top of page

ವಿ.ಎಂ.ಇನಾಮದಾರ








ಅಕ್ಟೋಬರ್ ೧ ಇವರ ಜನ್ಮದಿನ

***************************

ಯಯಾತಿಯನ್ನು ಕನ್ನಡಕ್ಕೆ ಕೊಟ್ಟ

ವಿ. ಎಂ‌. ಇನಾಂದಾರ

"*********"*******

ಕನ್ನಡ ಕಾದಂಬರಿ ಓದುಗರಿಗೆಲ್ಲ ಅತ್ಯಂತ ಮೆಚ್ಚಿನ ಕೃತಿ " ಯಯಾತಿ" . ಮೂಲತಃ ಮರಾಠಿಯ ವಿ. ಎಸ್. ಖಾಂಡೇಕರ ಅವರು ಬರೆದ ಈ ಕಾದಂಬರಿ ಕನ್ನಡದ ಒಂದು ಸ್ವತಂತ್ರ ಕೃತಿಯೆಂಬಷ್ಟು ಸೊಗಸಾಗಿ ಮೂಡಿಬಂದಿದೆ. ಈ ಕಾದಂಬರಿ ಅನುವಾದಿಸಿದ ವಿ. ಎಂ. ಇನಾಂದಾರ ಅವರಿಗೂ ಖ್ಯಾತಿ ತಂದುಕೊಟ್ಟಿತು.

ವೆಂಕಟೇಶ ಮಧ್ವರಾವ್ ಇನಾಂದಾರ ಅವರು ಜನಿಸಿದ್ದು ೧೯೧೨ ಅಕ್ಟೋಬರ್ ೧ ರಂದು ಬೆಳಗಾವಿ ಜಿಲ್ಲೆಯ ಹುದಲಿ ಎಂಬ ಸಣ್ಣ ಗ್ರಾಮದಲ್ಲಿ. ತಂದೆ ಮಧ್ವರಾವ್ ಅವರು ಪೋಸ್ಟಮನ್ ವೃತ್ತಿಯಲ್ಲಿದ್ದರೂ ಸಾಹಿತ್ಯ ಸಂಶೋಧನೆಯಲ್ಲಿ ಆಸಕ್ತರಿದ್ದರು. ತಾಯಿ ಕಮಲಾಬಾಯಿ.

ಮ್ಯಾಟ್ರಿಕ್ ನಲ್ಲಿ ಉನ್ನತ ಶ್ರೇಣಿಯಲ್ಲಿ ಪಾಸಾದ ಅವರು ಮುಂಬಯಿ ವಿಶ್ವವಿದ್ಯಾಲಯದಿಂದ ಸುವರ್ಣಪದಕ ಸಹಿತ ಬಿ. ಎ. ಮತ್ತು ಎಂ. ಎ. ಪದವಿ ಗಳಿಸಿದರು. " ಸಂಸ್ಕೃತ ಕಾವ್ಯಗಳಲ್ಲಿ ನಾಯಕಿ ಪಾತ್ರಗಳು " ಎಂಬ ವಿಷಯವಾಗಿ ಮಹಾಪ್ರಬಂಧ ಬರೆದು ಪಿಎಚ್ಡಿ ಗಾಗಿ ಮಾಂಡಲಿಕ ಪ್ರಶಸ್ತಿಯನ್ನೂ ಗಳಿಸಿದರು. ಅದಕ್ಕಾಗಿ ದೊರಕಿದ ಒಂದು ಸಾವಿರ ರೂ. ಮೊತ್ತದಲ್ಲಿ ಪೂರ್ತಿ ಸಾಹಿತ್ಯ ಕೃತಿಗಳನ್ನೇ ಕೊಂಡುತಂದರಂತೆ. ಅವರದು ಇಂಗ್ಲಿಷ ವಿಷಯ.

ಆರಂಭದಲ್ಲಿ ಜಿಲ್ಲಾ ನ್ಯಾಯಾಲಯದಲ್ಲಿ ಸಿಕ್ಕ ಗುಮಾಸ್ತೆ ನೌಕರಿ ಬಿಟ್ಟು ಒಂದೆರಡು ಇಂಗ್ಲಿಷ ಪತ್ರಿಕೆಗಳಲ್ಲಿ ಕೆಲಸ ಮಾಡಿದರು.ನಂತರ ಮುಂಬಯಿಯ ಸಿಡೆನ್ ಹ್ಯಾಂ ಕಾಲೇಜು, ಧಾರವಾಡದ ಕರ್ನಾಟಕ ಕಾಲೇಜು, ಗುಜರಾತ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ, ಮಂಗಳೂರಿನ ಸರ್ಕಾರಿ ಕಾಲೇಜಿನಲ್ಲಿ ಉಪಪ್ರಾಚಾರ್ಯರಾಗಿ, ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಪ್ರಾಚಾರ್ಯರಾಗಿ, ನಿವೃತ್ತರಾದ ನಂತರವೂ ಬೆಂಗಳೂರು ವಿವಿ ಯುಜಿಸಿ ಗೌರವ ಪ್ರಾಧ್ಯಾಪಕರಾಗಿದ್ದರು ದೀರ್ಘಕಾಲದ ಶೈಕ್ಷಣಿಕ ಸೇವೆ ಸಲ್ಲಿಸಿದರು.

