top of page

🌕 ಚಂಡೆ ಮಾಂತ್ರಿಕನ ಸ್ಮರಣೆಯಲ್ಲಿ - ಒಂದು ಪಯಣ 🌕

ಹೆಜ್ಜೆ -5


ಕಲೆ ಯಾವಾಗಲೂ ಪರಿವರ್ತನಾ ಶೀಲವಾದುದು. ಪ್ರೇಕ್ಷಕರ ಮನಮುಟ್ಟುವ ಒಳ್ಳೆಯ ಬದಲಾವಣೆ ಅನುಕರಣ ಶೀಲವೆನಿಸುವುದು. ಅನುಕರಣೆ ಅನುರಕ್ತವಾಗಬೇಕು. ಆಗಲೇ ಸಿದ್ಧಿ ಪಡೆದ ಕಲಾವಿದನ ಉದಯವಾಗುವುದು!

ಹಣ ಮಾಡುವುದೇ ಉದ್ದೇಶವಾದರೆ ಮುಂದೊಂದು ದಿನ ಕ್ಯಾಬರೆಯಂತಹ ಅಂಗ ಪ್ರದರ್ಶನದ ಬಿಚ್ಚು ಕುಣಿತ ಯಕ್ಷಗಾನ ರಂಗಭೂಮಿಗೆ ಬಂದರೆ ಅಚ್ಚರಿಯಿಲ್ಲ! ಹೊಸ – ಹೊಸ ಪ್ರಯೋಗಗಳು ರಂಗಕ್ಕೆ ಬರುತ್ತಲೇ ಇರುತ್ತದೆ. ಬಂದವೆಲ್ಲವೂ ಸ್ವೀಕಾರ ಅರ್ಹವೂ ಅಲ್ಲ. ಸಾರಾಸಗಟಾಗಿ ತಿರಸ್ಕರಿಸ ಬೇಕಾದ ಅವಶ್ಯಕತೆಯೂ ಇಲ್ಲ! ಹೊಸ ಪ್ರಯೋಗವು ಸದುದ್ದೇಶದಿಂದ ತುಂಬಿರಬೇಕು. ಕಲೆಗೆ ಪೂರಕವಾಗಿರಬೇಕು.

ಅನಂತ ವೈದ್ಯ ಯಲ್ಲಾಪುರ


ಯಾವುದು ಪರಿವರ್ತನೆಯಾಗಿಲ್ಲ!? ಗಾಯನ – ಮದ್ದಲೆ – ಚಂಡೆ – ವೇಷಭೂಷಣಗಳು - ಬಣ್ಣಗಾರಿಕೆ, ಕಣ್ಣ ಕುಕ್ಕುವ ಬೆಳಕಿನಾಟ! …. ಎಲ್ಲವೂ ಬದಲಾವಣೆ ಆಗಿದೆ. ಕಲಾವಿದನ ದೃಷ್ಟಿಯಲ್ಲಿ ಚಪ್ಪಾಳೆ, ಹಣ ಪ್ರಮುಖವಾದರೆ, ಪ್ರೇಕ್ಷಕನಿಗೆ ಮನರಂಜನೆಯ ಜೊತೆ ಬದಲಾವಣೆಗಳು ಎಷ್ಟು ಸೂಕ್ತ ಎಂಬ ಪ್ರಶ್ನೆ ಮೂಡುವುದು ಖಚಿತ. ಆಗ ಅದರ ಕುರಿತು ಕಮ್ಮಟಗಳು ಜರುಗುವವು. ಜಿಜ್ಞಾಸೆ ಏರ್ಪಡುವುದು. ಜೊಳ್ಳು ಟೀಕೆಗೆ ಒಳಗಾಗುವುದು. ಗಟ್ಟಿಬೀಜ ಉಳಿದು ಕೊಳ್ಳುವುದು. ಆದರೆ ಈಗಿತ್ತ ಕಮ್ಮಟಗಳಿಗೆ ಕಲಾವಿದರನ್ನು ಕೂಡಿಸುವುದೇ ಹಿಮಾಲಯ ಹತ್ತಿದಂತೆ. ‘ತಾನೇ ಸರಿ’ ಎಂಬ ವಿತಂಡವಾದದಿಂದ ಸಮಗ್ರ ಯಕ್ಷಗಾನ ಕಲೆ ಚರ್ಚೆಗೆ ಒಳಗಾಗದೇ ನಿಂತ ನೀರಾಗುವುದು!

