top of page

ನೀಡುವವನನ್ನೇ ಬೇಡಿಸಿಕೊಂಡವನು



ಬಂಧು ಮಿತ್ರ ಸ್ವಜನ ಪರಿವಾರವೆಲ್ಲಾ "ಕೃಷ್ಣಾ !! ನೀನೀಗ ಮಹಾರಾಜ ಮಹಾ ಶಕ್ತಿಯುಳ್ಳವನು ನಮಗೆ ಅದನ್ನು ಕೊಡಿಸಲಾರೆಯಾ ನಮಗೆ ಇದನ್ನು ಅನುಗ್ರಹಿಸಲಾರೆಯಾ ?? " ಎಂದು ಕೃಷ್ಣನಲ್ಲಿ ತಮ್ಮ ತಮ್ಮ ಬೇಡಿಕೆಗಳ ಪಟ್ಟಿಯನ್ನು ಇಟ್ಟರೆ, ಮನೆಯಲ್ಲಿ ಪ್ರಿಯ ಮಹಿಷಿಯರು ಕೇಳಿಕೊಳ್ಳುತ್ತಿದ್ದುದು "ನಾಥಾ !! ನಮಗೆ ಬೇರೇನೂ ಬೇಡ, ನೀನೊಬ್ಬ ನಮ್ಮೊಡನಿದ್ದರೆ ಅದೇ ಸಾಕು ನೋಡಾ !! " ಎಂದು.

ಮುರಾರಿ ಎಲ್ಲಿ ಹೋದರಲ್ಲಿ ಜನ ಮುತ್ತುತ್ತಿದ್ದರು. ಅವನನ್ನು ನೋಡಬೇಕು ಎನ್ನುವವರು, ನೋಡಿ ಕಾಡುವ ಕಷ್ಟಗಳಿಗೆ ಪರಿಹಾರ ಕೇಳಿಕೊಳ್ಳ ಬಯಸುವವರು, ಅಧಿಕಾರವನ್ನು ಬಯಸಿ ಬರುವವರು,ವಿದ್ಯೆ ಹೇಳಿ ಕೊಡುವೆಯಾ ಎಂದು ಕೇಳುವವರು, ಅದೇನೋ ನಿನಗೆ ಮೂಕಪ್ರಾಣಿಗಳ ಜೊತೆ ಮಾತನಾಡುವ ರಹಸ್ಯವಿದ್ಯೆ ಗೊತ್ತಾಂತಲ್ಲಾ ಅದನ್ನು ನಮಗೂ ಕಲಿಸೋ ಅಪ್ಪಾ ಎಂದು ಕಾಡುವ ಸ್ವಂತ ಮಕ್ಕಳು...ಒಬ್ಬರೇ ಇಬ್ಬರೇ ಎಲ್ಲರೂ ಬೇಕು ಬೇಕು ಎನ್ನುವವರೇ ಮುರಾರಿಯ ಮುಂದೆ...


ಅವನೊಬ್ಬ ಮಾತ್ರ ಇದಕ್ಕೆ ಹೊರತಾಗಿ ಇದ್ದ!! 

ಬಾಲ್ಯದಲ್ಲೂ ಅಷ್ಟೇ, ಗೃಹಸ್ಥಾಶ್ರಮವನ್ನು ಸ್ವೀಕರಿಸಿದಾಗಲೂ ಅಷ್ಟೇ. ಕಿತ್ತು ತಿನ್ನುವ  ಭೀಕರ  ಬಡತನದಲ್ಲಿ ಬೇಯುತ್ತಿದ್ದರೂ ತಾನೆಂದೂ ತನ್ನ ಪ್ರಾಣ ಮಿತ್ರನಲ್ಲಿ ಏನನ್ನೂ ಕೇಳಿದವನಲ್ಲ. ವಿದ್ಯಾಭ್ಯಾಸವನ್ನು ಮಾಡುತ್ತಿದ್ದಾಗಲೂ ಬಲಭದ್ರ ಕೃಷ್ಣರು ತರುತ್ತಿದ್ದ ಭಕ್ಷ್ಯಗಳಿಗೆ ಆಸೆಪಡದೇ ಅವರಿಬ್ಬರೂ ತನ್ನ ಬಡಬುತ್ತಿಗೆ ಆಸೆ ಪಡುವಂತೆ ಮಾಡಿಬಿಟ್ಟವನು ಅವನು. ಕೃಷ್ಣ ಬಿಸಿಲ ಬೇಗೆಯನು ತಡೆಯಲು ತಡವರಿಸಿ ತಡಕುತ್ತಿದ್ದುದು ಅವನ ಆ ಸೆಣಬಿನ ಪೀತವನ್ನೇ ಅಂತೆ !!

