top of page

ಮನೆ ಜಾನಪದ

ಡಾ. ಪೆರ್ಲರ ವಾರಾಂಕಣ

ವಸಂತೋಕ್ತಿ – 7


ಜಾನಪದವು ಹಲವು ನೆಲೆಗಳಲ್ಲಿ ಹಲವು ಸ್ವರೂಪಗಳಲ್ಲಿ ನಮ್ಮ ನಡುವೆ ಇರುತ್ತದೆ. ಅಧ್ಯಯನದ ಸೌಕರ್ಯಕ್ಕಾಗಿ ಅದನ್ನು ಬೇರೆ ಬೇರೆ ಆಯಾಮಗಳಿಂದ ನೋಡಿದಾಗ ಹಲವು ರೋಚಕ ಸಂಗತಿಗಳು ತಿಳಿದು ಬರುತ್ತವೆ.

ಮನೆ ಜಾನಪದವು ಅಂಥವುಗಳಲ್ಲಿ ಒಂದು. ಮನೆ ಜಾನಪದವೆಂದರೆ ವಾಸದ ಮನೆಗಳನ್ನು ಕಟ್ಟಿಕೊಳ್ಳುವುದು ಹೇಗೆ ಮತ್ತು ಮನೆಕಟ್ಟುವ ಕುಶಲಕರ್ಮವು ಸಾವಿರಾರು ವರ್ಷಗಳಲ್ಲಿ ಹೇಗೆ ಬದಲಾವಣೆಗೆ/ ರೂಪಾಂತರಕ್ಕೆ ಒಳಗಾಗುತ್ತ ಬಂತು ಎಂಬುದು.

ಪ್ರಾಗೈತಿಹಾಸದ ಕಾಲದಲ್ಲಿ ಮನುಷ್ಯರು ಗುಹೆಗಳಲ್ಲಿ ಮತ್ತು ಪೊಟರೆಗಳಲ್ಲಿ ವಾಸಿಸುತ್ತಿದ್ದರು. ಅಲ್ಲಿದ್ದ ಕರಡಿ ಹುಲಿ ಸಿಂಹ ಹೆಬ್ಬಾವುಗಳನ್ನು ಓಡಿಸಿ ಗುಹೆ ಪೊಟರೆಗಳನ್ನು ಬೇಕಾದಂತೆ ವಿನ್ಯಾಸಗೊಳಿಸಿ ವಾಸಯೋಗ್ಯ ಮಾಡಿಕೊಳ್ಳುತ್ತಿದ್ದರು. ಬೇಟೆಯಾಡಿ ಜೀವನ ಮಾಡುತ್ತಿದ್ದರು. ಹಲವು ಸಾವಿರ ವರ್ಷಗಳು ಹೀಗೆಯೇ ಕಳೆದವು.

ಮನುಷ್ಯ ನಿಧಾನವಾಗಿ ಹೊಸ ಹೊಸ ನೆಲೆಗಳನ್ನು ಅರಸುತ್ತ ಹೊರಟ. ವಲಸೆ ಒಂದು ಪ್ರಮುಖ ಪ್ರಕ್ರಿಯೆ ಆಯಿತು. ಸಂಜೆಯಾಗುತ್ತಲೂ ಮನೆಯ ಸುತ್ತ ಬೇಲಿ ನಿರ್ಮಿಸಿ ತಾತ್ಕಾಲಿಕ ಗುಡಿಸಲುಗಳನ್ನು ಕಟ್ಟಿಕೊಳ್ಳುವ ಅಗತ್ಯ ತಲೆದೋರಿತು. ಹೀಗೆ ತನ್ನೊಂದಿಗಿದ್ದ ಕುರಿ ಮೇಕೆ ಕೋಳಿ ಜಾನುವಾರುಗಳನ್ನು ಮೃಗಗಳಿಂದ ರಕ್ಷಿಸಿಕೊಳ್ಳತೊಡಗಿದ.

ಗುಡಿಸಲು ಕಾಲಕಾಲಕ್ಕೆ ರೂಪಾಂತರಗೊಳ್ಳುತ್ತ ಬಂದಿತು. ಪರ್ಣಕುಟಿ, ಮುಳಿಹುಲ್ಲಿನ ಗುಡಿಸಲು, ಸೋಗೆ ಹೊದೆಸಿದ ಗುಡಿಸಲು ಮತ್ತು ಸ್ಥಳೀಯವಾಗಿ ಸುಲಭದಲ್ಲಿ ಲಭ್ಯವಿರುವ ಕಚ್ಚಾವಸ್ತುಗಳನ್ನು ಬಳಸಿ ಮನೆ ನಿರ್ಮಿಸಿಕೊಳ್ಳುತ್ತಿದ್ದ.

