top of page

ಮಹಾಕಾವ್ಯಗಳ ಮೂಲಕ ಸಂಸ್ಕೃತಿ ಮತ್ತು ನಾಗರಿಕತೆಗಳ ಅಧ್ಯಯನ ಕೃತಿ ‘ಪೂರ್ವ ಪಶ್ಚಿಮಗಳಾಚೆ’ಯ ಇಂಗ್ಲಿಷ್ ಭಾಷಾಂತರ

Updated: Sep 8, 2020

[ಲೇಖಕ ಸುಚೇತನ ಸ್ವರೂಪ ಅವರ Beyond East and West ಕೃತಿಯ ಕನ್ನಡ ಅವತರಣಿಕೆ 'ಪೂರ್ವಪಶ್ಚಿಮಗಳಾಚೆ ' (ಅನುವಾದ: ಎನ್. ಎಸ್. ರಾಘವನ್ ) ಯ ಕುರಿತು ಅಧ್ಯಯನಶೀಲ ಬರಹವೊಂದನ್ನು ಕಳಿಸಿದ ಡಾ. ಪಾರ್ವತಿ ಜಿ ಐತಾಳ ಅವರಿಗೆ ಧನ್ಯವಾದ ಕೋರುತ್ತ ಅದನ್ನು ತಮ್ಮ ಮುಂದೆ ಪ್ರಸ್ತುತ ಪಡಿಸುತ್ತಿದ್ದೇವೆ - ಸಂಪಾದಕ .]


‘Beyond East and West’ : ಒಂದು ಸ್ಥೂಲ ನೋಟ

ಪೂರ್ವಪಶ್ಚಿಮಗಳಾಚೆ’ ಜಗತ್ತಿನ ಮಹಾಕಾವ್ಯಗಳ ಅಧ್ಯಯನದ ಮೂಲಕ ಜಗತ್ತಿನ ಸಂಸ್ಕೃತಿ ಮತ್ತು ನಾಗರಿಕತೆಗಳು ಬೆಳೆದು ಬಂದ ಬಗೆಯನ್ನು ಚಿತ್ರಿಸುತ್ತದೆ. (ಮೂಲ : ಸುಚೇತನ ಸ್ವರೂಪ ಇಂಗ್ಲಿಷ್ ಭಾಷಾಂತರ : ಎನ್.ಎಸ್.ರಾಘವನ್. ಪ್ರಕಾಶಕರು : ರೂಟ್ಲಿಜ್-ಲಂಡನ್ ಮತ್ತು ನ್ಯೂಯೋರ್ಕ್) ಪೂರ್ವ ಮತ್ತು ಪಶ್ಚಿಮ ಭೂಖಂಡಗಳಲ್ಲಿ ಮನುಷ್ಯನ ಸಾಂಸ್ಕೃತಿಕ , ಭಾಷಿಕ ಹಾಗೂ ಸಾಹಿತ್ಯಕ ಚರಿತ್ರೆಗಳಲ್ಲಿ ಮೊತ್ತ ಮೊದಲಿಗೆ ಹುಟ್ಟಿಕೊಂಡ ಮಹಾಕಾವ್ಯಗಳು ಹೇಗೆ ಭಿನ್ನ ರೀತಿಯ ಮತ್ತು ಭಿನ್ನ ಮಟ್ಟದ ಬದುಕುಗಳನ್ನು ರೂಪಿಸಿಕೊಟ್ಟವು ಎಂಬ ವಿಷಯದ ಕುರಿತು ಒಂದು ವಿಸ್ತಾರವಾದ ಅಧ್ಯಯನ ಇಲ್ಲಿದೆ. ಚರಿತ್ರೆಯಲ್ಲಿ ನಮ್ಮನ್ನು ಶತಮಾನಗಳಷ್ಟು ಹಿಂದಕ್ಕೆ ಕೊಂಡು ಹೋಗಿ ನಿಧಾನವಾಗಿ ಇಂದಿನ ವರ್ತಮಾನಕ್ಕೆ ಕರೆತರುವ ಈ ಕೃತಿ ಓದುತ್ತ ಹೋದಂತೆ ಉದ್ದಕ್ಕೂ ಕುತೂಹಲವನ್ನು ಕಾಯ್ದುಕೊಳ್ಳುತ್ತ ಅಲ್ಲಿ ಚರ್ಚಿತವಾದ ವಿಷಯಗಳ ಬಗ್ಗೆ ನಮ್ಮನ್ನು ಗಂಭೀರವಾದ ಚಿಂತನೆಗೆ ಹಚ್ಚುತ್ತದೆ.

