top of page

ಪ್ರಹ್ಲಾದಕುಮಾರ ಭಾಗೋಜಿ






ವಿದ್ವತ್ತಿಗೆ ತಕ್ಕ ಮನ್ನಣೆ ಸಿಗದ ವಿದ್ವಾಂಸ- ವಾಗ್ಮಿ

ಪ್ರೊ. ಪ್ರಹ್ಲಾದಕುಮಾರ ಭಾಗೋಜಿ- ಜನ್ಮ ದಿನದ ನಮನ

*****************************

ಬೆಳಗಾವಿ ಜಿಲ್ಲೆಯ ಶೈಕ್ಷಣಿಕ ಮತ್ತು ಸಾಹಿತ್ಯಿಕ ಲೋಕದ ಹಿರಿಯ ಪೀಳಿಗೆಯವರು ಮರೆಯಲಾಗದ , ಆದರೆ ಈಗ ಬಹುತೇಕ ಮರೆತಿರುವ ಹೆಸರು ಪ್ರಹ್ಲಾದಕುಮಾರ ಭಾಗೋಜಿ. ನನ್ನ ೧೯೯ ನೆಯ ಭಾಗದಲ್ಲಿ ನಾನು ಬರೆದ ಛಂದಶ್ಶಾಸ್ತ್ರ ಪಂಡಿತ ಪ್ರ. ಗೋ. ಕುಲಕರ್ಣಿ ಅವರ ಪುತ್ರರು ಇವರು. ಅವರ ಹತ್ತಿರದವರಿಗೆಲ್ಲ ಪ್ರೀತಿಯ " ಅಣ್ಣಯ್ಯ". ನಮ್ಮಂತಹ ಕಿರಿಯರಿಗೆಲ್ಲ ಮಾರ್ಗದರ್ಶಕರು. ಸಾರ್ವಜನಿಕವಾಗಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದವರಿಗೆ ಅವರೇ ಆಪದ್ಬಾಂಧವರು. ಬೆಳಗಾವಿಯಲ್ಲಿ ಯಾವ ಸಭೆಯೇ ಇರಲಿ, ಯಾವ ವಿಷಯವೇ ಇರಲಿ ಪಿ. ಕೆ. ಭಾಗೋಜಿಯವರ ಉಪನ್ಯಾಸ ಇದ್ದದ್ದೇ. ಇದು ನಾನು ೧೯೮೦ ರಲ್ಲಿ ಬೆಳಗಾವಿಗೆ ಬಂದ ಮೇಲೆ ಮೂರು ದಶಕ ಕಾಲ ಸ್ವತಃ ನೋಡಿದ್ದು ಅನುಭವಿಸಿದ್ದು. ಅವರ ಹತ್ತಿರದ ಒಡನಾಟದ ಭಾಗ್ಯವೂ ನನಗೆ ಲಭಿಸಿತ್ತು.

ಸವದತ್ತಿ ತಾಲೂಕಿನ ಗಡಿಹಳ್ಳಿ ಭಾಗೋಜಿಯ ಕರಣಿಕರ ಮನೆಯ ಪ್ರ. ಗೋ. ಕುಲಕರಣಿಯವರ ಮಗನಾಗಿ ೧೭-೭-೧೯೨೫ ರಂದು ಜನಿಸಿದ ಇವರ ಮೊದಲ ಹೆಸರು ವಾಮನ. ಎಂಟನೇ ವರ್ಷಕ್ಕೆ ಇವರನ್ನು ಬೇರೊಂದು ಶ್ರೀಮಂತ ಕುಟುಂಬಕ್ಕೆ ದತ್ತು ಕೊಡಲಾಯಿತು. ತಾಯಿ ಅಥಣಿಯ ನಂದಗಾವಿಯವಳು. ಒಟ್ಟು ಹದಿನಾಲ್ಕು ಮಕ್ಕಳು. ಶ್ರೀಮಂತ ಕುಟುಂಬಕ್ಕೆ ದತ್ತು ಹೋದ ವಾಮನ ಸುಖವಾಗಿ ಬೆಳೆಯಬೇಕಿತ್ತು. ಆ ಅದೃಷ್ಟ ಅವರಿಗಿರಲಿಲ್ಲ.‌ ಇವರ ದತ್ತಕ ಪ್ರಕರಣ ಇಂಗ್ಲಂಡ್ ವರೆಗೂ ಹೋಗಿ ಪ್ರಿವಿ ಕೌನ್ಸಿಲ್ ನ್ಯಾಯಾಲಯ ಇವರನ್ನು ಆ ದತ್ತು ಮನೆತನಕ್ಕೆ ಸೇರಿಸಲಿಲ್ಲ. ಮೂಲ ಮನೆತನಕ್ಕೂ ಉಳಿಸದೇ ತ್ರಿಶಂಕುವನ್ನಾಗಿ ಮಾಡಿತು. ಅಲ್ಲಿಂದ ಈ ವಾಮನ " ಪ್ರಹ್ಲಾದಕುಮಾರ ಭಾಗೋಜಿ" ಯಾಗಿ ಉಳಿದರು. ಇದು ಅವರ ಬದುಕಿನ ಪೂರ್ವಾರ್ಧದ ಬದುಕಿನ ಹೋರಾಟದ ಕತೆ.

