top of page

ಭಾಗವತ ಸುಬ್ರಹ್ಮಣ್ಯ ಧಾರೇಶ್ವರ

Updated: Apr 29

ನಮ್ಮನ್ನು ಅಗಲಿದ ಪ್ರಸಿದ್ಧ ಭಾಗವತ ಸುಬ್ರಹ್ಮಣ್ಯ ಧಾರೇಶ್ವರರಿಗೆ ಅಕ್ಷರಾಂಜಲಿ. ಲೋಕಧ್ವನಿಬಳಗಕ್ಕೆ ಧನ್ಯವಾದಗಳು.

ಸುಬ್ರಹ್ಮಣ್ಯ ಧಾರೇಶ್ವರ

ಕೋಮಲ ಕಂಠಸಿರಿಯ ಮಹೋನ್ನತ ಭಾಗವತ

:-¸ನಾರಾಯಣ ಯಾಜಿ

ಯಕ್ಷಗಾನ , ಅನೇಕರನ್ನು ಅನೇಕ ಬಗೆಯಲ್ಲಿ ಆಕರ್ಷಿಸುವ ಕಲಾಭೂಮಿ. ಅಭಿನಯದ ನಾಲ್ಕು ಅಂಗಗಳಾದ ಆಂಗಿಕ, ವಾಚಿಕ, ಆಹಾರ್ಯ ಮತು ಸಾತ್ವಿಕ ಅಭಿನಯಗಳನ್ನು ಏಕಕಾಲದಲ್ಲಿ ರಂಗದಮೇಲೆ ಕಾಣಲು ಸಾಧ್ಯವಾಗುವ ಕೆಲವೇ ರಂಗಪ್ರಕಾರಗಳಲ್ಲಿ ಇದೂ ಒಂದು. ಇದು ಈ ರಂಗದ ವಿಶೇಷಣs lvವಾಗಿರುವಂತೆಯೇ ಅನೇಕಸಲ ಯಾವುದೋ ಒಂದು ರಂಗದಲ್ಲಿ ಪರಿಣಿತಿ ಸಾಧಿಸಿದ ವ್ಯಕ್ತಿ ಪ್ರೇಕ್ಷಕರ ಕಣ್ಮಣಿಯಾಗಿ ಮೆರೆಯುವ ಅಪಾಯವೂ ಉಂಟು. ಈ ಹದ ತಪ್ಪುವಿಕೆಗೆ ಬಲು ಮುಖ್ಯ ಕಾರಣ ನಾಲ್ಕೂ ಅಂಗಗಳನ್ನು ನಿಯಂತ್ರಣಕ್ಕೆ ತರುವ ಮತ್ತು ಅದನ್ನು ರಂಗನಿಷ್ಠೆಯಿಂದ ದುಡಿಸಬಲ್ಲ ನಿರ್ದೇಶಕನ ಕೊರತೆ ಇರುವುದು. ಆಯಾ ಕಾಲಘಟ್ಟದಲ್ಲಿ ಕೆಲವೊಂದು ವ್ಯಕ್ತಿಗಳು ತಮ್ಮ ಜನಪ್ರಿಯತೆಯ ಮಾನದಂಡದಿಂದ ಇತರರನ್ನು ತಮ್ಮ ಅಂಕೆಯಲ್ಲಿಟ್ಟುಕೊಂಡಿರುವ ಸಂಗತಿಗಳು ಅಪರೂಪವೇನಲ್ಲ. ಸಮರ್ಥರಾದ ಭಾವತರು ಮಾತ್ರ ಎಂತಹ ಕಲಾವಿದರೇ ಬಂದರೂ ಅವರನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡು ಆಟವನ್ನು ರಂಗಶಿಸ್ತಿಗೆ ಓಲಪಡಿಸುತ್ತಾರೆ. ನಮ್ಮ ಪ್ರೀತಿಯ ಸುಬ್ರಹ್ಮಣ್ಯ ಧಾರೇಶ್ವರರು ಇನ್ನಿಲ್ಲವೆನ್ನುವ ವಿಷಯ ತಿಳಿದ ತಕ್ಷಣ ಮನಸಿನಲ್ಲಿ ಅವರಂತೆ ರಂಗವನ್ನು ಆಳಿದ ಮತ್ತೊಬ್ಬ ಭಾಗವತರನ್ನು ಇನ್ನೆಲ್ಲಿ ಹುಡುಕುವುದು ಎನ್ನುವ ಚಿಂತೆ ಬೃಹದಾಕಾರವಾಗಿ ಮೂಡಿತು.

