top of page

ಗರ್ಭಗುಡಿಯ ಬೆಳಕು

ಪ್ರೊಫೆಸರ್ ಮಟ್ಟಿಹಾಳರ ಗರ್ಭಗುಡಿಯ ಬೆಳಕು

ಪ್ರೊಫೆಸರ್ ಮಟ್ಟಿಹಾಳರ ಕಾವ್ಯ ಪ್ರಯಾಣಕ್ಕೆ ಈಗ .......ರ ವಸಂತ. 'ಗರ್ಭಗುಡಿಯ ಬೆಳಕು' ಎಂಬ ಅವರ ಕವನ ಸಂಕಲನದ ಈ ಪ್ರಯಾಣದಲ್ಲಿ ಕವಿ ಸಾಕಷ್ಟು ಸೂಕ್ಷ್ಮ ಸಂವೇದನೆಗಳನ್ನು ಭಿನ್ನ ಭಿನ್ನ ಪಾತಳಿಯಲ್ಲಿ ದಾಖಲಿಸುತ್ತಾ ಸಾಗಿರುವುದು ಅವರ ಕಾವ್ಯವನ್ನು ಆಸ್ವಾದಿಸುವ ಮನಸ್ಸುಗಳ ಸಂತೋಷವನ್ನು ಇಮ್ಮಡಿಗೊಳಿಸಿದೆ ಎಂದೇ ಹೇಳಬೇಕು. ಈ ನಿಟ್ಟಿನಲ್ಲಿ ಪ್ರೊಫೆಸರ್ ಮಟ್ಟಿಹಾಳರ ಪ್ರಯತ್ನ ಸ್ತುತ್ಯಾರ್ಹವಾದದ್ದು.

ಪ್ರಸ್ತುತ ಸಂದರ್ಭದಲ್ಲಿ ನಾನು ಮಾತನಾಡಲು ಹೊರಟಿರುವುದು 'ಗರ್ಭಗುಡಿಯ ಬೆಳಕು' ಎಂಬ ಕವಿತೆಯ ಬಗ್ಗೆ. ಈ ಸಂಕಲನದ ಮೊದಲ ಕವಿತೆ ಇದು. ಮೊದಲ ನೋಟಕ್ಕೆ ಈ ಕವಿತೆ ತಾಯಿಯಾಗುತ್ತಿರುವವಳೊಬ್ಬಳ ಒಡಲೊಳಗಿನ ಹಿಗ್ಗಿನ ಸುಗ್ಗಿಯ ಸಂವೇದನೆಯನ್ನು ದಾಖಲಿಸುವ ಸಂಭ್ರಮವಾಗಿ ಓದುಗನ ಹೃದಯದಲ್ಲಿ ಜಾಗ ಪಡೆಯುತ್ತದೆ. ಕಾವ್ಯವನ್ನು ಸವಿಯುವಾಗ ಕವಿಯಾದವನು ತಾನು ಕೈಗೆತ್ತಿಕೊಂಡ ವಸ್ತು ವಿಷಯದ ಬಗ್ಗೆ ಹೊಂದಿದ ತಾದಾತ್ಮ್ಯತೆಯನ್ನೂ ಅದರ ದಾಖಲೆಯ ಬದ್ಧತೆಯನ್ನೂ, ಪ್ರಬುದ್ಧತೆಯನ್ನೂ ಗಮನಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ನೋಡಿದರೆ ತಾಯ್ತನವನ್ನು ಅನುಭವಿಸುತ್ತಿರುವ ಮೊದಲಗಿತ್ತಿಯ ಆಳದ ಅನುಭವವನ್ನು ಪ್ರೊ. ಮಟ್ಟಿಹಾಳರು ಒಬ್ಬ ಹೆಣ್ಣಾಗಿ ಅನುಭವಿಸುತ್ತಾ ಆ ಅನುಭವ ಓದುಗರ ಪಾಲಿಗೆ ದಕ್ಕುವ ಸಾಧ್ಯತೆಯನ್ನಾಗಿ ರೂಪಿಸುತ್ತಾ ಸಾಗುತ್ತಾರೆ. ತನ್ನ ಸುತ್ತಲಿನ ಜಗತ್ತಿನೊಂದಿಗೆ ಕವಿ ಹೊಂದಿರುವ ಸಂವೇದನೆಗಳೇನು? ಅವನು ಭಾವಿಸುವ ಸಂಗತಿಗಳೊಟ್ಟಿಗೆ ಅವನಿಗಿರುವ ತಾದಾತ್ಮ್ಯವೇನು? ಎಂದು ಗಮನಿಸುತ್ತಾ ಹೋಗುವುದಾದರೆ ಮಟ್ಟಿಹಾಳರ 'ಗರ್ಭಗುಡಿಯ ಬೆಳಕು' ಕವಿತೆ ಅವರ ಸಂವೇದನೆಯ ಉಚ್ಛತಮ ಸಾಧ್ಯತೆಯನ್ನು ದಾಖಲಿಸುತ್ತದೆ. ಹಾಗಾಗಿಯೇ ಈ ಕವಿತೆಯನ್ನು ಬರೆದವರು ಮಟ್ಟಿಹಾಳರು ಎಂದು ಗೊತ್ತಿಲ್ಲದೆಯೇ ಕವಿತೆಯನ್ನು ಪ್ರವೇಶ ಮಾಡಿದರೆ ತಾಯ್ತನವನ್ನು ಅನುಭವಿಸುತ್ತಿರುವ ಹೆಣ್ಣೋರ್ವಳು ತನ್ನ ಸಂಭ್ರಮವನ್ನು ಹೇಳಿಕೊಳ್ಳುವ ಅನುಭವ ಓದುಗನಿಗಾಗುತ್ತದೆ. ಇಷ್ಟು ತೀವ್ರತರವಾಗಿ ತಾನೇ ಒಂದು ಅನುಭವವನ್ನು ಅನುಭವಿಸಿದಂತೆ ಚಿತ್ರಸಹೊರಟು ಯಶಸ್ವಿಯಾಗಿರುವುದು ಯಾವುದನ್ನೂ ಪ್ರವೇಶಿಸಬಲ್ಲ ಮಟ್ಟಿಹಾಳರ ಸಂವೇದನೆಯ ಸೂಕ್ಷ್ಮತೆಗೆ ಸಾಕ್ಷಿ.

