top of page

⌛ ಚಂಡೆ ಮಾಂತ್ರಿಕನ ಸ್ಮರಣೆಯಲ್ಲಿ - ಒಂದು ಪಯಣ ⌛

ಹೆಜ್ಜೆ -6

ಯಕ್ಷಗಾನ ಹಾಗೂ ತಾಳಮದ್ದಲೆಗಳಲ್ಲಿ ಭಾಗವತನೇ ಪ್ರಥಮ ವೇಷಧಾರಿ. ಆತನೇ ನಿರ್ದೇಶಕ. ನಿಯಂತ್ರಕ, ತತ್ತ್ವನಿರ್ಣಾಯಕ ಹಾಗೂ ಕೇಂದ್ರಬಿಂದು.

’ಭ’ಕಾರೋ ಭಗವದ್ಭಕ್ತಃ

’ಗ’ಕಾರೋ ಗರ್ವವರ್ಜಿತಃ

’ವ’ಕಾರೋ ವಾಕ್ಯನಿರ್ಣಯಃ

’ತ’ ಕಾರೋ ತತ್ತ್ವನಿರ್ಣಯಃ


’ಭ’ಕಾರವು ಭಗವದ್ಭಕ್ತನೆಂದು... ’ಗ’ಕಾರವು ಗರ್ವವರ್ಜಿತನೆಂದು... ‘ವ’ಕಾರವು ವಾಕ್ಯ [ಕಥೆ-ನರ್ತನ-ಮಾತುಗಳ] ನಿರ್ಣಾಯಕನೆಂದು... ‘ತ’ಕಾರವು ತತ್ತ್ವನಿರ್ಣಾಯಕನೆಂದು... ಭಾಗವತ ಶಬ್ದವನ್ನು ವಿವರಿಸುವರು. ಭಾಗವತನಿಗೆ ಇರುವ ಸ್ಥಾನ-ಮಾನ ಅತ್ಯಂತ ಶ್ರೇಷ್ಠವಾದುದು.

ತಾಳ, ರಾಗ, ಶೃತಿ ಎಲ್ಲವನ್ನೂ ಸೂಕ್ತ ರೀತಿಯಲ್ಲಿ ಹೊಂದಿಸಿಕೊಂಡು ಹೋಗುವ ಕಲೆ ಭಾಗವತನಿಗೆ ಕರಗತವಾಗಿರಬೇಕು. ಪ್ರಸಂಗದ ಪದ್ಯ ಹಲವಾರು ರಾಗಗಳ ಮಟ್ಟಿನಿಂದ ಕೂಡಿರುತ್ತದೆ. ಮಟ್ಟುಗಳ ಖಚಿತ ಭಾವಸ್ಪುರಣತೆ ಬೇಕಾಗುವುದು.


ಮೊದಲು ಪ್ರಸಂಗದ ಪದ್ಯವನ್ನು ಹೇಳುವಾಗ ನಿಂತು ಕೊಂಡೇ ಹಾಡುತ್ತಿದ್ದರು. ಪ್ರಸಂಗದ ಪಟ್ಟಿಯನ್ನು ನೋಡಿಕೊಂಡು ಹೇಳುತ್ತಿರಲಿಲ್ಲ! 100-150 ಪ್ರಸಂಗಗಳು ಭಾಗವತನಿಗೆ ಬಾಯಿಪಾಠವೇ ಬರುತ್ತಿತ್ತು! ಪ್ರತಿ ಪದ್ಯ + ವಚನವನ್ನೂ ಬಿಡದೇ ಹೇಳುತ್ತಿದ್ದರು. ಕಾಲವು ಗತಿಸಿದಂತೆ ನಿಷ್ಠೆಯ ಕೊರತೆಯಾಗಿ ಪ್ರಸಂಗದ ಪ್ರತಿ ಪದ್ಯವನ್ನು ಹೇಳುವ ಕ್ರಮ ಬದಲಾಯಿತು. ನಂತರ ಪ್ರಸಂಗ ನೋಡುವುದು, ಈಗಿತ್ತ ಮೊಬೈಲ್ ಭಾಗವತಿಕೆಯವರೆಗೆ ಬಂದಿದೆ. ಈಗ ತುರುಪಿನ ಪದ್ಯಗಳದಷ್ಟೇ ಕಾಲ. ಗಣಪತಿ ಪದ್ಯವನ್ನು ಸಹ ಕಾಟವೆಂಬಂತೆ ಹೇಳುವರು!


