top of page

ನೊಗ ಹೊತ್ತ ನಿಜ ದೈವ



ಸಂಸಾರದ ನೊಗವ ಹೊತ್ತು

ಬೇಸಾಯ ನಂಬಿ ನಡೆದು

ಹಸಿವ ಹಿಂಗಿ ಅಪ್ಪ ಬದುಕ ಕಟ್ಟಿಕೊಡುವನು.

ಸೌದೆ ಒಲೆಯ ಹೊಗೆಯ ನುಂಗಿ

ಸುಧೆಯ ಸಾರ ಸುರಿದು ಸಲುಹಿ

ಮಧುರ ಮಮತೆ ನೀಡಿ ಅಮ್ಮ ನೋವ ಮರೆವಳು.

ಕರೆದರೆಂದು ಬಳಿಗೆ ಬಂದು

ಪೊರೆವುದೇನು ಸುರರ ದುಂಡು?

ಮರೆಯದಲೆ ಸಲಹುತಿಹರೀ ನಿತ್ಯ ದೈವರು.

ಸತ್ಯ ನಿಷ್ಠೆ ಧರ್ಮಗಳಲಿ

ನಿತ್ಯ ಕರ್ಮಗಳಲಿ ತೊಡಗೆ

ಮಿಥ್ಯ ಭಾವ ನಾಶಪಡಿಪ ಧ್ಯೇಯ ಇವರದು.

ಬೆಟ್ಟದಂಥ ಕಷ್ಟವಿರಲು

ರಟ್ಟೆ ಬಲವ ನಂಬಿ ನಡೆದು

ಬಿಟ್ಟುಬಿಡದೆ ದುಡಿವರಿವರು ಸುತರಿಗೋಸುಗ.

ತಿದ್ದಿ ತೀಡಿ ಮಕ್ಕಳನ್ನು

ಬುದ್ಧಿಯನ್ನು ನೀಡಿದವರು

ಬದ್ಧರೆಲ್ಲವಕ್ಕೂ ತಮ್ಮಸುಖವ ಮರೆವರು.

ತಂದ ಪುಣ್ಯ ನಿಮ್ಮದಾಗಿ

ಬಂದಿರಿಂದು ಮನುಜರಾಗಿ

ತಂದೆ ತಾಯಿ ನಿಜ ದೈವ ಮರೆಯಬೇಡಿರೋ.

ಸಾವಿತ್ರಿ ಮಾಸ್ಕೇರಿ


ಕವಯತ್ರಿ ಸಾವಿತ್ರಿ ಮಾಸ್ಕೇರಿ ಅವರು ವೃತ್ತಿಯಲ್ಲಿ ಶಿಕ್ಷಕಿ. ಪ್ರವೃತ್ತಿಯಲ್ಲಿ‌ ಕವಯತ್ರಿ. ಅವರು ಸಂಸ್ಕೃತಿ ಸಂಪನ್ನರು ಹಿರಿಯರು‌ ಆದ ಮಾದೇವ ಮಾಸ್ತರ ಸೂರ್ವೆ ಅವರ ಪ್ರೀತಿಯ ಮಗಳು. ನನ್ನ ವಿದ್ಯಾರ್ಥಿನಿ 'ನೊಗ ಹೊತ್ತ ನಿಜ ದೈವ ' ಕವನ ನಿಮ್ಮ ಓದಿಗಾಗಿ. ಡಾ.ಶ್ರೀಪಾದ ಶೆಟ್ಟಿ ಸಂಪಾದಕ ಆಲೋಚನೆ.ಕಾಂ



39 views0 comments
bottom of page