top of page

ಚುಮು ಚುಮು ನಸಕ್ನಲ್ಲಿ . . .

ಚುಮು ಚುಮು ನಸಕ್ನಲ್ಲಿ ಚಂಪಕ್ಕನ ಕನಸ್ನಲ್ಲಿ ಕೊಂಡಿ ಮೇಲೆ ಎತ್ಕೊಂಡು ದಡಾ ಬಡಾ ಹೆಜ್ಜೆ ಹಾಕ್ಕೊಂಡ್ ಅಬ್ಬಬ್ಬಾ ಆನೇಗಾತ್ರದ ಚೇಳಿನ ಮರಿ ಬಂದಿತ್ತಂತೆ ! ‘ನೀನೇ ಇಷ್ಟಾದರೆ ನಿಮ್ಮಪ್ಪ ಇನ್ನೆಷ್ಟು ?’ ಕೆ ಕೆ ಕೆ ಕೆ ಕೇಳೇಬಿಟ್ಲಂತೆ ‘ಲೆಕ್ಕಗಿಕ್ಕ ಬರಲ್ಲ ನಂಗೆ ನಮ್ಮಪ್ಪನ್ನಾ ಕರೀಲಾ ಇಲ್ಲೆ ?’ ‘ಅಯ್ಯೊ ಬ್ಯಾ . .ಬ್ಯಾ ಡಾ ಕೈ ಮುಗೀತೀನಿ ಕರೀಬ್ಯಾಡಾ ನೀನೂ ಬೇಕಾರ್ ವಾಪಸ್ ಹೋಗು ಬೆಳಗಾಗ್ತಿದೆ ಬೇಗ ಹೋಗು’ ಇದ್‍ಕಿದ್‍ಹಾಗೆ ಎಚ್ರಾಗಿ ಬಚಾವ್ ಆದ್ಲು ಚಂಪಕ್ಕ ಕಣ್ ಬಿಟ್ಲು ಮಾರಾಯತಿ ಬೆವರೊರ್ಸಿಕೊಳ್ತಾ ಹಣೇಲಿ ಏಳ್ತಾ ಇದ್ರೆ ಎದುರಿಗೇನೆ ನೋಡ್ತಿದೆ ಪಿಳಪಿಳಾಯಿಸಿ ಅವಳನ್ನೇ ನನಸಿನ ಚೇಳಿನ ಮರಿ ದಿಂಬು ಏರೇ ಬಂದ್ಬಿಟ್ಟಿದೆ ಪುಟ್ಪುಟಾಣಿ ಮರಿ ನಸುಕಿನಲ್ಲಿ ಬೀಳೋ ಕನಸು ಆಗ್ಬಿಡತ್ತಂತಲ್ಲ ನನಸು ಅದಕ್ಕೇ ನಾನ್ ಬಂದಿದ್ದು ಅಂತಾ ಇದೆ ಮುದ್ ಮುದ್ದು ! ಕನಸ್ನಲ್ಲಿ ಬಂದಿದ್ದೋನು ನಮ್ ವಂಶದವನೇ ಅವನೂ ತ್ರೇತಾ ಯುಗದಲ್ಲಿದ್ದೋನು ಕುಂಭಕರ್ಣನಂಥೋನಿಗೆ ಕಚ್ಚೋನು ಮತ್ತಿನ್ಹ್ಯಾಗಿದ್ದಾನು ನಾನೂ ಇದ್ದೀನ್ ನೋಡು ತೆಳ್ಳಗೆ ಬೆಳ್ಳಗೆ ಡೈಟ್ ಮಾಡ್ಕೊಂಡು ಕಚ್ಚೋ ಕೆಲಸ ಭಾಳಾ ಈಝಿ ಇಂಜೆಕ್ಷನ್ ಮಾಡಿದ್ಹಂಗೆ ಯು ಸಿ ಮುಗದೇ ಹೋಯ್ತು ಮಾರಾಯ್ತಿ ಸುಮ್ ಸುಮ್ನೆ ಹೆದರಿಕೊಳ್ತಿ ಗೊತ್ತಾಗದ ಹಾಗೇ ಆಗ್ಹೋಯ್ತು ಮಾತಮಾತಲ್ಲೇ ಮುಗದೇ ಹೋಯ್ತು ! ‘ಅಯ್ಯೊ ಅಯ್ಯೊ ಅಯ್ಯೊ ಕಚ್ಚೇ ಬಿಟ್ಟೆಯಾ ಮುಠ್ಠಾಳಾ’ ‘ಮುಗದೇ ಹೋಗಿದೆಯಲ್ಲಮ್ಮ ಬರ್ತೀನಮ್ಮ ಬಾಯ್ ಬಾಯ್’ ಸ್ಕೂಲಿಗೆ ಹೋಗೋ ದಾರೀಲಿ ಊರ ದಾಟಿ ಬರ್ತಿದ್ದಹಾಗೇ ಸ್ಕೂಲಿಗೆ ಹೋಗೋ ದಾರೀಲಿ ಬಾಗಿಲೊಂದಿದೆ ನಟ್ ನಡುವಲ್ಲಿ ದಾಟಿಕೊಂಡು ಹೋಗಬೇಕಂತೆ ತಪ್ಪದೆ ಎಲ್ಲರೂ ಅದರಲ್ಲಿ ! ಯಾವಕಾಲದ್ದೊ ಗೊತಿಲ್ವಂತೆ ಪುಟ್ ಪುಟಾಣಿ ರಾಜಕುಮಾರ ಹೂಂ ಅಂತಾ ಹಟ ಮಾಡಿದ್ನಂತೆ ಅದಕೆ ರಾಜಾ ಕಟ್ಸಿದ್ನಂತೆ ಅದೂ ಕೂಡ ಪುಟ್‍ದಂತೆ ಎತ್ತರವಾದ ಕಟ್ಟೆ ಮೇಲೆ ನೀಟಾಗಿ ನಿಲ್ಲಿಸಿದ್ನಂತೆ ಸುತ್ತ ಗೋಡೆ ಏನೂ ಇಲ್ಲ ರಾಜಕುಮಾರ ಕೇಳ್ಳೇ ಇಲ್ವಲ್ಲ ? ಈಗಲೂ ಬೆಳಬೆಳಿಗ್ಗೆನೆ ಬೇತಾಳೊಂದು ಬರತ್ತಂತೆ ಪುಟ್‍ದಾಗೇ ಇರತ್ತಂತೆ ! ಬಾಗಿಲಲ್ಲಿ ನಿಂತಕೊಂಡು ಪಿಳಿ ಪಿಳಿ ಕಣ್‍ಬಿಟಗೊಂಡು ನೋಡ್ತಾನೆ ಇರತ್ತಂತೆ ಬಾಗಲಲ್ಲೇ ಎಲ್ಲರೂ ಹಾಯ್ದು ಬರ್ತಾರೊ ಇಲ್ಲವೊ ಅಂತಾ ಕಾಯ್ತಾನೆ ಇರತ್ತಂತೆ ! ತನ್ನ ಹಾಗೇ ಪುಟ್‍ದಾಗಿರೊ ಚೂಟಿ ಚುಟಕ್ ಹುಡುಗರೆಲ್ಲಾ ಬಗ್ಗಿ ಬಗ್ಗಿ ಬಗ್ಗಿ ಬಗ್ಗಿ ಬಾಗಿಲಲ್ಲೇ ಬರೋವಾಗ ಖುಷಿಯಾಗತ್ತಂತೆ ಅದಕ್ಕೆ ದೊಡ್ಡವರ್ಯಾರೂ ಬಾಗಲ್ವಂತೆ ಬಾಗಿಲಲ್ಲವರು ಹೋಗಲ್ವಂತೆ ಬಾಗ್ಲಿಂದ್ ಅವರು ಬರಲ್ವಂತೆ ಅದಕ್ಕೆ ಅದಕ್ಕೆ ಬೇತಾಳಂಗೆ ತುಂಬಾನೆ ಬೇಜಾರಂತೆ ಅಳುನೇ ಬಂದಬಿಡತ್ತಂತೆ ಮುಖಾ ಸೊಟ್ಟಗ ಮಾಡುತ್ತಂತೆ ‘ಬಾಗಲಲ್ಲಿ ಹಾಯ್ದು ಬರದೇ ಇದ್ರೆ ಆ ಕಡೆಯಿಂದ ಈ ಕಡೆಗೆ ಬಂದಹಾಗೆ ಹೇಗೆ ? ಅಲ್ವಾ’ ಅಂದಕೊಳ್ಳತ್ತಂತೆ ತನ್ನೊಳಗೆ ಅದಕ್ಕೆ ಆ ದೊಡ್ಡೋರೆಲ್ಲ ಇರೋದೆಲ್ಲ ಆ ಕಡೆಗೇನೆ ಬರಲೇ ಇಲ್ಲ ಈ ಕಡೆಗೆ ! ಚಿಕ್ಕವರೆಲ್ಲಾ ಹಾಗೇನಲ್ವಲ್ಲಾ ಬಾಗಿಲಲ್ಲಿ ಹೋಗತಾ ಬರ್ತಾ ಈ ಕಡೆಗೂ ಆ ಕಡೆಗೂ ಎರಡೂ ಕಡೆಗೂ ! ಊರಿನ ಕಡೆಗೂ ಬೇತಾಳನ ಕಡೆಗೂ ! -ಆನಂದ ಪಾಟೀಲ





23 views0 comments
bottom of page