top of page

ಪತ್ರಿಕಾ ರಂಗದಲ್ಲಿ ನನ್ನ ೬೦ ವರ್ಷಗಳು ಭಾಗ-೫

ಬಿಸಿಲುನಾಡಿನ ಕಹಿ - ಸಿಹಿ ಅನುಭವಗಳು


ಸುಡುಬಿಸಿಲು, ಕಡುಚಳಿ. ಅಲ್ಲಿ ಎರಡೇ ಕಾಲ. ಕೆಟ್ಟ ರಸ್ತೆ, ಅಶುದ್ಧ ನೀರು. ತಿನ್ನಲಾಗದ ಆಹಾರ. ಇದು ಐವತ್ತು ವರ್ಷಗಳ ಹಿಂದಿನ ಹೈದರಾಬಾದ್ ಕರ್ನಾಟಕದ ಪರಿಸ್ಥಿತಿ ಅಥವಾ ದುಸ್ಥಿತಿ. ಶರಣರ ನಾಡಾದ ಕಲಬುರ್ಗಿಗೆ ಕಾಲಿಟ್ಟ ನನಗೆ ಎದುರಾದ ಪ್ರತಿಕೂಲ ವಾತಾವರಣದ ನಡುವೆಯೂ ಸಂತೋಷ ಕೊಡುವಂತಹ ಇತರ ಕೆಲ ಸಂಗತಿಗಳು ಇದ್ದುದರಿಂದ ಅಲ್ಲಿನ ಬದುಕು ನನಗೆ ಕೆಲಮಟ್ಟಿಗೆ ಸಹ್ಯವೆನಿಸುವಂತಾಯಿತು.

ನವಕಲ್ಯಾಣ ವಾರಪತ್ರಿಕೆಯ ಕಾರ್ಯಾಲಯ ಅಲ್ಲಿಯ ಐವಾನಶಾಹಿ ರಸ್ತೆಯಲ್ಲಿತ್ತು. ಅಲ್ಲೇ ಹತ್ತಿರ ನಮ್ಮ ಪತ್ರಿಕಾ ಸಿಬ್ಬಂದಿ ವಾಸಕ್ಕೆ ಒಂದು ಮನೆಯನ್ನೇ ಮೀಸಲಾಗಿಡಲಾಗಿತ್ತು. ಅದು ವೀರೇಂದ್ರ ಪಾಟೀಲರದೇ ಹಳೆಯ ಮನೆ. ಅಡಿಗೆಗೊಬ್ಬರು ಜನ. ಊಟ ತಿಂಡಿ ಎಲ್ಲ‌ ಅಲ್ಲೇ. ಸ್ವಲ್ಪ ಮುಂದೆ ಐವಾನಶಾಹಿ ಬಂಗಲೆ. ಅದು ಸರಕಾರಿ ಐ. ಬಿ.‌ / ಸರ್ಕೀಟ್ ಹೌಸ್.

ಪತ್ರಿಕೆಗೆ ಮುಖ್ಯ ಸಂಪಾದಕರಾಗಿ ಬೆಂಗಳೂರಿಂದ ಹಿರಿಯ ಪತ್ರಕರ್ತ ತಾಯಿನಾಡು ಸಿದ್ದಪ್ಪ ಅವರು ಬಂದರು. ವಯಸ್ಸಾಗಿತ್ತು. ಅವರು ಇದ್ದುದು ಮೂರೇ ತಿಂಗಳು. ಅಲ್ಲಿಯ ಹವೆ ಆಹಾರ ಅವರಿಗೆ ಒಗ್ಗಲಿಲ್ಲ. ಹಾಗೆಯೇ ಖಾದ್ರಿ ಶಾಮಣ್ಣನವರ ಸಹೋದರ ಅಚ್ಚುತ ಖಾದ್ರಿಯವರು ಬಂದು ಕೆಲ ತಿಂಗಳು ಇದ್ದು ಫೀಲ್ಡ್ ಪಬ್ಲಿಸಿಟಿ ಇಲಾಖೆ ಅಧಿಕಾರಿಯಾಗಿ ಹೋದರು. ಮತ್ತೊಬ್ಬರು ಸ್ಥಳೀಯರೇ ಆದ ಶ್ರೀ ಅಪ್ಪಾರಾವ್ ಅಕ್ಕೋಣೆಯವರು ಉಪಸಂಪಾದಕರಾಗಿ ಬಂದರು. ಅವರೂ ವಾರ್ತಾ ಇಲಾಖೆಗೆ ನೇಮಕಗೊಂಡು ಪತ್ರಿಕೆ ಬಿಟ್ಟರು. ನಂತರ ಬೆಂಗಳೂರಿಂದ ಮತ್ತೊಬ್ಬರು ಬಂದುಹೋದರು.

