top of page

ನನ್ನ ಗೊರಕೆಯ ಕತೆ [ ಪ್ರಬಂಧ]

Updated: Nov 5, 2020



ನನ್ನ ಗೊರಕೆಯ ಬಗ್ಗೆ ನಾನು ವಿಷದವಾಗಿ ಬರೆಯಬೇಕೆಂದುಕೊಂಡಾಗ ಅದೇನು ಮಹಾ ವಿಷಯ ಎಂದು ನನ್ನ ಮಾತಿಗೆ ನಕ್ಕವರೇ ಬಹಳ. ಗೊರಕೆಯ ಬಿಟ್ಟು ಬೇರೆ ವಿಷಯವೇ ಇವನಿಗೆ ಸಿಗಲಿಲ್ಲವೆ ಎಂಬುದು ಅವರ ಪ್ರಶ್ನೆ. ಆದರೆ ಗೊರಕೆಯೆಂಬುದು ಕ್ಷುಲ್ಲಕ ಅಥವಾ ಅಲ್ಪಮತಿಯ ವಿಚಾರವೆಂಬುದನ್ನು ನಾನು ಒಪ್ಪುವದಿಲ್ಲ. ಆಹಾರ, ನಿದ್ರೆ ಹಾಗೂ ಮೈಥುನಗಳನ್ನು ಭಗವಂತನು ಮನುಷ್ಯರಾದಿಯಾಗಿ ಎಲ್ಲಾ ಪ್ರಾಣಿ ಜಂತುಗಳಿಗೆ ಕರುಣಿಸಿದ್ದಾನೆ. ಭಗವಂತನ ಎರಡನೇಯ ವರವಾದ ನಿದ್ದೆಯಂತೂ ಮಾನವನ ಬದುಕಿಗೆ ಅತಿ ಅನಿವಾರ್ಯವೆಂಬುದರಲ್ಲಿ ಎರಡು ಮಾತಿಲ್ಲ. ಮನುಷ್ಯನು ಆಹಾರ ಮತ್ತು ಮೈಥುನಗಳನ್ನು ಬಿಟ್ಟು ಬದುಕಬಲ್ಲ. ಆದರೆ ನಿದ್ದೆಯಿಲ್ಲದೆ ಬಹುಕಾಲ ಬದುಕಲಾರ. ರೋಗಿಷ್ಟನಾದ ಮನುಷ್ಯನಿಗೆ ನಿದ್ದೆಯೆಂಬುದು ಕನಸಿನಗಂಟು. ನಿದ್ದೆಯನ್ನು ಬಿಟ್ಟರೆ ಮನುಷ್ಯನಿಗೆ ರೋಗವೇ ಗತಿ. ನಿದ್ರಾವಿಹೀನನು ರೋಗಿ ಸಮಾನನಾಗುತ್ತಾನೆ. ನಿದ್ದೆಗಾಗಿ ಪರಿತಪಿಸುವವರು ಈ ಜಗತ್ತಿನಲ್ಲಿ ಅಗಣಿತರಿದ್ದಾರೆ. ನಿದ್ದೆಗಾಗಿ ಮದ್ದನ್ನು ಸೇವಿಸುವವರು ಹಲವರಾದರೆ ‘ಅನ್ಯತಾ ಶರಣಂ ನಾಸ್ತಿ ತ್ವಮೇವ ಶರಣಂ ಮಮ’ ಎಂದು ಮದ್ಯಕ್ಕೆ ಶರಣಾದವರು ಇನ್ನೂ ಹಲವರು. ‘ ಎಲ್ಲಿರುವೇs.... ಮನವ ಕಾಡುವ ಪ್ರೇಯಸಿಯೇ ?’ ಎಂದು ಸಿನಿಮಾ ದಾಟಿಯಲ್ಲಿ ನಿದ್ದೆಗಾಗಿ ಹಲಬುತ್ತ ನಿದ್ದೆಗೆಡುತ್ತಿರುವ ಸಿರಿವಂತರ ದಂಡೇ ಒಂದಡೆಯಾದರೆ ಎಲ್ಲೆಂದರಲ್ಲಿ ಫೂಟಪಾತಿನಲ್ಲಿ ಸುಖ ನಿದ್ದೆ ಮಾಡುವವರು ಇನ್ನೊಂದೆಡೆ. ‘ಮಾರಾಯ್ರೇ ಇಂದು ನನಗೆ ಎರಡು ತಾಸು ಒಳ್ಳೆ ನಿದ್ದೆ ಬಂತು !’ ಎಂದು ಬೆನ್ನು ಚಪ್ಪರಿಸಿಕೊಳ್ಳುವ ಹಲವರನ್ನು ನಾನು ನೋಡಿದ್ದೇನೆ. ಹೀಗೆ ಕೇವಲ ಒಂದು ಸಣ್ಣ ನಿದ್ದೆಗಾಗಿ ಪರಿತಪಿಸುವ ಪರಿಸ್ಥಿತಿ ಇರುವಾಗ ನಿದ್ದೆಯ ತುರ್ಯಾವಸ್ಥೆಯಾದ ಗೊರಕೆಯ ಪ್ರಾಪ್ತಿಗಾಗಿ ಎಂಥ ಕಡು ತಪಸ್ಸು ಬೇಕಿಲ್ಲ !. ಒಂದರ್ಥದಲ್ಲಿ ಗೊರಕೆಯು ನಿದ್ದೆಯೆಂಬ ನಮ್ಮ ಪ್ರೀತಿಯ ಪಯಣದಲ್ಲಿ ನಾವು ಮುಟ್ಟಬೇಕಾದ ಗೌರಿಶಂಕರ ! ಋಷಿ- ಮುನಿಗಳು ತಮ್ಮ ತಪಸ್ಸಿನ ಅಂತಿಮ ಮಜಲಿನಲ್ಲಿ ತಲುಪುವ ಅಂತಹ ಎತ್ತರದ ಅದ್ವಿತೀಯ ಹಾಗೂ ಅನಿರ್ವಚನೀಯ ಸಮಾಧಿಸ್ಥಿತಿಯನ್ನು ಅಲ್ಪವಿಚಾರವಾಗಿ ಪರಿಗಣಿಸುವದಾಗಲೀ ಅಥವಾ ಕ್ಷುಲ್ಲಕವೆಂದು ತುಚ್ಛೀಕರಿಸುವದಾಗಲೀ ನಮ್ಮ ಸಂಸ್ಕೃತಿಗೆ ಶೋಭಾಯಮಾನವಲ್ಲವೆಂಬುದು ನನ್ನ ಅಂತರ್ಗತ ಭಾವನೆ.

ಗೊರಕೆಯ ಕುರಿತು ಚಿಂತನೆ ಅಥವಾ ಜಿಜ್ಞಾಸೆ ಇವತ್ತಿನದಲ್ಲ. ತ್ರೇತಾಯುಗದಲ್ಲಿಯೂ ಸಹ ಈ ಕುರಿತು ಆಳವಾದ ಅಧ್ಯಯನ ನಡೆದು ಗೊರಕೆಯ ಅವಶ್ಯಕತೆಯನ್ನು ಎತ್ತಿಹಿಡಿದ ಸನ್ನಿವೇಶವೊಂದು ದಾಖಲಾಗಿದೆ. ಲಂಕಾಧಿಪತಿಯಾದ ದಶಮುಖಿ ರಾವಣನಿಗೊಬ್ಬ ಸಹೋದರ. ಆತನ ಹೆಸರೇ ಕುಂಭಕರ್ಣ. ಈತನೊಬ್ಬ ಮಹಾಕಾಯ. ದೇಹಕ್ಕೆ ತಕ್ಕ ದೊಡ್ಡ ಹೊಟ್ಟೆ. ಸದಾ ‘ಹಸಿವು, ಹಸಿವು’ ಎನ್ನತ್ತ ಆರ್ಭಟಿಸುವ ಈತ ಒಂದೇ ಬಾರಿಗೆ ನೂರಾರು ಕುರಿ-ಮೇಕೆಗಳನ್ನೂ ಬಂಡಿಗಟ್ಟಲೆ ತಿನ್ನುತ್ತಿದ್ದನಂತೆ.. ಒಂದು ಲಕ್ಷ ಜನಕ್ಕಾಗುವಷ್ಟು ಆಹಾರವನ್ನು ಒಬ್ಬನೇ ತಿಂದು ತೇಗುತ್ತಿದ್ದ ಈತನ ಹಸಿವು ಹಿಂಗಿಸುವದೇ ಲಂಕಾಧಿಪತಿ ದಶತಲೆಯ ರಾವಣನಿಗೆ ಎಂಥಾ ಝಂಡು ಬಾಂಬನಿಂದಲೂ ಪರಿಹಾರವಾಗದಂತಹ ದೊಡ್ಡ ತಲೆ ನೋವಾಗಿತ್ತಂತೆ. ಆದರೆ ದೇವರು ದೊಡ್ಡವನು. ಬ್ರಹ್ಮನು ಕುಂಭಕರ್ಣನಿಗೆ ವರ ರೂಪದ ಒಂದು ಶಾಪ ನೀಡುತ್ತಾನೆ. ಇದರ ಪ್ರಕಾರ ಕುಂಭಕರ್ಣನು ಒಂದು ಬಾರಿ ಮಲಗಿದರೆ ಮತ್ತೆ ಏಳುವದು ಆರು ತಿಂಗಳ ಮೇಲೆಯೆ. ಒಮ್ಮೆ ಎದ್ದರೆ ಕೇವಲ ಒಂದು ದಿವಸ ಮಾತ್ರ ಎಚ್ಚರವಾಗಿರುತ್ತಿದ್ದ. ಪುನ; ಮಲಗಿದರೆ ಮತ್ತೆ ಆರು ತಿಂಗಳ ನಿದ್ದೆ ಈತನ ಪಾಲಿಗೆ. ಆದರೆ ಎದ್ದ ಒಂದು ದಿವಸ ಮಾತ್ರ ಆತನ ಹಸಿವಿನ ಪರಿಮಾರ್ಜನೆಗೆ ಒಂದು ಲಕ್ಷ ಜನರ ಆಹಾರ ಸಮರ್ಪಣೆಯಾಗ ಬೇಕಾಗಿತ್ತು. ಸದ್ಯ ವರ್ಷಕ್ಕೆ ಕೇವಲ ಒಂದು ದಿನ ಮಾತ್ರ ಕುಂಭಕರ್ಣನ ಉದರದ ಫ್ಯಾಕ್ಟರಿ ತೆರೆಯುತ್ತಿದ್ದ ಪರಿಣಾಮ ಸುವರ್ಣ ಲಂಕೆ ಬರಿದಾಗದೆ ಉಳಿದಿತ್ತು. ಕುಂಭಕರ್ಣನ ಗೊರಕೆಗೆ ನಮೋ ನಮ:. ಒಮ್ಮೆ ಆತನ ಪಾಲಿಗೆ ನಿದ್ದೆಯ ಶಾಪವೊಂದು ಇರದೇ ಇದ್ದರೆ ಇಂದು ಜಗತ್ತೇ ಬರಿದಾಗಿ ನಮ್ಮ ಅರಣ್ಯಗಳಂತೆ ಬಟಾಬಯಲಾಗುತ್ತಿತ್ತು.


