top of page

ಜಲ ಜಾನಪದ

ನಮ್ಮ ಆಲೋಚನೆ.ಕಾಂ ನ ಅಮೂಲ್ಯ ಆಸ್ತಿಯಾಗಿರುವ

ಡಾ.ವಸಂತಕುಮಾರ ಪೆರ್ಲ ಅವರು ಅಧ್ಯಯನಶೀಲರು,ಸಂಶೋಧಕರು,ದಣಿವರಿಯದ ಬರಹಗಾರರು,ಜಾನಪದದ ಕುರಿತು‌‌ಅಪಾರವಾದ ಆಸಕ್ತಿಯನ್ನು ಹೊಂದಿದವರು,ಜಾನಪದ ವಿದ್ವಾಂಸರು ಎನಿಸಿಕೊಂಡವರು ಗಮನ ಹರಿಸಿದ ಕನ್ನೆ ನೆಲವನ್ನು‌ ಅಗೆದು ಅರಿವಿನ ಕಾರಂಜಿಯನ್ನು ಚಿಮ್ಮಿಸಬಲ್ಲ ಶಕ್ತ ಸಾಹಿತಿ ಅವರು.

ನೀರಿನ ಕುರಿತು‌ ಅವರು ಬರೆದ 'ಜಲ ಜಾನಪದ' ಎಂಬ ಅಂಕಣವನ್ನು ನೀವು ಓದಿ ಸ್ಪಂದಿಸಿದರೆ ನೀರಿನ ಕುರಿತು ಒಂದು ಹೆಬ್ಬೊತ್ತಿಗೆಗೆ ಸಾಕಾಗುವಷ್ಟು‌ಸಾಮಗ್ರಿ ಬೆಳೆದೀತು.

' ಮಳ್ಳಾದರು ತಾಯಿ ನೀರಾದರು ಮಜ್ಜಿಗೆ' ಜನಪದ ಗಾದೆ. " ' ನೀರು ನೀರಡಿಸಿತ್ತು' ಅಲ್ಲಮನ ವಚನ. ' ಹರಿವ‌ನೀರಿಗೆ ಮೈಯೆಲ್ಲ ಕಾಲು' ಎಂಬ ಅಲ್ಲಮ ಪ್ರಭುವಿನ ವಚನ ನೀರಿನ ಮಹತ್ವವನ್ನು ಸಾರಿ ಹೇಳುತ್ತದೆ. ನೀರಿನ ಕುರಿತ ಇಷ್ಟೆಲ್ಲ ಸಂಗತಿಗಳನ್ನು ಸಂಗ್ರಹಿಸಿ ಬರೆದ ಡಾ.ಪೆರ್ಲ ಅವರಿಗೆ ಆತ್ಮೀಯ ಅಭಿವಂದನೆಗಳು. ಸಂಪಾದಕ ಆಲೋಚನೆ.ಕಾಂ







ಡಾ. ಪೆರ್ಲರ ಅಂಕಣ – 22

' ವಸಂತೋಕ್ತಿ’


ನದಿ ತಟಾಕ ಕೆರೆಕಟ್ಟೆ ಮದಕ ಹಳ್ಳತೋಡು ಹೊಂಡ ಸರೋವರ ಝರಿ ಒಸರು ಮುಂತಾದ ಜಲಮೂಲಗಳ ಬಗ್ಗೆ ಮತ್ತು ಜಲದ ಪ್ರಾಮುಖ್ಯದ ಬಗ್ಗೆ ನಮ್ಮ ಜನಪದರ ಜ್ಞಾನವನ್ನು ಜಲಜಾನಪದ ಎಂದು ಕರೆದಿದ್ದೇನೆ. ಜನಪದರ ನೀರಿನ ಸಂಗ್ರಹ ವಿಧಾನ, ನೀರಿನ ನಿರ್ವಹಣೆ ಮತ್ತು ನೀರಿನ ವಿವಿಧ ಉಪಯೋಗದ ತಿಳಿವಳಿಕೆಯು ಜಲಜಾನಪದ ವ್ಯಾಪ್ತಿಯಲ್ಲಿ ಬರುತ್ತದೆ.

