top of page

ಟಿ.ಎಸ್.ವೆಂಕಣ್ಣಯ್ಯ ಅವರು





ಇಂದು ಅವರ ಜನ್ಮದಿನ

********************

ಕನ್ನಡ ಸಾಹಿತ್ಯಕ್ಕೆ ಭದ್ರ ತಳಹದಿ ಹಾಕಿದ ಮಹಾಗುರು

ಟಿ. ಎಸ್. ವೆಂಕಣ್ಣಯ್ಯನವರು

******************************************

" ತಳುಕಿನ ವೆಂಕಣ್ಣಯ್ಯ/ ತಳುಕಿನ ಶಾಮರಾಯರು...

ಇವರು ಕನ್ನಡ ಸಾಹಿತ್ಯದ ಅಶ್ವಿನೀಕುಮಾರರೆಂದೇ ಖ್ಯಾತಿವೆತ್ತವರು. ನವೋದಯ ಕನ್ನಡ ಸಾಹಿತ್ಯದ ಬೆಳವಣಿಗೆಗೆ ಇವರಿಬ್ಬರೂ ಭದ್ರ ನೆಲೆಗಟ್ಟು ಹಾಕಿಕೊಟ್ಟವರು. ಇವರಲ್ಲಿ ಹಿರಿಯರಾದ ವೆಂಕಣ್ಣಯ್ಯನವರು ೧೮೮೫ ಅಕ್ಟೋಬರ್ ಒಂದರಂದು ಶಿರಸ್ತೇದಾರ ಸುಬ್ಬಣ್ಣ- ವೆಂಕಮ್ಮನವರ ಹಿರಿಯ ಮಗನಾಗಿ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ತಳಕು ಎಂಬ ಪುಟ್ಟ ಗ್ರಾಮದಲ್ಲಿ ಜನಿಸಿದರು. ಹನ್ನೆರಡು ಮಕ್ಕಳಲ್ಲಿ ಇವರು ಮೊದಲಿಗರು. ತಂದೆ, ಚಿಕ್ಕಪ್ಪ ಎಲ್ಲ ಸಾಹಿತ್ಯಪ್ರಿಯರಾದ್ದರಿಂದ ವೆಂಕಣ್ಣಯ್ಯನವರಲ್ಲೂ ಪುಸ್ತಕ ಓದುವ ಅಭಿರುಚಿ‌ ಬೆಳೆಯಿತು.

೧೯೧೨ ರಲ್ಲಿ ಎಂ. ಎ. ಪಾಸಾಗಿ ಧಾರವಾಡದ ಬಾಸೆಲ್ ಮಿಶನ್ ಹೈಸ್ಕೂಲಿನಲ್ಲಿ ೨ ವರ್ಷ ಅಧ್ಯಾಪಕರಾಗಿ , ನಂತರ ಬೆಂಗಳೂರಿನ ಸೆಂಟ್ ಜೊಸೆಫ್, ದೊಡ್ಡಬಳ್ಳಾಪುರಗಳಲ್ಲಿ ಕೆಲಸ ಮಾಡಿ ಆ ಮೇಲೆ ಸೆಂಟ್ರಲ್ ಕಾಲೇಜಿನಲ್ಲಿ ಕನ್ನಡ ಟ್ಯೂಟರ್ ಆದರು. ೧೭ ನೇ ವಯಸ್ಸಿನಲ್ಲೇ ಮದುವೆ ಆಗಿತ್ತು. ಮೊದಲ ಪತ್ನಿ ಭಾಗೀರಥಮ್ಮ ೨೨ ವರ್ಷ ಸಂಸಾರ ಮಾಡಿ ನಿಧನರಾದ ನಂತರ ಎರಡನೆಯ ಪತ್ನಿಯಾಗಿ ರುಕ್ಮಿಣಮ್ಮನವರನ್ನು ಮದುವೆಯಾದರು. ೧೯೨೬ ರಲ್ಲಿ ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ಪ್ರಾಧ್ಯಾಪಕರಾದರು. ಒಬ್ಬ ಆದರ್ಶ ಪ್ರಾಧ್ಯಾಪಕರಾಗಿ ಹೆಸರು ಗಳಿಸಿದ ವೆಂಕಣ್ಣಯ್ಯನವರನ್ನು ಕುವೆಂಪು , ವಿಸೀ‌ ಮೊದಲಾದವರೆಲ್ಲ ತಮ್ಮ ಗುರುವೆಂದು ಸ್ವೀಕರಿಸಿದ್ದರಲ್ಲದೆ ಕುವೆಂಪು ಅವರು ತಮ್ಮ ಶ್ರೀ ರಾಮಾಯಣ ದರ್ಶನಮ್ ಮಹಾಕಾವ್ಯವನ್ನು ಈ ಮಹಾ ಗುರುವಿಗೇ ಅರ್ಪಿಸಿದ್ದರು.

