top of page

ತಲ್ಲಣ ಹುಟ್ಟಿಸುತ್ತಲೇ ಚಿತ್ರದ ಎಳೆಗಳಂತೆ ಕಾಡುವ ಭಾವಗಳು


ಹಂಪಿ ಎಕ್ಸಪ್ರೆಸ್ ಲೇಖಕರು- ವಸುಧೇಂದ್ರ

ಪ್ರಕಾಶನ- ಛಂದ ಪುಸ್ತಕ                       ಕಥೆ ಎಂದ ಕೂಡಲೇ ನಮಗೆ ನೆನಪಾಗುವುದು ಹಳ್ಳಿಯ ಸುತ್ತಮುತ್ತ ಹರಡಿರುವ ಕಥೆಗಳೇ. ಯಾಕೆಂದರೆ ನಾವು ಓದುವ, ಬರೆಯುವ ಹೆಚ್ಚಿನ ಕತೆಗಳು ಇಂದಿಗೂ ಹಳ್ಳಿಯನ್ನು ಕೇಂದ್ರವಾಗಿ ಇಟ್ಟುಕೊಂಡಿರುವವೇ ಆಗಿವೆ. ನಮ್ಮ ಕನ್ನಡ ಸಾಹಿತ್ಯ ಲೋಕದ ಬಹುತೇಕ ಕಥೆಗಾರರು ಇಂದಿಗೂ ಹಳ್ಳಿಯ ವರ್ಣನೆಯಲ್ಲಿಯೇ ಕಥೆ ಹುಡುಕುತ್ತಿರುವಾಗ ಬೆರಳೆಣಿಕೆಯ ಕೆಲವಷ್ಟೇ ಕಥೆಗಾರರು ಮಾತ್ರ ಈಗಿನ ಸನ್ನಿವೇಶದಲ್ಲಿ ಆಧುನಿಕ ಜಗತ್ತಿನ ಕುರಿತು ಕಥೆಗಳನ್ನು ಬರೆಯುತ್ತಿರುವುದನ್ನು ಕಾಣುತ್ತೇವೆ. ಅಂತಹ ಮೆಟ್ರೋಪಾಲಿಟಿನ್ ಕಥೆಗಾರರಲ್ಲಿ ವಸುಧೇಂದ್ರ ಅವರದ್ದು ಪ್ರಮುಖ ಹೆಸರು. ಅವರ ಹಂಪಿ ಎಕ್ಸ್‌ಪ್ರೆಸ್ ಆಧುನಿಕ ಕನ್ನಡ ಕಥಾಲೋಕದಲ್ಲಿ ಹೊಸದೇ ಆದ ಟ್ರೆಂಡ್ ಒಂದನ್ನು ಸೃಷಿಸಿದ ಸಂಕಲನ.

       ಮೊದಲ ಕಥೆ ಸೀಳುಲೋಟ ಕಳ್ಳತನ ಮಾಡಿದ ವಸ್ತುವನ್ನು ತಿರುಪತಿಯ ಹುಂಡಿಗೆ ಹಾಕಬೇಕು ಎಂಬ ಶಾಸ್ತ್ರ ಇರುವ ಪರಿವಾರದ ಕಥೆಯನ್ನು ಒಳಗೊಂಡಿದೆ. ಅಣ್ಣನ ಆಶ್ರಯದಲ್ಲಿ ಬೆಳೆದ ರಮಾಬಾಯಿ ಅಂತೂ ಇಂತೂ ಹುಲಿಕುಂಟೆಯನ್ನು ಮದುವೆಯಾಗಿ ಸಂಸಾರ ಸಾಗಿಸುತ್ತಿರುವಾಗಲೇ ಆಂಧ್ರದಲ್ಲಿದ್ದ ಅಣ್ಣ ತನ್ನ ಮಗಳ ಮದುವೆಗೆ ಬರುವಂತೆ ಆಹ್ವಾನವೀಯುತ್ತಾನೆ, ತಿರುಪತಿಯಲ್ಲಿ ನಡೆಯುವ ಮದುವೆಗೆ ಗಂಡನನ್ನು ಕರೆದುಕೊಂಡು ಹೊರಟಾಗ ಪಕ್ಕದ ಮನೆಯ ಕಾಶವ್ವ ನಿಮ್ಮ ಮನೆಯವರು