ಕಾಲಕಾಲಕ್ಕೆ ಎದುರಾದ ಬರ ಮನುಕುಲ ಎದುರಿಸಿದ ಭೀಕರ ಸನ್ನಿವೇಶಗಳಲ್ಲಿ ಒಂದು. ಇತಿಹಾಸದ ಕಾಲಘಟ್ಟದಲ್ಲಿ ಬರದಿಂದಾಗಿ ಕೋಟ್ಯಾಂತರ ಜನರು (ಮತ್ತು ಎಲ್ಲ ರೀತಿಯ ಜೀವಿಗಳು ಕೂಡ) ಸತ್ತು ಹೋಗಿದ್ದಾರೆ. ದೊಡ್ಡ ದೊಡ್ಡ ವಲಸೆಗಳು ಸಂಭವಿಸಿವೆ. ಮನುಷ್ಯನ ಭಾಷೆ ಮತ್ತು ಸಂಸ್ಕೃತಿಯ ಮೇಲೆ ಕೂಡ ಬರವು ಕರಿನೆರಳನ್ನು ಚಾಚಿದೆ. ಜೀವಜಾಲಗಳ ಹುಟ್ಟಿನಿಂದಲೇ ನೀರು ಎಷ್ಟೊಂದು ಪ್ರಮುಖ ಪಾತ್ರವನ್ನು ವಹಿಸುತ್ತ ಬಂದಿದೆ ಎಂಬುದನ್ನು ಇದರಿಂದ ತಿಳಿದುಕೊಳ್ಳಬಹುದು. ಬದುಕಿಗೆ ಅತ್ಯಗತ್ಯವಾದ ನೀರು ಇಲ್ಲದಿದ್ದರೆ ನಮ್ಮ ಬದುಕೇ ಇಲ್ಲ. ಮನುಷ್ಯನ ವಾಸಸ್ಥಾನ ನೀರಿನ ಮೂಲಗಳ ಬಳಿಯಲ್ಲಿಯೇ ಇರುತ್ತಿತ್ತು ಮತ್ತು ಎಲ್ಲ ನಾಗರಿಕತೆಗಳೂ ನದೀದಡದಲ್ಲಿ ಹುಟ್ಟಿ ವಿಕಾಸಗೊಂಡವುಗಳು.

ವಿಜ್ಞಾನ ಮತ್ತು ಆಧುನಿಕ ತಂತ್ರಜ್ಞಾನದಿಂದಾಗಿ ನಾವು ದೊಡ್ಡ ದೊಡ್ಡ ಅಣೆಕಟ್ಟುಗಳನ್ನು ಕಟ್ಟಿ ನೀರಿನ ಅಭಾವವನ್ನು ಸ್ವಲ್ಪಮಟ್ಟಿಗೆ ನೀಗಿದ್ದೇವೆ, ಕಾಲುವೆ-ಕೊಳಾಯಿಗಳ ಮೂಲಕ ಬೇಕಾದೆಡೆಗೆ ನೀರು ಹರಿಯುವಂತೆ ಮಾಡಿದ್ದೇವೆ, ಮೋಡಬಿತ್ತನೆ ಮಾಡಿ ಮಳೆ ಸುರಿಯುವಂತೆ ಮಾಡಿದ್ದೇವೆ ಎಂದೆಲ್ಲ ನಾವು ಭಾವಿಸಬಹುದು. ಆದರೆ ಆಧುನಿಕ ಕಾಲದ ಜಲನಿರ್ವಹಣೆಗಿಂತ ಜನಪದರ ಜಲನಿರ್ವಹಣೆ ಚೆನ್ನಾಗಿತ್ತು ಎಂಬುದನ್ನು ಅಧ್ಯಯನದ ಬಳಿಕ ಕಂಡುಕೊಳ್ಳಬಹುದು!

ಭೂವಿಜ್ಞಾನಿಗಳು ಉತ್ಖನನ ನಡೆಸಿರುವ ಪ್ರಾಕ್ತನ ಪ್ರದೇಶ ಹರಪ್ಪಾ-ಮೊಹೆಂಜೊದಾರೊದಲ್ಲಿ ಕೂಡ ನೀರಿನ ನಿರ್ವಹಣೆಯ ಅತ್ಯಂತ ವಿಶಿಷ್ಟ ಮತ್ತು ಯೋಜನಾಬದ್ಧ ಕಾಮಗಾರಿಗಳು ಕಂಡುಬಂದಿದೆ ಎಂಬುದು ನೀರಿನ ಬಗೆಗಿನ ಜನಪದರ ತಿಳಿವಳಿಕೆಯನ್ನು ಶ್ರುತಪಡಿಸುವ ಅಂಶ.