ಒಳಗೊಳಗೆ ಸೊಕ್ಕಿ

ತೆಕ್ಕೆಮುಕ್ಕಿ ಬಿದ್ದು ಉಕ್ಕುಕ್ಕಿ ಹರಿದ

ಎರಡು ಜೀವಗಳ

ಆಸೆ ಕನಸುಗಳ ಮೈಗೊಂಡ ಭ್ರೂಣವೇ

ನನ್ನ ಗರ್ಭದ ಫಲವತ್ತತೆಗೆ ಸಾಕ್ಷಿಯಾಗಿ

ಬೆಳೆಯುತ್ತ ಆಕಾರ ತಳೆಯುತ್ತಾ

ಸಾಗುವ ನಿನ್ನಾಟವೇ ಚಂದ!

ಎಂದು ಆರಂಭವಾಗುವ ಕವಿತೆ ಎರಡು ಜೀವಗಳ ಫಲಿತ ಪ್ರೀತಿಯ ಸಂಕೇತವೊಂದು ತಾಯಿಯ ಗರ್ಭದಲ್ಲಿ ಮೊಳೆತ ಕ್ಷಣವನ್ನು ಹಿಡಿದಿಡಲು ತೊಡಗುತ್ತದೆ. ಇಲ್ಲಿಯ ತಾಯಿ ತನ್ನ 'ಹೆಣ್ತನ'ವನ್ನು 'ತಾಯ್ತನ'ವನ್ನಾಗಿ ಪರಿವರ್ತಿಸಿಕೊಳ್ಳುವ ಸಂಭ್ರಮದಲ್ಲಿದ್ದಾಳೆ. ಇದು ಸೃಷ್ಟಿಕ್ರಿಯೆಯ ಅನಾದಿ ಹಂಬಲವಾಗಿಯೂ, ಜೀವ ಜಗತ್ತುಗಳ ಜೀವ ಸ್ಪಂದನವಾಗಿಯೂ ಮೈ ಪಡೆಯುತ್ತದೆ. ಮೈಯ ಮರೆವಿನ ಪ್ರೀತಿ, ಮೈಯ ಮೂಲಕವೇ ಪಡೆದ ಪ್ರೀತಿಯ ಮೈಯನ್ನೂ ಮನವನ್ನೂ ಮೀರಿದ ಮೈಯಾಗಿ ಆಕಾರ ಪಡೆಯುವ ಸೋಜಿಗವನ್ನು ಇಲ್ಲಿಯ ಹೆಣ್ಣು ಅನುಭವಿಸುತ್ತಾಳೆ. ಈ ಪ್ರಕ್ರಿಯೆ ಎಲ್ಲಾ ಹೆಣ್ಣು ಮಕ್ಕಳ ಜೈವಿಕ ಸಾದ್ಯತೆ ಆಗಿರುವುದಾದರೂ ಕವಿತೆ ಕೇವಲ 'ತಾಯ್ತನ'ವನ್ನು ಜೈವಿಕ ಸಾಧ್ಯತೆ ಎಂದು ಭಾವಿಸುವುದಿಲ್ಲ. ಬದಲಾಗಿ ಅದೊಂದು ಅಪೂರ್ವ ಕ್ಷಣವೆಂದೇ ಸಂಭ್ರಮಿಸುತ್ತದೆ. ಇದವಳಿಗೆ ಜೈವಿಕ ಸಾಧ್ಯತೆಗಿಂತ ಭಾವನಾತ್ಮಕ ವರ್ಣತಂತುವಿನಿಂದ ಬೆಸೆದುಕೊಂಡ ಅಚ್ಚರಿಯ ಸಂಗತಿಯಾಗುತ್ತದೆ. ತಾಯಿಗೆ ಈ ಹಂತದಲ್ಲಿ ಮಗುವೆಂಬ ಭ್ರೂಣ ಒಂದು ಅಮೂರ್ತದ ಸಂಗತಿಯಾಗುವುದಿಲ್ಲ. ಅದು ಅವಳೊಳಗೆ ಅವಿನಾ ಸಂಬಂಧವಾಗಿ ರೂಪ ತಳೆಯುವ ಸುಂದರವಾದ ಆಟವಾಗುತ್ತದೆ. ಈ ಆಟಕ್ಕೆ ಅವಳು ಮನಸೋಲುತ್ತಾಳೆ. ಮತ್ತು ತನ್ನ 'ಹೆಣ್ತನ'ವನ್ನು 'ತಾಯ್ತನ'ವಾಗಿಸುವ ಸಾಕ್ಷೀ ಪ್ರಜ್ಞೆಯಾಗುತ್ತಾಳೆ.

