top of page

ಬೆಳಕಿನ ಬೀಜ ಜಿ.ಆರ್.ಪಾಂಡೇಶ್ವರ

ಶ್ರೇಷ್ಠ ಪತ್ರಕರ್ತ- ಕವಿ

ಶ್ರೀ ಗಣಪತರಾವ್ ಪಾಂಡೇಶ್ವರ






ಕನ್ನಡ ಪತ್ರಿಕಾರಂಗ ಅನೇಕ ಧೀಮಂತ ಪತ್ರಕರ್ತರನ್ನು ಕಂಡಿದೆ. ಕಳೆದ ೧೮೦ ವರ್ಷಗಳ ನಮ್ಮ ಪತ್ರಿಕಾಕ್ಷೇತ್ರ ಆರಂಭದಲ್ಲಿ ಸಮಾಜಕ್ಕೆ, ಶಿಕ್ಷಣ ನೀತಿ ಜ್ಞಾನ ನೀಡುವ ಉದ್ದೇಶ ಹೊಂದಿತ್ತು. ಸುಬುದ್ಧಿಪ್ರಕಾಶ, ಜ್ಞಾನ ಪ್ರದೀಪ, ಶಿಕ್ಷಕಮಿತ್ರ ಇಂತಹ ಹೆಸರುಗಳನ್ನು ನೋಡಿದಾಗಲೇ ಅವುಗಳ ಉದ್ದೇಶವೂ ಸ್ಪಷ್ಟವಾಗಿಬಿಡುತ್ತದೆ. ಆಗ ಈಗಿನಂತೆ ಅಕ್ಷರ ಜ್ಞಾನ ಇಲ್ಲದ ಹೆಬ್ಬೆಟ್ಟಿಗರೆಲ್ಲ ಪತ್ರಿಕಾ ಸಂಪಾದಕರಾಗುತ್ತಿರಲಿಲ್ಲ. ಸಾಮಾನ್ಯವಾಗಿ ಶಿಕ್ಷಕರು, ಕನ್ನಡ ಪಂಡಿತರು, ಸಾಹಿತಿಗಳು ಮಾತ್ರ ಪತ್ರಿಕೆ ಹೊರತರುತ್ತಿದ್ದರು. ಯಾಕೆಂದರೆ ಆಗಿನ್ನೂ ಇದು "ಉದ್ಯಮ " ಆಗಿರಲಿಲ್ಲ. ಹಣದ ಆಟ ಇಲ್ಲಿರಲಿಲ್ಲ.

ಎರಡನೆಯ ಹಂತದಲ್ಲಿ ಪತ್ರಿಕೆಗಳ ಗಮನ ಸ್ವಾತಂತ್ರ್ಯ ಹೋರಾಟದತ್ತ ಹೊರಳಿತು. ಆಗ ಬೇರೆ ಯಾವ ವಿಷಯಗಳೂ ಮಹತ್ವ ಪಡೆದುಕೊಳ್ಳಲಿಲ್ಲ. ಮೂರನೆಯ ಹಂತದಲ್ಲಿ ಕರ್ನಾಟಕ ಏಕೀಕರಣ ಆಂದೋಲನಕ್ಕೆ ಬೆಂಬಲವಾಗಿ ನಿಂತವು. ನಾಲ್ಕನೆಯ ಹಂತದಲ್ಲಿ ಪತ್ರಿಕಾರಂಗಕ್ಕೆ ಆಧುನಿಕತೆಯ ಸ್ಪರ್ಶವಾಗಿ ತಾಂತ್ರಿಕವಾಗಿ ಬೆಳೆಯುತ್ತ ಕ್ರಮೇಣ ಅದೊಂದು ಉದ್ಯಮದ ಸ್ವರೂಪ ಪಡೆದುಕೊಳ್ಳತೊಡಗಿತು. ಪತ್ರಿಕಾ ರಂಗದ ಆದರ್ಶಗಳ ಕಾಲ ಮರೆಯಾಯಿತು.

ಪತ್ರಿಕಾ ರಂಗದ ದೃಷ್ಟಿಯಿಂದ ನಮಗೆ ಕಳೆದ ಶತಮಾನ ಮಹತ್ವದ್ದು. ಡಿವಿಜಿ, ತಿ. ತಾ. ಶರ್ಮಾ, ಸಿದ್ಧವನಹಳ್ಳಿ ಕೃಷ್ಣ ಶರ್ಮ, ಕಡೆಂಗೋಡ್ಲು ಶಂಕರ ಭಟ್ಟರು, ಪಾಂಡೇಶ್ವರರು ಮೊದಲಾದವರೆಲ್ಲ ಪತ್ರಿಕಾ ರಂಗದ ಘನತೆ ಗೌರವ ಹೆಚ್ಚಿಸಿದವರು. ಉನ್ನತ ಆದರ್ಶಗಳನ್ನಿರಿಸಿಕೊಂಡು ಬದುಕಿದ ಅವರೆಲ್ಲ ಸಾಕಷ್ಟು ಕಷ್ಟ ಪಟ್ಟರೂ ತಮ್ಮ ಆದರ್ಶಗಳನ್ನು ಬಿಡಲಿಲ್ಲ. ಎಂದೂ ತಮ್ಮ ಧ್ಯೇಯದಿಂದ ಹಿಂದೆ ಸರಿಯಲಿಲ್ಲ. ಅಪ್ಪಟ ಪ್ರಾಮಾಣಿಕತೆ ಮತ್ತು ಅಧ್ಯಯನದಿಂದ ಬಂದ ಜ್ಞಾನ ಸಂಪತ್ತೇ ಅವರ ಬಂಡವಾಳವಾಗಿತ್ತು.