ಪಶ್ಚಿಮದಲ್ಲಿ ಪ್ರಾಚೀನ ನಾಗರಿಕತೆಯ ಉಗಮಸ್ಥಾನಗಳು ಗ್ರೀಸ್ ಮತ್ತು ರೋಮ್. ಕ್ರಿ.ಪೂ. 8 ಮತ್ತು 12ನೆಯ ಶತಮಾನಗಳ ಮಧ್ಯೆ ಬದುಕಿದ್ದನೆಂದು ಹೇಳಲಾಗುವ ಮಹಾಕವಿ ಹೋಮರ್ ( ಹೋಮರನ ಕಾಲ ಮತ್ತು ಕಾವ್ಯರಚನೆಗಳ ಬಗ್ಗೆ ವಿವಾದಗಳಿವೆ) ರಚಿಸಿದ ಮಹಾಕಾವ್ಯಗಳು ‘ಇಲಿಯಡ್’ ಮತ್ತು ‘ಒಡಿಸ್ಸಿ’ . ಮನುಷ್ಯನ ಬದುಕಿನಲ್ಲಿ ನಡೆಯ ಬಹುದಾದ ವಾಸ್ತವ ಸಂಗತಿಗಳಿಗೆ ಅತಿಮಾನುಷ ಸ್ಪರ್ಶವನ್ನು ಕೊಟ್ಟು, ಅತಿಮಾನುಷ ಪಾತ್ರಗಳನ್ನೂ ಸೇರಿಸಿಕೊಂಡು ಹೆಣೆದ ಕಥಾನಕದಲ್ಲಿ ಹೆಣ್ಣು-ಮಣ್ಣು-ಅಧಿಕಾರಗಳಿಗಾಗಿ ನಡೆದ ಯುದ್ಧಗಳು ಹತ್ತಾರು ಅಪ್ರತಿಮ ವೀರರ ಭಾಗವಹಿಸುವಿಕೆ, ಅವರ ಶೌರ್ಯಪ್ರದರ್ಶನ, ಮತ್ತು ಸಾಹಸ ಕಥನಗಳು ಇಲ್ಲಿ ಮುಖ್ಯವಾಗುತ್ತವೆ. ಹೋಮರನ ಕಾವ್ಯಗಳು ಮೌಖಿಕವಾಗಿಯೇ ಪ್ರಚಾರ ಪಡೆದು ಅವನ ಮರಣಾನಂತರ ಸಾಮೂಹಿಕ ಪ್ರಯತ್ನದಲ್ಲಿ ಗ್ರಂಥರೂಪಕ್ಕೆ ಬಂದವೆಂಬ ಪ್ರತೀತಿಯಿದೆ. ಕ್ರಿ.ಪೂ.5ನೆಯ ಶತಮಾನದಲ್ಲಿ ಗ್ರೀಸಿನಲ್ಲಿ ಏಸ್ಕೈಲಸ್. ಸೋಫೋಕ್ಲಿಸ್, ಯೂರಿಪಿಡಿಸ್ ಎಂಬ ನಾಟಕಕಾರರು ಹೋಮರನ ಕಾವ್ಯಗಳ ಆಧಾರದ ಮೇಲೆಯೇ ತಮ್ಮ ನಾಟಕಗಳನ್ನು ರಚಿಸುತ್ತಾರೆ. ಮುಂದೆ ಕ್ರಿ.ಪೂ. ಒಂದನೇ ಶತಮಾನದಲ್ಲಿ ರೋಮ್‍ನಲ್ಲಿ ಹುಟ್ಟಿದ ಮಹಾಕವಿ ವರ್ಜಿಲ್ ಹೋಮರನ ಕಾವ್ಯದಿಂದ ಪ್ರಭಾವಿತಗೊಂಡು ಮಹಾಕಾವ್ಯ ರಚಿಸಬೇಕೆಂದು ತನ್ನ ಬದುಕಿನ ಆರಂಭದಿಂದಲೇ ಕನಸು ಕಂಡ. ಕೃಷಿ ಮತ್ತು ಜೇನು ಸಾಕಣೆಯ ಬಗ್ಗೆ ಕಾವ್ಯ ರಚಿಸಿದ ಮೊದಲ ಕವಿಯೆಂಬ ಹೆಸರು ವರ್ಜಿಲ್‍ಗೆ ಇದೆ. ಗಣಿತ, ತತ್ವಶಾಸ್ತ್ರ, ವೈದ್ಯಕೀಯ, ಧರ್ಮ, ಕಾನೂನು ಮೊದಲಾದ ವಿಷಯಗಳಲ್ಲಿ ಆತನಿಗೆ ಪರಿಣತಿಯಿತ್ತು. ಹೀಗಾಗಿ ಆತನ ಒಟ್ಟು ವ್ಯಕ್ತಿತ್ವದ ಬಗ್ಗೆಯೇ ಜನರಿಗೆ ಅಪಾರ ಆಕರ್ಷಣೆಯಿತ್ತು. ಆತನ ಮೊದಲ ಕೃತಿ ‘ಬ್ಯೂಕೋಲಿಕಾ’ ( ದನಗಾಹಿಯ ಪದ್ಯಗಳು) ದನಗಾಹಿಗಳ ಮತ್ತು ಕುರುಬರ ಪ್ರಣಯ ಜೀವನದ ಬಗೆಗೆ ಆಗಿತ್ತು. ಎರಡನೆಯ ಕೃತಿ ‘ಜೋರ್ಜಿಕಾ’ ( ಕೃಷಿಬದುಕಿನ ಪದ್ಯಗಳು) ಹೋಮರನ ಛಂದೋಶೈಲಿಯನ್ನು ಬಳಸಿ ಜೇನು ವ್ಯವಸಾಯ, ಹೈನುಗಾರಿಕೆ, ಪ್ರಾಣಿ ಸಾಕಾಣಿಕೆಗಳ ಬಗ್ಗೆ ವರ್ಜಿಲ್ ಬರೆದ 2000 ಸಾಲುಗಳ ಕಾವ್ಯವಾಗಿತ್ತು. ಈ ರಚನೆಗಳಿಂದ ಆತ ರೋಮನ್ ಸಾಮ್ರಾಜ್ಯದ ‘ಕವಿಶ್ರೇಷ್ಠ’ ಎಂಬ ಬಿರುದಿಗೆ ಪಾತ್ರನಾದ. ಆತ ತನ್ನ ಬದುಕಿನ ಕೊನೆಗಾಲದಲ್ಲಿ ¨ರೆದ ಮಹಾಕಾವ್ಯ ‘ಈನಿಡ್’ ಗದ್ಯ-ಪದ್ಯಗಳ ಒಂದು ಸಂಯುಕ್ತ. ಇದು 9000 ಸಾಲುಗಳ ಮತ್ತು 12 ಪುಸ್ತಕಗಳಿರುವ ಒಂದು ಮಹಾನ್ ಕೃತಿ. ಇದರ ನಾಯಕ ಈನಿಯಾಸ್ ರಾಮಾಯಣದ ಶ್ರೀರಾಮನಂತೆ ಓರ್ವ ಆದರ್ಶ ಪುರುಷ. ಈ ಕೃತಿಯಲ್ಲಿ ಪಶ್ಚಿಮದ ಸಾಂಸ್ಕೃತಿಕ ಬದುಕನ್ನೇ ಮುಂದೆ ರೂಪಿಸುವ ಕ್ರೈಸ್ತಮತದ ಆಗಮನದ ಸೂಚನೆಯೂ ಇದೆ.


ಕ್ರಿ.ಶ.1265ರಲ್ಲಿ ಇಟಲಿಯ ಫ್ಲಾರೆನ್ಸ್ ನಲ್ಲಿ ಹುಟ್ಟಿದ ಡಾಂಟೆ ತನ್ನ ಬದುಕಿನುದ್ದಕ್ಕೂ ಕೌಟುಂಬಿಕ ಮತ್ತು ವೈಯಕ್ತಿಕ ಬದುಕಿನಲ್ಲಿ ಸಂಭವಿಸಿದ ದುರಂತಗಳಿಂದಾಗಿ ತೀವ್ರ ನೋವು ಅನುಭವಿಸಿದ ಕವಿ. ಆದರೆ ತನ್ನ ಮಹಾಕಾವ್ಯವಾದ ‘ ಡಿವೈನ್ ಕಾಮೆಡಿ’ಯಲ್ಲಿ ಇವೆಲ್ಲವನ್ನೂ ಆತ ಅಡಗಿಸಿದ. ಆತನಿಗಿಂತ ಹಿಂದೆ ಇದ್ದ , ಕ್ರೈಸ್ತ ಧರ್ಮಕ್ಕೆ ದೈವೀಕ ಹಿನ್ನೆಲೆಯನ್ನೊದಗಿಸಿ ಕೊಡುವುದರಲ್ಲಿ ಮುಂಚೂಣಿ ಪಾತ್ರ ವಹಿಸಿದ್ದ, ಥಾಮಸ್ ಅಕ್ವಿನಾಸ್‍ನಿಂದ ಈ ಕಾವ್ಯಕ್ಕೆ ಬೇಕಾದ ಚೌಕಕಟ್ಟನ್ನು ಆತ ಪಡೆದುಕೊಂಡ. ಸ್ವರ್ಗದಲ್ಲಿರುವ ದೇವರ ರಾಜ್ಯ ಮತ್ತು ಅದಕ್ಕೆ ರೀತಿ ನೀತಿಗಳು ಭೂಮಿಯ ಮೇಲೂ ಸ್ಥಾಪನೆಯಾಗಬೇಕೆಂಬುದು ಡಾಂಟೆಯ ಉದ್ದೇಶವಾಗಿತ್ತು. ಆಕಸ್ಮಿಕವೆಂಬಂತೆ ಅದು ಆತನ ರಾಜಕೀಯ ನಂಬಿಕೆಯೂ ಆಗಿತ್ತು. ಡಾಂಟೆಯ ಕೃತಿಯೊಳಗಿನ ಈ ಮುಖವು ಆತನನ್ನು ಮಧ್ಯ ಯುಗದ ಅತ್ಯುತ್ತಮ ಕವಿಯನ್ನಾಗಿಸಿತು. ಅಲ್ಲದೆ ರಾಜಕೀಯದೊಳಗೆ ಚರ್ಚ್ ಹಾಗೂ ಪಾದ್ರಿಗಳ ಮಧ್ಯಪ್ರವೇಶದ ವಿರುದ್ಧದ ಆತನ ಹೋರಾಟವು ಆತನನ್ನು ಆಧುನಿಕ ಜಾತ್ಯಾತೀತ ಪ್ರಜಾ ಸತ್ತಾತ್ಮಕ ಯುಗದ ಪ್ರವರ್ತಕನನ್ನಾಗಿಯೂ ಮಾಡಿತು. ಓರ್ವ ಯುಗಪಲ್ಲಟದ ಪ್ರಮುಖ ಕವಿಯಾಗಿ ಕತ್ತಲಯುಗದ ಕೊನೆಯ ಕವಿ ಮತ್ತು ಹೊಸಯುಗದ ಆರಂಭದ ಕವಿಯಾಗಿ –ಯೂರೋಪಿನ ಭಾಷೆ-ಸಂಸ್ಕøತಿಗಳ ಮೇಲೆ ನಿಂತ ಒಂದು ಆಧುನಿಕ ವ್ಯವಸ್ಥೆಯ ವಕ್ತಾರರನನ್ನಾಗಿಸಿತು. ಮುಂದೆ ಬಂದ ಮಹಾಕವಿ ಷೇಕ್ಸ್‍ಪಿಯರ್ ಮಹಾಕಾವ್ಯಗಳನ್ನು ರಚಿಸದಿದ್ದರೂ ಆತನ ಸಾಹಿತ್ಯವು ಸಾಹಿತ್ಯಕ ಹಾಗೂ ಸಾಂಸ್ಕೃತಿಕ ಬೆಳವಣಿಗೆಗೆ ಪೂರಕವಾಯಿತ.ು ಮುಂದೆಪಶ್ಚಿಮದಲ್ಲಿ ಮಹಾಕಾವ್ಯ ರಚಿಸಿದವನು ಮಹಾಕವಿ ಮಿಲ್ಟನ್. ಜೀವನದ ಮಧ್ಯಭಾಗದಲ್ಲಿ ಅಂಧನಾದ ನಂತರವೂ ಕೈಗಾರಿಕಾ ಕ್ರಾಂತಿ ಮತ್ತು ವೈಜ್ಞಾನಿಕ ಕ್ರಾಂತಿಯ ಫಲವಾಗಿ ದೇವರ ಮೇಲಿನ ವಿಶ್ವಾಸವನ್ನು ಕಳೆದುಕೊಳ್ಳಹತ್ತಿದ್ದ ಜನತೆಗೆ ದೇವರ ಮಹಿಮೆಯ ಬಗ್ಗೆ ತಿಳಿಸುವ ‘ಪ್ಯಾರಡೈಸ್ ಲಾಸ್ಟ್ ಮತ್ತು ಪ್ಯಾರಡೈಸ್ ರೀಗೈನ್ಡ್’ ಎಂಬ ಮಹಾಕಾವ್ಯಗಳನ್ನು ಆತ ಬರೆದ. ಇಷ್ಟು ಮಾತ್ರವಲ್ಲದೆ ಟಾಲ್ ಸ್ಟಾಯ್ ಬರೆದ ಮಹಾಕಾವ್ಯದ ಎಲ್ಲ ಗುಣಗಳನ್ನು ಹೊಂದಿರುವ ಮಹಾನ್ ಕಾದಂಬರಿ ‘ವಾರ್ ಅಂಡ್ ಪೀಸ್’ , 20ನೆಯ ಶತಮಾನದ ಮಹಾಕವಿಗಳಾದ ಯೇಟ್ಸ್ ಮತ್ತು ಎಲಿಯಟ್ ಮೊದಲಾದವರ ಕಾವ್ಯಗಳ ಮೂಲಕವೂ ಪೇಟೋ, ಸಾಕ್ರಟಿಸ್ ಮೊದಲಾದ ಹಲವಾರು ತತ್ವಜ್ಞಾನಿಗಳ ತಾತ್ವಿಕ ಚಿಂತನೆಗಳೂ ಸಾಂಸ್ಕೃತಿಕ ವಾಗಿ ಪಶ್ಚಿಮವು ಅದ್ಭುತ ಬೆಳವಣಿಗೆ ಸಾಧಿಸುವಲ್ಲಿ ಬಹುಮುಖ್ಯ ಪಾತ್ರ ವಹಿಸಿದವು.. ಅಲ್ಲಿ ನಡೆದ ನೂರಾರು ವೈಜ್ಞಾನಿಕ ಆವಿಷ್ಕಾರಗಳು ಜಾಗತಿಕ ಮಟ್ಟದಲ್ಲಿ ಪಶ್ಚಿಮವನ್ನು ಎತ್ತರಕ್ಕೆ ಒಯ್ದವು.


ಆದರೆ ಪಶ್ಚಿಮಕ್ಕಿಂತಲೂ ಹೆಚ್ಚು ಸಮೃದ್ಧವಾದ ಸಾಂಸ್ಕೃತಿಕ , ಭಾಷಿಕ ಹಾಗೂ ಸಾಹಿತ್ಯಕ ಹಿನ್ನೆಲೆ ಹೊಂದಿದ ಭಾರತದಲ್ಲಿ ಈ ರೀತಿಯ ಬೆಳವಣಿಗೆ ಯಾಕಾಗಲಿಲ್ಲ ಅನ್ನುವುದು ‘ಪೂರ್ವ ಪಶ್ಚಿಮಗಳಾಚೆ’ ಎಂಬ ಕೃತಿಯಲ್ಲಿ ಕಾಣುವ ಮುಖ್ಯ ಕಾಳಜಿ. ಭಾರತವು ಆಧ್ಯಾತ್ಮಿಕತೆಗೆ ಹೆಸರಾದ ದೇಶ. ವೇದ-ಉಪನಿಷತ್ತುಗಳು ಮನುಷ್ಯನಿಗೆ ಆಧ್ಯಾತ್ಮಿಕ ಮೌಲ್ಯ ಪಾಠಗಳನ್ನು ಮಾತ್ರವಲ್ಲದೆ ಬದುಕುವ ಕಲೆಯನ್ನೂ ಹೇಳಿಕೊಟ್ಟಂಥವು. ವೇದವ್ಯಾಸರಿಂದ ರಚಿತವಾದ ಮಹಾಭಾರತ ಮತ್ತು ವಾಲ್ಮೀಕಿ ವಿರಚಿತ ರಾಮಾಯಣಗಳ ಸಾಂಸ್ಕೃತಿಕ , ಭಾಷಿಕ ಮತ್ತು ಸಾಹಿತ್ಯಕ ಮೌಲ್ಯಗಳು ಪಾಶ್ಚಾತ್ಯ ಮಹಾಕಾವ್ಯಗಳಿಗಿಂತ ಉತ್ತಮ ಗುಣಮಟ್ಟದ್ದಾಗಿವೆ. ನಾಟಕ ಕ್ಷೇತ್ರದಲ್ಲೂ ಕಾಳಿದಾಸನ ನಾಟಕಗಳ ಮೌಲ್ಯ ಜಾಗತಿಕ ಮಟ್ಟದ್ದಾಗಿದೆ. ಆದರೆ ಕಾಲಕ್ರಮೇಣ ನಮ್ಮಲ್ಲಿ ಸಂಸ್ಕೃತದ ಪ್ರಭಾವ ಕಡಿಮೆಯಾಗಿ ಪ್ರಾದೇಶಿಕ ಭಾಷೆಗಳಲ್ಲಿ ಸಾಹಿತ್ಯ ರಚನೆ ಆರಂಭವಾಯಿತು. ಈ ಕೃತಿಯಲ್ಲಿ ಲೇಖಕರು ಕನ್ನಡ ಸಾಹಿತ್ಯದಲ್ಲಿ ಆದಿಯಿಂದ ಆಧುನಿಕ ಕಾಲದ ತನಕ ಏನೇನು ನಡೆಯಿತು ಎನ್ನುವುದರ ಮೂಲಕ ಭಾರತೀಯ ಭಾಷೆಗಳಲ್ಲಿ, (ಅವೆಲ್ಲವೂ ಸಂಸ್ಕೃತ ಮೂಲದಿಂದ ಬಂದವಾದ್ದರಿಂದ) ಹೆಚ್ಚುಕಡಿಮೆ ಒಂದೇ ರೀತಿಯ ರಚನೆಗಳು ಕಾಣಿಸಿಕೊಂಡದ್ದನ್ನು ಉಲ್ಲೇಖಿಸಿದ್ದಾರೆ. ಹೊಸದಾಗಿ ಎಲ್ಲೂ ಯಾವ ಮಹಾಕಾವ್ಯದ ರಚನೆಯೂ ಆಗಿಲ್ಲ. ಪ್ರಾಚೀನ ಕೃತಿಗಳ ಚರ್ವಿತ ಚರ್ವಣವಲ್ಲದೆ ಸೃಜನ ಶೀಲ ಕೃತಿಗಳು ಬರಲಿಲ್ಲ. ಮಹಾಭಾರತ-ರಾಮಾಯಣ ಮೊದಲಾದ ಮಹಾಕಾವ್ಯಗಳನ್ನಾಧರಿಸಿ ಆಯಾ ಕಾಲಗತಿಗೆ ಅನ್ವಯವಾಗುವ ರೀತಿಯಲ್ಲಿ ಭಾಷೆ-ತಂತ್ರ-ಶೈಲಿಗಳಲ್ಲಿ ಬದಲಾವಣೆಗಳನ್ನು ಮಾಡಿಕೊಂಡು ಕನ್ನಡದಲ್ಲಿ ಪಂಪ, ರನ್ನ, ಜನ್ನ, ರಾಘವಾಂಕರಂಥವರ ಕಾವ್ಯಗಳು ಬಂದವು. ಮೊಗಲರ ಆಕ್ರಮಣದ ಕಾಲದಲಿ ಅನೇಕ ಗೊಂದಲ-ಸಂಕಟಗಳು ಉದ್ಭವಿಸಿದರೂ ಅದೇ ಕಾಲದಲ್ಲಿ ಬಸವಣ್ಣನಂಥ ಮಹಾ ವ್ಯಕ್ತಿಯಿಂದ ವಚನ ಚಳುವಳಿಯಂಥ ಮಹತ್ವದ ಚಳುವಳಿ ನಡೆದು ಸಾಕಷ್ಟು ಸೃಜನ ಶೀಲ ರಚನೆಗಳು ಬಂದರೂ ಅವುಗಳಿಗೆ ಜಾಗತಿಕ ಮಟ್ಟ ಹೋಗಲಿ, ರಾಷ್ಟ್ರದಾದ್ಯಂತ ಕೂಡಾ ಪ್ರಚಾರ ಸಿಗಲಿಲ್ಲ. ಮುಂದೆ, ಬ್ರಿಟಿಷರು ದೇಶವನ್ನಾಕ್ರಮಿಸಿ ಇಲ್ಲಿ ಸಾಮ್ರಾಜ್ಯ ವಿಸ್ತರಣೆ ಮಾಡಿದ್ದು ಸಾಹಿತ್ಯ ಸಾಂಸ್ಕೃತಿಕ ಬೆಳವಣಿಗೆಯ ದೃಷ್ಟಿಯಿಂದ ಅತ್ಯಂತ ಪ್ರತಿಕೂಲ ಪರಿಣಾಮ ಬೀರಿತು. ಇಂಗ್ಲಿಷ್ ಭಾಷೆ, ಸಾಹಿತ್ಯ, ಪಾಶ್ಚಾತ್ಯ ಜೀವನ ಶೈಲಿ, ಪಾಶ್ಚಾತ್ಯ ನಾಗರಿಕತೆಗಳು ಭಾರತೀಯರ ಪಾಲಿಗೆ ಒಂದು ವ್ಯಾಮೋಹವಾಗಿ, ಮಾಯೆಯಂತೆ ಅವರನ್ನು ಆವರಿಸಿಕೊಂಡದ್ದು ಬಲು ದೊಡ್ಡ ದುರಂತ. ಅಷ್ಟೇ ಏಕೆ, ಚರಿತ್ರೆ ಬರೆಯುವ ಶೈಲಿಯಲ್ಲೂ ಪಾಶ್ಚಾತ್ಯರನ್ನೇ ಅನುಕರಿಸಲಾಯಿತು. ಪಾಶ್ಚಾತ್ಯ ನಾಗರಿಕತೆಯೇ ಮೇಲುಮಟ್ಟದ್ದು ಎಂಬ ಭಾವನೆ ಎಲ್ಲೆಲ್ಲೂ ಆವರಿಸಿಕೊಳ್ಳಲು ಕಾರಣವೇನು ಎಂಬುದು ಈ ಕೃತಿಯ ಲೇಖಕರ ಮುಖ್ಯ ಪ್ರಶ್ನೆ.


