಸಿ ಅವಳಲ್ಲಿ ಆತಂಕ ಮನೆ ಮಾಡಿತ್ತು .

ಸದಾಶಿವ ಮನೆಯ ಹಿರೀ ಮಗ. ಕೊನೆಯ ಮಗ ಮಂಜು ಗಿಂತಲೂ ಸದಾಶಿವ ಬಹಳ ಬುಧ್ಧಿವಂತ. ತಂದೆ ಶಿವರಾಮ ಹೆಗಡೆಯವರಿಗೆ, ಮಗನ ಬುದ್ಧಿವಂತಿಕೆಯ ಬಗ್ಗೆ ಎಲ್ಲಿಲ್ಲದ ಹೆಗ್ಗಳಿಕೆ. ಅದಕ್ಕೆ ಮಗ ಸದಾಶಿವ ಎಷ್ಟು ಓದ್ತೆ ಹೇಳಿದ್ನೋ ಅಷ್ಟು ಅವನನ್ನು ಶಿವರಾಮ ಹೆಗಡೆ ಓದಿಸಿದರು. ಸದಾಶಿವನೂ ಚೆನ್ನಾಗಿ ಓದಿ ಬ್ಯಾಂಕಿನಲ್ಲಿ ಒಳ್ಳೆ ಕೆಲಸಕ್ಕೂ ಸೇರಿಕೊಂಡ. ಪ್ರಮೋಷನ್ ಮೇಲೆ ಪ್ರಮೋಷನ್ ಬಂದು ಮಗ ಸೊಸೆ ಮನೆ ಬಿಟ್ಟು ಶಹರಕ್ಕೆ ಹೊರಟು ನಿಂತಾಗ ನಾಗವೇಣಿ ಅತ್ತೆ ಶೇಷ ಹೆಗ್ಗಡತಿ, ಬೇಡ ಈಗ ಈ ಸೊಸೆ ಮನೆ ಬಿಟ್ಟು ದೂರ ಹೋದ್ರೆ ಆ ಕಿರೀ ಸೊಸೆ ಜೊತೆ ತನ್ನ ಹತ್ತಿರ ಇಷ್ಟು ದೊಡ್ಡ ಮನೆ ನಿಭಾಯಿಸಲು ಸಾಧ್ಯವೇ ಇಲ್ಲ, ಶಹರಕ್ಕೆ ಹೋಗುವುದಾದರೆ ಸದಾಶಿನೊಬ್ಬನೇ ಹೋಗಲಿ ಸೊಸೆ ನಾಗವೇಣಿ ಮನೆಯಲ್ಲೇ ಇರಲಿ, ಎಂದು ಪಟ್ಟು ಹಿಡಿದಾಗ ನಾಗವೇಣಿಯ ಮಾವ ಶಿವರಾಮ ಹೆಗಡೆ, ತನ್ನ ಸೊಸೆ ಮಗನ ಜೊತೆ ಶಹರಕ್ಕೆ ಹೋಗೋದೇ ಸರಿ ಹೇಳಿ ತೀರ್ಮಾನ ಕೊಟ್ಟುಬಿಟ್ಟಿದ್ದ . ಹೀಗಾಗಿ ತಾನು ಇಷ್ಟು ದೊಡ್ಡ ನಗರಕ್ಕೆ ಬಂದು, ಮಗಳು ದೀಪಾಗೆ ಚೆನ್ನಾಗಿ ಓದಿಸಲಿಕ್ಕೆ ಸಾಧ್ಯವಾಗಿದ್ದು ಎಂಬ ಕಾರಣಕ್ಕೆ ಅವಳಿಗೆ ಮಾವ ಶಿವರಾಮ ಹೆಗಡೆಯವರ ಮೇಲೆ ಎಲ್ಲಿಲ್ಲದ ಗೌರವ.

