top of page

ಮುತ್ತು

Updated: Jun 10, 2021


ಮನೆಮುಂದಿನ ದಾಸವಾಳದ ಗಿಡದಲ್ಲಿ

ದಿನಾ ಇರುತ್ತದೆ ಹತ್ತಾರು ಮೊಗ್ಗು

ಬೆಳಿಗ್ಗೆ ತನ್ನನ್ನು ಒಪ್ಪಿಸಿಕೊಳ್ಳುವ ಹಾಗೆ

ನನಗೆ ಕಾಣುವುದು ಒಂದೇ ಹೂವು


ಇವಳು ಕೊಯ್ಯುತ್ತಾಳೆನೋ ಪ್ರತಿದಿನ ಸಂಜೆ

ಮೊಗ್ಗುಗಳ ಮರುದಿನದ ಪೂಜೆಗೆ

ಇರಲಿ ಬಿಡಿ ಎಂಬಂತೆ ಸುಮ್ಮನಿದ್ದೆನು, ಒಮ್ಮೆ

ಕೇಳಬೇಕೆನಿಸಿತು ಇವಳ, ಕೇಳಿದೆ.


‘ಇಲ್ಲ ! ನಾನು ಎಲ್ಲವನ್ನೂ ಕೊಯ್ಯುತ್ತೇನೆ

ಹೇಗೆ ಉಳಿದೀತು ಹೇಳಿ ಒಂದು ಮೊಗ್ಗು ?’

ಎನ್ನುತ್ತ ನಕ್ಕು ಹೋದಳು ಒಳಗೆ, ನನ್ನಲ್ಲಿ

ಬಂತು ಸಂಶಯ: ಯಾಕೆ ಹೀಗೆ ಇವಳು ?


ಸಂಜೆ ಬೇಗನೆ ಬಂದು ಅಂಗಳದಲಿ ನಿಂತು

ನೋಡಿದೆನು ಇವಳು ಹೂ ಕೊಯ್ಯುವುದನು

ಕೊಯ್ಯುತ್ತ ಕೊಯ್ಯುತ್ತ ಬಿಟ್ಟಳು ಒಂದು ಮೊಗ್ಗು

ನಾಳೆ ಅರಳಲಿ ಅದು ನನಗೆ ಎಂದು !


ರಾತ್ರೆ ಬರಸೆಳೆದು ಕೇಳಿದೆ ‘ಯಾಕೆ ಸುಳ್ಳು

ಹೇಳುತ್ತಿ ಈ ವಯಸ್ಸಿನಲಿ ನನಗೆ ?

ಆಕೆ ಹೇಳಿದಳು ಬೆಳಗ್ಗೆದ್ದು ನಾನು

ಕೊಡಲಾಗುವುದೇ ನಿಮಗೆ ಮುತ್ತು


ಡಾ.ನಾ.ಮೊಗಸಾಲೆ



ಕನ್ನಡಮ್ಮನ ಮೊಗಸಾಲೆಯಲ್ಲಿ ಜೀವನ ಪ್ರೀತಿ,ಸಾಹಿತ್ಯದ ಪ್ರೀತಿಯನ್ನು ಮೊಗೆಮೊಗೆದು ಬಡಿಸಿದವರು ಡಾ.ನಾ.ಮೊಗಸಾಲೆ.ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಎಂದು ಮರೆಯಲಾಗದ ಕವಿ,ಕಾದಂಬರಿಕಾರ,ಕತೆಗಾರ,ವಿಮರ್ಶಕ,ಪ್ರಬಂಧಕಾರ,ಕಾಂತಾವರ ಕನ್ನಡ ಸಂಘದ ರೂವಾರಿ,ಅಲ್ಲಮ ಪ್ರಭು ಪೀಠದ ಸಂಸ್ಥಾಪಕ, ಮೂಡುಬಿದ್ರೆಯ ವರ್ಧಮಾನ ಪ್ರಶಸ್ತಿ ಪೀಠದ ಸಂಚಾಲಕ ಸಾಹಿತ್ಯ ಪರಿಚಾರಿಕೆಯನ್ನು ವೃತವೆಂದು ನಂಬಿ ನಡೆದ ಸಂಘಟಕ.ಬಹುಸಂಸ್ಕೃತಿಯನ್ನು ನೆಚ್ಚಿಕೊಂಡು ಜೀವ ವೈವಿಧ್ಯದ ಉಳಿವಿಗಾಗಿ ಶ್ರಮಿಸುತ್ತಿರುವ ಜನಪರ ವೈದ್ಯ.ಹದಿನಾಲ್ಕು ಕಾದಂಬರಿ,ಹತ್ತು ಕವನ ಸಂಕಲನ,ನಾಲ್ಕು ಕತಾ ಸಂಗ್ರಹ,ಐದು ವೈದ್ಯಕೀಯ ಗ್ರಂಥಗಳ ರಚನೆ,ಹತ್ತಕ್ಕೂ ಮೇಲ್ಪಟ್ಟ ಗ್ರಂಥ ಸಂಪಾದನೆ,ಮೂರು ಪತ್ರಿಕೆಗಳಲ್ಲಿ ಏಳು ವರುಷ ಆರೋಗ್ಯ ಸಲಹೆ ಅಂಕಣ ನನ್ನದಲ್ಲದ್ದು ಕಾದಂಬರಿ,ಇದಲ್ಲ ಇದಲ್ಲ ಕವನ ಸಂಗ್ರಹಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ,ಸಾಹಿತ್ಯ ಹಾಗು ಸಾಂಸ್ಕೃತಿಕ ಸಾಧನೆಗಾಗಿ ೨೦೦೪ ರಲ್ಲಿ ರಾಜ್ಯೋತ್ಸವ ಪ್ರಶಸ್ತಿ,ಡಿ.ಎಸ್.ಕರ್ಕಿ,ಮಾಸ್ತಿ,

ಶಿವರಾಮ ಕಾರಂತ, ಕಡಂಗೋಡ್ಲು,ದಿನಕರ ದೇಸಾಯಿ ಮೊದಲಾದವರ ಹೆಸರಿನ ಪ್ರಶಸ್ತಿಗಳು,ಬಯಲು ಬೆಟ್ಟ ಅವರ ಆತ್ಮ ಕತೆ.

ಕಾಂತಾವರ ಕನ್ನಡ ಸಂಘದ ಕೃತು ಶಕ್ತಿಯಾಗಿರುವ ನಾ.ಮೊಗಸಾಲೆ ಕನ್ನಡ ನಾಡಿನ ಕಾಂತ ಶಕ್ತಿಯೇ ಸರಿ. ಅವರ ಪ್ರೀತಿಯ ಚುಂಬಕ ಗಾಳಿಯ ಸೆಳೆತಕ್ಕೆ ಸಿಗದೆ ಇದ್ದವರು ವಿರಳ. ಅವರು ನಮ್ಮ ಬೇಡಿಕೆಯನ್ನು ಮನ್ನಿಸಿ ತಮ್ಮ ಮುತ್ತು ಕವನವನ್ನು ನಮ್ಮ ಪತ್ರಿಕೆಗೆ ಕಳಿಸಿ ನಮ್ಮನ್ನು ಆಶೀರ್ವದಿಸಿದ್ದಾರೆ.



167 views0 comments
bottom of page