‌ ಇವೆಲ್ಲವುಗಳ ನಡುವೆಯೂ ಭಾಗೋಜಿಯವರು ಮೊದಲು ಶಿಕ್ಷಕರ ತರಬೇತಿ ಮುಗಿಸಿ ಖಾಸಗಿ ಪ್ರಾಥಮಿಕ ಶಾಲೆಯ ಶಿಕ್ಷಕರಾದರು. ಸಂಗಡ ಕಾಲೇಜು ಶಿಕ್ಷಣವನ್ನೂ ಮುಂದುವರಿಸಿ ಬಿ. ಎ. ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದರು. ಮುಂಬಯಿ ವಿವಿ ಎಂ. ಎ. ಪರೀಕ್ಷೆಯಲ್ಲೂ ಪ್ರಥಮ ಸ್ಥಾನ. ಬಿಎಡ್, ಎಂಎಡ್. ಪರೀಕ್ಷೆಗಳನ್ನೂ ಮಾಡಿದರು. ತಂದೆಯ ವಿದ್ವತ್ತು ಮಗನಿಗೂ ಬಂದಿತ್ತು. ಕಾವ್ಯಶಾಸ್ತ್ರಗಳ ಆಳವಾದ ಅಭ್ಯಾಸವೂ ಇತ್ತು. ಆದರೆ ಅವರಿಗೆ ತಕ್ಕ ಕೆಲಸ ಕೊಡುವವರೇ ಇರಲಿಲ್ಲ. ಕೊನೆಗೆ ೧೯೫೨ ರಲ್ಲಿ ಕಾರವಾರದಲ್ಲಿ ಅಲ್ಪಕಾಲ ಉದ್ಯೋಗ. ಅಲ್ಲೇ ಅವರಿಗೆ ಪತ್ನೀವಿಯೋಗ.

ಅಂತೂ ೧೯೫೪ ರಲ್ಲಿ ಬೆಳಗಾವಿಯ ರಾಣಿ ಪಾರ್ವತಿದೇವಿ ( ಆರ್. ಪಿ. ಡಿ. ) ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಪ್ರವೇಶಿಸಿ ಅಲ್ಲಿಯೇ ಪ್ರಾಚಾರ್ಯರಾಗಿ ನಿವೃತ್ತರಾದರು. ಅದು ಮರಾಠಿಗರ ಸಂಸ್ಥೆ. ಅಲ್ಲಿ ಎಲ್ಲರ ಪ್ರೀತಿ ವಿಶ್ವಾಸ, ಗೌರವ ಪಡೆದರು. ಭಾಗೋಜಿಯವರು ಕೇವಲ ಆರ್. ಪಿ.ಡಿ ಕಾಲೇಜಲ್ಲ, ಬೆಳಗಾವಿಯ ಸಮಗ್ರ ಶೈಕ್ಷಣಿಕ ರಂಗದ ಬೆಳವಣಿಗೆಗೆ ಕಾರಣರಾದವರಲ್ಲಿ ಪ್ರಮುಖರು.