ಕಲಾವಿದರ ಸಂಘರ್ಷ ಮತ್ತು ವಿತಂಡವಾದವನ್ನು ಬಗೆ ಹರಿಸುವವನೂ ಭಾಗವತನೇ ಆಗಿದ್ದನು. ಭಾಗವತನ ಮಾತು ವೇದ ವಾಕ್ಯಗಳಾಗಿತ್ತು. ಕಾಲ ಕಳೆದಂತೆ ಭಾಗವತನೂ ಗುಂಪುಗಾರಿಕೆಯ ಒಂದು ಭಾಗವೇ ಆದನು. ಪ್ರಿಯರ ಪರವಾಗಿ ನಿರ್ಣಯ ಕೊಡುವುದು. ಭೇದ-ಭಾವವನ್ನು ಮಾಡುವುದು, ತನ್ನ ಪಾವಿತ್ರ್ಯವನ್ನು ಇಟ್ಟುಕೊಳ್ಳದೇ ಪತನದ ದಾರಿಯನ್ನು ಹಿಡಿದನು.

ಯಕ್ಷಗಾನದ ಪಾತ್ರಧಾರಿಗೆ ಭಾವಪ್ರದರ್ಶನಕ್ಕಾಗಿ ನಿರ್ಣಯಾತ್ಮಕವಾಗಿ ಸಹಕರ ನೀಡಬೇಕಾದ ಹಿರಿಯ ಸ್ಥಾನದಲ್ಲಿರುವ ಭಾಗವತ ತೇಜೋವಧೆಯನ್ನು ಮಾಡಿ ಅವನ ಶಕ್ತಿಯನ್ನು ಕುಂದಿಸುವ ಕೀಳು ಮಟ್ಟಕ್ಕೆ ತಲುಪಿದ. ತಾರ ತಮ್ಯವನ್ನು ಮಾಡತೊಡಗಿದ.


ಶಿರಸಿಯಲ್ಲೊಂದು ತಾಳಮದ್ದಲೆ.

ದಕ್ಷಿಣೋತ್ತರ ಕನ್ನಡ ಜಿಲ್ಲೆಯ ಘಟಾನುಘಟಿ ಸ್ಪರ್ಧಾತ್ಮಕ ತಾಳ ಮದ್ದಲೆ. ಶೇಣಿ, ಪೆರ್ಲ, ಮೂಡಂಬೈಲ್, ಪರಮೇಶ್ವರ ಭಟ್ಟ ಬೈಲಕೇರಿ, ರಾಜಾರಾಮ ಮಾಸ್ತರ್ ಗೋಕರ್ಣ, ಕೆರೆಕೈ ಕೃಷ್ಣ ಭಟ್ಟರು, ಹಸರಗೋಡು ಲಕ್ಷ್ಮೀನಾರಾಯಣ ಹೆಗಡೆ …. ಮುಂತಾದ ಮುನ್ನೆಲೆಯ ಕಲಾವಿದರು. ದಿನ ಬಿಟ್ಟು ದಿನ ತಾಳ ಮದ್ದಲೆ. ಮೂರು ತಾಳಮದ್ದಲೆ ನಡೆಯಿತು.

ಯಾವ ಪುಣ್ಯಾತ್ಮ ನೆರವೇರಿಸಿದ ತಾಳ ಮದ್ದಲೆಯೋ? ಉದ್ದೇಶವೇ ದಕ್ಷಿಣದವರು ಮೇಲೋ? ಉತ್ತರದವರು ಮೇಲೋ? ಎಂದು ಚಂದ ನೋಡಲು ತಾಳಮದ್ದಲೆ ಏರ್ಪಾಡಾಗಿತ್ತು!!