೫೪ ವರ್ಷ ಬದುಕಿ ೧೯೩೯ ರಲ್ಲಿ ನಿಧನರಾದ ಟಿ. ಎಸ್. ವೆಂಕಣ್ಣಯ್ಯ ತಾವು ಬರೆದದ್ದಕ್ಕಿಂತ ಇತರರಿಂದ ಬರೆಸಿದ್ದೇ ಹೆಚ್ಚು. ಅವರ ಕೃತಿಗಳ ಸಂಖ್ಯೆ ಬಹಳ ದೊಡ್ಡದಲ್ಲದಿದ್ದರೂ ಬರೆದವುಗಳೆಲ್ಲ ಮೌಲಿಕವಾದವುಗಳಾಗಿವೆ. ರಾಮಕೃಷ್ಣ ಪರಮಹಂಸರ ಜೀವನಚರಿತ್ರೆ, ಪ್ರಾಚೀನ ಸಾಹಿತ್ಯ, ಕನ್ನಡ ಭಾಷಾ ಚರಿತ್ರೆ, ಸಾಹಿತ್ಯ ಚರಿತ್ರೆ, ಮೊದಲಾ ಕೃತಿಗಳ ಜೊತೆಗೆ ಹರಿಶ್ಚಂದ್ರ ಕಾವ್ಯಸಂಗ್ರಹ, ಕರ್ನಾಟಕ ಕಾದಂಬರೀ ಸಂಗ್ರಹ , ಬಸವರಾಜದೇವರ ರಗಳೆ, ಸಿದ್ಧರಾಮ ಚಾರಿತ್ರ ಮೊದಲಾದವುಗಳ ಸಂಪಾದನಾ ಕಾರ್ಯ ಮಾಡಿದರು. ಡಿ. ಎಲ್. ನರಸಿಂಹಾಚಾರ್, ಎ. ಆರ್. ಕೃಷ್ಣಶಾಸ್ತ್ರಿ, ಬಿಎಂಶ್ರೀ ಮೊದಲಾದವರು ಅವರೊಡನೆ ಸಾಹಿತ್ಯ ಸಂಪಾದನಾ ಕಾರ್ಯ ಮಾಡಿದರು.

ವೆಂಕಣ್ಣಯ್ಯ ಮಹಾಗುರುವಾದಂತೆ ಮಹಾಮಾನವರೂ ಆಗಿದ್ದರು. ಜೀವನದುದ್ದಕ್ಕೂ ಇತರರಿಗೆ ಸಹಾಯ ಮಾಡುವದರಲ್ಲೇ ಸಂತೋಷವನ್ನು ಅನುಭವಿಸಿದರು. ಉದಯೋನ್ಮುಖ ಬರೆಹಗಾರಿಗೆ ಉತ್ತೇಜನ ನೀಡಿ ಬೆಳೆಸಿದರು. ಅವರಿಂದ ಸಾಹಿತ್ಯ ಕ್ಷೇತ್ರದಲ್ಲಿ ಬೆಳೆದವರು ಹಲವರು. ಕನ್ನಡ ಸಾಹಿತ್ಯ ಪರಿಷತ್ತಿನ ಏಳ್ಗೆಗಾಗಿ ಶ್ರಮಿಸಿದವರಲ್ಲಿ ಅವರೂ ಒಬ್ಬರು. ಸೆಂಟ್ರಲ್ ಕಾಲೇಜಿನಲ್ಲಿ ಕರ್ನಾಟಕ ಸಂಘವನ್ನು ಸ್ಥಾಪಿಸಿ ಪ್ರಬುದ್ಧ ಕರ್ನಾಟಕದಂತಹ ಪ್ರಬುದ್ಧ ಪತ್ರಿಕೆಯನ್ನು ಪ್ರಾರಂಭಿಸಿದ್ದು ಅವರ ಹೆಗ್ಗಳಿಕೆಯಾಗಿತ್ತು.

ಕನ್ನಡದ ಬೆಳವಣಿಗೆಯ ಪ್ರಾರಂಭದ ಕಾಲದಲ್ಲಿ ತಳುಕಿನ ವೆಂಕಣ್ಣಯ್ಯನವರಂತಹ ಹಿರಿಯರು ಮಾಡಿದ ಕೆಲಸ ಎಂದೂ ಮರೆಯಲಾಗದ್ದು. ತಮ್ಮ ಘನ ವ್ಯಕ್ತಿತ್ವದಿಂದ ಟಿ. ಎಸ್. ವೆಂಕಣ್ಣಯ್ಯನವರು ಸಹ ಮರೆಯಲಾಗದ ಮಹಾನುಭಾವರೆನಿಸಿದ್ದಾರೆ.

- ಎಲ್. ಎಸ್. ಶಾಸ್ತ್ರಿ

ಟಿ.ಎಸ್.ವೆಂಕಣ್ಣಯ್ಯ ಮತ್ತು‌ಎ.ಆರ್.ಕೃಷ್ಣ ಶಾಸ್ತ್ರಿ ಅವರನ್ನು ಕನ್ನಡದ ಅಶ್ವಿನಿ ದೇವತೆಗಳೆಂದು ಕರೆಯಲಾಗುತ್ತದೆ. ಮಹಾಕವಿ ಕುವೆಂಪು ಅವರು ಅತ್ಯಂತ ಗೌರವದಿಂದ ಕಾಣುತ್ತಿದ್ದ ಟಿ.ಎಸ್.ವೆಂಕಣ್ಣಯ್ಯ ಅವರ ಬಗ್ಗೆ ಹಿರಿಯ ಸಾಹಿತಿಗಳಾದ ಎಲ್.ಎಸ್.ಶಾಸ್ತ್ರಿ ಅವರು ಬರೆದ ಲೇಖನ ನಿಮ್ಮ ಓದಿಗಾಗಿ. ಡಾ.ಶ್ರೀಪಾದ ಶೆಟ್ಟಿ ಸಂ.ಆಲೋಚನೆ.ಕಾಂ






19 views0 comments
bottom of page