top of page

ಪ್ರಾಣಿ ಮನೋಭಾವ

ಡಾ. ಪೆರ್ಲರ ವಾರಾಂಕಣ

ವಸಂತೋಕ್ತಿ – 13.



ಪ್ರಾಣಿಗಳಿಗೆ ತುಂಬ ನೀತಿ ನಿಯತ್ತು ಕ್ರಮ ಇದೆ; ಅವುಗಳ ಪ್ರಾಕೃತಿಕ ಏಕೋಭಾವ ಉನ್ನತವಾದದ್ದು ಅನಿಸುತ್ತದೆ. ನನ್ನ ಹಿರಿಯ ಸ್ನೇಹಿತರೊಬ್ಬರ ಸ್ವಾನುಭವ ಅದನ್ನು ಶ್ರುತಪಡಿಸುತ್ತದೆ.

ಇದೊಂದು ನಿಜ ಘಟನೆ. 1962 ರ ಸುಮಾರಿಗೆ ನಡೆದದ್ದು. ನಮ್ಮ ನೆರೆಮನೆಯವರಾದ ಮತ್ತು ನನ್ನ ಹಿರಿಯ ಸ್ನೇಹಿತರಾದ ನಾರಾಯಣಭಟ್ಟರು ಕವಿಯಾಗಿ ಸಾಹಿತಿಯಾಗಿ ಲೇಖಕರಾಗಿ ಕಾಸರಗೋಡು ಜಿಲ್ಲೆಯಲ್ಲಿ ಹೆಸರು ಗಳಿಸಿದವರು. ಅವರು ತನ್ನ 84 ನೇ ವರ್ಷ ವಯಸ್ಸಿನಲ್ಲಿ ಕಳೆದ ವರ್ಷ ತೀರಿಕೊಂಡರು. ಅವರು ಎರಡು ಮೂರು ಸಲ ಈ ಘಟನೆಯನ್ನು ನನ್ನೊಂದಿಗೆ ಹಂಚಿಕೊಂಡಿದ್ದಾರೆ.

ಆಗ ಕಾಸರಗೋಡು ಜಿಲ್ಲೆಯ ಹಳ್ಳಿ ಭಾಗದಲ್ಲಿ ಜನಸಂಖ್ಯೆ ತುಂಬ ಕಡಿಮೆಯಾಗಿತ್ತು. ಕಾಡು ಮತ್ತು ಕಾಡುಪ್ರಾಣಿಗಳು ತುಂಬ ಇದ್ದವು. ರಸ್ತೆ ಸೌಕರ್ಯ ಕೂಡ ಚೆನ್ನಾಗಿರಲಿಲ್ಲ. ಕಾಲುಹಾದಿಗಳಲ್ಲಿ ಎಲ್ಲ ಕಡೆಗೆ ನಡೆದೇ ಹೋಗಬೇಕಾಗಿತ್ತು. ನಾರಾಯಣಭಟ್ಟರ ಯವ್ವನ ಕಾಲದಲ್ಲಿ, 1962 ರ ಸುಮಾರಿಗೆ ಒಮ್ಮೆ ಒಂದು ಸಂಜೆಯ ಹೊತ್ತು ಪೇಟೆ ಕೆಲಸ ಮುಗಿಸಿಕೊಂಡು ನೆಲ್ಲಿಕಟ್ಟೆ ಎಂಬಲ್ಲಿಂದ ತನ್ನ ಮನೆಗೆ ಸುಮಾರು ಎರಡು ಮೈಲಿ ದೂರ ಬೆಟ್ಟದ ಅಂಚಿನಲ್ಲಿ ಅವರು ನಡೆದುಕೊಂಡು ಹೋಗುತ್ತಿದ್ದರು.

ಕುರುಚಲು ಗಿಡಗಳು ತುಂಬಿಕೊಂಡಿದ್ದ ಕಾಡಿನ ದಾರಿಯಲ್ಲಿ ಒಂದೇ ಒಂದು ಮನೆಯೂ ಇರಲಿಲ್ಲ. ಪ್ರತಿದಿನ ಆ ಹಾದಿಯಲ್ಲಿ ಓಡಾಡುವುದು ಅವರಿಗೆ ಅಭ್ಯಾಸವಾಗಿತ್ತು.

ಸ್ವಲ್ಪ ದೂರ ಸಾಗುತ್ತಿದ್ದಂತೆ ಯಾರೋ ತನ್ನನ್ನು ಹಿಂಬಾಲಿಸುತ್ತಿರುವುದು ನಾರಾಯಣಭಟ್ಟರ ಗಮನಕ್ಕೆ ಬಂತು. ತಿರುಗಿ ನೋಡಿದರೆ ಸುಮಾರು ನೂರು ಅಡಿ ದೂರದಲ್ಲಿ ಒಂದು ಹುಲಿ ತನ್ನನ್ನು ಹಿಂಬಾಲಿಸಿಕೊಂಡು ಬರುತ್ತಿದೆ! ಭಟ್ಟರಿಗೆ ಜೀವ ಕೈಗೆ ಬಂದಂತಾಯಿತು. ಕಾಲಿನ ಶಕ್ತಿ ಉಡುಗಿ ಹೋಗಿ ಒಂದು ಕ್ಷಣ ಏನು ಮಾಡುವುದೆಂದು ತೋಚಲಿಲ್ಲ. ಆದರೂ ಧೈರ್ಯ ತಂದುಕೊಂಡು ಹುಲಿಯನ್ನೇ ದಿಟ್ಟಿಸಿ ನೋಡಿದರು. ಹುಲಿ ಕೂಡ ನಡಿಗೆ ನಿಲ್ಲಿಸಿ ಇವರನ್ನೇ ದಿಟ್ಟಿಸಿ ನೋಡತೊಡಗಿತು!