ಮೊದಲ ದಿನ ಸರಳವಾಗಿ ತಾಳಮದ್ದಲೆ ನಡೆಯಿತು. ದಕ್ಷಿಣದ ಕಲಾವಿದರನ್ನು ತಂದವನು ತಾನು ಎಂಬ ಒಣ ಹೆಮ್ಮೆ ಕಡತೋಕಾದವರಿಗಿತ್ತು. ನಾನು ತಿಳಿದಂತೆ ತಾಳಮದ್ದಲೆಯ ಪ್ರಚಾರಕ್ಕೆ ಕಬಣೂರು ಬಾಲಕೃಷ್ಣ ವಕೀಲರು ಕಾರಣರು. ತಂಡವನ್ನು ಕಟ್ಟಿಕೊಂಡು ಎಲ್ಲಡೆ ಪ್ರಚಾರ ಮಾಡಿದವರು. ಎರಡನೆಯವರು ಗೋಕರ್ಣದ ಎಕ್ಟರ್ ಜೋಶಿ. ಮೂರನೆಯವರು ಕಡತೋಕಾದವರು!

ಚಿತ್ರ ಕೃಪೆ : ಸತೀಶ್ ಯಲ್ಲಾಪುರ


ನಾಲ್ಕನೆಯವರು ಎಂದಿಲ್ಲ! ಏಕೆಂದರೆ ಅಲ್ಲಲ್ಲಿ ನಾಯಿಕೊಡೆಯಂತೆ ಸಂಘಟಕರು ಜನಿಸಿದರು! ಅವರು ಕಲಾವಿದರಿಂದಲೂ ಹಣ ಪಡೆಯುವುದು, ಸರಕಾರದಿಂದ ಹಣ ಪಡೆಯುವುದು, ಸಂಘ-ಸಂಸ್ಥೆಗಳಿಂದ ಮೊದಲೇ ಹಣ ಪಡೆಯುವುದು. ಟಿಕೀಟ್ ಸೇಲ್ ಮಾಡುವುದು, ದಾನಿಗಳಿಂದ ಹಣ ಸಂಗ್ರಹಿಸುವುದು …. ಅಂತೂ ಹಣ ಮಾಡುವುದಕ್ಕಾಗಿಯೇ ಸಂಘಟಕರು ಟೊಂಕ ಕಟ್ಟಿ ನಿಂತರು. ಇಬ್ಬರು ಮನೆಕಟ್ಟಿಸಿಕೊಂಡರು! ಒಬ್ಬನು ಮಗನಿಗೆ ಸಿ. ಏ ಮಾಡಿಸಿದನು. ಈ ಸಂಘಟಕರ ಮೇಲೆ ಸಾಮಾಜಿಕ ಸ್ಥಾನವನ್ನು ಹೊಂದಿದ ಬೇರೆಯವರಿರುತ್ತಿದ್ದರು. ಅವರ ಹೆಸರು ಇವರ… !!


ಇದು ಆ ಮಹಾ ಸಂಘಟಕರಿಗೆ ತಿಳಿದಿರುತ್ತಿತ್ತೋ ಇಲ್ಲವೋ ಯಾರಿಗೂ ಅರಿವಿಗೆ ಬರುವುದಿಲ್ಲವಾಗಿತ್ತು! ಆದರೆ ಅವರೂ ಕಲೆಯಿಂದ ಬೇಕಾದಷ್ಟು ಸಂಪಾದಿಸಿದವರೇ!! ಮೊದಲನೆಯ ದಿನ ಹೇಗೋ ತಾಳಮದ್ದಲೆ ನಡೆಯಿತು! ಎರಡನೆಯ ದಿನ, ಉತ್ತರದ ಒಬ್ಬರ ಅರ್ಥ ಚೆನ್ನಾಗಿತ್ತು. ಕಡತೋಕಾದವರು ಪ್ರಸಂಗವನ್ನು ಅರ್ಧದಲ್ಲಿಯೇ ನಿಲ್ಲಿಸಿದರು. ಕಾರಣ ಅವರಿಗೆ ಅರ್ಥ ಹೇಳಿದ ರೀತಿ ಸರಿಬರದ ಕಾರಣ. ಪ್ರಸಂಗವನ್ನು ಹರಿದು ಎರಡು ಭಾಗವನ್ನನಾಗಿಸಿ ಒಗೆದು ಹೋದರು.


