top of page

ಪತ್ರಿಕಾರಂಗದ ನನ್ನ ೬೦ ವರ್ಷಗಳುಭಾಗ -೮

ದಿನಪತ್ರಿಕೆಯ ಬದುಕು - ಅನುಭವ ವಿಸ್ತಾರ


ಹುಬ್ಬಳ್ಳಿಯ ವಿಶಾಲ ಕರ್ನಾಟಕ ದಿನಪತ್ರಿಕೆ ಆಗಿನ ಕಾಂಗ್ರೆಸ್ ಸರಕಾರದ ಸಚಿವರಲ್ಲೊಬ್ಬರಾದ ಕೆ. ಎಚ್. ಪಾಟೀಲರದಾಗಿತ್ತು. ( ಈಗ ಅದು ಇಲ್ಲ). ಗದುಗಿನ ಹುಲಕೋಟಿ ಹುಲಿ, ಸಹಕಾರ ಧುರೀಣ ಕೆ. ಎಚ್. ಪಾಟೀಲರು ರಾಜಕೀಯ ಹೋರಾಟದ ಹುಲಿಯೂ ಹೌದು. ರಾಜಕಾರಣಿಗಳು ಪತ್ರಿಕೆಗೆ ಬಂಡವಾಳು ಹಾಕುವದು ರಾಜಕೀಯ ಲಾಭದ ಉದ್ದೇಶದಿಂದಲೇ. ಅದರಲ್ಲೇನೂ ಹೊಸದಿಲ್ಲ. ಅಲ್ಲಿ ಸಾತ್ವಿಕ, ತಾತ್ವಿಕ , ನೈತಿಕ ಆದರ್ಶಗಳಿಗೆ ಅಷ್ಟೇನೂ ಮಹತ್ವವಿರುವದಿಲ್ಲ. ಅವರ ಉದ್ದೇಶಗಳಿಗನುಗುಣವಾಗಿಯೇ ಅಲ್ಲಿ ಕೆಲಸ ಮಾಡಬೇಕು.

ಕೆ. ಎಚ್. ಅವರ ಸಂಬಂಧಿ ಮಾಜೀ ಅರಣ್ಯ ಮಂತ್ರಿ ಕೆ. ಎಫ್. ಪಾಟೀಲರೂ ಆಗಾಗ ಬಂದು ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ಪೆರೇರಾ ಎಂಬ ಕ್ರಿಶ್ಚಿಯನ್ ವ್ಯಕ್ತಿ ಮ್ಯಾನೇಜರರು. ತುಂಬ ಒಳ್ಳೆಯ ಮನುಷ್ಯ. ಮೂಲತಃ ಅವರು ಕಾರವಾರ ಕಡೆಯವರಾದ್ದರಿದ ನನ್ನ ಬಗ್ಗೆ ಪ್ರೀತಿ ಇತ್ತು. ಮುಖ್ಯ ಸಂಪಾದಕ ಬಂಕಾಪುರರು ನನಗೆ ಮೊದಲಿನಿಂದ ಪರಿಚಯ. ಅಪರೂಪದ ಧ್ಯೇಯನಿಷ್ಠ ಪತ್ರಕರ್ತರು. ಸಾಕಷ್ಟು ಕಷ್ಟ ಅನುಭವಿಸಿದರೂ ತಮ್ಮ ಪ್ರಾಮಾಣಿಕತೆ ಬಿಡದವರು. ಎಸ್. ಆರ್. ಪಾಟೀಲ ಎಂಬ ಇಂಜಿನಿಯರರು ಸಹ ಪತ್ರಿಕೆಯ ಮೇಲ್ವಿಚಾರಣೆ ನೋಡಿಕೊಳ್ಳಲು ಬರುತ್ತಿದ್ದರು. ಅವರೂ ಕೆಎಚ್ ಸಂಬಂಧಿಕರೆ. ಆಂಧ್ರದ ರೆಡ್ಡಿ ಪೈಕಿ ಈ ಪಾಟೀಲರ ಮನೆತನ. ಎಸ್. ಆರ್. ಪಾಟೀಲರು ಯೋಗಿ ವೇಮನನ ತ್ರಿಪದಿಗಳನ್ನು ಕನ್ನಡಕ್ಕೆ ,ತಂದಿದ್ದರು. ಅವನ್ನೆಲ್ಲ ತಿದ್ದಿ ಸರಿಪಡಿಸಿ ಪ್ರಕಟಗೊಳಿಸಲು ಅವರು ನನ್ನ ಸಹಕಾರ ಪಡೆದಿದ್ದರು.

