top of page

ಚಂದದ ಭಾಷೆಯ ಮನಸೆಳೆವ ಕಥೆಗಳು

Updated: Sep 16, 2020

[ಲೇಖಕಿ ಶ್ರೀದೇವಿ ಕೆರಮನೆಯವರು ನಾಡಿನ ಪ್ರಸಿದ್ಧ ಲೇಖಕರು ಬರೆದ ಕೃತಿಯ ಕುರಿತು ಅಧ್ಯಯನಮಾಡಿ ಅದರ ಕುರಿತಾದ ತಮ್ಮ ಅನಿಸಿಕೆಯನ್ನು ಪ್ರತಿವಾರ ಕೃತಿಕನ್ನಡಿ ಅಂಕಣಕ್ಕೆ ಬರೆಯಲು ತುಂಬುಹೃದಯದಿಂದ ಒಪ್ಪಿಕೊಂಡಿದ್ದಾರೆ. ಈಗಾಗಲೇ ಕೃತಿ ಕನ್ನಡಿಯ ಅಡಿಯಲ್ಲಿ ಮೂರು ಕೃತಿಗಳ ಕುರಿತು ಅವರು ಬರೆದ ಗ್ರಂಥವಲೋಕನ ಪ್ರಕಟವಾಗಿವೆ. ಶ್ರೀದೇವಿಯವರಿಗೆ ಆಲೋಚನೆಯ ಪರವಾಗಿ ವಂದನೆಗಳು - ಸಂಪಾದಕ ]


ಗ್ರಂಥಾವಲೋಕನ -4


ಪುಸ್ತಕ- ಉರಗವೇಣಿಯರೇ ಕೇಳಿ.

ಲೇಖಕರು- ಪಿ ಬಿ ಪ್ರಸನ್ನ

ಪ್ರಕಾಶನ- ಸುಮಾ ಪ್ರಕಾಶನ, ಬೆಂಗಳೂರು

ಬೆಲೆ- ೧೨೫/-


       





 



ಉತ್ತರ ಹಾಗೂ ದಕ್ಷಿಣ ಕನ್ನಡದವರಿಗೆ ಯಕ್ಷಗಾನವೆಂದರೆ ಅದೆಂತಹ ಹುಚ್ಚೋ ಗೊತ್ತಿಲ್ಲ. ಎಂತಹ ತಲೆ ಹೋಗುವಂತಹ ಕೆಲಸವಿದ್ದರೂ ಯಕ್ಷಗಾನವಿದೆ ಎಂದರೆ ಹಿಂದೆ ಮುಂದೆ ನೋಡದೇ ಹೋಗಿ ಕುಳಿತುಬಿಡುವಷ್ಟು ಯಕ್ಷಗಾನವನ್ನು ಇಷ್ಟಪಡುತ್ತಾರೆ. ಚಿಕ್ಕಂದಿನಲ್ಲಿ ನಾನೂ ಯಕ್ಷಗಾನವನ್ನು ಮರ್ಲು ಎನ್ನುವಷ್ಟು ಹಚ್ಚಿಕೊಂಡಿದ್ದೆ. ಸುತ್ತಮುತ್ತಲ ಹಳ್ಳಿಗಳಲ್ಲಿ ಎಲ್ಲೇ ಬಯಲಾಟ ನಡದೂ ಹೊರಟು ಬಿಡುವಷ್ಟು ಉಮೇದಿಯಿತ್ತು. ಆದರೆ ಈಗಿನ ಒತ್ತಡಗಳು, ಮುಗಿಸಲೇ ಬೇಕಾದ ಕೆಲಸಗಳು ಮೊದಲಿನಷ್ಟು ಯಕ್ಷಗಾನವನ್ನು ನೋಡಲು ಬಿಡುವುದಿಲ್ಲವಾದರೂ ಒಂದಿಷ್ಟು ಅವಕಾಶ ಸಿಕ್ಕರೂ ಯಕ್ಷಗಾನ ನೋಡಲು ಹೊರಟು ಬಿಡುವ ನನಗೆ ಒಂದು ಪುಸ್ತಕದ ಹೆಸರು ಯಕ್ಷಗಾನದ ಶೈಲಿಯಲ್ಲಿದ್ದರೆ ಓದದೇ ಬಿಟ್ಟೇನೆಯೇ? ತನ್ನ ಹೆಸರು ಹಾಗೂ ಮುಖಪುಟದಿಂದಲೇ ಆಕರ್ಷಿಸಿದ ಈ ಪುಸ್ತಕದ ಕಥೆಗಳು ಹೇಗಿರಬಹುದು ಎನ್ನುವ ಕುತೂಹಲ ಸಹಜವಾಗಿಯೇ. ಆದರೆ ನನ್ನ ಅದೃಷ್ಟಕ್ಕೆ ಕಥೆಗಳು ನನ್ನನ್ನು ಕೈಬಿಡಲಿಲ್ಲ.


