top of page

ನನ್ನ ಪತ್ರಿಕಾ ಜೀವನ ನಡೆದುಬಂದ ದಾರಿ( ಭಾಗ-೩)

೨೬, ಜನೆವರಿ,೧೯೬೨


ಅಂದು ಬೆಳಿಗ್ಗೆ ನಮ್ಮ ಮನೆಯವರೆಲ್ಲ ಓರ್ವ ವಿಶೇಷ ಅತಿಥಿಯ ನಿರೀಕ್ಷೆಯಲ್ಲಿದ್ದೆವು. ಅವರನ್ನು ಪ್ರತ್ಯಕ್ಷ ಕಾಣುವ ತವಕ, ಸಂಭ್ರಮ.

೧೧ ಗಂಟೆ ವೇಳೆಗೆ ಅವರು ಧಾರವಾಡದಿಂದ ಬಂದು ಕಾರಿನಿಂದ ಕೆಳಗಿಳಿದಾಗ ನಾನು ತುಂಬ ಭಾವೋದ್ವೇಗಕ್ಕೊಳಗಾಗಿ ಅವರನ್ನು ನೋಡಿ ಕಣ್ತುಂಬಿಕೊಂಡೆ. ಅವರ ಕಾಲಿಗೆರಗಿ ಸ್ವಾಗತಿಸಿದೆ.

ಹಾಂ, ಅವರೇ ನಮ್ಮ ನಾಡಿನ ವರಕವಿ

ದ. ರಾ. ಬೇಂದ್ರೆ - ಅಂಬಿಕಾತನಯದತ್ತರು. ತಮ್ಮ ಪತ್ನಿ, ಮಗಳು ಹಾಗೂ ತಮ್ಮ ಒಬ್ಬ ಶಿಷ್ಯನ ಸಹಿತ ಹೊನ್ನಾವರದಲ್ಲಿರುವ ಲಕ್ಷ್ಮೀನಾರಾಯಣ ದೇವಸ್ಥಾನಕ್ಕೆ ಅಂದರೆ ನಮ್ಮ ಮನೆಗೆ ಆಗಮಿಸಿದ್ದರು. ನನ್ನ ತಂದೆ ಶಂಭು ಶಾಸ್ತ್ರಿಯವರು, ಅಣ್ಣಂದಿರಾದ ಗಂಗಾಧರ/ ತ್ರ್ಯಂಬಕ ಶಾಸ್ತ್ರಿಯವರು ಅವರೆಲ್ಲರನ್ನೂ ಒಳಗೆ ಕರೆದುಕೊಂಡುಬಂದರು. ನನ್ನ ತಾಯಿ ಬೇಂದ್ರೆಯವರ ಪತ್ನಿ ಮಗಳನ್ನು ಅಡಿಗೆ ಮನೆಗೆ ಕರೆದೊಯ್ದರು.

ಬೇಂದ್ರೆಯವರು ಅದಾಗಲೇ ಮಾತು ಆರಂಭಿಸಿದ್ದರು. ಮರುದಿನ ಮರಳಿ ಧಾರವಾಡಕ್ಕೆ ಹೊರಡುವತನಕವೂ ಅವರ ಮಾತೇ ಮಾತು. ಅದೇನು ಕೇಳಿ ಬೇಸರ ಬರುವಂತಹದಲ್ಲವಲ್ಲ. ಬಾಲ್ಯದಿಂದ ಅವರ ಭಾವಗೀತೆಗಳನ್ನು ಹಾಡುತ್ತ ಬೆಳೆದ ನನಗೆ ಅಂದು ಅವರಿಂದಲೇ ಆಶೀರ್ವಾದ. ಅದೊಂದು ಅಪೂರ್ವ ಕ್ಷಣ!

ನನ್ನ ಹಿರಿಯ ಸಹೋದರ ಗಂಗಾಧರ ಶಾಸ್ತ್ರಿ, ಮತ್ತೊಬ್ಬ ಹಿರಿಯಣ್ಣನಂತಿದ್ದ ಗೋಪಾಲಕೃಷ್ಣ ನಾಯಕರು ಸೇರಿ ಸ್ಥಾಪಿಸಿದ್ದ " ಶೃಂಗಾರ ಮಂಟಪ" ಸಂಸ್ಥೆಯಡಿ " ಶೃಂಗಾರ " ಕಲಾಸಾಹಿತ್ಯಿಕ ತ್ರೈಮಾಸಿಕವನ್ನು ಅಂದು ಮಧ್ಯಾಹ್ನ ಮೂರು ಗಂಟೆಗೆ ಮನೆಯ ಹೊರಜಗುಲಿಯ ಮೇಲೆಯೇ ನಡೆದ ಸಮಾರಂಭದಲ್ಲಿ ಬೇಂದ್ರೆಯವರು ಬಿಡುಗಡೆ ಮಾಡಿದರು. ಅದರ ಸಂಪಾದಕ - ಪ್ರಕಾಶಕನಾಗಿ ನಾನು ಅಂದೇ ಪತ್ರಿಕಾರಂಗಕ್ಕೆ ಕಾಲಿಟ್ಟಿದ್ದು.

