top of page

ಮಹರ್ಷಿ ದೈವರಾತರು



ಮಹರ್ಷಿ ದೈವರಾತರು ಸನಾತನ ಋಷಿ ಪರಂಪರೆಯನ್ನು ಪ್ರತಿನಿಧಿಸಿದ ನಮ್ಮ ಸಮಕಾಲೀನರು. ಅವರು ಋಷಿ ಮುನಿಗಳ ಸಾಲಿನಲ್ಲಿ ಸ್ಮರಣೀಯರು. ಗೋಕರ್ಣದಲ್ಲಿ ಹುಟ್ಟಿ ಬೆಳೆದ ಅವರು ಸಮರ್ಥ ರಾಮದಾಸರ ಶಿಷ್ಯರಾಗಿ,ಟೆಂಬೆ ಮಹಾರಾಜರ ,ರಮಣ ಮಹರ್ಷಿಗಳ,ಕಾವ್ಯಕಂಠ ಗಣಪತಿ ಮುನಿಗಳ ಸಂಪರ್ಕದಿಂದ ತಮ್ಮ ವ್ಯಕ್ತಿತ್ವದ ಮಹತಿಯನ್ನು‌ ಶ್ರುತ ಪಡಿಸಿದ ಮಂತ್ರ ದೃಷ್ಟಾರರು. ಅವರ ಬಗ್ಗೆ ಹಿರಿಯರಾದ ಎಲ್.ಎಸ್.ಶಾಸ್ತ್ರಿ ಅವರು ಬರೆದ ಲೇಖನ ನಿಮ್ಮ ಓದಿಗಾಗಿ ಡಾ.ಶ್ರೀಪಾದ ಶೆಟ್ಟಿ ಸಂಪಾದಕ ಆಲೋಚನೆ.ಕಾಂ




ನಮ್ಮ ಕಾಲದಲ್ಲೂ ಕಂಡುಬಂದ ಅಪರೂಪದ

ಮಂತ್ರ ದೃಷ್ಟಾರ ಬ್ರಹ್ಮರ್ಷಿ ದೈವರಾತರು

******************************

ವೇದಕಾಲದಲ್ಲಿ ದೃಷ್ಟಾರರು ಮಂತ್ರಗಳನ್ನು ಕಾಣಬಲ್ಲವರಾಗಿದ್ದರು. ಅವರೆಲ್ಲ ಮಹಾನ್ ಋಷಿಮುನಿಗಳು. ಗೌತಮ, ವಾಮದೇವ, , ವೇಣ, , ಗೃತ್ಸಮದ, ರೇಭ, ವಿಶ್ವಾಮಿತ್ರ, ಹೀಗೆ ನೂರಾರು ಹೆಸರುಗಳಲ್ಲಿ ದೃಷ್ಟಾರರು ವೇದಮಂತ್ರಗಳನ್ನು ಕಂಡವರಿದ್ದಾರೆ. ಅವನ್ನೆಲ್ಲ ವ್ಯಾಸರು ನಾಲ್ಕು ವೇದಗಳನ್ನಾಗಿ ವಿಭಜಿಸಿದರು. ಇವರ ನಂತರದಲ್ಲಿ ದೃಷ್ಟಾರರು‌ ಹುಟ್ಟಲಾರರು ಎಂಬ ಭಾವನೆ ಸುಳ್ಳಾಗಿ‌ ಕಲಿಯುಗದಲ್ಲಿ ವೇದವನ್ನು ಕಂಡ ದೃಷ್ಟಾರರೆನಿಸಿಕೊಂಡವರು ಬ್ರಹ್ಮರ್ಷಿ ದೈವರಾತರು.

