top of page

ದೀಪದ ಕುಡಿ ಬೆಳಕು

ಮೂಡಣದ ಕೆಂಪು ಸೂರ್ಯ ಕಣ್ಣುಬಿಟ್ಟು

ಆಕಳಿಸುವ ಸಮಯ

ತಂಪು ಹೊತ್ತಲ್ಲಿ ಮಡಕೆನೀರು ಹೊಟ್ಟೆಗಿಳಿಸಿ

ಉತ್ತರದ ಬೆಟ್ಟ ಬುಡದತ್ತ ಹೆಜ್ಜೆ ಹಾಕಿದ.


ತೊಟ್ಟ ಚಡ್ಡಿಯ ಲಾಡಿ ಬಿಗಿದು

ಬರಿಗಾಲಲ್ಲಿ ಗುದ್ದಲಿ, ಕವೆಯಿಂದ ಕಲ್ಲುಮುಳ್ಳು ಗುಡ್ಡೆ ಹಾಕಿ

ಬದುವಿಗೆ ಹೊತ್ತೊಯ್ದು ಸೂರ್ಯನ ಕಡೆ ದೃಷ್ಟಿಸಿದ.


ಎತ್ತುಗಳಂತೆ ನೊಗ ಹೊತ್ತು ಸಾಗಿದ ಅವನಿಗೆ

ಬೆನ್ನ ಹಿಂದೊಬ್ಬ ನೇಗಿಲ ಮೇಣಿಗೆ ಜೀವಕೊಟ್ಟ.

ಬೆವರಿಳಿಸಿ ಬಂಜರುನೆಲ ಹಸನಾಗಿ ಉತ್ತ ಅವನ

ಹೆಗಲು ತುಂಬ ಬಾಸುಂಡೆಯಂಥ ಬಾವು!

ಕಾವು ಕೊಟ್ಟರೂ ಕರಗದ ಕೀವು - ನೋವು.‍

ಆ ಅವನು ಅವರಿವರಾಗಿರದೆ ನಿನ್ನಪ್ಪನೆ ಆಗಿದ್ದ!

ಸೋಜಿಗವೆಲ್ಲಿ ಬಂತು?


ಅವನಿಗೆ ದಿನವೂ ಮತ್ತದೇ ಬಂಜರು ನೆಲದ ಕಾಯಕ.

ಏರಿದ ಸೂರ್ಯನ ಉರಿವ ತಾಪದ ಬಿಸಿಲಲ್ಲಿ

ಎದೆನೋವು ನೀವಿಕೊಂಡು

ರಾಗಿ ಹಿಟ್ಟಿಗಿಷ್ಟು ಉಪ್ಪು - ಮೆಣಸಿನಕಾಯಿ

ಹಸಿ ಕಾರ ಕಿವುಚಿ, ಸೊಪ್ಪುಸೆದೆ ಬೇಯಿಸಿ

ಹೊಟ್ಟೆಗಿಳಿಸಿದರೂ ಆ ರಾತ್ರಿ ಅವನಿಗೆ

ಕನಸು ಬೀಳಲೇ ಇಲ್ಲ.


ಹರಿದ ಚಡ್ಡಿಯಲ್ಲಿ ತೊಟ್ಟ ಅಂಗಿಗೆ

ಮೈಯೆಲ್ಲಾ ತೂತು.

ವಲಸೆ ಬಂದು ಬೇರು ಬಿಟ್ಟವರು

ನೆಲಮೂಲದವರ ಕನಸಿಗೆ ಕೊಳ್ಳಿ ಇಟ್ಟರು!

ಗೀಚಿದ ಅವರದೇ ಚರಿತ್ರೆಯ ಪುಟಪುಟಗಳಲ್ಲಿ

ನಿನ್ನಪ್ಪನ ಹೆಜ್ಜೆ ಗುರುತಿನ ಚಿತ್ರಣವೇ ಇರಲಿಲ್ಲ.

* * * *

ಊರ ಚಾಕರಿಗೆ ಮೈ ಕೈ ಬಗ್ಗಿಸಿದಾತ

ಕಣ್ಣಲ್ಲಿ ಮಿಂಚು ಮಿಟುಕಿಸುತ್ತ

ಉಳ್ಳವರ ಜಗಲಿ ಮೇಲೆ

ಹರಿದ ಚಾಪೆಯಲ್ಲಿ ನಕ್ಷತ್ರಗಳ ಬೆಳಕು ಹುಡುಕಿದ.