ಮೂರನೆಯ ದಿನ, ಯಕ್ಷಗಾನ ತಾಳಮದ್ದಲೆಯ ಪ್ರಸಿದ್ಧಸಿದ್ದವಾದ ಜಗಳದ ತಾಳಮದ್ದಲೆ. ಶೇಣಿಯವರ ಕರ್ಣ. ಕೆರೇಕೈಯವರ ಶಲ್ಯ. ಕೆರೆಕೈಯವರ ಶೈಲಿಯ ಕ್ರಮವೆಂದರೆ ಹಳೆಯ ತಾಳಮದ್ದಲೆಯಂತೆ ಭಾವಪೂರ್ಣವಾಗಿ ಅರ್ಥಹೇಳುವುದು. ಕೆಲವೊಮ್ಮೆ ಭಾವಾವೇಷವೂ ಆಗಿ ಬಿಡುತ್ತಿತ್ತು. ಅದು ಹಾರಾಡಿದಂತೆ, ಕೈಸಾರೆ ಬಂದಂತೆ, ಜಗಳಕ್ಕೇ ಬಂದಂತೆ ಎದುರು ಪಾತ್ರಧಾರಿಗೆ ಮತ್ತು ಪ್ರೇಕ್ಷಕರಿಗೆ ಕಾಣುತ್ತಿತ್ತು! ವಿದ್ವಾಂಸರು! ಆದರೆ ವಿಮರ್ಶಕರಲ್ಲ! ಸಿರ್ಸಿವಲಯದಲ್ಲಿ ತೂಕದ ವ್ಯಕ್ತಿತ್ವವನ್ನು ಹೊಂದಿದವರು! ತುಂಬು ಸಹೃದಯರು. ಹಲವಾರು ಗಣ್ಯರ ಒಡನಾಟವಿದ್ದವರು!


ಶೇಣಿಯವರಿಗೆ ‘ಈ ಮನುಷ್ಯ ಹೊಡೆದಾಟಕ್ಕೇ ಬರುತ್ತಾನೆ ಎನಿಸಿತೋ ಏನೋ? ‘ನಿಮ್ಮ ಸಂಬಂಧ ಮಾಡಿಯೇನು. ಆದರೆ ನೀವು ಅರ್ಥಕ್ಕೆ ಆಳಲ್ಲ’ ಎನ್ನುತ್ತಾ ಎದ್ದು ಬಿಟ್ಟರು. ಅಂದಿನ ಮುತ್ಸದ್ಧಿ, ರಾಜಕಾರಣಿ, ಸಹಕಾರಿ ವಲಯದ ಪಿತಾಮಹ ಶ್ರೀಪಾದ ಹೆಗಡೆ ಕಡವೆಯವರು ಮಧ್ಯಸ್ಥಿಕೆ ವಹಿಸಬೇಕಾಯಿತು. ಆದರೂ ಪ್ರಸಂಗಕ್ಕೆ ಕಳೆಯೇ ಬರಲಿಲ್ಲ! ಅಂತೂ ‘ಜಗಳದ ಪ್ರಸಂಗ’ ಎಂದೇ ಖ್ಯಾತಿ ಹೊಂದಿತು.


