top of page

ಜೀವಜಲದ ಜಾಡು ಹುಡುಕುವ ದಾರಿ

ಪುಸ್ತಕ - ಅಳುವ ನದಿಗಳು

ಕವಿ - ರಮೇಶ ಹಿರೇಜಂಬೂರ

ಪ್ರಕಾಶನ - ಜಾಗೃತಿ ಪ್ರಿಂಟರ್‍ಸ್

ಬೆಲೆ - ೧೦೦


ನನಗೆ ಯಾವಾಗಲೂ  ಒಬ್ಬ ಪತ್ರಕರ್ತ, ಅದರಲ್ಲೂ ದೃಶ್ಯ ಮಾಧ್ಯಮದಲ್ಲಿ ಇರುವ ಒಬ್ಬ ಕವಿತೆ ಬರೆದರೆ ಹೇಗಿರಬಹುದು ಎನ್ನುವುದನ್ನು ತಿಳಿಯುವ ಕುತೂಹಲ. ಹಾಗಿರತಕ್ಕಂತಹ, ಹೇಳಿರತಕ್ಕಂತಹ ಎನ್ನುವ ಶಬ್ಧಗಳೇ ಕವನದಲ್ಲೂ ಇರುತ್ತವೆಯೇ? ಪತ್ರಕರ್ತ ಮಿತ್ರ ರಮೇಶ ಹಿರೇಜಂಬೂರರ ಕವನ ಸಂಕಲನವನ್ನು ಅದೇ ಕುತೂಹಲದಿಂದಲೇ ಕೈಗೆತ್ತಿಕೊಳ್ಳಲು ಇದೇ ಕಾರಣ.

      ಹಕ್ಕಿ ಹಾರುತಿದೆ ನೋಡಿದಿರಾ ಕವಿತೆಯು ಅರೆ ಬೇಂದ್ರೆಯವರ ಕವಿತೆಯಲ್ಲವೇ ಎಂಬ ಕುತೂಹಲದಿಂದಲೇ ಓದಲು ತೊಡಗಿಸುತ್ತದೆಯಾದರೂ ಇಲ್ಲಿರುವ ಆಶಯ ಮಾತ್ರ ಬೇರೆಯೇ ಇದೆ. ಪಕ್ಷಿಗಳ ಪ್ರಪಂಚ ಬೇರೆಯದ್ದೇ ರೀತಿಯದ್ದು. ಎಲ್ಲೋ ಕೆಲವು ಹಕ್ಕಿಗಳನ್ನು ಬಿಟ್ಟರೆ ಹೆಚ್ಚಿನ ಹಕ್ಕಿಗಳಲ್ಲಿ ತಾಯಿ ಹಕ್ಕಿಯೇ ಯೋಗ್ಯವಾದ ಸುರಕ್ಷಿತ ಜಾಗ ಹುಡುಕಿ ಗೂಡು ಕಟ್ಟುತ್ತದೆ. ಮಳೆ, ಗಾಳಿಯಿಂದ ಹಾಳಾಗದಂತಹ ಜಾಗದಲ್ಲಿ ಅದು ಕಟ್ಟುವ ಗೂಡಿನ ಚಾಕಚಕ್ಯತೆಯನ್ನು ನೋಡಿಯೇ ತಿಳಿಯಬೇಕು. ಮನುಷ್ಯನ ಐಷಾರಾಮಿತನ ಇದರ ಶ್ರಮದ ಗೂಡಿನ ಮುಂದೆ ಏನೇನೂ ಅಲ್ಲ. ಒಬ್ಬೊಂಟಿಯಾಗಿ ಗೂಡು ಕಟ್ಟಿ ಮೆತ್ತನೆಯ ಎಲೆ, ಹತ್ತಿಗಳನ್ನು ಹಾಕಿ ಮೊಟ್ಟೆ ಇಡುತ್ತದೆ. ಎಷ್ಟೋ ದಿನಗಳ ಕಾಲ ಹೊರಗೆ ಆಹಾರ ಹುಡುಕಲೂ ಹೋಗದಂತೆ ಒಂದೇ ಜಾಗದಲ್ಲಿ ಕುಳಿತು ಕಾವು ಕೊಟ್ಟು ಮರಿ ಮಾಡುತ್ತದೆ. ಗೀಜಗ, ಪಿಕಳಾರ, ಮಂಗಟ್ಟೆಯಂತಹ ಕೆಲವು ಪಕ್ಷಿಗಳು ಗಂಡು ಹೆಣ್ಣು ಜೊತೆಯಾಗಿಯೇ ಸೇರಿ ಗೂಡು ಕಟ್ಟಿ, ಹೆಣ್ಣು ಮೊಟ್ಟೆಯಿಟ್ಟು ಮರಿ ಮಾಡುವಾಗ ಗಂಡು ಅದಕ್ಕೆ ಕುಳಿತಲ್ಲಿಯೇ ಆಹಾರ ಸರಬರಾಜು ಮಾಡುತ್ತದೆ. ನಾವು ಹಾರ್ನ್‌ಬಿಲ್ ಎಂದು ಕರೆಯುವ ಮಂಗಟ್ಟೆಯಂತೂ ಹೆಣ್ಣು ಹಕ್ಕಿ ತನ್ನ ರೆಕ್ಕೆ ಪುಕ್ಕಗಳನ್ನೆಲ್ಲ ಉದುರಿಸಿಕೊಂಡು ಕಾವು ನೀಡಲು ಕುಳಿತುಕೊಳ್ಳುತ್ತದೆ. ಮರಿ ಹಕ್ಕಿಗೆ ತುತ್ತು ಕೊಟ್ಟು ತಾಯಿ ಹಕ್ಕಿ ಬೆಳೆಸುತ್ತದೆ. ಮಂಗಟ್ಟೆ ಜಾತಿಯ ಪಕ್ಷಿಗಳಿಗೆ ಮರಿಗಳೊಟ್ಟಿಗೆ ತಾಯಿಗೂ ಹೊಸದಾಗಿ ರೆಕ್ಕೆಪುಕ್ಕ ಬೆಳೆಯುತ್ತವೆ. ತಾಯಿ ಹಕ್ಕಿ ಗೂಡಿನಲ್ಲಿರುವ ಮರಿ ಹಕ್ಕಿಯನ್ನು ಕೊಕ್ಕಿನಿಂದ ಹೊರದೂಡಿ ಹಾರುವುದನ್ನು ಕಲಿಸುತ್ತದೆ. ಆದರೆ ಒಮ್ಮೆ ವಿಸ್ತಾರವಾದ ಬಾನಿನಲ್ಲಿ ಹಾರುವುದನ್ನು ಕಲಿತ ಹಕ್ಕಿಗೆ ಹೊಸ ಜೋಡಿಯೊಂದು ಸಿಗುತ್ತದೆ. ಸಾಕಿ ಸಲುಹಿ, ಜೀವನವನ್ನು ಎದುರಿಸಲು ಹೇಳಿಕೊಟ್ಟ ಅಮ್ಮನನ್ನೂ, ಗೂಡನ್ನೂ ಮರೆತು ತನ್ನದೇ ಆದ ಹೊಸ ಜೀವನವನ್ನು ಪ್ರಾರಂಭಿಸುತ್ತದೆ. ಇದು ನಿರಂತರ ಚಕ್ರ. ಮುಂದುವರಿಯಲೇ ಬೇಕಾದದ್ದು. ಆದರೆ ಕವಿ ಅದನ್ನು ಇಲ್ಲಿ ಮನ ಮುಟ್ಟುವಂತೆ ವಿವರಿಸಿದ್ದಾರೆ


ಪ್ರೀತಿ ಗರಿಕೆ ಹುಲ್ಲು

ವಿಷಜಂತುಗಳ ತುಳಿತಕ್ಕೆ

ಕಮರಬಹುದು

ಕರಗಿ ಹೋಗಬಹುದು

ಆದರೆ ಸಾಯವುದಿಲ್ಲ

ಅದಕೆ ಸಾವೇ ಇಲ್ಲ!


ಅವಳ ಪ್ರೀತಿಯೂ ಹಾಗೆ

ಆಗಾಗ ಬತ್ತುತ್ತದೆ

ಮತ್ತೆ ಚಿಗುರೊಡೆಯುತ್ತದೆ

ಸಾಯುವುದಿಲ್ಲ

  ಒಂಟಿಯಾಗಿದ್ದೇನೆ ಕವನದಲ್ಲಿ ಕವಿ ಎಲ್ಲವೂ ಇದ್ದೂ ಈ ಜಗತ್ತು ವಿಷಪೂರಿತವಾಗಿರುವ ಕುರಿತು ಆತಂಕ ಪಡುತ್ತ ಒಂಟಿಯಾಗುತ್ತಿರುವ ಭಯ ಅನುಭವಿಸುತ್ತಿರುವುದನ್ನು ವಿವರಿಸಿದ್ದಾರೆ. ಮತ್ತೆ ಬಂದೆಯಾ ಒಲವೆ ಕವನದಲ್ಲಿ ಪ್ರೀತಿ ಗರಿಕೆ ಹುಲ್ಲಂತೆ ಎಂದು ಹೆಳುತ್ತಾರೆ. ಗರಿಕೆಯ ಹುಲ್ಲು ಒಣಗಬಹುದು ಆದರೆ ಮಳೆಯ ಹನಿ ತಾಗಿದ ಕೂಡಲೆ ಮತ್ತೆ ಚಿಗುರುತ್ತದೆ. ಮತ್ತೆ ನಳನಳಿಸತೊಡಗುತ್ತದೆ. ಪ್ರೀತಿಯೂ ಹಾಗೇ. ಆದರೆ ಕವಿ ವಿಷಜಂತುವಿಗೆ ಯಾಕೆ ಅಷ್ಟು ಪ್ರಾಮುಖ್ಯತೆ ನೀಡಿ ಅವತರಣಿಕೆ ಉಪಯೋಗಿಸಿದ್ದಾರೆ ಎಂಬುದನ್ನು ಹೇಳಬೇಕಿದೆ.