ತೆರೆಕುಣಿತ, ಹೂವಿನ ಕುಣಿತ, ಕೋಡಂಗಿ ವೇಷ, ಪೂರ್ವ ಪೀಠಿಕೆಯಲ್ಲಿಯ ಸ್ತ್ರೀವೇಷಗಳು ಮರೆಯಾಗುತ್ತಾ ಬಂದಿದೆ. ಇಡಗುಂಜಿ ಮೇಳವು ಇವುಗಳನ್ನು ಇನ್ನೂ ಜೀವಂತವಾಗಿ ಇಟ್ಟು ಕೊಂಡಿದ್ದಾರೆ. ಕೈಬೆರಳೆಣಿಕೆಯನ್ನು ದಾಟಿ ಮುಂದೆ ಸಾಗದು ಸಂಪ್ರದಾಯವನ್ನಿಟ್ಟುಕೊಂಡ ಮೇಳಗಳು!!

ಬೆಳಗಿನವರೆಗಿನ ಆಟವಾದರೂ ಎಲ್ಲ ತುಂಡು ತುಂಡು ಕಥಾಭಾಗ, ಕುಣಿತದ ಹಲವು ಭಂಗಿಗಳನ್ನು ಥಟ್ಟನೆ ತೋರಿಸುವ ಪದಗಳು! ಕೆಲವು ಸಲ ವಿಕಾರಭಂಗಿಗಳು! ಪ್ರಸಂಗ ಚಪ್ಪಾಳೆ ಹೊಡೆಸಿಕೊಳ್ಳುವಲ್ಲಿ ಮುಗಿದು ಹೋಗುತ್ತದೆ. ಭಾವದ ಕೊರತೆ, ಮಾತುಗಳ ಕೊರತೆ ಎದ್ದು ಕಾಣುವುದು. ಕಾರ್ಯಕ್ರಮ ಮುಗಿದ ಮೇಲೆ ಒಳ್ಳೆಯ ಅಂಶಗಳ ಮರು ನೆನಪಿನಲ್ಲಿ ಯಾವುದೂ ಸ್ಮೃತಿಗೇ ಬಾರದು!

ಮಹಾವಿದ್ವಾನ್ ಮಣಿಗಳ ಅರ್ಥಗಳಂತೆ ಶಬ್ದ, ವ್ಯಾಕರಣ, ವೈಭವೀಕರಣವನ್ನು ಬಿಟ್ಟರೆ ಪದ್ಯಕ್ಕೆ ಬರುವುದೇ ಇಲ್ಲ. ಭದ್ರೆ ಎನ್ನುವ ಶಬ್ದಕ್ಕೆ ಸುಭದ್ರೆ, ಬಲಭದ್ರನ ತಂಗಿ ಎನ್ನುವ ಶಬ್ದ ದರ್ಶನವೇ ಹೆಚ್ಚಾಗುವುದು! ‘ವಿದ್ವಾಂಸರು ಬಂದು ಅರ್ಥಗಾರಿಕೆ ಕೆಡಿಸುತ್ತಿದ್ದಾರೆ’ ಎನ್ನುವ ಶೇಣಿಯವರ ಮಾತು ಸತ್ಯ ಎನಿಸುವುದು. ಅರ್ಥ ಕೇಳಿ ಮನೆಗೆ ಹೋದರೆ ಒಂದೇ ಒಂದು ವಿಚಾರವೂ ನೆನಪಿಗೇ ಬಾರದು!! ಶಬ್ದ ರಿಂಗಣ ಬಿಟ್ಟರೆ ವೈಚಾರಿಕತೆಯತ್ತ ಒಯ್ಯುವಲ್ಲಿ ಮಾತುಗಾರಿಕೆ ಸೋಲುವುದನ್ನು ಕಾಣಬಹುದು. ಇನ್ನು ಕೆಲವರು ಪ್ರಸಂಗದ ಪ್ರತಿ ಶಬ್ದಕ್ಕಲ್ಲ, ಪ್ರತಿ ಅಕ್ಷರಕ್ಕೂ ವ್ಯಾಖ್ಯಾನಿಸುವ ವ್ಯರ್ಥ ಪ್ರಯತ್ನವನ್ನು ಮಾಡುವರು.