ಇಂಗ್ಲೀಷಿನಲ್ಲಿ ನಿದ್ದೆಯ ತುರ್ಯಾವಸ್ಥೆಯನ್ನು ಸೌಂಡ್ ಸ್ಲೀಪ್ ಎಂದು ಅತಿ ಸುಂದರವಾದ ಶಬ್ದದಿಂದ ಅರ್ಥಪೂರ್ಣವಾಗಿ ವರ್ಣಿಸಿದ್ದಾರೆ. ನಿದ್ದೆಯ ಶಿಖರಾವಸ್ಥೆ ಅಥವಾ ಗಾಢತ್ವವೇ ನಿದ್ದೆಯ ಸಾರ್ಥಕ್ಯ ಅಥವಾ ಸಾಫಲ್ಯತೆಯ ಸಂಕೇತ. ಅದಕ್ಕಾಗಿಯೇ ಇಂಗ್ಲೀಷಿಗರು ಸುಖ ನಿದ್ದೆಗಾಗಿ ಸದಾ ಹಪಾಹಪಿಸುತ್ತಾರೆ. ‘ಗುಡ್ ನೈಟ್,’ ‘ಸ್ವೀಟ ಡ್ರೀಮ್ ‘ ಎಂಬುದು ಇಂಗ್ಲೀಷರ ನಿತ್ಯ ರಾತ್ರಿಯ ಮಂತ್ರ. ಇಂಗ್ಲೀಷ ಕವಿ ಸ್ಕಾಟನಂತೂ ‘ಎಲ್ಲರಿಗೂ ಚೆನ್ನಾಗಿ ಸುಖ ನಿದ್ದೆ ಬರಲಿ ; ಸಂತಸದ ಕನಸು ಮತ್ತು ಸುಪ್ತಿಯ ಬೆಳಕು ಸಿಗಲಿ’ ಎಂದು ಹಾರೈಸುವ ಪರಿಯಂತೂ ಅನನ್ಯ. ಇನ್ನು ಮಹಾ ನಾಟಕಕಾರ ಶೇಕ್ಸಪೀಯರನಂತೂ ತನ್ನ ನಾಟಕ ‘ ನಾಲ್ಮಡಿ ಹೆನ್ರಿ’ ಯಲ್ಲಿ “ ಓ ನಿದ್ದೆ !, ಓ ಮೃದು ನಿದ್ದೆ, ನೀನು ನಿಸರ್ಗದ ದಾಯಿ” ಎಂದು ಮುಕ್ತ ಕಂಠದಿಂದ ಹಾಡಿ ಹೊಗಳುತ್ತಾನೆ. ಹೀಗೆ ಗೊರಕೆಯೇ ಹರಕೆಯಾಗಿರುವಾಗ ಅದನ್ನು ಕಡೆಗಣಿಸುವದೆಂತು ?