ದೈವರಾತರು ಹುಟ್ಟಿದ್ದು ಗೋಕರ್ಣದಲ್ಲಿ. ವೇದವಿದ ವಿಘ್ನೇಶ್ವರ - ನಾಗವೇಣಿ ಭಟ್ಟರ ಮಗನಾಗಿ ೪-೧-೧೮೮೨ ರಲ್ಲಿ ಜನಿಸಿದ ಅವರಿಗೆ ಗಣೇಶ ಎಂದು ಹೆಸರಿಡಲಾಯಿತು. ಅದು ಅವರ ತಾಯಿಯ ತಂದೆಯ ಹೆಸರು. ಬಾಲ್ಯದಲ್ಲಿ ಬಹಳ ವಿಲಕ್ಷಣ ಸ್ವಭಾವದವರಾಗಿದ್ದರಂತೆ. ನಗಲಾರಂಭಿಸಿದರೆ ರಾತ್ರಿ ಬೆಳತನಕ ನಗುತ್ತಲೇ ಇರುವದು, ಅಳಲಾರಂಭಿಸಿದರೆ ಅಳುತ್ತಲೇ ಇರುವದು. ಗೋಕರ್ಣದ ಕೋಟಿತೀರ್ಥದ ಕಟ್ಟೆಯ ಮೇಲೆ ಮೌನವಾಗಿ ದಿನವಿಡೀ ಕುಳಿತಿರುತ್ತಿದ್ದರಂತೆ. ಹಿರಿಯ ವಿದ್ವಾಂಸರನ್ನು ಗೌರವದಿಂದ ಕಾಣುತ್ತಿದ್ದ ಅವರು ತಮ್ಮ ತಂದೆಯಿಂದಲೇ ಋಗ್ವೇದದ ಸ್ವಶಾಖಾಧ್ಯಯನವನ್ನು ಆರಂಭಿಸಿದರು. ಮುಂದೆ ಮದುವೆಗೆ ಮೊದಲೇ ಮಹಾರಾಷ್ಟ್ರಕ್ಕೆ ತೆರಳಿ ಸಂತ ರಾಮದಾಸರ ಶಿಷ್ಯರಾಗಿ ಎಂಟು ವರ್ಷಗಳ ಕಾಲ ಅವರೊಡನೆ ಉಜ್ಜೈನಿ ಮತ್ತಿತರ ಕ್ಷೇತ್ರಸ್ಥಳಗಳನ್ನು ಸುತ್ತಿ ರಾಮದಾಸರ ನಿಧನಾನಂತರ ಮತ್ತೆ ಗೋಕರ್ಣಕ್ಕೆ ಬಂದರು. ವಿವಾಹವೂ ಆಯಿತು.

ಕೆಲಕಾಲದ ನಂತರ ಟೇಂಬೆ ವಾಸುದೇವಾನಂದ ಸ್ವಾಮಿಗಳ ಸಂಪರ್ಕ ಬಂದು ಅವರಿಂದ ದತ್ತಾತ್ರೇಯನ ದ್ವಾದಶಾಕ್ಷರಿ ಮಂತ್ರೋಪದೇಶ ಪಡೆದು ಉಜ್ಜೈನಿಯಲ್ಲಿ ಹಠಯೋಗದ ಸಾಧನೆಗೈದರು. ಅಲ್ಲಿಂದ ವಾರಾಣಸಿಗೆ ಹೋಗಿ ತರ್ಜ ವೇದಾಂತ ಶಾಸ್ತ್ರ ವ್ಯಾಕರಣಾದಿಗಳ ಅಧ್ಯಯನ‌ ಮಾಡಿದರು.

ಮುಂದೆ ಅರುಣಾಚಲಕ್ಕೆ ಹೋಗಿ‌ ರಮಣ ಮಹರ್ಷಿಗಳ ಆಶೀರ್ವಾದ ಪಡೆದರು. ಅವರನ್ನು ಕಂಡ ತಕ್ಷಣವೇ ನಿಂತಲ್ಲೇ ದೈವರಾತರು ಎಂಟು ಶ್ಲೋಕಗಳುಳ್ಳ " ಶ್ರೀ ರಮಣವಿಭಶ್ಯಷ್ಟಕ" ವನ್ನು ರಚಿಸುತ್ತಾರಂತೆ. ಅಲ್ಲಿಯೇ ಅವರಿಗೆ ಗುರುಗಳಾಗಿ ಕಾವ್ಯಕಂಠ ವಾಸಿಷ್ಠ ಗಣಪತಿ ಮುನಿಗಳು ದೊರಕುತ್ತಾರೆ. ಅವರೊಂದಿಗೆ ಪಡವೇಟ್ಟ ಗ್ರಾಮದ ರೇಣುಕಾಂಬಾ ಮಂದಿರದಲ್ಲಿದ್ದಾಗ ಶರನ್ನವರಾತ್ರಿಯ ಸಂದರ್ಭದಲ್ಲಿ ಬ್ರಾಹ್ಮೀ ಮುಹೂರ್ತದಲ್ಲಿ ಧ್ಯಾನಸ್ಥರಾಗಿರುವಾಗ ಹತ್ತನೆಯ ದಿನ ಅವರ ಬಾಯಿಂದ ಒಮ್ಮೆಲೇ ಒಂದಿಷ್ಟು ಛಂದೋಬದ್ಧವಾದ ಮಂತ್ರವಾಕ್ಯಗಳು ಹೊರಬಂದವು. ಅಲ್ಲೇ ಇದ್ದ ಗಣಪತಿ ಮುನಿಗಳು ಚಕಿತರಾದರು.