ಎಂಜಲಾಗಿದೆ ಕಣೋ ಬೇಡ ಕಣೋ ಎಂದು ಗೋಗರೆದರೂ ಗಿರಿಧರ ತಾನು ಧಾವಿಸಿ ಬಂದು ಅವನ ಕೈಯಿಂದ ಅದೇನೇ ಇದ್ದರೂ ಬಿಡದೇ ಕಿತ್ತು ತಿನ್ನುತ್ತಿದ್ದನಂತೆ!! ಒಂದು ವೇಳೆ ಬರೋದು ತಡವಾಗಿ ಕೊನೆಯ ತುತ್ತೇನಾದರೂ ಅವನ ಬಾಯೊಳಿದ್ದರೆ ಕವಟೆಯನು ಅಗಲಿಸಿ ಬೆರಳು ತೂರಿಸಿ ತೆಗೆದು ತನ್ನ ಬಾಯೊಳಗಿರಿಸಿ ಆಹಾ ಓಹೋ ಎಂದು ಉದ್ಘಾರ ಮಾಡುತ್ತಾ ಮೆಲ್ಲುತ್ತಿದ್ದನಂತೆ ಗೆಳೆಯರೇ !!


ನಿಜ !! ನಿಮ್ಮ ಊಹೆ ನಿಜ !! ಭಗವಂತನ ಸ್ನೇಹವನ್ನು ಈ ಮಟ್ಟಕ್ಕೆ ಸಂಪಾದಿಸಿದ ಏಕೈಕ  ಪುರುಷ ಅವನು !! ಹೌದು... ಅವನೇ ಅವನೇ ಆ ಸುಧಾಮನ ಬಗ್ಗೆಯೇ ನಾನೀಗ ಹೇಳ ಹೊರಟಿರುವುದು !!


ಬಾಲ್ಯ ಕಳೆದಿತ್ತು... ಮದುವೆ ಆಗಿತ್ತು... ಮಕ್ಕಳು ಮನೆ ತುಂಬಾ !! ಜೊತೆಗೆ ದರಿದ್ರವೂ ಬಾಳ ತುಂಬಾ !! ಅದೆಷ್ಟೇ ಕಷ್ಟವಿದ್ದರೂ ಯಾರ ಮುಂದೆಯೂ ಕೈಚಾಚುವವನಲ್ಲ ಈ ಸುಧಾಮ.ಹಗಲಿರುಳು ದುಡಿದು ತಂದದ್ದು ಹೊತ್ತಿನ ತುತ್ತಿಗೆ ಎಟುಕದಾಗಿತ್ತು.


ಹೀಗಿರಲೊಂದು ದಿನ ಬಡತನದ ಪ್ರಹಾರಕ್ಕಿಂತ ಹೆಂಡತಿ ಮಕ್ಕಳ ಒತ್ತಡವೇ ಅತಿಯಾದಾಗ.. ಒಲ್ಲದ ಮನಸ್ಸಿನಲ್ಲೇ ಮಿತ್ರನನ್ನು ಕಾಣಲು ಹೆಂಡತಿ ಹುಡುಕಿ ಬಳಿದು ಕಟ್ಟಿಕೊಟ್ಟ ಆ ಮುಗ್ಗಲು ಬಂದಿದ್ದ ಅವಲಕ್ಕಿಯನ್ನು ಹೆಗಲಿಗೇರಿಸಿಕೊಂಡು ದ್ವಾರಕೆಯ ಕಡೆಗೆ ಪ್ರಯಾಣ ಬೆಳೆಸುತ್ತಾನೆ....