ಕ್ರಿ. ಶ. 1136 ರಲ್ಲಿ ಪರಮಾರ ರಾಜವಂಶದ ಭೋಜರಾಜ ಎಂಬಾತ ಭೋಜ್’ಪುರಿಯಲ್ಲಿ (ಭೋಪಾಲ) ಅತೀದೊಡ್ಡ ಸರೋವರ ಕಟ್ಟಿಸಿದ ವಿಚಾರ ಚರಿತ್ರೆಯಲ್ಲಿ ದಾಖಲಾಗಿದೆ. ಅದು ಸುಮಾರು 25 ಮೈಲು ವಿಸ್ತಾರವಾಗಿತ್ತಂತೆ! ಕಾಲಕಳೆದಂತೆ ಒತ್ತುವರಿಯಾಗಿ, ನಿರ್ವಹಣೆ ಸಮರ್ಪಕವಾಗಿಲ್ಲದೆ ಈಗ ಕೇವಲ 5 ಮೈಲು ವಿಸ್ತಾರ ಪ್ರದೇಶದಲ್ಲಿ ಮಾತ್ರ ಆ ಸರೋವರ ಉಳಿದುಕೊಂಡಿದೆ.

ಕಡಪಾ ಜಿಲ್ಲೆಯ ಪೋರುಮಾಮಿಳ್ಳ ಎಂಬಲ್ಲಿ 15ನೇ ಶತಮಾನಕ್ಕೆ ಸೇರಿದ ಶಾಸನವೊಂದು ಲಭ್ಯವಾಗಿದ್ದು ಅದರಲ್ಲಿ ಆ ಪ್ರದೇಶದಲ್ಲಿ ಕಟ್ಟಿಸಲಾದ ದೊಡ್ಡ ಸರೋವರವೊಂದರ ಉಲ್ಲೇಖ ಇದೆ. ಸರೋವರವನ್ನು ಎಂತಹ ಪ್ರದೇಶದಲ್ಲಿ ಯಾರು ಹೇಗೆ ಕಟ್ಟಬೇಕೆಂಬ ನಿರ್ದೇಶ ಆ ಶಾಸನದಲ್ಲಿ ಇರುವುದು ವಿಶೇಷವಾಗಿದೆ. ಸರೋವರ ಮತ್ತು ಅಣೆಕಟ್ಟು ಕಟ್ಟಲು ಹನ್ನೆರಡು ಬಗೆಯ ವೈಶಿಷ್ಟ್ಯಗಳು ಇರಬೇಕಂತೆ. ಸರೋವರದ ಸುತ್ತ ಕಲ್ಲುಬಂಡೆಗಳ ರಕ್ಷಣೆ ಇರಬೇಕು, ರಾಜ ಅಥವಾ ಶ್ರೀಮಂತ ವ್ಯಕ್ತಿಗಳು ಸರೋವರ ಕಟ್ಟಿಸುವ ಕೆಲಸಕ್ಕೆ ಕೈಹಾಕಬೇಕು, ಅಡಿಪಾಯ (ತಳ) ಗಟ್ಟಿಯಾಗಿರುವ ಪ್ರದೇಶವನ್ನು ಆಯ್ದುಕೊಳ್ಳಬೇಕು, ನಿರಂತರ ನೀರು ತುಂಬಿಕೊಂಡಿರಲು ನೀರಿನ ಮೂಲ (ಸೆಲೆಗಳು) ಬಲವಾಗಿರಬೇಕು, ಕಟ್ಟೆ ಕಟ್ಟಲು ಮತ್ತು ತೂಬುಗಳನ್ನು ಇಡಲು ನುರಿತ ಕೆಲಸಗಾರರು ಇರಬೇಕು, ಸುತ್ತಮುತ್ತ ಬೆಟ್ಟಗುಡ್ಡಗಳಿರಬೇಕು, ನೀರಿನ ಗುಣವನ್ನು (quality) ಬಲ್ಲ ಜಲತಜ್ಞ ಜೊತೆಗೆ ಇರಬೇಕು, ಸುತ್ತಮುತ್ತ ಜನವಸತಿ ಇರುವ ಪ್ರದೇಶ ಆಗಿರಬೇಕು, ಕೃಷಿಜಮೀನು ಇರಬೇಕು, ಕಡಿಮೆ ವೆಚ್ಚದಲ್ಲಿ ಕಟ್ಟೆ ಕಟ್ಟುವಂತಿರಬೇಕು, ನೀರು ಕೆಳಮುಖವಾಗಿ ಹರಿಯುವ ಭೂಪ್ರದೇಶ ಆಗಿರಬೇಕು ಎಂದೆಲ್ಲ ನಿಯಮಗಳನ್ನು (conditions) ಹೇಳಿರುವುದು ಅದರಲ್ಲಿ ಕಂಡುಬರುತ್ತದೆ!