ಇನಾಂದಾರರ ಸಾಹಿತ್ಯ ಕೃಷಿಯೂ ಬಹಳ ದೊಡ್ಡದು. ಬಹುಭಾಷಾ ಪಾಂಡಿತ್ಯ ಹೊಂದಿದ್ದ ಅವರು ಮರಾಠಿಯಿಂದ ಅನುವಾದಿಸಿದ ಖಾಂಡೇಕರರ " ಎರಡು ಧ್ರುವ" ಮೊದಲ ಕಾದಂಬರಿ. (೧೯೩೭). ನಂತರ ಸ್ವತಂತ್ರ ಕಾದಂಬರಿ " ಮೂರಾಬಟ್ಟೆ" ೧೯೪೬ ರಲ್ಲಿ ಹೊರಬಂತು. ಆದರೆ ವಾಚಕವೃಂದ ಅವರನ್ನು ಗುರುತಿಸಿದ್ದು ಯಯಾತಿಯಿಂದ. ೧೮ ಕಾದಂಬರಿಗಳು, ೧೬ ವಿಮರ್ಶಾ ಕೃತಿಗಳು, ಅನುವಾದಗಳು ಎಲ್ಲ ಸೇರಿ ೫೦ ಕ್ಕೂ ಹೆಚ್ಚು ಕೃತಿಗಳನ್ನು ಅವರು ನೀಡಿದರು. ಅವರು ಮಕ್ಕಳಿಗೆ ಬೋಧಿಸುತ್ತಿದ್ದುದು ಪಾಶ್ಚಾತ್ಯ ವಿಮರ್ಶೆ. ಪಾಶ್ಚಾತ್ಯ ಸಾಹಿತ್ಯಕ್ಕೆ ಸಂಬಂಧಿಸಿದ ಐದು ಬೃಹತ್ ಸಂಪುಟಗಳು ಸೇರಿ ಸಮಗ್ರವಾಗಿ " ಪಾಶ್ಚಾತ್ಯ ಕಾವ್ಯ ಮೀಮಾಂಸೆ" ಕನ್ನಡ ಸಾಹಿತ್ಯಕ್ಕೆ ಬಹಳ ಮಹತ್ವದ ಕೊಡುಗೆ.

ಕನಸಿನ ಮನೆ, ವಿಜಯಯಾತ್ರೆ, ತ್ರಿಶಂಕು, ಊರ್ವಶಿ, ಈ ಪರಿಯ ಸೊಬಗು, ಶಾಪ, ಚಿತ್ರಲೇಖ, ನವಿಲುನೌಕೆ ಮೊದಲಾದ ಕಾದಂಬರಿಗಳು, ಕಪ್ಪು ಚೆಲುವೆ , ಮನವೆಂಬ ಮರ್ಕಟ ಇತರ ಪ್ರಬಂಧಗಳು, ಮಾಸ್ತಿ ಕಾರಂತ, ಗೋವಿಂದ ಪೈ , ಬಿಎಂಶ್ರೀ ಮೊದಲಾದ ಹಿರಿಯರ ಜೀವನ ಸಾಹಿತ್ಯದ ಕುರಿತಾದ ‌ಕೃತಿಗಳು , ಅಲ್ಲದೆ ಇಂಗ್ಲಿಷಿನಲ್ಲಿಯೂ ಹಲವು ಕೃತಿಗಳು ಅವರಿಂದ ರಚಿತಗೊಂಡವು. ಪ್ರತಿಷ್ಠಿತ ಬಹುಮಾನ ಪ್ರಶಸ್ತಿ ಗೌರವಗಳು ಸಾಕಷ್ಟು. ಅವರ ಕುರಿತು ಗೌರವ ಗ್ರಂಥವಾಗಿ "ನವನೀತ" , " ಕಾದಂಬರಿ ಲೋಕ " ಹೊರಬಂದಿವೆ.

ಇನಾಮದಾರರು ೧೯೮೬ ಜನೆವರಿ ೨೬ ರಂದು ನಿಧನರಾದರು. ಉಡುಪಿಯ ಗೋವಿಂದ ಪೈ ಸಂಶೋಧನ ಕೇಂದ್ರ ಅವರ ಗೌರವಾರ್ಥ ಪ್ರತಿವರ್ಷ ವಿಮರ್ಶಾ ಕೃತಿಗೆ ಪ್ರಶಸ್ತಿ ನೀಡುತ್ತಲಿದೆ.


‌‌ - ಎಲ್. ಎಸ್. ಶಾಸ್ತ್ರಿ


ವಿ.ಎಂ.ಇನಾಮದಾರ ಅವರ ಬಗ್ಗೆ ಹಿರಿಯರಾದ ಎಲ್.ಎಸ್.ಶಾಸ್ತ್ರಿ ಅವರು ಬರೆದ ಲೇಖನ ನಿಮ್ಮ ಓದಿಗಾಗಿ.

ಸಂಪಾದಕ ಆಲೋಚನೆ.ಕಾಂ




11 views0 comments
bottom of page