ಕೊನೆಗೂ ಉಳಿದವನು ನಾನೇ ಮತ್ತು ಪತ್ರಿಕೆಯನ್ನು ಪೂರ್ತಿ ರೂಪುಗೊಳಿಸುವ ಜವಾಬ್ದಾರಿ ನನ್ನದಾಯಿತು. ಇದಕ್ಕೂ ಮೊದಲಿನ ಏಳೆಂಟು ತಿಂಗಳಲ್ಲಿ ಪತ್ರಿಕೆಯೇನೋ ಚೆನ್ನಾಗಿಯೇ ಹೊರಬರುತ್ತಿತ್ತು. ಹಣಕಾಸಿನ ತೊಂದರೆ ಇರಲಿಲ್ಲ. ೨೪ ಪುಟಗಳನ್ನು ತುಂಬಲು ಲೇಖನಗಳನ್ನು ತರಿಸುವ ಕೆಲಸ ನನಗೇ ವಹಿಸಲಾಗಿತ್ತು. ಬಂದ ಲೇಖನಗಳಿಗೆ ಸಂಭಾವನೆಯನ್ನೂ ಕೊಡಲಾಗುತ್ತಿತ್ತು. ನಾನು ಖ್ಯಾತ ಕಾದಂಬರಿಕಾರ ಬಸವರಾಜ ಕಟ್ಟೀಮನಿ ಅವರಿಂದ ಒಂದು ಕಾದಂಬರಿ ಧಾರಾವಾಹಿಗಾಗಿ ತರಿಸಿಕೊಂಡೆ. ಪ್ರೊ. ಬಿ. ಎಚ್. ಶ್ರೀಧರ್ ಅವರ ಹತ್ತು ವೈಚಾರಿಕ ಲೇಖನಮಾಲಿಕೆ , ಗೌರೀಶ ಕಾಯ್ಕಿಣಿ, ಆರ್. ವಿ. ಭಂಡಾರಿ ಮೊದಲಾದವರ ಬರೆಹಗಳನ್ನು ತರಿಸಿ ಪ್ರಕಟಿಸಿದೆ. ಮುಖಪುಟಕ್ಕೆ ಕಲಬುರ್ಗಿಯ ಹಿರಿಯ ಚಿತ್ರಕಲಾವಿದರಿಂದ ಪ್ರತಿ ವಾರ ಬೇರೆ ಬೇರೆ ಚಿತ್ರ ತೆಗೆದುಕೊಳ್ಳಲಾಗುತ್ತಿತ್ತು.

‌‌ ಪತ್ರಿಕೆ ಬಿಡುಗಡೆಗೆ ಮುಖ್ಯಮಂತ್ರಿ ವೀರೇಂದ್ರ ಪಾಟೀಲ ಅವರ ಸಹೋದ್ಯೋಗಿ‌ರಾಮಕೃಷ್ಣ ಹೆಗಡೆ ಮೊದಲಾದವರೆಲ್ಲ ಬಂದಿದ್ದರು. ಬಹಳ ಬೇಗ ಆ ಭಾಗದಲ್ಲಿ ಪತ್ರಿಕೆ ಜನಪ್ರಿಯವಾಗಿ ಪ್ರಸಾರ ಪಡೆಯಿತು. ಈ ಮಧ್ಯೆ ವೀರೇಂದ್ರ ಪಾಟೀಲರು ತಮ್ಮ ರಾಜಕೀಯ ಗುರು ಎಸ್. ನಿಜಲಿಂಗಪ್ಪನವರ ಜನ್ಮದಿನದ (೫೫) ನಿಮಿತ್ತ ಒಂದು ಬೃಹತ್ ಅಭಿನಂದನಾ ಸಂಪುಟ ಹೊರತರುವಂತೆ ಸೂಚಿಸಿದಾಗ ಸಂಪಾದಕರು ಅದರ ಜವಾಬ್ದಾರಿಯನ್ನು ನನಗೇ ವಹಿಸಿದರು. ಬಹಳ ಅದ್ದೂರಿಯಾಗಿ ಅದು ಹೊರಬಂತಲ್ಲದೆ ಸ್ವತಃ ನಿಜಲಿಂಗಪ್ಪನವರೇ ಆ ದಿನ ಬಂದು ಗೌರವ ಸ್ವೀಕರಿಸಿದರು. ನನಗೂ ಸನ್ಮಾನವಾಯಿತು. ಅದೊಂದು ಚಿರಸ್ಮರಣೀಯ ಸಂದರ್ಭ ನನ್ನ ಪಾಲಿಗೆ.