ಬಿರುಬಿಸಿಲಲ್ಲಿ ನಡೆದು ಬಂದವನನ್ನು ಪುರದ ಬಾಗಿಲ ಬಳಿಯಲ್ಲೇ ನಿಲ್ಲಿಸಿದ್ದಾರೆ ಬಾಗಿಲ ಕಾಯುವವರು ಎಂದು ಗೊತ್ತಾದಾಗ ಆ ಪುರದ ಭಾಗ್ಯವೇ ಓಡೋಡಿ ಬರುತ್ತದೆ ತನ್ನ ಪ್ರಾಣಮಿತ್ರನನ್ನು ನೋಡಿ ಅಪ್ಪಿಕೊಳ್ಳಲು ... ಓಡೋಡಿ ಬರುವಾಗ ಹೆಗಲ ಮೇಲಿದ್ದ ಪೀತ ಅದೆಲ್ಲಿ ಬಿದ್ದು ಹೋಯಿತೋ !! ಉಕ್ಕಿದ ಆನಂದದ ಸಾಗರದಿಂದ ಎದ್ದ ಅಲೆಗೆ ಎದುರು ಬಂದವರಾರೂ ಕೊಚ್ಚಿ ಹೋಗದೇ ಇರಲಿಲ್ಲ... ಜಗದೊಡೆಯ ದಡಬಡನೆ ಹೋಗುತ್ತಿದ್ದುದ ಕಂಡ ಅವನ ಪತ್ನಿಯರೂ ಅಪರಿಮಿತ ಪರಮಾಶ್ಚರ್ಯದಿಂದ ಅವನನ್ನು ಹಿಂಬಾಲಿಸುತ್ತಾರೆ....

ಬಾಗಿಲ ಬಳಿ ಹೋದವನೇ ಹರಿದಿದ್ದ ಬೆವರಿನಿಂದ ಕಟು ವಾಸನೆ ಬರುತ್ತಿದ್ದ ಆ ಬಡವನನ್ನು ತಬ್ಬಿ ಮುದ್ದಾಡಿ ಆನಂದದ ಕಂಬನಿಯನ್ನು ಸುರಿಸುತ್ತಾನೆ ಆ ಮುಕುಂದ !!ಇದೇನೂ ಅರಿಯದೇ ಮೂಕರಾಗಿ ನಿಂತಿದ್ದ ಪತ್ನಿಯರ ಕಣ್ಣಲ್ಲೂ ನೀರು ನೀರೇ !!!! ಮಿತ್ರನ ಎರಡೂ ಕೈ ಹಿಡಿದು ಅವನ ಮುಖಕ್ಕೆ ಎದುರಾಗಿ ತಾನು ಹಿಮ್ಮುಖವಾಗಿ ನಡೆಯುತ್ತಾ ತನ್ನ ಮನೆಯೊಳಕ್ಕೆ ಕರೆದೊಯ್ಯುವ ಆ ದೃಶ್ಯವನ್ನು ವರ್ಣಿಸಲು ಯಾರಿಗಾದರೂ ಮತ್ತೊಂದು ಜನ್ಮ ಬೇಕೇನೋ !!!


ಮಿತ್ರನನ್ನು ಕುಳ್ಳಿರಿಸಿ ತಾನು ಮಾತ್ರ ಅವ ಬೇಡಿಕೊಂಡರೂ ಬಿಡದೆ ಕಾಲಬುಡದಲ್ಲಿ ಕುಳಿತು ಅವನ ತೊಡೆಯ ಮೇಲೆ ಕೈಯಿರಿಸಿ ಕುಳಿಯುಕೊಳ್ಳುತ್ತಾನೆ ಗಿರಿಧರ !!! ಪೂರ್ಣ ಕುಂಭಗಳೊಡನೆ ಪರಿಮಳ ಪುಷ್ಪಗಳಿಂದ ನೆನೆದ ಪನ್ನೀರಿನಿಂದ  ಸಪತ್ನೀ ಸಮೇತನಾಗಿ ಪ್ರಾಣಮಿತ್ರನ ಬಿರುಕು ಬಿಟ್ಟ ಪಾದಗಳನ್ನು ತೊಳೆದು ತನ್ನ ಪೀತದಿಂದಲೇ ಒರೆಸುತ್ತಾನೆ...