ಹಲವು ಸಹಸ್ರ ವರ್ಷಗಳು ಹೀಗೆ ದಾಟಿಹೋದ ಮೇಲೆ ಮಣ್ಣಿನ/ಕಲ್ಲಿನ ಗೋಡೆ ಕಟ್ಟಿ ನಾಡಹಂಚು ಹೊದೆಸಿದ ಮನೆಗಳನ್ನು ಕಟ್ಟಿಕೊಳ್ಳತೊಡಗಿದ. ರಕ್ಷಣೆಯ ದೃಷ್ಟಿಯಿಂದ ಒಟ್ಟಾಗಿ ಜೀವಿಸುವ ಕೊಪ್ಪ, ಗುಪ್ಪೆ, ಗ್ರಾಮ, ಅಗ್ರಹಾರ ಮುಂತಾದ ಪರಿಕಲ್ಪನೆಗಳು ಬೆಳೆದು ಬಂದವು.

ಕೆಲವು ನೂರು ವರ್ಷಗಳ ಬಳಿಕ ಫ್ಯಾಕ್ಟರಿ ಹಂಚು ಮತ್ತು ಅನಂತರ ತಾರಸಿಮನೆಗಳ ಪರಿಕಲ್ಪನೆ ಬೆಳೆದು ಬಂತು. ತಲೆಯ ಮೇಲೆ ಕುಸಿದು ಬಿದ್ದೀತೆಂಬ ಭಯದಿಂದ ಅಲ್ಲಲ್ಲಿ ಕಂಬಗಳೇ ಇಲ್ಲದ ತಾರಸಿ ಮನೆಯ ಒಳಗೆ ಹೋಗಲು ಮೊದಮೊದಲು ಜನ ಹೆದರುತ್ತಿದ್ದರಂತೆ! ಮಂಗಳೂರಿನ ತೊಂಬತ್ತು ವರ್ಷ ವಯಸ್ಸಿನ ನಿವೃತ್ತ ಎಂಜಿನಿಯರ್ ಒಬ್ಬರನ್ನು ಒಂದೆರಡು ದಶಕಗಳ ಹಿಂದೆ ‘ಕರಾವಳಿಯ ಕರೆಗಾಳಿ’ ಎಂಬ ಕಾರ್ಯಕ್ರಮಕ್ಕೆ ಮಂಗಳೂರು ಆಕಾಶವಾಣಿಗಾಗಿ ಸಂದರ್ಶನ ನಡೆಸಿದ್ದೆ. 1954 ರಲ್ಲಿ ಮಂಗಳೂರಿನ ಕೂಳೂರು ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಸೇತುವೆ ನಿರ್ಮಿಸಿದಾಗ ಅದು ಕುಸಿದು ಬಿದ್ದೀತೆಂಬ ಭಯದಿಂದ ಬಹಳ ಕಾಲ ಅದರಲ್ಲಿ ಯಾರೂ ಒಡಾಡುತ್ತಿರಲಿಲ್ಲವಂತೆ! ಈ ಭಾಗದಲ್ಲಿ ನದಿಗೆ ಸೇತುವೆ ಎಂಬ ಪರಿಕಲ್ಪನೆ ಆಗ ಹೊಸದು. ಜನರಿಗೆ ಗೊತ್ತಿರಲಿಲ್ಲ. ಅದೇ ರೀತಿ ಹಂಪನಕಟ್ಟೆಯಲ್ಲಿದ್ದ ‘ಮೋಹಿನಿ ವಿಲಾಸ’ ಎಂಬ ಹೊಟೇಲು ಹಂಚು ತೆಗೆದು ಮೊಟ್ಟಮೊದಲು ತಾರಸಿ ಕಟ್ಟಡವಾಗಿ ಬದಲಾದಾಗ ಅದರ ಒಳಗೆ ಗಿರಾಕಿಗಳು ಹೋಗುತ್ತಿರಲಿಲ್ಲವಂತೆ! ಹೊರಗೆ ನಿಂತೇ ಚಹಾ ಕಾಫಿ ಕುಡಿಯುತ್ತಿದ್ದರು. ಊಟ ಕೂಡ ಹೊರಗೆ ಮಾಡುತ್ತಿದ್ದರಂತೆ. ಆಮೇಲೆ ನಿಧಾನವಾಗಿ ಬಳಕೆ ಆಯಿತು.

ಈಗ ಎಲ್ಲೆಲ್ಲೂ ತಾರಸಿ ಮನೆಗಳು ತುಂಬಿ ಹೋಗಿವೆ. ನಗರಗಳಲ್ಲಿ ಐವತ್ತು ನೂರು ಮಹಡಿಯ ಫ್ಲ್ಯಾಟ್ ಕಟ್ಟಡಗಳು ಸರ್ವೇಸಾಮಾನ್ಯ ಆಗಿದೆ. ಆಗಾಗ ಅಗ್ನಿಪರ್ವತಗಳು ಸ್ಫೋಟಗೊಳ್ಳುವ ಜಪಾನ್ ನಂತಹ ದೇಶದಲ್ಲಿ ಒಂದೇ ದಿನದಲ್ಲಿ ಕಟ್ಟಿ ನಿಲ್ಲಿಸಬಲ್ಲ ಕಬ್ಬಿಣ/ಪ್ಲಾಸ್ಟಿಕ್ ವಸ್ತುಗಳಿಂದ ನಿರ್ಮಿಸಲ್ಪಟ್ಟ ಮನೆಗಳೂ ಇವೆ.

