top of page

ಮಗಳಿಲ್ಲದ ನನಗೆ ಮಗಳು

ಮಗಳಿಲ್ಲದ ನನಗೆ

ಮಗಳನ್ನು ಕಲ್ಪಿಸಿಕೊಳ್ಳುವ ಸುಖ

ಹೂವು ಅರಳುವ ಹೊತ್ತು ಮರ ಚಿಗುರುವ ಹೊತ್ತು

ಗರಿಕೆ ಹುಲ್ಲಿನ ಮೇಲೆ ಮಂಜು ಕೂರುವ ಹೊತ್ತು



ನವಿಲ ಗರಿಯೇ ಎನ್ನುವಂತೆ ಅವಳ ನಗು

ಗರಿ ಬಿಚ್ಚಿರಲಿ ಅಥವಾ ಬಿಚ್ಚದಿರಲಿ

ದಾಸವಾಳವೇ ಮುಖವಾದ ಮುಖ

ಅದಕ್ಕೆ ಇಳಿದು ಬಂದಿದ್ದಂತೆ ನಕ್ಷತ್ರ-ಕಣ್ಣು


ಅತ್ತವಳಲ್ಲ ಚಿಕ್ಕವಳಿದ್ದಾಗಲೂ, ಅವಳ ತಾಯಿ

ಕಟ್ಟಿಗೆಯ ಒಲೆಯ ಮುಂದೆ ಹನಿಗಣ್ಣು ಪಡೆದಾಗ

ಇವಳ ಕಣ್ಣಂಚಿನಲ್ಲಿ ನೀರು, ಇದಿರು ದೋಸೆ ಕಾವಲಿ

ಅಲ್ಲಿ ಹುಟ್ಟಿದ ಹಾಗೆ ಇವಳ ಪಟ ಪಟ ಮಾತು.


ಅಮ್ಮ ಎನ್ನುವುದು ಆಮೇಲೆ ಅಪ್ಪನಾಗಿ

ಇವಳು ನನ್ನ ಕೊರಳ ಬಳಸಿ ಮುದ್ದಿಸುವಾಗ

ದೇವರ ಕೋಣೆಯ ನಂದಾ ದೀಪದ ಎಣ್ಣೆ

ನನ್ನ ಎದೆಯಿಂದಲೇ ಹರಿದ ಹಾಗೆ ಅಲ್ಲಿಗೆ.


ಇರುವುದನ್ನು ಇರುವ ಹಾಗೆ ನೋಡುವ ಸುಖ

ಕೊಟ್ಟವಳಲ್ಲ ಈಕೆ ಇರದುದನ್ನು ಎತ್ತಿಕೊಟ್ಟಂತೆ ಕೈಗೆ

ಬಂದು ಹಾರಿ ಹೋಗುವಳು ಆಕಾಶಕ್ಕೆ

ನೆಲದ ಸ್ಪರ್ಶ ಇಲ್ಲದ ಹೂವು ಗಿಡದಲ್ಲಿ ಅರಳಿದಂತೆ.


ಅದಕ್ಕೇ ಇರಬೇಕು ಒಬ್ಬಂಟಿ ಮಲಗಿದರೆ ರಾತ್ರೆ

ನನ್ನ ತೊಡೆಮೇಲೆ ಕಾಲಿಟ್ಟು ಮಾಡಿದಂತೆ ನಿದ್ದೆ

ಇವಳು ಇರುತ್ತಾಳೆ ಸಮೀಪ, ಆಮೇಲೆ ಬೆಳ್ಳಂಬೆಳಗ್ಗೆ

ಇಲ್ಲವಾದರು, ನಾನು ಇರುತ್ತೇನೆ ಅಪ್ಪನೆಂದೇ ಅವಳಿಗೆ


ನಾ.ಮೊಗಸಾಲೆ

27 views0 comments
bottom of page