ಯಕ್ಷಗಾನ ರಂಗದಲ್ಲಿ ಭಾಗವತನನ್ನು ಮೊದಲನೇ ವೇಷಧಾರಿ ಎನ್ನುತ್ತಾರೆ. ಈ ಕಲೆ ಯಾವಾಗ ಬಯಲಾಟದಿಂದ ಟೆಂಟ್ ಮಾಧ್ಯಮಕ್ಕೆ ಹೊರಳಿಕೊಂಡಾಗ ಆರಾಧನಾಭಾವದಿಂದ ಕಮರ್ಶಿಯಲ್ ಸ್ವಭಾವಕ್ಕೆ ತಿರುಗಿಕೊಂಡಿತು. ಆಗ ಮೊದಲ ವೇಷಧಾರಿ ಎನ್ನುವ ಭಾಗವತರ ಸ್ಥಾನ ಕೇವಲ ಅಲಂಕಾರಿಕವಾಗಿ ಜನರನ್ನು ಆಕರ್ಷಿಸುವ ಸಾಮರ್ಥ್ಯ ಯಾರಿಗಿದೆಯೋ ಅವರು ಹೇಳಿದಂತೆ ಯಜಮಾನನ ಸಹಿತವಾಗಿ ಉಳಿದವರು ಕೇಳಬೇಕೆನ್ನುವ ಪರಿಸ್ಥಿತಿ ಉಂಟಾಗಿತ್ತು. ಇಂಥ ಹೊತ್ತಿನಲ್ಲಿ ಈ ರಂಗದಲ್ಲಿ ಮೊದಲು ಭಾಗವತಿಕೆಯ ಘನತೆಯನ್ನು ತೋರಿಕೊಟ್ಟವರು ನಾರ್ಣಪ್ಪ ಉಪ್ಪೂರರು. ಸಪೂರ ನೀಟ ದೇಹದ ತಲೆಯಮೇಲೆ ಮುಂಡಾಸನ್ನು ಕಟ್ಟಿಕೊಂಡು ಕೋಟಿನ ಶೋಭೆಯೊಂದಿಗೆ ಅವರು ರಂಗಸ್ಥಳ ಪ್ರವೇಶಿಸುವುದನ್ನು ನೋಡುವುದೇ ಒಂದು ಸೊಗಸಾಗಿತ್ತು. ಪಾತ್ರವನ್ನು ಹಂಚುವ ತಮ್ಮ ಜವಾಬುದಾರಿಯನ್ನು ಅವರು ಯಾವತ್ತಿಗೂ ಬಿಟ್ಟುಕೊಟ್ಟಿದ್ದೇ ಇಲ್ಲ. ರಂಗದ ಮೇಲೂ ಮತ್ತು ರಂಗದ ಹಿಂದೆಯೂ ಕಲಾವಿದರನ್ನು ಅಂಕೆಯಲ್ಲಿಟ್ಟುಕೊಂಡು ಭಾಗವತರ ಸ್ಥಾನವನ್ನು ಪುನಃ ಸ್ಥಾಪಿಸಿದವರು ಅವರು. ಕಡತೋಕಾ ಮಂಜುನಾಥ ಭಾಗವತರೂ ಸಹ ತೆಂಕು ಮತ್ತು ಬಡಗಿನಲ್ಲಿ ಅದೇರೀತಿ ತಮ್ಮ ನಿಲುವನ್ನು ಸ್ಥಾಪಿಸಿದ್ದರು. ಅವರ ತರುವಾಯದ ಸ್ಥಾನದಲ್ಲಿ ಅವರ ಶಿಷ್ಯರಾದ ಕಾಳಿಂಗ ನಾವುಡರು ರಂಗದಲ್ಲಿ ಮಾಡಿದ ಮೋಡಿ ಇಂದಿಗೂ ಒಂದು ದಂತ ಕಥೆಯಾಗಿ ಉಳಿದಿದೆ. ವಿಧಿ ಅವರನ್ನು ಅಕಾಲದಲ್ಲಿ ಸೆಳೆದೊಯ್ದಿರುವುದು ಕಲೆಗಾದ ಪರಮ ಅನ್ಯಾಯ. ಆದರೆ ಉಪ್ಪೂರರ ಈ ಪರಂಪರೆಯನ್ನು ರಂಗದಲ್ಲಿ ಮುಂದುವರಿಸಿದ ಮತ್ತೋರ್ವ ಭಾಗವತರು ಯಾರಾದರೂ ಇದ್ದರೆ ಅದು ಅವರ ಅಂತೇವಾಸಿ ಶಿಷ್ಯರಾದ ಸುಬ್ರಹ್ಮಣ್ಯ ಧಾರೇಶ್ವರರು ಮಾತ್ರ.