ಒಂದು ಬಾರಿ ನನ್ನ ಮಿತ್ರನೊಬ್ಬನನ್ನು ಸೌಂಡ್ ಸ್ಲೀಪ್ ಎಂದರೇನು ಎಂದು ಕೇಳಿದೆ. ಆತ ಕೊಟ್ಟ ಉತ್ತರ ಬಹು ಮಾರ್ಮಿಕ. Sound sleep is one which makes sound !. ಸೌಂಡ್ ಸ್ಲೀಪ್ ಎಂಬ ಶಬ್ದಕ್ಕೆ ಗೊರಕೆಯಲ್ಲದೆ ಬೇರೆ ಯಾವ ಶಬ್ದ ಪರ್ಯಾಯವಾದೀತು ? ನನಗೆ ಇತ್ತೀಚೆಗೆ ದರ್ಶನವಾದ ಒಂದು ಸತ್ಯವೆಂದರೆ ನಿದ್ರಾ ಪ್ರಪಂಚವೊಂದು ನಾದಮಯ ಪ್ರಪಂಚ. ಸಂಗೀತಕ್ಕೊಂದು ಲಯವಿದ್ದಂತೆ ನಿದ್ರಾವಸ್ಥೆಗೂ ಒಂದು ಲಯವಿದೆ. ಒಂದು ಏರಿಳಿತವಿದೆ. ವಿಭಿನ್ನ ಲಯದಲ್ಲಿ ನಿದ್ದೆಯ ಸಂಗೀತ ಕಚೇರಿ ನಡೆಯುತ್ತದೆ. ನನ್ನ ಹೆಂಡತಿ ಕೆಲವು ಬಾರಿ ಹೇಳುತ್ತಾಳೆ, “ ನಿನ್ನೆ ರಾತ್ರಿ ನನಗೆ ನಿದ್ದೇನೆ ಬರಲಿಲ್ಲ್ರಿ. ಅದೆಂತಾದ್ರಿ ನಿಮ್ಮ ಗೊರಕೆ ? ಒಂದ ಬಾರಿ ಮಂದ್ರ ಮತ್ತೊಂದು ಬಾರಿ ತಾರಕ ಇನ್ನೊಂದು ಬಾರಿ ಮಧ್ಯಮದಲ್ಲಿ ಇಡೀ ರಾತ್ರಿ ಗೊರ ಗೊರ ಅಂತಾ ಗೊರದ್ರಲ್ರಿ ? ಅಲ್ಲಾರಿ ಯಾರಿಗೆ ನಿದ್ದೆ ಬರ್ತದ್ರಿ. ಬೇರೆ ದೇಶದಲ್ಲಾದ್ರೆ ಡೈವರ್ಸು ಆಗಬಿಡತ್ತಿತ್ತು.!” ಆಕೆ ಈ ಮಾತನ್ನು ಇಲ್ಲಿಯವರೆಗೆ ಒಂದು ನೂರು ಬಾರಿ ಹೇಳಿರಬಹುದು. ಆದರೆ ಒಂದು ಬಾರಿಯೂ ನನ್ನ ಹೆಂಡತಿ ಡೈವರ್ಸ ಅರ್ಜಿ ಹಾಕಿಲ್ಲ. ಯಾಕೆಂದರೆ ಈಗೀಗ ನನ್ನ ನಿದ್ರಾ ಸಂಗೀತವನ್ನು ಕೇಳದೇ ಇದ್ದರೆ ಆಕೆಗೆ ನಿದ್ದೆಯೇ ಬರುವದಿಲ್ಲ ! ತವರುಮನೆಗೆ ಹೋದಾಗಲೆಲ್ಲ ತನಗೆ ಇಲ್ಲಿ ಸರಿಯಾಗಿ ನಿದ್ದೆ ಬರುವದಿಲ್ಲವೆಂದು ಆಕೆ ಪೋನು ಮಾಡುತ್ತಾಳೆ. ನನ್ನ ಹೆಂಡತಿ ನನ್ನ ಗೊರಕೆಯನ್ನು ಸಾರ್ವಜನಿಕವಾಗಿ ತಿರಸ್ಕರಿಸುತ್ತಾ ಆಂತರಂಗಿಕವಾಗಿ ಅದನ್ನು ಪ್ರೀತಿಸುತ್ತಾಳೆ. ನನ್ನ ನಿದ್ರೆಯ ಲಯಕ್ಕೆ ಒಳಗೊಳಗೆ ಮಿಡಿಯುತ್ತ ಆಸ್ವಾದಿಸುವ ಅವಳ ಸಾತ್ವಿಕ ಇಬ್ಬಂದಿತನಕ್ಕೆ ನಾನೂ ಆಶ್ಚರ್ಯಪಟ್ಟಿದ್ದೇನೆ. ಇನ್ನೂ ರೋಚಕ ವಿಷಯವೆಂದರೆ ಈಗೀಗ ನನ್ನ ಮಡದಿ ಅವಳಿಗೆ ಗೊತ್ತಿಲ್ಲದ ಹಾಗೆ ನಿದ್ದೆಯಲ್ಲಿ ಗೊರೆಯುತ್ತಿರುವ ದೃಶ್ಯವನ್ನು ಕಂಡಾಗಲೆಲ್ಲ ಅವಳನ್ನು ಎಬ್ಬಿಸಿ ಲೇವಡಿ ಮಾಡಬೇಕೆಂದುಕೊಳ್ಳುತ್ತೇನೆ. ಆದರೆ ಮರುಕ್ಷಣದಲ್ಲಿ ಆ ಮುಗ್ಧ, ನಿಶ್ಕಳಂಕ ನಿದ್ರೆಯನ್ನು ಭಂಗ ಮಾಡಬಾರದೆಂದು ಅನಿಸಿ ¸ ಸುಮ್ಮನಾಗುತ್ತೇನೆ. ಧರ್ಮೇಚ, ಅರ್ಥೇಚ,ಕಾಮೇಚ ನಾತಿ ಚರಾಮಿ ಎಂದು ನನ್ನ ಕೈಹಿಡಿದು ತನ್ನ ಬಲಗಾಲಿಟ್ಟು ಮನೆಯೊಳಗೆ ಕಾಲಿಟ್ಟ ನನ್ನ ಮನದನ್ನೆ ಈಗೀಗ “ಗೊರಕೇಚ ನಾತಿ ಚರಾಮಿ” ಎಂದು ನನ್ನೊಂದಿಗೆ ಬಾಳು ಸಾಗಿಸುತ್ತಿರುವಾಗ ನನಗೇಕೆ ಸ್ವರ್ಗದ ಚಿಂತೆ !.