ಕವಿತೆ ಮುಂದುವರೆದು ಈ ಸೋಜಿಗದ ಅನುಭವವನ್ನ ದಾಖಲಿಸುವ ಮುಂದುವರಿಕೆಯ ಪ್ರಯತ್ನವಾಗುತ್ತದೆ. ಕಣ್ಣಿಗೆ ಕಾಣದ ಕಣಗಳ ಮಿಲನ ಪಿಂಡವಾಗಿ ಅಂಗಾಂಗವಾಗಿ ಬೆಳೆದು ಮೈ ಪಡೆಯುವ ಸಂತಸಕ್ಕೆ ತಾಯಿ ಅನುವಾಗುತ್ತಾಳೆ. ಆನಂದ ಉಕ್ಕುವ ಕಡಲಾಗುತ್ತದೆ. ಮಗುವಿನ ಪ್ರತಿ ತಿವಿತ ಕೂಡ ತಾಯಿಯ ಪುಳಕದ ಮಟ್ಟವನ್ನು ಹೆಚ್ಚಿಸುತ್ತದೆ. ಈ ಸಂತಸದಲ್ಲಿ ತಾಯಿ ಹಾಡುವ ಹಿಗ್ಗಾಗುತ್ತಾಳೆ. ಅದು ಸುಗ್ಗಿ! ನುಗ್ಗು, ನುರಿಯಿಲ್ಲದ ಸುಗ್ಗಿ!! ಅವಳಿಗೆ ನಿಂತ ನೆಲ ಹಗುರ. ಭುವಿಯ ನಂಟು ಬಾನಿನೊಡಲ ಹಂಬಲದಲ್ಲಿ ರೆಕ್ಕೆ ಬಿಚ್ಚಿ ಹಾರುವ ಹಕ್ಕಿಯಾಗುತ್ತದೆ. ಭೂಮಿಗೆ ಕಾಲಂಟದ ಸಂತೋಷ ಅವಳದ್ದಾಗುತ್ತದೆ. ಕವಿ ಇಲ್ಲಿ ತಮ್ಮ ಅಭಿವ್ಯಕ್ತಿಯಲ್ಲಿ ಉತ್ಕೃಷ್ಟವಾದ ಗೇಯಗುಣವನ್ನು ಕಾಯ್ದುಕೊಳ್ಳುತ್ತಾರೆ. ಇದೊಂದು ಪರಿಪೂರ್ಣ ಚಿತ್ರಕಾವ್ಯವಾಗುವ ಅನುಭವವನ್ನು ಕಟ್ಟಿಕೊಡುತ್ತದೆ. ಹುಟ್ಟಲಿರುವ ಮಗುವಿನ ಬೆಳವಣಿಗೆಯ ಹಂತದ ಪ್ರತಿ ಕ್ಷಣವನ್ನು ತಾಯಿ ಅನುಭವಿಸುತ್ತಾಳೆ. ಇದೊಂದು ಅಮೂರ್ತದ ಅನುಭವವನ್ನು ಕೇವಲ ಅನುಭವದ ಸಾಧ್ಯತೆಯನ್ನಾಗಿ ಮಾಡಿಕೊಳ್ಳುವ - ಅದನ್ನು ಕಣ್ಣಿಂದ ಕಾಣಲಾಗದೆ - ಒಂದು ಅದ್ಭುತ ಸಂಗತಿಗೆ ತಾಯಿ ಸಜ್ಜಾಗುತ್ತಾಳೆ.

ನೀನಾಡುವ ಆಟ ಒಂದಲ್ಲ ಎರಡಲ್ಲ

ನಿನ್ನ ತುಂಟಾಟಕ್ಕಿಲ್ಲ ಕೊನೆ!

ಏನೇನೋ ಬೇಡುವೆ, ಕಾಡುವೆ

ನನ್ನೊಳಗೆ ಗೊತ್ತಿರದ ಬಯಕೆಗಳ

ಅರಳಿಸಿ ಕೆರಳಿಸಿ ಮೋಜು ನೋಡುವೆ

ನಿನ್ನ ಹಸಿವುಗಳನೆಲ್ಲ

ನನ್ನೊಳಗೆ ಮೂಡಿಸಿ ಪಡೆದುಕೊಳ್ಳುವ ಸೋಜಿಗದ ಪರಿಯೇ ಬೇರೆ!