ಶ್ರೀ ಪಾಂಡೇಶ್ವರ ಗಣಪತರಾಯರು, ವಿದ್ವಾಂಸರಾದ ಪ್ರೊ. ಬಿ. ಎಚ್. ಶ್ರೀಧರ, ಚಿಂತಕ ಗೌರೀಶ ಕಾಯ್ಕಿಣಿಯವರು, ಕವಿ ಸು. ರಂ. ಯಕ್ಕುಂಡಿಯವರು, ಪ್ರೊ. ಎಲ್. ಟಿ. ಶರ್ಮಾ ಅವರಲ್ಲದೆ ಗೋಪಾಲಕೃಷ್ಣ ಹೆಗಡೆ ಕೇರೀಮನೆ, ಭರತನಳ್ಳಿ ನಾ. ಸು. , ಆರ್. ವಿ. ಭಂಡಾರಿ , ಕತೆಗಾರ ಪಿ. ವಿ. ಶಾಸ್ತ್ರಿ ಕಿಬ್ಬಳ್ಳಿ, ಮೊದಲಾದವರೆಲ್ಲ ಅಂದು ಹಾಜರಿದ್ದು ಶೃಂಗಾರ ಕ್ಕೆ ಶುಭ ಕೋರಿದರು. ಪತ್ರಿಕೆ ಬಿಡುಗಡೆ ಮಾಡಿದ ವರಕವಿ ಸುಮಾರು ಮುಕ್ಕಾಲು ಗಂಟೆ ಪತ್ರಕರ್ತನ ಸಾಮಾಜಿಕ ಜವಾಬ್ದಾರಿ, ಸಂಗಡ ಸಾಂಸ್ಕೃತಿಕ ಜಗತ್ತಿನ ಬಗ್ಗೆ ಮಾತನಾಡಿ ಶುಭ ಹಾರೈಸಿದರು.

ಬೇಂದ್ರೆಯವರು ನಂತರ ಸೇಂಟ್ ಥಾಮಸ್ ಹೈಸ್ಕೂಲಿನ ವಾರ್ಷಿಕ ಗೆದರಿಂಗ್ ಮುಖ್ಯ ಅತಿಥಿಗಳಾಗಿ ಹೋಗಿ ಅಲ್ಲಿ ಒಂದು ತಾಸು ಮಾತನಾಡಿದರು. ನನ್ನ ಎರಡನೇ ಅಣ್ಣ ಅಲ್ಲಿ ಅಧ್ಯಾಪಕನಾಗಿದ್ದ. ರಾತ್ರಿ ನಮ್ಮ ಮನೆಯಲ್ಲೇ ಇದ್ದ ಅವರು ೨ ಗಂಟೆತನಕ ಮಾತಾಡುತ್ತಲೇ ಇದ್ದರು. ಮಾತು ಅಂದ್ರೆ ಬೇಂದ್ರೆ, ಬೇಂದ್ರೆ ಅಂದ್ರೆ ಮಾತು! ನಾನು ನಂತರ ನಮ್ಮ ಜಿಲ್ಲೆಯ ಮಳೆಗೆ ಸಮೀಕರಿಸಿ ಒಂದು ಹನಿಗವನ ಬರೆದೆ-

"ಧಪಾ ಧಪಾ ಅಂತ

ಹೊಯ್ಯೊ ಮಳೆ ಕಂಡ್ರೆ

ಮಾತಾಡಿದ್ಹಾಂಗ್ ಆಗ್ತೈತೆ

ನಮ್ಕವಿ ಬೇಂದ್ರೆ"

( ಈ ಹನಿಗವನದ ಕುರಿತಾಗಿಯೇ ಮೈಸೂರಿನ ಪ್ರಾಧ್ಯಾಪಕರಾದ ಗಜಾನನ ಹೆಗಡೆಯವರು ಒಂದು ಕಿರು ಲೇಖನ ಬರೆದಿದ್ದಾರೆ)

ಬೇಂದ್ರೆಯವರ ಜೊತೆಗೆ ಅಂದು ನಮ್ಮ ಮನೆಗೆ ಬಂದ ಶಿಷ್ಯರು ಡಾ. ಬಿ. ಬಿ. ರಾಜಪುರೋಹಿತರು ಮುಂದೆ ದೊಡ್ಡ ಭಾಷಾ ಶಾಸ್ತ್ರಜರಾಗಿ ಮೈಸೂರಲ್ಲಿ ನೆಲೆಸಿದರು. ಅವರು ಬೇಂದ್ರೆಯವರ ಮಾರ್ಗದರ್ಶನದಲ್ಲೇ ತಮ್ಮ ಮಹಾಪ್ರಬಂಧ ಬರೆದಿದ್ದಾರೆ.