ನನ್ನ ಹೆಂಡತಿ ಗೊರಕೆಯನ್ನು ಪ್ರಜ್ಞಾತೀತ ಪ್ರಜ್ಞೆಯಿಂದ ಪ್ರೀತಿಸತೊಡಗಿದ್ದಾಳೆಂಬುದೇನೋ ಸರಿ. ಆದರೆ ನನ್ನ ಕೆಲವು ಸಂಬಂಧಿಗಳು, ಮಿತ್ರರು ನನ್ನ ಗೊರಕೆಯ ಬಗ್ಗೆ ಒಂದು ರೀತಿಯ ಭಯ, ವಿಸ್ಮಯ ಹೊಂದಿದ್ದಾರೆ. ನನ್ನೊಬ್ಬ ಸಂಬಂಧಿಕರು ಹಗಲು ಪೂರ್ತಿ ನನ್ನ ಜೊತೆಗೆ ವ್ಯವಹರಿಸುತ್ತ ರಾತ್ರಿಯಲ್ಲಿ ನಾನು ಮಲಗುವ ವ್ಯವಸ್ಥೆ ಮಾಡುತ್ತಿದ್ದಂತೆ ನೂರು ಮಾರು ಹಾರಿ ಹೋಗಿ ನನ್ನ ರಾತ್ರಿ ಸಂಗೀತ ಕೇಳದ ತಮ್ಮ ಸೌಂಡ್ ಪ್ರೂಫ್ ಕೋಣೆಯಲ್ಲಿ ಮಲಗುತ್ತಾರೆ. ಆದರೂ ಕೆಲವು ಬಾರಿ ನಿಸರ್ಗ ಕ್ರಿಯೆಯ ಪರಿಮಾರ್ಜನೆಗಾಗಿ ಹೊರಬಂದಾಗ ನನ್ನ ಸಂಗೀತದ ಲಯ ಅವರ ಕರ್ಣದ ಮೇಲೆ ಅಪ್ಪಳಿಸಿ ಅವರು ಪುನ: ತಮ್ಮ ಕೋಣೆಗೆ ಹೋದರೂ ನಿದ್ದೆ ಬರುವದಿಲ್ಲವಂತೆ. “ ಅಲ್ಲಯ್ಯ ಮಾರಾಯ ಅದೆಂತಾ ಸೌಂಡೋ ನಿನ್ನ ಗೊರಕೆದು ? ನನಗಂತೂ ಅರ್ಧರಾತ್ರಿ [ ಎರಡನೇ ಇನ್ನಿಂಗ್ಸನಲ್ಲಿ ! ] ಮೇಲೆ ನಿದ್ರೆನೆ ಹತ್ತಿದ್ದಿಲ್ಲೆ. ನಿನ್ನ ಜೊತೆ ಮಲಗುವ ನಿನ್ನ ಹೆಂಡತಿಗೆ ರಾಷ್ಟ್ರಪ್ರಶಸ್ತಿ ಕೊಡ್ಸೊದೆ ಮಾರಾಯಾ” ಎಂದು ಅವರು ಲೇವಡಿಗೈಯುವಾಗ ನಾನು ಕೇವಲ ವೇದಾಂತದ ನಗೆ ನಕ್ಕು ಸುಮ್ಮನಾಗುತ್ತೇನೆ. ಯಾಕೆಂದರೆ ಎಚ್ಚರದಲ್ಲಲ್ಲವಾದರೂ ಸುಷುಪ್ತಿಯಲ್ಲಾದರೂ ನನ್ನ ಹೆಂಡತಿ ನನ್ನನ್ನು ಅನುಸರಿಸುತ್ತಿರುವದು ನನಗೆ ಆಂತರಂಗಿಕ ನೆಮ್ಮದಿ ತಂದಿದೆ.