ಎನ್ನುವ ತಾಯಿ ತನಗೆ ಬೇಕಾದ್ದನ್ನೆಲ್ಲ ತಾಯಿಯ ಬಯಕೆಯೆಂಬಂತೆ ಪ್ರಕಟಪಡಿಸುವ ಮಗುವಿನ ಜಾಣ್ಮೆಗೆ ಅಚ್ಚರಿಗೊಳ್ಳುತ್ತಾಳೆ. ಅವಳು ಹೇಳುವುದು- ತನಗೇ ಗೊತ್ತಿರದ ಬಯಕೆಯ ಕಿಡಿಯನ್ನು ಹೊತ್ತಿಸಿ ಅದನ್ನು ಈಡೇರಿಸಿಕೊಳ್ಳುವ ಆಟವನ್ನು ಹೂಡುವಂತೆ ಮಾಡಬಲ್ಲ ತಾಕತ್ತು ಇನ್ನೂ ಮೂರ್ತ ರೂಪದಲ್ಲಿ ಮೈದಳೆಯದ ಮಗುವಿಗಿದೆ ಎಂಬ ಸತ್ಯವನ್ನು ಬಹುಶಃ ಪ್ರಪಂಚದ ಎಲ್ಲ ತಾಯಂದಿರು ಅನುಭವಿಸುತ್ತಾರೆ. ಇದೊಂದು ಅನಾದಿ ಸತ್ಯ. ಪರಿಭ್ರಮಣೆಯ ನಿರಂತರತೆಯನ್ನು ತಾಯಿ ತನ್ನ ತಾಯ್ತನದ ಖುಷಿಯಲ್ಲಿ ಅನುಭವಿಸುತ್ತಾಳೆ ಎಂಬ ವಿವರಣೆಯನ್ನು ಕವನ ಕಟ್ಟಿಕೊಡುತ್ತದೆ. ಇದರ ಹೆಗ್ಗಳಿಕೆ ಇರುವುದು ತಾಯ್ತನದ ಇಷ್ಟೊಂದು ಸೂಕ್ಷ್ಮ ಸಂವೇದನೆಯ ಅಚ್ಚರಿಯನ್ನು ಒಬ್ಬ ಲೇಖಕ ತಾನು ಅನುಭವಿಸುತ್ತಾನೆ ಎಂಬಲ್ಲಿ! ಕವಿಗೆ ಇಲ್ಲಿ ಕೇವಲ ತಾಯ್ತನದ ವಿಜ್ರಂಭಣೆಯ ಬಗೆಗೆ ಮಾತ್ರ ಆಸಕ್ತಿ ಇಲ್ಲ. ಬದಲಾಗಿ ಆತ ಯೋಚಿಸುತ್ತಿರುವುದು ತಾಯಿ ಮಗುವಿನ ಕರುಳು ಬಳ್ಳಿಯ ಸಂಬಂಧವೊಂದು ಅಮೂರ್ತವಾಗಿಯೇ ಮೈ ತಳೆಯುವ ಅಚ್ಚರಿಯ ಬಗ್ಗೆ. ಕನ್ನಡದಲ್ಲಿ ತಾಯ್ತನವನ್ನು ಕುರಿತು ಹೇಳಿರುವ ಅನೇಕ ಕವಿತೆಗಳ ಪರಂಪರೆಯನ್ನೇ ಗುರುತಿಸುವ ಸಾಧ್ಯತೆ ಇದೆ.

ಅನೇಕ ಬಗೆಯ ತಾಯಂದಿರು ಅನೇಕ ಕಾರಣಕ್ಕಾಗಿ ಕವನ, ಕಥೆ, ಕಾದಂಬರಿಗಳಲ್ಲಿ ದಾಖಲಾಗಿದ್ದಾರೆ. ಆದರೆ ಈ ಕವನ ವಿಭಿನ್ನವೆನಿಸುವುದು ಅದರ ವಿವರಣೆಗಾಗಿ ಅಲ್ಲ; ಬದಲಾಗಿ ಒಂದು ಸಂಗತಿಯನ್ನು ಜಗತ್ತಿನ ಅಚ್ಚರಿಯಾಗಿ ನೋಡುವ ಅಂತ:ಕರಣದ ಬಗ್ಗೆ. ಸಂವೇದನಾಶೀಲ ಮನಸ್ಸಿನ ಬಗ್ಗೆ! ಇಷ್ಟು ದಿನ ಇರದ ಬಯಕೆಗಳೆಲ್ಲ ತಾಯಿಯಾಗುವವಳಿಗೆ ಉಂಟಾಗುವುದು ಮಗುವಿನ ಬಯಕೆಯಿಂದ. ಹಾಗೆ ನೋಡಿದರೆ ಇದನ್ನು ಮಗುವಿನ ಬಯಕೆ ಎನ್ನುವುದೋ? ತಾಯಿಯದೋ?. ಇಡೀ ಲೋಕ ಹೀಗೇ ರೂಪ ತಳೆಯುವುದಲ್ಲ! ಮಗು ಮತ್ತು ತಾಯಿಗೆ ಅದೆಂಥ ಅವಿನಾ ಸಂಬಂಧ! ಈ ವಿಷಯಗಳನ್ನು ವಿಸ್ಮಯದಿಂದ ಕವಿತೆ ಗಮನಿಸುತ್ತದೆ.