ನಿಂತ ನೀರಿಗೆ ಹರಿವ ದಾಹ

ಕುಲಗೆಡಿಸಲು ನೂರಾರು ಮೋಹ

ಕೆರೆಯಾಗದಿರಲಿ ಕುಲಕೆಟ್ಟು

ಕಟ್ಟದಿರು ಆನೆಕಟ್ಟು


ಇಲ್ಲಿನ ಭಾವವನ್ನು ಗಮನಿಸಬೇಕು. ನಿಂತ ನೀರು ನಿಂತಲ್ಲೇ ಪಾಚಿಗಟ್ಟುತ್ತದೆ. ನಿಂತ ಬದುಕು ಅಲ್ಲಿಯೇ ಕವರಿ ಹೋಗುತ್ತದೆ. ಈ ಬದುಕು,  ಸದಾ ಚಲನಶೀಲ. ಈ ಪ್ರಕೃತಿಯೂ ಅಷ್ಟೆ. ಎಂದಿಗೂ ದಮ್ಮು ಕಟ್ಟಿ ಉಸಿರು ಬಿಗಿಹಿಡಿದು ಬದುಕುವುದಿಲ್ಲ. ಪ್ರತಿ ಕಣಕಣದಲ್ಲೂ ಒಂದು ಅಗೋಚರ ಚಲನೆಯನ್ನು ಇಟ್ಟುಕೊಂಡೇ ಈ ಪ್ರಕೃತಿ ನಿರಂತರವಾಗಿರುತ್ತದೆ. ಹೀಗಾಗಿ ಮನುಷ್ಯ ಹರಿವ ನೀರಿಗೆ ಆಣೆಕಟ್ಟು ಕಟ್ಟಿ ಹಿಡಿದಿಡಲು ಪ್ರಯತ್ನಿಸುವುದು ಖಂಡಿತವಾಗಿಯೂ ಪ್ರಕೃತಿ ವಿರೋಧಿ ಎಂಬುದು ಕವಿಯ ಅಭಿಮತ. ಹೊಳೆ ನೀರು ಎನ್ನುವ ಇನ್ನೊಂದು ಕವನದಲ್ಲೂ ಕವಿ ಇದೇ ಮಾತನ್ನು  ಪುನರಾವರ್ತಿಸಿದ್ದಾರೆ

 ಹರಿವ ನೀರಿಗೆ

ಕಟ್ಟೆ ಕಟ್ಟಿದಷ್ಟೂ

ಕೊಳಕಾಗುವುದಿನ್ನಷ್ಟು

ಬದುಕು ಬರಡು ಹಿನ್ನೀರಿನಲಿ

ಹಸಿರ ಮರ ಕಮರದಿರಲಿ

ಎನ್ನುತ್ತಾರೆ. ಹಾಗೆ ನೋಡಿದರೆ ಮೂಲತಃ ಶಿವಮೊಗ್ಗ ಜಿಲ್ಲೆಯವರಾದ ರಮೇಶ ಹಿರೇಜಂಬೂರ ಇಂತಹ ಆಣೆಕಟ್ಟುಗಳು ಜನರ ಬದುಕನ್ನು ಹಾಗೂ ದಟ್ಟವಾದ ಸಹ್ಯಾದ್ರಿಮಾಲೆಯ ಕಾಡುಗಳು ನೀರ ಮಧ್ಯದಲ್ಲೇ ಒಣಗಿ ನಿಂತದ್ದನ್ನು ಕಂಡವರು. ಹಿನ್ನಿರಿನ ಹೆಸರಿನಲ್ಲಿ ಹತ್ತಾರು ಹಳ್ಳಿಗಳ ಜನಜೀವನ ಅಸ್ತವ್ಯಸ್ತವಾದದ್ದನ್ನು ನೋಡಿದವರು. ತುಂಗಭದ್ರಾ ಉಳಿಸಿ ಹೋರಾಟದಲ್ಲಿ ಭಾಗಿಯಾದವರು.  ಹೀಗಾಗಿ ಆಣೆಕಟ್ಟುಗಳು ಮಾಡುವ ಅನಾಹುತದ ಸಂಪೂರ್ಣ ಅರಿವಿದೆ ಇವರಿಗೆ. ಹೀಗಾಗಿಯೇ