ಮೊದಲ ಕಥೆ 'ಆವಲ್ಲಿಗೆ ಪಯಣವಯ್ಯ'  ಬದುಕಿನ ದಾರಿಯನ್ನು ಹೇಳುತ್ತ ಹೋಗುತ್ತದೆ. ಏನೋ ಆಗಲು ಹೋಗಿ ಇನ್ನೇನೋ ಆದ ಬದುಕಿನ ಪಯಣ ನಮ್ಮನ್ನು ತಲುಪಬೇಕಾದ ಗುರಿಯನ್ನು ಬಿಟ್ಟು ಇನ್ನೆಲ್ಲಿಗೋ ತಲುಪಿಸುತ್ತದೆ. ಅಥವಾ ನಾವು ತಲುಪಬೇಕಾದ ಗಮ್ಯ ಅದೇ ಆಗಿರುತ್ತದೆಯೋ? ಹೀಗೆ ನಾನಾ ಯೋಚನೆಗಳನ್ನು  ಒಮ್ಮೆಲೆ ಮನದೊಳಗೆ ಮೂಡುವಂತೆ ಮಾಡುವ ಕಥೆ ಇದು.


   ದೋಣಿಯಲ್ಲಿ ನದಿ ದಾಟಿದವರಿಗೆ ಒಂದು ಅನುಭವ ಇರುತ್ತದೆ. ಅಂಬಿಗ ಹುಟ್ಟು ಹಾಕುತ್ತ ಹೋಗುವಾಗ ನಾವು ಇಳಿಯ ಬೇಕಾದ ದಡಕ್ಕಿಂತ ಎಷ್ಟೋ ಆಚಿನವರೆಗೆ ದೋಣಿಯನ್ನು ತೆಗೆದುಕೊಂಡು ಹೋಗುತ್ತಿರುತ್ತಾನೆ. ನಂತರ ನೀರಿನ ಸೆಳೆತ ಅದನ್ನು ಸರಿಯಾದ ದಡಕ್ಕೆ ತಂದು ನಿಲ್ಲಿಸುತ್ತದೆ. ನಮ್ಮ ಜೀವನವೂ ಹೀಗೆ. ದೋಣಿಯಂತೆ ಎಲ್ಲೆಲ್ಲೋ ಸುತ್ತುತ್ತದೆ. ನಾವು ಹೋಗಬೇಕಾದ ದಡಕ್ಕಿಂತ ಹೆಚ್ಚು ಆ ಕಡೆ ಈ ಕಡೆ ಹೋಗಿರುತ್ತೇವೆ. ಆದರೆ ನಮ್ಮದೇ ಆದ ದಡ ಸಿಕ್ಕಾಗ ಆಗುವ ಸಂತೋಷವೇ ಬೇರೆ. ನಮ್ಮ ಹುಡುಕಾಟ, ನಮ್ಮ ಹೋರಾಟ ಎಲ್ಲವೂ ಇದಕ್ಕಾಗಿಯೇ ಎನ್ನುವ ನಿರುಮ್ಮಳ ಭಾವ ಆವರಿಸುವ ಕ್ಷಣವಿದೆಯಲ್ಲ, ಅದು ಎಲ್ಲ ಭಾವಕ್ಕೆ ಮೀರಿದ್ದು. ಈ ಕಥೆಯಲ್ಲಿಯೂ ಕೂಡ ಪೂರ್ವಿಯ ಹುಡುಕಾಟ ಹಾಗೆಯೇ ಇದೆ. ಓದಿದಷ್ಟೂ ಓದಿಸುವ ಅಪ್ಪನಿರುವಾಗ ಹೆದರುವುದು ಯಾಕೆ ಎಂದು ಓದಿಯೇ ಓದಿದಳು. ಕೊನೆಗೆ ಅವಳು ಓದು ಮುಗಿಸಿ ಕೆಲಸ ಹಿಡಿದಾಗ ಕೂದಲು ಸಣ್ಣಗೆ ನೆರೆಯಲಾರಂಭಿಸಿತ್ತು. ಹೀಗಾಗಿ ಮನೆಯಲ್ಲಿ ಯಾವುದೋ ಸ್ವಾಮಿಜಿಯ ಪಾದಪೂಜೆ ಮಾಡಿದರೆ ಮದುವೆ ಆಗುತ್ತದೆಯೆಂದು ಅಪ್ಪ ಊರಿಗೆ ಬರಲು ಹೇಳಿದ್ದರಿಂದ ಹೊರಟವಳು, ಮೊಬೈಲ್‌ನಲ್ಲಿ ಗೇಮ್ ಉಂಟಾ' ಎನ್ನುತ್ತ ಬಂದ ಹುಡುಗಿ, ಅವಳನ್ನು ಹುಡುಕುತ್ತ ಬಂದ ಅವಳಜ್ಜಿಯನ್ನು ಪರಿಚಯಿಸಿ, ಯಾರೊಟ್ಟಿಗೋ ಓಡಿ ಹೋದ ಅವಳ ಅಮ್ಮನ ಕಥೆ ಹೇಳಿದ ಅಜ್ಜಿ ಕೊನೆಯಲ್ಲಿ ಪೂರ್ವಿಯನ್ನೇ ತನ್ನ ಸೊಸೆ ಎನ್ನುತ್ತ ಮಗನನ್ನು ಮದುವೆ ಆಗು ಎನ್ನುತ್ತಾಳೆ.


