top of page

ದಿನಕರ ದೇಸಾಯಿಯವರ ಕಾವ್ಯ








ದಿನಕರ ದೇಸಾಯಿ ಅವರ ಕಾವ್ಯದ ಸೊಗಸು

************************

ತಮ್ಮ ರಾಜಕೀಯ ವಿಡಂಬನೆಯ ಚುಟುಕುಗಳಿಂದಲೇ ಹೆಚ್ಚು ಪರಿಚಿತರಿರುವ ದಿನಕರ ದೇಸಾಯಿ ಅವರ ಇತರ ಚುಟುಕುಗಳನ್ನು ಗಮನಿಸುವವರು ಕಡಿಮೆ. ಅಲ್ಲದೇ ಅವರು ಕಾವ್ಯದ ಕುರಿತು, ಸಾಹಿತ್ಯ ವಿಮರ್ಶೆ ಕುರಿತು ವ್ಯಕ್ತಪಡಿಸಿದ ಅಭಿಪ್ರಾಯಗಳು ಬಹಳ ಮಹತ್ವದ್ದು. ಮೂಲತ: ಶ್ರೇಷ್ಠ ಕವಿಯಾದ ಅವರು ನಿಸರ್ಗದ ಬಗ್ಗೆ ಬರೆದ ಒಂದೆರಡು ಚುಟುಕುಗಳನ್ನು ಗಮನಿಸೋಣ.

ಇರುಳಬ್ಬೆ ಬೆಸಲಾಗೆ ಕೂಸು ಮುಂಜಾವು

ಮುಗುಳುನಗೆ ಬೀರಿ ಸತ್ಕರಿಸಿದವು ಹೂವು

ಗಿಡಬಳ್ಳಿಗಳು ಹಾಡಿದವು ಮಧುರ ಕವನ

ಬಾಲರವಿ ಹಣಹಣಕಿ ನೋಡಿದನು ಜನನ

ಹಿಂದೆ ಗಣಪತರಾವ್ ಪಾಂಡೇಶ್ವರ ಅವರು ಬರೆದ ಕವನದ ಒಂದೆರಡು ಸಾಲುಗಳು ನನಗಿಲ್ಲಿ ನೆನಪಾಗುತ್ತವೆ.

ಮೂಡಲ ಬಾನಿನ ಬಾಗಿಲ್ದೆರೆಯಿತು

ಹಾಡಿದುವೈ ಹೂ ಪರಿಮಳವ......

ಹಾಡಿದ ಹೂಗಳ ಪರಿಮಳ ಗೀತದ

ಕೋಡಿವರಿದುದೈ ತಂಬೆಲರ

ಹೂಗಳು ಪರಿಮಳ ಗೀತವನ್ನೇ ಹಾಡಿದವು ಎಂದು ಅವರು ಹೇಳಿದ್ದರೆ ದಿನಕರರು " ಗಿಡ ಬಳ್ಳಿಗಳು ಹಾಡಿದವು ಮಧುರ ಕವನ " ಎಂದಿದ್ದಾರೆ.

ಬೇಂದ್ರೆಯವರು ಸಹ ತಮ್ಮ ಕವನದಲ್ಲಿ " ಗಿಡಗಂಟೀಯಾ ಕೊರಳೊಳಗಿಂದಾ ಹೊರಟಿತ್ತೋ ಹಾಡು" ಎಂದಿದ್ದ ನ್ನು ನಾವು ಗಮನಿಸಬಹುದಾಗಿದೆ.

ಅಂದರೆ ಕವಿಭಾವ ಒಂದೇ. ಹೇಳುವ ರೀತಿ ಬೇರೆ ಬೇರೆ, ಅಷ್ಟೇ.

‌ ನನ್ನ ಓದಿನಲ್ಲಿ ನಾನು ಕಂಡಂತೆ ಪಾಂಡೇಶ್ವರರು ತಮ್ಮ ಒಂದು ಕವನದಲ್ಲಿ -

"ಎನ್ನಯ ತನುವಿದು ಕೊಳಲಹುದೇ ಹರಿ

ನಿನ್ನ ಕೈಯ ಸ್ಪರ್ಶವು ಬಹುದೇ"

ಎಂದರೆ ಕವಿ ಕುವೆಂಪು ಅವರು ತಮ್ಮ ಕವನವೊಂದರಲ್ಲಿ -

ನನ್ನನು ನಿನ್ನಯ ಕೊಳಲನು ಮಾಡು

ಹೇ ಜೀವೇಶನೆ ಬೇಡುವೆನು

ನಿನ್ನಯ ಸವಿಗೊರಲುಸಿರನು ನೀಡು

ವಿಧ ವಿಧ ರಾಗವ ಹಾಡುವೆನು

ಎನ್ನುತ್ತಾರೆ.

ಹಿರಿಯ ಕವಿಗಳ ಪದ್ಯಗಳ ತುಲನಾತ್ಮಕ ಅಭ್ಯಾಸದಲ್ಲಿ ನಾವೀ ಸ್ವಾರಸ್ಯಕರ ಅಂಶಗಳನ್ನು ಕಾಣಬಹುದಾಗಿದೆ. ( ಸಶೇಷ)


ಎಲ್.ಎಸ್.ಶಾಸ್ತ್ರಿ


ಉತ್ತರ ಕನ್ನಡದ ಕನ್ನಡ ನಾಡಿನ ಅಕ್ಷರ ಸೂರ್ಯ ದಿನಕರ ದೇಸಾಯಿಯವರು ನನ್ನ ಪಾಲಿಗೆ ಪ್ರಾತ: ಸ್ಮರಣೀಯರು.

ಈ ದಿನ ಅವರ ಜನ್ಮ ದಿನ. ಅವರ ಬಗ್ಗೆ ಪಿಎಚ್,ಡಿ. ಅಧ್ಯಯನ ಮಾಡುತ್ತಿರುವಾಗ ನನಗರಿವಾಗದಂತೆ ನನ್ನ ವ್ಯಕ್ತಿತ್ವ ವಿಕಸನಗೊಂಡಿತು.ಅದಕ್ಕೆ ದಿನಕರರ ಬದುಕು ಮತ್ತು ಬರಹಗಳೆ ಕಾರಣ. ಅವರ ಕಾವ್ಯದ ಕುರಿತು ಹಿರಿಯರಾದ ಎಲ್.ಎಸ್.ಶಾಸ್ತ್ರಿ ಅವರ ಬರಹ ನಿಮ್ಮ ಓದಿಗಾಗಿ.

ಡಾ.ಶ್ರೀಪಾದ ಶೆಟ್ಟಿ ಸಂಪಾದಕ ಆಲೋಚನೆ.ಕಾಂ





45 views0 comments
bottom of page