ಯಾವುದೇ ಕಾಡುಪ್ರಾಣಿ ಧಿಡೀರನೇ ಎದುರಾದಾಗ ಓಡಿ ಹೋಗಬಾರದು; ಧೈರ್ಯದಿಂದ ಅಲ್ಲೇ ನಿಂತು ಬಿಡಬೇಕು ಎಂಬುದು ಭಟ್ಟರಿಗೆ ತಿಳಿದಿತ್ತು. ಅವರು ಒಂದು ನಿಮಿಷ ಹಾಗೇ ನಿಂತಿದ್ದು ಬಳಿಕ ನಿಧಾನವಾಗಿ ಮನೆಯ ಕಡೆಗೆ ಹೆಜ್ಜೆ ಹಾಕತೊಡಗಿದರು. ಭಯದಿಂದ ಅವರ ಎದೆಬಡಿತ ಅವರಿಗೇ ಕೇಳಿಸುತ್ತಿತ್ತು. ಸ್ವಲ್ಪ ದೂರ ಸಾಗಿ ತಿರುಗಿ ನೋಡಿದರೆ ಅರೇ! ಹುಲಿ ಮತ್ತೆ ಹಿಂಬಾಲಿಸಿಕೊಂಡು ಬರುತ್ತಿದೆ!

ಏನಾದರಾಗಲಿ ಎಂದು ಭಟ್ಟರು ತನ್ನದೇ ವೇಗದಲ್ಲಿ ಹಾದಿ ನಡೆಯುತ್ತಿದ್ದರು. ಹುಲಿ ಕೂಡ ಅದೇ ವೇಗದಲ್ಲಿ ಇವರ ಹಿಂದೆ ಹೋಗುತ್ತಿತ್ತು. ಎರಡು ಮೂರು ಸಲ ಭಟ್ಟರು ನಿಲ್ಲುವುದು, ಆಗಲೇ ಹುಲಿಯೂ ನಿಲ್ಲುವುದು, ಅನಂತರ ಮತ್ತೆ ನಡಿಗೆ ಮುಂದುವರಿಸುವುದು ಈ ಕ್ರಿಯೆ ನಡೆಯಿತು.

ಕೊನೆಗೊಮ್ಮೆ ಭಟ್ಟರು ತನ್ನ ಮನೆಯ ಹತ್ತಿರ ಬಂದು, ಹಸುಗಳನ್ನು ಕಟ್ಟುವ ಕೊಟ್ಟಿಗೆಯ ಬೇಲಿ ದಾಟಿ ಅಂಗಳಕ್ಕೆ ಕಾಲಿಟ್ಟರು. ಆಗ ಮುಸ್ಸಂಜೆಯಾಗತೊಡಗಿತ್ತು. ಭಟ್ಟರು ಅಂಗಳದಲ್ಲಿ ತಿರುಗಿ ನಿಂತರು. ಸುಮಾರು ಐವತ್ತು ಅಡಿ ದೂರದ ವರೆಗೆ ಬಂದ ಹುಲಿ ಅಲ್ಲಿ ನಿಂತು ಭಟ್ಟರನ್ನೇ ವೀಕ್ಷಿಸತೊಡಗಿತು.

‘ಇಲ್ಲಿ ನಿನಗೆ ತಿನ್ನಲಿಕ್ಕೆ ಏನೂ ಇಲ್ಲ. ಬಂದ ದಾರಿಯಲ್ಲಿ ವಾಪಸು ಹೋಗಿಬಿಡು. ನಮಗೇನೂ ತೊಂದರೆ ಮಾಡಬೇಡ’ ಎಂದು ಭಟ್ಟರು ಜೋರುದನಿಯಲ್ಲಿ ಹೇಳಿ ತಿರುಗಿ ಹೋಗುವಂತೆ ಹುಲಿಗೆ ಸನ್ನೆ ಮಾಡಿದರಂತೆ.

