top of page

ನದಿಗಳ ಜೋಡಣೆ

ನಮ್ಮ ದೇಶದಲ್ಲಿ ಎಷ್ಟೊಂದು ನದಿಗಳು! ಹಿಮಾಲಯದಿಂದ ಹುಟ್ಟಿ ಸಮುದ್ರ ಸೇರುವ ಮಹಾ ನದಿಗಳು ಕೆಲವಾದರೆ ದೇಶದೊಳಗಿನ ಇತರ ಪರ್ವತಾಗ್ರಗಳಿಂದ ಹುಟ್ಟಿ ಮಳೆಗಾಲದಲ್ಲಿ ಮಾತ್ರ ತುಂಬಿ ಹರಿಯುತ್ತ ಬೇಸಿಗೆಯಲ್ಲಿ ಬತ್ತಿ ಹೋಗುವ ಇತರೇ ನದಿಗಳು ಹಲವು. ಒಂದೆಡೆ ಶ್ರೀಮಂತಿಕೆ; ಇನ್ನೊಂದೆಡೆ ಬಡತನ. ನಮ್ಮ ದೇಶದ ಈ ನದಿಗಳನ್ನು ಜೋಡಣೆ ಮಾಡದೆ ಬರ ಮತ್ತು ನೀರಿನ ಸಮಸ್ಯೆಗೆ ಬೇರೆ ಪರಿಹಾರ ಇರುವಂತಿಲ್ಲ. ಉತ್ತರ ಭಾರತದಲ್ಲಿ ಸದಾ ತುಂಬಿ ಹರಿಯುವ ಮಹಾ ನದಿಗಳನ್ನು ಬೇಸಿಗೆಯಲ್ಲಿ ಬತ್ತಿ ಹೋಗುವ ದೇಶದ ಇತರ ನದಿಗಳೊಂದಿಗೆ ಜೋಡಿಸಿಬಿಟ್ಟರೆ - ನೀರಿಗೆ ಸಂಬಂಧಿಸಿದಂತೆ ಭಾರತದ ದೊಡ್ಡದೊಂದು ಸಮಸ್ಯೆ ಪರಿಹಾರವಾದೀತು ಅನಿಸುತ್ತದೆ. ಹಿಮಾಲಯದಲ್ಲಿ ಹುಟ್ಟಿ ಸಮುದ್ರ ಸೇರುವ, ನಿತ್ಯನಿರಂತರ ನೀರಿನ ಹರಿವು ಇರುವ ಉತ್ತರ ಭಾರತದ ದೊಡ್ಡ ನದಿಗಳನ್ನು ಕಾಲುವೆಗಳ ಮೂಲಕ ಭಾರತದ ಇತರ ನದಿಗಳೊಂದಿಗೆ ಜೋಡಿಸುವ ಯೋಜನೆಗೆ ಬೀಜಾಂಕುರವಾಗಿ ಇಪ್ಪತ್ತೈದು ವರ್ಷಗಳೇ ಸಂದವು. ಅಟಲ್ ಬಿಹಾರಿ ವಾಜಪೇಯಿಯವರು ಪ್ರಧಾನಿಯಾಗಿದ್ದ ಕಾಲದಲ್ಲಿ ಈ ಯೋಜನೆ ರೂಪುಗೊಂಡಿತು. ದುರ್ದೈವದಿಂದ ಅವರು ಪ್ರಧಾನಿಯಾಗಿ ಅವಧಿ ಪೂರ್ಣಗೊಳಿಸಲಾಗಲಿಲ್ಲ. ಅನಂತರ ಬಂದ ಸರಕಾರಗಳ ’ರಾಷ್ಟ್ರೀಯ ಪರಿಕಲ್ಪನೆ’ ಬೇರೆಯದೇ ಆಗಿದ್ದುದರಿಂದ ಆ ಯೋಜನೆ ಒಂದಿನಿತೂ ಅಲ್ಲಾಡಲಿಲ್ಲ. ಕಳೆದ ಇಪ್ಪತ್ತೈದು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಯೋಜನೆಗೆ ಮೋದಿಯವರು ಪ್ರಧಾನಿಯಾದ ಕೂಡಲೆ ಮತ್ತೆ ಚಾಲನೆ ಸಿಕ್ಕಿದೆ. ಇದೊಂದು ಅಭೂತಪೂರ್ವವಾದ ರಾಷ್ಟ್ರೀಯ ಪರಿಕಲ್ಪನೆಯ ಮಹಾ ಯೋಜನೆಯಾಗಿದ್ದು, ಇದು ಯಶಸ್ವಿಯಾಗಿ ಕಾರ್ಯಗತವಾಗಿಬಿಟ್ಟರೆ ಭಾರತದ ಅಭಿವೃದ್ಧಿಯ ಮಹಾಶಕೆಯೊಂದಕ್ಕೆ ಮುಹೂರ್ತ ನಿಗದಿಯಾದಂತೆಯೇ ಸರಿ. ಆದರೆ ಕೇಂದ್ರದಲ್ಲಿ ದೇಶೀಯ ಚಿಂತನೆಯುಳ್ಳ ಸುಭದ್ರ ಸರಕಾರ ಸದಾ ಇರುವಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮ ಪ್ರಜೆಗಳ ಮೇಲಿದೆ. ಕೇಂದ್ರ ದುರ್ಬಲವಾಗಿ ಪ್ರಾದೇಶಿಕ ಪಕ್ಷಗಳು ಪ್ರಬಲಗೊಂಡರೆ ನದಿ ನೀರಿನ ವಿಚಾರ ನಾನಾ ರೀತಿಯ ಜಗಳಗಳಿಗೂ ಕಾರಣವಾಗಬಲ್ಲದು. ಪ್ರಾದೇಶಿಕ ಪಕ್ಷಗಳು ಕೇಂದ್ರವನ್ನು ಕುಣಿಸತೊಡಗಿದರೆ ’ಸಿಕ್ಕವನಿಗೆ ಸೀರುಂಡೆ’ ಎಂಬಂತಾಗುವುದು. ಇದನ್ನು ನಿವಾರಿಸಲು ನದಿ ಜೋಡಣೆಯೊಂದಿಗೆ ಪ್ರಬಲ ನಿಯಮಾವಳಿಗಳನ್ನು ರೂಪಿಸುವ ಅಗತ್ಯವೂ ಇದೆ. ಭಾರತದ ಅರ್ಧಕ್ಕಿಂತ ಹೆಚ್ಚು ಭೂಪ್ರದೇಶ ನೀರಿನ ಸಮಸ್ಯೆಯಿಂದ ಬಳಲುತ್ತಿದೆ. ಅಂತಹ ಪ್ರದೇಶಗಳಲ್ಲಿ ಮಳೆ ಆಶ್ರಯಿಸಿ ಸ್ವಲ್ಪಮಟ್ಟಿಗೆ ಕೃಷಿ ಕಾರ್ಯಗಳು ನಡೆಯುತ್ತಿವೆ. ಮಳೆ ಕೈಕೊಟ್ಟರೆ ಅದೂ ಇಲ್ಲ. ಬರ ಪರಿಸ್ಥಿತಿಯಿಂದಾಗಿ ಒಂದೆಡೆ ದುಡಿಯುವ ಕೈಗಳಿಗೆ ಕೆಲಸವಿಲ್ಲ; ಇನ್ನೊಂದೆಡೆ ಉಣ್ಣಲು ಆಹಾರವಿಲ್ಲ. ಹೀಗಾದರೆ ಬಡತನ ನಿವಾರಣೆ ಆಗುವುದು ಹೇಗೆ? ಕುಳಿತಲ್ಲಿಗೆ ಆಹಾರ ಕೊಟ್ಟು ಜನರನ್ನು ಮತ್ತಷ್ಟು ಸೋಮಾರಿಗಳನ್ನಾಗಿ ಮತ್ತು ದೈನೇಸಿಗಳನ್ನಾಗಿ ಮಾಡುವುದು ಒಳ್ಳೆಯ ವ್ಯವಸ್ಥೆಯಲ್ಲ. ಬದಲಾಗಿ ದುಡಿಯಲು ಬೇಕಾದ ಅವಕಾಶ ಕಲ್ಪಿಸಿ ಕೊಡುವುದು ಆದ್ಯತೆಯ ಮೇರೆಗೆ ಆಗಬೇಕಾಗಿರುವ ಕೆಲಸ. ಇದರಿಂದ ಜನರೂ ಉದ್ಧಾರವಾಗುತ್ತಾರೆ; ರಾಷ್ಟ್ರವೂ ಉದ್ಧಾರವಾಗುತ್ತದೆ. ಅದ್ಭುತವಾದ ಪ್ರಾಕೃತಿಕ ಸಂಪತ್ತು ಮತ್ತು ಮಾನವ ಸಂಪತ್ತುಳ್ಳ ಭಾರತವನ್ನು ದೇಶೀಯ ನೆಲೆಗಟ್ಟಿನಲ್ಲಿ ಅಭಿವೃದ್ಧಿಗೊಳಿಸುವ ಕೆಲಸ ತ್ವರಿತವಾಗಿ ಆಗಬೇಕು. ಉಳಿದ ಅಭಿವೃದ್ಧಿಗಳು ಇವನ್ನು ಅನುಸರಿಸಿ/ಆಶ್ರಯಿಸಿ ಆಗಬೇಕೇ ಹೊರತು ನಮ್ಮ ಸಂಪನ್ಮೂಲಗಳನ್ನು ಮೂಲೆಗೆ ಸರಿಸಿ, ಪರಾವಲಂಬಿಯಾಗಿ ಬಾಳುವ ಯೋಜನೆಗಳನ್ನು ರೂಪಿಸಿದರೆ ಅನುಗಾಲವೂ ಇತರರ ನೆರಳಿನಲ್ಲಿ ಬಾಳುವ ಪರಿಸ್ಥಿತಿ ಬರುತ್ತದೆ. ಭಾರತಕ್ಕೆ ಸ್ವಾತಂತ್ರ್ಯ ಬಂದ ಹೊಸದರಲ್ಲಿ ಎರಡು ಪಂಚವಾರ್ಷಿಕ ಯೋಜನೆಗಳಲ್ಲಿಯೂ ಕೃಷಿಗೆ ಮತ್ತು ಆ ಮೂಲಕ ಸ್ವಾವಲಂಬನೆಗೆ ಒತ್ತು ಕೊಡಲಾಗಿತ್ತು. ಆ ಕಾರಣವೇ ಆ ಕಾಲದಲ್ಲಿ ದೊಡ್ಡ ದೊಡ್ಡ ಅಣೆಕಟ್ಟುಗಳಾದ ಭಾಕ್ರಾ ನಂಗಲ್, ಹಿರಾಕುಡ್ ಮೊದಲಾದವು ನಿರ್ಮಾಣಗೊಂಡವು. ಅನಂತರದ ಯೋಜನೆಗಳೆಲ್ಲ ಕೈಗಾರಿಕೆಗಳ ಕಡೆಗೆ ಮುಖ ಮಾಡಿ ಪರಾವಲಂಬಿ ಬದುಕನ್ನು ಎತ್ತಿ ಹಿಡಿದವು. ನಾವು ಅಧಿಕಾಧಿಕ ಪರಾವಲಂಬನೆಯನ್ನು ಕೈಬಿಡಲೇಬೇಕಾಗಿದೆ. ಕೃಷಿ – ಕೈಗಾರಿಕೆ ಎರಡನ್ನೂ ದೇಶೀಯವಾಗಿ ಬೆಳೆಸುವ, ಅಭಿವೃದ್ಧಿಪಡಿಸುವ ಕೆಲಸಕ್ಕೆ ಕೈಹಾಕಬೇಕು ಮತ್ತು ಇತರ ರಾಷ್ಟ್ರಗಳು ಆಶ್ರಯಕ್ಕಾಗಿ ನಮ್ಮ ಕಾಲಬುಡಕ್ಕೆ ಬರುವಂತಾಗಬೇಕು. ’ವಿದೇಶೀ ಉತ್ಪನ್ನಗಳನ್ನು ಕೊಳ್ಳುವುದಿಲ್ಲ; ನಮ್ಮ ಸಂಪನ್ಮೂಲಗಳು ವಿದೇಶಗಳಿಗೆ ಹರಿದು ಹೋಗಲು ಬಿಡುವುದಿಲ್ಲ’ ಎಂಬ ತತ್ತ್ವವನ್ನು ಭಾರತೀಯರು ಅನುಸರಿಸಿದರೆ ನಮ್ಮ ದೇಶದ ಅಭಿವೃದ್ಧಿಯಲ್ಲಿ ದೊಡ್ಡದೊಂದು ಕೊಡುಗೆ ಕೊಟ್ಟಂತೆಯೇ ಸರಿ. ನದಿ ಜೋಡಣೆಯ ಸಲುವಾಗಿ ಕಾಲುವೆಗಳು ಹಾದು ಹೋಗುವ ಆಯಾ ಸ್ಥಳಗಳ ಜನರಿಗೆ ವಿತರಿಸಬೇಕಾಗಿರುವ ಪರಿಹಾರಧನವೂ ಸೇರಿದಂತೆ ಈ ಯೋಜನೆಗೆ ಸುಮಾರು ಹನ್ನೊಂದು ಲಕ್ಷ ಕೋಟಿ ರೂಪಾಯಿ ಖರ್ಚಾಗುತ್ತದೆಂದು ಅಂದಾಜಿಸಲಾಗಿದ್ದು, ಮುಂದಿನ ಐದು ವರ್ಷಗಳಲ್ಲಿ ವ್ಯವಸ್ಥಿತವಾಗಿ ಕೆಲಸವನ್ನು ಮುಗಿಸಲು ಯೋಜನೆ ರೂಪಿಸಲಾಗಿದೆ. ವರ್ಷಂಪ್ರತಿ ರಾಷ್ಟ್ರದಾದ್ಯಂತ ವಿತರಿಸಲಾಗುವ ಬೆಳೆನಷ್ಟ ಪರಿಹಾರ ಮತ್ತು ಬರ ಪರಿಹಾರ ಧನವನ್ನು ಲೆಕ್ಕ ಹಾಕಿದರೆ ಸುಮಾರು ಹತ್ತು ವರ್ಷಗಳಲ್ಲಿ ವಿತರಿಸಲಾಗುವ ಮೊತ್ತ ಈ ಯೋಜನೆಯನ್ನು ಪೂರ್ಣಗೊಳಿಸಲು ಸಾಕು. ಯೋಜನೆ ಕಾರ್ಯಗತವಾದರೆ ಕೃಷಿಗೆ ಮತ್ತು ಕೈಗಾರಿಕೆಗಳಿಗೆ ತುಂಬ ಅನುಕೂಲವಾಗಲಿದೆ. ಹೈನುಗಾರಿಕೆ ಅಭಿವೃದ್ಧಿಗೊಳ್ಳಲಿದೆ. ಅರಣ್ಯ ಸಂಪತ್ತು ಹೆಚ್ಚಾಗಲಿದೆ. ಅಂತರ್ಜಲ ಮಟ್ಟ ಏರಲಿದೆ. ನಾಗರಿಕತೆ ಶೀಘ್ರಗತಿಯಲ್ಲಿ ವಿಕಾಸವಾಗಲಿದೆ. ಎಲ್ಲದಕ್ಕಿಂತ ಮುಖ್ಯವಾಗಿ ನಮ್ಮ ದೇಶದ ಬರ ಪರಿಸ್ಥಿತಿ ಕಣ್ಮರೆಯಾಗಿ, ಹಪಾಪಿ ರೈತವರ್ಗದವರ ಮುಖಗಳಲ್ಲಿ ಹರ್ಷದ ಹೊನಲು ಉಕ್ಕಲಿದೆ. ಮುಖ್ಯವಾಗಿ ದೇಶ ಎದುರಿಸುತ್ತಿರುವ ಬರ ಪರಿಸ್ಥಿತಿ ಕಡಿಮೆಯಾಗಲಿದೆ ಮತ್ತು ಬೇಸಿಗೆಯಲ್ಲಿ ನೀರಿಗೆ ಪಡುತ್ತಿರುವ ಪಡಿಪಾಟಲು ಕೊನೆಯಾಗಲಿದೆ. ಹಿಮಾಲಯದಿಂದ ಹುಟ್ಟುವ ಉತ್ತರ ಭಾರತದ ಮಹಾ ನದಿಗಳ ಹರಿವು ಇಡೀ ಭಾರತಕ್ಕೆ ಸಿಗುವಂತಾದರೆ ’ಅತ್ಯುತ್ತರಾಮ್ ದಿಶಿ ದೇವತಾತ್ಮಾ..’ ಎಂಬ ರಾಷ್ಟ್ರೀಯ ಪರಿಕಲ್ಪನೆಯ ಶ್ಲೋಕ ಸಾರ್ಥಕ್ಯ ಕಾಣಲಿದೆ. -ಡಾ. ವಸಂತಕುಮಾರ ಪೆರ್ಲ.





18 views0 comments
bottom of page