ಅಂತಹ ಆದರ್ಶ ಪತ್ರಕರ್ತರಲ್ಲೊಬ್ಬರು ನನಗೆ ಪತ್ರಿಕಾರಂಗದ ಮೊದಲ ಗುರುವಾಗಿ ದೊರಕಿದ್ದು ನನ್ನ ಭಾಗ್ಯ. ಹೊನ್ನಾವರದ ಜನತಾ ವಾರಪತ್ರಿಕೆಯ ಸಂಪಾದಕರಾಗಿ ಬಂದ ಅವರು ಮೊದಲು ಕೆಲಕಾಲ ನಮ್ಮ ಮನೆಯಲ್ಲೇ ( ಲಕ್ಷ್ಮೀನಾರಾಯಣ ದೇವಸ್ಥಾನ) ಇದ್ದರು. ನಂತರ ನಾಗರಿಕ ಪತ್ರಿಕೆ -ಪ್ರೆಸ್ ತಾವೇ ನಡೆಸಲು ತೆಗೆದುಕೊಂಡರು. ಜನತಾ ಮತ್ತು ನಾಗರಿಕ ಪತ್ರಿಕೆಗಳು ನನ್ನ ಮಟ್ಟಿಗೆ ತರಬೇತಿ ಕೇಂದ್ರವಾಗಿ ಪರಿಣಮಿಸಿದವು. ನನ್ನ ೧೪-೧೫ ನೇ ವಯಸ್ಸಿನಿಂದಲೇ ನನಗೆ ಪತ್ರಿಕಾ ಸಂಪರ್ಕ ಬಂದಿದ್ದರಿಂದ ಮತ್ತು ಪಾಂಡೇಶ್ವರರ ಒಡನಾಟ ದೊರಕಿದ್ದರಿಂದ ಮೊದಲ ಹಂತದ ಶಿಕ್ಷಣ ಅವರಲ್ಲಿ ದೊರಕುವಂತಾಯಿತು.

ಪಾಂಡೇಶ್ವರರು ಕನ್ನಡ, ಇಂಗ್ಲಿಷ್, ಸಂಸ್ಕೃತ ಮೂರೂ ಭಾಷೆಗಳಲ್ಲಿ ಪಾಂಡಿತ್ಯ‌ ಪಡೆದವರು. ಅವರು ಇಂಟರಮೀಡಿಯೇಟ್ ಕಲಿಯುತ್ತಿದ್ದಾಗಲೇ " ಫ್ರಾಗ್ರೆಂಟ್ ಬಡ್ಸ್" ಎಂಬ ಇಂಗ್ಲಿಷ್ ಕವನ ಸಂಕಲನ ಹೊರತಂದಿದ್ದರು. ಶಿವರಾಮ ಕಾರಂತರ ಒಡನಾಡಿ. ಡಿವಿಜಿಯಂಥವರಿಂದ ಮೆಚ್ಚುಗೆ ಪಡೆದವರು. ಅವರು ಹೇಗೆ ಒಬ್ಬ ಶ್ರೇಷ್ಠ ಪತ್ರಕರ್ತರೋ ಹಾಗೆಯೇ ಒಬ್ಬ ಶ್ರೇಷ್ಠ ಕವಿಯೂ ಹೌದು. ಯಕ್ಷಗಾನ ಕಲಾ ತಜ್ಞರು. ಕಾರಂತರಿಗಿಂತ ಮೊದಲೇ ಯಕ್ಷಗಾನ ಕಲೆಯ ಕುರಿತು ವಿದ್ವತ್ಪೂರ್ಣ ಪುಸ್ತಕ ಬರೆದವರು. ಯಕ್ಷಗಾನ ಸಮ್ಮೇಳನದ ಅಧ್ಯಕ್ಷ ಸ್ಥಾನದಿಂದ ಮಾಡಿದ ಅವರ ಭಾಷಣ ಅಮೂಲ್ಯವಾದುದು. ಸುಪಂಥಾ, ಚೆಂಗಲವೆ, ಚಾಂದನಿಕ, ಬಲಿ ವಾಮನ, ಮೊದಲಾದ ಅವರ ಕಾವ್ಯಕೃತಿಗಳು , ಮಾರಾವತಾರ ಎಂಬ ಏಕಪಾತ್ರ ಯಕ್ಷಗಾನ ಪ್ರಸಂಗ, ಹಲವು ಜೀವನ ಚರಿತ್ರೆಗಳು , ಸಾವಿರಾರು ಪತ್ರಿಕಾ ಬರೆಹಗಳು ಅವರ ವಿದ್ವತ್ತಿನ ಪ್ರತೀಕವಾಗಿವೆ. ಅವರ ಒಡನಾಡಿ ಕಡೆಂಗೋಡ್ಲು ಶಂಕರ ಭಟ್ಟ ಅವರಿಗೆ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನ ದೊರಕಿತು. ಅವರೂ ಅರ್ಹರೆ. ಆದರೆ ಪಾಂಡೇಶ್ವರರಿಗೆ ಅವರ ಅರ್ಹತೆಗೆ ತಕ್ಕ ಸ್ಥಾನಮಾನ ಕಡೆಗೂ ದೊರಕಲೇಇಲ್ಲ. ತಮ್ಮ ಸ್ವಾಭಿಮಾನ, ಪ್ರಾಮಾಣಿಕತೆಗಳಿಂದ ಕಷ್ಟನಷ್ಟಗಳನ್ನು ತಾವೇ ಆಹ್ವಾನಿಸಿಕೊಂಡರು. ಅಪ್ಪಟ ಗಾಂಧೀವಾದಿ.

ಇಂತಹ ಮಹಾನ್ ವ್ಯಕ್ತಿತ್ವದ ಗರಡಿಯಲ್ಲಿ ನಾನು ಪತ್ರಿಕಾರಂಗದ ಪ್ರಾರಂಭಿಕ ಪಾಠಗಳನ್ನು ಕಲಿತೆ. ಪಾಂಡೇಶ್ವರರು ಎಂತಹ ತತ್ವನಿಷ್ಠರಾಗಿದ್ದರು ಎಂದರೆ ಲಕ್ಷಗಟ್ಟಲೆ ಹಣ ಕೊಡುತ್ತೇನೆಂದರೂ ಮದ್ಯಪಾನ ಬೀಡಿ ಸಿಗರೇಟು ಮೊದಲಾದವುಗಳ ಜಾಹೀರಾತು ಪ್ರಕಟಿಸಲು ಒಪ್ಪುತ್ತಿದ್ದಿಲ್ಲ. ಸಾಮಾಜಿಕ ಅನ್ಯಾಯ ಕಂಡರೆ ಸಿಡಿದೇಳುತ್ತಿದ್ದರು. ಯಾರ ಹಂಗಿನಲ್ಲೂ ಇರಬಯಸುತ್ತಿದ್ದಿಲ್ಲ. ಒಳ್ಳೆಯ ಕೆಲಸವನ್ನೂ ಸ್ವಾಭಿಮಾನಕ್ಕಾಗಿ ಬಿಟ್ಟು‌ತೊಂದರೆಗೆ ಸಿಲುಕಿಕೊಳ್ಳುತ್ತಿದ್ದರು.