ಒಂದೆಡೆ ಅಭಿಮಾನಿಗಳೆಲ್ಲಸೇರಿ ಒಂದು ಸನ್ಮಾನ ಕೂಟವನ್ನಿಟ್ಟುಕೊಂಡರು. ಅವರ ಪರಿಚಯ ಭಾಷಣವನ್ನು ಲೋಕ ಪ್ರಸಿದ್ಧ ಮಹಾನ್ ವಿದ್ವಾಂಸರಿಗೆ ನೀಡಿದರು. ವಿದ್ವಾಂಸರ ಮಾತುಗಳು… ‘ಇವನು ಹುಟ್ಟಾ ಕುಡುಕ. ಸೀರೆ ಉಟ್ಟವರಾದರೆ ಸಾಕು. ವಿದ್ಯೆ ಇದೆ. ವಿದ್ಯೆಗೆ ಬೇಕಾದ ನೈತಿಕತೆ ಇಲ್ಲ. ಇಂಥವರಿಗೆ ಸನ್ಮಾನ ಮಾಡುವುದು ಉಚಿತವಾದುದಲ್ಲ! ನೀವೆಲ್ಲ ತಯಾರಿ ಮಾಡಿಕೊಂಡಿದ್ದೀರಿ ಎಂದು ಮಾಡಬಹುದಷ್ಟೇ!’ ಎಂದು ಹೇಳಿ ಕುಳಿತರು. ಸನ್ಮಾನ ಮಾಡಿಸಿಕೊಳ್ಳುವವರು ಯಕ್ಷಗಾನ ಕಲೆಯ ಒಂದು ವಿಭಾಗದವರು. ಅವರು ಉಪ್ಪು – ಚಪ್ಪೆ ಮಾತಾಡಲಿಲ್ಲ! ಕೈಗೆ ಕೈ ಎನ್ನುವ ಸ್ಥಿಯೊಂದು ಉಂಟಾಗಲಿಲ್ಲ!

ಕೊನೆಗೆ ವಿದ್ವಾಂಸರ ಜೀವನ ಚರಿತ್ರೆಯನ್ನು ಸಂಶೋಧಿಸ ಹೊರಟಾಗ ಅವರು ಹೇಳಿದ್ದೆಲ್ಲವೂ ಅವರಿಗೂ ಅನ್ವಯಿಸುವಂತಹದ್ದೇ!! ದೂರವಿದ್ದೇವೆ ನಮ್ಮ ಆಚಾರಗಳಂತೂ ಇಲ್ಲಿ ಪ್ರಚಾರದಲ್ಲಿಲ್ಲ! ಬೇರೆಯವರನ್ನು ದೂರಿದರೆ ನಾವು ಒಳ್ಳೆಯವರೆನಿಸಿಕೊಳ್ಳುತ್ತೇವೆ ಎನ್ನುವ ಭ್ರಮೆಯೇ ಇಂಥವುಗಳಿಗೆ ಕಾರಣ. ದೂರ ಇರುವವರೆಲ್ಲ ತಮ್ಮ ಚರಿತ್ರೆ ತಿಳಿಯದೆಂದು ಭಾವಿಸಿಕೊಳ್ಳುವುದು ಅತಿ ದೊಡ್ಡ ತಪ್ಪು. ವಿದ್ವಾಂಸರು ಎನ್ನುವ ಗೌರವದಿಂದ ಸುಮ್ಮನೇ ಉಳಿದಾರಷ್ಟೇ! ಅದೇ ಮಾತು ಬಲ್ಲವನಾದರೆ?…. ಅವರ ಇತಿಹಾಸವನ್ನು ಅಲ್ಲಿಯೇ ಕೆಣಕದಿರುವನೇ?