ಆದ್ರೆ ನಾಗವೇಣಿಗೆ ಮನದ ಮೂಲೆಯಲ್ಲೆಲ್ಲೋ ಈಗ ನಾಲ್ಕು ವರ್ಷ ದಿಂದಲೂ ತನ್ನ ಪ್ರೀತಿಯ ಮಾವನವರ ಶ್ರಾಧ್ಧಕ್ಕೂ ಹೋಗಲಿಕ್ಕೆ ಸಾದ್ಯವಾಗಿಲ್ಲವಲ್ಲ ಅನ್ನೋ ಕೊರಗು ಕಾಡುತ್ತಿತ್ತು . ಇದಕೆಲ್ಲ ಮಗಳು ದೀಪಾ ಮೆಡಿಕಲ್ ಕೊನೆಯ ವರ್ಷದಲ್ಲಿ ಇದ್ದಾಗ ನಡೆದ ಆ ಘಟನೆ ಎಂಬುದನ್ನು ನೆನೆದಾಗಲಂತೂ ಕಣ್ಣು ಅವಳಿಗೆ ಅರಿವಿಲ್ಲದಂತೆ ದ್ರವಿಸತೊಡಗಿತು.


ದೀಪಾ ಮೆಡಿಕಲ್ ಅಂತಿಮ ವರ್ಷದಲ್ಲಿದ್ದಾಗ ಮುಂದಿನ ಎಂಟು ದಿನಕ್ಕೇ ಅವಳ ಕೊನೆಯ ವರ್ಷದ ಎಕ್ಸಾಮು. ಆ ಕಡೆ ಗಂಡಿನ ಕಡೆಯವರಿಗೆ ಹುಡುಗಿಯ ನೋಡಲೂ ಅವಸರ. ನೋಡಿದ ತಕ್ಷಣ ಹುಡುಗಿಯ ಒಪ್ಪಿಗೆ ತಿಳಿಸಲೂ ಅವಸರವೇ. ಅದು ಯಾವ ಮಾಯೇಯಲ್ಲೋ, ಬರೇ ಕಾಲೇಜು. ಎಕ್ಸಾಮು ಎಂದು ಓಡಾಡಿಕೊಂಡಿರುವ ದೀಪಾಳ ಹತ್ತಿರವೂ ಮದುವೆಗೆ ಹೂಂ ಎಂದು ಹೇಳಿಸಿ, ಎಂಟು ದಿನದೊಳಗೇ ದೀಪಾಳ ಮದುವೆ ಮುಗಿದು ಹೋಗಿತ್ತು. ಆಮೇಲೆ ಶುರುವಾಗಿದ್ದೇ ಬೇರೆ ಕತೆ. ದೀಪಾಳನ್ನು ತಮ್ಮ ಸೊಸೆಯನ್ನಾಗಿ ಮಾಡಿಕೊಂಡ ರಾವ್ ಕುಟುಂಬ ನಿಜವಾಗಿಯೂ ಒಳ್ಳೆಯ ಕುಟಂಬವೇ. ತಂದೆ ತಾಯಿ, ಮೂರು ಮಕ್ಕಳು, ಎಲ್ಲರೂ ಡಾಕ್ಟ್ರೇ. ಅದಕ್ಕೇ ತಮಗೆ ಸೊಸೆಯಾಗಿ ಬರುವವಳೂ ಡಾಕ್ಟ್ರೇ ಆಗಿರಲಿ ಅನ್ನೋ ಅಭಿಪ್ರಾಯದಿಂದ ಅವರು ದೀಪಾಳನ್ನ ಸೊಸೆಯಾಗಿ ಮಾಡಿಕೊಂಡಿದ್ದು. ಆದರೆ ಆ ಡಾಕ್ಟರ್ ಮನೆಯ ರೂಲ್ಸು, ರೆಗ್ಯುಲೆಶನ್ಸ್, ಅತೀ ಶಿಸ್ತು, ಅತೀ ಸ್ವಚ್ಚತೆ ಇವೆಲ್ಲಾ ದೀಪಾಳಿಗೆ ಸಾಕು ಸಾಕಾಗಿ ಹೋಗಿತ್ತು. ಆ ಮನೆಯ ಚಾಕರಿಯಲ್ಲೇ ಮುಳುಗಿದ ಅವಳಿಗೆ ತಾನೂ ಮೆಡಿಕಲ್ ಓದಿದ್ದೇ ಅನ್ನೋದೇ ಮರೆತು ಹೋಗುವ ಹಾಗೆ ಆಗಿತ್ತು. ಅದೂ ಅಲ್ಲದೇ ತಮಗೆ ವಯಸ್ಸು ಆಗಿ ಹೋಯಿತು, ಮೊಮ್ಮಗುವನ್ನು ನೋಡಲೇಬೇಕೆಂಬ ಅತ್ತೆ-ಮಾವರ ವರಾತದಿಂದ ದೀಪಾ ಮದುವೆ ಆಗಿ ವರ್ಷದೊಳಗೇ ಮಗು ಹೆತ್ತಿದ್ದೂ ದೀಪಾಳಿಗೆ ಒಂದು ರೀತಿಯ ನುಂಗಲಾರದ ತುತ್ತೇ ಆಗಿತ್ತು. ಒಂದಾದ ಮೇಲೊಂದರಂತೆ ಬಂದೆರಗಿದ ಈ ಎಲ್ಲಾ ಘಟನೆಗಳಿಂದ ದೀಪಾ ಮಾನಸಿಕವಾಗಿ ತುಂಬಾ ಬಳಲಿ ಹೋಗಿದ್ದಳು. ಸಂಸಾರ ಸಮುದ್ರಕ್ಕೆ ತಳ್ಳಿದ ತಂದೆ-ತಾಯಿಗಳ ಮೇಲೆ ಅಸಮಾಧಾನಗೊಂಡಿದ್ದಳು. ಮಗಳ ಈ ಎಲ್ಲಾ ಸಂಕಟವೂ ನಾಗವೇಣಿಯ ಎದೆಯ ಮೇಲೇ ಬಂದು ಕುಳಿತು ಕೊಂಡಂತಾಗಿ ನಾಗವೇಣಿಗೆ ಊರು, ಕೇರಿ, ಮನೆ, ಮಾವನವರ ಶ್ರಾಧ್ಧ ಎಲ್ಲ ಮರೆತೇ ಹೋದಂತಾಗಿತ್ತು. ಹೀಗಿರುವಾಗ ಈ ತಾಪಾತ್ರಯದಿಂದ ಬಿಡಿಸಿಕೊಂಡು ತಾನು ಹೇಗೆ ಮಾವನವರ ಶ್ರಾಧ್ಧಕ್ಕೆ ಹೋಗಲು ಸಾಧ್ಯ ಅಂತ ಅವಳಿಗೆ ಅನಿಸಿತು. ಇದೆಲ್ಲಾ ತನ್ನ ಅತ್ತಿಗೆಯರಿಗೆ, ಅತ್ತೆಗೆ ಅರ್ಥ ಮಾಡಿಸುವದಾದರೂ ಹೇಗೆ? ಎಂಬ ಆತಂಕ ಕಾಡುತ್ತಿತ್ತು .

ಅದು ಏನೇ ಆಗ್ಲಿ ಈ ಸಾರೆ ತಾನು ಮಾವನವರ ಶ್ರಾಧ್ಧಕ್ಕೆ ಹೋಗಿಯೇ ತೀರೋದು ಅಂತ ತೀರ್ಮಾನ ಮಾಡಿ ಮಾಡಿದ್ದಳು. ಮೊದಲಾಗಿದ್ರೆ ತಾನು ಶ್ರಾಧ್ಧಕ್ಕೆ ಬರುತ್ತೇನೆಂಬ ಖಾತ್ರಿಯಿಂದ ತನ್ನ ಅತ್ತಿಗೆಯರಲ್ಲಿ ಯಾರಾದ್ರೂ ಒಬ್ಬರು ಶ್ರಾಧ್ಧದಲ್ಲಿ ತನಗೆ ಬೇಕಾಗೋ ಮಡಿಸೀರೆಯನ್ನ ತೊಳ್ದು ವಣಗಲು ಹಾಕಿರ್ತಿದ್ರು. ಆದ್ರೆ ಈ ಸಾರೆ ಅವರಿಗೆಲ್ಲಾ ತನ್ನ ಮೇಲೆ ಅಸಮಾಧಾನ ಇರೋದ್ರಿಂದ ತಾನು ಇಲ್ಲಿಂದಲೇ ಮಡಿಸೀರೆ ತಗಂಡು ಹೊಗಬೇಕು ಎಂದು ನಾಗವೇಣಿ ತನ್ನ ಒಂದು ಮಡಿಸೀರೆನೂ ಬ್ಯಾಗ್ನಲ್ಲಿ ಹಾಕಿಕೊಂಡಳು. ಹಿಂದಿನ ದಿನವೇ ತಂದಿಟ್ಟ, ತನ್ನ ಮಾವನವರಿಗೆ ಇಷ್ಟವಾದ ಒಂದಿಷ್ಟು ಬೆಂಡೆಕಾಯಿ, ಹಾಗಲಕಾಯಿಯನೆಲ್ಲಾ ತನ್ನ ಬ್ಯಾಗನಲ್ಲಿ ಪ್ಯಾಕ್ ಮಾಡಿಕೊಂಡ ನಾಗವೇಣಿ, ಗಂಡ ಸದಾಶಿವನ ಜೊತೆ ಮಾವನವರ ಶ್ರಾದ್ಧಕ್ಕೆ ಹೊರಟೇ ಬಿಟ್ಟಳು .