ತಿರುಪತಿಗೆ ಹೋಗುವುದಿದ್ದರೆ ಯಾವುದಾದರೂ ಕಳ್ಳತನ ಮಾಡಿದ ವಸ್ತುವನ್ನು ಹುಂಡಿಗೆ ಹಾಕಲೇಬೇಕು ಎನ್ನುತ್ತಾಳೆ. ತಮ್ಮನ್ನು ಮದುವೆ ಮಾಡಿಸಿದ್ದ ಪದ್ದಕ್ಕನನ್ನೇ ಕೇಳಿಕೊಂಡು ಗಂಡನನ್ನು ಕದ್ದುಕೊಂಡು ಬರಲು ಅವರ ಮನೆಗೆ ಕಳಿಸುವುದು, ರಮಾಬಾಯಿಯ ಗಂಡ ಅವರ ಮನೆಗೆ ಬಂದಾಗ ಪದ್ದಕ್ಕ ತನ್ನ ಗಂಡನ್ನು ಕರೆದುಕೊಂಡು ಹೊರಹೋಗುವುದು, ಹುಲಿಕುಂಟೆ ದೇವರ ಕೋಣೆಯಲ್ಲಿದ್ದ ತಳ ಸೀಳಿದ ರಂಗೋಲಿ ಹುಡಿ ತುಂಬಿದ ಸ್ಟೀಲ್‌ಲೋಟವನ್ನು ಕದ್ದೊಯ್ಯುವುದು ಎಲ್ಲವೂ ತುಂಬಾ ಸರಳ ಎಂಬಂತೆ ನಿರೂಪಿತವಾಗಿದೆ. ಇದನ್ನು ಓದುವ ಖುಷಿಯೇ ಬೇರೆ. ಕದ್ದುಕೊಂಡ ಲೋಟದೊಂದಿಗೆ ತಿರುಪತಿ ತಲುಪಿತ ರಮಾಬಾಯಿ ಅಣ್ಣನ ಮಗಳ ವರನ ಕಡೆಯವರ ಶ್ರೀಮಂತಿಕೆ  ನೋಡಿ ಆಶ್ಚರ್‍ಯಪಟ್ಟು, ಬೀಗತ್ತಿಯ ಬಳಿಯೇ ಅವಳ ವಜ್ರದ ಹಾರದ ಬೇಲೆ ಕೇಳಿ, ಮಾರನೇ ದಿನ ಆ ವಜ್ರದ ಹಾರ ಕಳ್ಳತನವಾಗಿ ಹುಲಿಕುಂಟೆ ಹೊಟ್ಟೆನೋವೆಂದು ನರಳಿ, ಅವರು ಕೊಟ್ಟ ಪ್ರಸಾದ ತಿಂದರೆ ಯಾರು ಕದ್ದಿದ್ದಾರೆಯೋ ಅವರಿಗೆ ಹೊಟ್ಟೆನೋವು ಬರುತ್ತದೆಂಬ ಪಂಡಿತನ ಮಾತು ನಂಬಿ ರಮಾಬಾಯಿಯ ಚೀಲವನ್ನೆಲ್ಲ ಹುಡುಕುವುದು, ರಮಾಬಾಯಿ ಹೇಗೋ ಗಂಡನನ್ನು ಆಸ್ಪತ್ರೆಗೆ ಸೇರಿಸಿ ಅಪೆಂಡಿಕ್ಸ್ ಆಪರೇಶನ್‌ಗಾಗಿ ಪದ್ದಕ್ಕನಿಂದ ತೆಗೆದುಕೊಂಡು ಹೋಗಿದ್ದ ಬಳೆಯನ್ನೇ ಗಿರವಿ ಇಡುವುದೆಲ್ಲವೂ ಕರುಳನ್ನು ಚುರುಕ್ ಎನ್ನಿಸುವಂತೆ ಮಾಡುತ್ತದೆ. ಇತ್ತ ರಮಾಬಾಯಿಯ ಅಣ್ಣ ವರದಣ್ಣ ಅವಳ ಬಳೆಗಳನ್ನು ಬಿಡಿಸಿಕೊಡುತ್ತಾನಾದರೂ ರಮಾಬಾಯಿ ಅಣ್ಣ ತನ್ನ ಗಂಡನನ್ನು ನೋಡಲು ಹೋಗದಂತೆ ತಡೆಯುವುದರಲ್ಲಿಯೇ ಆಕೆಯ ಸ್ವಾಭಿಮಾನ ಗೋಚರಿಸುತ್ತದೆ, ಅಂತಹ ಗಟ್ಟಿ ಹೆಣ್ಣು ತಿಮ್ಮಪ್ಪನ ದರ್ಶನ ಮಾಡಿ ಮಗನಿಂದ ಕದ್ದ ಸೀಳುಲೋಟ ಹುಂಡಿಗೆ ಹಾಕಿಸಿ ಧನ್ಯಳಾದಳು ಎಂದುಕೊಳ್ಳುವ ಹೊತ್ತಿಗೇ ಕಥೆಗೊಂದು ಅನಿರೀಕ್ಷಿತ ತಿರುವನ್ನು ನೀಡಿ ಕಥೆಗಾರರು ಓದುಗನ್ನು ಅಯೋಮಯವನ್ನಾಗಿಸುತ್ತಾರೆ. ಹೀಗೆ ಕೊನೆಯ ನಾಲ್ಕು ಸಾಲುಗಳಲ್ಲಿ ಇಡೀ ಕಥೆಯನ್ನೇ ತಿರುವು ಮುರುವಾಗಿಸುವ ಕಥೆಗಳು ಇಲ್ಲಿದ್ದು ಅವೇ ಈ ಕಥೆಗಳ ವಿಶಿಷ್ಟ ಸೆಳೆತಕ್ಕೂ ಕಾರಣವಾಗಿವೆ ಎನ್ನಬಹುದು. ಕೆಂಪುಗಿಣಿ ಹಾಗೂ ಕೆಂದೂಳಿ ಮತ್ತು ನವಿರುಗರಿಗಳ ಊರಿನ ನೆನಪುಗಳನ್ನು ಎದೆಯೊಳಗೆ ಹುದುಗಿಸಿಕೊಂಡ ಮಾರ್ಧವತೆಯ ಕಥೆಗಳು. ಬಳ್ಳಾರಿಯ ಮಣ್ಣಲ್ಲಿ ಮ್ಯಾಂಗನೀಸ್ ಇದೆಯೆಂದು ಗೊತ್ತಾದ ತಕ್ಷಣ ಇಡೀ ಊರಿಗೆ ಊರನ್ನು ಅಗೆದು ತೆಗೆದು ಮಣ್ಣನ್ನೆಲ್ಲ ಮಾರಾಟ ಮಾಡುವ ಅಬ್ಬರದಲ್ಲಿ ಊರಿನಲ್ಲಿ ವ್ಯವಸಾಯ ಮಾಡಿಕೊಂಡಿದ್ದವರೆಲ್ಲ ಅನಾಥವಾಗಿಬಿಟ್ಟಿದ್ದರು. ಬಳ್ಳಾರಿಯಲ್ಲಿ ಮಣ್ಣು ಗುಡಿಸಿ ಒಂದು ಬುಟ್ಟಿ ಮಣ್ಣಿಗೂ ಚಿನ್ನದ ಬೆಲೆ ಬಂದಾಗ ಇತ್ತ ಅದೇ ಕೆಮ್ಮಣ್ಣು ನಮ್ಮೂರಿನ ಸಮುದ್ರವನ್ನೆಲ್ಲ ರಕ್ತಸಿಕ್ತವಾದಂತೆ ಕಾಣುವಂತೆ ಮಾಡಿತ್ತು. ನಮ್ಮ ಬೇಲೇಕೇರಿಯಲ್ಲೂ ಆ ಅದರಿನ ಮಣ್ಣನ್ನು ಹೊತ್ತು ತಂದ ಲಾಡಿಯನ್ನು ಗುಡಿಸಿ ಒಂದೊಂದು ಬುಟ್ಟಿ ಹೊತ್ತು ಹಾಕಿ ಹಣ ಮಾಡಿಕೊಂಡ ನಿವೃತ್ತ ಉದ್ಯೋಗಿಗಳ ಬಗೆಗೆ ಜೋಕ್ ಹರಿದಾಡುತ್ತಿದ್ದುದು ನೆನಪಿದೆ. ಬಳ್ಳಾರಿಯ ಹಸಿರು ಗಿಣಿಗಳೆಲ್ಲವೂ ಕೆಮ್ಮಣ್ಣಿನ ಧೂಳಿನಿಂದಾಗಿ ಕೆಂಪು ಬಣ್ಣಕ್ಕೆ ತಿರುಗಿದಂತೆ ಇಲ್ಲಿ ನಮ್ಮೂರಲ್ಲೂ ಬಳಚು