ಇಲ್ಲಿಯತನಕ ಇದೊಂದು ತಾಯಿ ಮಗುವಿನ ಸಂಬಂಧದ, ತಾಯಿಯ ಕಾಯುವಿಕೆಯ ಸಂಭ್ರಮದ ಬಗ್ಗೆ ಹೇಳುವ ಕವಿತೆ ಎಂದಷ್ಟೇ ಭಾಸವಾಗುತ್ತದೆ ಎಂದು ಓದುಗ ಭಾವಿಸಿದರೆ ಅದು ಖಂಡಿತ ಬದಲಾಗುವ ಎಲ್ಲ ಸೂಚನೆಗಳನ್ನೂ ನೀಡುತ್ತದೆ. ಕೊನೆಯ ಪ್ಯಾರಾ ಕವಿತೆಯ ಅನುಭವವನ್ನು ಇನ್ನೂ ಗಾಢವಾಗಿಸುತ್ತದೆ. ಮತ್ತೊಂದೇ ಮಗ್ಗುಲಿಗೆ ಹೊರಳುವ ಕವಿತೆ, ಅಲ್ಲಿಯ ಸೃಷ್ಟಿಕ್ರಿಯೆಯ ಶಕ್ತಿಯನ್ನು ವಿಶ್ವದ ಅನಂತ ಸಾಧ್ಯತೆಗಳತ್ತ ಹಿಗ್ಗುವಂತೆ ಮಾಡುತ್ತದೆ.

' ನನ್ನ ಇರುವು ಅರಿವುಗಳ ಕರುಳಕುಡಿಯೇ ಗರ್ಭಗುಡಿಯಲ್ಲಿ ಕುಳಿತು

ಅನಂತಕ್ಕೆ ಕೈಜೋಡಿಸುವ ದೈವದ ಕಿಡಿಯೇ ಕಾಯುತ್ತಿರುವೆ ನಿನಗಾಗಿ ತುದಿಗಾಲಲ್ಲಿ ಬೆಳಕಾಗಿ ಹೊರ ಚೆಲ್ಲುವ

ಪೂರ್ಣಾವತಾರಕ್ಕಾಗಿ

ಬಾ ಮಗುವೇ ಬಾ ನಗುವೇ

ಒಲವಿನ ಪರಿಪಕವಾಗಿ!'

ಈ ಸಾಲುಗಳಿಗೆ ಬರುವಾಗ ಕವಿತೆ ಕೇವಲ ತಾಯಿಯೊಬ್ಬಳ ಅನುಭವದ ಅಭಿವ್ಯಕ್ತಿಗಿಂತ ಬೇರೆಯದೇ ಇನ್ನೇನನ್ನೋ ಹೇಳುವ ಪುಳಕವನ್ನು ಅನುಭವಿಸುತ್ತದೆ. ತಾಯಿಗೆ ಅದು ತನ್ನ ತಾಯ್ತನವನ್ನು ಅನುಭವಿಸಲು ಅವಕಾಶ ಕೊಟ್ಟು, ಬಾಳನ್ನು ಬೆಳಗುವ ಪೂರ್ಣಾವತಾರದ ಹಂಬಲವಾಗುವಂತೆ ಮಾಡುತ್ತದೆ. ಆದರೆ ಕವಿತೆ ಗೆಲ್ಲುವುದು ಅದರ ಈ ನೋಟಕ್ಕಲ್ಲ. ಬದಲಾಗಿ ಸೂಚ್ಯವಾಗಿ ಅದೇನನ್ನೋ ಸೂಚಿಸುತ್ತಿದೆ ಎಂಬ ಕಾರಣಕ್ಕಾಗಿ.

