top of page

ಜಯರಾಮ ಹೆಗಡೆ

Updated: Oct 4, 2023

ಆಲೋಚನೀಯ




ಕವಿ,ಪತ್ರಕರ್ತ,ಇಂಗ್ಲೀಷ್ ಉಪನ್ಯಾಸಕ,ಪತ್ರಿಕೋದ್ಯಮಿ,

ಅಂಕಣಕಾರ,ನೇರ ನಡೆ ನುಡಿಯ ನಿರ್ಭೀತ ವ್ಯಕ್ತಿ ನನ್ನ ವಿದ್ಯಾಗುರು. ಜಯರಾಮ ಹೆಗಡೆ ಅವರು ತಮ್ಮ ಮಿತ್ರರ ಗಡಣದಲ್ಲಿ ಜೆ.ಪಿ.ಹೆಗಡೆ ಎಂದೆ ಪರಿಚಿತರು. ನಿಮ್ಮ ಜೀವನದ ಗುರಿ ಏನು ಎಂದು ದಾರ್ಶನಿಕರಾದ ಜಿಡ್ಡು ಕೃಷ್ಣಮೂರ್ತಿ ಅವರನ್ನು ಪ್ರಶ್ನಿಸಿದಾಗ ಅವರು " My goal is to realise my life" ಎಂದು ಉತ್ತರಿಸಿದರಂತೆ ಹಾಗೆ ಕವಿ ಮತ್ತು ಮಾನವತಾವಾದಿ ಜಯರಾಮ ಹೆಗಡೆ ಅವರ ಪರಿ.

ಕಳೆದ ವರ್ಷ 2022 ಸಪ್ಟಂಬರ್ ತಿಂಗಳಲ್ಲಿ ಪ್ರಾಥಮಿಕ ಶಾಲೆಯಿಂದ ಕಾಲೇಜು ವರೆಗೆ ನನಗೆ ಕಲಿಸಿದ ಗುರುಗಳಿಗೆ ಗುರುವಂದನೆಯ ಕಾರ್ಯಕ್ರಮವು ಅದನ್ನು ನಾನು ಕಲಿತ ಹೊನ್ನಾವರ ತಾಲೂಕಿನ ಅರೆಅಂಗಡಿಯ ಶ್ರೀಕರಿಕಾನ ಪರಮೇಶ್ವರಿ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲ ಯದಲ್ಲಿ ನನ್ನ ವಿದ್ಯಾರ್ಥಿ ರಾಜೀವ ನಾಯಕ ವಿಶ್ರಾಂತತ ಜಂಟಿನಿರ್ದೇಶಕರು ಬೆಳಗಾವಿ ಇವರು ಉದ್ಘಾಟಿಸಿ ಶ್ರೀ ಸತ್ಯಾನಂದ ಜೆ.ಕೈರನ್ ಅವರ ಅಧ್ಯಕ್ಷತೆಯಲ್ಲಿ ನನಗೆ ಕಲಿಸಿದ ಗುರುಗಳಾದ ಸರ್ವಶ್ರೀ ಡಾ.ಎನ್.ಆರ್.ನಾಯಕ, ವಿ.ಎಸ್.ಹೆಗಡೆ ಮೂರೂರು,ಕೆ.ಎಸ್.ಹೆಗಡೆ ಕಾಜನಮನೆ ಸಾಲಕೋಡ, ಎಸ್.ಜಿ.ಹೆಗಡೆ ಗುಡ್ಡೆಬಾಳು,ಎನ್.ಎಲ್.ಹೆಗಡೆ ಸಂತೆಗುಳಿ ಇವರುಗಳಿಗೆ ಹಾರ ಹಾಕಿ ಶಾಲು ಹೊದೆಸಿ ನಾನು ಬರೆದ ಪುಸ್ತಕ ಹಾಗು ಸ್ಮರಣಿಕೆ ನೀಡಿ ಗುರುವಂದನೆ ಸಲ್ಲಿಸಿದೆನು. ಆ ಸಂದರ್ಭದಲ್ಲಿ ನನಗೆ ಪಿ.ಯು.ಸಿ. ಯಲ್ಲಿ‌ಇಂಗ್ಲೀಷ್ ಕಲಿಸಿದ ಹಾಗು ಬರವಣಿಗೆಗೆ ನನ್ನನ್ನು ತಮ್ಮ ನಡೆ ಮತ್ತು ನುಡಿಯ ಮೂಲಕ ತೊಡಗಿಸಿದ ಜಯರಾಮ ಹೆಗಡೆಯವರನ್ನು ಅನಿವಾರ್ಯ ಕಾರಣಗಳಿಂದ ಗುರುವಂದನೆ ಸಲ್ಲಿಸಲು ಸಾಧ್ಯವಾಗಿರಲಿಲ್ಲ. ಅದನ್ನು 2023 ಸಪ್ಟಂಬರ 28 ರಂದು ಗುರುವಾರ ಸಂಜೆ ಅವರ ಮನೆಗೆ ಸಪತ್ನಿಕನಾಗಿ ಹೋಗಿ ಗುರುವಂದನೆಯನ್ನು ಸಲ್ಲಿಸಿ ಬಂದೆನು. ಈ ಸಂದರ್ಭದಲ್ಲಿ ಸಾಹಿತಿ ಮಿತ್ರ ಅಶೋಕ ಹಾಸ್ಯಗಾರ, ಲೇಖಕಿ ಡಾ.ವಿಜಯನಳಿನಿ ರಮೇಶ,ಕವಯತ್ರಿ ಗುರು ಪುತ್ರಿ ಸಿಂಧು ಚಂದ್ರ ಹಾಗು ಚಂದ್ರಶೇಖರ ಹೆಗಡೆ ಗುರುಪತ್ನಿ‌ ಸೌ.ರೇವತಿ ಹೆಗಡೆ ಇವರು ನಮ್ಮೊಡನಿದ್ದರು.

