top of page

ಪ್ರಭಾಕರ ರಾಣೆ ಅವರು ಇನ್ನಿಲ್ಲ

ಪ್ರಭಾಕರ ರಾಣೆ ಅವರು ಇನ್ನಿಲ್ಲ ಎಂಬುದನ್ನು ನಂಬುವುದು ಕಷ್ಟವಾಗುತ್ತದೆ.ಉತ್ತರ ಕನ್ನಡ ಜಿಲ್ಲೆ ಕಂಡ ಅಪರೂಪದ ಚೇತನ ಅವರು.ಶಿಕ್ಷಕರಾಗಿ,ಶಿಕ್ಷಣ ಪ್ರೇಮಿಯಾಗಿ,ಗಾಂಧೀಜಿಯವರ ತತ್ವ ಮತ್ತು ಆದರ್ಶಗಳನ್ನು ನಂಬಿ ಬಾಪೂಜಿ ಶಿಕ್ಷಣ ಸಂಸ್ಥೆಗಳನ್ನು ಜಿಲ್ಲೆಯ ಹಿಂದುಳಿದ ಪ್ರದೇಶಗಳಲ್ಲಿ ಸ್ಥಾಪಿಸಿದವರು ರಾಣೆಯವರು. ಶ್ರಮಿಕ ವಿದ್ಯಾಪೀಠ,ಜನಶಿಕ್ಷಣ ಸಂಸ್ಥಾನ ಅವರು ಕಟ್ಟಿ ಬೆಳೆಸಿದ ಸಂಸ್ಥೆಗಳು. ಅವರು ತಮ್ಮ ಸಂಸ್ಥೆಗಳಲ್ಲಿ ಗಾಂಧೀಜಿ ಜನ್ಮ ದಿನವನ್ನು ವಿನೂತನವಾಗಿ ಆಚರಿಸುತ್ತಿದ್ದರು. ಸರ್ವಧರ್ಮಗಳ ಕುರಿತು ಸಮ್ಮೇಳನ ಮಾಡಿ ವಿಚಾರಮಂಥನಕ್ಕೆ ಎಡೆ ಮಾಡಿಕೊಟ್ಟ ಅವರು. ಉತ್ತರ ಕನ್ನಡ ಜಿಲ್ಲೆಯ ಪರಿಸರ ಹೋರಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಕಾರವಾರ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ವಯಸ್ಕರ ಶಿಕ್ಷಣ ಮತ್ತು ಗ್ರಂಥಾಲಯ ಸಚಿವರಾಗಿ ಇಡಿ ರಾಜ್ಯಾದ್ಯಂತ ಸಂಚಲನ ಉಂಟು ಮಾಡಿದವರು ಅವರು.