ಒಮ್ಮೆಯಾದರೆ ಸತ್ತು ಬಿಡಬಹುದು

ಸದ್ದುಗದ್ದಲ ಮಾಡದೆ ಸುಮ್ಮನೆ

ನಮ್ಮದೋ ಬದುಕೆಲ್ಲ ಕಹಿಬೇವು

ಕಾಣಲೇಬೇಕು ನಿತ್ಯಸಾವು

ಎನ್ನುವ ಮಾತು ಬಂದಿದೆ. ಈ ಕವನದ ಲಾಲಿತ್ಯ ಒಮ್ಮೆ ಎಂಥವರನ್ನಾದರೂ ಸೆಳೆಯದೇ ಬಿಡಲಾರದು. ಭಾವಗೀತೆಯ ಮಾಧುರ್‍ಯವಿದ್ದರೂ ಬದುಕಿನ ನೋವುಗಳನ್ನೇ ಹೇಳುತ್ತ ಅದನ್ನು ಹೋರಾಟದ ಹಾಡನ್ನಾಗಿಸಿದ್ದಾರೆ. ಬದುಕು ಎಂದಿಗೂ ನಾವು ಅಂದುಕೊಂಡಷ್ಟು ಸುಲಭವಾಗಿರುವುದಿಲ್ಲ. ಸರಳರೇಖೆಯಂತಹ ಏರಿಳತವಲ್ಲದ ಬದುಕು ಎಲ್ಲರಿಗೂ ಸಿಗುವುದಿಲ್ಲ. ಅಂತಹ ಬದುಕು ಬೇಕೆಂದು ಕವಿ ಬಯಸುವುದೂ ಇಲ್ಲ. ಅವರಿಗೆ ಬದುಕು ಕಾಲಚಕ್ರಕ್ಕೆ ತಕ್ಕಂತೆ ಸುತ್ತುವ ಅರಿವಿದೆ. ಆದರೆ ಕಷ್ಟವೇ ಜೀವನವಾದರೆ ಅದು ಬದುಕಲ್ಲ ನಿತ್ಯ ಸಾವು ಎನ್ನುವ ಅರಿವೂ ಇದೆ. ಇಲ್ಲಿ ಬಡವರ ಬದುಕನ್ನು ಕವಿ ನಿಚ್ಛಳವಾಗಿಸಿದ್ದಾರೆ. ಕಾರ್ಮಿಕರ, ಶ್ರಮಿಕರ ಬಡತನ, ಅನಕ್ಷರತೆ ಅವರನ್ನು ಸಾವಿನಂತಹ ನರಕಕ್ಕೆ ದೂಡುತ್ತಿದೆ.  ರೈತರ ಬದುಕು ಹೊತ್ತುಗೊತ್ತಿಲ್ಲದೆ ದಿನವಿಡೀ ದುಡಿದರೂ ಎರಡು ಹೊತ್ತು ಹೊಟ್ಟೆತುಂಬ ಉಣ್ಣುವುದಕ್ಕೂ ಗತಿಯಿಲ್ಲದಂತಾಗುವುದಕ್ಕೆ ವಿಷಾದವಿದೆ. ಅಂತಹ ದುಡಿಯುವ ಕೈಗಳಿಗೆ ಶಕ್ತಿಯಾಗಿ ನಿಲ್ಲಬೇಕಾದ ಅನಿವಾರ್‍ಯತೆಯ ಕುರಿತು ಕವಿ ಹೇಳುತ್ತಾರೆ. ಯಾಕೆಂದರೆ ಈ ದುಡಿಯುವ ಕೈಗಳು ಎಂದಿಗೂ ಸುಮ್ಮನೆ ಕುಳಿತು ತಿನ್ನಬೇಕೆಂದು ಬಯಸುವುದಿಲ್ಲ.

ಹೊತ್ತು ಗೊತ್ತಿಲ್ಲದೆ ದುಡಿವ ಕೈಗಳಿವು

ತುತ್ತು ಕೂಳಿಗೆ ಒಂದು ಕೆಲಸ ಕೊಡಿ ನೀವು

ರಕ್ತ ಬಸಿದರೂ ಸರಿಯೇ ದುಡಿದು ತಿನ್ನುವೆವು

ತಪ್ಪಿಹೋಗಲಿ ನಮ್ಮ ನಿತ್ಯಸಾವು

ಸಂಕಲನದ ಅತ್ಯಂತ ಸಶಕ್ತ ಸಾಲುಗಳು ಇವು. ಕಾರ್ಮಿಕರ, ಶ್ರಮಿಕರ, ಕೂಲಿಯಾಳುಗಳ ಹಾಗೂ ದುಡಿಯುವ ರೈತರ ಮನದ ಮಾತುಗಳನ್ನು ಈ ಸಾಲುಗಳು ತೆರೆದಿಟ್ಟ ಪರಿ ಅನನ್ಯ. ಈ ಸಾಲುಗಳನ್ನು ಓದಿದಾಗ ದುಡಿಯುವ ಕೈಗಳ ಬಗ್ಗೆ ಇರುವ ಹೆಮ್ಮೆ ಇಮ್ಮಡಿಯಾಗುತ್ತದೆ. ಗೌರವ ಇನ್ನಷ್ಟು ಹೆಚ್ಚುತ್ತದೆ. ಒಂದು ಕವಿತೆ ತನ್ನ ಸಾರ್ಥಕ್ಯವನ್ನು ಪಡೆದುಕೊಳ್ಳುವುದೇ ಹೀಗೆ. ತನ್ನಿಂದ ಒಂದು ಬೆಳಕು ಹಚ್ಚುವ ಕಾರ್‍ಯ ನಡೆದಾಗ. ಕೋವಿಯೊಳಗಿನ ಸತ್ಯ ಎಂಬ ಕವಿತೆಯು ಬಂದೂಕು ಸಾಧಿಸುವ ಕೆಲಸವನ್ನು ಹೇಳುತ್ತದೆ. ಬಾಯಿ ಮಾತಿಗೆ ಬಗ್ಗದ ಜರ ಕುರಿತು ಆಕ್ರೋಶವಿದೆ.

ಕೂಲಿಯಾಳುಗಳಾಗಿ ಕೇಮೆ ಮಾಡಿದರೂ

ಮಾಲಿಕರ ದಬ್ಬಾಳಿಕೆ ನಿಂತಿಲ್ಲ

ಎನ್ನುವ ಸಾಲುಗಳ ಬಡ ಕಾರ್ಮಿಕರ ಸ್ಥಿತಿಯನ್ನು ಕಣ್ಣಿಗೆ ಕಟ್ಟುವಂತೆ ವರ್ಣಿಸುತ್ತದೆ.

  ದೇವರಿಲ್ಲದ ಊರು ಎನ್ನುವ ವಿಶಿಷ್ಟ ಕವಿತೆಯೊಂದು ಓದುಗನನ್ನು ಥಟ್ಟನೆ ಸೆಳೆಯುತ್ತದೆ. ಕುವೆಂಪುರವರ ನೂರು ದೇವರನ್ನೆಲ್ಲ ನೂಕಾಚೆ ದೂರ ಎನ್ನುವ ಕವನವನ್ನು ನೆನಪಿಸುವ ಕವಿತೆ ಇದು. ಗುಡಿ, ಚರ್ಚು, ಮಸೀದಿಗಳ ಬಿಟ್ಟು ಹೊರಬನ್ನಿ, ರಾಷ್ಟ್ರಕವಿಗಳ ನುಡಿಯ ಜಪಿಸ ಬನ್ನಿ ಎನ್ನುವ ಸಾಲುಗಳು ಕೂಡ ನಮ್ಮನ್ನು ಮತ್ತೆ ಮತ್ತೆ ಕುವೆಂಪುರವರನ್ನು ನೆನಪಿಸಿಕೊಳ್ಳುವಂತೆ ಮಾಡುತ್ತದೆ. ಆದರೆ ಕವಿ ಮುಂದುವರೆದು ಪ್ರೀತಿ ಬಿಜವ ಬಿತ್ತಿ ಬೆಳೆವ ಎನ್ನಿ, ಬಡಜನರ ಕಣ್ಣೀರ ಒರೆಸಬನ್ನಿ ಎಂದು ಹೇಳುತ್ತಾರೆ. ಇಡೀ ಸಂಕಲನದಲ್ಲಿ ಬಡವರ ಕುರಿತಾಗಿ, ಶ್ರಮಿಕರ ಕುರಿತಾಗಿ ಕವಿ ತೋರುವ ಕಾಳಜಿಯನ್ನು ಗಮನಿಸಬೇಕಾಗಿದೆ. ಹೀಗಾಗಿಯೇ ಇಲ್ಲ ಮೇಲುಕೀಳುಗಳ ಗೊಡವೆ, ಅವು ಕಂದಕ ಸೃಷ್ಟಿಸುವವು ನಮ್ಮ ನಡುವೆ ಎನ್ನುತ್ತ ಸಾಮಾಜಿಕ ಅಂತರಗಳು, ಮೇಲು ಕೀಳುಗಳು ಅನವಶ್ಯಕ ಎಂದು ಹೇಳುತ್ತಾರೆ. ದೇಶದ ಐಕ್ಯತೆಗೆ ಇಂತಹ ಅಂತರಗಳು ಧಕ್ಕೆಯನ್ನುಂಟುಮಾಡುವುದರ ಕುರಿತು ಕವಿಗೆ ತೀವ್ರ ಅಸಮಧಾನವಿದೆ. ಇಷ್ಟಾಗಿಯೂ ಕವಿ ದೇಶದ ವಿಷಯ ಬಂದರೆ ಯಾವುದಕ್ಕೂ ರಾಜಿ ಆಗುವುದಿಲ್ಲ.

