top of page

ಧರ್ಮ ಕುತೂಹಲ- ನಾರಾಯಣ ಶಾನಭಾಗ


ಧರ್ಮದ ಕುರಿತು ಸಾಕಷ್ಟು ಜಿಜ್ಞಾಸೆ, ಚರ್ಚೆ ನಡೆಯುತ್ತಿರುವ ಇಂದಿನ ಸಂದರ್ಭದಲ್ಲಿ ನಾರಾಯಣ ಶಾನಭಾಗ ಅವರ ಈ ಪುಸ್ತಕ ಸಕಾಲಿಕವಾದದ್ದು ಮತ್ತು ಮಹತ್ವದ್ದೂ ಹೌದು. ಮೂಲತಃ ಕುಮಟೆಯ ವಾಲಗಳ್ಳಿಯವರಾದ ನಾರಾಯಣ ಶಾನಭಾಗರು ಸಿವಿಲ್ ಇಂಜಿನಿಯರಿಂಗ್ ಪಡೆದು ಮೊದಲು ಅಧ್ಯಾಪಕರಾಗಿ , ನಂತರ ಕರ್ನಾಟಕ ವಿದ್ಯುತ್ ನಿಗಮದಲ್ಲಿ ಕಾರ್ಯನಿರ್ವಾಹಕ ಅಭಿಯಂತರರಾಗಿ ಕೆಲಸ ಮಾಡಿ ನಿವೃತ್ತಿಯ ನಂತರ ಬೆಂಗಳೂರಿನಲ್ಲಿರುವ ಅಖಿಲ ಹವ್ಯಕ ಮಹಾಸಭೆಯಲ್ಲಿ ಸೇವೆ ಸಲ್ಲಿಸುತ್ತ ಹವ್ಯಕ ಸಾಹಿತ್ಯ ಕಲೆ, ಪತ್ರಿಕೆ, ಸಂಸ್ಕೃತಿ ಕ್ಷೇತ್ರದ ಅಪಾರ ಮಾಹಿತಿ ಸಂಗ್ರಹ ಮಾಡಿ ಪ್ರಕಟಿಸಿ ಮಹದುಪಕಾರ ಮಾಡಿದವರು. ಅವರು ಸಂಪಾದಿಸಿದ ಉತ್ತರ ಕನ್ನಡ ಜಿಲ್ಲೆಯ ಗ್ರಂಥಕಾರರ ಸೂಚಿ ಮಹತ್ವದ ಕೃತಿ.

ಇದೀಗ ಅವರು ಸಾಕಷ್ಟು ಆಳವಾದ ಅಧ್ಯಯನದೊಂದಿಗೆ ಹೊರತಂದಿರುವ ೩೯೦ ಪುಟಗಳ " ಧರ್ಮ ಕುತೂಹಲ" ಒಂದು ಹೊಸ ಮಾದರಿಯ ಕೃತಿಯೂ ಹೌದು. ಧರ್ಮಕ್ಕೆ ಸಂಬಂಧಿಸಿದಂತೆ ವಿವಿಧ ಮೂಲಗಳಿಂದ ವಿಷಯಗಳನ್ನು ಅವರು ಇಲ್ಲಿ ಸಂಗ್ರಹಿಸಿಕೊಟ್ಟಿದ್ದಾರೆ. ವೇದೋಪನಿಷತ್ತು, ಪುರಾಣ, ಮಹಾಭಾರತ, ರಾಮಾಯಣಗಳಿಂದ ಆಧುನಿಕ ಕಾಲದವರೆಗಿನ ಪ್ರಮುಖ ಗ್ರಂಥಗಳಲ್ಲಿ ಬಂದ ಧರ್ಮದ ಪರಿಕಲ್ಪನೆ, ವ್ಯಾಖ್ಯೆ, ಧರ್ಮ ಲಕ್ಷಣ, ಧರ್ಮದ ಹಿರಿಮೆ, ವಿವಿಧ ಗ್ರಂಥರಚಯಿತರ ದೃಷ್ಟಿಕೋನ ಇವನ್ನೆಲ್ಲ ಒಂದೆಡೆ ತಂದು ಧರ್ಮದ ಕುರಿತು ಅರಿಯಬಯಸುವವರಿಗೆ ಒಂದು ಮಾರ್ಗದರ್ಶಿ ದೀಪಸ್ತಂಭವನ್ನು ನೆಟ್ಟಿದ್ದಾರೆ.