   ಇತ್ತ ಕಾಲೇಜು ದಿನಗಳಲ್ಲಿ ಸುಧನ್ವಾರ್ಜುನ ಯಕ್ಷಗಾನದಲ್ಲಿ ಇವಳು ಪ್ರಭಾವತಿ ಪಾತ್ರ ಮಾಡಿದಾಗ ಸುಧನ್ವನ ಪಾತ್ರ ಮಾಡಿ ಪ್ರೀತಿಸಿ, ದೇಹ ಹಂಚಿಕೊಂಡ ಹರೀಶನೇ  ಆ ದಿನದ ಸ್ವಾಮಿಯಾಗಿ ಪಾದಪೂಜೆಗೆ ಬರುತ್ತಾನೆ ಎಂದು ತಿಳಿದ ಪೂರ್ವಿ ಇರುವ ವಿಷಯ ತಿಳಿಸಿ ಪಾದಪೂಜೆಯಿಂದ ತಪ್ಪಿಸಿಕೊಂಡು ಇತ್ತ ತನ್ನ ಮಗನನ್ನು ಮದುವೆಯಾಗು ಎಂದು ಕೇಳಿಕೊಂಡ ನಿಜ ಜೀವನದ ಸುಧನ್ವನನ್ನು ಮದುವೆಯಾಗಲು ಒಪ್ಪಿಕೊಳ್ಳುವುದೇ ಕಥೆಗೊಂದು ವಿನೂತನ ತಿರುವು ನೀಡಿದೆ.


   'ಅಕ್ಕನ ಹಾದಿಯಲ್ಲಿ ಸಾಗಿದವಳಿಗೆ' ಕಥೆಯಲ್ಲಿ ಮದುವೆಯಾಗದೇ ತಾನು ಬಾಲ್ಯದಲ್ಲಿ ಪ್ರೇಮಿಸಿದವಳಿಗಾಗಿ ಕಾದು ಕುಳಿತ ಮಧ್ಯವಯಸ್ಕನೊಬ್ಬನ ಪ್ರೇಮಾಲಾಪದ ಪತ್ರ. ಎಸ್.ಎಸ್.ಎಲ್.ಸಿ  ಸೆಂಡ್ ಆಪ್ ದಿನ ಕೊಡಬೇಕು ಎಂದುಕೊಂಡ ಪ್ರೇಮಪತ್ರವನ್ನು ಎಲ್ಲ ಮುಗಿದು ಜೀವನದ ಕೊನೆಯ ಹಂತದಲ್ಲಿ ತೋಡಿಕೊಳ್ಳುವವನ ಮನದ ಮಾತುಗಳು ಇಲ್ಲಿವೆ. ಹೈಸ್ಕೂಲು ಮುಗಿಯುವವರೆಗೂ ಹಳ್ಳಿಗುಗ್ಗುವಿನಂತಿದ್ದ ಹುಡುಗಿ ಕಾಲೇಜು ಮೆಟ್ಟಿಲೇರಿದ್ದೇ ತಡ. ಅವಳು ಬೆಂಕಿ ಚೆಂಡಿನಂತೆ ಅಬ್ಬರಿಸುವಂತಾಗಿದ್ದು ಇವನಿಗೆ ಅಚ್ಚರಿ. ಕಾಲಚಕ್ರ ಉರುಳಿ ಅವಳಿಗೂ ಮದುವೆ ಆಗಿ, ಮದುವೆಯಾಗಿ ಹೊಸತರಲ್ಲಿ ಕಥೆ ಕವನ ಬರೆದು ನಂತರ ಗಂಡ ವಿರೋಧಿಸಿ, ಮೂವತ್ತು ವರ್ಷಕ್ಕೇ ಮುಖದ ತುಂಬ ಸುಕ್ಕು ಮೂಡಿಸಿಕೊಂಡವಳಿಗಾಗಿ ಜೀವಮಾನವಿಡಿ ಕಾದವನು ನಂತರ ಅವಳ ಗಂಡ ತೀರಿಕೊಂಡ ನಂತರ ಅವಳ ಮನೆಯವರು ಅವಳ ಮರುಮದುವೆ ಮಾಡ್ತಿದ್ದಾರೆ ಎಂದು ಗೊತ್ತಾದಾಗ ಮತ್ತೆ ಅವಳನ್ನು ಮದುವೆಯಾಗುವ ಆಸೆ ವ್ಯಕ್ತ ಪಡಿಸುವ ಪತ್ರ ಇದು. ಪತ್ರದ ಮುಖಾಂತರವೇ ಇಡೀ ಕತೆ ಓದುಗರಿಗೆ ಅರಿವಾಗುತ್ತದೆ. ಕಥಾ ಹಂದ ಸಾಮಾನ್ಯ ಎನ್ನಿಸಿದ್ದರೂ ಅದನ್ನು ಹೇಳಿದ ರೀತಿ ಮಾತ್ರ ವಿಭಿನ್ನ. ಹೇಳಿದ ಶೈಲಿಯಲ್ಲಿಯೇ ಅದನ್ನೊಂದು ಬೇರೆಯದ್ದೇ ಆದ ಕಥೆಯನ್ನಾಗಿಸಿದ್ದಾರೆ ಕಥೆಗಾರರು.