ಒಟ್ಟು ಹದಿನಾರು ದಿವಸಗಳ ಕಾಲ ಧ್ಯಾನಸ್ಥಿತಿಯಲ್ಲಿ ದೈವರಾತರ ಬಾಯಿಂದ ಹೊರಬಂದ ಋಗ್ವೇದ ಮಂತ್ರಗಳನ್ನು ಗಣಪತಿ ಮುನಿಗಳು ಹಿಡಿದಿಟ್ಟುಕೊಂಡರು. ಸುಮಾರು ನಾಲ್ಕುನೂರಾ ಐವತ್ತು ಋಕ್ಕುಗಳನ್ನು ಅವರು ಹಾಗೆ ಸಂಗ್ರಹಿಸಿ ಅವುಗಳಿಗೆ ಭಾಷ್ಯವನ್ನೂ ಬರೆದರು. ಈ ಮೂಲಕ ಕಲಿಯುಗದಲ್ಲಿ ಮಂತ್ರದರ್ಶನ ಪಡೆದ ಅವರು ಬ್ರಹ್ಮರ್ಷಿಯೆನಿಸಿದರು. ಮಂತ್ರದೃಷ್ಟಾರ ಬ್ರಹ್ಮರ್ಷಿ ದೈವರಾತರು.


ದೈವರಾತರಿಗೆ ಬಾಲ್ಯದಿಂದಲೇ ಅಧ್ಯಾತ್ಮದತ್ತ ಅಪಾರ ಒಲವು. ಅದಕ್ಕೆ ತಕ್ಕಂತೆ ಅವರ ಮುಂದಿನ ಸಾಧನೆಯ ದಾರಿ ನಿರ್ಮಾಣವಾಯಿತು. ಆ ಸಾಧನೆ ಸಿದ್ಧಿಯನ್ನೂ ತಂದುಕೊಟ್ಟಿತು. ಅವರಲ್ಲಿ ವಿಶಿಷ್ಟ ಶಕ್ತಿ ಉದ್ಭವವಾಯಿತು.

ಒಮ್ನೆ ಸರಸ್ವತೀ ತೀರದಲ್ಲಿ ಅನಾವೃಷ್ಟಿಯಿಂದ ಭೀಕರ ಕ್ಷಾಮವುಂಟಾದಾಗ ಅಲ್ಲಿನ ಜನರು ದೈವರಾತರಲ್ಲಿ ಕೇಳಿಕೊಂಡಾಗ ಅವರು ಒಂದು ದಿನವಿಡೀ ಅನುಷ್ಠಾನಕ್ಕೆ ತೊಡಗಿ " ದಿವ್ಯ ಸುಪರ್ಣ"( ಋಗ್ವೇದ ೧-೧೬೪-೫೨) ಮಂತ್ರದ ಪುನಶ್ಚರಣೆಯನ್ನು ಆರಂಭಿಸಿದರು. ರಾತ್ರಿಯಾಗುವಷ್ಟರಲ್ಲಿ ಧಾರಾಕಾರ ಮಳೆ ಆರಂಭವಾಯಿತಲ್ಲದೇ ಮುಂದೆ ನಿಯಮಿತವಾಗಿ ಮಳೆಯಾಗತೊಡಗಿತು.

ದೈವರಾತರು ಅಡುಗೆಯಲ್ಲೂ ನಿಷ್ಣಾತರಾಗಿದ್ದರಂತೆ. ಆಕಳ ಹಾಲು ಶುದ್ಧವಿಲ್ಲದಿದ್ದರೆ ಅವರು ದೂರದಿಂದಲೇ ನೋಡಿ ಅದು ಅಶುದ್ಧ ಹಾಲು ಎಂದು ಹೇಳುತ್ತಿದ್ದರಂತೆ.