ಆದರೂ ಜಾಗತಿಕ ಮಟ್ಟದಲ್ಲಿ ಇಂದೇಕೆ ಪಾಶ್ಚಾತ್ಯರು ಪೌರ್ವಾತ್ಯರಿಗಿಂತ ಮೇಲ್ಮಟ್ಟದವರು ಎಂಬ ಭಾವನೆ ಬಲಿಯುತ್ತಿದೆ ? ಕುವೆಂಪು ಅವರು ತಮ್ಮ ‘ರಾಮಾಯಣ ದರ್ಶನಂ’ ಮಹಾಕಾವ್ಯವನ್ನು ಆರಂಭಿಸುವಾಗ ಹೋಮರ್, ವರ್ಜಿಲ್, ಡಾಂಟೆ, ಮಿಲ್ಟನರಿಗೆ ವಂದಿಸುತ್ತಾರೆ. ಆದರೆ ಎಷ್ಟು ಮಂದಿ ಭಾರತೀಯ ಕವಿಗಳನ್ನು ಪಾಶ್ಚಾತ್ಯರು ಮೆಚ್ಚುಗೆ-ಗೌರವಗಳೊಂದಿಗೆ ಗುರುತಿಸುತ್ತಾರೆ? ಯೇಟ್ಸ್, ಎಲಿಯಟ್, ಎಮರ್ಸನ್, ವಿಟ್‍ಮನ್‍ರಂಥ ಕವಿಗಳು ಭಾರತೀಯ ಸಾಹಿತ್ಯದ ಉಲ್ಲೇಖವನ್ನು ಅಲ್ಲೋ ಇಲ್ಲೋ ಮಾಡಿದ್ದಾರೆ. ಆದರೆ ಭಾರತೀಯ ಸಾಹಿತಿಗಳು ವಿವಿಧ ಕ್ಷೇತ್ರಗಳಿಗೆ ನಮ್ಮ ಪ್ರಾಚೀನರು ಕೊಟ್ಟ ಕೊಡುಗೆಗಳನ್ನು ಮರೆತು, ತಮ್ಮ ಬರವಣಿಗೆಗಳಿಗೆ ಮಾದರಿಯಾಗಿ ಪಾಶ್ಚಾತ್ಯ ಸಾಹಿತ್ಯ ಸಿದ್ಧಾಂತಗಳನ್ನು ಮತ್ತು ತತ್ವಗಳನ್ನು ತೆಗೆದುಕೊಳ್ಳುವುದನ್ನೇ ತಮ್ಮ ಬೌದ್ಧಿಕತೆಯ ಲಕ್ಷಣವೆಂಬಂತೆ ವರ್ತಿಸುತ್ತಿದ್ದಾರೆ. ಇದಕ್ಕೆ ಪರಿಹಾರವೆಲ್ಲಿ ಎಂಬುದು ‘ಪೂರ್ವ ಪಶ್ಚಿಮಗಳಾಚೆ’ ಕೃತಿಯ ಲೇಖಕರ ಪ್ರಶ್ನೆಯಾಗಿದೆ.


