top of page

ಭಾವಭಾಗೀರಥಿ

ವಾಕ್ಪಥ: ಅಭಿಜಾತ ಪ್ರಕಾಶನದವರು ಹೊರತಂದ ಒಂದು ಕವನ ಸಂಕಲನ ದೊಡ್ಡರಂಗೇಗೌಡರ “ಭಾವಭಾಗೀರಥಿ”. ಭಾಗೀರಥಿ ಭಾರತದ ಒಂದು ಪವಿತ್ರ ನದಿ. ಅದರಲ್ಲಿ ಮಿಂದೇಳುವ ಸಾವಿರ ಸಾವಿರ ಶ್ರದ್ಧಾವಂತ ಸಾಧು ಸಂತರು ದೇಶೀಯ ವಿದೇಶೀಯ ಅಸಾಮಾನ್ಯರು ಮತ್ತು ಸಾಮಾನ್ಯರು ಧನ್ಯತಾ ಭಾವದಿಂದ ಮತ್ತೆ ಮತ್ತೆ ಗಂಗಾ ತಟಕ್ಕೆ

ಮಿಂದೇಳಲೆಂದು ಹೋಗುವುದು ಜನಜನಿತ ಸಂಗತಿ. ಗಗನಗಾಮಿಯಾಗಿ ಪ್ರವಹಿಸಿ ಶಿವನ ಶಿರದಲ್ಲಿ ನೆಲೆಸಿ ಬಿಂದು ಬಿಂದುವಾಗಿ ಜಟೆಯಿಂದ ನೆಲಕ್ಕೆ ಇಳಿಯುವ ಗಂಗೆ ಬಿಂದುವಾಗಿಯೂ ಸಿಂಧುವಾಗಿಯೂ ಬದುಕನ್ನು ಉದ್ಧರಿಸುವ ಶ್ರೀಹರಿಪಾದ ಸಂಜಾತೆ. ಶಬ್ದ ತನ್ಮಾತ್ರೆಯ ಕಡಲಿನ ಒಡಲ ಬೆಳಕಿನ ಬೆಡಗಿ ಇವಳು. ಹರಿಹರ ಸಂಬಂಧ ಸೇತುವಾಗಿ

ಬೆಳಗುವ ಇವಳು ಕೇವಲ ನಕ್ಷತ್ರಪುಂಜ, ಆಕಾಶಗಂಗೆ, ನೀಹಾರಿಕೆಗಳ ಮಾಲೆಯಲ್ಲ. ಅದೊಂದು ಮಾನವನ ಅಸೀಮ ಆಶಯಗಳಿಗೆ ತೆರೆದುಕೊಂಡ ಮುಗಿವಿರದ ಮಾಂಗಲ್ಯದ ಪ್ರತಿಮೆಯಾಗಿದ್ದು ದೊಡ್ಡರಂಗೇಗೌಡರಂತಹ ಕವಿಸಹೃದಯಿಗಳಿಗೆ ತೆರೆದುಕೊಳ್ಳುವ ಊಹಾತೀತವೂ ನಿರಾಕಾರವೂ ಆದ ವಾಕ್ಪಥ.


ಪ್ರಕೃತಿಸಾಂಗತ್ಯ: ನಾವು ಕಂಡಂತೆ ನದಿಮೂಲ ಗಿರಿಶೃಂಗದಲ್ಲಿ. ಅಲ್ಲಿಂದ ಅದು ಸಾಗರಗಾಮಿಯಾಗಿ ಗಿರಿ ವನ ಪರ್ವತಗಳಲ್ಲಿ ಹಸಿರನ್ನು ಹಾಸಿ ಬಯಲ ಹೊಲ ಗದ್ದೆಗಳ ತೆನೆಯಾಡಿಸಿ ಸಕಲ ಜೀವರಾಶಿಯ ಜೀವನೋಪಾಯದ ಆಧಾರವಾಗಿ ಜೀವನದಿ ಎನ್ನಿಸಿಕೊಳ್ಳುತ್ತದೆ. ಪ್ರತಿಭಾಜನ್ಯ ಕಾವ್ಯವಾಹಿನಿ

ಮನದ ಬೆಳಸಾಗಿ ತನ್ನ ಉದ್ಧರಿಸುವ ವಿಶೇಷ ಗುಣಗಳಿಂದ ಭಾವ ಭಾಗೀರಥಿಯಂತೆ ಮನುಷ್ಯಾಂತರ್ಗತ ಭಾವಲೋಕದ ಕಾವ್ಯದ ಸಿರಿಗೆ ಕಾರಣವಾಗುವುದನ್ನು ಕವಿ ದೊಡ್ಡರಂಗೇಗೌಡರು ಗಗನದಾಂಗಣದ ಭಾಗೀರಥಿಯೊಂದಿಗೆ ಭಾವಿಸಿ ಧ್ಯಾನಿಸುತ್ತಾರೆ. ಕಾವ್ಯ ಭಾಗೀರಥಿ ಉಕ್ಕಿ ಹರಿದಾಗ ಹೃದಯದ ಸಿರಿ. ಅದೇ ನದಿ ಪರ್ವತಶಿಖರದಲ್ಲಿ ಉಕ್ಕಿ ಹರಿದಾಗ ಭೂತಾಯ