ಸುಬ್ರಹ್ಮಣ್ಯ ಧಾರೇಶ್ವರರು ಭಾಗವತರಾಗಿ ಬೆಳೆದ ಬಗೆ ಮಾತ್ರ ಅಚ್ಚರಿ. ಬಾಲ್ಯವೆಲ್ಲ ಕಳೆದಿದ್ದು ಗೋಕರ್ಣದಲ್ಲಿ. ಯಕ್ಷಗಾನದ ಪರಂಪರೆಯ ಹಿನ್ನೆಲೆ ಇವರಿಗಿಲ್ಲ. ಸುಸ್ವರದಲ್ಲಿ ಹಾಡಬಲ್ಲ ಕಂಠ ದೈವದತ್ತವಾಗಿ ಇವರಿಗಿತ್ತು. ಯಾವ ಮಹತ್ವದ ಹಿನ್ನೆಲೆಯೂ ಇಲ್ಲದೇ ತನ್ನ ಸ್ವಂತ ಪ್ರತಿಭೆಯಿಂದಲೇ ಭಜನೆಗಳಲ್ಲಿ ಭಾವಪೂರ್ಣವಾಗಿ ಹಾಡುವ ಇವರು ವೃತ್ತಿಗಾಗಿ ಮೊದಲು ಆರಿಸಿಕೊಂಡುದ್ದು ಎಲೆಕ್ಟ್ರಿಷಿಯನ್. ಈ ವಿದ್ಯೆ ಅವರನ್ನು ಅಮೃತೇಶ್ವರೀ ಮೇಳಕ್ಕೆ ಕರೆದೊಯ್ದಿತು. ಈ ನೆವದಲ್ಲಿ ಉಪ್ಪೂರರ ಸಾಂಗತ್ಯ ಸಿಗುವುದು ಎನ್ನುವ ಕಾರಣಕ್ಕಾಗಿ ಅವರು ಹೋದರೋ ಅಥವಾ ಸಂಗೀತವೇ ಅವರನ್ನು ಉಪ್ಪೂರರ ಶಿಷ್ಯವೃತ್ತಿಗೆ ಸೇರಲು ಅನುಕೂಲವಾಗುವಂತೆ ಈ ಮಾರ್ಗವನ್ನು ಹಿಡಿಸಿತೋ ಎನ್ನುವುದು ಇಂದಿಗೂ ಗೂಢ. ಮೈಕ್, ವೈರಿಂಗ ಸರಿಮಾಡುತ್ತಲೇ ತನ್ನ ಕಂಠದಿಂದ ಉಪ್ಪೂರರ ಗಮನ ಸೆಳೆದ ಮಾಣಿ ಅವರ ಆಪ್ತಶಿಷ್ಯನಾಗಿ ಸೇರಿಬಿಟ್ಟ. ಕಾಳಿಂಗ ನಾವುಡರಂತೆ ಉಪ್ಪೂರರ ಗರಡಿಯಲ್ಲಿ ಎಲ್ಲಾ ಸಾಮುಗಳನ್ನು ಕಲಿತು ಮತೋರ್ವ ರಂಗವನ್ನಾಳುವ ದೊರೆಯಾಗಿ ರೂಪುಗೊಂಡರು. ತನ್ನ ವೃದ್ಧಾಪ್ಯದಿಂದ ಉಪ್ಪೂರರು ರಂಗದಿಂದ ದೂರಸರಿಯುತ್ತಿರುವ ಕಾಲ. ಕಾಳಿಂಗ ನಾವುಡರ ಅಕಾಲಿಕ ಮರಣ ತಂದಿಟ್ಟ ನಿರ್ವಾತವನ್ನು ಸಮರ್ಥವಾಗಿ ತುಂಬಿದವರು ಧಾರೇಶ್ವರ ಭಾಗವತರು.

