top of page

ಬುಕ್ ಫೇಸ್ -೨೯೪

ಕುರುಕ್ಷೇತ್ರಕ್ಕೂ ಒಂದು ಆಯೋಗ

ರಚಿಸಿದ ದೇರಾಜೆಯವರು

********

ಹೆಸರೇ ಕುತೂಹಲ ಹುಟ್ಟಿಸುವಂತಹದು. ಕನ್ನಡದಲ್ಲಷ್ಟೇ ಏಕೆ, ಭಾರತೀಯ ಭಾಷೆಗಳಲ್ಲೇ ಅಪರೂಪದ/ ವಿಶಿಷ್ಟ ಪ್ರಯೋಗಾತ್ಮಕ ಕೃತಿ ಎನ್ನಬಹುದು. ಅಂದರೆ ಈ ಬಗೆಯಲ್ಲಿ ಯೋಚಿಸುವದೇ ಒಂದು ವಿಶೇಷ ಅಂಶ. ಹೌದು, ಇದು ಮಹಾಭಾರತದ್ದೇ ಕುರುಕ್ಷೇತ್ರ. ರಾಮಾಯಣ ಮಹಾಭಾರತಗಳು ಯಾವತ್ತೂ ಮರುಓದು, ಮರುರಚನೆಗಳಿಗೆ ತಮ್ಮನ್ನು ತೆರೆದಿಟ್ಟುಕೊಂಡ ಮಹಾನ್ ಕೃತಿಗಳು. ಯೋಚನೆ ಮಾಡುವವರ ಸಾಮರ್ಥ್ಯಕ್ಕೆ ತಕ್ಕಂತೆ ಹರಡಿಕೊೞ್ಳುತ್ತ ಹೋಗುವ ಈ ಮಹಾಕಾವ್ಯಗಳು ಸಹಸ್ರಾರು ವರ್ಷಗಳಿಂದಲೂ ತಮ್ಮ ಮಹತ್ವ ಮತ್ತು ಅಸ್ತಿತ್ವ ಉಳಿಸಿಕೊಂಡಿರುವದಕ್ಕೆ ಕಾರಣ ಅದೇ. ಅವು ಎಂದೆಂದಿಗೂ ಹೊಸದೇ.

ದೇರಾಜೆ ಸೀತಾರಾಮಯ್ಯನವರು ಯಕ್ಷಗಾನ ತಾಳಮದ್ದಳೆ ಕ್ಷೇತ್ರದ ಮಹಾರಥಿಗಳಲ್ಲೊಬ್ಬರು. ರಾಮಾಯಣ ಮಹಾಭಾರತಗಳನ್ನೆಲ್ಲ ಅರೆದು ಕುಡಿದವರು.

ಅರ್ಥಗಾರಿಕೆಯಲ್ಲಿ ತಮ್ಮದೇ ಛಾಪು ಮೂಡಿಸಿದವರು. ರಾಮಾಯಣ ಮಹಾಭಾರತಗಳನ್ನು

ತಮ್ಮದೇ ಅರ್ಥಗಾರಿಕೆಯ ಹಿನ್ನೆಲೆಯಲ್ಲಿ ಮಥಿಸಿ ಮರುರಚನೆ ಮಾಡಿದವರು. ಅವು ಅರ್ಥಗಾರಿಕೆಗೆ

ತೊಡಗುವವರಿಗೆಲ್ಲ ಮಾರ್ಗದರ್ಶಿ ಗ್ರಂಥಗಳು.

ಅಂತಹ ದೇರಾಜೆಯವರಿಗೆ ಕುರುಕ್ಷೇತ್ರಕ್ಕೂ ಒಂದು ಆಯೋಗ ರಚನೆ ಮಾಡುವ ವಿಚಾರ ಬಂದಿದ್ದರಲ್ಲಿ ಆಶ್ಚರ್ಯವೇನಿಲ್ಲ. ಹೇಗಿದ್ದರೂ ಇದು ಪ್ರಜಾಪ್ರಭುತ್ವ. ಆಳುವ ಸರಕಾರಗಳು ಆಗಾಗ ಏನೇನೊ ಕಾರಣಗಳಿಗಾಗಿ ಆಯೋಗ, ಸಮಿತಿ ರಚನೆ ಮಾಡುತ್ತಲೇಇರುತ್ತವೆ. ಆದರೆ ದೇರಾಜೆಯವರು ಆಯೋಗ ರಚನೆಗೆ ಆಯ್ಕೆ ಮಾಡಿಕೊಂಡಿದ್ದು ಮಾತ್ರ ಪ್ರಸ್ತುತ ಸಮಸ್ಯೆಗಳ ಬಗ್ಗೆ ಅಲ್ಲ. ಆ ಅಧಿಕಾರ ತಮಗಿಲ್ಲ ಎಂದು ಅವರಿಗೆ ಗೊತ್ತು. ಅದಕ್ಕೇ ಮಹಾಭಾರತದ ಮಹಾಮಹಾ ಶೂರವೀರರುಗಳಾದ ಭೀಷ್ಮದ್ರೋಣಾದಿಗಳು, ಮಹಾಮಹಿಮ ಶ್ರೀಕೃಷ್ಣ, ಧೃತರಾಷ್ಟ್ರ, ಧರ್ಮರಾಜ, ಕೌರವ, ಕರ್ಣ ಮೊದಲಾದವರನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಿ ಮಹಾಭಾರತ ಯುದ್ಧಕ್ಕೆ ಮತ್ತು ಅದರಿಂದಾದ ಅನಾಹುತಗಳಿಗೆ ನಿಜವಾಗಿಯೂ ಯಾರು ಕಾರಣರು ಎನ್ನುವ ವಿಚಾರವಾಗಿ ಬಹಳ ಗಂಭೀರವಾದ ವಿಚಾರಣೆ ಮಾಡುವಂತಹ ಆಯೋಗವೊಂದನ್ನು ದೇರಾಜೆಯವರು ಸರಕಾರಿ ಮಾದರಿಯಲ್ಲೇ ರಚನೆ ಮಾಡುತ್ತಾರೆ. ಸಂಜಯನಿಂದಾರಂಭವಾಗಿ ವಿದುರನತನಕ ಹದಿನೈದು ಜನರು ಇಲ್ಲಿ ವಿಚಾರಣೆಯನ್ನೆದುರಿಸುತ್ತಾರೆ. ಕೃಷ್ಣನ ಪರವಾಗಿ ಶೌನಕ ಮುನಿ ತಮ್ಮ ಅಭಿಪ್ರಾಯ ಮಂಡಿಸುತ್ತಾರೆ. ಧರ್ಮದೇವತೆಯೇ ನ್ಯಾಯಮೂರ್ತಿಯಾಗಿ ಕಾರ್ಯ ನಿರ್ವಹಿಸುವದು. ಆಯೋಗ ಕ್ರಮಬದ್ಧವಾಗಿ ಎಲ್ಲರ ಹೇಳಿಕೆಗಳನ್ನು ದಾಖಲಿಸಿಕೊಳ್ಳುತ್ತದೆ. ಅದಕ್ಕೊಬ್ಬ ಕಾರ್ಯಸಂಯೋಜಕರಿರುತ್ತಾರೆ. ಪ್ರಸ್ತಾವಿಕ ಆರೋಪಗಳು ಮತ್ತು ಸಾಂದರ್ಭಿಕ ಆರೋಪಗಳನ್ನೆಲ್ಲ ಪರಿಶೀಲಿಸಿದ ನಂತರ ನ್ಯಾಯಮೂರ್ತಿಗಳು ಕೊನೆಗೆ ತಮ್ಮ ತೀರ್ಪು ನೀಡುತ್ತಾರೆ. ಸಂಜಯ, ದುರ್ಯೋಧನ, ಭೀಷ್ಮ, ದ್ರೋಣ, ಕರ್ಣ, ಶಲ್ಯ, ಶಕುನಿ, ಅಶ್ವತ್ಥಾಮ, ಧರ್ಮರಾಯ, ದ್ರೌಪದಿ, ಕುಂತಿ ಎಲ್ಲರ ವಿಚಾರಗಳನ್ನೂ ಕೇಳಿಕೊಳ್ಳಲಾಗುತ್ತದೆ. ಎಲ್ಲರೂ ತಮ್ಮ ತಮ್ಮ ನಿಲುವು, ಕಾರ್ಯಗಳನ್ನು ತಮ್ಮದೇ ಆದ ರೀತಿಯಲ್ಲಿ ಸಮರ್ಥಿಸಿಕೊಳ್ಳುತ್ತಾರೆ.

ಕೊನೆಗೂ ಯಾರು ತಪ್ಪಿತಸ್ಥರು, ಯಾರು ಅಲ್ಲ, ಆಯೋಗ ಏನು ತೀರ್ಪು ನೀಡಿತು ಎಂದು ತಿಳಿಯಲು ನೀವು ಈ ಪುಸ್ತಕವನ್ನೇ ಓದಬೇಕು. ನಿಮ್ಮ ಕುತೂಹಲವನ್ನು ಹಾಗೆ ಉಳಿಸಬಯಸುತ್ತೇನೆ. ಇದನ್ನು ೧೯೮೧ ರಲ್ಲಿ ಧರ್ಮಸ್ಥಳದ ಡಾ. ವೀರೇಂದ್ರ ಹೆಗ್ಗಡೆಯವರೇ ತಮ್ಮ ಧರ್ಮಸ್ಥಳ ಎಜ್ಯುಕೇಶನ್ ಟ್ರಸ್ಟನಿಂದ ಮೊದಲ ಸಲ ಪ್ರಕಟಿಸಿದ್ದಾರೆಂದ ಮೇಲೆ ಅದರ ಮಹತ್ವದ ಬಗ್ಗೆ ನಾನು ಹೇಳುವದೇನಿದೆ. ನಂತರ ದೇರಾಜೆ ಸೀತಾರಾಮಯ್ಯ ಸಾಂಸ್ಕೃತಿಕ ಪ್ರತಿಷ್ಠಾನ ೨೦೦೭ ರಲ್ಲಿ ಮರುಮುದ್ರಣ ಮಾಡಿದೆ. ದೇರಾಜೆ ಶೈಲಿ ಮತ್ತು ನಿರೂಪಣೆ, ವಿಷಯ ಮಂಡಿಸುವ ರೀತಿ ಅಪ್ರತಿಮವಾದುದು. ಈವರೆಗೆ ಓದದವರು ಓದಲೇಬೇಕು. ಬರೆಹಗಾರನೊಬ್ಬನ ಕಲ್ಪನಾವಿಲಾಸ ಇಲ್ಲಿ ಭೃಂಗದ ಬೆನ್ನೇರಿ ಜಗದಗಲ ಮುಗಿಲಗಲ ಹಾರಾಡಿದೆ. ತಪ್ಪದೇ ಓದಿ.



ಪುಸ್ತಕಕ್ಕಾಗಿ ಮೂರ್ತಿ ದೇರಾಜೆಯವರನ್ನು ಸಂಪರ್ಕಿಸಿ. ಮೊ. ನಂ. ೯೪೪೮೨ ೩೯೫೧೯

‌‌ - ಎಲ್. ಎಸ್. ಶಾಸ್ತ್ರಿ




12 views0 comments
bottom of page