ಸನಾತನ ಧರ್ಮದ ಕುರಿತು ಸಾಕಷ್ಟು ಚರ್ಚೆ, ವಾದ ವಿವಾದ ನಡೆಯುತ್ತಿರುವ ಈಗಿನ ಕಾಲಘಟ್ಟದಲ್ಲಿ ಇಂತಹ ದಿಕ್ಸೂಚಿ ಗ್ರಂಥಗಳು ಬಹಳ ಮಹತ್ವ ಪಡೆದುಕೊಳ್ಳುತ್ತವೆ. ಧರ್ಮ ಅಂದರೇನು , ಅದರ ವಾಸ್ತವ ಅರ್ಥ ಏನು, ಸ್ವರೂಪವೇನು ಎನ್ನುವುದನ್ನೆಲ್ಲ ಸರಿಯಾಗಿ ತಿಳಿದುಕೊಳ್ಳದೆ, ಅರೆಬರೆ ಜ್ಞಾನದಿಂದ ಅದರ ಕುರಿತು ಅಲ್ಲಸಲ್ಲದ ಮಾತನಾಡುವವರೇ ಹೆಚ್ಚಾಗಿರುವುದರಿಂದ ಸಮಾಜದಲ್ಲಿ ಇಲ್ಲದ ಗೊಂದಲಗಳು ಸೃಷ್ಟಿಯಾಗುತ್ತಿವೆ. ನಾರಾಯಣ ಶಾನಭಾಗರು ಪರ ಅಥವಾ ವಿರೋಧ ಸ್ಥಾನದಲ್ಲಿ ನಿಂತುಕೊಳ್ಳದೆ ತಟಸ್ಥರಾಗಿ ವಿಷಯ ವಿವೇಚನೆ ಮಾಡಿರುವುದು ವಿಶೇಷ. ಇಂತಿಂತಹ ಗ್ರಂಥದಲ್ಲಿ ಧರ್ಮ ಎಂಬ ಶಬ್ದಗಳು ಬಂದಿವೆ, ಧರ್ಮಕ್ಕೆ ಅವರು ಇಂತಹ ಬಗೆಯಲ್ಲಿ ವ್ಯಾಖ್ಯಾನಿಸಿದ್ದಾರೆ ಎಂದೆಲ್ಲ ಕೈಬೆರಳು ತೋರಿಸುವ ಕೆಲಸವನ್ನಷ್ಟೇ ಮಾಡಿದ್ದಾರೆ. ಉದಾಹರಣೆಗೆ " ನಾಲ್ಕು ವೇದಗಳಲ್ಲಿ ಧರ್ಮ ಶಬ್ದವು ಒಟ್ಟಾರೆ ೧೩೦ ಸಲ ಬಂದಿದೆ" ಎನ್ನುವ ಅವರು ಅದು ಎಲ್ಲೆಲ್ಲಿ ಬಂದಿದೆ ಎಂಬ ವಿವರವನ್ನೂ ನೀಡುತ್ತಾರೆ. ಶಿವಶರಣರ ವಚನಗಳಲ್ಲಿ ಎಲ್ಲೆಲ್ಲಿ ಧರ್ಮ ಶಬ್ದ ಬಳಸಲಾಗಿದೆ ಎಂದೂ ತೋರಿಸುತ್ತಾರೆ. ಪರಮಹಂಸರು , ವಿವೇಕಾನಂದರು, ಅಂಬೇಡಕರರು, ಟಿಳಕರು, ನಾರಾಯಣಾಚಾರ್ಯರು , ರಾಮಾ ಜೋಯಿಸರಿಂದ ಶತಾವಧಾನಿ ಗಣೇಶ, ಚಿದಾನಂದಮೂರ್ತಿಮೊದಲಾದವರತನಕವೂ ಶಾನಭಾಗರ ವಿಷಯ ಸಂಗ್ರಹಣೆ ನಡೆದಿದೆ.