ದೈವರಾತರನ್ನು ದ್ವಾರಕಾ ವೇದಕ್ಕೆ ಪಟ್ಟಾಭಿಷಿಕ್ತ ರನ್ನಾಗಿಸಲು ಮಹಾರಾಜರ ನಿಯೋಗವೊಂದು ಅವರಲ್ಲಿಗೆ ಬಂದು ಕೇಳಿಕೊಂಡಾಗ ಅದನ್ನು ನಿರಾಕರಿಸಿದ ಅವರು ತಮ್ಮ ಸರಳ ಜೀವನಕ್ಕೇ ಮಹತ್ವ ನೀಡಿದರು.

ನೇಪಾಳದ ರಾಜಪುರೋಹಿತರ ವಂಶವು ಸಂತಾನ ರಹಿತವಾಗಿದ್ದಾಗ ದೈವರಾತರು ಕೆಲವು ಔಷಧ- ಯೋಗ ವಿಧಾನಗಳಿಂದ ಸಂತಾನಭಾಗ್ಯವುಂಟಾಗುವಂತೆ ಮಾಡಿದ್ದರೆನ್ನಲಾಗಿದೆ.

ಗೋಕರ್ಣ ಸಮುದ್ರ ತೀರದಲ್ಲ ತಮ್ಮ ಆಶ್ರಮವನ್ನು ಕಟ್ಟಿಕೊಂಡು ಅಲ್ಲಿ ನೆಲೆಸಿದ ಅವರು ಮಂತ್ರ ಬ್ರಾಹ್ಮಣಗಳಿಂದ ಮಿಶ್ರ ಕೃಷ್ಣ ಯಜುರ್ವೇದವನ್ನು ಒಂದು ಶುದ್ಧ ಕ್ರಮದಲ್ಲಿ ಜೋಡಿಸಿದ್ದು ಗಮನಾರ್ಹ. ಅದು ಮೂಲ ಯಜುರ್ವೆದ ಸಂಹಿತೆಯೆಂದು ೧೯೭೩ ರಲ್ಲಿ ಬನಾರಸ ವಿಶ್ವ ವಿದ್ಯಾಲಯದಿಂದ ಪ್ರಕಟಗೊಂಡಿತು. ಅವರ ಪತ್ನಿಯ ಮೊದಲ ಹೆಸರು ವರಮಹಾಲಕ್ಷ್ಮಿ. ಅದನ್ನು ಅವರು ಶ್ರದ್ಧಾದೇವಿಯೆಂದು ಬದಲಾಯಿಸಿದರು. ಮಗ ವೇದಶ್ರವ.

೧೯೭೫ ರ ಅಗಸ್ಟ್ ೧೩ ರಂದು ಮಂತ್ರದೃಷ್ಟಾರ ಬ್ರಹ್ಮರ್ಷಿ ದೈವರಾತರು ( ಶ್ರಾವಣ ಶುದ್ಧ ಅಷ್ಟಮಿಯ ದಿನ) ಮಂತ್ರಾಧೀನರಾದರು.

ದೈವರಾತರ ಗುರು ವಾಸಿಷ್ಠ ಗಣಪತಿ ಮುನಿಗಳೂ ಮಹಾತಪಸ್ವಿಗಳು ಮತ್ತು ಪ್ರಕಾಂಡ ಪಂಡಿತರು. ಮೂಲತಃ ಅವರು ಆಂಧ್ರಪ್ರದೇಶವರು. ಇವರ ಮೊದಲ ಹೆಸರು ಸೂರ್ಯಗಣಪತಿ. ಆಶುಕವಿಗಳು. ಬಾಲ್ಯದಲ್ಲಿ ಐದು ವರ್ಷಗಳತನಕ ಅವರಿಗೆ ಮಾತೇ ಬರುತ್ತಿರಲಿಲ್ಲವಂತೆ. ಕಾವ್ಯಕಂಠ ಎನ್ನುವ ಬಿರುದು ಅವರಿಗಿತ್ತು. ತಮ್ಮ ಸಾವಿನ ಸೂಚನೆಯನ್ನು ೨೦ ದಿವಸ ಮೊದಲೇ ನೀಡಿದ್ದರು. ೧೮೭೮ ರಲ್ಲಿ ಜನಿಸಿದ ಅವರು ೧೯೩೬ ರಲ್ಲಿ ಜೀವನ್ಮುಕ್ತರಾದರು.

  • ಲಕ್ಷ್ಮೀನಾರಾಯಣ ಶಾಸ್ತ್ರಿ ನಾಜಗಾರ






81 views1 comment
bottom of page