top of page

ಚಂದ್ರಯಾನ-3

ಆಲೋಚನೀಯ: ಚಂದ್ರಯಾನ 3

ಬಹುಕಾಲದ ಕನಸೊಂದು ನನಸಾಗಿದೆ. ನನಸಾದ ಈ ಕನಸಿನಿಂದ ಜಾಗತಿಕ ಮಟ್ಟದಲ್ಲಿ ಭಾರತದ ಘನತೆ ಹೆಚ್ಚಿದೆ. ಇಸ್ರೊ ವಿಜ್ಞಾನಿಗಳ ಬಯಕೆ ಫಲಿಸಿದೆ‌. ಖಗೋಳ ವಿಜ್ಞಾನಿ ವಿಕ್ರಮ ಸಾರಾಬಾಯಿ ಅವರ ನೆನಪಿನ ವಿಕ್ರಮ ಗಗನ ನೌಕೆ ತಿಂಗಳನ ಅಂಗಳದಲ್ಲಿ ಯಶಸ್ವಿಯಾಗಿ ಇಳಿದು ತನ್ನ ಕೆಲಸವನ್ನು ಆರಂಭಿಸಿದೆ.

ಬಹುಪಾಲುವಿದೇಶಿಯರು ಭಾರತವನ್ನು ಅಷ್ಟಾಗಿ ಗೌರವಿಸಲಿಲ್ಲ. ಬ್ರಿಟಿಷರ ಆಗಮನದ ಬಳಿಕ ನಮ್ಮ ಸ್ವಾತಂತ್ರ್ಯವು ಹೋಯಿತು. ಅದಕ್ಕು ಮೊದಲು ಮುಸ್ಲಿಂ ಅರಸರ ಆಕ್ರಮಣದಿಂದ ನಮ್ಮ ಮಹತಿ ಮತ್ತು ಅಸ್ಮಿತೆಯನ್ನು ಸಾರಿ ಹೇಳುವ ತಕ್ಷಶಿಲಾ ಮತ್ತು ನಲಂದಾ ವಿಶ್ವವಿದ್ಯಾಲಯಗಳು ನೆಲಸಮವಾಗಿ ಹೋದವು. ನಮ್ಮ ತಂತ್ರಜ್ಞಾನದ ಪ್ರಯೋಜನವನ್ನು ಪರಕೀಯರು ಬಳಸಿಕೊಂಡರು. ನಮ್ಮ ಮನಸ್ಥಿತಿಗೆ ಗ್ರಹಣ ಹಿಡಿದಿತ್ತು. ಚಂದ್ರಯಾನ-3 ಈ ಗ್ರಹಣ ಮೋಕ್ಷಕಾಲವಾಗಿ ಕಾಣುತ್ತಿದೆ.

ಚಂದ್ರನ ದಕ್ಷಿಣ ಭಾಗದಲ್ಲಿ ಇಳಿದ ವಿಕ್ರಮ ಹೆಸರಿನ ಲ್ಯಾಂಡ ರೋವರ್ ಅಲ್ಲಿಯ ಪೋಟೊಗಳನ್ನು ಕಳಿಸ ತೊಡಗಿದೆ. ಈ ಮೂಲಕ ಭಾರತ ವಿಶ್ವಗುರು ಎಂಬ ಮಾತಿಗೆ ಅನುಮೋದನೆ ದೊರಕಿದೆ. ಈ ಚಂದ್ರಯಾನದ ಬಗ್ಗೆ ನ್ಯೂಯಾರ್ಕ ಟೈಮ್ಸ ಎಂಬ ಪತ್ರಿಕೆ ವ್ಯಂಗ್ಯ ಚಿತ್ರ ಪ್ರಕಟಿಸಿ ಗೇಲಿ ಮಾಡಿತ್ತು. ಆದರೆ ಇಸ್ರೊ ವಿಜ್ಞಾನಿಗಳ ಸಂಶೋಧನಾ ಮನೋಭಾವ,ಅವರ ಸತತ ಪರಿಶ್ರಮ,ಬುದ್ದಿಮತ್ತೆ ಜಾಣ್ಮೆ,ತಾಳ್ಮೆ ಎಲ್ಲವು ಸೇರಿ ನಿರೀಕ್ಷಿತ ಫಲ ದೊರಕಿದೆ. ತಮ್ಮ ಹಣ ಬಲ ಮತ್ತು ಪೈಪೋಟಿಯಿಂದ ಭಾರತವನ್ನು ಹಿಂದೆ ಹಾಕುವ ವಿದೇಶಿಯರ ಪ್ರಯತ್ನ ಫಲಿಸಲಿಲ್ಲ.