ಒಟ್ಟಾರೆ ಭಾರತೀಯ ಸಾಹಿತ್ಯದಲ್ಲಿ ಎಲ್ಲೆಲ್ಲಿ ಧರ್ಮದ ಉಲ್ಲೇಖ ಬಂದಿದೆಯೋ ಅದನ್ನೆಲ್ಲ ಈ ಸಂಕಲನದಲ್ಲಿ ಹಿಡಿದಿಟ್ಟಿದ್ದಾರೆ. ಇದೊಂದು ಧರ್ಮದ ಕುರಿತಾದ ಅಧ್ಯಯನವೆಂದೇ ಹೇಳಬೇಕಾಗುತ್ತದೆ. ಬೈಬಲ್ ಮತ್ತು ಕುರಾನಿನಲ್ಲಿರುವ ಸಹಿಷ್ಣುತೆಗೆ ದೂರವಾದ ಉಕ್ತಿಗಳು, ನಾಸ್ತಿಕ ಧರ್ಮಗಳು, ಸೆಮೆಟಿಕ್ ಮತಧರ್ಮಗಳು, ಹೀಗೆ ಹಲವು ಮಗ್ಗುಲುಗಳಿಂದ "ಧರ್ಮ ವಿಷಯ"ವನ್ನು ನೋಡುವ ಪ್ರಯತ್ನವನ್ನು ಶಾನಭಾಗರು ಮಾಡಿದ್ದಾರೆ. ಸನಾತನ ಧರ್ಮದ ಕುರಿತು ಶ್ರದ್ಧೆ ಇರುವವರಿಗೆ ಮಾತ್ರವಲ್ಲ, ಧರ್ಮ ಎಂಬ ವಿಷಯದ ಕುರಿತು ಕುತೂಹಲ ಮತ್ತು ಸಂದೇಹ ಇರುವವರಿಗೆ ಸಹ ವಿಷಯವನ್ನು ತಿಳಿದುಕೊಳ್ಳಲು ಉಪಯುಕ್ತವೆನಿಸುವ ಗ್ರಂಥ ಇದು. ಬಹುಶಃ ಕನ್ನಡದಲ್ಲಿ ಈ ಬಗೆಯ ಗ್ರಂಥ ಬೇರೆ ಇಲ್ಲವೆಂದೇ ಅನಿಸುತ್ತದೆ. ‌ಬಹಳ ವರ್ಷಗಳ ಶ್ರಮ ಇದರಲ್ಲಿ ಅಡಗಿದೆಯೆನ್ನುವುದರಲ್ಲಿ ಸಂದೇಹವಿಲ್ಲ. ಇದೊಂದು ಧರ್ಮವಿಷಯಕ ರೆಫರೆನ್ಸ್ ಗ್ರಂಥ. ನಾರಾಯಣ ಶಾನಭಾಗರನ್ನು ಇದಕ್ಕಾಗಿ ಅಭಿನಂದಿಸಬೇಕಾಗಿದೆ.

ಬ್ರಹ್ಮಶ್ರೀ ಮಿತ್ತೂರು ಪುರೋಹಿತ ತಿಮ್ಮಯ್ಯ ಭಟ್ಟ ಸಂಪ್ರತಿಷ್ಠಾನ, ಇಡ್ಕಿದು ಅಂಚೆ, ಬಂಟ್ವಾಳ ತಾಲೂಕು , ದ. ಕ. ೫೭೪೨೨೦ ಇವರಿಂದ ಪ್ರಕಟನೆ ಕಂಡಿರುವ ಈ ಪುಸ್ತಕದ ಬೆಲೆ ೩೩೦ ರೂ. ಪುಟ ೩೯೨. ಪ್ರತಿ ಬೇಕಾದ ವರು ಸಂಪರ್ಕಿಸುವ ಮೊ. ನಂ. 9449694666 ನಾರಾಯಣ ಶಾನಭಾಗ, ಬೆಂಗಳೂರು


ಪೋನ್:9483355101( ಪ್ರತಿಷ್ಠಾನ)


- ಎಲ್. ಎಸ್. ಶಾಸ್ತ್ರಿ

ಹಿರಿಯರಾದ ಎಲ್.ಎಸ್.ಶಾಸ್ತ್ರಿ ಅವರು ಶ್ರೀ ನಾರಾಯಣ ಶಾನಭಾಗ ಅವರ "ಧರ್ಮ ಕುತೂಹಲ" ಕೃತಿಯನ್ನು‌ ಓದುಗರಿಗೆ ಪರಿಚಯಿಸಿದ್ದಾರೆ.ಅದು ನಿಮ್ಮ ಓದಿಗಾಗಿ.

ಡಾ.ಶ್ರೀಪಾದ ಶೆಟ್ಟಿ ಸಂಪಾದಕ ಆಲೋಚನೆ.ಕಾಂ




27 views0 comments
bottom of page