ಬಹುರಾಷ್ಟ್ರೀಯ ಕಂಪನಿಗಳ

ಹುನ್ನಾರ ನಡೆಯಲ್ಲ

ನಡುಬೀದಿಯ ದಳ್ಳಾಳಿಯು

ಹೆಚ್ಚು ದಿನ ಉಳಿಯಲ್ಲ

ಎನ್ನುತ್ತ ಕವಿ ನಮ್ಮನ್ನು ನಾವು ಕಾಪಾಡಿಕೊಳ್ಳುವ ದೇಶವಾಸಿಗಳ ಶಕ್ತಿಯ ಕುರಿತಾಗಿ ಹೆಮ್ಮೆ ತಾಳುತ್ತಾರೆ.

   ಕವಿ ತನ್ನ ಬಾಲ್ಯದ ಬಗ್ಗೆ ಮಾತನಾಡುತ್ತಾರೆ. ನಾ ಬೆಳೆದ ಬೀದಿಯಲ್ಲೀಗ ನಲಿವು ನಲಿದಾಡುತ್ತಿಲ್ಲ ಎಂದು ಹೇಳುತ್ತಾರೆ. ನಮ್ಮ ಹಳ್ಳಿಗಳು ಈಗ ಬರುಡಾಗಿವೆ. ಮಕ್ಕಳು ಅಮ್ಮನನ್ನು ಬಿಟ್ಟು ಮಮ್ಮಿಯನ್ನು ಹುಡುಕಿಕೊಂಡಿವೆ. ಮಮ್ಮಿಗಳಿಗೀಗ ಯಾವ ಜವಾಬ್ಧಾರಿಯೂ ಬೇಕಿಲ್ಲ. ಡೊನೇಷನ್ ಕಟ್ಟಿ ಶಾಲೆಗೆ, ಅಲ್ಲಲ್ಲ ಸ್ಕೂಲಿಗೆ ಕಳಿಸಿಬಿಟ್ಟರೆ ಜವಾಬ್ಧಾರಿ ಮುಗಿದೇ ಹೋಯಿತು ಎನ್ನುವ ಮಾಡರ್ನ ಮಮ್ಮಿಗಳ ನಡುವೆ ಮನೆ ಬರಿದಾಗಿದೆ. ಮನಸ್ಸೂ ಬರಿದಾಗಿದೆ. ಬೀದಿಯೂ ಬರಿದಾಗಿ ಹೋಗಿದೆ ಎನ್ನುತ್ತಾರೆ. ಎಂಬತ್ತರ ದಶಕದ ನಮ್ಮ ಬಾಲ್ಯವಾದರೂ ಅದೆಷ್ಟು ಸೊಂಪಾಗಿತ್ತು. ಏನು ಬೇಕಾದರೂ ಮಾಡುವ ಸ್ವಾತಂತ್ರ್ಯವಿತ್ತು. ಅಲ್ಲಿ ಹೋಗಬೇಡ, ಅವರ ಮನೆಯವರು ಬೇರೆ ಜಾತಿಯವರು/ಧರ್ಮದವರು. ಅವರ ಜೊತೆ ಬೆರೆಯಬೇಡ, ಹಳ್ಳಕೊಳ್ಳ ಸುತ್ತಬೇಡ ಎನ್ನುವ ಯಾವ ಕಟ್ಟಳೆಗಳೂ ಆಗಿರಲಿಲ್ಲ. ಅದು ಸಮೃದ್ಧ ಬಾಲ್ಯದ ಕಾಲ. ನಾವೆಷ್ಡು ಸಂಭ್ರಮದ ಬಾಲ್ಯವನ್ನು ಅನುಭವಿಸಿದ್ದೆವೋ ಅಷ್ಟೇ ಗುರುಗಳ ಪ್ರೀತಿಯನ್ನೂ, ಬೆತ್ತದ ಏಟನ್ನೂ ಅನುಭವಿಸಿದ್ದೇವೆ. ಆದರೆ ಈಗ ಎಲ್ಲವೂ ಆನ್‌ಲೈನ್ ಕಾಲ. ಪಾಠವೂ ಆನ್‌ಲೈನ್‌ನಲ್ಲಿ. ಮನೆಪಾಠವೂ ವಿಡಿಯೊ ಲೆಸನ್‌ನಲ್ಲಿ, ಹೋಮ್ ವರ್ಕ್ ಕೂಡ ವ್ಯಾಟ್ಸ್‌ಆಪ್‌ನಲ್ಲಿ ಮುಗಿದು ಹೋಗುತ್ತಿರುವ ಈ ಕಾಲಘಟ್ಟದಲ್ಲಿ ಶಿಕ್ಷಕರಿಂದ ಏಟು ತಿನ್ನುವುದು ಬಿಡಿ, ಸರಿಯಾಗಿ ಶಿಕ್ಷಕರ ಮುಖ ಕೂಡ ನೋಡಲಾಗದ ವಾತಾವರಣದಲ್ಲಿದ್ದೇವೆ. ಒಂದುವೇಳೆ ಶಿಕ್ಷಕರು ಒಂದೇಟು ನೀಡಿದರೂ ಶಿಕ್ಷಕರನ್ನೇ ಜೈಲಿಗೆ ಸೇರಿಸಲೂ ಹಿಂದೆಮುಂದೆ ಯೋಚಿಸುವುದಿಲ್ಲ ಇಂದಿನ ವಿದ್ಯಾರ್ಥಿಗಳು. ಆದರೆ ಆಗ ಶಿಕ್ಷಕರು ಎಷ್ಟು ಏಟು ಕೊಡುತ್ತಿದ್ದರೋ ಅದಕ್ಕೆ ಹತ್ತು ಪಟ್ಟು ಹೆಚ್ಚು ಪ್ರೀತಿ ತೋರಿಸುತ್ತಿದ್ದರು ಎಂದು ಕವಿ ನೆನಪಿಸಿಕೊಳ್ಳುತ್ತಾರೆ.