ಹೀಗೇ ಹೊತ್ತಿನ ಮಿತಿಯಿರದೇ ಮಿತ್ರನೊಡನೆ ಮಾತನಾಡುವಾಗ ಕೃಷ್ಣನ ಕಣ್ಣುಗಳು ಅದೇನನ್ನೋ ಹುಡುಕುತ್ತಲೇ ಇರುತ್ತವೆ ಸುಧಾಮನಲ್ಲಿ !! 

ಕೊನೆಗೆ ಬಾಯಿಬಿಟ್ಟೇ " ಲೋ !! ನನಗೇನು ಕೊಡಲು ತಂದಿದ್ದೀಯೋ !! ಏನೋ ತಂದಿದ್ದೀಯಾ ಕೊಡೋ ಬೇಗಾ... ನನಗೆ ಗೊತ್ತು ನೀನೇನೋ ತಂದು ಮುಚ್ಚಿಟ್ಟಿದ್ದಿಯಾ !! ಕೊಡೋ ಅದೇನು ತಂದಿದ್ದೀಯಾ ಕೊಡೋ ಮಿತ್ರಾ !!! " ಎಂದು ಅಂಗಲಾಚಿ ಅವನ ತೊಡೆಯನ್ನು ಅಲುಗಾಡಿಸುತ್ತಾ ಚಿಕ್ಕ ಮಕ್ಕಳು ತನ್ನ ಅಮ್ಮನನ್ನು ಗೋಗರೆದು ಕೇಳುವ ಹಾಗೆ ಕೇಳುತ್ತಾನೆ ಮುಕುಂದ !!!


ಸುಡುವ ಬಿಸಿಲಿಗೆ  ಇಳಿದ ಬೆವರ ಹನಿಗಳಿಂದ ಬೆನ್ನಿನ ಹಿಂದೆ ಕಟ್ಟಿಕೊಂಡಿದ್ದ ಆ ಮುಗ್ಗಲು ಅವಲಕ್ಕಿಯ ಗಂಟು ನೆನೆದು ಹಸಿಯಾಗಿರುವುದನ್ನು ಕಂಡೂ ಮಾಧವ ಕಣ್ಣಿಗೊತ್ತಿಕೊಂಡು ತಾನೂ ತಿಂದು ತನ್ನ ಮಡದಿಯರಿಗೂ ಪ್ರಸಾದವೆಂಬಂತೆ ಹಂಚುತ್ತಾನೆ ಗೆಳೆಯರೇ ....


ನೋಡಿ !!! ಎಲ್ಲರ ಬೇಕುಗಳನ್ನು ಪೂರೈಸುವವನನ್ನೇ ಬೇಕು ಎಂದು ಪೀಡಿಸಿಕೊಂಡ ಏಕೈಕ ವ್ಯಕ್ತಿಯೆಂದರೆ ಅದು ಸುಧಾಮ ಮಾತ್ರ !!!! 


ಮಿತ್ರನ ದೈವೀ ಸತ್ಕಾರಕ್ಕೆ ಮೂಕನಾದ ಸುಧಾಮ ತಾನು ನೆರವನ್ನು ಕೇಳಿಕೊಳ್ಳಲು ಬಂದವ ಎಂಬುದನ್ನು ಅವನ ಮುಂದೆ ಹೇಳಲಾಗದೆ ಮುರಾರಿಯ ಆತಿಥ್ಯವನ್ನು ಸ್ವೀಕರಿಸಿ ಹಿಂದಿರುಗಿ ಬಿಡುತ್ತಾನೆ.


ಮುಂದಿನದ್ದೆಲ್ಲಾ ಪವಾಡವೇ !!!


ಏನನ್ನೂ ಬೇಡದೆ ಎಲ್ಲವನ್ನೂ ಪಡೆದುಬಿಟ್ಟಿದ್ದ ಈ ಬಡ ಸುಧಾಮ !!