ಒಂದೆಡೆ ಪತ್ರಿಕೆಯ ಕೆಲಸ ಮಾಡುತ್ತಲೇ ಇನ್ನೊಂದೆಡೆ ನಾನು ಕಲಬುರ್ಗಿಯ ಸಾಹಿತ್ಯ ಕ್ಷೇತ್ರದ ಸಂಪರ್ಕವನ್ನೂ ಪಡೆದುಕೊಂಡೆ. ನನ್ನ ಅದೃಷ್ಟವೆಂಬಂತೆ ಆಗ ಕಲಬುರ್ಗಿಯಲ್ಲಿ ಕವಿಗಳೂ ಕ್ಷೇತ್ರಪ್ರಚಾರಾಧಿಕಾರಿಗಳೂ ಆದ ಬಿ. ಎ. ಸನದಿಯವರು ಇದ್ದರು. ಅವರು ಬಹಳ ಹಿಂದಿನಿಂದಲೂ ಪರಿಚಿತರೆ. ಅಲ್ಲದೆ ಆಕಾಶವಾಣಿಯಲ್ಲಿ ಕವಿ ರಾಘವೇಂದ್ರ ಇಟಗಿ, ಮುನಸಿಪಲ್ ಕಮಿಶನರಾಗಿ ಕತೆಗಾರ ಜಯತೀರ್ಥ ರಾಜಪುರೋಹಿತ , ಜಿ. ಎಸ್. ಗ್ರಾಮಪುರೋಹಿತ ಮೊದಲಾದವರೆಲ್ಲ ಕಲಬುರ್ಗಿಯಲ್ಲಿದ್ದರು. ನಾವೆಲ್ಲ ಒಂದಾಗಿ " ನೃಪತುಂಗ ಕಲಾಮಂಟಪ" ವೆಂಬ ಸಂಸ್ಥೆ ರಚನೆ ಮಾಡಿಕೊಂಡು ಸಾಹಿತ್ಯಿಕ ಕಾರ್ಯಕ್ರಮ ಮಾಡಲಾರಂಭಿಸಿದೆವು. ಸನದಿಯವರು ಅಧ್ಯಕ್ಷರು, ನಾನು ಕಾರ್ಯದರ್ಶಿ.

ವಿಶೇಷವೆಂದರೆ ನನ್ನ ಮೊದಲ ಕವನ ಸಂಕಲನ "ಸ್ಮೃತಿ" ಹೊರಬಂದದ್ದು ಕಲಬುರ್ಗಿಯಲ್ಲೇ. ಸನದಿಯವರೇ ಅದು ಹೊರಬರಲು ಕಾರಣರು. ನೃಪತುಂಗ ಪ್ರಕಾಶನದಿಂದ ಅದು ಪ್ರಕಟವಾಯಿತು. ಅದೇವೇಳೆಗೆ ಸುಧಾ ವಾರಪತ್ರಿಕೆ ಕಾದಂಬರಿ ಸ್ಪರ್ಧೆಯನ್ನು ಏರ್ಪಡಿಸಿತು. ಜಯತೀರ್ಥ ರಾಜಪುರೋಹಿತರು ಅದಕ್ಕಾಗಿ " ಬಿರುಗಾಳಿ" ಎಂಬ ಕಾದಂಬರಿಯೊಂದನ್ನು ಬರೆಯುತ್ತ ಅದನ್ನು ನಮ್ಮೆಲ್ಲರಿಗೆ ಓದಿಹೇಳಿ ಬದಲಾವಣೆಗಳನ್ನು ಮಾಡಿಕೊಂಡು ಸ್ಪರ್ಧೆಗೆ ಕಳಿಸಿದರು. ಅದಕ್ಕೆ ಮೊದಲ ಬಹುಮಾನವೂ ಬಂತು. ನವೆಂಬರ್ ಒಂದರಂದು ರಾಜ್ಯೋತ್ಸವ ಕವಿಸಮ್ಮೇಳನ ನಡೆಸಲಾಯಿತು. ಮುದ್ದಣ ಜಯಂತಿ ಮೊದಲಾದವನ್ನೂ ನಡೆಸಿದೆವು.