ನನ್ನ ಪತ್ರಿಕಾ ಜೀವನ ಆರಂಭವಾದದ್ದು ಹೀಗೆ. ಶೃಂಗಾರ ಜಿಲ್ಲೆಗೇ ಶೃಂಗಾರ ಎಂದು, ಬಿ. ಎಚ್. ಶ್ರೀಧರ್, ಬೀಚಿ, ಯಕ್ಕುಂಡಿಯಂಥವರು ಪ್ರಶಂಸಿದ್ದರು. ಗಂ. ಶಾಸ್ತ್ರಿ, ಗೋ. ನಾಯಕ ಅವರ ಹಿರಿತನದಲ್ಲಿ ಪತ್ರಿಕೆ ಮತ್ತು ಶೃಂಗಾರ ಮಂಟಪ ಸಂಸ್ಥೆ ಮುನ್ನಡೆದು ಜಿಲ್ಲೆಯಲ್ಲಿ ಸಾಹಿತ್ಯ ಯಕ್ಷಗಾನ ಸಂಗೀತ ನಾಟಕ ಮೊದಲಾದ ಕ್ಷೇತ್ರಗಳಲ್ಲಿ ಅಪೂರ್ವ ಸಾಧನೆಗೈದದ್ದು ಉಲ್ಲೇಖನೀಯ. ಬೇಂದ್ರೆ, ಕಣವಿ, ಶಂ. ಬಾ. ಜೋಶಿ, ಆನಂದಕಂದ, ವರದರಾಜ ಹುಯಿಲಗೋಳ, ಡಾ. ಸುಂಕಾಪುರ, ನಾ. ಡಿಸೋಜಾ, ಚಂಪಾ ಮೊದಲಾದ ಖ್ಯಾತನಾಮರ ಬರೆಹಗಳು ಶೃಂಗಾರದಲ್ಲಿ ಪ್ರಕಟಗೊಂಡವು. ಎಂ. ಗೋವಿಂದ ಪೈಗಳ ಕೊನೆಯ ಕವನ ಪ್ರಕಟಗೊಂಡಿದ್ದು ನಮ್ಮಲ್ಲೇ. ಉತ್ತರ ಕನ್ನಡ ಜಿಲ್ಲೆಯ ಆಗಿನ ಒಂದು ಯುವ ಪೀಳಿಗೆಯ ಬರೆಹಗಾರರೆಲ್ಲ ಈ ಪತ್ರಿಕೆಯ ಮೂಲಕ ಬೆಳೆಯುವದಕ್ಕೆ ಅವಕಾಶವಾಯಿತು.

ಇದು ನನ್ನ ಮೊದಲ ಪತ್ರಿಕೆಯ ಕಥಾಕಥನ. ಆಗ ನನಗೆ ಹದಿನೆಂಟು ವರುಷ. ಪತ್ರಿಕೋದ್ಯಮದ ದೀರ್ಘ ಹಾದಿ ನನ್ನೆದುರು ತೆರೆದುಕೊಂಡಿತ್ತು.

ಆಗ ಶೃಂಗಾರ ಪತ್ರಿಕೆಯ ವಾರ್ಷಿಕ ಚಂದಾ ಎರಡು ರೂಪಾಯಿ. ಅಂದರೆ ಒಂದು ಸಂಚಿಕೆಗೆ ಎಂಟಾಣೆ. ಡೆಮಿ ೧/೮ ಆಕಾರದ ೬೪ ಪುಟಗಳು. ಅದನ್ನೂ ವಸೂಲು ಮಾಡಲು ಕಷ್ಟವಾಗುತ್ತಿತ್ತು. " ಅಡಿಕೆ ರೇಟು ಬಿದ್ದೋಯ್ದ್ರೊ ಮಾರಾಯ್ರೆ " ಅನ್ನುವವರೂ ಇದ್ದರು. ಕಾಲ ಹಾಗಿತ್ತು.

- ಎಲ್. ಎಸ್. ಶಾಸ್ತ್ರಿ


8 views0 comments
bottom of page