ಹಿಂದೆಲ್ಲ ಅವಳಿಗೆ ರೇಲ್ವೆ ಪಯಣ ಖುಷಿ ನಿಡುತ್ತಿತ್ತು. ಆದ್ರೆ ಇವತ್ತು ಊರಿಗೆ ಹೋದ ಮೇಲೆ ತನ್ನ ಅತ್ತಿಗೆಯರಿಂದ ಬರೋ ಮಾತುಗಳನ್ನೆಲ್ಲಾ ಹೇಗೆ ಎದ್ರುಸೋದು ಎಂಬ ವಿಚಾರ ಅವಳಿಗೆ ತಲೆ ಬಿಸಿ ತಂದಿತು. ಅದನ್ನ ಗಂಡ ಸದಾಶಿವನ ಹತ್ತಿರವೂ ಹೇಳಿ ನೋಡಿದಳು. ಆದ್ರೆ ಸದಾಶಿವ ಅದಕೆಲ್ಲಾ ತಲೆಕೆಡಿಸಿ ಕೊಳ್ಳುವವನೇ ಅಲ್ಲಾ. ನಾಗವೇಣಿಗೇ ಅನಿಸಿತು. ತಾನು ಹೇಗೂ ಮನೆಗೆ ಹೋದಮೇಲೆ ಅತ್ತಿಗೆಯರನ್ನು ಎದುರಿಸೋದು ಇದ್ದದ್ದೇ, ಅವಾಗ ನೋಡಿಕೊಂಡರೆ ಆಯ್ತು ಅನ್ನೋ ಒಂದು ಸಣ್ಣ ಸಮಾಧಾನದಿಂದ ಅವಳು ತನ್ನ ಕಣ್ಣನ್ನ ಬಿಗಿಯಾಗಿ ಮುಚ್ಚಿಕೊಂಡು

ರೈಲಿನಲ್ಲಿ ಕುಳಿತಳು .

ಕಣ್ಣ ಮುಚ್ಚಿಕೊಂಡು ಕುಳಿತರೂ ನಾಗವೇಣಿಗೆ ಈಗ ನಾಳಿನ ಶ್ರಾಧ್ಧದ್ದ ತಯಾರಿ ಯೋಚನೆ ಹುಟ್ಟಿಕೊಂಡಿತು. ಶ್ರಾಧ್ಧಕ್ಕೆ ಪ್ರತಿ ವರ್ಷಕ್ಕಿಂತ ಈ ವರ್ಷ ಜಾಸ್ತಿನೇ ಜನ ಆಗೋದು. ಯಾಕೆಂದರೆ ಈ ಸಾರೆ ಇನ್ನೂ ಮಳೆ ಅಷ್ಟು ಜೋರಾಗಿ ಶುರು ಆಗಿಲ್ಲಾ. ಪ್ರತಿ ವರ್ಷದ ಹಾಗೆ ಈ ವರ್ಷ ಹಲಸಿನ ಹಣ್ಣಿನ ಕಡುಬು ಮಾಡಿಕೊಂಡರೆ ಹೇಗಾಗುತ್ತೋ ಏನೋ. ಬೆಳಿಗ್ಗೆ ಎಷ್ಟು ಬೇಗ ಎದ್ರೂ ಅದು ತಡವೇ ......ಜಾನಕಿಯಂತೂ ತಾನು ಕಿರೀ ಸೊಸೆ ಅಂತ ಮನೆಗೆ ಬಂದಾಗಿನಿಂದಲೂ ಏನನ್ನೂ ತಾಗಿಸಿ ಕೊಂಡವಳೇ ಅಲ್ಲಾ. ಅತ್ತೆಗಂತೂ ಈಗೀಗ ಕಾಲು ನೋವೇ ಜಾಸ್ತಿ. ಇನ್ನು ಅತ್ತಿಗೆಯ ರು ಒಬ್ಬಬ್ಬರೂ ಒಂದೊಂದು ಮಾತು ಶುರು ಮಾಡಿ ಬಿಟ್ಟರೆ ಕುಳಿತಲ್ಲಿಂದ ಏಳುವವರೇ ಅಲ್ಲಾ. ಹಾಗಾದ್ರೆ ತನ್ನ ಕಥೆ ಮುಗಿದ ಹಾಗೆಯಾ. ನಾಗವೇಣಿಗೆ ಕುಳಿತಲ್ಲೇ ಬೆವರಲು ಶುರುವಾಯಿತು.