ಭಾಗೋಜಿಯವರು ಶ್ರೇಷ್ಠ ವಿದ್ವಾಂಸರು ಮತ್ತು ಅಪೂರ್ವ ವಾಗ್ಮಿ. ಸಭಾಭೂಷಣರು ಅವರು. ಯಾವ ಸಭೆಗೂ ಶೋಭೆ ತರಬಲ್ಲವರಾಗಿದ್ದರು. ಆದ್ದರಿಂದಲೇ ಜಿಲ್ಲೆಯಲ್ಲಿ ಅವರನ್ನು ಭಾಷಣಕ್ಕೆ ಕರೆಯದ ಸಂಸ್ಥೆಗಳು ಯಾವುದೂ ಇರಲಿಲ್ಲ. ಇದರಿಂದಾಗಿ ಅವರ ವಿದ್ವತ್ತು ಬರವಣಿಗೆಯ ರೂಪ ತಾಳಲಿಕ್ಕೆ ಸಾಧ್ಯವಾಗಲಿಲ್ಲವೆನ್ನಬಹುದು. ಒಂದೆಡೆ ಕಾಲೇಜಿನ ಜವಾಬ್ದಾರಿ, ಇನ್ನೊಂದೆಡೆ ಸಭೆಸಮ್ಮೇಳನಗಳು. ೧೯೮೦ ರಲ್ಲಿ ಬೆಳಗಾವಿಯಲ್ಲಿ ಬ. ಕ. ಅಧ್ಯಕ್ಷತೆಯಲ್ಲಿ ಜರುಗಿದ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ಸಿನಲ್ಲಿ ಭಾಗೋಜಿಯವರ ಪಾತ್ರ ಮಹತ್ವದ್ದಾಗಿದೆ.

ಹತ್ತು ವರ್ಷ ಭಾಗೋಜಿಯವರು ಕರ್ನಾಟಕ ವಿಶ್ವವಿದ್ಯಾಲಯದ ಸಿನೇಟ ಸದಸ್ಯರಾಗಿ ಕಾರ್ಯ ನಿರ್ವಹಿಸಿದರು. ಕಲಾ ವಿಭಾಗದ ಡೀನ್ ಆಗಿದ್ದರು. ಪ್ರಾಚಾರ್ಯರಾಗಿ ನಿವೃತ್ತರಾದ ನಂತರವೂ ಅದೆ ಸಂಸ್ಥೆಯ ಆಡಳಿತ ಮಂಡಳಿಯಲ್ಲಿ ಅವರನ್ನು ಸೇರಿಸಿಕೊಳ್ಳಲಾಯಿತು. ಭಾಗೋಜಿಯವರು ಬೆಳಗಾವಿಯ ಕನ್ನಡ ಮರಾಠೀ ಸ್ನೇಹಸೇತುವೆಯಂತಿದ್ದರು. ಜಿಲ್ಲಾ ಸಾಹಿತ್ಯ ಪ್ರತಿಷ್ಠಾನ, ಇಂಚಲ ಸ್ಮಾರಕ ಸಮಿತಿ ಮೊದಲಾದವುಗಳ ಸ್ಥಾಪನೆಯಲ್ಲಿ ಅವರ ಪಾತ್ರ ಪ್ರಮುಖವಾದದ್ದಾಗಿತ್ತು .