ಸಾಧ್ಯವಾದಷ್ಟು ಅವರ ಆದರ್ಶವನ್ನು ಇರಿಸಿಕೊಂಡೇ ನಾನು ೫೦-೬೦ ವರ್ಷ ಪತ್ರಕರ್ತನಾಗಿ ಕೆಲಸ ಮಾಡುತ್ತ ಬಂದೆ. ಬದಲಾದ ಕಾಲ ಪರಿಸ್ಥಿತಿಯಲ್ಲಿ ಈ ಆದರ್ಶಗಳನ್ನಿರಿಸಿಕೊಂಡು ಬದುಕುವದು ಕಷ್ಟ ನಿಜ. ಆದರೆ ಅವನ್ನು ಬಿಡುವದೂ ಅಸಾಧ್ಯ. ಪತ್ರಿಕಾರಂಗ ಸಾಕಷ್ಟು ಬದಲಾಗಿದೆ. ತಾಂತ್ರಿಕವಾಗಿ ಅಗಾಧ ಸ್ವರೂಪದಲ್ಲಿ ಬೆಳೆದಿದೆ. ಆದರೆ ತಾತ್ವಿಕವಾಗಿ ಕುಸಿದಿದೆ. ಮಾಧ್ಯಮ ಸಾರ್ವಜನಿಕರ ಟೀಕೆಗಳಿಗೆ ತುತ್ತಾಗುತ್ತಿದೆ. ಈ ಕ್ಷೇತ್ರಕ್ಕೆ ಬರುವವರಲ್ಲಿ ಹೆಚ್ಚಿನವರೆದುರು ಯಾವ ನಿರ್ದಿಷ್ಟ ತತ್ವಾದರ್ಶಗಳೂ ಇಲ್ಲ. ಅಧ್ಯಯನದ ಹಿನ್ನೆಲೆ ಇಲ್ಲ. ಭಾಷಾಜ್ಞಾನವಿಲ್ಲ. ಸಾಮಾಜಿಕ ಜವಾಬ್ದಾರಿ ಇಲ್ಲ. ( ಕೆಲವರನ್ನು ಬಿಟ್ಟು.). ಹಾಗಿದ್ದರೆ ಈಗಿನ ಪತ್ರಿಕಾರಂಗಕ್ಕೆ ಬೇಕಾದ ಅರ್ಹತೆಗಳೇನು ? ನಾನು ಹೇಳಬೇಕಾದ ಅಗತ್ಯವಿಲ್ಲ ಅಂದುಕೊಂಡಿದ್ದೇನೆ.

ಆಕಾರದಲ್ಲಿ ವಾಮನ, ಸಾಧನೆಯಲ್ಲಿ ತ್ರಿವಿಕ್ರಮ ಎಂಬ ಮಾತು ಪಾಂಡೇಶ್ವರರ ವಿಷಯದಲ್ಲಿ ಪೂರ್ಣ ಸತ್ಯ. ಅವರನ್ನು ನಾನು ಧೀಮಂತ ಜ್ಞಾನ ಯೋಗಿ ಎಂದು ಕರೆಯಲು ಕಾರಣಗಳಿವೆ. ಅವರ ವ್ಯಕ್ತಿತ್ವ , ಅವರ ಅಧ್ಯಯನ, ಅವರ ಪಾಂಡಿತ್ಯ ಎಲ್ಲವನ್ನೂ ಲಕ್ಷಿಸಿ ಈ ಮಾತು ಹೇಳುತ್ತಿದ್ದೇನೆ. ಅದು ಎಲ್ಲರ ಅಳತೆಗೂ ಸಿಗುವಂತಹದಲ್ಲ. ಮಹಾ ಜೀನಿಯಸ್ ಎಂದರೂ ನಡೆದೀತು. ಕನ್ನಡ, ಇಂಗ್ಲಿಷ್, ಸಂಸ್ಕತ ಮೂರೂ ಭಾಷೆಗಳ ಮೇಲೆ ಪ್ರಭುತ್ವ ಇತ್ತು.

ಒಂದು ಸಂದರ್ಭ ಇಲ್ಲಿ ನೆನಪಿಸಿಕೊಳ್ಳಬಹುದು. ಸುಮಾರು ೫೦ ವರ್ಷಗಳಿಗೂ ಹಿಂದಿನ ಸಂಗತಿ. ನಾನಾಗ ಹೊನ್ನಾವರದಲ್ಲೇ ಇದ್ದೆ. ಪಾಂಡೇಶ್ವರರಿಗೆ ಬಹಳ ಪ್ರೀತಿಯ ಹುಡುಗ. ಮಂಗಳೂರು ವಿಶ್ವವಿದ್ಯಾಲಯದಲ್ಲಿ ಮತ್ತೊಬ್ಬ ಘನ ವಿದ್ವಾಂಸರಾದ ಡಾ. ಎಸ್. ವಿ. ಪರಮೇಶ್ವರ ಭಟ್ಟರು ಕುಲಪತಿಯಾಗಿದ್ದರು. ಪಾಂಡೇಶ್ವರರ ಬಗ್ಗೆ " ಬೆಳಕಿನ ಬೀಜ" ಎಂಬ ಪುಸ್ತಕ ಬರೆದ‌ ಗುಂಡ್ಮಿ ಚಂದ್ರಶೇಖರ ಐತಾಳರು ಅಲ್ಲಿ ಕನ್ನಡ ಪ್ರಾಧ್ಯಾಪಕರು. ವಿಶ್ವವಿದ್ಯಾಲಯದಿಂದ ಒಮ್ಮೆ ಪಾಂಡೇಶ್ವರರರಿಗೆ ವಿಶೇಷ ಉಪನ್ಯಾಸಕ್ಕಾಗಿ ಕರೆ ಬಂತು.