ರಾಜರು-ಅರಸಿಯರು ಮಾತ್ರವಲ್ಲ ಸೂಳೆಯರು ಕೆರೆ ಕಟ್ಟಿಸಿದ ಉಲ್ಲೇಖ ಚರಿತ್ರೆಯಲ್ಲಿ ಸಿಗುತ್ತದೆ. ಹೊಯ್ಸಳ ಲಕ್ಷ್ಮೀಧರ ಅಮಾತ್ಯನ ತಾಯಿ ಜೋಗುಳ ಹಾಡುವಾಗ ‘ಕೆರೆಯಂ ಕಟ್ಟಿಸು ಬಾವಿಯಂ ಸಮೆಸು ದೇವಾಗಾರಮಂ ಮಾಡಿಸು ಸೆರೆಯೊಳ್ ಸಿಕ್ಕ ಅನಾಥರಂ ರಕ್ಷಿಸು’ ಎಂದು ಬುದ್ಧಿಮಾತು ಹೇಳುತ್ತಿದ್ದಳಂತೆ. ಕೆರೆಕಟ್ಟಿಸುವುದು ಪುಣ್ಯಕಾರ್ಯ ಎಂಬ ನಂಬಿಕೆ ಜನಸಾಮಾನ್ಯರಲ್ಲಿತ್ತು.

ನೆರೆಯನ್ನು ನಿಯಂತ್ರಿಸಲು ಮತ್ತು ನಿರ್ವಹಣೆ ಮಾಡಲು ಕೂಡ ಜನಪದರು ಬಲ್ಲವರಾಗಿದ್ದರು. ಕಾಲುವೆಗಳನ್ನು ತೋಡಿ, ತಟಾಕಗಳನ್ನು ನಿರ್ಮಿಸಿ ನೆರೆಯನ್ನು ನಿಯಂತ್ರಿಸುತ್ತಿದ್ದರಂತೆ. ಕುಂದಾಪುರದ ಗಂಗೊಳ್ಳಿಯಲ್ಲಿ 1656 ರಲ್ಲಿ ಸುಬ್ಬು ಕೊಡಚ ಎಂಬಾತ ನೆರೆನಿಯಂತ್ರಣಕ್ಕಾಗಿ ಮಾಡಿದ ಯೋಜನೆಯೊಂದು ಗಮನ ಸೆಳೆಯುತ್ತದೆ. ಅದಕ್ಕೂ ಕೆಲವರ್ಷ ಹಿಂದೆ ಅಲ್ಲಿ ದೊಡ್ಡ ನೆರೆ ಬಂದು ಊರು ಮುಳುಗಿತಂತೆ. ಸುಬ್ಬು ಕೊಡಚ ನದಿ ಪಕ್ಕದಲ್ಲಿ ಕಾಲುವೆಗಳನ್ನು ನಿರ್ಮಿಸಿದ್ದಲ್ಲದೆ - ಚಾವಣಿಕೆರೆ, ಮೇರಂಡಿಕೆರೆ, ಸಂಧ್ಯಾವನಮಠ ಕೆರೆ, ದ್ಯಾವಣಿಕೆರೆ, ಮಣಕ್ಕಲಕೊಳ ಕೆರೆ, ಲಿಂಗಾಯತಮಠ ಕೆರೆ, ತಾವರೆಕೆರೆ ಹೀಗೆ ಏಳು ಕೆರೆಗಳನ್ನು ನಿರ್ಮಿಸಿದನಂತೆ. ಕವಿ ಗೋಪಾಲಕೃಷ್ಣ ಅಡಿಗರ ಸೋದರತ್ತೆ ಚಂದ್ರಮ್ಮ ಎಂಬವರು (ಕೊಡಚ ಕುಟುಂಬಕ್ಕೆ ವಿವಾಹವಾದವರು) ಆಶುಕವಿಗಳು. ತಮ್ಮ ಒಂದು ಕವನದಲ್ಲಿ ಈ ಕೆರೆಗಳನ್ನು ಕುರಿತು ‘ಹರಿವ ನದಿಯೊಳು ವನತಟಾಕವು ವರಕುಸುಮ ಮಲ್ಲಿಗೆ ಬನಗಳು/ ಉರುತರದ ಮಂಟಪಗಳು ಚೆಂದಾವರೆ ಕೊಳಗಳು’ ಎಂದು ಹಾಡಿ ಕೊಂಡಾಡಿದ್ದಾರಂತೆ. ಕವಿ ಅಡಿಗರು ಶಾಲೆ ಕಲಿತು ವಿದ್ಯಾವಂತರಾಗಲು ಪ್ರೇರಣೆ ಕೊಟ್ಟವರೇ ಈ ಚಂದ್ರಮ್ಮ ಎಂಬ ಆಶು ಕವಯಿತ್ರಿ ಎಂಬುದನ್ನು ಅಡಿಗರ ವಂಶಸ್ಥರು ಈಗಲೂ ನೆನಪಿಸಿಕೊಳ್ಳುತ್ತಾರೆ.

ಬೆಳ್ತಂಗಡಿಯ ಮುಂಡಾಜೆ ಬಳಿ ಹದಿನಾರನೇ ಶತಮಾನದಿಂದಲೇ ಮುಂಡಾಜೆ ನದಿಗೆ ಬೇಸಿಗೆಯಲ್ಲಿ ಊರವರೆಲ್ಲ ಸೇರಿ ಸಹಕಾರಿ ತತ್ತ್ವದಲ್ಲಿ ಕಾಡಿನ ಮರಮಟ್ಟು ಸೊಪ್ಪುಸದೆ ಕಲ್ಲುಮಣ್ಣು ಹಾಕಿ ಒಡ್ಡುಕಟ್ಟಿ ನೀರು ತುಂಬಿಸಿಕೊಳ್ಳುವ ಪದ್ಧತಿಯೊಂದು 1990 ರ ದಶಕದ ವರೆಗೂ ಚಾಲ್ತಿಯಲ್ಲಿತ್ತು. ಆಣೆಕಟ್ಟಿನಿಂದ ಕಾಲುವೆಗಳ ಮೂಲಕ ಮುಂಡಾಜೆ ಊರಿನ ನೂರಾರು ಕುಟುಂಬಗಳ ಜಮೀನಿಗೆ ವ್ಯವಸ್ಥಿತವಾಗಿ ನೀರು ಹರಿದು ಹೋಗುವ ಯೋಜನೆ ಅದಾಗಿತ್ತು. ದೇವಸ್ಥಾನ ಮತ್ತು ಪುರೋಹಿತರ ಮನೆ ಮುಂದೆ ವಾರದ ಏಳು ದಿನಗಳೂ ನೀರು ಹರಿಯುವ ವ್ಯವಸ್ಥೆ ಇತ್ತು. ಇತರರಿಗೆ ಎರಡು ದಿನಗಳಿಗೊಮ್ಮೆ ನೀರು ಸರಬರಾಜು. ಒಡ್ಡು ಕಟ್ಟಲು ಬೇಕಾದ ಕಲ್ಲುಮಣ್ಣು, ಮರಮಟ್ಟು, ಸೊಪ್ಪುಸದೆ ಮುಂತಾದವನ್ನು ಪಕ್ಕದ ಮೀಸಲು ಅರಣ್ಯದಿಂದ ಉಪಯೋಗಿಸಬಹುದೆಂಬ ಪರವಾನಿಗೆಯನ್ನು ಬ್ರಿಟಿಷ್ ಸರಕಾರ ನೀಡಿತ್ತು. ಆ ಆದೇಶದ ಪ್ರತಿ ಮತ್ತು ನೀರು ವಿತರಣೆಯ ನಕ್ಷೆಯನ್ನು ಮುಂಡಾಜೆಯ ಭಿಡೆ ವಂಶಜರ ಮನೆಯಲ್ಲಿ ನಾನು ನೋಡಿದ್ದೇನೆ. ಆಕಾಶವಾಣಿಯ ರೂಪಕ ವಿಭಾಗದಲ್ಲಿ ರಾಷ್ಟ್ರೀಯ ಮಟ್ಟದ ಸ್ಪರ್ಧೆಗಾಗಿ 1991 ರಲ್ಲಿ ನಾನು ‘ಮುಂಡಾಜೆ’ ಎಂಬ ಶೀರ್ಷಿಕೆಯಲ್ಲಿ ಈ ವಿಶಿಷ್ಟ ಅಣೆಕಟ್ಟು ಕಟ್ಟುವ ಮತ್ತು ಜಲವಿತರಣೆಯ ಕುರಿತು ಒಂದು ಶಬ್ದಚಿತ್ರವನ್ನು (documentary) ಮಂಗಳೂರು ಆಕಾಶವಾಣಿಗಾಗಿ ತಯಾರಿಸಿದ್ದೆ. ಆ ರೂಪಕ ತನ್ನ ವೈಶಿಷ್ಟದಿಂದ ಎಷ್ಟು ಜನಮೆಚ್ಚುಗೆ ಗಳಿಸಿತೆಂದರೆ ಕರ್ನಾಟಕದ ಎಲ್ಲ ಬಾನುಲಿ ಕೇಂದ್ರಗಳಿಂದ ಹತ್ತಾರು ಬಾರಿ ಅದು ಪ್ರಸಾರವಾಗಿದೆ.

