top of page

ಪತ್ರಿಕಾರಂಗದ ನನ್ನ ೬೦ ವರ್ಷಗಳುಭಾಗ -೭

ವಿಶಾಲ ಪ್ರಪಂಚದತ್ತ.‌‌..‌‌‌..


ಅನುಭವವೆಂಬ ಆಕಾಶದ ವಿಸ್ತಾರ ಅಳೆಯಲಾಗದ್ದು. ಅರಿಯುವ ಆಸಕ್ತಿ ಇದ್ದವರಿಗೆ ಅರಿತಷ್ಟೂ ಕಡಿಮೆಯೇ. ಪತ್ರಿಕಾರಂಗ ಒಂದು ಮುಕ್ತ ವಿಶ್ವವಿದ್ಯಾಲಯವಿದ್ದಂತೆ. ಅದರಲ್ಲೂ ದಿನಪತ್ರಿಕೆಗಳು ನಮ್ಮ ಜ್ಞಾನಾನುಭವಗಳ ಕ್ಷಿತಿಜವನ್ನು ವಿಸ್ತರಿಸುತ್ತಹೋಗುತ್ತವೆ. ಕಲಿಯುವ ಮನಸ್ಸು , ನೋಡುವ ಕಣ್ಣು, ತಿಳಿಯುವ ತವಕ ಬೇಕು.

ನಾನು ೧೯೬೭ ರಲ್ಲಿ ಮಾಸ, ವಾರ ಪತ್ರಿಕೆಗಳಿಂದ ದಿನಪತ್ರಿಕೆಗಳ ಜಗತ್ತಿಗೆ ಕಾಲಿಟ್ಟೆ. ಹುಬ್ಬಳ್ಳಿಯ ವಿಶಾಲ ಕರ್ನಾಟಕ ದಿನಪತ್ರಿಕೆಯಲ್ಲಿ ಕಳೆದ ಮೂರು ವರ್ಷಗಳ ಅವಧಿ ಅನೇಕ ಹೊಸ ಸಂಗತಿಗಳನ್ನು ಕಲಿಸಿತು. ಅಲ್ಲಿಂದ ಇಲ್ಲಿಯತನಕ ೫೩ ವರ್ಷ ದಿನಪತ್ರಿಕೆಗಳಲ್ಲೇ ಕೆಲಸ ಮಾಡಿದ್ದು. ವರದಿಗಾರಿಕೆ, ಟೆಲೆಪ್ರಿಂಟರ್ ಸುದ್ದಿಗಳ ಅನುವಾದ, ಸಾಪ್ತಾಹಿಕ ಪುರವಣಿ- ವಿಶೇಷಾಂಕಗಳ ನಿರ್ವಹಣೆ, ಪುಟ ತಯಾರಿಕೆ , ಸಾಂದರ್ಭಿಕ ಲೇಖನ ರಚನೆ, ಪುಸ್ತಕ/ ಕ್ರೀಡೆ/ ಕಲಾ ವಿಮರ್ಶೆಗಳು, ಸಂದರ್ಶನಗಳು ಇತ್ಯಾದಿ ಹತ್ತುಹಲವು ವಿಷಯಗಳಲ್ಲಿ ಪಳಗಲು ಅವಕಾಶವಾಯಿತು.

ಟೀಯೆಸ್ಸಾರ್ ಪ್ರಶಸ್ತಿ ಪುರಸ್ಕೃತ ಪ. ಲೋ. ಬಂಕಾಪುರ ಅವರಂತಹ ಹಿರಿಯ ಅನುಭವಿ ಸಂಪಾದಕರ ಮಾರ್ಗದರ್ಶನದಲ್ಲಿ ಯುವ ಉತ್ಸಾಹಿಗಳ ತಂಡವೊಂದು ಅಂದು ವಿ. ಕ. ಪತ್ರಿಕೆಯನ್ನು ರೂಪಿಸುತ್ತಿತ್ತು. ಒಂದಿಬ್ಬರು ಹಿರಿಯರೂ ನಮ್ಮೊಂದಿಗಿದ್ದರು. ರಾತ್ರಿ ಒಂದು ಗಂಟೆಯತನಕ ಕೆಲಸ ಮಾಡಬೇಕಾದ ಸಂದರ್ಭದಲ್ಲಿ ನಮ್ಮ ಕಿರಿಯರ ತಂಡ ಬಹಳ ಉತ್ಸಾಹದಿಂದ ಬೇಸರ ಬರದಂತೆ ಹಾಡುಗೀಡು, ಹಾಸ್ಯಚಟಾಕಿಗಳೊಂದಿಗೆ ಕೆಲಸ ಮಾಡುತ್ತಿತ್ತು. ಪುರಾಣಿಕಮಠ ಬ್ರದರ್ಸ್, ಜಗದೀಶ, ಹನುಮಂತ ಹೂಗಾರ , ಮಜ್ಜಗಿ ಮೊದಲಾದವರೊಡನೆ ಟ್ರೇನಿಗಳಾದ ಸೊನ್ನದ, ನೀಲಾವರ ಎಲ್ಲರೂ ಸೇರಿ ಕೆಲಸದ ಸಂತೋಷ ಅನುಭವಿಸುತ್ತಿದ್ದೆವು. ಪರಸ್ಪರ ಹೊಂದಾಣಿಕೆಯಿತ್ತು. ( ಒಬ್ಬರನ್ನು ಬಿಟ್ಟು).