ಶ್ರೀ ಗೋಪಾಲಕೃಷ್ಣ ಭಟ್ಟ ಶೇಣಿ ಮತ್ತು ಶ್ರೀ ನಾರಾಯಣ ಶಾಸ್ತ್ರಿ ಬುಚ್ಚನ್ ಇವರ ಜೋಡಿಯಲ್ಲಿ ಶ್ರೀಕೃಷ್ಣ ಸಂಧಾನ ಪ್ರಸಂಗ.

ಶೇಣಿಯವರು ಎಂದೂ ಸೋಲುವವರೇ ಅಲ್ಲ! ಶಾಸ್ತ್ರಿಗಳಿಗೆ ಪ್ರಖಾಂಡ ಪಂಡಿತರೆನ್ನುವ ಮನೋಭಾವ! ಶೇಣಿಯವರ ಕೃಷ್ಣ. ಶಾಸ್ತ್ರಿಗಳ ಕೌರವ. ದಾರಿ ತಪ್ಪಿಸಿಯೇ ಬಿಟ್ಟರು ಶೇಣಿಯವರು! ಸಿಂಹಾಸನ ಎಂದು ಏಕೆ ಕರೆಯುವರು? ಅದಕ್ಕೆ ಸಿಂಹದ ಚಿನ್ಹೆ ಏಕಿರಬೇಕು? ನಾಲ್ಕು ಕಾಲೇ ಏಕಿರಬೇಕು? ಮುಂತಾದ ಪ್ರಶ್ನೆಗಳು. ಶಾಸ್ತ್ರಿಗಳು ಬಿಡುವರೇ? ಅವುಗಳಿಗೆಲ್ಲ ಉತ್ತರವನ್ನು ನೀಡಿದರು! ಸಿಂಹಾಸನದ ವ್ಯಾಖ್ಯಾನವಾಯಿತೇ ವಿನಃ ಸಿಂಹಾಸನದ ಅಧಿಕಾರದ ಚರ್ಚೆಯೇ ಆಗಲಿಲ್ಲ!.... ಪ್ರಸಂಗ ಮಾಡಿಸಿದವ ನಾನೇ!! ‘ಹೇಗಾಯಿತೋ ಮಾಣಿ’ ಎಂದು ಕೇಳಿದರು ಶೇಣಿ. ನಾನೆಂದೆ…. ಪ್ರೇಕ್ಷಕರೆಲ್ಲ ನಿಮಗಿಬ್ಬರಿಗೂ ಹಣ ಕೊಡಬಾರದೆನ್ನುತ್ತಾರೆ! ಏಕೆ ಎಂದು ಕೇಳಿದರು. ಅಸಂಬದ್ಧ ಅರ್ಥಗಾರಿಕೆಗೆ ಹಣಕೊಡದೇ ಕಳಿಸಬೇಕೆನ್ನುವರು ಎಂದೆ. ಅವರವರ ಚೌಕಟ್ಟಿನೊಳಗೆ ಕಲಾವಿದರು ಜನ – ಮನ ಗೆಲ್ಲುವಂತಿರಬೇಕು. ಇಲ್ಲವಾದರೆ….