ಗೊರಕೆಯ ವಿಷಯದಲ್ಲಿ ಇನ್ನೊಂದು ರೋಚಕ ಘಟನೆಯನ್ನು ನಿಮಗೆ ಹೇಳಲೇಬೇಕು. ನಾನೊಂದು ಬಾರಿ ನನ್ನ ಮತ್ತೊಬ್ಬ ನೆಂಟರ ಮನೆಗೆ ಯಾರದೋ ಮದುವೆಗೆಂದು ಹೋಗಿದ್ದೆ. ಅಂದು ರಾತ್ರಿ ನಮ್ಮ ನೆಂಟರು ನನಗೆ ಅವರ ಮನೆಯ ಹಾಲಿನಲ್ಲಿ ಮೆತ್ತನೆಯ ಹಾಸಿಗೆ ಹಾಸಿ ಹೊದೆಯುವದಕ್ಕೆ ಬೆಚ್ಚನೆಯ ರಗ್ಗು ನೀಡಿ ಅತ್ಯಂತ ಪ್ರೀತಿಯಿಂದ ನನಗೆ ಮಲಗುವ ವ್ಯವಸ್ಥೆ ಮಾಡಿದ್ದನ್ನು ಕಂಡಾಗ ಒಳಗೊಳಗೇ ಮುಜುಗರವೆನಿಸುತ್ತಿತ್ತು. ನನ್ನ ಹಾಸಿಗೆಯಿಂದ ಕೊಂಚ ದೂರ ಮತ್ತೊಂದು ಹಾಸಿಗೆ ಪಿಂಡಿಯನ್ನು ಇಟ್ಟು “ ಇದು ನನ್ನ ಭಾವನಿಗೆ. ಅವನು ಅಂಗಡಿಯಿಂದ ರಾತ್ರಿ ಲೇಟಾಗಿ ಬಂದು ಮಲಗುತ್ತಾನೆ. ನೀವೇನೂ ಏಳುವ ಅವಶ್ಯಕತೆ ಇಲ್ಲ. ನಾನೇ ಬಾಗಿಲು ತೆಗೆಯುತ್ತೇನೆ. ಪಾಪ ! ನಿಮಗೆ ನಿದ್ದೆ ಹಾಳಾಗುತ್ತದೆಯೇನೋ. ದಯವಿಟ್ಟು ಕ್ಷಮಿಸಿ.” ಎಂದು ಅವರು ಹೇಳಿದ್ದಕ್ಕೆ ನಾನು “ ಇಲ್ಲ ಇಲ್ಲ, ತೊಂದರೆ ಇಲ್ಲ, “ ಎಂದು ನುಡಿದು ಹಾಸಿಗೆಯ ಮೇಲೆ ಸುಸ್ತಾಗಿದ್ದ ನನ್ನ ಶರೀರವನ್ನು ಚೆಲ್ಲಿದೆ. ಚೆಲ್ಲಿದ್ದಷ್ಟೇ ಗೊತ್ತು, ಮುಂದೆಲ್ಲ ನನ್ನ ಅಳವಿಗೆ ಮೀರಿದ್ದು. ಬೆಳಿಗ್ಗೆ ಎದ್ದಾಗಲೇ ನನ್ನ ಹೆಂಡತಿ ಎಲ್ಲ ವಿಷಯವನ್ನು ಹೇಳಿ ನಕ್ಕು ನಕ್ಕು ಇಟ್ಟಳು.


ನಡೆದದ್ದು ದೊಡ್ಡ ಕತೆ. ನಾನು ಮಲಗಿದ ತಕ್ಷಣ ನನಗೆ ನಿದ್ದೆ. ತಕ್ಷಣ ಗೊರಕೆಯ ಗುಡುಗು ಪ್ರಾರಂಭವಾಯಿತಂತೆ. ಮಧ್ಯ ರಾತ್ರಿ ಹೊತ್ತಿಗೆ ನಮ್ಮ ನೆಂಟರ ಭಾವ ಬಂದವನು ನನ್ನ ನಿದ್ರೆಗೆ ತೊಂದರೆಯಾಗಬಾರದೆಂದು ಅತ್ಯಂತ ಕಾಳಜಿಯಿಂದ ಊಟ ಮಾಡಿ ಹಾಸಿಗೆ ಹಾಕಿಕೊಂಡು ಮಲಗಿದನಂತೆ. ಆ ಹೊತ್ತಿಗೆ ನನ್ನ ನಿದ್ರೆಯು ತಾರಕಕ್ಕೆ ಮುಟ್ಟಿತ್ತಂತೆ. ಪಾಪ ! ಆತ ನನ್ನ ಗೊರಕೆಯ ಘರ್ಜನೆಯ ಎದುರು ನಿರಸ್ತ್ರನಾದ ಯೋಧನಂತಾದ. ಏನು ಮಾಡುವದೆಂದು ತೋಚದೆ ಆಚೀಚೆ ಹೊರಳಾಡಿದ. ಎಷ್ಟೇ ಪ್ರಯತ್ನಿಸಿದರೂ ನಿದ್ದೆ ಮಾತ್ರ ಆತನ ಪಾಲಿಗೆ ಮರಿಚಿಕೆಯಾಯಿತು. ನನ್ನನ್ನು ಎಬ್ಬಿಸುವ ಹರಸಾಹಸ ಮಾಡಿದ. ಆಗಲೂ ವಿಫಲನಾದ ಆತ ನನ್ನ ಮೂಗಿನ ಮೇಲೆ ದಪ್ಪನೆಯ ಟವೆಲ್ ಎಸೆದ. ಏನೂ ಪ್ರಯೋಜನವಾಗಲಿಲಲ್ಲ. ನಿರಾಶನಾದ ಆತ ಏನು ಮಾಡುವದೆಂದು ತೋಚದೆ ಮನೆಯ ಬಾಗಿಲು ತೆರೆದು ಅಂಗಳಕ್ಕೆ ಬಂದ. ಅಡ್ಡಾಡಿದ. ಆ ನಿಶಬ್ದ ರಾತ್ರಿಯಲ್ಲಿ ಒಂದೆಡೆ ನನ್ನ ಗೊರಕೆಯ ತಾರಕ ಸ್ವರವಾದರೆ ಇನ್ನೊಂದೆಡೆ ಆ ಅಪರಿಚಿತ ಶಬ್ದಕ್ಕೆ ಬೆದರಿ ಸುತ್ತಮುತ್ತಲಿನ ನಾಯಿ-ಕುನ್ನಿಗಳ ಬೊಗಳುವಿಕೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಆ ಬಡಪಾಯಿಗೆಲ್ಲಿ ನಿದ್ದೆ?. ಆಗ ಆತನ ಕಣ್ಣಿಗೆ ಬಿದ್ದಿದ್ದು ತಾನು ಬೆಳಿಗ್ಗೆ ಬಕೆಟ್ಟನಲ್ಲಿ ನೆನೆಸಿಟ್ಟ ಬಟ್ಟೆಗಳು. ನಿದ್ದೆಗಾಗಿ ವ್ಯರ್ಥ ಪ್ರಯತ್ನಕ್ಕಿಂತ ಬಟ್ಟೆ ಒಗೆಯುವದೇ ಲೇಸೆಂದು ಆತನ ಮನಸ್ಸಿನಲ್ಲಿ ಹೊಳೆಯಿತು. ಆತ ಬಟ್ಟೆಯನ್ನು ಒಗೆಯುತ್ತ ಬೆಳಗು ಮಾಡಿದನಂತೆ !. ಹೇಗೂ ಮರು ದಿವಸ ಮದುವೆಗೆ ಆ ಬಟ್ಟೆಗಳು ಉಪಯೋಗವಾದವು !.


ಮತ್ತೊಂದು ಬಾರಿ ನನ್ನ ಗೊರಕೆಯ ವಿರಾಡ್ ರೂಪ ದರುಷನವಾಗಿದ್ದು ಒಂದು ಅಧಿವೇಶನದಲ್ಲಿ. ಆ ಕಾರ್ಯಕ್ರಮಕ್ಕೆ ಮಹಾರಾಷ್ಟ್ರದಿಂದ ಒಬ್ಬ ಹಿರಿಯ ಅಧಿಕಾರಿಗಳು ಬಂದಿದ್ದರು. ಆ ಆಸಾಮಿಯೋ ಮಹಾಕಾಯ. ಮಲಗಿದರೆಂದರೆ ಮುಗಿಯಿತು, ಸುತ್ತಮುತ್ತ ಒಂದು ಕಿಲೋ ಮೀಟರ ಅಂತರದಲ್ಲಿ ಯಾರೂ ಮಲಗುವ ಹಾಗೆ ಇಲ್ಲ. ಅದೇ ದಿವಸ ಬೆಂಗಳೂರಿನಿಂದ ಮತ್ತೊಬ್ಬ ಅಧಿಕಾರಿಗಳು ಬಂದಿದ್ದರು. ಇಬ್ಬರಿಗೂ ನಮ್ಮ ವ್ಯವಸ್ಥಾಪಕರು ಒಂದೇ ಕೋಣೆಯಲ್ಲಿ ಮಲಗಿಸಿ ಬಿಟ್ಟಿದ್ದರು. ಬೆಂಗಳೂರಿಂದ ಬಂದ ಅಧಿಕಾರಿಯವರಿಗೆ ಮಹಾರಾಷ್ಟ್ರದಿಂದ ಬಂದ ಅಧಿಕಾರಿಯವರ ಜೊತೆ ಮಲಗುವದು ಅಸಾಧ್ಯವೆನಿಸಿ ಹೊರಬಂದಾಗ ನಾನು ಅವರ ಕಣ್ಣಿಗೆ ಬಿದ್ದೆ. ಅವರು ತಮ್ಮ ಸಂಕಷ್ಟವನ್ನು ಹೇಳುತ್ತ ನಾನು ಮಲಗಿದಲ್ಲಿಗೆ ಬಂದು ಮಲಗುತ್ತೇನೆಂದು ಹೇಳಿದಾಗ ನನಗೆ ಏನು ಹೇಳಲಾಗಲಿಲ್ಲ. ಆದರೆ ಮರು ದಿವಸ ¨ ಬೆಳಿಗ್ಗೆ ನಾನು ಎದ್ದಾಗ ಅವರು ಬಚ್ಚಲು ಮನೆಯಿಂದ ಹೊರಬರುತ್ತಿದ್ದರು. ನಾನು ಅವರನ್ನು ಸ್ವಲ್ಪ ಅನುಮಾನದಿಂದ ಕೇಳಿದೆ, “ ನಿದ್ದೆ ಬಂತಾ ಸಾರ್ ? “ ಅದಕ್ಕೆ ಅವರು “ ಅತ್ತ ಹುಲಿ ; ಇತ್ತ ದರಿ ! “ ಎಂದು ಚುಟುಕಾಗಿ ನಕ್ಕು ನುಡಿದದ್ದು ಇನ್ನೂ ನನ್ನ ನೆನಪಿನಲ್ಲಿ ಮಾಸದೇ ಉಳಿದಿದೆ.