ಭಾಗೋಜಿಯವರ ಪುಸ್ತಕಗಳ ಸಂಖ್ಯೆ ದೊಡ್ಡದಲ್ಲ. ಅವರ ವಿದ್ವತ್ಪೂರ್ಣ ಉಪನ್ಯಾಸ, ಪ್ರಬಂಧಗಳೆಲ್ಲವನ್ನು ಸಂಗ್ರಹಿಸಿ ಪ್ರಕಟಿಸಿದ್ದರೆ ಅವೇ ಹತ್ತಿಪ್ಪತ್ತು ಪುಸ್ತಕಗಳಾಗುತ್ತಿದ್ದವು. ಅವರ "ನಮ್ಮ ಬೆಳಗಾವಿ" ಪುಸ್ತಕ ಬೆಳಗಾವಿಯ ಸ್ವಾರಸ್ಯಕರ ಬೆಳವಣಿಗೆ ಇತಿಹಾಸವನ್ನೇ ಬಿಚ್ಚಿಡುವಂತಹದಾಗಿದೆ. "ರಸಗವಳ" ಅವರ ಕೆಲವು ಪ್ರಬಂಧಗಳನ್ನೊಳಗೊಂಡ ಉತ್ತಮ ಕೃತಿ. ತಮ್ಮ ತಂದೆಯವರ ಕನ್ನಡ ಭಾಷಾ ಚರಿತ್ರೆಗೆ ಪೂರಕವಾದ ಒಂದು ಅಧ್ಯಾಯವನ್ನು ಸೇರಿಸಿ‌ ಮರುಪ್ರಕಟನೆ ಮಾಡಿದ ಭಾಗೋಜಿಯವರು " ಮಕ್ಕಳ ಕತೆಗಳು" , ಪ್ರಳಯ ಎಂಬ ನಾಟಕಗಳನ್ನೂ ಬರೆದಿದ್ದಾರೆ. ಅವರು ಸಮರ್ಥವಾಗಿ ಸಂಪಾದಿಸಿದ ಮಹಾಭಾರತದ " ಉದ್ಯೋಗಪರ್ವ" ಮುಂಬಯಿ ವಿವಿ ಕನ್ನಡ ಪಠ್ಯವಾಗಿತ್ತು. ಮಹಾರಾಷ್ಟ್ರ ಸರಕಾರದ ಪಠ್ಯಪುಸ್ತಕ ಮಂಡಳಿಯ ಕನ್ನಡ ವಿಭಾಗದ ಅಧ್ಯಕ್ಷರನ್ನಾಗಿ , ಬೇರೆ ಏಳು ಭಾಷೆಗಳನ್ನೊಳಗೊಂಡ ಸಮಿತಿಯ ಸದಸ್ಯರಾಗಿ ಇವರನ್ನು ನೇಮಿಸಲಾಗಿತ್ತು. ಮೊದಲ ಕನ್ನಡ ಕಾವಲು ಸನಿತಿಯ ಸದಸ್ಯರಾಗಿ ಪಾಟೀಲ ಪುಟ್ಟಪ್ಪನವರೊಡನೆ ಕೆಲಸ ಮಾಡಿದರು.

೧೯೯೯ ರಲ್ಲಿ ಅನಂತ ಕಲ್ಲೋಳ ಮತ್ತು ಪುಂಡಲೀಕ ಪಾಟೀಲರ ಸಂಪಾದಕತ್ವದಲ್ಲಿ " ಅಣ್ಣಯ್ಯ" ಎಂಬ ಚಿಕ್ಕ ಅಭಿನಂದನ ಸಂಪುಟ ಹೊರತಂದು ಅವರನ್ನು ಸಾರ್ವಜನಿಕವಾಗಿ ಗೌರವಿಸಲಾಯಿತು. ೧೯೯೭ ರಲ್ಲಿ ಬೆಳಗಾವಿ ತಾಲೂಕಾ ಪ್ರಥಮ ಸಾಹಿತ್ಯ ಸಮ್ಮೇಳನಕ್ಕೆ ಭಾಗೋಜಿಯವರನ್ನು ಸರ್ವಾಧ್ಯಕ್ಷರನ್ನಾಗಿ ಮಾಡಲಾಯಿತು. ವಾಸ್ತವವಾಗಿ ಅವರು ರಾಜ್ಯ/ ಜಿಲ್ಲಾ ಅಧ್ಯಕ್ಷರಾಗುವ ಯೋಗ್ಯತೆಯುಳ್ಳವರಾಗಿದ್ದರು. ಶ್ರೀಮತಿ ಲಲಿತಾ ಅವರು ಭಾಗೋಜಿಯವರ ದ್ವಿತೀಯ ಧರ್ಮಪತ್ನಿಯಾಗಿ ಪತಿಯ ಎಲ್ಲ ಸುಖದು:ಖಗಳಲ್ಲಿ ಸಹಭಾಗಿಯಾಗಿದ್ದವರು. ಭಾಗೋಜಿಯವರು ಈಗ ಇಲ್ಲ. ಆದರೆ ಅವರ ಒಡನಾಟ ಪಡೆದ ಎಲ್ಲರ ನೆನಪಿನಲ್ಲೂ ಅವರು ಉಳಿದುಕೊಂಡಿದ್ದಾರೆ.

ಎಲ್.ಎಸ್.ಶಾಸ್ತ್ರಿ




11 views0 comments
bottom of page