ಪ್ರಬುದ್ಧ ಸಂಗೀತಗಾರನ ಮುಂದೆ ಭಾಗವತರು ಸಂಗೀತರಾಗದ ಪ್ರಯೋಗ ಮಾಡಿದಂತೆ. ಯಾವುದೋ ರಾಗದ ಛಾಯೆಯಲ್ಲಿ ಮಟ್ಟನ್ನು ರಚಿಸಲಾಗಿದೆಯೇ ವಿನಃ ರಾಗದ ಆರೋಹಣ – ಅವರೋಹಣ ಸ್ವರಗಳೇ ಪ್ರಧಾನವಾಗಿರುವುದಿಲ್ಲ! ಸಂಗೀತ ಕಲಿತು ಬಂದ ಭಾಗವತರುಗಳು ಮಾತ್ರ ಶುದ್ಧರಾಗದಲ್ಲಿ ಹಾಡಬಹುದು. ಆದರೆ ಎಷ್ಟೋ ಸಲ ಭಾಗವತರ ಮತ್ತು ಸಂಗೀತಗಾರರ ಈ ಪ್ರಯೋಗ ಹಾಸ್ಯಾಸ್ಪದವಾದುದೇ ಹೆಚ್ಚು. ಸಂಗೀತದ ಅರಿವೇ ಇಲ್ಲದ ಕೆಲವು ಭಾಗವತರು ಪ್ರಸಂಗ ಸಾಹಿತ್ಯದ ಮೇಲೆ ಒತ್ತು ಕೊಡುವರು! ಸಂಗೀತಗಾರರು ಸಾಹಿತ್ಯವನ್ನು ಹಿಂಜಿ – ಹಿಂಜಿ ಸಾಹಿತ್ಯದ ಆಶಯವನ್ನೇ ಕೆಡಿಸುವರು.

ವರ್ತಮಾನದಲ್ಲಿ ರಾಗವನ್ನು ಅಭ್ಯಾಸ ಮಾಡಿ ಬಂದವರಲ್ಲಿ ವಿದ್ವಾನ್ ಗಣಪತಿ ಭಟ್ಟರು ಮೇಲ್ಪಂಕ್ತಿಯಲ್ಲಿ ನಿಲ್ಲುವರು. ಮಟ್ಟಿನ ವಿಷಯ ಬಂದಾಗ ಆ – ಆ ಭಾಗವತರುಗಳ ಶಾರೀರ ಮಾಧುರ್ಯತೆ, ಶಕ್ತಿಗೆ ಅನುಸರಿಸಿ ಎಲ್ಲ ಭಾಗವತರುಗಳು ಪ್ರಸಿದ್ಧಿಯ ಪಡೆದಾರು. ಮನೆಯ ಗರತಿಯೂ ಪ್ರಸಂಗದ ಪದವನ್ನು ಗುಣು ಗುಣಿಸುತ್ತಾಳೆ ಎಂದರೆ ಅದಕ್ಕೆ ಕಾರಣ ಮಟ್ಟೇ ವಿನಃ ರಾಗದ ಪರಿಜ್ಞಾನವಲ್ಲ. ಮದುವೆಯ – ಬ್ರಹ್ಮೋಪದೇಶದ ಹಳ್ಳಿಯ ಹಾಡುಗಳು ಇನ್ನೂ ಜೀವಂತ ಇರುವುದು ಮಟ್ಟು ಮತ್ತು ಭಾವಗಳಿಂದ ಮಾತ್ರ!! ಹಾಡುವವರೆಲ್ಲ ಸಂಗೀತಗಾರರಲ್ಲ! ಚಿಕ್ಕ ಬಾಲಕನೂ ಊಟದ ಸಂದರ್ಭದಲ್ಲಿ ಸುಶ್ರಾವ್ಯವಾಗಿ ಶ್ಲೋಕ ಹೇಳುವನು. ಸಂಗೀತಗಾರನಲ್ಲವೆಂದು ದೂಷಿಸಲಾಗುವುದೇ? ಅದಕ್ಕಾಗಿಯೇ ಕೆಲವರು ಸಿದ್ಧರಾಗಿರುತ್ತಾರೆ!!