ಸನದಿಯವರು ಎಲ್ಲಿ ಹೋಗುವದಿದ್ದರೂ ನನ್ನನ್ನು ಕರೆದುಕೊಂಡು ಹೋಗುತ್ತಿದ್ದರು. ಒಮ್ಮೆ ಬೀದರ್ ನಲ್ಲಿ ಅವರ ಇಲಾಖೆಯಿಂದ ಚಿತ್ರೋತ್ಸವ ನಡೆದಾಗ ಅವರೊಂದಿಗೆ ಹೋಗಿ‌ ಬೀದರನ ಪ್ರೇಕ್ಷಣೀಯ ಸ್ಥಳಗಳನ್ನೆಲ್ಲ ನೋಡುವಂತಾಯಿತು. (ಕೋಟೆಗಳು ಅರಮನೆಗಳು, ನಾನಕ ಝರಾ, ನರಸಿಂಹ ಝರಾ ಇತ್ಯಾದಿ. ) ಹಾಗೆಯೇ ನೃಪತುಂಗನ ರಾಜಧಾನಿ ಮಳಖೇಡದ ಕೋಟೆಯನ್ನೂ ನೋಡಿದೆ.

ಕಲಬುರ್ಗಿಯೂ ಒಂದು ಐತಿಹಾಸಿಕ ಪ್ರದೇಶ. ಬೃಹತ್ ಕೋಟೆ , ಅದರೊಳಗೊಂದು ಭವ್ಯ ಮಸೀದೆ ಎಲ್ಲ ಇವೆ. ಪ್ರಸಿದ್ಧ ಶರಣಬಸವೇಶ್ವರರ ದೇವಸ್ಥಾನ ಮತ್ತು ಬಂದೇನವಾಜ ದರ್ಗಾಗಳು ಹಿಂದೂಮುಸ್ಲಿಮರಿಗೆಲ್ಲ ಪವಿತ್ರ ಸ್ಥಳಗಳು. ಎದುರು ಸುಂದರ ವಿಶಾಲ ಸರೋವರವಿದೆ.

ವರ್ಷ ಕಳೆಯುವ ವೇಳೆಗೆ ನನ್ನ ಆರೋಗ್ಯವೂ ಕೆಟ್ಟಿತ್ತು. ಮೂಗಿನಿಂದ ರಕ್ತ ಬರಲಾರಂಭಿಸಿತ್ತು. ಆಹಾರ ಹವೆ ಎರಡೂ ಅಲ್ಲಿ ಕೆಟ್ಟದ್ದೇ. ಆದ್ದರಿಂದ ನಾನೂ ಅಲ್ಲಿಂದ ಹೊರಡುವದು ಅನಿವಾರ್ಯವೆಂದೆನಿಸತೊಡಗಿತು.

*

ಇಲ್ಲಿ ಹೈದರಾಬಾದ ಕರ್ನಾಟಕಕ್ಕೆ ಸಂಬಂಧಿಸಿ ಕೆಲವು ವಿಚಾರ ಹೇಳಬೇಕಾಗಿದೆ. ನಾಳೆ ಉಳಿದದ್ದು.

- ಎಲ್. ಎಸ್. ಶಾಸ್ತ್ರಿ

5 views0 comments
bottom of page