             'ದಾಸಿ ನಾನು ದೇವ ನೀನು' ಕವಿತೆಯು ದೇವದಾಸಿಯ ವ್ಯಥೆಯನ್ನು ಸ್ವಗತದಲ್ಲಿ ಹೇಳುತ್ತ ಹೋಗುತ್ತದೆ. ಹೆಣ್ಣಮಕ್ಕಳನ್ನು ದೇವರ ಹೆಸರಿಗೆ ಬಿಟ್ಟು ತಮ್ಮ ಕಾಮದಾಹ ತೀರಿಸಿಕೊಳ್ಳುತ್ತಿರುವ ನಾಮರ್ದ ಸಮಾಜದ ಕುರಿತಂತೆ ಇಲ್ಲಿ ಆಕ್ರೋಶವಿದೆ. ದೇವರ ಕೊರಳುಪಟ್ಟಿಯನ್ನು ಹಿಡಿದು ನಿಲ್ಲಿಸಿ ಕೇಳುವಂತೆ ಆಕೆ ಕೇಳುತ್ತಾಳೆ. ಬಾರೋ ಬೇಗನೆ ದೇವನೆ, ಕರುಣೆಯಿಲ್ಲದ ಕುರುಡನೆ ಎಂದು ತನ್ನನ್ನು ಈ ಪಾಪಕೂಪದಿಂದ ಕಾಪಾಡು ಎಂದು ಮೊರೆಯಿಟ್ಟರೂ ತನ್ನನ್ನು ಕಾಪಾಡಲು ಬರದವನನ್ನು    ಹಂಗಿಸುತ್ತಾಳೆ. ಆ ದೇವರೂ ಕೂಡ ಒಬ್ಬ ಗಂಡಸೇ, ಅವನಿಗೆ ಹೆಣ್ಣಿನ ಅಂತರಾಳದ ನೋವು, ಆರ್ತನಾದ ಕೇಳದಿರುವುದು ಸಹಜವೇ ಎಂದು ದೇವರನ್ನೂ ದೂರುತ್ತಾಳೆ. ಆದರೆ ಕವಿ  ಹೆಣ್ಣನ್ನು ಹಣತೆಗೂ ಹೋಲಿಸುತ್ತಾರೆ.

