top of page

ತಾಯಿ ತಂದೆ ನಿಜ ದೈವ

ನಸುಕಿನಲೆದ್ದು ಹೊಲಕ್ಕೆ ಹೊರಟಿದ್ದ ಅಪ್ಪ.

ಮಲಗಿದ್ದ ಮಕ್ಕಳ ಎಬ್ಬಿಸುವ ಅಮ್ಮ ಜ್ವರದಿಂದ ಬಳಲುವ ಕಂದಗೆ ತಣ್ಣೀರಪಟ್ಟಿ ಹಣೆಗಿಡುತ್ತಿದ್ದಳು ಜ್ವರ ನೆತ್ತಿಗೇರದಿರಲೆಂದು.

ಹಣೆಗಿತ್ತ ಪಟ್ಟಿಯ ಮೇಲುದುರಿ ತಣಿಯುತಿತ್ತು ಅಮ್ಮನ ಕಣ್ಣ ಬಿಸಿ ಬಿಂದು.


ಅಪ್ಪ ಅದೇಕೋ ಮೌನ.

ಹೊಲದ ಬೆಳೆಗೆ ದನಗಳ ಕಾಟ

ಬಯಲಿಗೆಲ್ಲಿಯ ಬೇಲಿ?

ಅವಸರದಲಿ ಬಂದ ಅಪ್ಪ ನಿಂತಲ್ಲಿಯೇ ಗಂಜಿ ಕುಡಿದು ಮಗುವ ಹೆಗಲಮೇಲೆ ಹೊತ್ತು ನಡೆದೇ ಸಾಗಬೇಕಿದೆ ಆಸ್ಪತ್ರೆಗೆ ಹನ್ನೊಂದು‌ ಮೈಲಿ.


ಬಾಳ ಬಂಡಿಯ ನೊಗ ಹೊತ್ತ ಅಪ್ಪಎಲ್ಲರ ಹಸಿವ ಹಿಂಗಿಸಲು ಇದ್ದುದು ಪುಟ್ಟ ಬೇಸಾಯ.

ಜೀವವಿದ್ದರೆ ಮೂರು ಲೋಕವಿದ್ದಂತೆ ಎನ್ನುತ್ತಾ ವೈದ್ಯರ ಮುಂದೆ ಮಗುವನಿಟ್ಟ.

ಏನೆನ್ನುವರೋ ವೈದ್ಯರು ಅಪ್ಪನ ಕಂಗಳಲ್ಲಿ ಆತಂಕದ ನೋಟ.


ಒರಳಿನಲಿ ಭತ್ತ ಕುಟ್ಟಿ ಅಕ್ಕಿಯೆತ್ತಿ ತುತ್ತು ಅನ್ನಕ್ಕಾಗಿ ದೇಹ ಸವೆಸಿದ ಶ್ರಮಿಕರಿವರು

ನಮ್ಮ ಹೆತ್ತವರು.

ಧನಮೋಹ ಇವರಿಗಿಲ್ಲ. ಮಕ್ಕಳೇ ಆಸ್ತಿ ‌ವಿದ್ಯೆಯೇ ಸಂಪತ್ತು.

ಅಪ್ಪನ ಹೆಜ್ಜೆಯೊಂದಿಗೆ ತನ್ನ‌ ಹೆಜ್ಜೆಯನಿಡುವ ಅಮ್ಮ ಅಪ್ಪನಿಗೆ ‌ತಾಕತ್ತು.


ಅಪ್ಪ ಬದುಕಿನ ಕೋಳ್ಗಂಬ

ದುಡಿಮೆಗೆ ಅಮ್ಮ ಅಪ್ಪನ ಪ್ರತಿಬಿಂಬ.

ಇಂಥವರ ಮಕ್ಕಳೆಂಬುದೇ ನಮ್ಮ ಪುಣ್ಯ. ತಾಯಿ-ತಂದೆಯೇ ನಿಜ ದೈವವೆಂಬುದು ಸಾರ್ವಕಾಲಿಕ ಸತ್ಯ.


ಸಾವಿತ್ರಿ ಮಾಸ್ಕೇರಿ

6 views0 comments
bottom of page