ಸ್ವಾಮಿ, ನನ್ನ ಗೊರಕೆಯ ಕತೆ ಹೇಳುತ್ತ ಹೋದರೆ ಅದೊಂದು ದೊಡ್ಡ ಹೊತ್ತಿಗೆಯಾದೀತು. ಆದರೆ ಸ್ಥಳದ ಅಭಾವದಿಂದ ನಾನು ಅದನ್ನು ಮೊಟಕುಗೊಳಿಸಲೇ ಬೇಕು. ನನ್ನ ಗೊರಕೆ ನನ್ನ ಜೀವನ ಸಂಗಾತಿ. ಮೊದ ಮೊದಲು ನನ್ನ ಗೊರಕೆಯನ್ನು ದ್ವೇಷಿಸುತ್ತಿದ್ದ ನನ್ನ ಮಡದಿ ಇಂದು ಅದಕ್ಕೆ ಶರಣಾಗಿದ್ದಾಳೆ. ಅಷ್ಟೇ ಏಕೆ ಅದು ಈಗೀಗ ನನ್ನ ಸಂಗಾತಿಯ ಸಂಗಾತಿಯೂ ಹೌದು. ಬಹುಷ: ಜಗತ್ತಿನಲ್ಲಿ ಗೊರಕೆಯನ್ನು ಹೊಡೆಯದವರೇ ಇಲ್ಲ. ಕೆಲವರು ಸ್ವಲ್ಪ ಸೌಮ್ಯವಾದಿಗಳಾಗಿದ್ದರೆ ಮತ್ತೆ ಕೆಲವರು ನನ್ನಂತವರು. ದೇವಾದಿ ದೇವತೆಗಳೂ ಸಹ ಆಗಾಗ ಗೊರಕೆ ಹೊಡೆಯುತ್ತಾರೆ. ಯಾಕೆಂದರೆ ಭೂಲೋಕದಲ್ಲಿ ಭಕ್ತರು ಮೊರೆ ಇಡುವಾಗ ಅದು ಅವರಿಗೆ ಕೇಳಿಸುವದೇ ಇಲ್ಲ. ಆಗ ದೇವರುಗಳ ಸೇವೆ ಮಾಡುತ್ತ ಸನಿಹ ಕುಳಿತ ಅವರ ಮಡದಿಯರು ಅವರನ್ನು ಎಬ್ಬಿಸಿ ಭಕ್ತರ ಬಗ್ಗೆ ಹೇಳಿದಾಗಲೇ ದೇವರುಗಳು ನಮಗೆ ವರವನ್ನು ಕೊಡುವದು. ಹೀಗೆ ಗೊರಕೆ ಸರ್ವವ್ಯಾಪಿ. ಶ್ರೀಮಂತರು ಬಡವರ ಕಷ್ಟಗಳ ಬಗ್ಗೆ, ಮಂತ್ರಿಗಳು ಜನಸಾಮಾನ್ಯರ ಅಹವಾಲುಗಳ ಬಗ್ಗೆ, ಗಂಡನು ಹೆಂಡತಿಯ ಕೋರಿಕೆಯ ಬಗ್ಗೆ, ಶಿಕ್ಷಕರು ತಮ್ಮ ವಿದ್ಯಾರ್ಥಿಗಳ ಹಿತದ ಬಗ್ಗೆ , ಕಂಡಕ್ಟರನು ಪ್ರಯಾಣಿಕರ ಚಿಲ್ಲರೆಯ ಬಗ್ಗೆ, ಮಾಲಿಕರು ತಮ್ಮ ಕೆಲಸಗಾರರ ಬೇಡಿಕೆಯ ಬಗ್ಗೆ .....ಹೀಗೆ ಗೊರಕೆ ಹೊಡಿಯುವರ ಪಟ್ಟಿ ಹನುಮನ ಬಾಲವಾಗುತ್ತದೆ. ಒಂದೇ ಮಾತಿನಲ್ಲಿ ಹೇಳುವದಾದರೆ “ ಗೊರಕೆಮಯಂ ಇದಂ ಸರ್ವಂ “





- ಶ್ರೀಪಾದ ಹೆಗಡೆ, ಸಾಲಕೋಡ

62 views0 comments
bottom of page