top of page

ಸಂಶೋಧಕ ಸಾಹಿತಿ ಶ್ರೀ " ರಂಶಾ" ಲೋಕಾಪುರ

**************    

     ರಂಗನಾಥ ಶಾಮಾಚಾರ್ಯ ಲೋಕಾಪುರ ಅವರು ಸಾಹಿತ್ಯ ಲೋಕದಲ್ಲಿ ""ರಂಶಾ" ಎಂದೇ ಪರಿಚಿತರು. ೧೯೩೨ ರ ಜುಲೈ ೧೩ ರಂದು ಜಮಖಂಡಿ ತಾಲೂಕಿನ ಹುನ್ನೂರಲ್ಲಿ ಜನಿಸಿದ ರಂಶಾ ಅವರ ತಂದೆಯವರೂ ವಿದ್ವಾಂಸರೆ. ಕೊಲ್ಲಾಪುರದ ರಾಜಾರಾಮ ಕಾಲೇಜಿನಲ್ಲಿ ಬಿ.ಎಸ್. ಸಿ. ಮಾಡಿ ಮುಂಬಯಿಯ ಅಕೌಂಟೆಂಟ್ ಜನರಲ್ ಕಚೇರಿಯಲ್ಲಿ ಉದ್ಯೋಗಿಯಾಗಿ ಸೇರಿದರು. ಹಳೆಗನ್ನಡ, ಸಂಸ್ಕೃತ, ಹಿಂದಿ, ಮರಾಠಿ ಭಾಷೆಗಳಲ್ಲಿ ಪಳಗಿದ್ದ ಅವರು ಪ್ರಗೋ ಕುಲಕರ್ಣಿ , ವಿ. ಕೃ. ಗೋಕಾಕ ಮೊದಲಾದವರಿಂದ ಮಾರ್ಗದರ್ಶನ ಪಡೆದು ಬೆಳದವರು. ನಿವೃತ್ತರಾದ ನಂತರ ಬೆಳಗಾವಿಗೆ ಬಂದು ಒಂದು ಸಣ್ಣ ಪುಸ್ತಕದಂಗಡಿಯನ್ನು ಹಾಕಿಕೊಂಡರು. ಅದು ನೆಪಕ್ಕಷ್ಟೇ. ಧಾರವಾಡದ ದಬಾಕು ಅವರ ಪುಸ್ತಕದಂಗಡಿಯಂತೆ ಸಾಹಿತಿಗಳು ಸೇರಲು ಒಂದು ತಾಣ. ನಿರಂತರ ಅಧ್ಯಯನ‌.           ರಂಶಾ ಅವರ ಮೊದಲ ಕಾದಂಬರಿ " ಸಾವಿತ್ರಿ" ಸುಧಾ ವಾರಪತ್ರಿಕೆಯ ಯುಗಾದಿ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದುಕೊಂಡಿತು. ಅದು ಟಿ. ಎಸ್. ರಂಗಾ ನಿರ್ದೇಶನದಲ್ಲಿ ಸಿನಿಮಾ ಕೂಡ ಆಗಿ ಯಶಸ್ಸು ಕಂಡಿತು. ಅವರ ಮತ್ತೊಂದು ಕಾದಂಬರಿ " ತಾಯಿಸಾಹೇಬ" ಖ್ಯಾತ ನಿರ್ದೇಶಕ ಗಿರೀಶ ಕಾಸರವಳ್ಳಿಯವರ ನಿರ್ದೇಶನದಲ್ಲಿ ತೆರೆಗೆ ಬಂದು ರಾಷ್ಟ್ರಪ್ರಶಸ್ತಿಯನ್ನೂ ಪಡೆಯಿತು. ಮೂರನೇ ಕಾದಂಬರಿ " ನೂರು ತಲೆ ಹತ್ತು ಕಾಲು".      ಪ್ರೇಮಚಂದರ ಎಂಟು ಕಥೆಗಳನ್ನು ಹಿಂದಿಯಿಂದ ಅನುವಾದ ಮಾಡಿರುವ ರಂಶಾ ಬ್ರೆಕ್ಟನ ಒಂದು ನಾಟಕವನ್ನು " ಸಂಕಾನಟ್ಟಿಯ ಚಂದ್ರಿ" ಎಂಬ ಹೆಸರಿನಲ್ಲಿ ಭಾವಾನುವಾದ ಮಾಡಿ ಇಲ್ಲಿಯ ವಾತಾವರಣಕ್ಕೆ ಹೊಂದಿಕೊಳ್ಳುವಂತೆ ರಚಿಸಿದ್ದಾರೆ. ಅನಂತಮೂರ್ತಿಯವರ ಸಂಸ್ಕಾರ ಮತ್ತು ಕಾರಂತರ ಮರಳಿ ಮಣ್ಣಿಗೆ ಕಾದಂಬರಿಗಳನ್ನು ಮರಾಠಿ ಭಾಷೆಗೆ ಅನುವಾದಿಸಿದ ಅವರು ಮರಾಠಿಯ ವಿ. ಗ. ಕಾನಿಟ್ಕರ ಅವರ ಹೊರಪಳ ಎಂಬ ಕಾದಂಬರಿಯನ್ನು " ಅಗ್ನಿದಿವ್ಯ" ಎಂಬ ಹೆಸರಲ್ಲಿ ಕನ್ನಡಕ್ಕೆ ತಂದಿದ್ದಾರೆ.               