ಪರಂಪರೆಯೆನ್ನುವುದು ನಿಂತ ನೀರಾಗಕೂಡದು. ಒಂದು ಕಲಾ ಮಾಧ್ಯಮ ಜೀವಂತವಾಗಿರಬೇಕಾದರೆ ಅದು ತನ್ನನ್ನು ನಿರಂತರವಾಗಿ ಪ್ರಯೋಗಶೀಲತೆಗೆ ಒಳಪಡಿಸಿಕೊಳ್ಳುತ್ತಲೇ ಇರಬೇಕು ಈ ಪ್ರಯೋಗಶೀಲತೆ ಎನ್ನುವಲ್ಲಿ ಹಳೆಯದರಲ್ಲಿಯೇ ನಾವಿನ್ಯತೆಯನ್ನು ಸಾಧಿಸುವ ಮಾರ್ಗವೊಂದು. ಕೆರಮನೆ ಶಂಭು ಹೆಗಡೆಯವರದ್ದು ಈ ಮಾರ್ಗ. ಇದರಲ್ಲಿ ಪ್ರೇಕ್ಷಕರು ಪಕ್ವವಾಗುತ್ತಲೇ ಹೋಗುತ್ತಾರೆ. ಆದರೆ ಹೊಸ ಪ್ರೇಕ್ಷಕರು ತಟ್ಟನೇ ಈ ಆವರಣದೊಳಗೆ ಬರುವುದು ಕಷ್ಟ. ಕಲೆ ಬದುಕಬೇಕಾದರೆ ನಿರಂತರವಾಗಿ ಪ್ರೇಕ್ಷಕರ ಆಗಮನವಾಗುತ್ತಲೇ ಇರಬೇಕಾಗುತ್ತದೆ. ಅವರನ್ನು ಸೆಳೆದು ತಂದು ಅವರನ್ನು ನಿಧಾನಕ್ಕೆ ಪರಂಪರೆಯ ಸೌಂದರ್ಯದ ಆವರಣದೊಳಗೆ ಸೆರೆಹಿಡಿಯುವುದು ಇನ್ನೊಂದು ಮಾರ್ಗ. ಪರಂಪರೆಯಲ್ಲಿ ಈ ಪ್ರಯೋಗವನ್ನು ಮಾಡಿ ಯಶಸ್ಸನ್ನು ಕಂಡವರಲ್ಲಿ ಉಪ್ಪೂರರು ಮೊದಲ ಸಾಲಿನಲ್ಲಿ ಬರುತ್ತಾರೆ. ಈ ಕುರಿತು ಅವರು ಟೀಕೆಗಳನ್ನೂ ಸಹ ಎದುರಿಸಬೇಕಾಯಿತು. ಆದರೂ ಅವರು ನಡುತಿಟ್ಟಿನ ಯಕ್ಷಗಾನದ ವಶಿಷ್ಟ್ಯಗಳಾದ ಚಾಲುಕುಣಿತವನ್ನು (ನೃತ್) ಜನಪ್ರಿಯಗೊಳಿಸಿದರು. ಯುದ್ಧದ ಕುಣಿತ, ಪ್ರಯಾಣದ ಕುಣಿತಗಳ ಸೊಗಸನ್ನು ಅವರ ಭಾಗವತಿಕೆಯಲ್ಲಿ ನೋಡಿದ ಸೊಭಗನ್ನು ಸ್ಮೃತಿಪಟಲದಿಂದ ಮರೆಯಲಾಗದು. ಇದೇ ಬನಿಯಲ್ಲಿ ಹಿಡಿದಿಟ್ಟುಕೊಂಡ ಕಾಳಿಂಗ ನಾವುಡರು ರಂಗದಲ್ಲಿ ಮೆರೆದರು.