ಸರಿ, ಅವರು ಹೊರಟವರು " ಬಾರೋ ಲಕ್ಷ್ಮೀನಾರಾಯಣ, ಹೋಗಿಬರೋಣ " ಎಂದು ನನ್ನನ್ನೂ ಕರೆದುಕೊಂಡು ಕಾರಿನಲ್ಲಿ ಹೊರಟರು. ಅವರದು ಸಾಹಿತ್ಯದ ಕುರಿತಾಗಿ ಇಂಗ್ಲಿಷ್ ನಲ್ಲಿ ಉಪನ್ಯಾಸ. ಅವರ ಇಂಗ್ಲಿಷ್ ಭಾಷಣ‌ ಕೇಳಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಷ್ಟೇ ಅಲ್ಲ, ಪ್ರಾಧ್ಯಾಪಕರೂ ಬೆರಗಾಗಿದ್ದರು. ಪಾಂಡೇಶ್ವರರೇನೂ ಯಾವ ವಿ. ವಿ. ಪದವಿ ಪಡೆದವರಲ್ಲ. ಅವರೊಬ್ಬ ಶ್ರೇಷ್ಠ ವಾಗ್ಮಿಯೂ ಆಗಿದ್ದರು. ಅಂದು ಕುಲಪತಿ ಡಾ. ಎಸ್. ವಿ.ಪರಮೇಶ್ವರ ಭಟ್ಟರು ತಮ್ಮ ಅಧ್ಯಕ್ಷ ಭಾಷಣದಲ್ಲಿ ಪಾಂಡೇಶ್ವರರನ್ನು ವಿದ್ವತ್ತಿನ ಮಹಾಪರ್ವತವೆಂದು ಬಣ್ಣಿಸಿದ್ದರು.

ಅಷ್ಟೇ ಅಲ್ಲ, ಅವರು ಹದಿಹರೆಯದಲ್ಲಿದ್ದಾಗಲೇ ಬರೆದ " ಫ್ರೆಗ್ರೆಂಟ್ ಬಡ್ಸ್ " ಎಂಬ ಇಂಗ್ಲಿಷ ಕವನ ಸಂಕಲನ ಪ್ರಕಟವಾಗಿತ್ತು.

ನಾನು ಪಾಂಡೇಶ್ವರರ ಪತ್ರಿಕಾ ಶೈಲಿ ಮತ್ತು ಸಾಹಿತ್ಯ ಶೈಲಿಗಳ ಒಂದು ವ್ಯತ್ಯಾಸವನ್ನು ಗುರುತಿಸಿದ್ದೇನೆ. "ವಜ್ರಾದಪಿ ಕಠೋರಾಣಿ, ಮೃದೂನಿ ಕುಸುಮಾದಪಿ " ಎನ್ನುವಂತೆ ಅವರು ಪತ್ರಿಕೆಗೆ ಬರೆಯುವಾಗ ವಜ್ರದಂತೆ ಕಠಿಣವಾಗುತ್ತಿದ್ದರಾದರೆ ಕಾವ್ಯ ಬರೆಯುವಾಗ ಹೂವಿನಷ್ಟು ಮೃದುವಾದ ಶೈಲಿ ಬಳಸುತ್ತಿದ್ದರು. ಈ ವ್ಯತ್ಯಾಸ ನನಗೆ ಅಚ್ಚರಿಯನ್ನುಂಟುಮಾಡುತ್ತಿತ್ತು. ನಾನೂ ಅದನ್ನು ಅನುಸರಿಸಲು ಪ್ರಯತ್ನಿಸುತ್ತಿದ್ದೆ.

ಕಾವ್ಯ ಹೇಗಿರಬೇಕೆಂಬ ಬಗ್ಗೆ ಅವರದೇ ಒಂದು ಕವನದ ಸಾಲುಗಳನ್ನು ಗಮನಿಸಬಹುದಾಗಿದೆ -

" ಕಲ್ಲುಸಕ್ಕರೆಯವೊಲು ಇನಿದಾದ ಕಡುನುಡಿ"

ಅಂದರೆ ನಾವು ಬಳಸುವ ಶಬ್ದಗಳು ಕಲ್ಲುಸಕ್ಕರೆಯ ಹಾಗೆ ಸವಿಯಾಗಿಯೂ ಇರಬೇಕು, ಅದು ಅಷ್ಟೇ ಗಟ್ಟಿತನವನ್ನೂ ಹೊಂದಿರಬೇಕು. ಬಾಯಲ್ಲಿಟ್ಟರೆ ಕರಗಿ ಹೋಗುವ ಕಲ್ಲುಸಕ್ಕರೆಯಂತೆ ಕಾವ್ಯವೂ ತನ್ನ ಸವಿಯೊಡನೆ ನಮ್ಮ ಮನಸ್ಸಿನಲ್ಲಿ ಕರಗಿ ಬೆರೆತುಹೋಗಬೇಕು. ನಮ್ಮನ್ನು ಸಂತೋಷಪಡಿಸಬೇಕು. ಕಾವ್ಯ ಇರುವದೇ ಆನಂದ ನೀಡುವದಕ್ಕಾಗಿ. ಇದು ಕಾವ್ಯದ ಕುರಿತಾದ ಅವರ ನಿಲುವು.

ಪಾಂಡೇಶ್ವರರ ಪತ್ರಿಕಾ ಪಯಣ

##################

ಗಣಪತರಾವ್ ಪಾಂಡೇಶ್ವರ ಅವರದು ಅರ್ಧ ಶತಮಾನದ ಪತ್ರಿಕಾ ಪಯಣ. ಸುಮಾರು‌ ೧೯೩೦ ರ ದಶಕದಿಂದ ೮೦ ರ ದಶಕದತನಕ ಸಾಗಿಬಂದ ಅವರ ಈ ಪತ್ರಿಕಾ ಸೇವೆ ಆದರ್ಶ ಪತ್ರಕರ್ತನೊಬ್ಬನ ಸಾರ್ಥಕ ಪಯಣವಾಗಿತ್ತು. ಅಂದು ಪತ್ರಿಕೆಯ ಕೆಲಸ ಎನ್ನುವದು ಹೊಟ್ಟೆ ತುಂಬಿಕೊಳ್ಳುವಷ್ಟು ಅನ್ನ ಕೊಡುವ ಕೆಲಸವೂ‌ ಆಗಿರಲಿಲ್ಲ. ಅದೊಂದು ಧರ್ಮವಾಗಿತ್ತು. ಅದೊಂದು ಉನ್ನತ ಧ್ಯೇಯವಾಗಿತ್ತು. ಡಿವಿಜಿ, ಕಡೆಂಗೊಡ್ಲು ಶಂಕರ ಭಟ್ಟರು, ತಿ. ತಾ. ಶರ್ಮ, ಸಿದ್ದ ವನಹಳ್ಳಿ ಕೃಷ್ಣ ಶರ್ಮ , ಪಾಂಡೇಶ್ವರ ಮೊದಲಾದ ಹಿರಿಯರು ಪತ್ರಿಕಾ ಕಾರ್ಯವನ್ನು ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಮಾಡಿದರು. ಕಷ್ಟನಷ್ಟ ಅನುಭವಿಸಿದರು. ಆಗಿನ್ನೂ ಅದು "ಪತ್ರಿಕೋದ್ಯಮ " ಆಗಿರಲಿಲ್ಲ.