ಭಾಷೆ- ಸಾಹಿತ್ಯ ಸಂಶೋಧನಾ ಕ್ಷೇತ್ರದಲ್ಲಿ ಬಹಳ ಮಹತ್ವದ ಕಾರ್ಯ ಅವರಿಂದಾಗಿದ್ದು ಕನ್ನಡ ಮರಾಠಿ ಭಾಷೆಯ ತೌಲನಿಕ ಅಧ್ಯಯನ ನಡೆಸಿ ರಚಿಸಿದ " ಹಳೆಗನ್ನಡ ಮತ್ತು ಮರಾಠಿ" ಎಂಬ ಅವರ ಗ್ರಂಥವನ್ನು ಹಂಪಿ ಕನ್ನಡ ವಿ. ವಿ. ಪ್ರಕಟಿಸಿದೆ. ಮರಾಠಿಯ ಜ್ಞಾನೇಶ್ವರಿಯನ್ನು ಕನ್ನಡಕ್ಕೆ ತಂದಿದ್ದು ಅದಕ್ಕೆ ಖ್ಯಾತ ವಿಮರ್ಶಕ ಕುರ್ತಕೋಟಿ ಅವರು ೨೨ ಪುಟಗಳ ಮುನ್ನುಡಿ ಬರೆದಿದ್ದಾರೆ. ಅದಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಅನುವಾದ ಪ್ರಶಸ್ತಿಯೂ ಬಂದಿದೆ. ಜ್ಞಾನೇಶ್ವರೀ ಕಾಲೀನ ಮರಾಠಿ ಭಾಷೆಯ ಮೇಲೆ ಕನ್ನಡದ ಪ್ರಭಾವ ಎಂಬ ಅವರ ಇನ್ನೊಂದು ಸಂಶೋಧನಾ ಕೃತಿ ೩ ಸಂಪುಟಗಳಲ್ಲಿ ಹೊರಬಂದಿದ್ದು ಅದಕ್ಕೆ ಮಹಾರಾಷ್ಟ್ರದ ಗ್ರಂಥೋತ್ತೇಜಕ ಸಂಸ್ಥೆ ಪುರಸ್ಕಾರ ದೊರಕಿದೆ.                    ನಾಥ ಸಂಪ್ರದಾಯದ ಕುರಿತಾಗಿಯೂ ಸಂಶೋಧನೆ ನಡೆಸಿದ ಅವರು ಕರ್ನಾಟಕದಲ್ಲಿ ಅವೈದಿಕ ಸಾಹಿತ್ಯ ಪರಂಪರೆಗಳ ಕುರಿತು ಪುಸ್ತಕ ಬರೆದಿದ್ದಾರೆ.                   ನಮ್ಮ ವೇದಿಕೆಯ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದ ಅವರು ಯಾವುದೇ ವಿಷಯವಾಗಿಯೂ ಅಭ್ಯಾಸಪೂರ್ಣವಾದ ಮಾತನಾಡಬಲ್ಲವರಾಗಿದ್ದರು. ತಮ್ಮ ಖಡಕ್ ಮತ್ತು ವಿಕ್ಷಿಪ್ತ ಸ್ವಭಾವಕ್ಕೆ ಹೆಸರಾಗಿದ್ದ ಅವರು ಕೊನೆಯ ದಿನಗಳನ್ನು ಅನಾರೋಗ್ಯದಿಂದ ಪುಣೆಯಲ್ಲಿ ಕಳೆದು ೨೦೧೯ ನವೆಂಬರ್ ತಿಂಗಳು ೧೯ ರಂದು ನಿಧನ ಹೊಂದಿದರು. 

                   - ಎಲ್. ಎಸ್. ಶಾಸ್ತ್ರಿ





25 views0 comments
bottom of page