ಹೀಗೆ ಈ ಇಬ್ಬರಿಂದ ಆವರಿಸಿಕೊಂಡ ಯಕ್ಷಗಾನದ ಭಾಗವತಿಕೆ ಶೈಲಿ ಮಟ್ಟನ್ನು ಆಧರಿಸಿರುವಂತಹದ್ದು. ಭಾಗವತಿಕೆಗೆಗೆ ರಾಗ ಮಾಧುರ್ಯದ ಮೂಲಕ ಪ್ರೇಕ್ಷಕರನ್ನು ಸೆಳೆದವರು ಸುಬ್ರಹ್ಮಣ್ಯ ಧಾರೇಶ್ವರರು. ಆಗ ಕ್ಯಾಸೇಟ್ ಯುಗ. ಶೇಣಿ ಸಾಮಗರ ಅರ್ಥವೈಭವದ ಕ್ಯಾಸೆಟ್ ಗಳಿಗೆ ತುಂಬಾ ಬೇಡಿಕೆ ಇತ್ತು. ಒಮ್ಮೆಲೇ ಬೇಡರ ಕಣ್ಣಪ್ಪ ಎನ್ನುವ ಪ್ರಸಂಗದ ಕ್ತ್ಯಾಸೆಟ್ ಮಾರುಕಟ್ಟೆಯಲ್ಲಿ ಧೂಳೆಬ್ಬಿಸಿಬಿಟ್ಟಿತು. ಇದಕ್ಕೆ ಕಾರಣ ಧಾರೇಶ್ವರರ ಭಾಗವತಿಕೆ. ಅಲ್ಲಿಯ ತನಕ ಕೇವಲ ಮಾತನ್ನು ಸವಿಯಲು ಕ್ಯಾಸೆಟ್ ಎನ್ನುತ್ತಿದ್ದ ಯಕ್ಷಗಾನ ವಲಯವನ್ನು ತನ್ನ ಕಂಠಸಿರಿಯ ಮೂಲಕ ಚುಂಬಕದಂತೆ ಸೆಳೆಯತೊಡಗಿದರು. ಯಕ್ಷಗಾನದ ಭಾಗವತಿಕೆಯಲ್ಲಿ ಯಕ್ಷಗಾನೇತರ ವಲಯಗಳಿಂದ ಬರುವ ಟೀಕೆ ಎಂದರೆ “ಅಗತ್ಯವಿಲ್ಲದಿದ್ದರೂ ಏರುಶೃತಿಯಲ್ಲಿ ನಿಮ್ಮ ಭಾಗವತರು ಹಾಡುತ್ತಾರೆ” ಎನ್ನುವುದು. ಅನೇಕ ಸಂಧರ್ಭಗಳಲ್ಲಿ ಪ್ರಸಿದ್ಧ ಭಾಗವತರೂ ಶೃತಿಗೆ ಗಮನಕೊಡದೇ ಹಾಡುವುದನ್ನು ಕೇಳಿದ್ದೇನೆ, ಇಲ್ಲಿ ರಸಾಸ್ವಾದಕ್ಕಿಂತಲೂ ಹೆಚ್ಚಾಗಿ ಬೆಚ್ಚಿ ಎದ್ದು ಪಾತ್ರವನ್ನು ಅಥವಾ ಕಥಾನಕವನ್ನು ನೋಡುವ ಅನುಭವವಾಗುತ್ತದೆ. ಇದು ದೇಸಿ ಮಾರ್ಗವನ್ನು ಅನುಸರಿಸಿದ ಕಲೆ, ಹಾಗಾಗಿ ಇದೇ ಸರಿ ಎನ್ನುವ ವಾದ ಮಾಡಬಹುದಾದರೂ, ಅದು ಕರಾವಳಿ ಮತ್ತು ಮಲೆನಾಡಿನಲ್ಲಿ ಸರಿ. ಆದರೆ ಸಂಗೀತದ ತಳಪಾಯವೇ ಶೃತಿಯನ್ನಾಧರಿಸಿ ಎನ್ನುವ ಭಾರತೀಯ ಪದ್ಧತಿಯನ್ನು ಅಭ್ಯಸಿಸಿದಾಗ ಇದು ಬಹುದೊಡ್ಡ ದೋಷವಾಗಿ ಕಾಣುತ್ತದೆ. ಸ್ವತಃ ಸಂಗೀತಗಾರನಾಗಿ, ಹಾರ್ಮೋನಿಯಂ ನುಡಿಸಿದ ಅನುಭವವಿರುವ ಧಾರೇಶ್ವರರು ಈ ದೋಷವನ್ನು ಕಂಡರು. ಅವರದ್ದು ಕೋಮಲವಾದ ಕಂಠ. ಮದ್ಯಮ ಸ್ಥಾಯಿಯಲ್ಲಿ ಬಹು ಪರಿಣಾಮಕಾರಿ. ಅವರು ಹಿಂದುಸ್ಥಾನಿನಿ ಶಾಸ್ತ್ರೀಯ ಸಂಗೀತಕ್ಕೆ ಬಂದಿದ್ದರೆ ದೇಶದ ಪ್ರಸಿದ್ಧ ಸಂಗೀತಗಾರರಲ್ಲಿ ಓರ್ವರಾಗಿರುತ್ತಿದ್ದರು. ತನ್ನಲ್ಲಿರುವ ಈ ಸಾಮರ್ಥ್ಯವನ್ನು ಅರಿತ ಅವರು ಅದನ್ನೇ ಯಕ್ಷಗಾನ ರಂಗದಲ್ಲಿ ಚನ್ನಾಗಿಯೇ ದುಡಿಸಿಕೊಂಡರು. ಮಂದ್ರದಿಂದ ಮಧ್ಯಮ ಸ್ಥಾಯಿಯಲ್ಲಿ ಅವರು ಭಾಗವತಿಕೆಯನ್ನು ಎತ್ತಿಕೊಂಡಾಗ ಪ್ರೇಕ್ಷಕ ಭಾವಪ್ರಪಂಚದಲ್ಲಿ ಲೀನವಾಗಿಬಿಡುತ್ತಾನೆ. ಇಲ್ಲಿ ಜಾಗ್ರತಕ್ಕಿಂತಲೂ ರಸಭಾವದಲ್ಲಿ ಪ್ರೇಕ್ಷಕನನ್ನು ತನ್ಮಯನನ್ನಾಗಿಸುವುದು ಬಲು ಮುಖ್ಯ. ರಾಮನಿರ್ಯಾಣದಲ್ಲಿ ನೆಬ್ಬೂರು ಭಾಗವತರು ಹಾಡಿದ “ನೋವು ನಲಿವುಗಳಿಂದ ಕೂಡಿದ ಜೀವನವ ಕಂಡಾಯ್ತು” ವಿಲಂಬಿತ ಗತಿಯಲ್ಲಿ ಬಹು ಪರಿಣಾಮವನ್ನು ಬೀರುವ ಪದ್ಯ. ಎಲ್ಲಾ ಭಾಗವತರೂ ಈ ಶೃತಿಯಲ್ಲಿ ಹಾಡುತ್ತಾರೆ. ಧಾರೇಶ್ವರರು ಅದನ್ನು “ನೋSSವು, ನೋSSವು…” ಎಂದು ಮದ್ಯಮ ಸ್ಥಾಯಿಯಲ್ಲಿ ಎತ್ತಿ ನಂತರ ನಲಿವು ಎನ್ನುತ್ತಾ ಇಳಿಕಂಠದಲ್ಲಿ ಹಾಡುವಾಗ ರಾಮನ ಬದುಕಿನಲಿ ಆತ ನೋವನ್ನು ಕಂಡಿರುವುದು ಜಾಸ್ತಿ, ನಲಿವು ಎನ್ನುವುದು ಎಲ್ಲಿಯೋ ಕ್ವಚಿತ್ತಾಗಿತ್ತು ಎನ್ನುವ ಹೊಸ ಹೊಳಹನ್ನು ಅರ್ಥದಾರರಿಗೆ ಕೊಡುತ್ತದೆ. ಮುರ್ಡೇಶ್ವರದಲ್ಲಿ ರಾಮ ನಿರ್ಯಾಣ ಪ್ರಸಂಗದ ಅವರ ಭಾಗವತಿಕೆಯಲ್ಲಿ ನಾನು ರಾಮನ ಅರ್ಥವನ್ನು ಹೇಳಿದ್ದೆ. ಆಗ ನನಗಾದ ಅನುಭವವ ಇದು. ಇದು ಧಾರೇಶ್ವರ ಶೈಲಿ.