ನಾಗವೇಣಿಯ ಅತ್ತಿಗೆಯರು ಮೊದಲಿನಿಂದಲೂ ಹಾಗೆಯೇ. ಅವರು ಒಬ್ಬೊಬ್ಬರೂ ಒಂದೊಂದು ಮಾತನಾಡಿದರೆ, ನಾಗವೇಣಿಗೆ ಅದು ತನ್ನ ಹೃದಯ ಕೊರೆದುಕೊಂಡು ಒಳಗೆ ಹೋಗುತ್ತೇನೋ ಅನ್ನಿಸುತಿತ್ತು. ಆಗೆಲ್ಲಾ ಅವಳ ಮಾವ ಶಿವರಾಮ ಹೆಗಡೆಯವರೇ ಅವಳ ಸಹಾಯಕ್ಕೆ ಬರೋದಾಗಿತ್ತು. ನಾಗವೇಣಿಗೆ ಮಾವನ ನೆನಪಿಸಿಕೊಂಡು ಕಣ್ಣಲ್ಲಿ ನೀರು ತುಂಬಿತು. ದೇವರಂತಹ ಮನುಷ್ಯ. ಎಲ್ಲರಿಗೂ ಬೇಕು ಬೇಕು ಅನ್ನುವಾಗಲೇ ದೇವರು ಅವರನ್ನು ಕರೆಸಿಕೊಂಡು ಬಿಟ್ಟ. ನಾಗವೇಣಿಗೆ ಮಾವನವರ ನೆನಪು ಹೃದಯ ಹಿಂಡಿದ ಹಾಗಾಯ್ತು. ತಾನು ಮದುವೆಯಾಗಿ ಮನೆಗೆ ಬಂದಾಗಿನಿಂದ ತನಗೆ ಅವರು ತಂದೆಯೇ ಆಗಿದ್ದರು. ಯಾವ ಯಾವುದೋ ಕೆಲಸಕ್ಕೆ ಅತ್ತೆಯಿಂದ ಬೈಸಿಕೊಂಡು ಮೂಲೆಯಲ್ಲಿ ಅಳುತ್ತಾ ನಿಂತಾಗಲೆಲ್ಲಾ ಅವಳನ್ನ ಮಾವನವರೇ ಸಮಾಧಾನ ಮಾಡಿದ್ದು ಅದೆಷ್ಟು ಸಲ? ಆದ್ರೆ ಈಗ ಆತ್ತಿಗೆಯರು ಎಲ್ಲಾ ಸೇರಿ ತನ್ನ ಮೇಲೆ ದೂರಿನ ಮಳೆಗೆರೆದರೆ ಸಹಾಯಕ್ಕೆ ಬರುವವರು ಯಾರು ಎಂದೆಲ್ಲಾ ಅನ್ನಿಸಿ ಎದೆಯಲ್ಲಿ ಒಂದು ತರಹ ವೇದನೆ ಅನ್ನಿಸಿತು ಅವಳಿಗೆ. ತನ್ನ ಅದ್ರಷ್ಟವೇ ಹಾಗಿದ್ದಿರಬಹುದು. ಇಲ್ಲವಾದರೆ ಇಲ್ಲಿ ಇಷ್ಟು ಒಳ್ಳೆ ಮಾವ, ಅಲ್ಲಿ ತನ್ನ ಜೀವಕ್ಕೆ ಜೀವವೇ ಆದ ಅಮ್ಮ, ಹೀಗೆ ತನ್ನ ಬಿಟ್ಟು ಹೊರಟು ಹೊಗೊತ್ತಿದ್ದರೆ? ತನ್ನ ಅಮ್ಮನಾದರು ತನ್ನನ್ನು ಅಷ್ಟು ಬೇಗ ಬಿಟ್ಟು ಹೋಗುತ್ತಾಳೆ ಎಂದು ಅವಳು ಕನಸಿನಲ್ಲೂ ಎಣಿಸಿರಲಿಲ್ಲಾ. ಈ ಇಬ್ಬರನ್ನೂ ಕಳೆದು ಕೊಂಡಿದ್ದು ನಾಗವೇಣಿಗೆ ಭರಿಸಲಾರದಷ್ಟು ದುಖಃವಾಗಿತ್ತು. ಯೋಚಿಸ್ತಾ ಯೋಚಿಸ್ತಾ ಮನೆಗೆ ಬಂದು ತಲುಪಿದ್ದೇ ನಾಗವೇಣಿಗೆ ಗೊತ್ತಾಗಲಿಲ್ಲಾ. ನಾಗವೇಣಿ ಮನೆಗೆ ಬರುವಷ್ಟರಲ್ಲಿ ಏನೋ ಅವಳ ಪುಣ್ಯ. ಅವಳ ಅತ್ತಿಗೆಯರು ಇನ್ನೂ ಮನೆಗೆ ಬಂದಿರಲಿಲ್ಲಾ. ನಾಗವೇಣಿ ಬಂದವಳೇ ಸ್ನಾನ ಮಾಡಿ ಪ್ರಯಾಣದ ಮೈಲಿಗೆಯನ್ನು ತೊಳೆದುಕೊಂಡಳು. ಆ ಮೇಲೆ ಸೊಂಟಕ್ಕೆ ಸೀರೆಯನ್ನ ಸಿಕ್ಕಿಸಿಕೊಂಡು ಮರು ದಿನಕ್ಕೆ ಪೂಜೆಗೆ, ಶ್ರಾಧ್ಧಕ್ಕೆ ಅಡುಗೆಗೆ ಬೇಕಾದ ಎಲ್ಲಾ ತಯಾರಿಯನ್ನೂ