ಗುರು ವಂದನೆ ಸ್ವೀಕರಿಸಿದ ಜಯರಾಮ ಹೆಗಡೆ ಅವರು ಇದು ನನಗೆ ಅತ್ಯಂತ ಸಂತಸ ನೀಡಿದ ಸಂದರ್ಭ. ನಮ್ಮ ಗುಣ ಮತ್ತು ನಡತೆಯನ್ನು ಸಮಾಜ ಯಾವ ರೀತಿ ಗ್ರಹಿಸುತ್ತದೆ ಮತ್ತು ಪ್ರತಿಕ್ರಿಯಿಸುತ್ತದೆ ಎಂಬುದರ ಅರಿವಾಯಿತು.ಸಾರ್ಥಕತೆಯ ಅನುಭೂತಿ ಮೂಡಿತು. ನಾನು ಎಂ.ಎ.ಮುಗಿಸಿ ಒಂದು ವರ್ಷದ ಮಾತಿಗೆ ಅರೆಅಂಗಡಿ ಪಿಯು ಕಾಲೇಜಿಗೆ ಉಪನ್ಯಾಸಕನಾಗಿ ಹೋಗಿದ್ದೆ. ಅಲ್ಲಿಯ ಶಿಕ್ಷಕ ವೃಂದ ಮತ್ತು ವಿದ್ಯಾರ್ಥಿಗಳು ನನ್ನ ವ್ಯಕ್ತಿತ್ವ ವಿಕಸನಕ್ಕೆ ಕಾರಣರಾದರು. ಅಂಥವರಲ್ಲಿ ಶ್ರೀಪಾದನು ಒಬ್ಬ. ಆತ ನನ್ನ ಮನೆಗೆ ಬಂದು ಸನ್ಮಾನಿಸಿದ್ದು ನನಗೆ ಅತ್ಯಂತ ಸಂತಸ ತಂದಿದೆ ಎಂದು ಹೇಳುತ್ತಾ ತಮ್ಮ ವೃತ್ತಿ ಜೀವನದ ಕೆಲವು ಸನ್ನಿವೇಶಗಳನ್ನು ತಮ್ಮ ಎಂಬತ್ತೊಂದರ ಹರೆಯದಲ್ಲಿ ಮೆಲುಕು ಹಾಕಿದರು. ಕವಿ ಸಿದ್ದಲಿಂಗ ಪಟ್ಟಣ ಶೆಟ್ಟಿಯವರು ಜಯರಾಮನಿಗೆ ಎಂದು ಕವಿತೆ ಬರೆದಿದ್ದನ್ನು ನೆನಪಿಸಿಕೊಂಡು ಖುಷಿಯಾದರು. ನಾನು ನನ್ನ 'ಜಯರಾಮ ಎಂದರೆ' ಎಂಬ ಕವನವನ್ನು ಅವರಿಗೆ ಅರ್ಪಿಸಿದೆ.