ಧಾರೇಶ್ವರರು ಭಾಗವತಿಕೆಗೆ ಬಂದಾಗ ಮೊದಲು ಗಮನವನ್ನು ಹರಿಸಿದ್ದು ತನ್ನ ಗಾನ ಶೈಲಿಯನ್ನು ವಿತರಿಸುವ ಸಮರ್ಥ ಮಾಧ್ಯಮವಾದ ಸೌಂಡ್ ಸಿಸ್ಟಮ್ಮಿನೆಡೆಗೆ. ಅಲ್ಲಿಯತನಕ ಕೇವಲ ಹಾರ್ನ್ ಗಳಿರುವ ಮೈಕ್ ಯುಗವನ್ನು ಸ್ಟೀರಿಯೋ ಸಂಗೀತವನ್ನು ತಿಳಿಸಬಲ್ಲ ಸ್ಪೀಕರ್ ಗಳಿಗೆ ಬದಲಾಯಿಸಿದರು. ಕೆರಮನೆ ಶಂಭು ಹೆಗಡೆಯವರು ರಂಗಸ್ಥಳದಲ್ಲಿ ಮೈಕಿನ ಧ್ವನಿ ಸರಿಯಾಗಿ ಕೇಳಿಸುವಂತಿರಬೇಕು ಎನ್ನುತ್ತಿದ್ದರು. ಅದನ್ನು ಆಧುನಿಕವಾಗಿ ಬದಲಾಯಿಸಿ ರಂಗಮಾದ್ಯಮದಲ್ಲಿ ಹೊಸ ಮಾರ್ಗವನ್ನು ಹಾಕಿಕೊಟ್ಟವರು ಧಾರೇಶ್ವರರು. ಗಾಯನ ಪದ್ಧತಿ ಕೇವಲ ಕೇಳುಗರಿಗಾಗಿ ಅಭಿನಯಿಸಲು ಅಲ್ಲ ಎನ್ನುವ ಆಕ್ಷೇಪ ಹೀಗೆ ಹಾಡಿದ ಅವರ ಸಮಕಾಲೀನ ಭಾಗವತರಿಗೆ ಬಂದಿದೆ. ಆದರೆ ಅದು ಧಾರೇಶ್ವರರಿಗೆ ಬರಲೇ ಇಲ್ಲ. ಕಾರಣ, ಅವರು ಭಾಗವತಿಕೆಗೆ ಬಳಸುವ ರಾಗ ಆಯಾ ಕಾಲಕ್ಕೆ ತಕ್ಕಂತಿರುತ್ತಿತ್ತು. ಸಾಹಿತ್ಯ ಸ್ಪಷ್ಟವಾಗಿರುತ್ತಿತ್ತು. ಇವರ ಭಾಗವತಿಕೆಯಲ್ಲಿ ಕುಣಿದು ನಲಿದ ಖುಷಿಯನ್ನು ಪದ್ಮಶ್ರೀ ಚಿಟ್ಟಾಣಿಯವರು ಅನೇಕಸಲ ಕೊಂಡಾಡಿದ್ದಾರೆ. ಕಥೆಯ ನಿರ್ವಚನವನ್ನು ತಿಳಿಸಿದಾಗ ಕಲೆ ಗೆಲ್ಲುತ್ತದೆ. . ಹಾಗಾಗಿ ಹೊಸ ಪ್ರಸಂಗಗಳನ್ನು ಆಡಿಸಿದಷ್ಟೇ ಸುಲಭವಾಗಿ ಧಾರೇಶ್ವರರು ಗಧಾಯುದ್ಧ, ಹರಿಶ್ಚಂದ್ರ, ಸುಧನ್ವ ಕಾಳಗ, ರಾಮ ನಿರ್ಯಾಣ ಮೊದಲಾದ ಹಾಳೆಯ ಪ್ರಸಂಗಗಳನ್ನು ಆಡಿಸುವಲ್ಲಿ ಯಶಸ್ವಿಯಾದರು.