ನಾವು ನಮ್ಮ ದೇಶದ ಆಧ್ಯಾತ್ಮಿಕ ಪರಂಪರೆಯ ಬಗ್ಗೆ, ಹಿಂದೂ ಧರ್ಮದ ಹಿರಿಮೆಯ ಬಗ್ಗೆ , ವಿಜ್ಞಾನ-ತಂತ್ರಜ್ಞಾನಗಳ ಬಳಕೆಯಲ್ಲಿ ನಮ್ಮ ಪ್ರಾಚೀನರು ಮಾಡಿದ ಸಾಧನೆಗಳ ಬಗ್ಗೆ ಹೆಮ್ಮೆ ಪಡುತ್ತೇವೆ. ನಮ್ಮ ಪ್ರಾಚೀನರು ಋಷಿ ಸದೃಶ ಬದುಕನ್ನು ಬಾಳಿದವರು ಎನ್ನುತ್ತೇವೆ. ಈ ರೀತಿಯ ಪರಂಪರೆ ಪಾಶ್ಚಾತ್ಯರದ್ದಲ್ಲವೆಂದು ಅವರ ಬಗ್ಗೆ ಕ್ಷುಲ್ಲಕವಾಗಿ ಮಾತನಾಡುತ್ತೇವೆ. ಆದರೆ ಹೋಮರ್, ವರ್ಜಿಲ್, ಡಾಂಟೆಯಂಥª ಕವಿಗಳಾಗಲಿ, ಸಾಕ್ರಟೀಸ್, ಪ್ಲೇಟೋರಂತಹ ತತ್ವಜ್ಞಾನಿಗಳಾಗಲಿ, ನ್ಯೂಟನ್, ಐನ್‍ಸ್ಟೀನ್‍ರಂತಹ ವಿಜ್ಞಾನಿಗಳಾಗಲಿ ಅಷ್ಟು ಸಾಧನೆ ಮಾಡಲು ಸಾಧ್ಯವಾಗಿದ್ದು ಅವರ ಋಷಿಸದೃಶ ಸಮಾಧಿ ಸ್ಥಿತಿಯಲ್ಲೇ ಅನ್ನುವ ಸತ್ಯ ನಮಗೆ ಗೊತ್ತಿರಬೇಕು. ಇಂದು ಸೃಷ್ಟಿಯಾಗಿರುವ ಸಮಸ್ಯೆಗೆ ನಾವೇ ಹೇಗೆ ಕಾರಣರು ಮತ್ತು ಅದನ್ನು ಬಗೆಹರಿಸುವ ಬಗೆಯೇನು ಎಂಬ ಕುರಿತು ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ ಎಂದು ಈ ಕೃತಿ ನಮ್ಮನ್ನು ಎಚ್ಚರಿಸುತ್ತದೆ. ಲೇಖಕರ ದೃಷ್ಟಿಕೋನ-ಧೋರಣೆಗಳನ್ನು ನಾವು ಒಪ್ಪಿದರೂ ಒಪ್ಪದಿದ್ದರೂ ಇಂತಹ ಒಂದು ವಿಶಿಷ್ಟ ಚಿಂತನೆಯನ್ನು ನಾವು ಸ್ವಾಗತಿಸಬೇಕಾಗಿದೆ.


ಕನ್ನಡದ ಈ ಸಂಶೋಧನಾ ಕೃತಿಯನ್ನು ಇಂಗ್ಲಿಷ್ ಪ್ರೊಫೆಸರ್ ಆಗಿರುವ ಡಾ.ಎನ್.ಎಸ್.ರಾಘವನ್ ಅವರು ಬಹಳ ಸುಂದರವಾದ ವಿದ್ವತ್ಪೂರ್ಣ ಶೈಲಿಯಲ್ಲಿ ಇಂಗ್ಲಿಷ್ ಭಾಷೆಗೆ ಸಹಜವಾದ ಪದಗಳು, ಪದಪುಂಜಗಳು ಹಾಗೂ ನುಡಿಗಟ್ಟುಗಳನ್ನು ಸೂಕ್ತ ಸಂದರ್ಭಗಳಲ್ಲಿ ಬಳಸಿ ಭಾಷಾಂತರಿಸಿದ್ದಾರೆ. ಇದು ಜಾಗತಿಕ ಮಟ್ಟದಲ್ಲಿ ಎಲ್ಲರ ಕೈಸೇರಬೇಕಾದ ಕೃತಿ ಎನ್ನುವುದರಲ್ಲಿ ಸಂದೇಹವಿಲ್ಲ. ಈ ದೃಷ್ಟಿಯಿಂದ ರೂಟ್ಲಿಜ್ ಅನ್ನುವ ಅಂತರ್ರಾಷ್ಟ್ರೀಯ ಪ್ರಕಾಶನ ಸಂಸ್ಥೆಯು ಇದನ್ನು ಪ್ರಕಟಿಸಿದ್ದು ಭರವಸೆಯನ್ನು ಹುಟ್ಟಿಸುತ್ತದೆ.






ಡಾ.ಪಾರ್ವತಿ ಜಿ.ಐತಾಳ್

22 views0 comments
bottom of page