top of page

ಲಲಿತ ಶೈಲಿಯ ಎ.ಎನ್.ಮೂರ್ತಿರಾವ್


ಲಲಿತಶೈಲಿಯ ಸೊಗಸುಗಾರ

ಎ. ಎನ್. ಮೂರ್ತಿರಾವ್

***********************

ಅಕ್ಕಿಹೆಬ್ಬಾಳು ನರಸಿಂಹ ಮೂರ್ತಿರಾವ್ ಅವರ " ದೇವರು" , ಚಿತ್ರಗಳು ಪತ್ರಗಳು" , " ಅಪರವಯಸ್ಕನ ಅಮೆರಿಕ ಯಾತ್ರೆ" ಮೊದಲಾದ ಕೃತಿಗಳನ್ನು ಓದಿದವರು ಅವರ ಲಲಿತ ಶೈಲಿಯ ಕನ್ನಡದ ಸೊಗಸಿನ ಪ್ರಭಾವದಿಂದ ಹೊರಬರಲಾರರು. ಶತಾಯುಷಿಗಳಾಗಿ ಬಾಳಿದ ಮೂರ್ತಿರಾಯರು ಮಂಡ್ಯ ಜಿಲ್ಲೆಯ ಅಕ್ಕಿಹೆಬ್ಬಾಳು ಎಂಬ ಹಳ್ಳಿಯಲ್ಲಿ ೧೯೦೦ ರ ಜೂನ್ ೧೬ ರಂದು ಜನಿಸಿ ಮೈಸೂರು, ಶಿವಮೊಗ್ಗಾ, ಚಿತ್ರದುರ್ಗ ಮತ್ತು ಬೆಂಗಳೂರು ಸೆಂಟ್ರಲ್ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ೧೯೫೫ ರಲ್ಲಿ ನಿವೃತ್ತಿ ಹೊಂದಿದರು. ಸರಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸ್ಥಾಪಿಸಿದಾಗ ಅದರ ಮೊದಲ ನಿರ್ದೇಶಕರಾಗಿ, ಆಕಾಶವಾಣಿಯ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದರು. ಸದರ್ನ್ ಲ್ಯಾಂಗ್ವೇಜ್ ಬುಕ್ ಟ್ರಸ್ಟ್ ಸಂಚಾಲಕ ಅಧ್ಯಕ್ಷರಾಗಿಯೂ ಕೆಲಸ ಮಾಡಿದರು.

ಆಷಾಢಭೂತಿ, ಅಲೆಯುವ ಮನ, ಸಾಹಿತ್ಯದಲ್ಲಿ ಮತ್ತು ಸತ್ಯ, ಹೇಮಾವತಿ ತೀರದ ತವಸಿ, ಪೂರ್ವಸೂರಿಗಳೊಡನೆ, ಪಾಶ್ಚಾತ್ಯ ಸಣದಣಕಥೆಗಳು, ಸಂಜೆಗಣ್ಣಿನ ಹಿನ್ನೋಟ, ಹಗಲುಗನಸುಗಳು, ಮಿನುಗು ಮಿಂಚು, ಜನತಾ ಜನಾರ್ದನ, ಗಾನವಿಹಾರ ಮೊದಲಾದವು ಅವರ ಇತರ ಕೃತಿಗಳು. ಡಾ. ಶಿವರಾಮ ಕಾರಂತರ " ಮರಳಿ ಮಣ್ಣಿಗೆ" ಕಾದಂಬರಿಯನ್ನು ಇಂಗ್ಲಿಷ ಭಾಷೆಗೆ ಅನುವಾದಿಸಿದರು. ೧೯೫೪-೫೬ ರಲ್ಲಿ ಕನ್ನಡ ಸಾಹಿತ್ಯ ಪರಿಷತ್ ರಾಜ್ಯ ಅಧ್ಯಕ್ಷರಾಗಿ ಸಾಕಷ್ಟು ಉಪಯುಕ್ತ ಯೋಜನೆಗಳನ್ನು ಜಾರಿಗೊಳಿಸಿದರು. ಅವರ ಚಿತ್ರಗಳು ಪತ್ರಗಳು ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಅಪರವಯಸ್ಕನ ಅಮೆರಿಕಾ ಯಾತ್ರೆಗೆ ರಾಜ್ಯಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ಮತ್ತು ದೇವರು ಕೃತಿಗೆ ಪಂಪಪ್ರಶಸ್ತಿ, ಮೈಸೂರು ವಿವಿ ಯಿಂದ ಗೌರವ ಡಾಕ್ಟರೇಟ್ , ಸಮಗ್ರ ಸಾಹಿತ್ಯ ಸಂಪುಟಕ್ಕೆ ಮಾಸ್ತಿ ಪ್ರಶಸ್ತಿಗಳು ದೊರಕಿದವು. ೧೯೮೪ ರಲ್ಲಿ ಕೈವಾರದಲ್ಲಿ ಜರುಗಿದ ೫೬ ನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದರು.

ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸುತ್ತ ೧೦೩ ವರ್ಷ ಬದುಕಿದ ಮೂರ್ತಿರಾಯರು ೨೦೦೩ ಅಗಸ್ಟ್ ೨೩ ರಂದು ನಿಧನರಾದರು.

- ಎಲ್. ಎಸ್. ಶಾಸ್ತ್ರಿ


31 views0 comments
bottom of page