top of page

ಪತ್ರಕಾರಂಗದಲ್ಲಿ ನನ್ನ ೬೦ ವರ್ಷಗಳುಭಾಗ -೯

ಬಂಡವಾಳಶಾಹಿಗಳ ಧಿಮಾಕು

ಬಡ ಪತ್ರಕರ್ತರ ಶೋಷಣೆ


ಇದೇನು ಹೊಸ ವಿಷಯ ಅಲ್ಲ. ಶೋಷಣೆ‌ ಮಾಡುವವರೂ ಇದ್ದಾರೆ, ಶೋಷಣೆಗೊಳಗಾಗುವವರೂ ಇದ್ದಾರೆ. ಮುಂದೆಯೂ ಇರುತ್ತಾರೆ. ಬಂಡವಾಳಶಾಹಿಗಳು ಪತ್ರಿಕಾಕ್ಷೇತ್ರ ಪ್ರವೇಶಿಸಿದ್ದರಿಂದಲೇ ಅದು‌ "ಪತ್ರಿಕೋದ್ಯಮ" ಆಗಿದೆ. ಉದ್ಯಮ ಎಂದ ಮೇಲೆ ಅಲ್ಲಿ ಲಾಭನಷ್ಟಗಳ ವಿಚಾರ ಮುಖ್ಯ. ಸಹಜ. ತತ್ವಾದರ್ಶಗಳ ಪ್ರಶ್ನೆಯೇ ಇಲ್ಲ.

ಬಿಸಿರಕ್ತದ ಯುವಕರು ಪತ್ರಿಕಾರಂಗ ಪ್ರವೇಶಿಸುವಾಗ ಕೆಲವರಿಗೆ ಕೆಲವೊಂದು ಆದರ್ಶಗಳು ಇರುತ್ತವೆ. ಆದರೆ ಕ್ರಮೇಣ ಆ ಆದರ್ಶಗಳು ಕರಗಿ ಹೋಗುತ್ತವೆ. "ನಿನಗೆ ಬೇಕಿದ್ದರೆ ನೀನು ನಾವು ಹೇಳಿ ದ್ದು‌ ಕೇಳು. ಇಲ್ಲದಿದ್ದರೆ ನಿನ್ನ ದಾರಿ ನಿನಗೆ. ಪೇಪರು ನಿನ್ನದಲ್ಲ. ಹಣವೂ ನಿನ್ನದಲ್ಲ."

ಪಾಂಡೇಶ್ವರ, ಬಂಕಾಪುರರಂತಹ ತತ್ವನಿಷ್ಠ ಪತ್ರಕರ್ತರು ತಾವು ನಂಬಿದ ತತ್ವ ಬಿಡಲು ಸಿದ್ಧರಾಗಲಿಲ್ಲ. ಕೆಲಸವನ್ನೇ ಬಿಟ್ಟರು. ತೊಂದರೆಗೊಳಗಾದರು. ತಪ್ಪು ಯಾರದು? ಬದುಕಬೇಕೆಂದಿದ್ದರೆ ಅಡ್ಜೆಸ್ಟಮೆಂಟ್ ಮಾಡಿಕೊ. ಇಲ್ಲದಿದ್ದರೆ ಕಷ್ಟ ನಷ್ಟ ಅನುಭವಿಸು.

ಈ ಅನುಭವ ನನಗೂ ಆಗಿದೆ. ವಿಶಾಲ ಕರ್ನಾಟಕ ದಿನಪತ್ರಿಕೆಯಲ್ಲಿ ಸುಮಾರು‌ ಮೂರು ವರ್ಷ ಕೆಲಸ ಮಾಡಿದೆ. ಹಿಂದೆ ಜನತಾ ಪತ್ರಿಕೆಯಲ್ಲೂ ಆ ಅನುಭವ ಆಗಿತ್ತು. ಆಗಿತ್ತು

೧೯೭೯ ರಲ್ಲಿರಬೇಕು. ಉಡುಪಿಯಲ್ಲಿ ಒಂದು ‌ ಬಹಳ ದೊಡ್ಡ ಹಿಂದೂ ಧರ್ಮ ಸಮ್ಮೇಳನ ಜರುಗಿತು. ಮೂರು ದಿನ. ಹುಬ್ಬಳ್ಳಿಯಿಂದ ಪತ್ರಿಕಾ ವರದಿಗಾರರೆಲ್ಲ ಹೊರಟಿದ್ದರು. ಸಂಯುಕ್ತ , ವಿಶ್ವವಾಣಿ, ನೇತಾಜಿ‌ ಮತ್ತಿತರ ಪತ್ರಿಕೆಗಳು. ಸಂಪಾದಕರಾದ ಬಂಕಾಪುರರು ನನಗೆ ವಿಶೇಷ ವರದಿಗಾರರಾಗಿ ಹೋಗಿ‌ ಎಂದರು. ಮ್ಯಾನೇಜರರಿಗೆ ಹೇಳಿ ಸ್ವಲ್ಪ ಹಣವನ್ನೂ ಕೊಡಿಸಿದರು. ಹದಿನೈದು ಜನ ವರದಿಗಾರರು‌ ವಾಹನ ಮಾಡಿಕೊಂಡು ಹೋಗಿದ್ದೆವು. ಮುಗಿಸಿ ಬಂದದ್ದಾಯಿತು. ಬಂದದ್ದೇ ತಡ, ಪತ್ರಿಕಾ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಮಾಜಿ ಮಂತ್ರಿ ಕೆ. ಎಫ್. ಪಾಟೀಲರು ನನಗೆ ಕರೆ ಕಳಿಸಿದರು. "ನನಗೆ ಹೇಳದೇ ಹೇಗೆ ಹೋದಿರಿ? ಹಾಗೆ ಹೀಗೆ ಏನೇನೋ ತಕರಾರು.