ನೀಲಿಕಲ್ಲುಗಳೆಂಬ ರುಚಿಯಾದ ಕಪ್ಪೆಚಿಪ್ಪುಗಳ ಸಂತತಿಯೇ ನಾಶವಾಗಿ ಹೋಗಿತ್ತು. ಗುಬ್ಬಿಗಳೆಲ್ಲ ಕಣ್ಮರೆಯಾಗಿ ಕೆಂಪು ಸಮುದ್ರದಲ್ಲಿ ಮೀನುಗಳೇ ಬರದೇ ಮತ್ಸ್ಯಕ್ಷಾಮದಿಂದ ತತ್ತರಿಸಿದ್ದಷ್ಟೇ ಅಲ್ಲ, ಸಾಲಾಗಿ ಅದಿರಿನ ಮಣ್ಣು ಹೊತ್ತು ತಂದ ಲಾರಿಗಳ ಬೇಕಾಬಿಟ್ಟಿ ಡ್ರೈವಿಂಗ್‌ನಿಂದಾಗಿ ಅದೆಷ್ಟೋ ಜನ ಪ್ರಾಣ ಕಳೆದುಕೊಂಡು ಇಡೀ ಜಿಲ್ಲೆ ತತ್ತರಿಸಿ, ಬಳ್ಳಾರಿಯ ಅದಿರು ಮಣ್ಣಿಗೆ ಹಿಡಿಶಾಪ ಹಾಕುತ್ತ ಅದು ಇಲ್ಲಿಗೆ ಬರದಿರಲಿ ಎಂದು ಎಲ್ಲರೂ ಬೇಡಿಕೊಳ್ಳುವ ಸ್ಥಿತಿ ಎದುರಾಗಿತ್ತು. ಬಳ್ಳಾರಿಯಿಂದ ಇಷ್ಟು ದೂರದಲ್ಲಿರುವ ನಮ್ಮಲ್ಲೇ ಆ ಅದಿರಿನ ಮಣ್ಣು ಇಷ್ಟೆಲ್ಲ ಅವಾಂತರ ಮಾಡಿರುವಾಗ ಅಲ್ಲಿನ ಭೀಕರತೆ ಎಷ್ಟಿರಬಹುದು ಎಂದು ಊಹಿಸಿಕೊಂಡರೇನೇ ಮೈ ನಡುಗುತ್ತದೆ. ಕೆಂಧೂಳಿ ಕಥೆಯಲ್ಲಿ ಸಾಬರ ಹುಡುಗಿಯನ್ನು ಪ್ರೀತಿಸಿ ಮದುವೆಗೆ ಉಂಟಾದ ಅಡ್ಡಿಯನ್ನು ತಂದೆ ತಾಯಿಗಳು, ಮನೆಯ ಹಿರಿಯರು ಹಾಗೂ ಪ್ರೀತಿಸಿದ ಹುಡುಗಿಯ ದೃಷ್ಟಿಯಿಂದ ವಿಶ್ಲೇಷಿಸಲಾಗಿದೆ. ಮದುವೆಯಾಗಿದ್ದರೆ ಹುಂಬ ಧೈರ್‍ಯ ಮಾಡಿ ಮಶಿನ್ ಒಳಗೆ ತಲೆ ಹಾಕುತ್ತಿರಲಿಲ್ಲ ಎನ್ನುವ ಪ್ರೀತಿಸಿದ ಹುಡುಗಿಯ ಮಾತಲ್ಲಿರುವ ನಿಜಾಯಿತಿ ಎದೆ ತಟ್ಟುತ್ತದೆ. ಸಂಸಾರದ ಒಳಗುಟ್ಟುಗಳು ಹಾಗೇ ಹಸಿಯಾಗಿ ಕಟ್ಟಿಕೊಟ್ಟ ಈ ಕಥೆಯಂತೆಯೆ ನವಿರುಗರಿಯಲ್ಲಿ ಮಕ್ಕಳಿಲ್ಲದ ವೆಂಕಟೇಶ ತನ್ನ ಸುವರ್ಣಕ್ಕನ ಮಗಳು ವೈದೇಹಿಯ ಮಗಳನ್ನು ನೋಡಲು ಹೊರಡುವ, ಅಲ್ಲಿ ಮಗುವನ್ನು ಹಂಬಲಿಸುವ ಕಥೆಯಲ್ಲಿಯೂ ಮಾನವ ಸಂಬಂಧಗಳ ಒಳಿತು ಕೆಡಕುಗಳ ಚಿತ್ರಣ ನವಿರಾಗಿ ಚಿತ್ರಿಸಲ್ಪಟ್ಟಿದೆ.

