top of page

ಬುಕ್ ಫೇಸ್ -೨೯೩

ಮಲೆನಾಡಿನ ಮರೆಯಲ್ಲಿದ್ದ ಯಕ್ಷಚೇತನಗಳ ಪರಿಚಯ


ಸುಪ್ರಸಿದ್ಧ ಕಲಾವಿದರ ಬಗ್ಗೆ ಬರೆಯಲು ಮಾಹಿತಿಗಳು ಬೇಗ ಸಿಗಬಹುದು. ಆದರೆ ಅಷ್ಟೇನೂ ಪ್ರಸಿದ್ಧಿ ಪಡೆಯದೇ ಇದ್ದರೂ ತಮ್ಮ ತಮ್ಮ ಮಿತಿಯಲ್ಲೇ ಯಕ್ಷಗಾನಕ್ಕೆ ಸೇವೆ ಸಲ್ಲಿಸಿ ಆ ಕಲೆಯ ಬೆಳವಣಿಗೆಗೆ ತಮ್ಮ ಕೊಡುಗೆ ನೀಡಿದ ಕಲಾವಿದರನ್ನು ಗುರುತಿಸಿ ಅವರ ಬಗ್ಗೆ ಮಾಹಿತಿ ದಾಖಲಿಸುವದು ಕಷ್ಟದ ಕೆಲಸ. ರವಿ ಮಡೋಡಿಯವರು ಅಂತಹ ೨೫ ಕಲಾಚೇತನಗಳ ಕುರಿತು ವಿವರ ಸಂಗ್ರಹಿಸಿ ಪುಸ್ತಕವಾಗಿಸಿರುವದು ಸ್ತುತ್ಯಾರ್ಹ ಕೆಲಸ. ಇವರೆಲ್ಲ ಮಲೆನಾಡು ಪ್ರದೇಶದ ಹಳ್ಳಿಗಳಲ್ಲಿ ಅಕ್ಷರಶಃ ಎಲೆ ಮರೆಯ ಹೂವು ಹಣ್ಣುಗಳಂತೆ ಇದ್ದವರು. ಆದರೆ ಸಮರ್ಥ ಕಲಾವಿದರು. ಪರಂಪರಾಗತ ಯಕ್ಷಗಾನದ ಅರ್ಹ ಪ್ರತಿನಿಧಿಗಳು. ಅಂಥವರನ್ನು ಪರಿಚಯಿಸುವದು ಅಗತ್ಯವೂ ಹೌದು.

‌ರವಿ ಮಡೋಡಿ ಯಕ್ಷಗಾನದ ವೃತ್ತಿ ಕಲಾವಿದರಲ್ಲದಿದ್ದರೂ ಆ ಕ್ಷೇತ್ರದ ಹತ್ತಿರದ ಪರಿಚಯವುಳ್ಳವರು ಮಾತ್ರವಲ್ಲ, ಹಲವು ಬಗೆಯಲ್ಲಿ ಆ ಕಲೆಗೆ ಸಂಬಂಧಿಸಿದ ಕೆಲಸ ಮಾಡುತ್ತ ಬಂದವರು. ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ಅವರು ಯಕ್ಷಗಾನ ಕಲಾರಂಗಕ್ಕೆ ತಂತ್ರಜ್ಞಾನದ ಪ್ರಯೋಜನ ದೊರಕಿಸಿಕಡಲು ಪ್ರಯತ್ನಿಸಿದವರು. ಯಕ್ಷವಾಹಿನಿ ಮತ್ತು ಯಕ್ಷ ಸಿಂಚನ ಎಂಬ ಎರಡು ಸಂಸ್ಥೆಗಳ ಮೂಲಕ ಈ ಕಲೆಯ ಬೆಳವಣಿಗೆಗೆ ಪೂರಕವಾದ ಕಾರ್ಯ ಯೋಜನೆಗಳನ್ನು ರೂಪಿಸಿಕೊಂಡು ನಿರಂತರವಾಗಿ ಅದರ ಬಗ್ಗೆ ಚಿಂತಿಸುತ್ತ ವಿವಿಧ ಚಟುವಟಿಕೆಗಳನ್ನು ನಡೆಸುತ್ತ ಬಂದವರು.

ಇದರಲ್ಲಿ ಬರುವ ೨೫ ಕಲಾವಿದರಲ್ಲಿ ವೃತ್ತಿ ಮೇಳಗಳಲ್ಲಿದ್ದವರು ಕಡಿಮೆ. ಹಳ್ಳಿಗಳಲ್ಲಿ ತಮ್ಮ ತೋಟಗದ್ದೆಮನೆ ನೋಡಿಕೊಳ್ಳುತ್ತಲೇ ಹವ್ಯಾಸವಾಗಿ ಯಕ್ಷಗಾನವನ್ನು ಸ್ವೀಕರಿಸಿದವರೇ ಹೆಚ್ಚು. ಮಲೆನಾಡು ಪ್ರದೇಶದಲ್ಲಿ ಪ್ರಸಂಗಕರ್ತರು, ಭಾಗವತರು, ವೇಷಧಾರಿಗಳು ಎಲ್ಲರೂ ಇದ್ದಾರೆ. ಅಂಥವರನ್ನೆಲ್ಲ ಹುಡುಕಿ ತೆಗೆದು ಪರಿಚಯ ಸಂಗ್ರಹಿಸುವ ಸಾಹಸದ ಕೆಲಸ ಮಾಡಿದ ರವಿ ಮಡೋಡಿಯವರು ಅಭಿನಂದನಾರ್ಹರು.

ಗಿಂಡಿಮನೆ ಪಟೇಲ ರಾಮಚಂದ್ರಪ್ಪ, ರಾಮಚಂದ್ರ ಭಾಗವತ ಕವಾಳೆ, ಅನಂತ ಹೆಗಡೆ ಕೊಳಗಿ, ನಗರ ಜಗನ್ನಾಥ ಶೆಟ್ಟಿ, ಗುಂಡುಮನೆ ರಾಮಯ್ಯ, ಮೂಡುಗೋಡು ಗಣೇಶ ಭಾಗವತರು, ಸುಬ್ರಾಯ ಶರ್ಮಾ ಕಲಗಾರು ಮೊದಲಾದ ೨೫ ಕಲಾವಿದರ ಪರಿಚಯ ಇಲ್ಲಿದ್ದು ಇನ್ನೂ ಹಲವರು ಉಳಿದುಕೊಂಡಿರುವ ಸಾಧ್ಯತೆಗಳಿರುವದನ್ನು ಅಲ್ಲಗಳೆಯುವಂತಿಲ್ಲ. ಆ ಕೆಲಸವನ್ನೂ ಮಡೋಡಿಯವರು ಮುಂದೆ ಮಾಡಿಯಾರು. ಇದು ಇತರ ಪ್ರದೇಶಗಳಲ್ಲಿಯೂ ಆಗಬೇಕಾದ ಕೆಲಸ. ಅಂತಹ ಪ್ರಯತ್ನ ಮಾಡುವವರಿಗಿದೊಂದು ಒಳ್ಳೆಯ ಮಾದರಿ ಪುಸ್ತಕ.


- ಎಲ್. ಎಸ್. ಶಾಸ್ತ್ರಿ




6 views0 comments
bottom of page