ಪಾಂಡೇಶ್ವರರಲ್ಲಿ ಒಬ್ಬ ಶ್ರೇಷ್ಠ ಕವಿಯಿದ್ದಂತೆ ಒಬ್ಬ ಶ್ರೇಷ್ಠ ಪತ್ರಕರ್ತನೂ ಅಡಗಿದ್ದ. ಅಂದಿನ ಅನೇಕ ಪ್ರಮುಖ ಪತ್ರಿಕೆಗಳಲ್ಲಿ ಅವರು ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿದರು. ಎಲ್ಲಿಯೂ ಸ್ಥಿರವಾಗಲಿಲ್ಲ. ಅದಕ್ಕೆ ಕಾರಣ ಅವರ ಸ್ವಾಭಿಮಾನ. ಒಳ್ಳೆಯ ಸಂಬಳ ತರುವ ಕೆಲಸ ಸಿಕ್ಕಾಗಲೂ ಅಭಿಮಾನಧನವೇ ಮುಖ್ಯ ಎಂದು ಕೆಲಸ ಬಿಟ್ಟುಬಂದು ಆರ್ಥಿಕ ತೊಂದರೆ ಅನುಭವಿಸಿದರು. ಸಂಸಾರ ನಿರ್ವಹಣೆಯೇ ಕಷ್ಟವೆನಿಸುವಂತಹ ಪರಿಸ್ಥಿತಿ ಎದುರಿಸಿದರು.

೧೯೩೨-೩೩ ರಲ್ಲಿ ಬೆಂಗಳೂರಿನ " ವೀರಕೇಸರಿ" ದಿನಪತ್ರಿಕೆ, ೩೭ ರಲ್ಲಿ ಹುಬ್ಬಳ್ಳಿಯ ಲೋಕಮತ ದೈನಿಕ, ೩೯-೪೧ ರಲ್ಲಿ ಧಾರವಾಡದ United Karnataka ಎಂಬ ಇಂಗ್ಲಿಷ್ ವಾರಪತ್ರಿಕೆಯಲ್ಲಿ, ೪೨-೪೩ ರಲ್ಲಿ ಧಾರವಾಡದ "ವಾಗ್ಭೂಷಣ ಪತ್ರಿಕೆಯಲ್ಲಿ , ೪೭-೪೯ ರಲ್ಲಿ ಹುಬ್ಬಳ್ಳಿಯ ನವಯುಗ ದೈನಿಕದಲ್ಲಿ , ೫೨-೫೬ ರಲ್ಲಿ ಧಾರವಾಡದ ಜಯಕರ್ನಾಟಕ ದಲ್ಲಿ, ೬೦-೬೪ ರಲ್ಲಿ ಹೊನ್ನಾವರದ ಜನತಾ ವಾರಪತ್ರಿಕೆಯಲ್ಲಿ, ನಂತರ ಕೆಲ ವರ್ಷ ನಾಗರಿಕ ವಾರಪತ್ರಿಕೆಯಲ್ಲಿ - ಹೀಗೆ ಅವರು ನಾಡಿನ ವಿವಿಧ ಪತ್ರಿಕೆಗಳ ಸಂಪಾದಕರಾಗಿ, ಉಪಸಂಪಾದಕರಾಗಿ ಕಾರ್ಯ ನಿರ್ವಹಿಸಿದರು. ಈ ನಡುವೆ ೧೯೫೭ ರಿಂದ ೫೯ ರತನಕ ಮದ್ರಾಸಿನ " ಸದರ್ನ್ ಲ್ಯಾಂಗ್ವೇಜ್ ಬುಕ್ ಟ್ರಸ್ಟ್ ನಲ್ಲಿ ಕನ್ನಡ ವಿಭಾಗದ ಪ್ರಧಾನ ಸಂಪಾದಕರಾಗಿದ್ದರು.

ಪತ್ರಕರ್ತರಾಗಿ ಪಾಂಡೇಶ್ವರರ ವೈಶಿಷ್ಟ್ಯವೆಂದರೆ ಅವರ ನಿರ್ಭೀತ ಧೋರಣೆ. ಅನ್ಯಾಯವನ್ನೆಂದೂ ಸಹಿಸದ ಅವರು ಸಾಮಾಜಿಕ ರಾಜಕೀಯ ಕ್ಷೇತ್ರಗಳಲ್ಲಿ ಕಂಡುಬರುವ ಅನ್ಯಾಯ ಅನಾಚಾರ, ಅನೈತಿಕತೆಗಳನ್ನು ಯಾರ ಮುಲಾಜಿಲ್ಲದೇ ಕಟುವಾಗಿ ಟೀಕಿಸುತ್ತಿದ್ದರು. ಅವರು ಅಪ್ಪಟ ಜಾತ್ಯತೀತ ನಿಲುವಿನವರಾಗಿದ್ದರು. ಅಂತಹ ಹಲವು ಸಂದರ್ಭಗಳಿವೆ. ಶಂಬೂಕ ವಧೆಗೆ ಸಂಬಂಧಿಸಿದಂತೆ ಈಗಿನ ಪೇಜಾವರ ಶ್ರೀಗಳು ಒಂದೆಡೆ ಹೇಳಿದ ವಿಚಾರವನ್ನು ಖಂಡಿಸಿ ಸಂಯುಕ್ತ ಕರ್ನಾಟಕದಲ್ಲಿ ಲೇಖನ ಬರೆದಿದ್ದರು. ಆ ವಿಷಯವಾಗಿ ಎರಡು ಮೂರು ಸಲ ಅವರ ನಡುವೆ ವಾದವಿವಾದ ನಡೆದಿತ್ತು. ನಂತರವೂ ಅವರಿಬ್ಬರೂ ಸ್ನೇಹಭಾವದಿಂದಲೇ ಇದ್ದರು.