ಬಂಕಾಪುರರು ಸಂಪಾದಕೀಯ ಪುಟದಲ್ಲಿ ಪ್ರತಿದಿನ ಒಂದು ರಾಜಕೀಯ ವಿಡಂಬನಾ ಅಂಕಣವನ್ನೂ ಬರೆಯುತ್ತಿದ್ದರು. ಅದರಲ್ಲಿ ಪ್ರತಿದಿನವೂ ಒಂದು ಚೌಪದಿಯನ್ನು ಬರೆದುಕೊಡುವ. ಕೆಲಸ ನನಗೆ ಒಪ್ಪಿಸಿದ್ದರು. ನಾನು ದಿನಕರ ದೇಸಾಯಿಯವರ ಚೌಪದಿಗಳ ಮಾದರಿಯಲ್ಲಿ ದಿನಕ್ಕೊಂದು ಚೌಪದಿ ಬರೆದುಕೊಡುತ್ತಿದ್ದೆ. ಹಾಗೆ ಮೂರು ವರ್ಷ ನನ್ನ ಚೌಪದಿ ಗಳು ಪ್ರಕಟಗೊಂಡಿವೆ. ಅಂದರೆ ಸುಮಾರು ಸಾವಿರದಷ್ಟು ಚುಟುಕುಗಳು. ನಾನು ಅವನ್ನು ಕಾದಿಟ್ಟಿದ್ದರೆ ಮೂರು ನಾಲ್ಕು ಸಂಪುಟಗಳಾಗುತ್ತಿದ್ದವು.

ಹುಬ್ಬಳ್ಳಿಯಲ್ಲಿ ಆಗ ವೃತ್ತಿ ನಾಟಕ ಕಂಪನಿಗಳು ವರ್ಷವಿಡೀ ಕ್ಯಾಂಪ್ ಹಾಕುತ್ತಿದ್ದವು. ಬಂಕಾಪುರರೂ‌ ನಾಟಕ ಪ್ರಿಯರು. ಅವರಿಗೆ ನನ್ನ ಬಗ್ಗೆ ಬಹಳ ಹಿಂದಿನಿಂದಲೂ ಗೊತ್ತಿದ್ದುದರಿಂದ ಹೊಸ ನಾಟಕಗಳ ಪ್ರದರ್ಶನದ ಮೊದಲ ದಿನ ನನಗೇ ಆ ನಾಟಕಗಳ ಬಗ್ಗೆ ವಿಮರ್ಶೆ ಬರೆಯಲು ಕಳಿಸುತ್ತಿದ್ದರು. ಅದಲ್ಲದೇ ಪ್ರಮುಖ ಕಲಾವಿದರ ಸಂದರ್ಶನ ಕ್ಕೂ ನಾನೇ ಹೋಗುತ್ತಿದ್ದೆ. ಇವೆಲ್ಲ ನಮ್ಮಂಥವರು ಬೆಳೆಯಲು ಹಿರಿಯರು ಮಾಡಿಕೊಡುವ ಅವಕಾಶಗಳು. ಮುಂದೆ ಕನ್ನಡಪ್ರಭದಲ್ಲಿದ್ದಾಗ ಬೆಂಗಳೂರು ನಗರದಲ್ಲಿ ನಡೆಯುವ ಶಾಸ್ತ್ರೀಯ ಸಂಗೀತ ಕಾರ್ಯಕ್ರಮಗಳ ಬಗ್ಗೆ ಬರೆಯಲು‌ ಆಗ ಅಲ್ಲಿದ್ದ ಶಿವಸುಬ್ರಹ್ಮಣ್ಯಂ ಅವರು ನನ್ನನ್ನೇ ಕಳಿಸುತ್ತಿದ್ದುದನ್ನೂ ನಾನಿಲ್ಲಿ ನೆನಪಿಸಿಕೊಳ್ಳಬೇಕಾಗಿದೆ.