   ಅನಾಹತ ನಾದ ಎನ್ನುವುದು  ಈ ಸಂಕಲನದ ಗಮನ ಸೆಳೆಯುವ ಕಥೆಗಳಲ್ಲಿ ಒಂದು. ತೀರಾ ಸಂಪ್ರದಾಯಸ್ಥ ಕೇಶವನಿಗೆ ಪಟ್ಟಣದ ಮಗನ ಮನೆಯಲ್ಲಿ ಉಳಿಯುವುದೇ ಕಷ್ಟದ ಕೆಲಸ. ಆದರೆ ಹೆಂಡತಿ ತೀರಿಕೊಂಡ ನಂತರ ಅದು ಅನಿವಾರ್‍ಯವಾಗಿತ್ತು. ಪಟ್ಟಣದಲ್ಲಿದ್ದರೂ  ಹಳ್ಳಿಯ ಸಂಪ್ರದಾಯ ಮರೆಯಲಾಗದ ಕೇಶವ ದೇವಸ್ಥಾನದ ಲೆಕ್ಕ ಬರೆಯುವ ಕೆಲಸಕ್ಕೆ ಸೇರಿ ಕೊನೆಗೆ ದೇಗುಲದ ಪಂಚಪಾತ್ರೆ ಕಳುವಾಗಿ, ಆ ಕಳುವಿನ ಆರೋಪ ಹೊರಿಸಿಕೊಂಡು ಮಗ ಸೊಸೆಯಿಂದ ಛೀಮಾರಿ ಹಾಕಿಸಿಕೊಂಡ ಕೇಶಯ್ಯ ಊರಿಗೆ ಹೋಗಿ ಹಳೆ ಮನೆ ರಿಪೇರಿ ಮಾಡಿಕೊಳ್ಳುವ ತೀರ್ಮಾನ ಮಾಡಿಕೊಂಡ. ಊರಿಗೆ ಹೋದ ನಂತರ ಸಹಾಯ ಮಾಡಿದ್ದು ಅವನ ಬಾಲ್ಯದ ಸಹಪಾಠಿ ಅಬೂಬಕರ್. ಕೊನೆಗೆ ಗೃಹಪ್ರವೇಶಕ್ಕೆ ಬೇಕಾದ ಆಕಳು ಹಾಗು ಕರುವನ್ನು ತಂದಿದ್ದೂ ಆದೇ ಬ್ಯಾರಿ. ಗೃಹಪ್ರವೇಶಕ್ಕೆ ಎಲ್ಲರೂ ಬಂದು ಊಟ ಮಾಡಿ ಹೋದರೂ ಅಬೂಬಕರ್ ಬಂದಿರಲಿಲ್ಲ.  ಎಲ್ಲರೂ ಹೋದ ನಂತರ ಬಂದವನು ಅಲ್ಲಿಯೇ  ಉಳಿದು ತನ್ನ ಆಕಳಿಗೂ ಉಣ್ನಿಸಿದ್ದ. ಕೊನೆಗೆ ನೋಡಿದರೆ ಅಬೂಬಕರನ ಕಥೆ ಕೂಡ ಅದೇ ತರಹದ್ದು. ಹೆಂಡತಿ ಹೋದ ಮೇಲೆ ಮಕ್ಕಳು ಇವನನ್ನು ಸರಿಯಾಗಿ ನೋಡಿಕೊಳ್ಳದೇ ಹೈರಾಣಾಗಿದ್ದ. ಕೊನೆಗೆ ಕೇಶವಯ್ಯ ಅಬೂಬಕರನನ್ನು ಜೊತೆಗೇ ಇಟ್ಟುಕೊಳ್ಳುವ ನಿರ್ಧಾರ ಮಾಡುವುದರೊಂದಿಗೆ ಕಥೆ ಮುಗಿಯುತ್ತದೆ. ಬದುಕಿನ ಜಂಜಾಟದಲ್ಲಿ ಹೈರಾಣಾಗಿ ಹೋದ ಕೇಶವಯ್ಯ, ಕೊನೆಗೆ ತನ್ನೆಲ್ಲ ಮಡಿ ಮೈಲಿಗೆ ಬಿಟ್ಟು ಧರ್ಮದ ಕಂದಾಚಾರವನ್ನು ಮೀರಿ ಅನ್ಯಧರ್ಮದವನನ್ನು ಜೊತೆಗಿಟ್ಟುಕೊಳ್ಳುವ ತೀರ್ಮಾನ ಮಾಡುವುದು ಅಷ್ಟೊಂದು ಸುಲಭದ ವಿಷಯವಲ್ಲ. ಮಾನವಿಯತೆಯೇ ಎಲ್ಲಕ್ಕಿಂತ ಮುಖ್ಯ ಎನ್ನುವ ಈ ಕಥಾ ಹಂದರ ಬಹುಕಾಲ ನೆನಪಿನಲ್ಲಿ ಉಳಿಯುತ್ತದೆ.