ಕವಿ ಬೇಂದ್ರೆಯವರ ಬಗ್ಗೆ ಅವರಿಗೆ ಸಾಕಷ್ಟು ಮೆಚ್ಚುಗೆ ಇದ್ದರೂ ಸಹ ನಾಕು ತಂತಿಗೆ ಜ್ಞಾನ ಪೀಠ ಪ್ರಶಸ್ತಿ ಬಂದಾಗ ಅದನ್ನು ಕಟುವಾಗಿ ವಿಮರ್ಶಿಸಿ ಬರೆದಿದ್ದರು.

ಗಾಂಧೀ ಅನುಯಾಯಿಗಳಾಗಿದ್ದ ಅವರು ಬದುಕಿನುದ್ದಕ್ಕೂ ಖಾದೀಧಾರಿಗಳಾಗಿದ್ದರಲ್ಲದೆ ಸಿರಸಿಯ ಅಕದಾಸ ಗಣಪತಿ ಭಟ್ಟರ ಬಾಲವಿಧವಾ ಚಳವಳಿಯ ಪ್ರಭಾವಕ್ಕೊಳಗಾಗಿ ತಾವೂ ಬಾಲವಿಧವೆಯೊಬ್ಬರನ್ನೇ ಮದುವೆಯಾಗಿ‌ ಆದರ್ಶ ಮೆರೆದಿದ್ದರು.

ಗದ್ಯ ಸಾಹಿತ್ಯ

********** ***********

೧೯೫೦ ರಲ್ಲಿ ಪಾಂಡೇಶ್ವರರ " ರಾಧಸ್" ಎಂಬ ಪುಸ್ತಕ ಹೊರಬಂತು. ಪುಸ್ತಕಕ್ಕೆ ಹೆಸರಿಡುವದರಲ್ಲಿ ಅವರದೇ ಒಂದು ವೈಶಿಷ್ಟ್ಯ ಇತ್ತು. ಸಾಮಾನ್ಯ ಬಳಕೆಯಲ್ಲಿಲ್ಲದ ಸುಂದರ ಶಬ್ದಗಳನ್ನೇ ಅವರು ಆಯ್ಕೆ ಮಾಡಿಕೊಳ್ಳುತ್ತಿದ್ದರು.( ಚೆಂಗಲವೆ, ಚಾಂದನಿಕ ಮೊದಲಾದವು). ರಾಧ: ಅಂದರೆ ವೈಶಾಖಮಾಸ. ರಾಧಸ್ ನಲ್ಲಿ ಸಾಹಿತ್ಯ ಕಲೆಗೆ ಸಂಬಂಧಪಟ್ಟ ಲೇಖನಗಳಿದ್ದು ಡಿವಿಜಿಯವರು ಅದರ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುತ್ತ ನಿಮ್ಮ ಪುಸ್ತಕದಿಂದ ನಾನು ಅನೇಕ ಸಂಗತಿಗಳನ್ನು ಅರಿತುಕೊಂಡೆ ಎಂದಿದ್ದಾರೆ.

" ಯಕ್ಷಗಾನ ಕಲಾಲೋಕ" ಅವರ ಎರಡನೆಯ ಗದ್ಯಕೃತಿ. ೧೯೪೯ ಮತ್ತು ೫೫ ರಲ್ಲಿ ಪಾಂಡೇಶ್ವರರು ಸಿರ್ಸಿ ಹಾಗೂ ಬದಿಯಡ್ಕಗಳಲ್ಲಿ ಜರುಗಿದ ಅ. ಕ. ಯಕ್ಷಗಾನ ಸಮ್ಮೇಳನಗಳ ಅಧ್ಯಕ್ಷರಾಗಿ ಮಾಡಿದ ಭಾಷಣಗಳೂ ಇದರಲ್ಲಿವೆ. ಯಕ್ಷಗಾನ ಬಯಲಾಟದ ಕುರಿತು ಅವರು ತಮ್ಮದೇ ಆದ ವಿಚಾರಗಳನ್ನು ನೀಡಿದ್ದಾರೆ. ಅಖಿಲ ಕರ್ನಾಟಕ ಯಕ್ಷಗಾನ ನಾಟಕ ಕಲಾಕೇಂದ್ರವೊಂದನ್ನು ಅಸ್ತಿತ್ವಕ್ಕೆ ತರಬೇಕೆಂದು ಆಗಲೇ ಪಾಂಡೇಶ್ವರರು ಹೇಳಿದ್ದರು.

ಇದಾಗಿ ಕೆಲ ಕಾಲದ ನಂತರ ಡಾ. ಶಿವರಾಮ ಕಾರಂತರ " ಯಕ್ಷಗಾನ ಬಯಲಾಟ" ಗ್ರಂಥ ಹೊರಬಂದಾಗ ಪಾಂಡೇಶ್ವರರೇ ಅದನ್ನು ವಿಮರ್ಶಿಸುತ್ತ ಪ್ರಶಂಸಿದ್ದುಂಟು. ( ಪ್ರಜಾಮತ)

ನಂತರ ಮೇರಿ ಕ್ಯೂರಿ, ಬುಕರ್ ಟಿ. ವಾಶಿಂಗ್ಟನ್, ಸರ್ವೋದಯ ಸಮಾಜ, ಮೊದಲಾದವು ಹೊರಬಂದವಲ್ಲದೆ ಗಾಂಧೀಜಿಯವರ ದೃಷ್ಟಿಯಿಂದ "ಸತ್ಯ " ಎಂಬ ಪುಸ್ತಕ ಅನುವಾದಿಸಿದ್ದಾರೆ.

ಪಾಂಡೇಶ್ವರರು ಕನ್ನಡ ಭಾಷೆಯ ಮೇಲೆ ಅಸಾಧಾರಣ ಹಿಡಿತ ಹೊಂದಿದ್ದರಿಂದ ಅವರ ಭಾಷಾಶೈಲಿಯ ಬಗ್ಗೆ ಹೇಳಬೇಕಾದ್ದೇನಿಲ್ಲ. ಅದು ಅತ್ಯಂತ ಶಕ್ತಿಯುತವಾದುದಾಗಿತ್ತು.