" ಬರುವುದೇನುಂಟೊಮ್ಮೆ ಬರುವ ಕಾಲಕೆ ಬಹುದು

ಬಯಕೆ ಬರುವುದರ ಕಣ್ಸನ್ನೆ ಕಾಣೊ

ಅರಿಯದಾ ಹವಣಿಕೆಯು ಜೀವ ಜೀವನ ಲೀಲೆ

ದೇವ ದೇವನ ಗೂಢ ವಿಧಿಯು ಕಾಣೊ" ಮಧುರ ಚೆನ್ನ

ಎಂಬ ಅನುಭಾವ ಕವಿ ಮಧುರ ಚೆನ್ನರ ಮಾತು ನಿಜವಾಗಿದೆ.

ಬಾಲ್ಯದಲ್ಲಿ ಚಂದಿರ ನಮ್ಮನ್ನು ಬಹಳ ಕಾಡಿದ್ದ. ಮಕ್ಕಳ ಕವಿತೆ,ಕತೆ,ಒಗಟು,ಗಾದೆಗಳು ಚಂದ್ರನ ಸುತ್ತ ಮುತ್ತ ಕೇಂದ್ರಿಕೃತವಾಗಿದ್ದವು.

ಚಂದಿರ ನೇತಕೆ ಓಡುವನಮ್ಮ

ನಾನು ಓಡಲು ತಾನು ಓಡುವನಮ್ನ


ಗೋಪಿಯು ಪುಟ್ಟುವು ಬಂದು ಬಾವಿಲಿ ಇಣುಕಿದರು

ಬಾವಿಲಿ ಚಂದ್ರನ ಬಿಂಬವ ಕಂಡು ಕೊಕ್ಕೆಯ ಹುಡುಕಿದರು.


ಇಂತಹ ಕವನಗಳು ನಮ್ಮ ಮನಸೂರೆ ಗೊಂಡಿದ್ದವು. ಆದಿ ಕವಿ ವಾಲ್ಮೀಕಿಯ ರಾಮಾಯಣದಲ್ಲಿ ಬಾಲಕ ರಾಮ ಊಟ ಮಾಡಲು ಚಂದಿರ ಬೇಕೆಂದು ಹಟಮಾಡಿದಾಗ ಚಿಕ್ಕಮ್ಮ ಕೈಕೆಯಿ ಆತನಿಗೆ ಕನ್ನಡಿಯಲ್ಲಿ ಚಂದ್ರನನ್ನು ತೋರಿಸಿ ಸಮಾಧಾನ ಮಾಡಿ ಊಟ ಬಡಿಸಿದ ಕತೆ ಕೇಳಿದ್ದೇವೆ‌. ಸಮುದ್ರ ಮಥನದಲ್ಲಿ ಚಂದ್ರ ದೊರಕಿದ ಎಂಬ ಪುರಾಣ ಕತೆಯು ಇದೆ.ಸಮುದ್ರ ಮಥನದಲ್ಲಿ ದೊರಕಿದ ಅಮೃತವನ್ನು ದೇವತೆಗಳಿಗೆ ಬಡಿಸುವಾಗ ಅವರ ಪಂಕ್ತಿಯಲ್ಲಿ ದಾನವನೊಬ್ಬ ದೇವತೆಗಳ ವೇಷ ಧರಿಸಿ ಕಳಿತಿದ್ದನ್ನು ಸೂರ್ಯ ಚಂದ್ರರು ಗುರುತಿಸಿ ಮೋಹಿನಿಗೆ ತಿಳಿಸಿದಾಗ ಆಕೆ ಬಡಿಸುವ ಸಟ್ಟುಗದಿಂದ ಆತನ ತಲೆ ಕತ್ತರಿಸಿದಾಗ ರುಂಡ ಮುಂಡಗಳು ಬೇರೆಯಾಗಿ ಅವರೆ ರಾಹು ಕೇತುಗಳಾಗಿ ಗ್ರಹಣ ಕಾಲದಲ್ಲಿ ಸೂರ್ಯ ಚಂದ್ರರನ್ನು ಕಾಡುತ್ತಾರೆ ಎಂಬ ಕತೆ ಕೇಳಿದ್ದೇವೆ‌. ನವ ಗ್ರಹಗಳಲ್ಲಿ ಸೂರ್ಯ ಚಂದ್ರರಿಗೆ ವಿಶೇಷ ಸ್ಥಾನ ಮಾನವಿದೆ. ಹಿಂದುಗಳು ಚಂದ್ರ ದರ್ಶನವಾದ ಬಳಿಕ ಸಂಕಷ್ಟ ಚವತಿಯ ದಿನ ಆತನಿಗೆ ಅರ್ಘ್ಯ ನೀಡುವ ಕ್ರಮವಿದೆ. ಮುಸ್ಲಿಮರು ಚಂದ್ರ ದರ್ಶನವಾದ ಮೇಲೆ ರಂಜಾನ ಉಪವಾಸವನ್ನು ಮುಗಿಸುತ್ತಾರೆ.ಹೀಗೆ ಚಂದ್ರನ ಬಗ್ಗೆ ಕತೆ ಪುರಾಣ ಐತಿಹ್ಯಗಳು ವಿಪುಲವಾಗಿವೆ.