   ಗೋ ಪೂಜೆ ಎನ್ನುವ ಇನ್ನೊಂದು ಕಥೆಯಲ್ಲೂ ಮಗನ ಮನೆಯ ಪ್ರವೇಶಕ್ಕೆ ಆಕಳು ಹಾಗೂ ಕರು ಬೇಕೇಬೇಕು ಎಂದು ಹಠ ಹಿಡಿದು ಯಾರೋ ದಳ್ಳಾಳಿಗಳಿಂದ ಕರೆದು ತಂದ ಆಕಳು ಲಿಪ್ಟ್‌ನ ಬಾಗಿಲಿಗೆ ಸಿಕ್ಕಿ ಕಾಲು ಮುರಿದುಕೊಳ್ಳುತ್ತದೆ. ಗೋ ಹತ್ಯೆ, ಗೋವಿಗೆ ನೋವು ಮಾಡಿದ್ದರ ಪಾಪ ಶ್ರೀಪತಿರಾಯರಿಗೆ ತಗಲುತ್ತದೆ ಎನ್ನುತ್ತಲೇ ಹೆಂಡತಿ ತಾನು ಈ ಪಾಪದಲ್ಲಿ ಪಾಲುದಾರಳಲ್ಲ ಎನ್ನುತ್ತಾಳೆ. ಅಷ್ಟೋ ಇಷ್ಟೋ ಕೊಟ್ಟು ಕೈ ತೊಳೆದುಕೊಳ್ಳಬೇಕೆಂದಿದ್ದ ಶ್ರೀಪತಿರಾಯರು ಆಕಳನ್ನು ಕೊಂಡು ತನ್ನ ಹಳ್ಳಿಯಲ್ಲಿ ತಾನೇ ಸಾಕಲು ತೀರ್ಮಾನಿಸುತ್ತಾರೆ. ಇಲ್ಲಿ  ನಮ್ಮ ಸಂಪ್ರದಾಯಗಳನ್ನು ಹಿಂದೆ ಮುಂದೆ ಯೋಚಿಸದೇ ಅನುಸರಿಸುವುದರಿಂದ ಆಗುವ ಅನಾಹುತದ ಕುರಿತು ಕಥೆಗಾರರು ಮಾರ್ಮಿಕವಾಗಿ ಹೇಳಿದ್ದಾರೆ. ಇವೆರಡೂ ಕಥಗಳು ಜಾತಿ, ಧರ್ಮದ ಹೆಸರಿನಲ್ಲಿ ಮಾನವೀಯತೆಯನ್ನು ಮರೆತವರು ಮುಟ್ಟಿ ನೋಡಿಕೊಳ್ಳುವಂತಿದೆ.