ಹೊಂಡ ತೋಡಿ ನೀರು ತೆಗೆಯಲು ಜಲಮೂಲವನ್ನು ಹೇಳತಕ್ಕ ಪಾರಂಪರಿಕ ಮತ್ತು ಅತ್ಯಂತ ನಿಖರವಾದ ಶಾಸ್ತ್ರ ಜನಪದರಲ್ಲಿದೆ. ಸಮುದ್ರದಂಡೆಗೆ ಹೋದರೆ ನೀರನ್ನು ತಲೆಗೆ ಪ್ರೋಕ್ಷಿಸದೆ ಹಿಂತಿರುಗುವಂತಿಲ್ಲ. ಜನಪದರು ನೀರಿಗೆ ಮತ್ತು ನದಿಗೆ ಕೊಟ್ಟ ಪ್ರಾಮುಖ್ಯವು ‘ಗಂಗೇಚ ಯಮುನೇ ಚೈವ ಗೋದಾವರಿ ಸರಸ್ವತಿ ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು’ ಎಂಬ ಮಂತ್ರದಿಂದ ತಿಳಿದು ಬರುತ್ತದೆ. ನದಿಯ ಪಕ್ಕದಲ್ಲಿ ದೇವಸ್ಥಾನ ಇದ್ದರೆ ಅಲ್ಲಿನ ದೇವರಿಗೆ ಅಭಿಷೇಕಕ್ಕೆ ಆ ನದಿಯ ನೀರು ಬೇಕೇ ಬೇಕು. ಎಷ್ಟೇ ಗಡಿಬಿಡಿ/ತುರ್ತು ಇದ್ದರೂ ನಿಂತುಕೊಂಡು ನೀರು ಕುಡಿಯಬಾರದು (ಕುಳಿತು ಕುಡಿಯಬೇಕು) ಎಂಬುದು ನಮ್ಮ ಶಾಸ್ತ್ರವಿಧಿ (ಇದು ಆರೋಗ್ಯಸೂತ್ರವೂ ಹೌದು).

ಜನಪದರು ಜಲವನ್ನು ಗಂಗೆಯೆಂದು ಕಣ್ಣಿಗೆ ಮುಟ್ಟಿಕೊಳ್ಳುವರು. ಪೂಜಿಸಿದರೆ ಅವರಿಗದು ತೀರ್ಥ/ಅಗ್ಗವಣಿ, ಪ್ರೋಕ್ಷಿಸಿದರೆ ತೀರ್ಥೋದಕ, ಅಂತ್ಯಕಾಲದಲ್ಲಿ ಅದುವೇ ತುಳಸೀಜಲ. ಹೀಗೆ ಹುಟ್ಟಿನಿಂದ ಸಾವಿನ ವರೆಗೆ ಜೀವಿಗಳನ್ನು ಕಾಪಾಡುವ ಜಲವನ್ನು ದೇವತೆ ಎಂದು ನಮ್ಮ ಜನಪದರು ಪರಿಭಾವಿಸಿದರು. ಆಧುನಿಕರಲ್ಲಿ ಆ ಭಾವನೆ ಇದೆಯೇ?


ಡಾ.ವಸಂತಕುಮಾರ ಪೆರ್ಲ


60 views0 comments
bottom of page