ಇಸ್ರೊ ವಿಜ್ಞಾನಿಗಳು ಯಾರು ಈ ವರೆಗೆ ಇಳಿಯದ ಚಂದ್ರನ ದಕ್ಷಿಣ ದ್ರುವದಲ್ಲಿ ವಿಕ್ರಮ ಗಗನ ನೌಕೆ ಇಳಿಸಿ ಮುಂದಿನ ವಿವರಗಳ ಸಂಗ್ರಹಕ್ಕಾಗಿ ಅಣಿಯಾಗಿದ್ದಾರೆ.

" ಇಲ್ಲುಂಟು ಅಗೆವ ಬುದ್ದಿಗೆ ಅನಂತ ಅವಕಾಶ

ಹೊಳೆದದ್ದು ತಾರೆ ಉಳಿದದ್ದು ಆಕಾಶ" ಎಂಬ ಕವಿ ಕೆ.ಎಸ್.ನರಸಿಂಹಸ್ವಾಮಿ‌ ಅವರ ಕವನವನ್ನು ನಿಜವಾಗಿಸಿ ತಾರೆಗಳನ್ನು‌ ಹೊಳಲಸಿದ್ದಾರೆ.

ಪ್ರದಾನಿ ನರೇಂದ್ರ ಮೋದಿಯವರು ತಮ್ಮ ಹದಿಮೂರು ತಾಸುಗಳ ಕಾಲದ ವಿಮಾನ ಯಾನದ ದಣಿವನ್ನು ಕಡೆಗಣಿಸಿ ಇಸ್ರೊ ವಿಜ಼್ಞಾನಿಗಳನ್ನು ಕಂಡು ಮನ ತುಂಬಿ ಭಾವ ತುಂಬಿ ಅಭಿನಂದಿಸಿದ್ದಾರೆ. ಭಾರತದ ಮಟ್ಟಿಗೆ ಇದು ಅವಿಸ್ಮರಣೀಯ ಘಟನೆ. ಜಗತ್ತಿನ ದೃಷ್ಟಿಯಲ್ಲಿಯು ಭಾರತದ ಈ ಸಾಧನೆ ಅವರೆಲ್ಲರನ್ನು ಹುಬ್ಬೇರಿಸುವಂತೆ ಮಾಡಿದೆ‌. ಈ ಕಾರಣಕ್ಕಾಗಿ ನಮ್ಮ ವಿಜ್ಞಾನಿಗಳನ್ನು, ಅವರ ಎಲ್ಲ ಕ್ಷೇತ್ರದ ಸಹಾಯಕರನ್ನು ಈ ಸಂತಸದ ಸಂದರ್ಭದಲ್ಲಿ

ಮನತುಂಬಿ ಅಭಿನಂದಿಸೋಣ. ಜಯವಾಗಲಿ ಭಾರತೀಯರಿಗೆ ಮತ್ತು ಭಾರತದ ಭವ್ಯ ಪರಂಪರೆಗೆ.


ಡಾ.ಶ್ರೀಪಾದ ಶೆಟ್ಟಿ





162 views0 comments
bottom of page