' ಮುಕ್ತ'ಎಂಬುದು ಜಯರಾಮ ಹೆಗಡೆ ಅವರ ಮೊದಲ ಕವನ ಸಂಕಲನ. ಡಾ.ಬುದ್ದಣ್ಣ ಹಿಂಗಮಿರೆ ಅವರು ಸಂಪಾದಿಸಿದ " ಹೊಸ ಜನಾಂಗದ ಕವಿತೆಗಳು" ಆ್ಯಂಥಾಲಜಿಯಲ್ಲಿ ಗುರುಗಳ 'ಹೆಣ್ಣು ಮತ್ತು ಬಚ್ಚಲು' ಕವಿತೆಯಿದೆ.

ಗುರು ಜಯರಾಮ ಅವರು ಸಿಂಧಗಿಯಲ್ಲಿ ,

ಅರೆಅಂಗಡಿಯಲ್ಲಿ,ಹಾಸನದಲ್ಲಿ ಇಂಗ್ಲೀಷ್ ಉಪನ್ಯಾಸಕರಾಗಿ ತದ ನಂತರ ಹಾಸನದ ಜನತಾ ಮಾಧ್ಯಮ ಪತ್ರಿಕೆಯ ಸಂಪಾದಕರಾಗಿ ಸುದೀರ್ಘ ಕಾಲ ಸೇವೆ ಸಲ್ಲಿಸಿ ಆ ಬಳಿಕ ಶಿರಸಿಗೆ ಬಂದು ಜನ ಮಾಧ್ಯಮ ಪತ್ರಿಕೆಯನ್ನು ಆರಂಭಿಸಿ ಉತ್ತರ ಕನ್ನಡ ಜಿಲ್ಲೆಯ ಪತ್ರಿಕೋದ್ಯಮದಲ್ಲಿ ಒಂಟಿ ಸಲಗದಂತೆ ದಿಟ್ಟತನದಿಂದ ಬದುಕಿದವರು. ತಮ್ಮ ಸಮಕಾಲೀನ ಮತ್ತು ಅಭ್ಯಾಸಪೂರ್ಣ ಸಂಪಾದಕೀಯ ಗಳ ಮೂಲಕ ಪತ್ರಿಕೆಗೆ ಗುರುತ್ವ ಮತ್ತು ಗಾಂಭೀರ್ಯವನ್ನು ತಂದು ಕೊಟ್ಟವರು. ಅವರ ಸಂಪಾದಕೀಯಗಳು,ಆತ್ಮ ಚರಿತ್ರೆ,ಕವನ ಸಂಕಲನಗಳು ಪ್ರಕಟವಾಗಿವೆ. ಆ ಬಗ್ಗೆ ಇನ್ನೊಮ್ಮೆ ಬರೆಯುವೆ. ಗುರುಗಳ ಮನೆಯಲ್ಲಿ ತುಂಬಾ ಆಪ್ತವಾಗಿ ನಡೆದ ಗುರುವಂದನೆಗೆ ಕವಿ ಅಶೋಕ ಹಾಸ್ಯಗಾರ,ಸಂಶೋಧಕಿ ಡಾ.ವಿಜಯ ನಳಿನಿ ರಮೇಶ ತಮ್ಮ ಅಭಿನಂದನ ಪರ ಮಾತುಗಳಿಂದ ಮೆರುಗು ನೀಡಿದರು. ಇಡಿ ಕಾರ್ಯಕ್ರಮದ ಹೊಣೆ ಹೊತ್ತು ಆಗು ಮಾಡಿದವರು ಗುರು ಪುತ್ರಿ ಕವಯತ್ರಿ ಸಿಂಧುಚಂದ್ರ ಹೆಗಡೆ. ಅವರ ಪ್ರೀತಿ ವಿಶ್ವಾಸ ಒಡನಾಟ ನನ್ನ ಬದುಕಿನಲ್ಲಿ ಹೀಗೆ ಇರಲಿ. ಗುರು ಜಯರಾಮ ಹೆಗಡೆ ಅವರು ಆರೋಗ್ಯವಂತರಾಗಿ ಬಹುಕಾಲ ಬಾಳಲಿ. ಗುರುವುಗಿಂತ ಹೆಚ್ಚಿನವರು ಯಾರು ಇಲ್ಲ. ( ನ ಗರೊರಧಿಕಂ ನ ಗುರೊರಧಿಕಂ).


‌ ಶ್ರೀಪಾದ ಶೆಟ್ಟಿ






85 views0 comments
bottom of page