ಹಸಿರುಡುಗೆ, ನೆಲದಲ್ಲಿ ಗರಿಕೆ, ಮರದಲ್ಲಿ ಚಿಗುರು. ಸಹಜತೆ ಪ್ರಕೃತಿಯ ಉಲ್ಲಾಸದ ಕೇಂದ್ರಬಿಂದು. ಪಶು ಪಕ್ಷಿಗಳ ಜೀವಪ್ರಪಂಚ ಹಸಿರೊಂದಿಗೆ ಬೆಸೆದಿದ್ದು ಒಂದನ್ನು ಬಿಟ್ಟು ಇನ್ನೊಂದು ಇರಲಾರದ ಅವಿನಾಭಾವ ಅಲ್ಲಿ ನೈಸರ್ಗಿಕವಾದದ್ದು. ನದಿ ಹರಿಯುವಲ್ಲಿ ಜುಳು ಜುಳು ನಾದ. ಅದು ಧುಮ್ಮಿಕ್ಕುವಲ್ಲಿ ಆರ್ಭಟದ ಅಬ್ಬರ, ಮೈ ಮನಕ್ಕೆ

ತಂಪೆರಚಿ ಬೀಸುವ ಗಾಳಿ ಹರಿಯುವ ನಾದವನ್ನೂ, ಧುಮ್ಮಿಕ್ಕುವ ಅಬ್ಬರವನ್ನೂ, ಹಸಿರಾಗಿ ಹಸಿರ ಸಿರಿಯಾಗಿ ಹೊಮ್ಮುವ ಗಿಡ ಮರಗಳ ಹಕ್ಕಿಗಳ ಕಲರವವನ್ನೂ ತನ್ನ ಹೃದಯದಲ್ಲಿ ಬೈತಿಟ್ಟು ಸುತ್ತೆಲ್ಲಾ ಹರಡುತ್ತದೆ. ಒಂದಕ್ಕೆ ಒಂದು ಅದಕ್ಕೆ ಇನ್ನೊಂದು ಸೇರಿ ಭಾವನಿರ್ಭರದ ಅಲೆ ಕವಿ ಸಹೃದಯಿ ದೊಡ್ಡರಂಗೇಗೌಡರನ್ನಾಳುವ ಪ್ರಕೃತಿಯ ಸಾಂಗತ್ಯದ ವೈಭವ ಅವರ್ಣನೀಯವಾದದ್ದು.

ಅನನ್ಯಬಗೆ: ಪ್ರಕೃತಿ ಎಂದೂ ಕಂಜೂಸಿಯಲ್ಲ, ವಿಪುಲ ಮಾದರಿಗಳ ಜನನಿ. ಬನವಾಗಿ, ಅದರ ಸಿರಿಯಾಗಿ, ಹರಿವ ತೊರೆಯಾಗಿ ಅದರ ಚಲನೆಯಿಂದಲೂ, ತೊನೆವ ಅಲೆಯಿಂದಲೂ ಹೊಮ್ಮುವ ಸುನಾದವಾಗಿ ಕಲರವದ ಖಗಸಮೂಹವಾಗಿ ಮೈದಳೆದಂತೆ ಭಾವಲೋಕದ ಸಂತೋಷವನ್ನು

ವರ್ಧಿಸುವ ನಿರಂತರ ಕ್ರಿಯೆಗಳಾಗಿ ಚಲನಶೀಲವಾಗಿದೆ. ಭಾವಲೋಕದ ವಿವಿಧ ರಚನೆಗಳಲ್ಲಿ ಮಾತು ಮತ್ತು ಅರ್ಥದ ವಿದ್ಯುದಾಲಿಂಗನದಲ್ಲಿ ಹೊಸ ಹೊಸ ಗೀತ ಸಂಗೀತ ಕೃತಿರಚನಾ ವಿಲಾಸವಾಗಿ ಹೊರಹೊಮ್ಮಿಸುವ ಮನುಷ್ಯನ ಪ್ರತಿಭೆ ಪ್ರಕೃತಿಯಂತೆ ಸದಾ ನವೀನವಾದದ್ದು. ಬೆಳಕು ಶಿವಾಂಗಸಂಗಿಯಾಗಿ ತುಳುಕಿ ಭಾವ ಭಾಗೀರಥಿಯಾಗಿ

ಕಲಾಲೋಕದ ನಂದನದ ಬಾಗಿಲನ್ನು ತೆರೆದು ಪೃಥ್ವಿಯ ಇರುವನ್ನು ದಿವಕ್ಕೆತ್ತುವ ಅನನ್ಯ ಬಗೆಯನ್ನು ಅಂತರಂಗಕ್ಕೆ ಮುಟ್ಟಿಸುವ ಕವಿ ದೊಡ್ಡ ರಂಗೇಗೌಡರ ಕಾಣ್ಕೆ ಅವರ “ಭಾವಭಾಗೀರಥಿ”ಯ ರಚನೆಯಲ್ಲಿ ಸಾರ್ಥಕವಾಗಿದೆ.


ಗಜಾನನ ಈಶ್ವರ ಹೆಗಡೆ,

ನಿವೃತ್ತ ಪ್ರಾಧ್ಯಾಪಕರು, ಹಡಿನಬಾಳು. ಮೊ:9448505958

23 views0 comments
bottom of page