ಸೌದರ್ಯದ ಘನಿಯಾದವಳು  

ದೇವತೆಯೂ ಆಗುತ್ತಾಳೆ

ತಾಯಿಯಾಗಿ, ತಂಗಿಯಾಗಿ ಜೊತೆಗಿದ್ದವಳು

ದಾರಿ ದೀಪವಾಗುತ್ತಾಲೆ

ಎನ್ನುತ್ತ ಹಣತೆ ತಾನುರಿದು ಜಗಕೆ ಬೆಳಕು ನೀಡುವಂತೆ ಹೆಣ್ಣೂ ಕೂಡ ತಾನು ಎಲ್ಲ ಕಷ್ಟಗಳನ್ನು ಸಹಿಸಿಕೊಂಡು  ಜೀವತೇದು ಹಣತೆಯಂತೆ ಬೆಳಗುತ್ತಾಳೆ ಎನ್ನುತ್ತಾರೆ.

              ಇಲ್ಲಿನ ಕವಿತೆಗಳೆಲ್ಲ ಜೀವನ್ಮುಖಿಯಾಗಿವೆ. ತನ್ನ ಲಾಲಿತ್ಯದಿಂದ ಗಮನ ಸೆಳೆಯುತ್ತವೆ. ಆದರೆ ಕೆಲವೆಡೆ ಹಿರಿಯ ಕವಿಗಳ ಉಲ್ಲೇಖ ಮತ್ತು ಪ್ರಸ್ತಾಪ ತುಸು ಹೆಚ್ಚೇ ಎನ್ನುವಷ್ಟು ದಾಖಲಾಗಿದೆ. ಕವಿತೆಗಳು ನಮ್ಮದಾದಷ್ಟೂ, ನಮ್ಮದೇ ಸ್ವಂತಿಕೆಯನ್ನು ಛಾಪಿಸಿದಷ್ಟೂ ಅದರ ಮೌಲ್ಯ ಹೆಚ್ಚಾಗುತ್ತ ಹೋಗುತ್ತದೆ ಎಂಬುದನ್ನು ಮರೆಯಬಾರದು. ಆದರೆ ಇಡೀ ಸಂಕಲನವೇ ನದಿ, ಹಳ್ಳದ ಸುತ್ತ ಸುತ್ತುವಂತೆ ತೋರುವುದಲ್ಲದೇ ಜೀವಜಲವನ್ನು ಕಾಪಾಡಿಕೊಳ್ಳುವ ಅನಿವಾರ್‍ಯತೆಯನ್ನು ಎತ್ತಿ ಹೇಳುತ್ತವೆ. ಹರಿವ ನೀರನ್ನು ಕಟ್ಟಿಹಾಕುವುದನ್ನು ವಿರೋಧಿಸುವ ಕವಿ, ಜೀವ ಜಲ ಕೇವಲ ನದಿಯಾಗಿ ಮಾತ್ರವಲ್ಲ ಒರತೆಯ ಸೆಲೆಯಿಂದಲೂ ಉಕ್ಕುತ್ತದೆ ಎನ್ನುತ್ತಾರೆ. ನಮ್ಮ ಹಿತಕ್ಕಾಗಿ ಹರಿವ ನೀರಿಗೆ ವಿಷ ಬೆರೆಸುವುದನ್ನು ಕವಿ ತೀವ್ರವಾಗಿ ಖಂಡಿಸುತ್ತಲೇ, ದೊಡ್ಡದೊಡ್ಡ ಕಾರ್ಖಾನೆಗಳು ನದಿಗೆ ಸುರಿಯುವ ಕೆಮಿಕಲ್‌ಗಳ ಕುರಿತು, ತ್ಯಾಜ್ಯದ ಕುರಿತು ಆಕ್ರೋಶಗೊಳ್ಳುತ್ತ, ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಪ್ರಕೃತಿಯನ್ನೇ ಮಣಿಸಲು ಹೊರಟಿರುವುದನ್ನು ದುರದೃಷ್ಟ ಎನ್ನುತ್ತ

ಕಣಕಣದಲ್ಲೂ ಕಾಣುತಿದೆ ಸ್ವಾರ್ಥ

ಹೀಗೆ ಸಾಗಿದರೆ ಈ ಬದುಕಿಗೇನರ್ಥ

ಎಂದು ಮೊದಲ ಕವಿತೆಯಲ್ಲೇ ಕೇಳಿಕೊಂಡ ರಮೇಶರ ಮಾತುಗಳು ನಿಜವಾಗಲಿ, ಸ್ವಾರ್ಥರಹಿತ, ನೋವಿನ ಕಣ್ಣೀರನ್ನು ಒರೆಸುವ ಧ್ವನಿಯಾಗಲಿ.


-ಶ್ರೀದೇವಿ ಕೆರೆಮನೆ

212 views1 comment
bottom of page