ಯಾವುದೇ ವಾದ್ಯಗಳ ಸದುಪಯೋಗ ಪಡೆಯುವುದು ಭಾವಕ್ಕನುಗುಣವಾಗಿ. ಅಂತಹ ಪ್ರಯೋಗವನ್ನು ಚಂಡೆಯಲ್ಲಿ ಮಾಡಿ ತೋರಿಸಿದವ ಕುಟ್ಟಣ್ಣ! ಅದರ ಸಂಪೂರ್ಣ ರಸವನ್ನು ಹಿಂಡಿ ರಸಪಾನವಾಗಿಸಿದವ ಕುಟ್ಟಣ್ಣ! ನನಗೆ ಸತೀಶ ಯಲ್ಲಾಪುರ ಅವರ ಚಿತ್ರವು ಮನಸ್ಸನ್ನು ತುಂಬಾ ಕಾಡುತ್ತಿದೆ. ಒಂದು ವಾದ್ಯವೇ ಒಬ್ಬ ಕಲಾವಿದನನ್ನು ಕಳೆದು ಕೊಂಡು ಅವನ ದಾರಿಯಲ್ಲಿಯೇ ಸಾಗುತ್ತಾ ಬಾ – ಬಾ ಎಂದು ಕರೆಯುತ್ತಾ ಹೋಗುವುದು ಕಣ್ಣೀರ ತರಿಸುವುದು. ವಿಚಾರ ಮಾಡುತ್ತಾ ಸಾಗಿದರೆ ಸಾರ್ಥಕ ಕಲಾವಿದನ ಬದುಕು ಹೀಗಿರಬೇಕೆನಿಸುವುದು. ಸಾವಿರ ಪುಟಗಳಲ್ಲಿ ಬರೆಯುವುದನ್ನು ಅವರು ಒಂದು ಚಿತ್ರದ ಮೂಲಕ ಪ್ರಕಟ ಪಡಿಸಿದ್ದಾರೆ. ವಾದ್ಯ ಸಾರ್ಥಕತೆ ಎಂದರೆ ಇದೇ! ಕಲಾವಿದನನ್ನು ಕಳೆದು ಕೊಂಡುದಕ್ಕೆ ವಾದ್ಯವೇ ಅನಾಥಪ್ರಜ್ಞೆಯನ್ನು ಹೊಂದಬೇಕು. ನಿರ್ವಾತಸ್ಥಿತಿ – ಶೂನ್ಯತೆ ಉಂಟಾಗಬೇಕು. ಇನ್ಯಾರು ಬಂದು ಆ ಸ್ಥಾನವನ್ನು ತುಂಬ ಬಹುದು? ಎಂಬ ಚಿಂತೆ ಕಾಡಬೇಕು.