೧೯೬೧ ರಲ್ಲಿ ಪ್ರಕಟವಾದ ವಿಜ್ಞಾನ ವಿದುಷಿ ಮೇರಿ ಕ್ಯೂರಿ ಮೈಸೂರು ಸರಕಾರದಿಂದ Nondetailed Text Book ಎಂದು ಮಂಜೂರಾಗಿತ್ತು. ಅದು ನೂರು ಪುಟಗಳಷ್ಟಿದೆ. ಆದರ್ಶ ಪುರುಷ ಬುಕರ್ ಟಿ. ವಾಶಿಂಗ್ಟನ್ ಎಂಬ ಪುಸ್ತಕ ೬೪ ಪುಟಗಳಷ್ಟಿದೆ.

ಅವರು ದೀರ್ಘಕಾಲ ಪತ್ರಕರ್ತರಾಗಿದ್ದು ಅವರ ಲೇಖನಗಳೇ ಸಾವಿರಾರು ಪುಟಗಳಾಗುತ್ತವಾದರೂ ಹೆಚ್ಚಿನವು ಪ್ರಕಟವಾಗಿಲ್ಲ. ಅವನ್ನೇ ಪ್ರಕಟಿಸಿದ್ದರೆ ಹತ್ತಾರು ಪುಸ್ತಕಗಳಾಗುತ್ತಿದ್ದವು.

ಡಾ. ಶಿವರಾಮ ಕಾರಂತರ ಸಮಕಾಲೀನರು ಪಾಂಡೇಶ್ವರರು. ಪರಸ್ಪರ ಬಹಳ ಒಡನಾಟವೂ ಇತ್ತು. ಆದರೆ ಏಕೋ ಕಾರಂತರಿಗೆ ಸಿಕ್ಕಷ್ಟು ಪ್ರಚಾರ ಪ್ರಸಿದ್ಧಿ ಅವರಿಗೆ ಸಿಗಲಿಲ್ಲ. ಅವರ ವಿದ್ವತ್ತು, ಪ್ರತಿಭೆಗಳು ಪಡೆಯಬೇಕಾದಷ್ಟು ಮನ್ನಣೆ, ಗೌರವ ಪಡೆಯಲಿಲ್ಲ. ಅದಕ್ಕೆ ಅವರ ನೇರ ನಿಷ್ಠುರ ನಡೆನುಡಿ, ಯಾರಿಗೂ ತಲೆಬಾಗದ ಸ್ವಾಭಿಮಾನಗಳೂ ಕಾರಣವಾಗಿರಬಹುದು.

ದೇವರಾಜ ಅರಸು ಮುಖ್ಯಮಂತ್ರಿ ಆಗಿದ್ದಾಗ ಒಮ್ಮೆ ತುಂಬಿದ ಸಭೆಯಲ್ಲೇ‌ ಅವರ ಬೆವರಿಳಿಸಿದ್ದರು. ಯಾರ್ಯಾರಿಗೋ ಸರ್ಕಾರ ೫೦೦ ರೂ ಮಾಸಾಶನ ನೀಡಿ ಪಾಂಡೇಶ್ವರರಿಗೆ ೧೫೦ ರೂ. ನೀಡಿತ್ತು. ಕೊನೆಗೆ ಅರಸರಿಗೆ ಇದು ತಿಳಿದಾಗ ಅವರಿಗೂ‌ ೫೦೦ ರೂ. ಆರಂಭವಾಯಿತು.

ಅಭಿಮಾನಕ್ಕೆ ಧಕ್ಕೆಯಾಗುವಂತಹ ಸಂದರ್ಭ ಬಂದಾಗ ಒಳ್ಳೆಯ ಕೆಲಸಕ್ಕೂ ರಾಜೀನಾಮೆ ಬಿಸಾಕಿ ಹೊರಟುಬಿಡುತ್ತಿದ್ದರು. ಅದರಿಂದ ಕುಟುಂಬ ಸಹಿತವಾಗಿ ತೊಂದರೆಯನ್ನೂ ಅನುಭವಿಸುತ್ತಿದ್ದರು. ಸಾಲದ್ದಕ್ಕೆ ಕೊನೆಯ ಹಂತದಲ್ಲಿ ಕ್ಯಾನ್ಸರ್ ನಿಂದ ಅವರ ತೋಳಿನತನಕ ಕೈ ಕತ್ತರಿಸಬೇಕಾದ ಸಂದರ್ಭವೂ ಬಂತು. ಇದು ಅವರನ್ನು ಜರ್ಝರಿತಗೊಳಿಸಿತು. ಜೀವನವಿಡೀ ಯಾವ ಕೈ ಸಾವಿರಾರು ಕಾವ್ಯ ಗದ್ಯ ಪತ್ರಿಕಾಲೇಖನಗಳನ್ನು ಬರೆಯಿತೋ ಅದೇ ಕೈಯನ್ನು ಅವರು ಕಳೆದುಕೊಂಡರು. ಅದೆಂಥ ವೇದನೆ ಅನುಭವಿಸಿರಬೇಡ ಆ ಜೀವ!

ನಾಡಿನ ಪ್ರಸಿದ್ಧ ಪತ್ರಿಕೆಗಳಲ್ಲಿ ಕೆಲಸ ಮಾಡಿದ ಈ ಮಹಾನ್ ಪತ್ರಕರ್ತರು ಕೊನೆಗೆ ಹೊನ್ನಾವರಕ್ಕೆ ಬಂದು ಜನತಾ ವಾರಪತ್ರಿಕೆಯ ಸಂಪಾದಕರಾಗಿ‌ ಕೆಲಸ ಮಾಡುವಂತಾಯಿತು. ಅದರ ಮಾಲಕರು ಓರ್ವ ಶಾಸಕರು. ಅವರಿಗೆ ಸಚಿವರಾಗಿದ್ದ ರಾಮಕೃಷ್ಣ ಹೆಗಡೆಯವರು ಆಪ್ತರು. ಕಾರವಾರದಲ್ಲಿ ಜರುಗಿದ ಕನ್ನಡ ಸಾಹಿತ್ಯ ಸಮ್ಮೇಳನದ ವೇದಿಕೆಯಲ್ಲೇ ರಾಮಕೃಷ್ಣ ಹೆಗಡೆಯವರು‌ ಸಿಗರೇಟು ಸೇದಿದ್ದನ್ನು ಪಾಂಡೇಶ್ವರರು ಕಟುವಾಗಿ ಟೀಕಿಸಿ ಜನತಾದಲ್ಲಿ ಬರೆದರು. ಸರಿ, ಕೆಲಸ ಬಿಡಬೇಕಾಯಿತು.