   ಇಂತಹುದ್ದೇ ಹಿರಿಯ ಶಿಕ್ಷಕಿಯೊಬ್ಬಳ ಕಥೆ ಬಳೆ. ಗಂಡ ತೀರಿಕೊಂಡ ನಂತರವೂ ಧೈರ್‍ಯದಿಂದ ಬದುಕನ್ನು ಎದುರಿಸಿ ತನ್ನಿಬ್ಬರು ಹೆಣ್ಣು ಮಕ್ಕಳನ್ನು ಓದಿಸಿ  ಒಳ್ಳೆಯ ಕಡೆ ಮದುವೆ ಮಾಡಿಕೊಟ್ಟರೂ ಅವರು ಅಮ್ಮನ ಆಸ್ತಿಗಾಗಿ ಕಿತ್ತಾಡುವುದು ವಿಷಾದ ಮೂಡಿಸುತ್ತದೆ. ಊರಿನ ಮಕ್ಕಳನ್ನೆಲ್ಲ ಸರಿ ದಾರಿಗೆ ತಂದ  ಟೀಚರ್ ಮಕ್ಕಳು ಹಾಗೂ ಅಳಿಯಂದಿರು ಅವರ ಕಾಲು ಮುರಿದದ್ದನ್ನೆ ನೆಪ ಮಾಡಿಕೊಂಡು ಮನೆ ಮಾರಿ ಹಂಚಿಕೊಂಡಿದ್ದೂ ಅಲ್ಲದೇ ಟೀಚರ್‌ನ್ನು ವೃದ್ಧಾಶ್ರಮಕ್ಕೆ ಸೇರಿಸಿ ಬಿಡುತ್ತಾರೆ. ಮಕ್ಕಳನ್ನು ನೋಡಬೇಕೆಂದು ಬಯಸಿದಾಗಲೆಲ್ಲ ನಿನ್ನ ಕೈಯ್ಯಲ್ಲಿರುವ ಬಳೆ ಯಾರಿಗೆ ಎಂದು ಹೇಳಿದರೆ ಮಾತ್ರ ಬರುವುದಾಗಿ ಹೇಳುವ ಕ್ರೂರತೆ ಎದೆಯನ್ನು ಹಸಿಯಾಗಿಸುತ್ತದೆ. ಆದರೆ ಶಿಕ್ಷಕರು ಯಾವಾಗಲೂ ಶಿಕ್ಷಕರೇ. ತನ್ನ ಮಕ್ಕಳಷ್ಟೇ, ಕೆಲವೊಮ್ಮೆ ಅದಕ್ಕೂ ಹೆಚ್ಚಾಗಿ ಶಾಲೆಯ ಮಕ್ಕಳನ್ನು ಪ್ರೀತಿಸುವುದನ್ನು ಸತ್ಯ ಎಂದು ಸಾಬೀತು ಮಾಡಲೋ ಎಂಬಂತೆ ಇಲ್ಲಿ ಅವರ ವಿದ್ಯಾರ್ಥಿಯೊಬ್ಬ ತನ್ನೆಲ್ಲ ಸಹಪಾಠಿಗಳನ್ನು ಕರೆತಂದು ಹುಟ್ಟಿದ ದಿನ ಆಚರಿಸಿ, ಸನ್ಮಾನ ಮಾಡುತ್ತಾರೆ. ಟೀಚರ್ ಕೂಡ ತನ್ನ ಬಳೆಯನ್ನು ತಾನು ಕಲಿಸುತ್ತಿದ್ದ ಶಾಲೆಗೆ ರಂಗ ಮಂದಿರ ಕಟ್ಟಲು ನೀಡುವುದರೊಂದಿಗೆ ಮುಗಿಯುತ್ತದೆ.  ಇಲ್ಲಿ ಶಿಕ್ಷಕರನ್ನು ಚಿತ್ರಿಸಿರುವ ರೀತಿ ಖಂಡಿತಾ ಸಹೃದಯರಿಗೆ ಇಷ್ಟವಾಗುತ್ತದೆ.