ಕವಿ ಕೂಡ ಕವಿತೆಯನ್ನು ಬರೆಯುವಾಗ ಈ ತಾಯಿ ಅನುಭವಿಸುವ ಭಾವವನ್ನೇ ಅನುಭವಿಸುತ್ತಾನೆ. ಇಲ್ಲಿ ಮಗು ಕೇವಲ ಮಗುವಲ್ಲ, ಯಾವುದೇ ಸೃಷ್ಟಿಕ್ರಿಯೆಯ ಹಿಂದಿರುವ ಭ್ರೂಣಸ್ವರೂಪಿ ಅವಸ್ಥೆ! ಕವಿತೆಯ ಅವತಾರವಾಗಬೇಕಾದರೆ ಕವಿ ಈ ಸೃಷ್ಟಿ ಪೂರ್ವ ತಾಯ್ತನದ ಒದ್ದಾಟವನ್ನೂ, ಕುತೂಹಲವನ್ನೂ, ಸಂಭ್ರಮವನ್ನೂ, ಒಳಗಿಟ್ಟುಕೊಳ್ಳಲಾರದ ತೊಳಲಾಟವನ್ನೂ ಅನುಭವಿಸುತ್ತಾನೆ. ಕಲೆಯ ಪರಮೋಚ್ಛ ಸೃಷ್ಟಿಯ ಕುಸುರಿ ಕೆಲಸ ನಡೆಯುವುದು ಕಲಾವಿದನ ಯೋಚನೆಗಳಲ್ಲಿ. ಈ ನಿಟ್ಟಿನಲ್ಲಿ ಕವಿ ತನ್ನ ಕಲಾತ್ಮಕತೆ ಹೊರಗೆ ಬರಲೆಂದು ಕಾಯುವುದು ಅಗಾಧವಾದ ತಾಳ್ಮೆಯ ರೂಪದಲ್ಲಿ. ಈ ಕವಿತೆಯ ಕೊನೆಯ ಪ್ಯಾರಾ ಮಗುವಿನ ಪೂರ್ಣಾವತಾರಕ್ಕಾಗಿ ಹಂಬಲಿಸುತ್ತದೆ. ಒಬ್ಬ ಹಂಬಲಿಕೆಯ ತಾಯಿಯ ಮನ:ಸ್ಥಿತಿ ಕವಿಯದ್ದೂ ಆಗುವ ಚೋದ್ಯಕ್ಕೆ ಓದುಗ ಸಿದ್ಧನಾಗುತ್ತಾನೆ. ತಾಯಿಗೆ ಆರೋಗ್ಯವಂತ, ಜಗ ಬೆಳಗುವ ಮಗುವಿನ ಕನಸಾದರೆ; ಕವಿಗೂ ಕವಿತೆಯ ಬಗ್ಗೆ ಇದೇ ಭಾವ ಮಮತೆ, ಪ್ರೀತಿ! ಕಾವ್ಯ ಬೆಳೆಯುವುದು ಇದೇ ರೀತಿಯಲ್ಲಿ. ಲೋಕದಲ್ಲಿ ನಡೆಯುವ ಸಾಮಾನ್ಯವೆನಿಸುವ ಸಂಗತಿಯಲ್ಲಿ ಕವಿ ಅಸಮಾನ್ಯವನ್ನು ಕಾಣುತ್ತಾನೆ. ಕವಿತೆ ಘಟಿಸುವಿಕೆಯ ಆ ಕ್ರಿಯೆಯಲ್ಲಿ ಆತನ ಮನ:ಸ್ಥಿತಿ ಯಾವ ಹಂತದ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂಬುದು ಕುತೂಹಲಕಾರಿ ಅಂಶ. ಮೊದಲಿನಿಂದಲೂ ಕವಿತೆಗೆ ಹೊಸದೇನನ್ನೋ ಹೇಳುತ್ತಿರುವ ಪ್ರಜ್ಞೆ ಹಾಗೂ ತುಡಿತವಿದ್ದರೂ ಕೊನೆಯ ಪ್ಯಾರಾದಲ್ಲಿ ಅದು ಕಟ್ಟಿಕೊಡುವ ಜ್ಯೋತಿಸ್ವ ರೂಪ ಪೂರ್ಣಾವತಾರದ ಕಲ್ಪನೆ ಉನ್ನತ ಮಟ್ಟದ ಕಾವ್ಯ ಸ್ವರೂಪವನ್ನು ಕಟ್ಟುವಲ್ಲಿ ಶೃದ್ಧಾಪೂರ್ವಕವಾಗಿ ದುಡಿಯುತ್ತದೆ. ಸೃಷ್ಟಿಕ್ರಿಯೆಯ ಸೂಕ್ಷ್ಮವೊಂದು ಆಕಾರ ಪಡೆಯುವ ಹಂತದಲ್ಲಿ ಅದರ ಯಶಸ್ಸಿನ ಆಶಯವನ್ನು ಕವಿತೆ ಪ್ರಜ್ಞಾಪೂರ್ವಕವಾಗಿ ದಾಖಲಿಸುತ್ತದೆ.