ಮಾಡಿಟ್ಟುಕೊಂಡೇ ಮಲಗಿದಳು.

ನಾಗವೇಣಿಗೆ ಮಲಗಿಕೊಂಡರೂ ನಿದ್ದೆ ಬರಲೇ ಇಲ್ಲಾ. ಆ ಕಡೆ ಈ ಕಡೆ ಹೊರಳಿದರೂ ಮತ್ತೆ ಮತ್ತೆ ಅವಳಿಗೆ ನಾಳೆಯ ಕೆಲಸವೆಲ್ಲಾ ಹೇಗಾಗುತ್ತೋ ಏನೋ ಅನ್ನೋ ಭಯ. ನಾಗವೇಣಿಗೆ ಮನೆಯಲ್ಲಿ ಪ್ರತೀಸಲ ವಿಶೇಷವಾದಾಗಲೂ ಬೆಳಿಗ್ಗೆ ಬೇಗ ಎಚ್ಚರ ವಾಗದಿದ್ರೆ ಅನ್ನೋ ಆತಂಕವೇ. ಮಾವನವರು ಇದ್ದಾಗಾದ್ರೆ ಅವರೇ ನಾಗವೇಣಿಯನ್ನ ಏಳಸ್ತಿದ್ರು. ಆದ್ರೆ ಈಗ? ಅವಳಿಗೆ ನಾಳೆ ಬೇಗ ಎಚ್ಚರ ವಾಗದಿದ್ರೆ ಅನ್ನೋ ಭಯ ಶುರು ವಾಯಿತು. ಅವಳು ಒಂದು ಕ್ಷಣ ಕಣ್ಣು ಮುಚ್ಚಿಕೊಂಡಳು. ಕಣ್ಣುಮುಚ್ಚಿಕೊಂಡರೂ ಅವಳಿಗೆ ನಾಳಿನ ಕೆಲಸವೇ ಕಣ್ಣಮುಂದೆ ಬಂದಿತು. ಆಗ ಅವಳಿಗೆ ಮತ್ತೂ ಭಯವಾಯಿತು ಸ್ವಲ್ಪ ಹೊತ್ತಿನಲ್ಲೇ ಅವಳಿಗನಿಸಿತು. ತಾನು ಹೀಗೆ ಭಯಪಡುವದಕ್ಕಿಂತ ಎದ್ದು ಕೆಲಸ ಶುರು ಮಾಡುವುದೇ ಒಳ್ಳೇಯದು ಅಂತ. ಹಾಗೆ ನಾಗವೇಣಿಗೆ ಅನಿಸಿದ್ದೇ ತಡ, ಅವಳು ಎದ್ದು, ಹಾಸಿಗೆ ಮಡಚಿಟ್ಟು ಆ ಕತ್ತಲೆಯಲ್ಲೇ ಬಚ್ಚಲ ಒಲೆಗೆ ಬೆಂಕಿ ಹಾಕಲು ಹೋದಳು. ಒಲೆಯ ಬೆಂಕಿ ಹೊತ್ತಿ ಉರಿಯುತ್ತಿದ್ದ ಹಾಗೆ ನಾಗವೇಣಿಗೆ ಮೈ ಛಳಿ ಎಲ್ಲಾ ಬಿಟ್ಟು ಅವಳ ಮೈಯಲ್ಲಿ ಏನೋ ಒಂದು ಶಕ್ತಿ ಹೊಕ್ಕ ಹಾಗೆ ಆಯಿತು. ಆ ಉಮೆದಿನಲ್ಲೇ ಅವಳು ಪಟ ಪಟನೇ ಎಲ್ಲ ಕೆಲಸ ಮಾಡಲು ಶುರು ಮಾಡಿದಳು . ನೋಡ್ತಾ ನೋಡ್ತಾ ಇದ್ದ ಹಾಗೆ ಅವಳಿಗೆ ತನಗೆ ಎರಡೇ ಕೈಯಲ್ಲಾ ನಾಲ್ಕು ಕೈ ಇದೆಯೇನೋ ಅನ್ನಿಸುವಷ್ಟು ಅವಳ ಕೆಲಸ ಎಲ್ಲಾ ಸಾಗತ್ತಾ ಬಂತು. ದೊಡ್ಡ ಬೆಳಕು ಹರಿಯುವದರೊಳಗೆ ನಾಗವೇಣಿಗೆ ಅನ್ನ ಮಾಡುವುದೊಂದು ಬಿಟ್ಟು ಎಲ್ಲಾ ಕೆಲಸವೂ ಮುಗಿಯುತ್ತಾ ಬಂದಿತು. ಅತ್ತಿಗೆಯರೆಲ್ಲಾ ಬರುವದರೊಳಗೆ ತೊವ್ವೆ, ಗೊಜ್ಜು, ಪಲ್ಯ, ಕೋಸಂಬರಿ, ಇಡ್ಲಿ, ವಡೆ, ಚಟ್ನಿ, ಪಾಯಸ, ಕೊಟ್ಟೆ ಕಡಬು, ಹಲಸಿನ ಹಣ್ಣಿನ ಕಡುಬು, ಎಲ್ಲಾ ರೆಡಿ ಆಗ್ಬಿಟ್ಟಿತ್ತು. ಅವಳಿಗೆ ದೇವರಿಗೆ ಪಂಚಾಮೃತಕ್ಕೆ ರೆಡಿ ಮಾಡಿ, ಪಿಂಡಕ್ಕೆಂದು ಬಾಳೆ ಆರಿಸಿಯೂ ಆಯಿತು.


ಆಗ ನಾಗವೇಣಿಗೆ ಮನಸ್ಸು ಹಗುರವಾಗುತ್ತ ಬಂದಂತೆ ಅನಿಸಿತು. ಅವಳಿಗೆ ತಾನೊಬ್ಬಳೆ ಇದ್ದೇನೆ ಎಂಬ ಅನಾಥ ಭಾವ ಕ್ಷೀಣಿಸಿದಂತೆ ಅರವಾಗತೊಡಗಿತು. ಇನ್ನು ಅತ್ತಿಗೆಯರು ಬಂದು ತನಗೆ ಏನೇ ಹೇಳಿದ್ರೂ ತಾನು ಅದನ್ನ ನಿಭಾಯಿಸಬಲ್ಲೆಂಬ ವಿಶ್ವಾಸ ತಲೆ ಎತ್ತಿ ನಿಂತಿತು. ಅವರ ಕಟುಕಿಗಳನ್ನು ಎದುರಿಸ ಬಲ್ಲೆ ಎಂಬ ಧೈರ್ಯ ಬಂತು. ದೂರದಲ್ಲಿ ಅಂಗಳದ ತುದಿಯಲ್ಲಿ ಮಾಂವ ನಡೆದುಕೊಂಡು ಬರುತ್ತಾ ಇದ್ರು. ಒಳಗೆ ಬಂದು “ಆರೇ ನಾಗವೇಣಿ ನೀ ಬಂದಿಯಲ್ಲೇ. ಅಷ್ಟೇ ಅಲ್ಲಾ ಶ್ರದ್ಧೆಲಿ ನನಗೆ ಪ್ರೀತಿ ಅಪ್ಪೋ ಅಡಗೆನೂ ಮಾಡಿದೀಯಲ್ಲೇ. ನಿಜ ಹೇಳೋವೋ, ಇವತ್ತು ನನಗೆ ಪ್ರೀತಿ ಶ್ರಾದ್ಧ ಆತು” ಎಂದು ಮಾಂವ ಹೇಳಿದಾಗಂತು