ದಿನಪತ್ರಿಕೆ ಸೇರಿದ ಹೊಸದರಲ್ಲಿ ಒಂದು ಘಟನೆ ನಡೆಯಿತು. ಒಂದು ದಿನ ಯಾರೋ ಕಾರಿನಲ್ಲಿ ಬಂದು ಸುದ್ದಿ ತೆಗೆದುಕೊಂಡು ಹೋಗುವಂತೆ ಕೆಳಗೆ ಕರೆದರು. ನಮ್ಮ ಕಾರ್ಯಾಲಯ ಮೊದಲ ಮಹಡಿಯಲ್ಲಿತ್ತು. ನಾನು ಕೆಳಗೆ ಹೋದೆ. ಕಾರಿನಲ್ಲಿ ಯಾರೋ ಒಬ್ಬರು ಸ್ವಾಮಿಗಳಿದ್ದರು. ಅವರು ಸುದ್ದಿ ಮತ್ತು ಸಂಗಡ ಐವತ್ತು ರೂಪಾಯಿ‌ ನನ್ನ ಕೈಗೆ ಕೊಟ್ಟು ತಲೆ ಮುಟ್ಟಿ ಆಶೀರ್ವದಿಸಿದರು. ನಾನು ಅದನ್ನು ಮೇಲೆ ತಂದು ಜಗದೀಶ ಅವರನ್ನು ಕೇಳಿದೆ - ಈ ಹಣ ಯಾರ ಕೈಗೆ ಕೊಡಬೇಕು ? ಜಗದೀಶ್ ನಕ್ಕರು. "ನೀವೇ ಇಟ್ಟುಕೊಳ್ಳಿ. ಇದು ಇಲ್ಲಿಯ ಪದ್ಧತಿ" ಎಂದರು.

ಪತ್ರಕರ್ತರು ಭ್ರಷ್ಟರಾಗುವದಕ್ಕೆ ಬೇಕಾದಷ್ಟು ಹಾದಿಗಳಿವೆ. ಆದರೆ ಪಾಂಡೇಶ್ವರ, ಬಂಕಾಪುರರಂತಹ ತತ್ವನಿಷ್ಠ ಪ್ರಾಮಾಣಿಕ ಪತ್ರಕರ್ತರ ಜೊತೆಗೆ ಕೆಲಸ ಮಾಡಿದವರು ಆ ಭ್ರಷ್ಟತೆಯ ದಾರಿಯಲ್ಲಿ ಹೋಗಲಾರರು. ಮುಂದೆ ನಾನು ಬೇರೊಂದು ಪತ್ರಿಕೆಯಲ್ಲಿ ಕೆಲಸ ಮಾಡುವಾಗ ಒಬ್ಬರು ಸುದ್ದಿಯ ಜೊತೆಗೆ ಹಣ ಕಳಿಸಿದ್ದರು. ನಾನು ನನ್ನ ಖರ್ಚಿನಲ್ಲೇ ಆ ಹಣ ತಿರುಗಿ ಎಂ. ಓ. ಮಾಡಿ ಹೀಗೆ ಸುದ್ದಿಗೆ ಹಣ ಕಳಿಸಬೇಡಿ ಎಂದು ಹೇಳಿದೆ. ಅವರು ಬಹಳ ಕಾಲದತನಕ ಅದನ್ನು ನೆನಪಿಸಿಕೊಂಡು ಎಲ್ಲರಿಗೂ ಹೇಳುತ್ತಿದ್ದರು. ಈಗಲೂ ಅವರು ಘಟಪ್ರಭಾದಲ್ಲಿದ್ದಾರೆ.

‌‌ ಪತ್ರಿಕಾರಂಗ ಇಂದು ನೈತಿಕವಾಗಿ ಕುಸಿಯಲು ಕಾರಣ ಆ ರಂಗದಲ್ಲಿಯೂ ಇರುವ "ಪತ್ರಕರ್ತ -ರಾಜಕಾರಣಿ"ಗಳು. ಎಲ್ಲ ಕಡೆಗೂ ಇದ್ದಾರೆ. ಕೆಲವರಂತೂ ಮಂತ್ರಿಗಳ ಹೆಗಲ ಮೇಲೆ ಕೈಹಾಕಿ ಏಕವಚನದಲ್ಲಿ ಮಾತನಾಡುವಷ್ಟು ಸಲಿಗೆ ಇರಿಸಿಕೊಂಡಿರುವದನ್ನು ನಾನು ನೋಡಿದ್ದೇನೆ. ವಿವಿಧ ಖಾತೆಗಳಿಂದ ಹಪ್ತಾ ವಸೂಲಿ ಮಾಡುವ ಪತ್ರಕರ್ತರನ್ನೂ ಕಂಡಿದ್ದೇನೆ. ಅಪಾರ ಆಸ್ತಿಪಾಸ್ತಿ ಗಳಿಸಿರುವವರೂ ನನ್ನ ಆಸುಪಾಸಿನಲ್ಲೇ ಇದ್ದಾರೆ. ಏನೂ ಗಳಿಸದೆ, ಸ್ವಂತ ಮನೆಯನ್ನೂ ಮಾಡಿಕೊಳ್ಳಲಾಗದ ಅಸಹಾಯಕ ಪತ್ರಕರ್ತರೂ ಇದ್ದಾರೆ. ಯಾರದು ಸರಿ, ಯಾರದು ತಪ್ಪು ಅನ್ನುವ ಪ್ರಶ್ನೆಯೇ ಇಲ್ಲ. ಗಾಳಿ ಬಂದತ್ತ ತೂರಿಕೋ ಎನ್ನುವಂತೆ ಸಂದರ್ಭದ ಲಾಭ ಪಡೆದು ಬದುಕುವವನೇ ಜಾಣ!

- ಎಲ್. ಎಸ್. ಶಾಸ್ತ್ರಿ

6 views0 comments
bottom of page