ನಾನು ದಿನಪತ್ರಿಕೆ ಕೆಲಸದ ಜತೆ ಸಾಪ್ತಾಹಿಕ ಪುರವಣಿಯನ್ನೂ ನೋಡಿಕೊಳ್ಳುತ್ತಿದ್ದೆನಲ್ಲದೆ ದೀಪಾವಳಿ ವಿಶೇಷಾಂಕಗಳ ನಿರ್ವಹಣೆಯೂ ನನ್ನದೇ ಆಗಿತ್ತು. ಬಂಕಾಪುರರ ಪ್ರೋತ್ಸಾಹವೇ ಅದಕ್ಕೆ ಕಾರಣ. ಅಪರೂಪಕ್ಕೆ ವರದಿಗೂ ಹೋಗುತ್ತಿದ್ದೆ. ನಾಟಕಗಳ ವಿಮರ್ಶೆ, ಕಲಾವಿದರ ಸಂದರ್ಶನ ಎಲ್ಲ ನನ್ನದೇ. ಹೀಗೆ ವಿಶಾಲ ಕರ್ನಾಟಕ ನನಗೆ ಹೊಸ ಹೊಸ ಅನುಭವಗಳ ಆಗರವಾಯಿತು. ಆಗಿನ ರಾಜಕೀಯ ನಾಯಕರು, ಸಚಿವರುಗಳು, ಹಲವು ಕ್ಷೇತ್ರಗಳ ಗಣ್ಯರುಗಳ ಪರಿಚಯಕ್ಕೆ ಅವಕಾಶವಾಯಿತು. ಆಗಿನ ಹುಬ್ಬಳ್ಳಿ ಶಾಸಕರಾದ ಗೋಪೀನಾಥ ಸಾಂಡ್ರಾ , ಸಂಸದ ಐ. ಜಿ. ಸನದಿ ಮೊದಲಾದವರ ನಿಕಟ ಒಡನಾಟ ಬಂತು. ವಿಶೇಷ ಸಾಹಿತ್ಯಿಕ ಸಾಂಸ್ಕೃತಿಕ ಸಭೆ ಸಮ್ಮೇಳನಗಳಿಗೆ ಬಂಕಾಪುರರು‌ ನನ್ನನ್ನೇ ವರದಿಗೆ ಕಳಿಸುತ್ತಿದ್ದರು.

*

ನಾನು ಎಲ್ಲೇ ಹೋಗಲಿ, ಅಲ್ಲಿಯ ಸಾಹಿತ್ಯಿಕ ಬಳಗದೊಡನೆ ಬೆರೆಯುತ್ತಿದ್ದೆ ಮತ್ತು ಅಲ್ಲೊಂದು ಹೊಸ ಸಂಘಟನೆ ರೂಪುತಾಳುತ್ತಿತ್ತು. ಗುಲಬರ್ಗಾದಲ್ಲಿ ನೃಪತುಂಗ ಕಲಾ ಮಂಟಪ, ಗೋಕಾಕದಲ್ಲಿ ಸಾಹಿತ್ಯ ಸಂಸ್ಕೃತಿ ಸಂಘ, ( ಹೊನ್ನಾವರದಲ್ಲಿ ಶೃಂಗಾರ ಮಂಟಪ), ಹುಬ್ಬಳ್ಳಿಯಲ್ಲಿ ಕನ್ನಡ ಬಳಗ ಇತ್ಯಾದಿ.

ನನ್ನ ಅದೃಷ್ಟದಿಂದ ಶಾಂತಿನಿಕೇತನದಲ್ಲಿ ರವೀಂದ್ರನಾಥ ಟಾಗೋರರ ಶಿಷ್ಯರಾಗಿ , ಅವರ ಗೀತಾಂಜಲಿಯನ್ನು ಕನ್ನಡಕ್ಕೆ ಅನುವಾದಿಸಿದ ಹಿರಿಯ ಸಾಹಿತಿ ಪ್ರಹ್ಲಾದ ನರೇಗಲ್ಲ ಅವರು ಹುಬ್ಬಳ್ಳಿಯಲ್ಲಿದ್ದರು. ಅವರು, ಖ್ಯಾತ ಕತೆಗಾರರಾದ ಪ್ರೊ. ಅಬ್ದುಲ್ ಮಜೀದಖಾನ್, ಗುಡಿ, ಮೊದಲಾದವರೊಡನೆ ಸೇರಿ‌ ಕನ್ನಡ ಬಳಗ ರಚಿಸಿದ್ದರು. ನಮ್ಮ ಈ ಸಂಸ್ಥೆಯ ಆಶ್ರಯದಲ್ಲಿ ನಾವು ಹತ್ತು ದಿವಸಗಳ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಕಾರ್ಯಕ್ರಮವೊಂದನ್ನು ಮಾಡಿದೆವು. ಅದು ಬಹಳ ವಿಶಿಷ್ಟ ರೀತಿಯಲ್ಲಿ ನಡೆಯಿತು. ಮೊದಲು ಏಳು ದಿನ ಕೈಗಾಡಿಯಲ್ಲಿ ಕನ್ನಡ ಪುಸ್ತಕಗಳನ್ನು ಇರಿಸಿಕೊಂಡು ದಿನಾಲು ಬೆಳಿಗ್ಗೆ ಮತ್ತು ಸಂಜೆ ಕೆಲವು ಬಡಾವಣೆಗಳಲ್ಲಿ ಸಂಸರಿಸಿ ಪುಸ್ತಕ ಮಾರಾಟ ಮಾಡಿದೆವು. ನಂತರ ಮೂರುದಿನ ದುರ್ಗದಬೈಲ ಕನ್ನಡ ಶಾಲೆಯಲ್ಲಿ ಪುಸ್ತಕ ಪ್ರದರ್ಶನ ಏರ್ಪಡಿಸಿದೆವು. ಧಾರವಾಡದ ಸಮಾಜ ಪುಸ್ತಕಾಲಯ, ಹುಬ್ಬಳ್ಳಿಯ ಸಾಹಿತ್ಯ ಭಂಡಾರ ಸೇರಿ ಹಲವು ಪ್ರಕಾಶನ ಸಂಸ್ಥೆ/ ಅಂಗಡಿಯವರ ಪುಸ್ತಕಗಳು ಬಂದಿದ್ದವು. ಅವುಗಳ ಮಾರಾಟದ ಕಮಿಶನ್ ರೂಪದಲ್ಲಿ ನಮಗೆ ಐದು ಸಾವಿರ ರೂ. ಗಳು ಬಂದಿದ್ದವು. ಇದೂ ಆಗ ಬಹಳ ದೊಡ್ಡ ಮೊತ್ತವೆ.

ಈ ಪುಸ್ತಕ ಪ್ರದರ್ಶನ ಮಾರಾಟ ಕಾರ್ಯಕ್ರಮ ೧೯೬೮-೬೯ ರಲ್ಲಿ ಅಂದರೆ ಐವತ್ತು ವರ್ಷಗಳ ಹಿಂದೆ ನಡೆದದ್ದು. ಬಹುಶಃ ರಾಜ್ಯದಲ್ಲೇ ಅದು ಅಂತಹ ಪ್ರಪ್ರಥಮ ಪ್ರಯೋಗವಾಗಿರುವ ಸಾಧ್ಯತೆಗಳಿವೆ. ಮುಂದೆ ರಾಜ್ಯದ ಹಲವೆಡೆ ನಡೆದಿದೆ, ನಡೆಯುತ್ತಲಿದೆ.

*

ಹುಬ್ಬಳ್ಳಿಯಲ್ಲಿ ಆಗ ಆರ್ಟ ಸರ್ಕಲ್ ಬಹಳ ಉತ್ತಮ ಸಂಗೀತ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಿತ್ತು. ನಾನಿದ್ದಾಗಲೆ ಅದರ ರಜತ ಮಹೋತ್ಸವ ಸಂದರ್ಭ ಬಂತು. ಮೂರುದಿನ ಸತತ ಸಂಗೀತ ಸಮ್ಮೇಳನ. ದೇಶದ ಖ್ಯಾತ ಗಾಯಕ ವಾದಕರೆಲ್ಲರೂ ಬಂದು ಕಾರ್ಯಕ್ರಮ ನೀಡಿದ್ದರು. ಪಂ. ರವಿಶಂಕರ, ಉಸ್ತಾದ ಬಿಸ್ಮಿಲ್ಲಾಖಾನ್, ಪಂ. ಭೀಮಸೇನ ಜೋಶಿ, ಡಾ. ಗಂಗೂಬಾಯಿ ಹಾನಗಲ್ಲ, ಪಂ. ರಾಜಗುರು, ವಿದುಷಿ ಪ್ರಭಾ ಅತ್ರೆ, ಲಕ್ಷ್ಮೀಶಂಕರ, ಪಂ. ಜಸರಾಜ ಮೊದಲಾದವರೆಲ್ಲ ಬಂದಿದ್ದರು. ಸಂಗೀತದ ರಸದೌತಣ ಅಂದರೆ ಅದೇ.

ಇಂತಹ ಅನೇಕ ಅನುಭವಗಳನ್ನು ಕೊಟ್ಟ ಹುಬ್ಬಳ್ಳಿಯ ಅಂದಿನ ಬದುಕು ರಸಮಯ ಸನ್ನಿವೇಶಗಳಿಂದ ಕೂಡಿತ್ತು. ನಾನು ಆಗ ರೂಂ ಮಾಡಿದ್ದು ಡಾ. ಗಂಗೂಬಾಯಿ ಹಾನಗಲ್ಲರ ಮನೆಯ ಪಕ್ಕದಲ್ಲೇ. ದೇಶಪಾಂಡೆನಗರದ ದೇಶಪಾಂಡೆ ಚಾಳ. ಹಿರಿಯ ವಿದ್ವಾಂಸರಾದ ಪಂ. ಪಂಡರಿನಾಥಾಚಾರ್ಯ ಗಲಗಲಿಯವರ ಮನೆಯೂ ಅಲ್ಲೇ ಇತ್ತು. ಅವರು ಪಂಚಾಮೃತ ಎಂಬ ಮಾಸಪತ್ರಿಕೆಯನ್ನು ಹೊರತರುತ್ತಿದ್ದರು.

( ಸಶೇಷ)

- ಎಲ್. ಎಸ್. ಶಾಸ್ತ್ರಿ

5 views0 comments
bottom of page