top of page

ರಾಷ್ಟ್ರ ಕವಿ ಮೈಥಿಲಿಶರಣ ಗುಪ್ತ





ನನ್ನ ಪ್ರೀತಿಯ ಕವಿ ಮೈಥಿಲೀಶರಣ ಗುಪ್ತಾ ಅವರ "ಪಂಚವಟಿ" ಖಂಡಕಾವ್ಯವನ್ನು ನಾನು ಕನ್ನಡಕ್ಕೆ ಅನುವಾದಿಸಿದ್ದು ಸುಮಾರು ೬೦ ವರ್ಷಗಳ ಹಿಂದೆ. ಅದು ಪುಸ್ತಕ ರೂಪವಾಗಿ ಪ್ರಕಟವಾದದ್ದು ೨೦೧೪ ರಲ್ಲಿ. ಹಿಂದಿ ರಾಷ್ಟ್ರಭಾಷಾ ವಿಶಾರದ ಪರೀಕ್ಷೆಗಾಗಿ ನಾನು ಈ ಕಾವ್ಯವನ್ನು ಓದಿದ್ದೆ. ನನಗದು ಬಹಳ ಇಷ್ಟವಾದದ್ದಾಗಿತ್ತು. ಆಗ ಸುಮಾರು ಮುಕ್ಕಾಲು ಭಾಗ ಅನುವಾದಿಸಿದ್ದನ್ನು ಪೂರ್ತಿಗೊಳಿಸಿದ್ದು ಬೆಳಗಾವಿಗೆ ಬಂದ ನಂತರ.

೧೮೮೬ ರ ಅಗಸ್ಟ್ ೩ ರಂದು ಝಾಂಸಿ ಹತ್ತಿರದ ಚಿರಗಾಂವ್ ಎಂಬಲ್ಲಿ ಜನಿಸಿದ ಗುಪ್ತಾರ ತಂದೆ ಹಾಗೂ ಸಹೋದರ ಇಬ್ಬರೂ ಹಿಂದೀ ಕವಿಗಳೇ. ಹಿಂದಿ, ಸಂಸ್ಕೃತ, ಇಂಗ್ಲಿಷ್ , ಬಂಗಾಲಿ ಮೊದಲಾದ ಭಾಷೆಗಳನ್ನರಿತಿದ್ದ ಗುಪ್ತಾ ರಾಮಾಯಣ ಮಹಾಭಾರತ ಬೌದ್ಧ ಕಥೆಗಳತ್ತ ವಿಶೇಷ ಆಸಕ್ತಿ ಹೊಂದಿದ್ದರು. ಅವರ ಹೆಚ್ಚಿನ ಕೃತಿಗಳು ಅವುಗಳಿಂದಲೇ ಪ್ರೇರಣೆ ಪಡೆದಿವೆ. ಅವುಗಳಲ್ಲಿ ಲಕ್ಷ್ಮಣನ ಪತ್ನಿ " ಊರ್ಮಿಳಾ" ಮತ್ತು ಬುದ್ಧನ ಪತ್ನಿ "ಯಶೋಧರಾ" ಕುರಿತು ಬರೆದ ಕಾವ್ಯಗಳು ಬಹಳ ಪ್ರಸಿದ್ಧವಾಗಿವೆ. ಮದುವೆಯಾದ ಹೊಸದರಲ್ಲೇ ಪತಿಯಿಂದ ದೂರವಾಗಿ ಬದುಕಬೇಕಾದ ಹೆಣ್ಣಿನ ನೋವು ಇವುಗಳಲ್ಲಿ ಪ್ರತಿಬಿಂಬಿತವಾಗಿವೆ.

ಸ್ವಾತಂತ್ರ್ಯ ಪೂರ್ವದಲ್ಲಿ ಇವರು ರಚಿಸಿದ " ಭಾರತ- ಭಾರತಿ" ಸಂಕಲನ ದೇಶಪ್ರೇಮ ಪ್ರೇರಕವಾದ ಕವನಗಳಿಂದ ಕೂಡಿದ್ದು ಮಹಾತ್ಮ ಗಾಂಧೀಜಿಯವರು ಇವರಿಗೆ ರಾಷ್ಟ್ರಕವಿ ಬಿರುದನ್ನಿತ್ತು ಗೌರವಿಸಿದ್ದರು. ಮಾತೃಭುಮಿ, ಜಯದ್ರಥ ವಧ್, ಗುರುಕುಲ, ಕಿಸಾನ್, ದ್ವಾಪರ್, ವಿಕಟ ಭಟ್ ಮೊದಲಾದವು ಅವರ ಇತರ ಕೃತಿಗಳು.

೧೯೫೨ ರಲ್ಲಿ ಗುಪ್ತಾರನ್ನು ರಾಜ್ಯಸಭೆಗೆ ಗೌರವ ಸದಸ್ಯರನ್ನಾಗಿ ನಾಮಕರಣ ಮಾಡಲಾಯಿತು. ೧೯೬೪ ರತನಕ ಅಂದರೆ ೧೨ ವರ್ಷ ಅವರು ರಾಜ್ಯಸಭಾ ಸದಸ್ಯರಾಗಿದ್ದರು. ೧೯೬೪ ರಲ್ಲೇ ಅವರು ೭೮ ನೇ ವಯಸ್ಸಿನಲ್ಲಿ ನಿಧನರಾದರು.

ನಾನು ಅನುವಾದಿಸಿದ ಅವರ ಪಂಚವಟಿ ಖಂಡಕಾವ್ಯದ ಮೊದಲ ಕೆಲ ಪದ್ಯಗಳು-

ಚಾರುಚಂದ್ರಮನ ಚಂಚಲ ಕಿರಣಗಳಾಡುತಲಿವೆ

ಜಲ ಚುಂಬನದಿ

ಹರಡಿದೆ ನಿರ್ಮಲ ಬೆಳದಿಂಗಳು ಈ

ಭೂಮಿ ಮತ್ತು ಅಂಬರತಲದಿ

*

ಹಸಿರು ತೃಣದ ಅಲ್ಲಾಡುವ ತುದಿಗಳು

ಪುಲಕಿತಗೊಳಿಸಿಹವೀ ನೆಲವ

ಮಂದಪವನ ಚೆಲ್ಲಾಟಕೆ ಎಳಸಲು

ತೂಗಿತು ತರು ತನ್ನಯ ಶಿರವ

*

ಸುಂದರ ಪರ್ಣಕುಟೀರದಿ ಶೋಭಿಸೆ

ತಣ್ನೆಳಲಲಿ ಪಂಚವಟಿ ವನ

ಎದುರು ಶಿಲಾಸನದಲಿ ಕುಳಿತಿಹ ಆ

ಧೀರವೀರ ನಿರ್ಭೀತ ಮನ

*

ಮಲಗಿರೆ ಈ ಜನ ತಾನೆಚ್ಚತ್ತಿಹ

ಯಾರಿದು ಯೋಧ ಧನುರ್ಧರನು?

ಭೋಗಿ ಕುಸುಮಶರ ಯೋಗಿಯಾಗಿ ತಾ

ಕುಳಿತಿಹ ತೆರ ತೋರುತಲಿಹನು.

- ಎಲ್. ಎಸ್. ಶಾಸ್ತ್ರಿ




10 views0 comments
bottom of page