ಕಾಳಿಂಗ ನಾವುಡರು ಮತ್ತು ಸಾಲಿಗ್ರಾಮ ಮೇಳಕ್ಕೆ ಹೇಗೆ ಬಿಡಿಸಲಾರದ ಬಂಧವಿದೆಯೋ ಅದೇ ರೀತಿ ಧಾರೇಶ್ವರರಿಗೂ ಪೆರ್ಡೂರು ಮೇಳಕ್ಕೂ ಅವಿನಾಭಾವ ಬಂಧವಿದೆ. ಎಂಥಹ ಆಮಿಷವಿದ್ದರೂ ಈ ಮೇಳವನ್ನು ತನ್ನ ಮನಸ್ಸಿನಿಂದ ಬಿಡಲೇ ಇಲ್ಲ. ವೃತ್ತಿ ರಂಗದಿಂದ ದೂರಸರಿದು ಹತು ವರ್ಷಗಳ ಮೇಲೆ ಮತ್ತೊಮ್ಮೆ ಅವರು ಪೂರ್ಣ ಪ್ರಮಾಣದ ಭಾಗವತರಾಗಿ ಹೋಗಿದ್ದು ಪೆರ್ಡೂರು ಮೇಳಕ್ಕೆ. ಈ ನಿಷ್ಠೆ ಇಂದು ಅನೇಕ ಕಲಾವಿದರೆಲ್ಲಿ ವಿರಳ. ಚಿಟ್ಟಾಣಿ, ಕೃಷ್ಣ ಯಾಜಿ, ಕೊಂಡದಕುಳಿ, ಕಣ್ಣಿಯಂತವರನ್ನು ಕುಣಿಸಿದಂತೆ ಹೊಸಬರನ್ನೂ ಕುಣಿಸಿ ಅವರನ್ನು ಬೆಳೆಸಿದ್ದಾರೆ. ಧಾರೇಶ್ವರರ ಭಾಗವತಿಕೆ ಮತ್ತು ದುರ್ಗಪ್ಪ ಗುಡಿಗಾರರ ಮದ್ದಳೆ ಎನ್ನುವುದು ಯಕ್ಷಗಾನ ಕಂಡ ಅತ್ಯಂತ ಪರಿಣಾಮಕಾರಿ ಜೋಡಿ. ಎಲ್ಲಿಯೂ ರಾಗ ಮತ್ತು ತಾಳಗಳ ಘರ್ಷಣೆಯಾಗದೇ ಯುಗಳಭೂಮಿಕೆಯಲ್ಲಿ ಕಥಾನಕವನ್ನು ಕಟ್ಟಿಕೊಟ್ಟ ಜೋಡಿ ಅದು. ಬಹುಶಃ ದುರ್ಗಪ್ಪ ಗುಡಿಗಾರರು ಧಾರೇಶ್ವರರನ್ನು ಸ್ವರ್ಗದಲ್ಲಿ ನೋಡಿ ಮತೊಮ್ಮೆ ಮೃದಂಗದ ಶೃತಿಯನ್ನು ಸರಿಮಾಡಿಕೊಳ್ಳುತ್ತಿರಬೇಕು.

ವಿನಯ ಮತ್ತು ಸುಂದರ ನಗು ಧಾರೇಶ್ವರರ ಆಸ್ತಿ. ಸಹ ಕಲಾವಿದರನ್ನು ಕಂಡಾಗ ತಾನು ಓರ್ವ ದೊಡ್ಡ ಭಾಗವತ ಎನ್ನುವ ಯಾವ ಹಮ್ಮೂ ಅವರಲ್ಲಿರಲಿಲ್ಲ. ಹಾಗಂತ ಭಾಗವತಿಕೆಯ ಸ್ಥಾನಕ್ಕೆ ಯಾರಾದರೂ ಅತಿಕೃಮಣ ಮಾಡಿದಾಗ ಅವರು ಸಹಿಸುತ್ತಿರಲಿಲ್ಲ. ಮಾರುಕೇರಿಯಲ್ಲಿ ಒಂದು ದೊಡ್ದ ಸೆಟ್ಟಿನ ತಾಳಮದ್ದಳೆಯಾಗಿತ್ತು. ಮಹಾನ್ ಕಲಾವಿದರ ಸಂಗಮ ಅದು. ಭೀಷ್ಮ ಅರ್ಥಹೇಳುವ ಭರದಲ್ಲಿ ಭಾಗವತರನ್ನು ಅಲಕ್ಷಮಾಡಿ ಇದು ಮಾತಿನ ತಾಣವೆನ್ನುವ ಭಾವವನ್ನು ವ್ಯಕ್ತಪಡಿಸಿದರು. ತಕ್ಷಣ ತಾಳವನ್ನು ಬಿಟ್ಟು ವೇದಿಕೆಯ ಕೆಳಗಿಳಿದರು. ಈ ಕುರಿತು ಖಾಸಗಿಯಾಗಿ ಪ್ರಸಂಗವನ್ನು ಆಡಿಸುವ ಯಜಮಾನರ ಹತ್ತಿರ ಕ್ಷಮೆ ಕೇಳಿ ತಾನೇ ಬಂದು ಮತ್ತೊಮ್ಮೆ ತಾಳಮದ್ದಳೆಯನ್ನು ಮಾಡಿಸಿ ಯಶಸ್ವಿಗೊಳಿಸುತ್ತೇನೆ ಎಂದಿದ್ದರು. ಅದಾದ ಎರಡೇ ತಿಂಗಳಿಗೆ ಒಂದು ತಾಳಮದ್ದಳೆಯನ್ನು ಸಂಘಟಿಸಿ ಅವರ ಮನೆಯಲ್ಲಿಯೇ ಆಡಿಸಿ ಪ್ರೇಕ್ಷಕರ ಮನವನ್ನು ಗೆದ್ದಿದ್ದರು. ಎರಡೂ ಸಂದರ್ಭದಲ್ಲಿ ನಾನು ಅರ್ಥಗಾರನಾಗಿ ಭಾಗವಹಿಸಿದ್ದೆ.