ತಾಯಿಯ ಕಾಯುವಿಕೆಯಂತೆಯೇ ಕವಿತೆ ಕಟ್ಟುವ ಕವಿ ಕೂಡ ಕಾಯುತ್ತಾನೆ. ಲೋಕದ ಸಾಮಾನ್ಯ ಸಂಗತಿಯೊಂದು ಅವನ ಗಮನವನ್ನು ವಿಶೇಷವಾಗಿ ಸೆಳೆಯುತ್ತದೆ. ಸೃಜನಶೀಲತೆ ಯಾವತ್ತೂ ಕೂಡಾ ಗರ್ಭ ಕಟ್ಟುವ ಕ್ರಿಯೆಯಂತೆ. ತಾಯ್ತನ ಸಾಧ್ಯವಾಗುವುದು ಗಂಡು- ಹೆಣ್ಣಿನ ಅಮೋಘ ಸಮಾಗಮದಿಂದ. ಹಾಗೆಯೇ ಕವಿತೆಯೆಂಬ ಮಗು ರೂಪ ತಳೆದು ಬರಬೇಕಾದರೆ ವಸ್ತು, ವಿಷಯಗಳೊಟ್ಟಿಗೆ ಇಂತಹದೇ ಒಂದು ಸಮಾಗಮ ಏರ್ಪಡಬೇಕು. ಆ ಸಮಯದಲ್ಲಿ- ಸಮಾಗಮನದಲ್ಲಿ ಹೇಗೋ ಹಾಗೆ- ಕವಿ ತನ್ನ 'ಸ್ವಕೇಂದ್ರಿತ ಪ್ರಜ್ಞೆ'ಯನ್ನು ಬಿಟ್ಟು ತನ್ನೆದುರುಗಿರುವ ವಸ್ತು, ವಿಷಯಗಳಲ್ಲಿ ತೆಕ್ಕೆ ಮುಕ್ಕುವುದನ್ನು ಸಾಧಿಸಬೇಕು. ಈ ಸಾಧನೆ ಒಂದರ್ಥದಲ್ಲಿ ಗಂಡು ಹೆಣ್ಣಿನ ಸಮಾಗಮಕ್ಕಿಂತಲೂ ಸೂಕ್ಷ್ಮವಾದದ್ದು. ಯಾಕೆಂದರೆ ಸಮಾಗಮದಲ್ಲಿ ಬಾಹ್ಯದ ರೂಪವೊಂದರ ಇಂದ್ರಿಯಾನುಭವವಿರುತ್ತದೆ. ಕವಿತೆಗೆ ವಸ್ತುವಾಗುವ ವಿಷಯಕ್ಕೆ ಕಣ್ಣೆದುರಿಗಿನ ರೂಪಾನುಭವದ ಇಂದ್ರಿಯ ಅನುಭವ ಸಾಧ್ಯತೆ ಇರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಇದು ಕೇವಲ ಇಂದ್ರಿಯಕ್ಕೆ ಮೀರಿದ ಸಂಗತಿ ಮಾತ್ರ. ಮನಸ್ಸಿನಲ್ಲೇ ಗುದಮುರಿಗೆ ಆಟ ಆಡುವ ಹಂತದಲ್ಲಿ ಕವಿ ಕಾವ್ಯದ ವಿಷಯದಲ್ಲಿ ತನ್ನನ್ನೇ ಮೀರಿದ ತಾದಾತ್ಮ್ಯತೆಯನ್ನು ಸಾಧಿಸುತ್ತಾನೆ. ಈ ತಾದಾತ್ಮ್ಯ ಅವನನ್ನು ಹೆಚ್ಚು ಸಂವೇದನಾಶೀಲನನ್ನಾಗಿ ರೂಪಿಸುತ್ತದೆ. ಸ್ವ ಕೇಂದ್ರಿತ ಪ್ರಜ್ಞೆಗಿಲ್ಲಿ ಅವಕಾಶವಿಲ್ಲ. ಹಾಗಾಗಿಯೇ ಕವಿತೆ ಭ್ರೂಣವಾಗಿ ಮೈ ತಳೆವ ಕೌತುಕಕ್ಕೆ ಕವಿ ಅಣಿಯಾಗುತ್ತಾನೆ. ಎಲ್ಲ ಸೃಜನಶೀಲ ಕಲೆಯ ಮೂಲವಿರುವುದೇ ಇಲ್ಲಿ. ರಂಗದಲ್ಲಿ ರಾಮನನ್ನು ಅಭಿನಯಿಸಬೇಕಾದ ಕಲಾವಿದನೊಬ್ಬ ತಾನು ಪಾತ್ರಧಾರಿ ಆಗಿರುವಷ್ಟು ಹೊತ್ತು ರಾಮನೇ ಆಗಬೇಕಾಗುತ್ತದೆ, ತನ್ನ ಮೂಲ ರೂಪವನ್ನು ಬಿಟ್ಟು! ಹಾಗೆಯೇ ಕವಿಗೆ ವಿಷಯದಲ್ಲಿ ಪ್ರವೇಶಿಸದೆ ಗತ್ಯಂತರವಿಲ್ಲ. ಪ್ರವೇಶವೇ ಸೃಷ್ಟಿಶೀಲತೆಗೆ ನಾಂದಿ. ಕವಿತೆಯಾಗಿ ಗರ್ಭ ಕಟ್ಟುವ ಭಾವ ಬಂದಲ್ಲಿ, ನಿಂತಲ್ಲಿ, ಕೂತಲ್ಲಿ, ಕವಿಯ ಗಮನವನ್ನು ತನ್ನೆಡೆಗೆ ಸೆಳೆದುಕೊಂಡು ಜಗ್ಗಿಸಿ, ಬಗ್ಗಿಸಿ, ಕಾಡಿಸಿ ತನ್ನ ಸುತ್ತಲೇ ಯೋಚನೆಗಳು ಗಿರಕಿ ಹೊಡೆಯುವಂತೆ ಮಾಡುತ್ತದೆ.