ಅವಳಿಗೆ ಹೊಸ ಜೀವ ಬಂದಂತೆ ಭಾಸವಾಯಿತು. ಮನಸ್ಸು ವಾಸ್ತವಕ್ಕೆ ಇಳಿದು ಹಗುರವೆನಿಸಿತು. “ಅಡಿಗೆ ಎಲ್ಲ ಆಯ್ದು, ಭಟ್ಟರಿಗೆ ಕೈ ಕಾಲು ತೊಳುಲೆ ನೀರು ಕೊಡಿ” ಎಂದು ಗಂಡನಿಗೆ ಕೂಗಿ ಹೇಳಿದಳು.

ಹಾಗೆ ಅಂದವಳೇ ಒಂದು ದೀರ್ಘ ವಾದ ನಿಟ್ಟುಸಿರಬಿಟ್ಟು ಅಲ್ಲೇ ಸ್ವಲ್ಪ ಹೊತ್ತು ಕಾಲು ಚಾಚಿ ಕುಳಿತುಕೊಂಡಳು.

ಉಮಾ ಭಟ್‌, ಹುಬ್ನಳ್ಳಿ, ಯಲ್ಲಾಪುರ


ಸಂಗೀತ ಮತ್ತು ಸಾಹಿತ್ಯಗಳೆರಡರಲ್ಲೂ ಅಪಾರ ಆಸಕ್ತಿ ಹೊದಿರುವ ಶ್ರೀಮತಿ ಉಮಾ ಭಟ್ ಯಲ್ಲಾಪುರ ತಾಲೂಕಿನ ಹುಬ್ನಳ್ಳಿಯೆಂಬ ಹಳ್ಳಿಯಲ್ಲಿ ತಮ್ಮ ಪತಿ ಶ್ರೀ ನಾರಾಯಣ ಭಟ್ಟರೊಂದಿಗೆ ಕೃಷಿಯಲ್ಲಿ ನಿರತರು. ಎಳವೆಯಲ್ಲೇ ಹಿದುಸ್ತಾನಿ ಸಂಗೀತದಲ್ಲಿ ಮತ್ತು ಕನ್ನಡ ಸಾಹಿತ್ಯದಲ್ಲಿ ಅಪಾರ ಆಸಕ್ತಿ ಹೊದಿರುವ ಇವರು ಬರೆದ ಹಲವಾರು ಕಥೆ, ಕವನಗಳು ಪತ್ರಿಕೆಗಳಲ್ಲಿ ಪ್ರಕಟವಾಗಿವೆ ಮತ್ತು ಪ್ರಶಸ್ತಿಗಳನ್ನು ಪಡೆದಿವೆ. ಇವರ ಅಪ್ರಕಟಿತ ಕವನ ಸಂಕಲನ "ವಿವಕ್ಷೆ", ಪ್ರಶಸ್ತಿ ಪಡೆದಿದೆ. ಬೆಂಗಳೂರಿನ ಹವ್ಯಕ ಮಹಾಸಭೆಯ ಅಧ್ಯಯನ ಕೇಂದ್ರದಲ್ಲಿದ್ದಾಗ "ಅಡಕೆ ಸಂಸ್ಕೃತಿ" ಗ್ರಂಥದ ಸಂಪಾದನೆಯ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು ಅವರ ಸಾಹಿತ್ಯಾಸಕ್ತಿಗೆ ಹಿಡಿದ ಕನ್ನಡಿಯಾಗಿದೆ. -ಸಂಪಾದಕ

74 views1 comment
bottom of page