ಅವರ ಭಾಗವತಿಕೆಯಲ್ಲಿ ಅನೇಕ ಕರ್ಥಗಳನ್ನು ಹೇಳಿದ್ದೇನೆ. ಎಲ್ಲಕ್ಕಿಂತ ಹೆಚ್ಚಾಗಿ ಅವರು ನಮ್ಮ ಮನೆಯ ಓರ್ವ ಸದಸ್ಯರಂತಿದ್ದರು. ನನ್ನ ಆಯಿಯ ಆರೋಗ್ಯದ ಕುರಿತು ಯಾವತ್ತಿಗೂ ಕೇಳುತ್ತಿದ್ದರು. ನನ್ನ ತಮ್ಮ ನಾಗರಾಜ ಯಾಜಿ, ಮಂಜುನಾಥ, ನಮ್ಮ ಬಂಧು ದತ್ತಮೂರ್ತಿ ಭಟ್ಟರು ಮತ್ತು ಅವರ ನಡುವೆ ಸೋದರ ಸಂಬಂಧಂತಹ ಪ್ರೀತಿ ಇತ್ತು. ಈ ಸರಳತೆಯನ್ನು ಯಾವಾಗಲೂ ಇಟ್ಟುಕೊಂಡ ಅವರು ಕೇವಲ 67ನೆಯ ವಯುಸ್ಸಿನಲ್ಲಿ ಮರಳಲಾರದ ಊರಿಗೆ ತೆರಳಿರುವುದು ಅವರನ್ನು ವಯಕ್ತಿಕವಾಗಿ ಹಚ್ಚಿಕೊಂಡ ನನಗೆ ಹಾಗೂ ಅನೇಕ ಕಲಾ ರಸಿಕರಿಗೆ ಮರೆಯಲಾರದ ಬಂಧು. ಇನ್ನು ಆ ನೆನಪು ನಿರಂತರವಾಗಿ ಕಾಡುತ್ತಿರುತ್ತದೆ.

ಗೋಕರ್ಣದ ಮಣ್ಣಿನಲ್ಲಿ ಬೆಳೆದ ಮಣ್ಣಿ ಯಕ್ಷಗಾನದ ಮಣಿಯಾಗಿ ಬೆಳಗಿದರು.


ನಾರಾಯಣ ಯಾಜಿ ಸಾಲೆಬೈಲು


ಸುಬ್ರಹ್ಮಣ್ಯ ಧಾರೇಶ್ವರರು ತಮ್ಮ ಹಾಡು ಹಾಗು ಭಾಗವತಿಕೆಯನ್ನು ನಿಲ್ಲಿಸಿ ತಿಳಿನೀಲದಲ್ಲಿ ವಿಲೀನವಾದರು. ಈ ಶತಮಾನ ಕಂಡ ಅಪರೂಪದ ಲವಲವಿಕೆಯ ಭಾಗವತ ಧಾರೇಶ್ವರ ಅವರ ಕುರಿತು ನಮ್ಮ ಬಳಗದ ಕ್ರಿಯಾಶೀಲ ಬರಹಗಾರ,ಚಿಂತಕ,ತಾಳಮದ್ದಲೆಯ ಅರ್ಥಧಾರಿ ನಾರಾಯಣ ಯಾಜಿ ಅವರ ಬರಹ ನಿಮ್ಮ ಓದಿಗಾಗಿ.

ಡಾ.ಶ್ರೀಪಾದ ಶೆಟ್ಟಿ ಸಂಪಾದಕ ಆಲೋಚನೆ.ಕಾಂ









35 views0 comments
bottom of page