ಆದರೂ ಪಾಂಡೇಶ್ವರರು ಹೊನ್ನಾವರ ಬಿಡಲಿಲ್ಲ. ಅಲ್ಲೇ ದೀನಬಂಧು ಮುದ್ರಣಾಲಯ ಮತ್ತು ನಾಗರಿಕ ವಾರಪತ್ರಿಕೆ ಸಂಪಾದಕರಾಗಿ ಇನ್ನಷ್ಟು ಕಾಲ ಉಳಿದರು. ಹೊನ್ನಾವರಕ್ಕೆ ಮೊದಲ ಸಲ ಬಂದಾಗ ಅವರು‌ ನಮ್ಮ ಮನೆಯಲ್ಲೇ ಕೆಲಕಾಲ ಉಳಿದುಕೊಂಡು ನಂತರ ಭಾಡಿಗೆ ಮನೆ ಸಿಕ್ಕಾಗ ಅಲ್ಲಿಗೆ ಹೋದರು.

ಅವರು ಜನತಾ ಮತ್ತು ನಾಗರಿಕ ಪತ್ರಿಕೆ ಮೂಲಕ ನನಗೆ ಪತ್ರಿಕೋದ್ಯಮದ ಮೂಲ ತರಬೇತಿ ನೀಡಿದರು. ಸಾಹಿತ್ಯದ ಅಭಿರುಚಿ ಬೆಳೆಸಿದರು. ನನ್ನ ಆರಂಭದ ಬರೆಹಗಳೆಲ್ಲ ಪ್ರಕಟವಾಗಿದ್ದು ಜನತಾ ನಾಗರಿಕಗಳಲ್ಲೇ. ಏನೇ ಬರೆದುಕೊಂಡು ಹೋದರೂ ಚೆನ್ನಾಗಿ ಬರೆದಿದ್ದೀಯೋ‌ ಲಕ್ಷ್ಮೀನಾರಾಯಣಾ ಎಂದು ಬೆನ್ನು ಚಪ್ಪರಿಸಿ ಪ್ರಕಟಿಸುತ್ತಿದ್ದ ಅವರಿಂದಲೇ ನಾನು ಒಬ್ಬ ಪತ್ರಕರ್ತ ಬರೆಹಗಾರನಾಗಿ ರೂಪುಗೊಂಡಿದ್ದು. ಇಂದು ಅಕ್ಷರ ಲೋಕದಲ್ಲಿ ನಾನು ಏನಾದರೂ ಅಲ್ಪ ಸ್ವಲ್ಪ ಮನ್ನಣೆ , ಗೌರವ ಪಡೆದಿದ್ದರೆ ಅದು ಅವರ ಅನುಗ್ರಹದಿಂದಲೇ. ನನ್ನ ಅದೃಷ್ಟವೆಂದರೆ ಧಾರವಾಡದಲ್ಲಿ ಪಾಂಡೇಶ್ವರರ ಹೆಸರಿನ ಪ್ರತಿಷ್ಠಾನ ರಚನೆಯಾದಾಗ ಅದರ ಮೊದಲ ವರ್ಷದ ಪ್ರಶಸ್ತಿಯೇ ನನಗೆ ದೊರಕಿತು. ಡಾ. ಪಾಟೀಲ್ ಪುಟ್ಟಪ್ಪ, ಡಾ. ಚೆನ್ನವೀರ ಕಣವಿ ಆ ಪ್ರಶಸ್ತಿ ಪ್ರದಾನ ಮಾಡಿದರು.

ಅಂತಹ ದೊಡ್ಡ ಗುರುವಿಗೆ ನಾನೇನು ಕೊಡಬಲ್ಲೆ ಈ ನುಡಿನಮನದ ಹೊರತಾಗಿ?


ಲಕ್ಷ್ಮಿನಾರಾಯಣ ಶಾಸ್ತ್ರಿ


' ಬೆಳಕಿನ ಬೀಜಗಳು ನಾವು ನಮಗೆಲ್ಲಿಯ ಸಾವು' ಎಂದು ಕೇಳಿದ ದಿಟ್ಟ ನಿಲುವಿನ ನೇರ ನಡೆ ನುಡಿಯ ಕವಿ,ವಾಗ್ಮಿ, ಪತ್ರಿಕೋದ್ಯಮಿ,ಯಕ್ಷಗಾನ ಪ್ರಸಂಗ ಕರ್ತೃ ಮತ್ತು ನಟ, ನನ್ನ " ಭಾರತ ಮಾತೆ" ಎಂಬ ಮೊದಲ ಕವಿತೆಯನ್ನು ನಾಗರೀಕ ಪತ್ರಿಕೆಯಲ್ಲಿ‌ ೧೯೭೪ ನೆ ಇಸ್ವಿಯಲ್ಲಿ ಪ್ರಕಟಿಸಿ ಬೆನ್ನು ತಟ್ಟಿದವರು ನನಗೆ ಪ್ರಾತ: ಸ್ಮರಣೀಯರು ಆದ ಗಣಪತರಾವ್ ಪಾಂಡೇಶ್ವರ ಅವರ ಬಗ್ಗೆ ನನ್ನ ಮೊದಲ ಕವನ ಸಂಕಲನ "ಪ್ರಿಯ ಶರಾವತಿ" ಯನ್ನು ಮುದ್ರಿಸಿ ಕೊಟ್ಟ ನನ್ನ ಹಿತೈಷಿಗಳಾದ ಎಲ್.ಎಸ್.ಶಾಸ್ತ್ರಿ ಅವರು ಬರೆದ ಲೇಖನ ನಿಮ್ಮ ಓದಿಗಾಗಿ. ಡಾ.ಶ್ರೀಪಾದ ಶೆಟ್ಟಿ ಆಲೋಚನೆ.ಕಾಂ




54 views0 comments
bottom of page