          ಹಾಗೆ ನೋಡಿದರೆ ಎರಡು ರೂಪಾಯಿ ಹಾಗೂ ಪೆದ್ದಿ ಪದ್ಮಾವತಿ ಒಂದೇ ಎರಕದ ಕಥೆಗಳು ಎನ್ನಿಸಿದರೂ ಮನುಜ ಸ್ವಭಾವದ ಸಹಜ ಮಾನವಿಯತೆಯನ್ನು ಎತ್ತಿ ತೋರಿಸುತ್ತದೆ. ಮದ್ರಾಸಿನ ಗಂಡನ ಮನೆಯ ಆಸ್ತಿಯ ಹಂಚಿಕೆ ಎಂದು ಬಂದ ಕಾಶವ್ವ ರೈಲು ನಿಲ್ದಾಣದಲ್ಲಿ ಕೂಲಿಯವನಿಗೆ ಕೊಡಬೇಕಾದ ಎರಡು ರೂಪಾಯಿಯನ್ನು ಕೊಡಲಾಗದೇ ತಳಮಳಿಸುವುದು, ಅತ್ತ ಗಂಡನ ಮನೆಯವರು ಆಸ್ತಿಯನ್ನೆಲ್ಲ ಹಂಚಿಕೊಂಡು, ಬೇಕಾದಲ್ಲೆಲ್ಲ ಇವಳ ಸಹಿ ಹಾಕಿಸಿಕೊಂಡು ನೂರು ರೂಪಾಯಿ ಕೊಟ್ಟು ರೈಲು ಹತ್ತಿಸಿ ಕೈ ತೊಳೆದುಕೊಳ್ಳುವುದು ಎರಡೂ ಮನುಷ್ಯನ ಎರಡು ವಿಭಿನ್ನ ಸ್ವಭಾವವನ್ನು ಏಕಕಾಲದಲ್ಲಿ ಪರಿಚಯಿಸುತ್ತಲೇ ಅಚ್ಚರಿ ಮೂಡಿಸುತ್ತದೆ. ಅದಾಗಿ ಬರೋಬ್ಬರಿ ಇಪ್ಪತ್ತು ವರ್ಷಗಳ ನಂತರ ಮತ್ತೆ ಕಾಶಿ ನೋಡಲು ತಮ್ಮನ ಮಗನೊಂದಿಗೆ ಹೊರಟ ಕಾಶವ್ವ ಹಿಂದೆ ತನ್ನ ಸಾಮಾನುಗಳನ್ನೆಲ್ಲ ಹೊತ್ತು ತಂದು ರೈಲಿನಲ್ಲಿ ಕುಳ್ಳರಿಸಿದ್ದವನನ್ನು ಹುಡುಕಲು ಸೋತರೂ ಆತನ ಮಗನನ್ನು ಗುರುತಿಸಿ ಎರಡು ರೂಪಾಯಿಗಳನ್ನು ಅವನ ಕೈಯ್ಯಲ್ಲಿಟ್ಟು ಸಮಾಧಾನ ತಾಳುತ್ತಾಳೆ. ಪೆದ್ದಿ ಪದ್ಮಾವತಿ ಕಥೆಯ ಒಳಹೂರಣವೇ  ಓದುಗನನ್ನು ಒಮದು ಬಗೆಯ ವಿಸ್ಮೃತಿಗೆ ದುಡುತ್ತದೆ. ಪದ್ಮಾವತಿಯ ಎಸೆಸೆಲ್ಸಿ ಪುರಾಣದೊಂದಿಗೆ ಮೂರನೇ ತರಗತಿಯೂ ಪಾಸಾಗದಿದ್ದ ಅವಳ ಅಮ್ಮ ವೇದಮ್ಮನನ್ನು ಮದುವೆ ಆಗಿದ್ದರೂ ನಿರಾಕರಿಸಿದ್ದ ರಾಘಣ್ಣ, ಹಾಗೂ ಆ ನಿರಾಕರಣೆಯಲ್ಲೇ ಹುಟ್ಟಿದ ಮಗು ಎಲ್ಲವೂ ಒಮದು ರೀತಿ ಗೊಜಲಾಗಿಯೇ ಕಾಣುತ್ತದೆ. ಪದ್ಮಾವತಿಯನ್ನು ಮದುವೆ ಮಾಡಿಸುತ್ತೇನೆ ಎಂದು ಹೊರಟ ರಾಘಣ್ಣ ಹುಡುಕಿ ಸೋತು ಕೊನೆಯಲ್ಲಿ ತಮದ ಸಂಬಂಧವನ್ನು ಪದ್ಮಾವತಿ ನಿರಾಕರಿಸಿ ಬಿಡುವುದು, ಸಿಟ್ಟುಗೊಂಡ ಆತ ಅವಳನ್ನು ಹೊಡೆಯುವುದು, ಅಪ್ಪ ಆಗಿ ಏನು ಕರ್ತವ್ಯ ಮಾಡಿದ್ದಿ ಎಂದು ವೇದಮ್ಮ ರೇಗುವುದು ಎಲ್ಲವೂ ಚಲನಚಿತ್ರಗಳಂತೆ ಕಣ್ಣೆದುರೇ ನಡೆಯುತ್ತಿರುವ ಭಾವ ಹುಟ್ಟಿಸುತ್ತದೆ. ಅದೇ ಸಮಯಕ್ಕೆ ತೀರಿಕೊಂಡ ರಾಘಣ್ಣ ಮತ್ತು ಇವರನ್ನು ಒಮದು ಮಾತೂ ಕರೆಯದೇ ನಡೆದು ಹೋಗುವ ಅಂತ್ಯಕ್ರಿಯೆ ವೇದಮ್ಮನಲ್ಲಿ ನಡುಕ ಹುಟ್ಟಿಸುತ್ತದೆ. ಮೂರು ಸಲ ಎಸ್ ಎಸ್ ಎಲ್ ಸಿ ಪರೀಕ್ಷೆ ಫೇಲಾದ ಪದ್ಮಾವತಿ ಮತ್ತೆ ರಾಘಣ್ಣನ ಅನುಕಂಪದ ಆಧಾರದ ಮೇಲೆ ದೊರಕುವ ಕೆಲಸಕ್ಕಾಗಿ ಓದಲು ಮನಸ್ಸು ಮಾಡಿದಾಗ, ನೀನು ಆ ಕೆಲಸಕ್ಕೆ ಹೋದರೆ ನಾನು ಬಳೆ ಕುಂಕುಮ ತೆಗೆಯಬೇಕಾಗುತ್ತದೆ ಎನ್ನುವ ವೇದಮ್ಮನ ಮಾತುಗಳಲ್ಲಿರುವ ನೋವು, ಹತಾಶೆ ಸ್ವಾಭಿಮಾನ ಓದುಗನನ್ನು ಒಮ್ಮೆ ನಡುಗಿಸುವುದು ಸುಳ್ಳಲ್ಲ. ಆದರೆ ಕಥೆಯ ಅಂತ್ಯ ಮಾತ್ರ ಎಂಥವರನ್ನೂ ಒಂದುಕ್ಷಣ ಆರ್ದೃವಾಗುವಂತೆ ಮಾಡುವುದರಲ್ಲಿ ಯಶಸ್ವಿಯಾಗುತ್ತದೆ.

ಕ್ಷಮೆಯಿಲ್ಲದೂರಿನಲಿ ಹಾಗೂ ಹೊಸ ಹರೆಯ ಎಂಬ ಎರಡು ಕಥೆಗಳು ಆಧುನಿಕ ಜಗತ್ತಿನ ಹಳವಂಡಗಳನ್ನು ಹಂತಹಂತವಾಗಿ ನಮ್ಮೆದುರಿಗೆ ತೆರೆದಿಡುತ್ತವೆ. ಒಂದು ಹಳ್ಳಿಗಳಲ್ಲಿ ವಾಸಿಸುವಷ್ಟೇ ಜನ ವಾಸಿಸುವ ಪ್ಲಾಟ್‌ಗಳಲ್ಲಿ ಒಬ್ಬೊಬ್ಬರದ್ದು ಒಂದೊಂದು ಆಲೋಚನೆ. ಒಂದೊಂದು ಭಾವನೆ. ಮೂರು ವರ್ಷದ ಮಗಳನ್ನು ಸ್ವಿಮ್ಮಿಂಗ್‌ಫೂಲ್‌ಗೆ ಕರೆದುಕೊಂಡು ಬಂದಾಗ ಅಲ್ಲೇ ಮೂತ್ರ ಮಾಡಿಕೊಂಡಿದ್ದನ್ನು ರೇಖಾ ಜೋಷಿ ಹೇಲಿ ಬಿಡುತ್ತಾಳೆ. ಆದರೆ ಅದನ್ನು ದೊಡ್ಡ ಇಶ್ಯೂ ಮಾಡ ಬಯಸದ ಸುಜಾ ಅನಿವಾರ್‍ಯವಾಗಿ ಗಂಡನ ಒತ್ತಾಯಕ್ಕೆ ಅವನಿಗೆ ಹೇಳುತ್ತಾಳೆ. ಆತ ಅದನ್ನು ರಿವರ್ ವ್ಯೂ ಬ್ಲಾಗ್‌ಗೆ ಹಾಕಿ ಅದನ್ನು ರಾಣಾರಂಪ ಮಾಡಿಬಿಡುವುದೂ, ಮಗಳನ್ನು ಬೆಂಬಲಿಸುವ ಭರದಲ್ಲಿ ಸುಜಾ ಬಂಜೆ ಎಂದು ರೇಖಾ ಜೋಷಿ ಅದೇ ಬ್ಲಾಗ್‌ನಲ್ಲಿ  ಆರೋಪಿಸುವುದು, ಅತ್ತು ಕಂಗಾಲಾದ ಸುಜಾ ತನ್ನ ಮೊದಲ ಸಂಬಂಧದ ಮಗನ ಫೋಟೋ ತೋರಿಸಿ ಅಳುವುದು, ರೇಖಾ ಕ್ಷಮೆ ಯಾಚಿಸುವ ಭರದಲ್ಲಿ ಅದನ್ನೂ ಬ್ಲಾಗ್‌ನಲ್ಲಿ ಹೇಳಿ ಅದು ಸುಜಾ ಹಾಗೂ ಶ್ರೀನಿವಾಸ್ ದಂಪತಿಗಳಲ್ಲಿ ವೈಮನಸ್ಸನ್ನು ಹುಟ್ಟಿಸುವುದು ಎಲ್ಲವೂ ನಮ್ಮಂಥಹ ಅತ್ತ ಪಟ್ಟಣವೂ ಅಲ್ಲದ, ಇತ್ತ ಹಳ್ಳಿಯೂ ಅಲ್ಲದ ಪುಟ್ಟ ಶಹರಗಳಲ್ಲಿ ವಾಸಿಸುವ ಓದುಗರಿಗೆ ಎದೆ ಬಡಿತ ಹೆಚ್ಚಿಸುವ, ಹೀಗೂ ಆಗುತ್ತಾ ಎಂದು ಕಣ್ಣು ಕಣ್ಣು ಬಿಡುವ ವಿಷಯವಾದರೆ ಹೊಸ ಹರೆಯ ಅದಕ್ಕೂ ಮೀರಿದ ದಿಗಿಲನ್ನು  ಹುಟ್ಟುಹಾಕುತ್ತದೆ. ವಿಶ್ವ ಸುಂದರಿ ಆಗಬೇಕೆಂದು ನಿಗದಿತ ಅಳತೆಗೆ ಹೊಂದಿಸಲು ಮಗಳು ಇಂಜೆಕ್ಷನ್ ತೆಗೆದುಕೊಳ್ಳುವುದನ್ನು ಹೇಳುವ ಒಬ್ಬ ತಾಯಿ, ಮಗ ಯಾವುದೋ ಗರ್ಲ್‌ಫ್ರೆಂಡ್‌ನೊಂದಿಗೆ ಓಡಾಡುವುದನ್ನು ಮುಜುಗರದಿಂದ ನೋಡುವ ಇನ್ನೊಬ್ಬ ತಾಯಿ ಇಲ್ಲಿ ಕಥೆಯನ್ನು ಹೇಳುವ ಕಥೆಗಾರರಂತೆ ತೋರುತ್ತಾರೆ. ಮಗ ಇಂಜಿನಿಯರಿಂಗ್ ಓದನ್ನು ಬಿಟ್ಟು ಕೆಲಸಕ್ಕೆ ಸೇರಿದರೆ ಅತ್ತ ಆ ಹುಡುಗಿ ನಾಲ್ಕು ತಿಂಗಳ ಬಸುರಿ ಆಗಿದ್ದನ್ನು ಹೇಳುತ್ತ, ಆತ ಸೆಕ್ಸ್‌ನಲ್ಲಿ ವೀಕ್ ಹೀಗಾಗಿ ಅವನನ್ನು ಮದುವೆ ಆಗಲಾರೆ ಎನ್ನುವಾಗ ಬೇರೆ ಲೋಕದವರಂತೆ ಕಾಣುತ್ತಾರೆ. ಇದೆಲ್ಲಕ್ಕಿಂತ ಮಗನ ಗರ್ಲ್‌ಫ್ರೆಂಡ್ ಎಂದುಕೊಂಡವಳು ಆತನ ಪ್ರೇಮಿಯಾಗಿರದೇ ಸೆಕ್ಸ್ ಟ್ರೈನರ್ ಆಗಿರುವುದು ಅವನ ತಾಯಿಯ ಹೊಟ್ಟೆ ತೊಳೆಸುವಂತೆ ಮಾಡಿದರೆ ನನ್ನಂತಹ ಓದುಗರು ಕೊನೆಯ ಆಘಾತಕ್ಕೆ ತತ್ತರಿಸುವಂತಾಗುತ್ತದೆ. ಪ್ರತಿ ಕಥೆಯೂ ಆಯಾ ಕಾಲದ ಓದುಗನ ಮನಸ್ಥಿತಿಗೆ ಅನುಗುಣವಾಗಿ ಆಯಾಯ ಸ್ವರೂಪ ಪಡೆದುಕೊಳ್ಳುವುದು ಈ ಕತೆಗಳ ಹೆಚ್ಚುಗಾರಿಗೆ. ಮೊದಲ ಸಲ ಓದಿದಾಗ ಹೀಗೂ ಉಂಟೇ ಎಂಬಂತೆ ಅಚ್ಚರಿ ಹುಟ್ಟಿಸಿದ್ದ ಕಥೆಗಳು ಸುಮಾರು ಹತ್ತು ವರ್ಷಗಳ ನಂvರ ಮತ್ತೊಮ್ಮೆ ಓದುತ್ತಿರುವಾಗ ಓದಿದಾಗ ಹುಟ್ಟಿಸಿದ ತಲ್ಲಣಗಳೇ ಬೇರೆ. ಈಗಷ್ಟೇ ಹದಿವಯಸ್ಸಿಗೆ ಕಾಲಿಡುತ್ತಿರುವ ಮಗನ ತಾಯಿಯಾಗಿ ಓದಿದಾಗ ಈ ಕಥೆ ಮತ್ತಿಷ್ಟು ನಡುಕ ಹುಟ್ಟಿಸಿ ಬೆವರುವಂತೆ ಮಾಡಿದ್ದು ಸುಳ್ಳಲ್ಲ.

  ಈ ಮೊದಲೇ ಹೇಳಿರುವಂತೆ ವಸುಧೇಂದ್ರರ ಬಹುತೇಕ ಕಥೆಗಳು ಕೊನೆಯ ನಾಲ್ಕು ಸಾಲುಗಳಲ್ಲಿ ವಿಶಿಷ್ಟವಾದ ತಿರುವುಗಳನ್ನು ಪಡೆದುಕೊಂಡು ಓದುಗರಲ್ಲಿ ಸಂಚಲನ ಹುಟ್ಟಿಸುವಲ್ಲಿ ಯಶಸ್ವಿಯಾಗುತ್ತದೆ. ಬದುಕಿನ ಎಲ್ಲ ಮುಖಗಳನ್ನು ಅದು ಆಧುನಿಕ ಬದುಕಿನ ವಿಕೃತಿಗಳೇ ಆಗಿರಬಹುದು ಅಥವಾ ಮಾನವಿಯ ಸಂಬಂಧಗಳ ನವಿರು ಎಳೆಗಳೇ ಆಗಿರಬಹುದು, ಇಲ್ಲವೇ ಬಡತನದ ನೋವನ್ನು ಚಿತ್ರಿಸುವುದೇ ಆಗಿರಬಹುದು ಎಲ್ಲವನ್ನೂ ಚಂದವಾಗಿ ಚಲನಚಿತ್ರದಂತೆ ಕಟ್ಟಿಕೊಡುವ ವಸುಧೇಂದ್ರ ಕಥೆಗಳನ್ನು ಓದುವ, ಕೊನೆಯಲ್ಲಿ ಅನುಭವಿಸುವ ಥ್ರಿಲ್ ಮತ್ತೆ ಮತ್ತೆ ಆ ಕತೆಗಳನ್ನು ಓದುವಂತೆ ಪ್ರೇರೇಪಿಸುವುದರಲ್ಲಿ ಅಚ್ಚರಿ ಏನಿಲ್ಲ.    




  ಶ್ರೀದೇವಿ ಕೆರೆಮನೆ

274 views1 comment
bottom of page