ಸ್ನೇಹದ ಸಲುಗೆಯನ್ನು ನೆರವನ್ನು ಕೇಳಲು ಬಳಸಬಾರದೆಂಬ ಸುಧಾಮನ ಆ ಒಂದೇ ಒಂದು ನೀತಿಯು ಮುಕುಂದನನ್ನು ಕರಗಿಸಿ ಬಿಟ್ಟಿತ್ತು  !! ಮೊದಲೇ ಬೆಣ್ಣೆ ಮನದವ.. ಇನ್ನು ಮನಸ್ಸನ್ನು ಬೆಚ್ಚಗೆ ಮಾಡಿಟ್ಟಿದ್ದವನನ್ನು ಕಾಪಾಡದೇ ಇರುವನೇ !!! ಏನೂ ಕೇಳದೆ ಹೊರಟ ಪ್ರಾಣ ಮಿತ್ರನಿಗೆ ಎಂದೂ ಕೇಳದ ಹಾಗೆ ಭಾಗ್ಯವನ್ನು ಕೊಟ್ಟಿದ್ದ ಪರಮಾತ್ಮ !!


ಬೇಕು ಎನುವವರನು ಕಾಯಿಸುವ 

ಬೇಡ ಎನುವವರನು ಪರೀಕ್ಷಿಸುವ

ಬೇಕು ಬೇಡ ಎರಡನೂ ತೊರೆದವರನು 

ಬಿಡದೆ ರಕ್ಷಿಸುವ ಈ ಪರೀಕ್ಷಿತನ ಉಳಿಸಿದವ !!

ಪುಟ್ಟಮಾರಶೆಟ್ಟಿ - ಅಕ್ಷಯಸಮಯ



ಹೆತ್ತವರು ಇಟ್ಟ ಹೆಸರು ಪುಟ್ಟಮಾರಶೆಟ್ಟಿ !!

ಓದುಗನಾಗಿದ್ದ ನನಗೆ " ಲೋ ನೀನೂ ಬರೆಯಬಲ್ಲೆ ಕಣೋ " ಎಂದು ಅರುಹಿ ಹರಸಿದವರು ಕರೆದದ್ದು " ಅಕ್ಷಯಸಮಯ"  ಎಂದು.

ಓದು ಓದು ಓದು !!

ಈ ಬೀಜಾಕ್ಷರಗಳನ್ನು ನನ್ನ ಮಸ್ತಕದಲ್ಲಿ ತುಂಬಿದ್ದು ಶಾಲೆಗೆ ಹೋಗಿ ಕಲಿಯದೇ ಇದ್ದರೂ ರಾಮಾಯಣ ಮಹಾಭಾರತ ಭಾಗವತ ಪುರಾಣಗಳ ಶ್ಲೋಕಗಳನ್ನು ಅತ್ಯಂತ ರಾಗವಾಗಿ ಹಾಡಿ ಹಾಡಿ ತನ್ನೆಲ್ಲಾ ಮೊಮ್ಮೊಕ್ಕಳ ಎದೆಯಲ್ಲಿ ಭಕ್ತಿಯ ಬೀಜವನ್ನು ನೆಟ್ಟ ನನ್ನ ಅಜ್ಜಿ ಲಕ್ಷ್ಮಮ್ಮನವರು.

ಮೂರನೇ ತರಗತಿಯಲ್ಲಿದ್ದಾಗಲೇ ಕಾದಂಬರಿಗಳ ಮೇಲೆ ಕಣ್ಣು ಹಾಯಿಸುತ್ತಿದ್ದ ನನಗೆ,ಪುರಾಣಗಳ ಮೇಲೆ ಆಸಕ್ತಿಯನ್ನು ಮೂಡಿಸಿ ಅವುಗಳ ಹಿರಿಮೆಯ ಕೊಡೆಯ ನೆರಳಲ್ಲಿ ಕೂರಿಸಿದವರೂ ಸಹ ಇದೇ ನನ್ನಜ್ಜಿ !!

ಇತಿಹಾಸವೆಂದರೆ ತುಸು ಹೆಚ್ಚು ಆಸಕ್ತಿ... ಅದೆಷ್ಟೋ ಮರೆ ಮಾಚಲ್ಪಟ್ಟ ವಿಷಯಗಳ ಸುಳಿವನ್ನು ಅರಸುತ್ತಾ ಅಲೆಮಾರಿಯಂತೆ ಅಲೆಯುವುದೆಂದರೆ ನನಗೆ ಬಲು ಇಷ್ಟ.

ಇರುವುದು ಮೈಸೂರಿನಲ್ಲಿ... ತಾಯಿ ಚಾಮುಂಡಾಂಬೆಯ ನೆಲದಲ್ಲಿ !!

36 views0 comments
bottom of page