     ಭವದಲಿ ಬರಿದೆ ಕೂಡ ಇನ್ನೊಬ್ಬ ಶಿಕ್ಷಕಿಯ ಹಾಗೂ ಶಿಕ್ಷಕನ ನೋವಿನ ಕಥೆ.  ರಘುನಂದನ ಎಂಬ ಕಾಲೇಜು ಉಪನ್ಯಾಸಕನಿಗೆ ಯಾರೂ ಇಲ್ಲ. ಕೇವಲ ಬೇಕಾದಂತೆ ತಿಂದು ಹಾಯಾಗಿರುವ ರೂಢಿ. ಮದುವೆ ಆದವಳು ಮೊದಲ ರಾತ್ರಿಯೇ ತಾನು ಇನ್ನೊಬ್ಬನನ್ನು ಪ್ರೀತಿಸುತ್ತಿರುವುದಾಗಿ ಹೇಳಿದಾಗ ಅವನೊಟ್ಟಿಗೆ ತಾನೇ ನಿಂತು ಮದುವೆ ಮಾಡಿಸಿದ. ಹಿಂದಿನಿಂದ ಆಡಿಕೊಳ್ಳುವವರ ಬಾಯಿಗೆ ಹೆದರದೇ ತಾನೇ ಮುಮದಾಗಿ ತನ್ನ ವಿಷಯ ಹೇಳಿಕೊಂಡು ಬಿಡುತ್ತಿದ್ದ. ಹಳ್ಳಿಯಿಮದ ಅಣ್ಣನ ಮಗನನ್ನು ಜೊತೆಗಿರಿಸಿಕೊಂಡ. ಅವನಿಗೆ ಮದುವೆ ಆಗಿ ಸೊಸೆ ಬಂದಳು. ಈತ ರಿಟೈರ್ ಆದ ಮೇಲೆ ಎಲ್ಲವೂ ತಮ್ಮದೇ ಆಸ್ತಿ ಎಂದು ಹಾಯಾಗಿದ್ದವರು ಅವರು. ಎಣ್ಣೆಯ ತಿಂಡಿ, ಕುರುಕಲು, ಗೋಳಿಬಜಿ ತಿಂದು ದಪ್ಪವಾಗಿ ಪ್ರಕೃತಿ ಚಿಕಿತ್ಸೆಗೆ ಸೇರಿದ್ದರು. ಅಲ್ಲಿ ಸದಾ ತನ್ನ ಗಂಡ ಮಕ್ಕಳ ಕುರಿತು ಹೆಮ್ಮೆಯಿಂದ ಮಾತನಾಡುವ ಬೆಂಗಳೂರಿನಲ್ಲಿ ಲೆಕ್ಚರರ್ ಆಗಿದ್ದ ರಾಜಲಕ್ಷ್ಮಿ ಪರಿZಯವಾದರು. ಯಾವುದೋ ವ್ಯಾಯಾಮ ಮಾಡುವಾಗ ಕಳೆದು ಹೋದ ಅವರ ಮೂಗಿನ ನತ್ತು ರಘುನಂದನ್‌ಗೆ ಸಿಕ್ಕಿತ್ತು. ಪ್ರಕೃತಿಯಿಂದ ಡಿಸ್ಚಾರ್ಜ ಆಗುವಾಗ ರಾಜಲಕ್ಷ್ಮಿ ಮಗ ಸೊಸೆ ಮನೆಯಿಂದ ಹೊರ ಹಾಕಿದ್ದನ್ನು, ಹಾಗೂ ತನಗೆ ಎಲ್ಲಿಗೂ ಹೋಗಲಾಗದೆಂದು ಅಳುವುದನ್ನು ಕಂಡು ತನ್ನ ಮನೆಗೆ ಕರೆದೊಯ್ಯುವ ನಿರ್ಧಾರ ಮಾಡುವುದರೊಮದಿಗೆ ಕಥೆ ಮುಗಿಯುತ್ತದೆ. ಇಲ್ಲಿನ ಹೆಚ್ಚಿನ ಕಥೆಗಳು ವೃದ್ದಾಪ್ಯ ಹಾಗೂ ಅದರಿಂದ ಮನುಷ್ಯ ಅನುಭವಿಸುವ ಅವಮಾನ, ಮೋಸ ಹಾಗೂ ನಿರ್ಲಕ್ಷದ ಕುರಿತು ಹೇಳುತ್ತವೆ.