ಎರಡು ನಿಮಿಷ ಭಟ್ಟರನ್ನೇ ನೋಡುತ್ತಿದ್ದ ಹುಲಿ, ಅನಂತರ ಹಿಂದೆ ತಿರುಗಿ ನಿಧಾನವಾಗಿ ಬಂದ ದಾರಿಯಲ್ಲಿ ವಾಪಸು ಹೋಯಿತಂತೆ. ಅದು ಕಣ್ಮರೆಯಾಗುವ ವರೆಗೂ ನೋಡುತ್ತಿದ್ದ ಭಟ್ಟರು ಮನೆಯೊಳಗೆ ಬಂದು ನಡೆದ ಘಟನೆಯನ್ನು ಮನೆಮಂದಿಗೆ ವಿವರಿಸಿದರು. ಅವರ ಮೈ ಬೆವತಿತ್ತು. ಗಂಟಲೊಣಗಿತ್ತು. ಸಾವರಿಸಿಕೊಳ್ಳಲು ಅವರಿಗೆ ಒಂದು ದಿನವೇ ಬೇಕಾಯಿತಂತೆ.

ಇದೊಂದು ತೀರ ಅಪರೂಪದ ಘಟನೆ. ಹುಲಿ ಭಟ್ಟರನ್ನು ಯಾಕೆ ಹಿಂಬಾಲಿಸಿಕೊಂಡು ಬಂದಿತು, ಅವರ ಕೈಸನ್ನೆಯನ್ನು ಮತ್ತು ಜೋರುದನಿಯನ್ನು ಅರ್ಥೈಸಿಕೊಂಡು ಯಾಕೆ ವಾಪಸು ಹೊರಟು ಹೋಯಿತು ಎಂಬುದು ಯಕ್ಷಪ್ರಶ್ನೆ.

ಎಲ್ಲ ಘಟನೆಗಳಿಗೂ ನಮಗೆ ಆಧಾರಸಹಿತವಾದ ವಿಶ್ಲೇಷಣೆ ಸಿಕ್ಕುವುದಿಲ್ಲ. ಆದರೆ ದಾಳಿ ಮಾಡಿ ಪ್ರಯೋಜನವಿಲ್ಲ, ತಿನ್ನಲು ಏನೂ ಸಿಕ್ಕುವುದಿಲ್ಲ ಎಂಬುದು ಹುಲಿಗೆ ಖಾತ್ರಿಯಾಗಿರಬೇಕು.

ಸುಮ್ಮಸುಮ್ಮನೇ ಕಾಡುಪ್ರಾಣಿಗಳು ಯಾರಿಗೂ ತೊಂದರೆ ಕೊಡುವುದಿಲ್ಲ. ತಮಗೆ ಅಪಾಯ ಒದಗುವುದಿದ್ದರೆ ಮಾತ್ರ ದಾಳಿ ಮಾಡುತ್ತವೆ ಎಂಬುದಂತೂ ಸತ್ಯ.

ನಾರಾಯಣಭಟ್ಟರು ಈ ಘಟನೆಯನ್ನು ಎರಡು ಮೂರು ಸಲ ನನಗೆ ಹೇಳಿದ್ದಾರೆ. ಹೇಳುವಾಗೆಲ್ಲ ಅವರು ರೋಮಾಂಚಿತರಾಗುತ್ತಿದ್ದರು. ಈಗ ಅವರಿಲ್ಲ, ತೀರಿಕೊಂಡು ಒಂದು ವರ್ಷ ಕಳೆಯಿತು. ನಮ್ಮ ಕರಾವಳಿ ಜಿಲ್ಲೆಗಳ ಕಾಡಿನಲ್ಲಿ ಆಗ ಆನೆ ಹುಲಿ ಚಿರತೆ ಕರಡಿ ಕಾಟಿ ಕಡವೆ ಜಿಂಕೆ ಮುಂತಾದ ಕಾಡುಪ್ರಾಣಿಗಳು ತುಂಬ ಇದ್ದವು. ಈಗ ಇಲ್ಲವೇ ಇಲ್ಲ ಎಂದರೂ ನಡೆದೀತು. ಕೆಲವು ಸತ್ಯ ಘಟನೆಗಳನ್ನು ಹೇಳಿದರೆ ಜನ ನಂಬದೇ ಇರುವ ಸಾಧ್ಯತೆ ಇದೆ.


‌‌‌‌‌ ಡಾ.ವಸಂತಕುಮಾರ ಪೆರ್ಲ


ನನ್ನ ನಿಡುಗಾಲದ ಮಿತ್ರರಾದ ಡಾ.ವಸಂತಕುಮಾರ ಪೆರ್ಲ ಅವರು ಸುಮನಸರು. ಅವರ ಮಗು ಮನದ ಚುಂಬಕ ಶಕ್ತಿಯ ಸೆಳೆತಕ್ಕೆ ಸಿಕ್ಕವನು ನಾನು. ನೆಗಡಿ,ಜ್ವರ,ಅಶಕ್ತತೆಯ ನಡುವೆಯು‌ ವಸಂತೋಕ್ತಿಯನ್ನು ಆಸ್ಥೆ ಮತ್ತು ಪ್ರೀತಿಯಿಂದ ಬರೆದು ಕಳಿಸಿದ ಡಾ.ಪೆರ್ಲ ಅವರಿಗೆ ನಾನು ಉಪಕೃತ.

ಡಾ.ಶ್ರೀಪಾದ ಶೆಟ್ಟಿ ಸಂಪಾದಕ ಆಲೋಚನೆ.ಕಾಂ



25 views0 comments
bottom of page