' ನಿನ್ನ ಹಸಿವುಗಳನ್ನೆಲ್ಲ

ನನ್ನೊಳಗೆ ಮೂಡಿಸಿ ಪಡೆದುಕೊಳ್ಳುವ ಸೋಜಿಗದ ಪರಿಯೇ ಬೇರೆ!

ಎನ್ನುವ ಕವಿಯ ಮಾತನ್ನೊಮ್ಮೆ ಗಮನಿಸಬೇಕು. ಗರ್ಭ ತಳೆದ ಮಗುವಿಗೆ ತನ್ನದೇ ಬಯಕೆಗಳಿರುವಂತೆ ಕಲೆಯಾಗಿ ಅರಳುವ ಸೃಷ್ಟಿಕ್ರಿಯೆಗೆ ತನ್ನದೇ 'ಸೌಂದರ್ಯ'ದ ಧ್ಯಾಸ. ಹಾಗಾಗಿ ಅದು ಮತ್ತೂ ಸುಂದರವಾಗಲು ಹೊಸ ಹೊಸ ಪದ ಸಾಮಗ್ರಿಗಳ, ಭಾವಸಾಮಗ್ರಿಗಳ ಸಾಧ್ಯತೆಯನ್ನು ಶೋಧಿಸಲು ಕವಿಗೆ ಕರೆ ಕೊಡುತ್ತದೆ. ಕವಿ ಆಗ ಅದರ ಕೈವಶವಾಗುತ್ತಾನೆ. ಅದರ ಅಧಿಪತ್ಯದಲ್ಲಿ ತಾನು ಕರ್ತಾರನಾಗುತ್ತಾನೆ. ಒಳಗೊಳಗೇ ಈ ಸೋಜಿಗವನ್ನು ಅನುಭವಿಸುವ ಅಚ್ಚರಿಯ ಸ್ಥಿತಿ ಅವನದು. ಇದು ಬೆಳಕಾಗಿಯೂ ಬೆಳಗಲೆಂಬುದು ಕವಿಯ ಆಶಯ. ಅದು ಬರಿಯ ಬೆಳಕಲ್ಲ, ಪೂರ್ಣಾವತಾರದ ಬೆಳಕು! ಬೆಳಕಿನ ಅಸ್ತಿತ್ವವೇ ಹಾಗಲ್ಲವೇ?! ಅದು ತನ್ನನ್ನು ತಾನು ಬೆಳಗಿಕೊಂಡು ತನ್ನ ನಂಬಿದವರನ್ನೂ ಬೆಳಗುತ್ತದೆ. ಹಾಗಾಗಿ ಕವನವೆಂಬ ಮಗು ಕೂಡ ಅರಿವೆಂಬ ಬೆಳಕನ್ನು ಕೊಡಲಿ ಎಂಬುದು ಕವಿಯ ಆಶಯ. ಸೃಜನಶೀಲತೆ ಎನ್ನುವುದೇ ಒಂದು ಅರಿವು! ಒಂದು ಜ್ಞಾನ! ಇಲ್ಲಿ ಹೇಳಲೇಬೇಕೆಂದರೆ ಭಾರತೀಯ ಕಲೆಗಳ ಪರಮೋಚ್ಛ ಗುರಿ ಕೇವಲ ಮನರಂಜನೆ ಅಲ್ಲ ಅಥವಾ ವಿಚಾರ ಪ್ರಚೋದನೆಯೂ ಅಲ್ಲ; ಬದಲಾಗಿ ಅದು ಸತ್ಯವನ್ನು ಹುಡುಕುವ ಕಡೆಗೂ ತನ್ನ ಗಮನವನ್ನು ಕೇಂದ್ರೀಕರಿಸಬಲ್ಲ ಸಾಮರ್ಥ್ಯ ತೋರುಸ್ತದೆ. ಇದು ಕಲೆಯ ಉಚ್ಛತಮಸಿದ್ಧಿ! ಆಶಯ! ಈ ನಿಟ್ಟಿನಲ್ಲಿ 'ಸದ್ಯ'ವನ್ನೂ 'ಶಾಶ್ವತ'ವನ್ನೂ ಪ್ರತಿನಿಧಿಸುವ ಸೃಜನಶೀಲ ಕವಿತೆಯಾಗಿ 'ಗರ್ಭಗುಡಿಯ ಬೆಳಕು' ಗೆಲ್ಲುತ್ತದೆ ಎಂಬ ಕಾರಣಕ್ಕಾಗಿಯೇ ಮಟ್ಟಿಹಾಳರ ಪ್ರತಿಭೆ ಅಭಿನಂದನಾರ್ಹವಾದುದು.


-ಸಂಧ್ಯಾ ಹೆಗಡೆ, ದೊಡ್ಡಹೊಂಡ

53 views0 comments
bottom of page