ಪ್ರತಿಯೊಂದು ಸಮುದಾಯವೂ ತಮ್ಮ ವಾಸಕ್ಕೆ ಅನುಕೂಲವಾದ ಮನೆಗಳನ್ನು ಕಟ್ಟಿಕೊಳ್ಳುವುದು ಒಂದು ಕುಶಲಕರ್ಮ ಮತ್ತು ಅದು ಮನೆ ಜಾನಪದ ಎಂದು ಕರೆಸಿಕೊಳ್ಳುತ್ತದೆ.

ಉಷ್ಣವಲಯಗಳಲ್ಲಿ ವಾಸಿಸುವ ಮನುಷ್ಯರ ಮನೆಗಳು ಒಂದು ರೀತಿಯಾದರೆ ಶೀತಪ್ರದೇಶಗಳಲ್ಲಿ ವಾಸಿಸುವವರದು ಇನ್ನೊಂದು ರೀತಿ. ಹಿಮಾಲಯ ಪರ್ವತಪ್ರಾಂತಗಳಲ್ಲಿ ಎಸ್ಕಿಮೋ ಜನರು ಹಿಮಗಡ್ಡೆಗಳನ್ನು ಕೊರೆದು ನೆಲಮಾಳಿಗೆಯಲ್ಲಿ ‘ಇಗ್ಲೂ’ ಎಂಬ ಮನೆಗಳನ್ನು ನಿರ್ಮಿಸಿಕೊಳ್ಳುತ್ತಾರೆ.

ಇನ್ನು ಪ್ರಕೃತಿಸ್ನೇಹಿಯಾಗಿರಬೇಕೆಂಬ ಕಾರಣಕ್ಕೆ ಭಾರತೀಯರು ಬಳಕೆಗೆ ತಂದ ವಾಸ್ತುಪರಿಕಲ್ಪನೆ, ಯುರೋಪಿಯನ್ ಸಂಸ್ಕೃತಿಗೆ ಅನುಗುಣವಾದ ಮುಖಮಂಟಪವುಳ್ಳ ಮನೆ ಇತ್ಯಾದಿ ವೈಶಿಷ್ಟ್ಯಗಳು ಇದ್ದೇ ಇವೆ.

ಪ್ರದೇಶ, ಜನಜೀವನ, ಸಂಸ್ಕೃತಿ, ಹವಾಮಾನ, ಕಚ್ಚಾವಸ್ತುಗಳ ಲಭ್ಯತೆ ಇತ್ಯಾದಿಗಳನ್ನು ಅನುಸರಿಸಿ ಮನೆಗಳ ಸ್ವರೂಪ ಸ್ಥಳದಿಂದ ಸ್ಥಳಕ್ಕೆ ವ್ಯತ್ಯಾಸ ಆಗಬಹುದು. ಆದರೆ ವಾಸಕ್ಕೆ ಮನೆಯೊಂದು ತೀರಾ ಅಗತ್ಯ.

ಮನೆನಿರ್ಮಾಣವು ನಮ್ಮ ನಾಗರಿಕತೆಯೊಂದಿಗೆ ಬೆಳೆದು ಬಂದ ಒಂದು ವಿಜ್ಞಾನ. ಅದು ನಮ್ಮೊಂದಿಗೆ ಮುಂದುವರಿಯುತ್ತ ಇರುತ್ತದೆ. ತಮ್ಮ ಅಗತ್ಯಕ್ಕೆ ಅನುಗುಣವಾದಂತೆ ಅದನ್ನು ಬದಲಾಯಿಸಿಕೊಂದು ಬಂದ ಮನುಷ್ಯನ ಜಾಣತನವನ್ನು ಮೆಚ್ಚಬೇಕು.

ಮುಂದೆ ಯಾವ ರೀತಿಯ ಮನೆಗಳು ಇರಬಲ್ಲವು ಎಂಬುದು ಕುತೂಹಲದ ವಿಷಯ. ಮನೆ ಜಾನಪದದ ಬಗ್ಗೆ ಇದುವರೆಗೆ ಯಾರೂ ಗಂಭೀರವಾಗಿ ಅಧ್ಯಯನ ಮಾಡಿದಂತಿಲ್ಲ. ಇದೊಂದು ಒಳ್ಳೆಯ ವಿಷಯ. ಸರಿಯಾದ ಅಧ್ಯಯನ ಆಗಬೇಕಾಗಿದೆ.


ಡಾ.ವಸಂತಕುಮಾರ ಪೆರ್ಲ



27 views0 comments
bottom of page