ಕಡತೋಕಾದವರೇ ‘ಕೆರೆಕೈ ಸಂಸ್ಮರಣ’ ಗ್ರಂಥದಲ್ಲಿ ‘ಶೇಣಿಯವರ ಮುಂದಿನ ವಾರಸುದಾರ ಅವರ ಮಗ’ ಎಂದು ಬಣ್ಣಿಸಿದರು. ಕೃಷ್ಣ ಭಟ್ಟರ ಮಗನನ್ನು ದ. ಕ. ದಲ್ಲಿ ಬೆಳೆಸಿದವರು ಶೇಣಿಯವರು ಎಂದು ಹಲವರು ಹೇಳುವರು! ಇದು ಹೌದಾದರೆ ಶೇಣಿಯವರಿಗೆ ಹೊಟ್ಟೆಯಲ್ಲಿ ಹುಳುಕಿಲ್ಲ ಎನ್ನುವುದು ತಿಳಿಯುವುದು! ಆದರೂ ದ.ಕ, ಉ.ಕದಕಲಾವಿದರು ಭಾವ-ಮಾತುಗಳಲ್ಲಿ ಹೊಂದಿಕೊಂಡು ಸಾಗುವುದು ಅಪರೂಪವೇ! ಈಗಲೂ…


ನನ್ನ ನೆನಪಿನಂತೆ ಇದಾದ ನಂತರ ಹಲವು ತಾಳಮದ್ದಲೆಗಳು ಅನೇಕ ಭಾಗವತರುಗಳಿಂದ, ತಾಳಮದ್ದಲೆಯ ಅರ್ಥಧಾರಿಗಳಿಂದ ಅಲ್ಲಲ್ಲಿ ನಿಂತ ಪ್ರಕರಣಗಳಿವೆ. ಪರಸ್ಪರ ಅರ್ಥಧಾರಿಗಳ ಜಗಳದಿಂದ ನಿಂತ ಪ್ರಕರಣಗಳೂ ಇವೆ.

ಇದರಿಂದ ಒಂದು ಪ್ರಮುಖ ಬದಲಾವಣೆ ಆಯಿತು! ದಕ್ಷಿಣ ಕನ್ನಡದಿಂದ ಬರುವವರು ತಮ್ಮ ಜೊತೆ ತಮ್ಮವರನ್ನು ಸೇರಿಸಿಕೊಂಡು ಬರುವ ಪರಿಪಾಠ ಬೆಳೆಯಿತು. ಒಂದರ್ಥದಲ್ಲಿ ಜಗಳವಿಲ್ಲದೇ ಮಾತಿನ ಚಕಮಕಿಯಲ್ಲಿ ರಂಜಿಸಿ ಹೋಗುವುದು ರೂಢಿಗೆ ಬಂತು! ಕೆಲವು ಸಲ ಮೆಚ್ ಫಿಕ್ಸಿಂಗ್ ಆಯಿತು!! ಇದಕ್ಕೆ ತುಂಬಾ ಹೊರತಾಗಿದ್ದವರು ಡಾ. ಪ್ರಭಾಕರ ಜೋಶಿಯವರು. ಅವರಿಗೆ ಉತ್ತರ, ದಕ್ಷಿಣ, ಶಿವಮೊಗ್ಗಾ ಜಿಲ್ಲೆಯ ನೇರ ಹಾಗೂ ಬಾಲ್ಯದ ಗೆಳೆತನವಿತ್ತು! ಎಂ. ಕೊಂ. ಕಲಿಯುವಾಗ ಉತ್ತರ ಕನ್ನಡದ ಸಂಪರ್ಕ. ಹುಟ್ಟಿ ಬೆಳೆದುದೆಲ್ಲ ದ. ಕ., ಶಿವಮೊಗ್ಗಾ ಜಿಲ್ಲೆಯೂ ಅವರನ್ನು ಗೌರವಿಸಿತು!


**********************************

ಉಂಡ ಎಲೆ, ಏರಿದ ಏಣಿಯನ್ನು ಮರೆಯುವುದು ಮನುಷ್ಯನ ಸಹಜಗುಣ. ಅದೂ ಕಲೆಯ ದುರ್ಗುಣವೇನೋ? ಆದರೆ ಕುಟ್ಟಣ್ಣ ಇಂತಹ ವಿವಾದಕ್ಕೆ ಎಂದು ಸಿಕ್ಕಿದವರಲ್ಲ! ಸೋತವನೇ ಜಾಣ ಎನ್ನುವುದೇ ಅವನ ಸೂತ್ರ.

*********************************

ಯಕ್ಷಗಾನ ತಾಳಮದ್ದಲೆಯಲ್ಲಿ ವೇಷಧಾರಿಗಳಿಗೆ ಮಾತ್ರ ನಿರ್ದಿಷ್ಟ ವೇಷ-ಭೂಷಣಗಳಿರುವುದಿಲ್ಲ. ಹಿಮ್ಮೇಳದವರೂ ಸಾಂಪ್ರದಾಯಿಕ ಉಡುಗೆ ಧರಿಸುವುದು ಪದ್ಧತಿ. ಭಾಗವತರು ಸೇರಿದಂತೆ ಎಲ್ಲಾ ಹಿಮ್ಮೇಳದವರು ಬಿಳಿ ಪಂಚೆ, ಅದಕ್ಕೊಪ್ಪುವ ಸಾಂಪ್ರದಾಯಿಕವಾಗಿ ಜುಬ್ಬಾ ಧರಿಸಿ, ಹೆಗಲಿಗೊಂದು ಶಲ್ಯ, ತಲೆಗೆ ಕೆಂಪು ರುಮಾಲು ಧರಿಸುವರು. ಈಗಿತ್ತ ಅರ್ಥಧಾರಿಗಳು ಒಂದು ಹೆಗಲಿಗೊಂದು ಶಲ್ಯ, ಮುಂಡನ್ನು ಧರಿಸುವರು.


ವಿವಿಧ ಮಂಡಳಿಗಳಲ್ಲಿ ಸೇವೆ.

**********************************

ಇಡಗುಂಜಿ, ಕರ್ಕಿ ಹಾಸ್ಯಗಾರ, ಗುಂಡಬಾಳ, ಕಮಲಶಿಲೆ, ಸಾಲಿಗ್ರಾಮ, ಅಮೃತೇಶ್ವರಿ, ಮೂಲ್ಕಿ, ಗುಂಡಬಾಳ ಮೇಳಗಳಲ್ಲಿ ಕೃಷ್ಣ ಯಾಜಿ ಸೇವೆ ಸಲ್ಲಿಸಿದ್ದಾರೆ. ದೈವೀ ಪ್ರತಿಭಾವಂತ ಕಾಳಿಂಗ ನಾವುಡರ ಜೊತೆ ಕುಟ್ಟಣ್ಣ ಚಂಡೆ ಬಾರಿಸಿರುವುದು ಅವನ ಹಿರಿಮೆಗೊಂದು ಗರಿಮೆ.

‘ಸ್ತ್ರೀವೇಷವನ್ನು ಪ್ರಪ್ರಥಮವಾಗಿ ಹಾಸ್ಯಗಾರ ಮಂಡಳಿಯಲ್ಲಿ ಕಟ್ಟಿದ್ದು ತನಗೆ ಹೆಮ್ಮೆಯ ವಿಷಯ’ ಎಂದು ಶ್ರೀ ಆನಂದ ಹಾಸ್ಯಗಾರರು ಅಭಿಮಾನದಿಂದ ಹೇಳುವರು.

ಉಮಾಮಹೇಶ್ವರಿ ಕಲಾವರ್ಧಕ ಸಂಘದ ತಾಳಮದ್ದಲೆ ಕೂಟದಲ್ಲಿ ಪ್ರಧಾನ ಮದ್ದಲೆ ವಾದಕರಾಗಿ, ಶ್ರೀಮಯ ಕಲಾಕೇಂದ್ರ ಗುಣವಂತೆ, ದೇವರು ಹೆಗಡೆ ಯಕ್ಷಗಾನ ಶಾಲೆ ಮುರೂರು ಇಲ್ಲಿ ಯಕ್ಷಗಾನ ಗುರುವಾಗಿ ಇವರು ವಿದ್ಯಾರ್ಥಿಗಳಿಗೆ ಶಿಕ್ಷಣ ಮತ್ತು ತರಬೇತಿ ನೀಡಿದ್ದಾರೆ.

[ಮುಂದುವರಿದಿದೆ]

- ಅನಂತ ವೈದ್ಯ , ಯಲ್ಲಾಪುರ

8 views0 comments
bottom of page