೧೯೮೯ ನೆ ಇಸ್ವಿಯಲ್ಲಿ ಬೆಳಂಬಾರ ಹೈಸ್ಕೂಲಿನ ವಾರ್ಷಿಕ ಸ್ನೇಹಸಮ್ಮೇಳನದಲ್ಲಿ ದಿನಕರ ದೇಸಾಯಿಯವರ ಬಗ್ಗೆ ನಾನು ಮಹಾಪ್ರಬಂಧ ಮಂಡಿಸಿ ಡಾಕ್ಟರೇಟ್ ಪದವಿ ಪಡೆದ ನಿಮಿತ್ತ ಸಂಸ್ಥೆಯ ಅಧ್ಯಕ್ಷರಾದ ಆರ್.ವಿ.ನಾಯಕ ಸೂರ್ವೆ ಅವರು ನನಗೆ ಸನ್ಮಾನವನ್ನು ಇಟ್ಟುಕೊಂಡಿದ್ದರು. ಆ ಸಮಾರಂಭಕ್ಕೆ ಪ್ರಭಾಕರಣ ರಾಣೆಯವರು ಬಂದಿದ್ದರು. ಆ ದಿನ ನಮ್ಮ ನಡುವೆ ಕುದುರಿದ ಸ್ನೇಹ ಮತ್ತು ಬಾಂಧವ್ಯ ಈ ವರೆಗು ಹಸಿರಾಗಿತ್ತು. ಅವರು ಮಂತ್ರಿಗಳಾದ ಸಂದರ್ಭದಲ್ಲಿ ಕಾರವಾರದ ಅವರ ಕಾರ್ಯಕ್ರಮದಲ್ಲಿ ನೋಡುಗನಾಗಿ ಪಾಲ್ಗೊಂಡಿದ್ದೆ. ನನ್ನನ್ನು ಕಂಡ ಅವರು ಅಂದು ರಾತ್ರಿ ಅವರ ಜೊತೆ ಊಟ ಮಾಡಲು ಕೇಳಿಕೊಂಡರು. ಊಟದ ಸಂದರ್ಭದಲ್ಲಿ ಜಿಲ್ಲೆಯ ರಾಜಕಾರಣದ ಒಳಸುಳಿಗಳ ಬಗ್ಗೆ ಹೇಳುತ್ತಾ ಜಿಲ್ಲೆಯ ಪ್ರಭಾವಿ ರಾಜಕಾರಣಿಯೊಬ್ಬರು ಮು.ಮಂ.ಮೋಯ್ಲಿ ಅವರಿಗೆ ಹೇಳಿ ತನ್ನ ಪದಚ್ಯುತಿ ಮಾಡುವ ವಿಷಯವನ್ನು ಹೇಳಿಕೊಂಡಿದ್ದರು.ಹಿಂದಿನ ಮುಖ್ಯಮಂತ್ರಿ ಎಸ್ ಬಂಗಾರಪ್ಪ ಅವರನ್ನು ಪಂಥಾಹ್ವಾನ ಮಾಡಿ ಅವರ ನಡೆಯನ್ನು ರಾಜಾರೋಷವಾಗಿ ಟೀಕಿಸಿದ ರಾಣೆ ಅವರಿಗೆ ಮಂತ್ರಿ ಪದವಿ ಒದಗಿ ಬಂದಿತ್ತು. ಅವರಿಗೆ ಸಿಕ್ಕಿದ್ದು ಅಂತಹ ಲಾಭ ತರುವ ಖಾತೆಯಲ್ಲ. ಆದರೆ ವಯಸ್ಕರ ಶಿಕ್ಷಣ ಕ್ಷೇತ್ರದಲ್ಲಿ ಸಂಚಲನ ಉಂಟುಮಾಡಿದ ಅವರ ಕಾರ್ಯಕ್ಷಮತೆಯನ್ನು ಕೇಂದ್ರ ಸರ್ಕಾರ ಮತ್ತು ದೇಶದ ಪ್ರಜ್ಞಾವಂತರು ಮುಕ್ತ ಕಂಠದಿಂದ ಹೊಗಳಿದ್ದರು.ಗ್ರಂಥಾಲಯ ಇಲಾಖೆಯಲ್ಲಿ ಅವರು ತಂದ ಬದಲಾವಣೆಯನ್ನು ಇಂದಿಗು ಸಾಹಿತಿಗಳು ಪ್ರಕಾಶಕರು ನೆನಪಿಸಿಕೊಳ್ಳುತ್ತಾರೆ. ಹಿಂದು ಅಲ್ಪ ಸಂಖ್ಯಾತ ಸಮುದಾಯದ ಪ್ರಭಾಕರ ರಾಣೆಯವರನ್ನು ಹಿಂದು ಅಲ್ಪಸಂಖ್ಯಾತ ಸಮುದಾಯದಿಂದ ಬಂದ ಮಾನ್ಯ ವೀರಪ್ಪ ಮೋಯ್ಲಿಯವರು ಸಚಿವ ಸಂಪುಟದಿಂದ ತೆಗೆದು ಹಾಕಿದಾಗ ನಾಡಿನ ಎಲ್ಲಾ ದಿನಪತ್ರಿಕೆಗಳು ಸಂಪಾದಕೀಯ ಬರೆದು ಇದನ್ನು ಖಂಡಿಸಿದವು.ರಾಣೆಯವರ ಸಾಧನೆಗೆ ಈ ಪ್ರಶಂಸೆ ಒಂದೆ ಸಾಕು.

ಆಜಾನುಬಾಹು ನೇರ ನಡೆ ನುಡಿಯ ಧೀಮಂತ ವ್ಯಕ್ತಿತ್ವದ ರಾಣೆಯವರು ಇನ್ನು ಮುಂದೆ ನೆನಪು ಮಾತ್ರ.

ಸದಾಶಿವಗಡದ ಬಿಜಿವಿಸ್ ಪದವಿ ಮಹಾವಿದ್ಯಾಲಯದಲ್ಲಿ ನನ್ನ ವಿದ್ಯಾರ್ಥಿಮಿತ್ರ ಪ್ರೊ.ಶ್ರೀಧರ ನಾಯಕ ಅವರ ಸಾರಥ್ಯದಲ್ಲಿ ಜನ ಜಾನುವಾರು ವೈದ್ಯ ಸದಾನಂದ ನಾಯಕ ಅವರಿಗೆ ಸುಮನಶ್ರೀ ಪ್ರಶಸ್ತಿ ಪ್ರದಾನ ಹಾಗು ಪ್ರಭಾಕರ ರಾಣೆಯವರಿಗೆ ನಮ್ಮ ಸುಮನಾ ಟ್ರಸ್ಟನಿಂದ ನಡೆಸಿದ ಸನ್ಮಾನ ಇಂದಿಗೂ ನೆನಪಾಗಿ ಉಳಿದಿದೆ. ಅಂದು ರಾಣೆಯವರು ಸನ್ಮಾನಕ್ಕೆ ಉತ್ತರ ನೀಡಿದರು. ಖುಷಿಯಾಗಿದ್ದರು. ಅದೆ ಮಹಾವಿದ್ಯಾಲಯದಲ್ಲಿ ಅವರಿಗೆ ನಡೆದ ಸನ್ಮಾನ ಸಮಾರಂಭಕ್ಕೆ ನಾನು ಮುಖ್ಯ ಅತಿಥಿಯಾಗಿ ಹೋಗಿದ್ದೆ.ಪ್ರಿ.ಡಾ.ಮಹೇಶ ಗೋಳಿಕಟ್ಟಿಯವರು ತಮ್ಮ ಬಳಗದೊಂದಿಗೆ ಕಾರ್ಯಕ್ರಮವನ್ನು ಅದ್ಭುತವಾಗಿ ಸಂಘಟಿಸಿದ್ದರು. ರಾಣೆಯವರ ನೆನಪಿನ ಶಕ್ತಿ ಹ್ರಾಸವಾಗಿತ್ತು. ಆ ಬಳಿಕ ಅವರನ್ನು ಮತ್ತೆ ಕಂಡು ಮಾತನಾಡಲು ಸಾಧ್ಯವಾಲಿಲ್ಲ. ಅವರು ನಮ್ಮ ಜಿಲ್ಲೆ ಕಂಡ ನಿಜವಾದ ಜನಪರ ಜನನಾಯಕರಾಗಿದ್ದರು. ಉಳಿದವರು ಕೆಲವು ಜನಪರ ನಾಯಕರೆಂದು ಹೆಸರುವಾಸಿಯಾಗಿದ್ದಾರೆ.

ಶಿಕ್ಷಕ,ಶಿಕ್ಷಣ ಪ್ರೇಮಿ,ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಪ್ರಭಾಕರ ರಾಣೆಯವರು ಶಿಕ್ಷಕರ ದಿನಾಚರಣೆಯ ಈ ಪರ್ವ ದಿನದಂದು ತಮ್ಮ ಇಹದ ಬದುಕಿಗೆ ವಿದಾಯ ಹೇಳಿದರು. ನನಗೆ ಪರಮ ಆಪ್ತರು ಒಡನಾಡಿಗಳು ಧೀಮಂತ ಜನನಾಯಕರು ಆದ ಅಕ್ಷರ ಪ್ರಭಾಕರ ರಾಣೆಯವರು ಇನ್ನಿಲ್ಲ ಎಂದು ನಂಬುವುದು ಕಷ್ಟವಾಗುತ್ತದೆ.ಅವರು ಬಿಟ್ಟು ಹೋದ ಪ್ರಗತಿಪರ ಚಿಂತನೆಯ ಬೆಳಕು ನಮ್ಮ ನಡುವೆ ಬೆಳಗತ್ತಿರಲಿ.ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ.


ಡಾ.ಶ್ರೀಪಾದ ಶೆಟ್ಟಿ




18 views0 comments
bottom of page