   ದತ್ತು ಕಥೆಯಲ್ಲಿ ಮಕ್ಕಳಾಗುವುದಿಲ್ಲ ಎಂದು ಮಗುವನ್ನು ದತ್ತು ತೆಗೆದು ಕೊಂಡ ನಂತರ ಮಗುವಿನ ಬಣ್ಣ ನೋಡಿ ಅದು ಕೆಳವರ್ಗದ ಮಗು ಇರಬಹುದೆಂದು ಗಂಡ ಹಾಗೂ ಗಂಡನ ಮನೆಯವರು ಅವಮಾನಿಸಿ ಅವಳನ್ನು ಹೊರಗೆ ಹಾಕಿದರೂ ತನ್ನ ಹೋರಾಟ ಬಿಡದ ಹೆಣ್ಣೊಬ್ಬಳ ಕಥೆ ಇಲ್ಲಿದೆ. ಗಂಡ ಮಗುವನ್ನು ದತ್ತು ತೆಗೆದುಕೊಳ್ಳುವಾಗ ಜೊತೆಗಿದ್ದರೂ, ಆU ಮಗುವಿನ ಬಣ್ಣದ ಬಗ್ಗೆ ಏನೂ ಹೇಳದೇ ಮಗು ಬೆಳೆಯುತ್ತ ಬಂದಂತೆ ಕೊಂಕು ಮಾತಾಡುವುದು ಹಾಗೂ ಅದೇ ಕಾರಣಕ್ಕಾಗಿ ಹೆಂಡತಿಯಿಂದ ಡೈವೋರ್ಸ ಪಡೆಯುವುದು ಮಾಡುತ್ತಾನಾದರೂ ಈಕೆ ಅದನ್ನೆಲ್ಲ ಧೈರ್‍ಯದಿಂದ ಎದುರಿಸಿ ಗಂಡನಿಂದ ಪರಿಹಾರ ಪಡೆದು ಮತ್ತೊಮದು ಕಪ್ಪು ಹೆಣ್ಣು ಮಗುವನ್ನು ದತ್ತು ತೆಗೆದುಕೊಳ್ಳುತ್ತೇನೆ ಎಂದು ಸವಾಲು ಹಾಕುವುದಿದೆಯಲ್ಲ ಅದು ಹೇಳಬೇಕಾದುದ್ದಕ್ಕಿತ್ತ ಅದೆಷ್ಟೋ ಪಟ್ಟು ಹೆಚ್ಚಿನದ್ದನ್ನು ಹೇಳುತ್ತದೆ. ಈ ಮಾತುಗಳಲ್ಲಿ ಹೆಣ್ಣಿನ ಶೋಷಣೆಯ ವಿರುದ್ಧದ ದನಿಯಿದೆ, ಸಂಪ್ರದಾಯದ ವಿರುದ್ಧದ ದನಿ ಇದೆ, ಜಾತಿ ಕಟ್ಟಳೆಯನ್ನು ಮೀರುವ ಸಂಕೇತವಿದೆ. ಇದೆಲ್ಲದರ ಜೊತೆಗೆ ಮತ್ತೊಂದು ಹೆಣ್ಣು ಮಗುವನ್ನು ದತ್ತು ತೆಗೆದುಕೊಂಡು ಸಾಕುವ ಮಾತಿನ ಹಿಂದೆ ಸಾಮಾಜಿಕ ಬದ್ಧತೆ ಹಾಗೂ ನಾವೆಲ್ಲ ನಿರ್ವಹಿಸಬೇಕಾದ ಕಾಳಜಿಯನ್ನು ಎತ್ತಿ ತೋರಿಸುವ ಬೆಳಕಿದೆ. ಹಾರಿದೆ ಗಗನಕೆ ಸೇರಿದೆ ಧರೆಗೆ ಎನ್ನುವ ಕಥೆಯಲ್ಲಿ ಅಪ್ಪನ ಕಾರಿಗೇ  ಆಕ್ಸಿಡೆಂಟ್ ಮಾಡಿಕೊಂಡ ಮಗನ ದುರಂತ ಅಂತ್ಯವಿದೆ. ವಿಧಿ ಲಿಖಿತ ಬಲ್ಲವರಾರು?ಸುಗಂಧಿರಾಮ ಅಪಾರ್ಟಮೆಂಟ್ ಕಟ್ಟಲು ಜಾಗ ಕೊಟ್ಟು, ಅದೇ ಅಪಾರ್ಟಮೆಂಟಲ್ಲಿ ಒಂದು ಪ್ಲಾಟ್‌ನಲ್ಲಿ ಉಳಿದು,  ಪೂಜೆ ಪುನಸ್ಕಾರ ಮಾಡಿ ಹಣ ಗಳಿಸಿ, ಯೋಗ, ಜಿಮ್ಮು ಕ್ಲಾಸ್ ಮಾಡಿ ಕೊನೆಗೆ ಮೈಮೇಲೆ ಬಂದವರಂತೆ ನಟಿಸಿ ಹಣ ಮಾಡಿಕೊಂಡ ರಾಮ ಕೊನೆಗೆ ಅಪಾರ್ಟಮೆಂಟ್ ಬೀಳುತ್ತದೆ ಎಂದು ಹೆದರಿ ಹುಚ್ಚನ ತರಹ ಆದ ಕಥೆ ಇದು.


 ಇಷ್ಟಾದರೂ ಕೆಲವು ಕಥೆಗಳು ಓಡುತ್ತ ಓಡುತ್ತ ಹಠಾತ್ತಾಗಿ ನಿಂತು ಹೋದ ಅನುಭವ ನೀಡುತ್ತವೆ. ಮುಂದೇನೋ ಇದೆ ಎನ್ನುವ ನಿರೀಕ್ಷೆಯಲ್ಲಿರುವಾಗ ಒಮ್ಮೆಲೆ ನಿಂತು ಇಷ್ಟೇನಾ ಎನ್ನಿಸುವಂತಾಗುವುದೂ ಇದೆ. ಆದರೆ ಕಥೆಗಳ ಮಾತು ಚಂದದ ಮಂಗಳೂರಿನ ಭಾಷೆಯಲ್ಲಿದ್ದು ನಮ್ಮನ್ನು ಅದರ ಸೊಗಡಿನಿಂದಲೇ ಹಿಡಿದಿಟ್ಟುಕೊಳ್ಳುತ್ತದೆ.  ಭಾಷೆಯ ಬಳಕೆ ನಮ್ಮನ್ನು ಗಂದರ್ವಲೋಕಕ್ಕೆ ಕೊಂಡೊಯ್ದಂತೆ. ಸುಲಲಿತವಾದ ಗ್ರಾಂಥಿಕ ಭಾಷೆಯ ನಮ್ಮನ್ನು ಕಥೆಗಳಲ್ಲಿ ಮುಳುಗಿ ಹೋಗುವಂತೆ ಮಾಡುತ್ತದೆ.

       

 



ಶ್ರಿದೇವಿ ಕೆರೆಮನೆ


146 views4 comments
bottom of page