top of page

ಕವನ - ಸಂತೆ

ಸಂತೆಯಲ್ಲಿ ಹೆಚ್ಚು ಹೊತ್ತು ನಿಲ್ಲಬೇಡಿ

ನಿಮ್ಮ ಕೆಲಸ ಆಗುತ್ತಿದ್ದಂತೆ ಹೊರಡಿ

ಕಳೆದು ಹೋಗುತ್ತೀರಿ

ಕಾದರೆ

ನೋಡುತ್ತ ಕೂತರೆ


ಅಗತ್ಯಕ್ಕೆ ಎಷ್ಟು ಬೇಕೋ ಅಷ್ಟು

ಕೊತ್ತಂಬರಿ ಜೀರಿಗೆ

ಅಥವಾ ಆಪ್ತರು ಸಿಕ್ಕರೆ

ನಗು ಉಭಯ ಕುಶಲೋಪರಿ ಸಾಂಪ್ರತ

ಹೆಚ್ಚು ಮಾತು ಸಂತೆಯಲ್ಲಿ ಸೂಕ್ತವಲ್ಲ


ಇರಬಹುದು ಪಕ್ಕದಲ್ಲೇ ರಾಟೆತೊಟ್ಟಿಲು ಸರ್ಕಸ್ ಡೇರೆ

ಕತ್ತಲಕೋಣೆಯಲ್ಲಿ ಇಂದ್ರಜಾಲದ ಮಾಯಾಜಗತ್ತು

ರಿಂಗು ಬಿಸಾಡಿ ಬಹುಮಾನ ಪಡೆವ ಕಸರತ್ತು

ಇಸ್ಪೀಟು ಪಗಡೆಯ ಹಕೀಕತ್ತು

ದೇಸೀ ಬೆಲ್ಲ

ಗ್ರಾಮೀಣ ಕಳ್ಳು

ಪರದೆ ಸರಿಸಿ ಒಳಸರಿದರೆ ಸಾರಾಯಿ ಗಡಂಗು


ಆಚೆ ಮಾಂಸ ಕೊಚ್ಚುವ ಮರದ ತುಂಡು

ಹಿಂದೆ ಕಣ್ಣು ಕೆಕ್ಕರಿಸಿ ನೋಡುವ ರೌಡಿ ಗ್ಯಾಂಗು

ದಾರಿ ತಪ್ಪುತ್ತೀರಿ

ತುಸು ಹೊತ್ತು ನಿಂತರೆ


ನಿಮ್ಮ ಸ್ನೇಹಿತರೇ ಅನುಮಾನಿಸುತ್ತಾರೆ

ನಿಮ್ಮ ಅಸಡ್ದಾಳ ನಡಿಗೆಗೆ

ಅಂಗಿಚಡ್ಡಿ ಕಳೆದುಕೊಂಡ ನಿಮ್ಮ ವೇಷಕ್ಕೆ


ಸಂತೆಯಲ್ಲಿ ಹೆಚ್ಚು ಹೊತ್ತು ನಿಲ್ಲಬೇಡಿ.


-ಡಾ. ವಸಂತಕುಮಾರ ಪೆರ್ಲ

30 views0 comments
bottom of page