ಕತ್ತಲೆಯ ಇಣುಕಿನ ಬೆಳಕಿಗೆ

ಕನಸುಗಳ ಸರಮಾಲೆ ಹೊದ್ದ ಕ್ಷಣ

ಮೋಡಗಟ್ಟಿದ ಉಂಡೆಯಲ್ಲಿ ಗುಡುಗುಡು ಶಬ್ದ

ಧಾರಾಕಾರ ಹನಿಗಳು ಅಂಗಳದ ತುಂಬ.


ಚೆಲ್ಲಿದ ಹನಿಗಳಲ್ಲಿ ಆಲಿಕಲ್ಲುಗಳ ಹುಡುಕಾಟ

ಬೆರಳು ತಾಕುವ ಮುನ್ನ ಕಲ್ಲು ಕರಗಿದ ನಿರಾಶೆ

ಬರಬಹುದು ಮತ್ತೆ ಉರುಳುರುಳಿ ಆಲಿಕಲ್ಲು

ಹಿಡಿದಿಡಬಹುದು, ಬಾಚಿ ತಬ್ಬಬಹುದು

ಆ ಕ್ಷಣಿಕ ಖುಷಿಗೆ.

* * * *

ಬೆಳಕು ಹರಿದ ಹೊತ್ತು

ಹರಿದ ನೀರಲ್ಲಿ ಬಣ್ಣಗಳ ಪಯಣ

ಹುಟ್ಟಿದ ಸೂರ್ಯನಿಗೆ ಮೋಡ ಕವಿದಾಗ

ಕಾಮನಬಿಲ್ಲ ನಗು.


ನಿನ್ನೆದಿನ, ಈ ದಿನ ನಿನ್ನ ಜನ ಸಾಗರದಂತೆ ಬಂದರು

ದೂರದ ಹಟ್ಟಿಯಲ್ಲಿ ಯೌವನಿಗ ಹುಡುಗರ ಮೆರವಣಿಗೆ

ಕಾಯಿಸಿದ ಹಲಗೆಗಿಷ್ಟು ದುಡಿಮೆ

ಕೇಕೆ ಕೂಗು ಘೋಷಣೆ ಕರಪತ್ರ...

ಹೋರಾಟದ ಸಾಗರಕ್ಕೆ ಎಲ್ಲೆಲ್ಲೂ ಜಯಘೋಷ

ಬೆಟ್ಟದಂತೆ ಬಂದ ಜನಕ್ಕೆ ಕಣ್ಣು ಕಿವಿಯಲ್ಲೂ ಕನಸು.


ಸಾಗಿ ಬಂದಿದೆ ಮೆರವಣಿಗೆಯಲ್ಲಿ

ಕನಸು ಕೊಟ್ಟ ಬೆಂಕಿಯುಂಡೆಯ ನಿನ್ನ ಚಿತ್ರ

ದೊಡ್ಡಗೌಡರ ಬಾಗಿಲಲ್ಲಿ ಉಳ್ಳವರ, ಜಾತಿ ಕಂಟಕರ

ಎದೆ ನಡುಗಿಸಿದ ಭಿತ್ತಿಪತ್ರ.

* * * * *

ಬುದ್ಧ ಬಸವ ಗಾಂಧಿ ಅಂಬೇಡ್ಕರರ ನಾಡಿನಲ್ಲಿ

ಸೂರ್ಯ ಕಿರಣ ಚೆಲ್ಲಿದವರ ದುಡಿಮೆಯ ಜ್ವಾಲಾಮುಖಿಯೆ,


ಹೊಲೆಮಾದಿಗರ ಹುಡುಗ ನಾನೆಂದು ಎದೆ ಉಬ್ಬಿಸಿ

ಈ ನಾಡ ಮನೆಮನೆ ಮಾತಾದ ಜೀವಸೆಲೆಯೆ,


ದುಡಿವ ಶೋಷಿತ ಹುಡುಗರ ಕನಸು ಕಣ್ಣಿನ

ದೀಪದ ಕುಡಿ ಬೆಳಕೆ,


ಸಾವಿಲ್ಲ ನಿನಗೆ! ನಿನ್ನ ಕಾವ್ಯಕ್ಕೆ...

ತಮಟೆ ಸದ್ದಲ್ಲಿ ಕ್ರಾಂತಿಗೀತೆ ಹಾಡುವ

ಬಿಸಿ ಹುಡುಗರೆದೆಯಲ್ಲಿ ನೀ ಸದಾ ಜೀವಂತ.


_ ಆರ್ ಜಿ ಹಳ್ಳಿ ನಾಗರಾಜ

ಮೊ: 99005 66020








18 views0 comments
bottom of page