" ಸಂಪಾದಕರು ಹೋಗಿ ಅಂದರು, ನಾನು ಹೋಗಿದ್ದೆ"

" ಅದೆಲ್ಲ ನನಗೆ ಗೊತ್ತಿಲ್ಲ. ನನ್ನ ಅಪ್ಪಣೆ ಪಡೆಯಬೇಕಿತ್ತು" ನನಗೂ ಅವರಿಗೂ ತುಂಬ ಬಿಸಿಬಿಸಿ ಮಾತುಗಳಾದವು. ಕೊನೆಗೆ ನಾನು ಹೇಳಿದೆ " ಎಲ್ಲಿ ಪತ್ರಿಕೆಯ ಸಂಪಾದಕರ ಮಾತಿಗೇ ಬೆಲೆ ಇಲ್ಲವೋ‌ ಅಲ್ಲಿ ನಾನು ಇರಲು ಬಯಸುವದಿಲ್ಲ. ನಾನು ರಾಜೀನಾಮೆ ಕೊಡುತ್ತಿದ್ದೇನೆ" ರಾಜೀನಾಮೆ ಪತ್ರ ಅವರ ಮುಖದ ಮೇಲೆ ಬಿಸಾಕಿದೆ. ಅದು‌ ನಾನು ನನ್ನ ಗುರು ಪಾಂಡೇಶ್ವರರಿಂದ ಕಲಿತದ್ದು.

‌‌ ‌‌ ‌‌‌‌‌‌ ಸಂಪಾದಕರಾದ ಬಂಕಾಪುರರಿಗೆ ವಿಷಯ ತಿಳಿದು ಬೇಸರವಾಯಿತು. ಅವರೂ ಅಸಹಾಯಕರು. ಮಾಲಕರಾದವರ ಹಣದ ಮತ್ತು ಅಧಿಕಾರದ ಸೊಕ್ಕು ಹಾಗಿರುತ್ತದೆ. ಅಲ್ಲಿ ಪ್ರಾಮಾಣಿಕತೆಗೆ ಕಿಮ್ಮತ್ತಿಲ್ಲ. ಜೀಹುಜೂರ್ ಪ್ರವೃತ್ತಿಯವರೇ ಬೇಕು. ಕೆಲವರು ಅದಕ್ಕೆ ಅಡ್ಜಸ್ಟ್ ಆಗುತ್ತಾರೆ. ರಾಜ್ಯದ ಹಲವು ದೊಡ್ಡ ಪತ್ರಿಕೆಗಳಲ್ಲೂ ಇದೇ ಪರಿಸ್ಥಿತಿ ಇದೆ. ನಮಗೆ ಬೇಕೋಬೇಡವೋ, ಅವರ ಧ್ಯೇಯ ಧೋರಣೆಗಳಿಗೆ ತಕ್ಕಂತೆ ಬರೆದರೆ ಬಚಾವ್. ಇಲ್ಲದಿದ್ದರೆ ಗೆಟೌಟ್!

‌ *

ನಾನು ವಿಶಾಲ ಕರ್ನಾಟಕದಿಂದ ಹೊರಬಂದದ್ದು ಹೀಗೆ. ಆತ್ಮಗೌರವವಿಲ್ಲದಿದ್ದವರು ಎಲ್ಲಿ ಬೇಕಾದರೂ ಬದುಕಬಲ್ಲರು. ಇಲ್ಲದಿದ್ದರೆ ಕಷ್ಟ. ಹೀಗಾಗಿಯೇ ಬಹಳಷ್ಟು ಪತ್ರಕರ್ತರು ಅಲೆಮಾರಿಗಳಾಗಿರುವದು. ಯಾವ ದೊಡ್ಡ ಪತ್ರಿಕೆಯಲ್ಲೂ ರಾಜಕಾರಣ ಇಲ್ಲವೆಂದಿಲ್ಲ. ಬೆಂಗಳೂರಿನಲ್ಲಂತೂ ಕೆಲ ಪತ್ರಕರ್ತರು ರಾಜಕಾರಣಿಗಳಿಗಿಂತ ಕಡಿಮೆಯೇನಲ್ಲ. ತಮ್ಮ

ಸ್ಥಾನ ಭದ್ರಪಡಿಸಿಕೊಳ್ಳಲು ಅವರು ನಮ್ಮಂಥವರು ಅಲ್ಲಿ ಒಳಹೊಕ್ಕಲು ಕೊಡುವದಿಲ್ಲ. ಅಲ್ಲಿಯೇ ಪಟ್ಟಭದ್ರ ಹಿತಾಸಕ್ತಿಯ ಈ ನಾಲ್ಕಾರು ಹಿರಿಯ ಪತ್ರಕರ್ತರು ಸರದಿ‌ ಮೇಲೆ ಸಂಪಾದಕರಾಗಿ ಮೆರೆಯುತ್ತಿರುತ್ತಾರೆ. ಈ ಅನುಭವವೂ ನನಗಾಯಿತು. ನಾನು ಕೇವಲ ಒಂಬತ್ತು ತಿಂಗಳಿಗೆ ಬೆಂಗಳೂರು ಬಿಟ್ಟು ಬೆಳಗಾವಿಗೆ ವಾಪಸಾದೆ. ಆ ವಿಷಯವನ್ನು ಮುಂದಿನ ಕಂತಿನಲ್ಲಿ ಬರೆಯುತ್ತೇನೆ.

- ಎಲ್. ಎಸ್. ಶಾಸ್ತ್ರಿ

2 views0 comments
bottom of page