top of page

ತಲೆಗಿಂತ ಮುಂಡಾಸು ಭಾರ

ಯಾವುದೇ ಸಭೆ ಸಮಾರಂಭಗಳಲ್ಲಿ ಇತ್ತೀಚೆಗೆ 'ನಿರೂಪಕ' ಎಂಬೊಂದು ವರ್ಗವನ್ನು ನೋಡುತ್ತಿದ್ದೇವಷ್ಟೆ! ಕಾರ್ಯಕ್ರಮ ಆರಂಭವಾಗುವುದಕ್ಕೆ ಮೊದಲು ಇವರು ವೇದಿಕೆಯೇರಿ ಮೈಕ್ ಮುಂದೆ ನಿಂತು ಉದ್ಘೋಷಣೆ ಆರಂಭಿಸುತ್ತಾರೆ. ಸಭಾ ಕಲಾಪವನ್ನು ನಡೆಸುವ ಪೂರ್ತಿ ಜವಾಬ್ದಾರಿಯನ್ನು ವಹಿಸಿಕೊಂಡು ಬಿಡುತ್ತಾರೆ.


ಇವರಲ್ಲಿ ಕೆಲವರ ನಡೆ ನುಡಿ ಹೇಗಿರುತ್ತದೆಂದರೆ ವೇದಿಕೆಯಲ್ಲಿ ಕುಳಿತವರು ಇವರ ಆಜ್ಞಾನುವರ್ತಿಯಾಗಿ ವರ್ತಿಸಬೇಕಾಗುತ್ತದೆ. ಭಾಷಣಕಾರರ ಭಾಷಣದ ಸಾರಾಂಶ ಹೇಳುವುದು, ವಿಮರ್ಶಿಸುವುದು, ವಿಶ್ಲೇಷಿಸುವುದು ಇತ್ಯಾದಿ ಮಾಡತೊಡಗುತ್ತಾರೆ. ಮಧ್ಯೆ ಮಧ್ಯೆ 'ಮಂಕುತಿಮ್ಮನ ಕಗ್ಗ'ದ ಸಾಲುಗಳನ್ನು ಉದಾಹರಿಸುತ್ತ, ಕೆಲವು ಉದ್ಧರಣೆ (quotation) ನೀಡುತ್ತ ತಾವೇ ಒಂದು ಭಾಷಣ ಬಿಗಿದು ಬಿಡುತ್ತಾರೆ! ಮಂತ್ರಕ್ಕಿಂತ ಉಗುಳೇ ಹೆಚ್ಚು ಎಂಬಂತೆ ಬೇಕಾದ್ದು ಬೇಡದ್ದು ಎಲ್ಲ ಹೇಳುತ್ತ ಸಭಿಕರ ತಲೆ ಚಿಟ್ಟು ಹಿಡಿಸಿ ಬಿಡುತ್ತಾರೆ!


ಇಂತಹ ನಿರೂಪಣಾ ಭಯಂಕರರು ಈಗ ಅಲ್ಲಲ್ಲಿ ಕಾಣಸಿಗುತ್ತಾರೆ. ಮೂಗಿಗಿಂತ ಮೂಗುತಿಯೇ ಭಾರವಾಗಿ ಹೋದ ಸ್ಥಿತಿ ಇದು!


ಒಂದು ಸಭೆ ಅಥವಾ ಸಮಾರಂಭದಲ್ಲಿ ಅಧ್ಯಕ್ಷನದೇ ಉನ್ನತ ಸ್ಥಾನ. ಆತನದೇ ಅಂತಿಮ ಮಾತು. ಸಭೆ ನಡೆಸಿ ಕೊಡುವ ಜವಾಬ್ದಾರಿ ಆತನದೇ. ಅಧ್ಯಕ್ಷರ ಮಾತು ಮುಗಿದ ಮೇಲೆ ಬೇರೆಯವರ ಮಾತು ಇರುವುದಿಲ್ಲ; ಇದು ಸಭೆಯ ಕ್ರಮ ಮತ್ತು ಮರ್ಯಾದೆ.


ಹಿಂದೆ, ಅಧ್ಯಕ್ಷಸ್ಥಾನ ವಹಿಸಿದವರ ಮುಂದೆ ಒಂದು ಮೈಕ್ ಇರುತ್ತಿತ್ತು. ಉಳಿದ ಅತಿಥಿಗಳಿಗೆ/ಅಭ್ಯಾಗತರಿಗೆ ಮಾತಾಡಲು ಬೇರೆ ಇನ್ನೊಂದು ಮೈಕ್ ಇರುತ್ತಿತ್ತು. ಸಭಾಧ್ಯಕ್ಷನಾದವನು ವೇದಿಕೆಯ ಮಧ್ಯಭಾಗದಲ್ಲಿ ಕುಳಿತು ನಿರೂಪಕನ ಕೆಲಸವನ್ನೂ ಮಾಡುತ್ತ ಇಡೀ ಸಭೆಯನ್ನು ತಾವೇ ನಿರ್ವಹಿಸುತ್ತಿದ್ದರು.