ಅಂತಹ ಮನಸ್ಥಿತಿ ಉಂಟಾಗುವುದು ಸರ್ವ ಪ್ರೇಕ್ಷಕರ-ಕಲಾಭಿಮಾನಿಗಳ ಮನಸ್ಸಿಗೆ ಆಘಾತ ಉಂಟಾದಾಗ ಮಾತ್ರ. ಸಾಧನೆಯ ಸಿದ್ಧಿಯನ್ನು ಪಡೆದು ಪದ್ಮಭೂಷಣವೋ, ಪದ್ಮಶ್ರೀಯನ್ನೋ ಪಡೆದ ಮಹನೀಯರು ಯಾವ ರಾಜಕೀಯ ಪ್ರಭಾವದಿಂದಲೂ ಅದನ್ನು ಪಡೆಯದೇ ಕೇವಲ ತಮ್ಮ ಪ್ರತಿಭೆಯಿಂದ ಪಡೆದಾಗ… ಅಂಥವರ ನಿರ್ಗಮನ ಒಂದು ನಿರ್ವಾತವನ್ನು ಉಂಟು ಮಾಡುವುದು. ಈ ಸ್ಥಾನವನ್ನು ತುಂಬಲು ಯಾರು ಬರಬಹುದೆಂದು ಸಾರ್ವಜನಿಕ ಚಿಂತೆ- ಚಿಂತನೆ ಉಂಟಾಗುವುದು! ಅದೇ ಅವರ ಅರ್ಹತೆಯ, ಸಿದ್ಧಿಯ ದರ್ಶನವಾಗುವುದು. ಮಾನ್ಯಶ್ರೀ ಎಸ್. ಎಲ್. ಭೈರಪ್ಪನವರು ಸರಸ್ವತಿ ಸಂಮಾನಕ್ಕೆ ಅರ್ಹರಾದರು. ಅಂದ ಮಾತ್ರಕ್ಕೆ ಸರಸ್ವತಿ ಸಂಮಾನ ಪಡೆದವರೆಲ್ಲಾ ಅರ್ಹರು ಎನ್ನಲಾಗುವುದೇ? ರಾಮಾಯಣದಂತಹ ಮಹಾಕಾವ್ಯವನ್ನೇ ಬರೆದರೂ ಅದು ಸರಕಾರಿ ಕಡತದಲ್ಲಿ ಧೂಳು ಹಿಡಿಯುತ್ತಿರುವುದು! ಕೆಲವರ ಪ್ರಕಾರ ಹಳ್ಳಿಯ ಪ್ರಸಿದ್ಧಿ ಬಯಸದ, ಕವಿಗಳು ಬರೆದುದೂ ಆಗಿರಬಹುದು! ಸಾಹಿತಿಗಳ ಸಾಹಿತ್ಯದ ಕಳ್ಳತನ ಇಂದು ಸಾಹಿತ್ಯದ ಒಂದು ಭಾಗವೇ ಆಗಿದೆ!!??

ಮಾತುಗಾರಿಕೆ ಯಕ್ಷಗಾನಕ್ಕೆ ಅವಶ್ಯವಲ್ಲದಿದ್ದರೂ ಶೇಣಿ ಗೋಪಾಲಕೃಷ್ಣ ಭಟ್ಟರು ಮಾತುಗಾರಿಕೆಯಿಂದಲೇ ಕಲಾವಿದರು ಎನಿಸಿಕೊಂಡರು! ಅವರ ನಿರ್ಗಮನದ ನಂತರ ಮಾತುಗಾರಿಕಾ ಕ್ಷೇತ್ರದಲ್ಲಿ ನಿರ್ವಾತ ಉಂಟಾಯಿತು. ಅದು ನಿಜವಾದ ಜನ – ಮನವ ಗೆದ್ದ ಮಹಾಶಕ್ತಿಯಾಗಿ ನಿಲ್ಲುವುದು. ಅಂಥವರನ್ನು ಪುನಃ ನಿರೀಕ್ಷಿಸುವುದಿದೆಯಲ್ಲ ಪ್ರೇಕ್ಷಕಾಭಿಮಾನಿಗೆ ಹೇಳಲಾರದ ತಳ-ಮಳ ಉಂಟಾಗುವುದು. ಅದು ಜನ –ಮನ ಗೆದ್ದ ಸಾಧನೆಯಾಗಿ ಸ್ಥಾಯಿಯಾಗಿ ನಿಲ್ಲುವುದು! ಅಂತಹ ಕೊರತೆಯನ್ನುಂಟು ಮಾಡಿದವ ಚಂಡೆ ಕ್ಷೇತ್ರದಲ್ಲಿ ಕುಟ್ಟಣ್ಣ!

-ಅನಂತ ವೈದ್ಯ ಯಲ್ಲಾಪುರ

25 views0 comments
bottom of page