ನಾನು ಚಿಕ್ಕವನಿದ್ದಾಗ ಇಂತಹ ಹತ್ತು ಹಲವು ಸಭೆಗಳನ್ನು ಕಂಡಿದ್ದೇನೆ. ಆಗ 'ನಿರೂಪಕ' ಎಂಬ ಸ್ಥಾನವೇ ಇರಲಿಲ್ಲ. ಸಭೆಯ ಕಾರ್ಯಸೂಚಿಯ ಪ್ರಕಾರ ಅಧ್ಯಕ್ಷರೇ ಸಭೆಯ ಕಲಾಪವನ್ನು ನಡೆಸಿಕೊಡುತ್ತಿದ್ದರು. ಅಧ್ಯಕ್ಷರಿಗಾಗಿ ಮೀಸಲಿಟ್ಟ ಮೈಕ್ ಅನ್ನು ಇತರರು ಬಳಸುತ್ತಿರಲಿಲ್ಲ.


ಕೇರಳದಲ್ಲಿ ಹೆಚ್ಚಿನ ಸಭೆ ಸಮಾರಂಭಗಳಲ್ಲಿ ಇವತ್ತಿಗೂ ಅಧ್ಯಕ್ಷನೇ ಸಭಾ ನಿರ್ವಹಣೆಯ ಜವಾಬ್ದಾರಿ ನಿರ್ವಹಿಸುತ್ತಾನೆ. ಯಾರಾದರೂ ಅವಧಿ ಮೀರಿ ಮಾತಾಡಿದಾಗ ಅಧ್ಯಕ್ಷನೇ ಅದನ್ನು ನಿಯಂತ್ರಿಸುವ ಕೆಲಸ ಮಾಡುತ್ತಾನೆ; ಕಲಾಪವನ್ನು ಚೊಕ್ಕವಾಗಿ ನಿರ್ವಹಿಸಿಕೊಂಡು ಹೋಗುತ್ತಾನೆ. ಕೇರಳದಲ್ಲಿ ಈ ನಿರೂಪಕನ ಹಾವಳಿ ಇಲ್ಲ.


ಆದರೆ ನಮ್ಮಲ್ಲಿ ಇತ್ತಿತ್ತಲಾಗಿ ಈ 'ನಿರೂಪಕ' ಎಂಬವನು ಹೊಸದಾಗಿ ಸೇರಿಕೊಂಡು ತಲೆಯ ಭಾರಕ್ಕಿಂತ ಮುಂಡಾಸಿನ ಭಾರ ಅಧಿಕ ಎಂಬಂತಾಗಿದೆ! ಅಧ್ಯಕ್ಷರ ಜವಾಬ್ದಾರಿ ಕಡಿಮೆ ಮಾಡಲು ಈ ನಿರೂಪಕನೆಂಬ ನಿಯಂತ್ರಕ ಮಧ್ಯೆ ಪ್ರವೇಶಿಸಿರಬಹುದು, ಆದರೆ ಈಚೀಚೆಗಂತೂ ಅಧ್ಯಕ್ಷರ ಸ್ಥಾನಕ್ಕೆ ಚ್ಯುತಿ ತರುವ ಹಂತಕ್ಕೆ ಬಂದು ನಿಂತಿದೆ. ಕೆಲವೊಮ್ಮೆ ಈತನೇ ಭಾಷಣ ಬಿಗಿದುಬಿಡುವ ಸನ್ನಿವೇಶವೂ ನಿರ್ಮಾಣವಾಗಿ ಬಿಡುತ್ತಿದೆ!


ನಿರೂಪಕ ಮಧ್ಯೆ ಮಧ್ಯೆ ಕೇವಲ ಒಂದೆರಡು ಮಾತುಗಳಲ್ಲಿ ತನ್ನ ನಿರೂಪಣೆಯ ಕೆಲಸವನ್ನಷ್ಟೇ ಮಾಡಿದರೆ ಅಡ್ಡಿಯಿಲ್ಲ. ಆತ ಹೇಳಬೇಕಾಗಿರುವುದು ಸಭೆಯ ನಡಾವಳಿಯಲ್ಲಿರುವ ವಿವರಗಳನ್ನು ಮಾತ್ರ, ಅಂದರೆ ಕ್ರಮಾಗತವಾಗಿ ಜೋಡಿಸಿ ಹೇಳುವ (linking sentences) ಕೆಲಸ ಮಾತ್ರ. ಭಾಷಣ ಬಿಗಿಯುವುದು, ವಿಮರ್ಶಿಸುವುದು, ವಿಶ್ಲೇಷಿಸುವುದು, ಭಾಷಣಕಾರರ ಭಾಷಣಗಳ ಸಾರಾಂಶ ಹೇಳುವುದು ಕಾರ್ಯಕ್ರಮ ನಿರೂಪಕನ ಕೆಲಸವಲ್ಲ.


ಕಾರ್ಯಕ್ರಮ ಸಂಘಟಕರು ಮತ್ತು ಸ್ವತಃ ನಿರೂಪಕರಾದವರು ಈ ಕಡೆಗೆ ಗಮನ ಹರಿಸುವ ಅಗತ್ಯವಿದೆ. ಎಷ್ಟು ಬೇಕೋ ಅಷ್ಟೇ ಮಾತಾಡಿದರೆ ಅದಕ್ಕೆ ಗೌರವ ಮತ್ತು ಬೆಲೆ.


- ಡಾ. ವಸಂತಕುಮಾರ ಪೆರ್ಲ

106 views1 comment
bottom of page